ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್ ನ ಮುರೀದ್‍ಗಳು…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

12

‘ಸಾಕು! ಈಗ ಪ್ರಾರ್ಥನೆಯ ಹೊತ್ತು,’ ಅಂದ ಹಾಜಿ ಮುರಾದ್. ಸಿರ್ಕಾಸಿಯನ್ ಕೋಟಿನ ಒಳ ಜೇಬಿನಿಂದ ವರಾನ್ತಸೋವ್ ಕೊಟ್ಟಿದ್ದ ಗಡಿಯಾರವನ್ನು ತೆಗೆದು, ಅದರ ಸ್ಪ್ರಿಂಗನ್ನು ಹುಷಾರಾಗಿ ಒತ್ತಿದ. ಅದು ಹನ್ನೆರಡೂ ಕಾಲು ಗಂಟೆಯ ಸದ್ದನ್ನು ಹೊರಡಿಸಿತು. ಹಾಜಿ ಮುರಾದ್ ತಲೆಯನ್ನು ಪಕ್ಕಕ್ಕೆ ವಾಲಿಸಿ, ಮಗುವಿನ ನಗುವಿನಂಥ ನಗುವನ್ನು ಅದುಮಿಟ್ಟುಕೊಂಡು ಗಂಟೆಯ ಸದ್ದು ಆಲಿಸಿದ. ‘ಕುನಾಕ್ ವರಾನ್ತಸೋವ್ ಕೊಟ್ಟ ಉಡುಗೊರೆ,’ ಅನ್ನುತ್ತ ಮುಗುಳ್ನಕ್ಕ. 

‘ಒಳ್ಳೆಯ ಗಡಿಯಾರ, ಹೋಗಿ ಪ್ರಾರ್ಥನೆ ಮಾಡಿಕೊಂಡು ಬಾ, ನಾನು ಕಾಯುತ್ತೇನೆ,’ ಅಂದ ಲೋರಿಸ್-ಮೆಲಿಕೋವ್

‘ಯಕ್ಷ್,’ (ಒಳ್ಳೆಯದು) ಅಂದು ಹಾಜಿ ಮುರಾದ್ ತನ್ನ ಮಲಗುವ ಕೋಣೆಗೆ ಹೋದ. 

ಒಬ್ಬನೇ ಉಳಿದ ಲೋರಿಸ್-ಮೆಲಿಕೋವ್ ತನ್ನ ಟಿಪ್ಪಣಿ ಪುಸ್ತಕ ತೆರೆದು ಹಾಜಿ ಮುರಾದ್ ಹೇಳಿದ್ದ ಸಂಗತಿಗಳಲ್ಲಿ ಮುಖ್ಯವಾದದ್ದನ್ನು ಬರೆದ.  ಸಿಗರೇಟು ಹಚ್ಚಿಕೊಂಡು ಕೋಣೆಯಲ್ಲಿ ಅತ್ತ ಇತ್ತ ಹೆಜ್ಜೆ ಹಾಕಿದ. ಮಲಗುವ ಕೋಣೆಯ ಎದುರಿಗಿದ್ದ ಇನ್ನೊಂದು ಕೋಣೆಯ ಬಾಗಿಲ ಹತ್ತಿರ ಹೋದಾಗ ಉತ್ಸಾಹದ ದನಿಗಳು ಟಾರ್ಟರ್ ಭಾಷೆಯಲ್ಲಿ ಮಾತಾಡುತ್ತಿರುವುದು ಕೇಳಿಸಿತು. ಮಾತಾಡುತ್ತಿದ್ದವರು ಹಾಜಿ ಮುರಾದ್‍ನ ಮುರೀದ್‍ಗಳು ಎಂದು ಊಹಿಸಿ ಬಾಗಿಲು ತೆರೆದು ಒಳಕ್ಕೆ ಹೋದ. 

ಆ ಕೋಣೆಯ ತುಂಬ ಬೆಟ್ಟಗಾಡಿನ ಜನಕ್ಕೇ ವಿಶೇಷವಾದ ಚರ್ಮದ ವಾಸನೆ ತುಂಬಿತ್ತು. ಬುರ್ಖಾ ಹರಡಿ ಅದರ ಮೇಲೆ ಒಂದು ಕಣ್ಣಿನ, ಕೆಂಚು ಕೂದಲ ಗಮ್ಜಾಲೋ ಕೂತಿದ್ದ. ಅವನು ಚಿಂದಿ ಎದ್ದ ಜಿಡ್ಡು ಜಿಡ್ಡಾದ ಬೆಶ್ಮೆತ್‍ ತೊಟ್ಟಿದ್ದ, ಲಗಾಮಿನ ಪಟ್ಟಿಗಳಿಗೆ ಹೆಣಿಗೆ ಹಾಕುತ್ತಿದ್ದ. ಗೊಗ್ಗರು ದನಿಯಲ್ಲಿ ಜೋರು ಜೋರಾಗಿ ಏನೋ ಹೇಳುತ್ತಿದ್ದ. ಲೋರಿಸ್-ಮೆಲಿಕೋವ್ ಕೋಣೆಗೆ ಬಂದ ತಕ್ಷಣ ಸುಮ್ಮನಾದ, ಅವನಿಗೆ ಗಮನವನ್ನೇ ಕೊಡದೆ ಕೆಲಸದಲ್ಲಿ ಮುಂದುವರೆಸಿದ. ಗಮ್ಜಾಲೋ ಎದುರಿಗೆ ಖುಷಿ ಮನುಷ್ಯ ಖಾನ್ ಮಹೋಮಾ ಬಿಳಿಯ ಹಲ್ಲು ಬೀರುತ್ತ ನಿಂತಿದ್ದ, ರೆಪ್ಪೆಗೂದಲಿಲ್ಲದ ಕಣ್ಣು ಅರಳಿಸಿದ ನಿಂತು ಏನನ್ನೋ ಮತ್ತೆ ಮತ್ತೆ ಹೇಳುತ್ತಿದ್ದ. ಚೆಲುವನಾಗಿದ್ದ ಎಲ್ದಾರ್ ತೋಳು ಮಡಿಸಿ, ಮೊಳೆಗೆ ನೇತು ಹಾಕಿದ್ದ ಹಲ್ಲಣಕ್ಕೆ ಪಾಲಿಶು ಮಾಡುತ್ತಿದ್ದ. ಮನೆವಾರ್ತೆಯ ಮುಖ್ಯಸ್ಥ ಖಾನೇಫಿ ಅಲ್ಲಿರಲಿಲ್ಲ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ. 

ಲೋರಿಸ್-ಮೆಲಿಕೋವ್, ಅವರಿಗೆಲ್ಲ ವಂದನೆ ಸಲ್ಲಿಸಿ ‘ಏನೋ ಜೋರು ಮಾತು ನಡೆಯುತ್ತಿತ್ತಲ್ಲಾ?’ ಎಂದು ಕೇಳಿದ. 

‘ಇವನು ಶಮೀಲ್‍ನ ಹೊಗಳುತ್ತಾನೇ ಇರತಾನೆ, ಅವನು ಮಹಾಪುರುಷ, ಸಂತ, ದ್ಜಿಗಿಟ್ ಅನ್ನುತ್ತಾನೆ,’ ಎಂದು ಖಾನ್ ಮಹೋಮಾ, ಲೋರಿಸ್-ಮೆಲಿಕೋವ್ನತ್ತ ಕೈ ಚಾಚುತ್ತ ಹೇಳಿದ. 

‘ಅವನನ್ನು ಬಿಟ್ಟು ಬಂದರೂ ಇನ್ನೂ ಹೊಗಳುತ್ತಿದ್ದಾನಾ?’

‘ಬಿಟ್ಟು ಬಂದಿದಾನೆ, ಇನ್ನೂ ಹೊಗಳತಾ ಇದಾನೆ,’ ಹಲ್ಲು ಕಾಣುವ ಹಾಗೆ, ಕಣ್ಣು ಹೊಳೆಯುವ ಹಾಗೆ ನಗುತ್ತ ಖಾನ್ ಮಹೋಮಾ ಹೇಳಿದ.

‘ಅವನನ್ನ ನಿಜವಾಗಲೂ ಸಂತ ಅಂತ ತಿಳಕೊಂಡಿದ್ದಾನಾ?  ಲೋರಿಸ್-ಮೆಲಿಕೋವ್ ಕೇಳಿದ.

‘ಅವನು ಸಂತ ಅಲ್ಲದಿದ್ದರೆ ಜನ ಅವನ ಮಾತು ಕೇಳತಿರಲಿಲ್ಲ,’ ತಟ್ಟನೆ ಉತ್ತರ ಹೇಳಿದ ಗಮ್ಜಾಲೋ.

‘ಶಮೀಲ್‍ ಸಂತ ಅಲ್ಲ, ಮನ್ಸೂರ್‍ ಇದ್ದನಲ್ಲ ಅವನು ಸಂತ! ನಿಜವಾದ ಸಂತ. ಅವನು ಇಮಾಮ್ ಆಗಿದ್ದಾಗ ಜನ ಬೇರೆ ಥರ ಇದ್ದರು. ಒಂದೊಂದು ಔಲ್‍ಗೂ ಕುದುರೆ ಮೇಲೆ ಬರುತ್ತಿದ್ದ, ಜನ ಅವನ ಕೋಟಿನ ಅಂಚಿಗೆ ಮುತ್ತಿಡುತ್ತಿದ್ದರು, ಮಾಡಿದ ತಪ್ಪು, ಪಾಪ ಒಪ್ಪಿಕೊಳ್ಳುತಿದ್ದರು, ಕೆಟ್ಟ ಕೆಲಸ ಮಾಡಲ್ಲ ಅಂತ ಆಣೆ ಮಾಡುತಿದ್ದರು. ಹಳಬರು ಹೇಳತಾರೆ, ಆಗ ಜನ ಎಲ್ಲ ಬೇರೆ ಥರ ಇದ್ದರಂತೆ. ಸಂತರ ಥರಾನೇ ಇದ್ದರಂತೆ. ಕುಡಿಯುವುದಿಲ್ಲ, ಸಿಗರೇಟಿಲ್ಲ, ಪ್ರಾರ್ಥನೆ ತಪ್ಪಿಸತಾ ಇರಲಿಲ್ಲ, ಬೇರೆಯವರು ಕೊಲೆ ಮಾಡಿ ರಕ್ತ ಸುರಿಸಿದ್ದರೂ ಪಾಪ ಮಾಡಿದರೆ ಕ್ಷಮಿಸುತ್ತಾ ಇದ್ದರು, ಯಾರಿಗಾದರೂ ದುಡ್ಡು ಗಿಡ್ಡು ಸಿಕ್ಕರೆ ಅದನ್ನ ಕೋಲಿಗೆ ಕಟ್ಟಿ ರಸ್ತ ಪಕ್ಕ ಇಟ್ಟಿರುತ್ತಿದ್ದರಂತೆ. ಆ ಕಾಲದಲ್ಲಿ  ಇವಾಗಿನ ಹಾಗಿರಲಿಲ್ಲವಂತೆ, ಮನುಷ್ಯರು ಮಾಡಿದ ಎಲ್ಲಾ ಕೆಲಸಕ್ಕೂ ಜಯ ಸಿಗುವ ಹಾಗೆ ಮಾಡತಿದ್ದನಂತೆ ದೇವರು,’  ಅಂದ ಖಾನ್ ಮಹೋಮಾ.

‘ಬೆಟ್ಟಗಳಲ್ಲಿ ಜನ ಈಗ ಸಿಗರೇಟು ಸೇದಲ್ಲ, ಕುಡಿಯಲ್ಲ,’ ಅಂದ ಗಮ್ಜಾಲೋ.

‘ನಿಮ್ಮ ಒಬ್ಬ ಲಾಮೋರೆ,” ಅನ್ನುತ್ತ ಲೋರಿಸ್-ಮೆಲಿಕೋವ್ ನನ್ನು ನೋಡಿ ಕಣ್ಣು ಮಿಟುಕಿಸಿದ ಖಾನ್ ಮಹೋಮಾ.

‘ಹೌದು, ಲಾಮೋರೆ ಅಂದರೆ ಬೆಟ್ಟ ಹತ್ತೋನು, ಗುಡ್ಡಗಾಡಿನವನು. ಬೆಟ್ಟದ ತುದಿಯಲ್ಲಿ ಹದ್ದು ಇರುತ್ತೆ ಗೊತ್ತಾ!’ ಅಂದ ಗಮ್ಜಾಲೋ. 

‘ಜಾಣ, ಸರಿಯಾಗಿ ಹೇಳಿದೆ!’ ಅನ್ನುತ್ತ ಖಾನ್ ಮಹೋಮಾ ಹಲ್ಲು ಕಿರಿದು ಎದುರಾಳಿಯ ಜಾಣತನ ಮೆಚ್ಚಿದ. 

ಲೋರಿಸ್-ಮೆಲಿಕೋವ್‍ನ ಕೈಯಲ್ಲಿ ಬೆಳ್ಳಿಯ ಸಿಗರೇಟು ಡಬ್ಬಿಯನ್ನು ನೋಡಿದ ಖಾನ್ ಮಹೋಮಾ ತನಗೂ ಒಂದು ಸಿಗರೇಟು ಬೇಕೆಂದು ಕೇಳಿದ. ಸಿಗರೇಟು ನಿಶಿದ್ಧವೆಂದು ಲೋರಿಸ್-ಮೆಲಿಕೋವ್ ಹೇಳಿದರೆ ಅವನು ಕಣ್ಣು ಹೊಡೆದು, ತಲೆಯನ್ನು ಹಾಜಿ ಮುರಾದ್‍ನ ಕೋಣೆಯತ್ತ ವಾಲಿಸಿ ‘ಕಣ್ಣಿಗೆ ಬೀಳದೆ ಇರುವವರೆಗೆ ಏನು ಬೇಕಾದರೂ ಮಾಡಬಹುದು,’ ಅಂದ. ಸಿಗರೇಟು ಸೇದಿದ, ಹೊಗೆ ಒಳಗೆಳೆದುಕೊಳ್ಳದೆ ಕೆಂಪು ತುಟಿಯನ್ನು ವಕ್ರವಾಗಿ ಉಬ್ಬಿಸಿ ಹೊಗೆಯನ್ನು ಬಿಟ್ಟ. 

‘ಅದು ತಪ್ಪು!’ ಎಂದು ಮೊನಚಾಗಿ ಹೇಳುತ್ತ ಗಮ್ಜಾಲೋ ಕೋಣೆಯಿಂದಾಚೆಗೆ ನಡೆದ. 

ಖಾನ್ ಮಹೋಮಾ ಕಣ್ಣು ಮಿಟುಕಿಸಿ, ಸಿಗರೇಟು ಸೇದುತ್ತ ಒಳ್ಳೆಯ ರೇಶಿಮೆಯ ಬೆಶ್ಮೆತ್, ಮತ್ತೆ ಬಿಳಿಯ ಕ್ಯಾಪು ಎಲ್ಲಿ ಸಿಗುತ್ತವೆ ಎಂದು ಲೋರಿಸ್-ಮೆಲಿಕೋವ್ನನ್ನು ಕೇಳಿದ. 

‘ಏನು, ಅಷ್ಟೊಂದು ದುಡ್ಡಿದೆಯಾ?’

‘ಸಾಕಾಗುವಷ್ಟಿದೆ,’ ಎಂದ ಖಾನ್ ಮಹೋಮಾ ಕಣ್ಣು ಮಿಟುಕಿಸಿದ. 

‘ಅವನ ಹತ್ತಿರ ದುಡ್ಡು ಎಲ್ಲಿಂದ ಬಂತು, ಕೇಳು,’ ಎಲ್ದಾರ್ ಚೆಲುವಾದ ಮುಖವನ್ನು ಲೋರಿಸ್-ಮೆಲಿಕೋವ್ನತ್ತ ತಿರುಗಿಸಿ ಕೇಳಿದ.

‘ಓ, ಅದಾ, ಆಟದಲ್ಲಿ ಗೆದ್ದೆ!’ ತಕ್ಷಣ ಅಂದ ಖಾನ್ ಮಹೋಮಾ. ಮೊನ್ನೆ ಟಿಫ್ಲಿಸ್‍ನಲ್ಲಿ ಅಡ್ಡಾಡುತ್ತಿರುವಾಗ ಜನ, ರಶಿಯದವರು, ಅರ್ಮೇನಿಯವರು, ಗುಂಪು ಕೂಡಿ ಓರ್ಲ್ಯಾಂಕಾ (ನಾಣ್ಯ ಚಿಮ್ಮುವ ರಾಜ/ರಾಣಿ ಆಟದ ಥರದ್ದು) ಆಡುತ್ತಿದ್ದರು ದೊಡ್ಡ ಮೊತ್ತದ ಪಣ ಇತ್ತು. ಮೂರು ಚಿನ್ನದ ನಾಣ್ಯ, ಮತ್ತೆ ಒಂದಷ್ಟು ಬೆಳ್ಳಿ ನಾಣ್ಯ. ಆಟದ ಕರಾಮತ್ತು ಗೊತ್ತಾಯಿತು, ಜೇಬಿನಲ್ಲಿದ್ದ ತಾಮ್ರದ ನಾಣ್ಯ ಜಣಜಣ ಸದ್ದು ಮಾಡಿ ಇದೆಲ್ಲ ಕಟ್ಟುತ್ತೇನೆ ಅಂದೆ, ಎಂದು ವಿವರ ಹೇಳಿದ. 

‘ಹೇಗೆ ಸಾಧ್ಯ? ಅಷ್ಟೊಂದು ದುಡ್ಡಿತ್ತಾ ನಿನ್ನ ಹತ್ತಿರ?’ ಲೋರಿಸ್-ಮೆಲಿಕೋವ್ ಕೇಳಿದ.

‘ಹನ್ನೆರಡು ಕೊಪೆಕ್ ಇತ್ತು, ಅಷ್ಟೆ.’ ಅನ್ನುತ್ತ ಹಲ್ಲು ಕಿರಿದ ಖಾನ್ ಮಹೋಮಾ.

‘ಆ ದುಡ್ಡು ಹೋಗಿದ್ದಿದ್ದರೆ?’

‘ಹೋದರೇನು, ಇದು!’ ಅನ್ನುತ್ತ ಖಾನ್ ಮಹೋಮಾ ತನ್ನ ಪಿಸ್ತೂಲು ತೋರಿಸಿದ.

‘ಅದನ್ನೂ ಆಟಕ್ಕೆ ಇಡುತ್ತಿದ್ದೆಯಾ?’

‘ಅದ್ಯಾಕೆ ಇಡಲಿ? ಓಡಿ ಹೋಗುತ್ತಿದ್ದೆ, ಯಾರಾದರೂ ನನ್ನ ತಡೆಯುವುದಕ್ಕೆ ನೋಡಿದ್ದರೆ ಕೊಂದು ಹಾಕುತ್ತಿದ್ದೆ, ಅಷ್ಟೇ,’ ಅಂದ. 

‘ಗೆದ್ದೆಯಾ?’

‘ಹ್ಞೂಂ. ಪೂರಾ ಗೆದ್ದು ಹೊರಟುಬಿಟ್ಟೆ!’

ಖಾನ್ ಮಹೋಮಾ, ಎಲ್ದಾರ್ ಇಬ್ಬರೂ ಎಂಥವರೆನ್ನುವುದು ಲೋರಿಸ್-ಮೆಲಿಕೋವ್ಗೆ ಚೆನ್ನಾಗಿ ಅರ್ಥವಾಯಿತು. ಖಾನ್ ಮಹೋಮಾ ಖುಷಿಯ ಮನುಷ್ಯ, ಬೇಜವಾಬ್ದಾರಿಯವನು, ಚೆಲ್ಲಾಟಕ್ಕಾಗಿ ಏನು ಬೇಕಾದರೂ ಮಾಡುವವನು. ತನ್ನಲ್ಲಿರುವ ಅಗಾಧ ಶಕ್ತಿಯನ್ನು ಏನು ಮಾಡಬೇಕೆಂದು ಗೊತ್ತಿಲ್ಲದಿರುವವನು. ಯಾವಾಗಲೂ ಖುಷಿಯಾಗಿರುವ, ಹಿಂದೆ ಮುಂದೆ ನೋಡದ, ತನಗೂ ಬೇರೆಯವರ ಪ್ರಾಣಕ್ಕೂ ಸಂಚಕಾರ ತರುವಂಥವನು. ಜೀವದ ಜೊತೆ ಚೆಲ್ಲಾಟವಾಡುವ ಸಲುವಾಗಿ ಅವನೀಗ ರಶಿಯನ್ನರ ಪಕ್ಷಕ್ಕೆ ಬಂದಿದ್ದಾನೆ, ಅದೇ ಕಾರಣಕ್ಕೆ ನಾಳೆ ಮತ್ತೆ ಶಮೀಲ್‍ ನಲ್ಲಿಗೆ ಮರಳಿದರೂ ಆಶ್ಚರ್ಯವಿಲ್ಲ. 

ಎಲ್ದಾರ್ ಕೂಡ ಸುಲಭವಾಗಿ ಅರ್ಥವಾಗುತ್ತಾನೆ. ಅವನು ಸಂಪೂರ್ಣವಾಗಿ ಮುರ್ಶೀದ್‍ಗೆ ನಿಷ್ಠನಾಗಿರುವವನು, ಗಟ್ಟಿಗ, ದೃಢ ಮನಸ್ಸು, ಶಾಂತ ಸ್ವಭಾವ.

ಕೆಂಚು ಕೂದಲ ಗಮ್ಜಾಲೋ ಮಾತ್ರ ಲೋರಿಸ್-ಮೆಲಿಕೋವ್ ಅರ್ಥವಾಗಲಿಲ್ಲ. ಅವನು ಶಮೀಲ್‍ಗೆ ನಿಷ್ಠ ಮಾತ್ರವಲ್ಲ, ರಶಿಯದವರ ಬಗ್ಗೆ ಅಸಹ್ಯ, ತಿರಸ್ಕಾರ, ಅಸಹನೆ, ದ್ವೇಷವಿದ್ದವನು. ಅಂಥವನು ರಶಿಯನ್ನರ ಜೊತೆಗಿರುವುದಕ್ಕೆ ಬಂದದ್ದು ಹೇಗೆ ಅನ್ನುವುದು ಲೋರಿಸ್-ಮೆಲಿಕೋವ್ಗೆ ಅರ್ಥವಾಗಲಿಲ್ಲ. ಕೆಲವು ಉನ್ನತಾಧಿಕಾರಿಗಳು ಅನುಮಾನಿಸಿದ ಹಾಗೆ ಹಾಜಿ ಮುರಾದ್ ಶರಣಾದದ್ದು, ಶಮೀಲ್‍ನ ಮೇಲೆ ದ್ವೇಷ ಇವೆಲ್ಲ ಬರಿಯ ಮರೆಮೋಸವಿರಬೇಕು, ರಶಿಯನ್ನರ ದೌರ್ಬಲ್ಯ ತಿಳಿಯುವುದಕ್ಕಾಗಿ ಶರಣಾಗತಿಯ ನಾಟಕವಾಡಿರಬೇಕು, ಅವನು ಮತ್ತೆ ತಪ್ಪಿಸಿಕೊಂಡು ಗುಡ್ಡಗಾಡಿಗೆ ಸೇರಿದ ಮೇಲೆ ತನ್ನ ಸೈನ್ಯಕ್ಕೆ ಹೊಸ ರೀತಿಯಲ್ಲಿ ಮಾರ್ಗದರ್ಶನ ಮಾಡಬಹುದು ಎಂದು ಲೋರಿಸ್-ಮೆಲಿಕೋವ್ಗೂ ಅನ್ನಿಸಿತು. ಗಮ್ಜಾಲೋನ ಇಡೀ ವ್ಯಕ್ತಿತ್ವವೇ ಅವನಲ್ಲಿ ಇಂಥ ಸಂಶಯವನ್ನು ಮೂಡಿಸಿತು. 

‘ಮಿಕ್ಕವರಿಗೆ, ಹಾಜಿ ಮುರಾದ್‍ಗೆ ಕೂಡ ಮನಸ್ಸಿನಲ್ಲಿರುವುದನ್ನು ಅಡಗಿಸಿಡುವುದಕ್ಕೆ ಬರುತ್ತದೆ. ಆದರೆ ಇವನು ಮಾತ್ರ ಮನಸಿನಲ್ಲಿರುವುದು ತೋರಿಸಿಕೊಳ್ಳುತ್ತಾನೆ,’ ಅಂದುಕೊಂಡ ಲೋರಿಸ್-ಮೆಲಿಕೋವ್ ಅವನ ಜೊತೆ ಮಾತಾಡುವುದಕ್ಕೆ ಪ್ರಯತ್ನಪಟ್ಟ. ‘ಉಹ್ಞೂಂ, ಮಾತಾಡಲ್ಲ,’ ಅನ್ನುತ್ತ ಗೊರಗೊರ ಸದ್ದು ಮಾಡಿ ಕೆಲಸ ಮುಂದುವರೆಸುತ್ತ ಲೋರಿಸ್-ಮೆಲಿಕೋವ್ನನ್ನು ಒಂಟಿಗಣ್ಣಿನ ಅಂಚಿನಲ್ಲಿ ಕದ್ದು ನೋಡಿದ.  ಲೋರಿಸ್-ಮೆಲಿಕೋವ್‍ ಮಿಕ್ಕ ಪ್ರಶ್ನೆಗಳಿಗೂ ಅದೇ ರೀತಿಯಲ್ಲಿ ಉತ್ತರ ಕೊಟ್ಟ. 

ಲೋರಿಸ್-ಮೆಲಿಕೋವ್ ಕೋಣೆಯಲ್ಲಿರುವಾಗ ಹಾಜಿ ಮುರಾದ್‍ನ ನಾಲ್ಕನೆಯ ಮುರೀದ್, ಅವರ್ ಖಾನೇಫಿ ಕೂದಲು ತುಂಬಿದ ಮುಖ, ಕೂದಲು ತುಂಬಿದ ಕತ್ತಿನ, ಉಬ್ಬಿದೆದೆಯ ಮನುಷ್ಯನ ಜೊತೆಯಲ್ಲಿ ಬಂದ. ಇವನು ಮೈಯೆಲ್ಲ ಮಾಂಸಖಂಡವಿರುವ ತಲೆಯಲ್ಲಿ ಬುದ್ದಿ ಇರದ, ಸದಾ ಕೆಲಸದಲ್ಲಿ ಮುಳುಗಿರುವ ಮನುಷ್ಯ, ಎಲ್ದಾರ್ನ ಹಾಗೆಯೇ ತನ್ನ ಒಡೆಯನಿಗೆ ಪ್ರಶ್ನಾತೀತ ನಿಷ್ಠೆ ಹೊಂದಿರುವವನು. ಅವನು ಅಕ್ಕಿ ತೆಗೆದುಕೊಳ್ಳಲು ಕೋಣೆಗೆ ಬಂದಾಗ ಅವನನ್ನು ತಡೆದು ನಿಲ್ಲಿಸಿ, ನೀನು ಯಾವ ಊರಿನವನು, ಎಷ್ಟು ದಿನದಿಂದ ಹಾಜಿ ಮುರಾದ್‍ನೊಡನೆ ಇದ್ದೀಯ ಎಂದು ಕೇಳಿದ ಲೋರಿಸ್-ಮೆಲಿಕೋವ್.

‘ಐದು ವರ್ಷದಿಂದ. ನಾನು ಅವನ ಔಲ್‍ನವನು. ನಮ್ಮಪ್ಪ ಅವನ ಚಿಕ್ಕಪ್ಪನನ್ನು ಕೊಂಡ, ಅವರು ನನ್ನ ಸಾಯಿಸಬೇಕು ಅಂತಿದ್ದರು, ನನ್ನ ತಮ್ಮನ ಹಾಗೆ ದತ್ತು ತಗೋ ಅಂತ ಕೇಳಿದೆ,’ ಎಂದು ಖಾನೇಫಿ ತಣ್ಣನೆ ದನಿಯಲ್ಲಿ ಹೇಳಿದ.  ಕೂಡು ಹುಬ್ಬಿನ ಅಡಿಯ ಕಣ್ಣು ನೇರವಾಗಿ ಲೋರಿಸ್‍-ಮೆಲಿಕೋವ್‍ನ ಮುಖವನ್ನು ನೋಡುತ್ತಿದ್ದವು. 

‘ತಮ್ಮನ ಹಾಗೆ ದತ್ತು ತಗೊಳ್ಳುವುದು ಅಂದರೆ?’

‘ಎರಡು ತಿಂಗಳು ನಾನು ತಲೆಗೂದಲು ಕತ್ತರಿಸಲಿಲ್ಲ, ಉಗುರು ಕತ್ತರಿಸಲಿಲ್ಲ. ಆಮೇಲೆ ಅವರ ಹತ್ತಿರ ಹೋದೆ. ನನ್ನನ್ನ ಅವರಮ್ಮನ ಹತ್ತಿರ ಕರಕೊಂಡು ಹೊದರು. ಅಮ್ಮ ನನಗೆ ಎದೆ ಹಾಲು ಕುಡಿಸಿದಳು. ನಾನು ಅವನ ತಮ್ಮನಾದೆ.’

ಪಕ್ಕದ ಕೋಣೆಯಲ್ಲಿ ಹಾಜಿ ಮುರಾದ್‍ನ ದನಿ ಕೇಳಿಸಿತು. ಎಲ್ದಾರ್ ತಕ್ಷಣವೇ ಕೈ ಚೆನ್ನಾಗಿ ಒರೆಸಿಕೊಂಡು, ದೊಡ್ಡ ಹೆಜ್ಜೆ ಹಾಕಿಕೊಂಡು ಡ್ರಾಯಿಂಗ್ ರೂಮಿಗೆ ಹೋದ. 

ವಾಪಸು ಬಂದವನೇ, ‘ನೀನು ಹೋಗಬೇಕಂತೆ,’ ಅಂದ. 

ಖುಷಿ ಮನುಷ್ಯ ಖಾನ್ ಮಹೋಮನಿಗೆ ಲೋರಿಸ್-ಮೆಲಿಕೋವ್ ಇನ್ನೊಂದು ಸಿಗರೇಟು ಕೊಟ್ಟು ಡ್ರಾಯಿಂಗ್ ರೂಮಿಗೆ ಹೋದ.

| ಮುಂದುವರೆಯುವುದು |

‍ಲೇಖಕರು Admin

December 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: