ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ವೀಕ್ಷಕರು – ನಿರೀಕ್ಷಕರು…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

10

ಮಾರನೆಯ ದಿನ ಹಾಜಿ ಮುರಾದ್ ಪ್ರಿನ್ಸ್‌ನ ಅರಮನೆಗೆ ಬಂದಾಗ ವೀಕ್ಷಕರ ಕೋಣೆಯಲ್ಲಿ ಆಗಲೇ ಜನ ನೆರೆದಿದ್ದರು. ನಿನ್ನೆಯ ಪೊದೆ ಮೀಸೆಯ ಜನರಲ್ ಎಲ್ಲ ಬಿರುದು ಬಾವಲಿಗಳೊಡನೆ ಪೂರ್ಣ ಸಮವಸ್ತ್ರ ತೊಟ್ಟು ಪ್ರಿನ್ಸ್‌ನಿಂದ ಬೀಳ್ಗೊಳ್ಳಲು ಬಂದಿದ್ದ. ಹಣ ದುರುಪಯೋಗದ ಆಪಾದನೆಯ ಬಗ್ಗೆ ಕೋರ್ಟ್ ಮಾರ್ಶಲ್ ಎದುರಿಸಬೇಕಾಗಿದ್ದ ಯಾವುದೋ ರೆಜಿಮೆಂಟಿನ ಕಮಾಂಡರ್; ಡಾಕ್ಟರ್ ಆಂದ್ರೇವ್‍ಸ್ಕಿಯ ಕೃಪಾಪೋಷಿತನಾಗಿದ್ದ, ವೋಡ್ಕಾ ಮಾರಾಟದ ಹಕ್ಕನ್ನು ನವೀಕರಿಸಿಕೊಳ್ಳಲು ಬಂದಿದ್ದ ಶ್ರೀಮಂತ ಅರ್ಮೇನಿಯನ್ ಕಾಯುತ್ತಿದ್ದರು. ಯಾವುದೋ ಕದನದಲ್ಲಿ ಸತ್ತ ಆಫೀಸರನ ಹೆಂಡತಿ ಕಪ್ಪು ಉಡುಗೆ ತೊಟ್ಟು ಪಿಂಚಣಿ ಕೇಳುವುದಕ್ಕೋ ಮಕ್ಕಳ ಉಚಿತ ಶಿಕ್ಷಣಕ್ಕೆ ಅವಕಾಶ ಕೇಳುವುದಕ್ಕೋ ಬಂದಿದ್ದಳು; ಸರ್ಕಾರವು ಚರ್ಚಿನಿಂದ ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ತನಗೇ ನೀಡುವಂತೆ ಕೋರಲು ಅದ್ಭುತವಾದ ಜಾರ್ಜಿಯನ್ ಉಡುಪು ಧರಿಸಿದ್ದ ಜಾರ್ಜಿಯನ್‌ ಪ್ರಿನ್ಸ್ ಬಂದಿದ್ದ. ಕಾಕಸಸ್ ಜನರನ್ನು ಅಧಿನದಲ್ಲಿರಿಸಿಕೊಳ್ಳುವುದಕ್ಕೆ ಸಿದ್ಧಪಡಿಸಿದ ಹೊಸ ಯೋಜನೆಯ ದೊಡ್ಡದೊಂದು ಕಾಗದದ ಸುರುಳಿ ಹಿಡಿದು ಅಧಿಕಾರಿಯೊಬ್ಬ ಬಂದಿದ್ದ.  ನಾನು ಪ್ರಿನ್ಸ್‌ನನ್ನು ಭೇಟಿ ಮಾಡಿದೆ ಎಂದು ತನ್ನ ಜನರಿಗೆ ಹೇಳುವುದಕ್ಕೆ ಸಾಧ್ಯವಾಗಲಿ ಎಂಬ ಆಸೆಯಿಂದ ಬಂದು ಕಾಯುತಿದ್ದ ಯಾರೋ ಖಾನ್ ಒಬ್ಬನಿದ್ದ.

ಎಲ್ಲರೂ ತಮ್ಮ ಸರದಿಗೆ ಕಾಯುತಿದ್ದರು. ನಯವಾದ ಕೂದಲ ಚೆಲುವ ಯುವಕ ಏಡ್ ಡಿ ಕ್ಯಾಂಪ್ ಒಬ್ಬೊರನ್ನಾಗಿ ಪ್ರಿನ್ಸ್‌ನ ಕೋಣೆಗೆ ಕಳಿಸಿ, ಮತ್ತೆ ಅವರನ್ನು ಹೊರಕ್ಕೆ ಕರೆದುತರುತಿದ್ದ.

ಹಾಜಿ ಮುರಾದ್ ವೀಕ್ಷಕರ ಕಾಯುವ ಕೋಣೆಗೆ ಸ್ವಲ್ಪ ಕುಂಟುತ್ತ, ಚುರುಕಾಗಿ ಕಾಲಿಟ್ಟಾಗ ಎಲ್ಲರ ಕಣ್ಣು ತನ್ನ ಮೇಲಿರುವುದು ಅವನಿಗೆ ತಿಳಿಯಿತು, ಕೋಣೆಯ ಹಲವು ಭಾಗಗಳಿಂದ ಜನ ಅವನ ಹೆಸರು ಪಿಸುಗುಟ್ಟುತ್ತಿರುವುದು ಕೇಳಿಸಿತು.

ಅವನು ಕಂದು ಬಣ್ಣದ ಬೆಶ್ಮತ್ ತೊಟ್ಟು, ಅದನ್ನು ಬೆಳ್ಳಿಯ ಕಸೂತಿ ಕಾಣುವ ಹಾಗೆ ಕೊರಳ ಸುತ್ತಲೂ ಸುತ್ತಿ, ಅದರ ಮೇಲೆ ಬಿಳಿಯ ಉದ್ದನೆಯ ಸಿರ್ಕಾಸಯನ್ ಕೋಟು ತೊಟ್ಟಿದ್ದ.  ಕಪ್ಪು ಬಣ್ಣದ ಲೆಗಿಂಗ್ಸ್ ತೊಟ್ಟು ಅದೇ ಬಣ್ಣದ ಮೃದುವಾದ ಶೂ ಧರಿಸಿದ್ದ. ಅವನ ಗ್ಲೌಸು ಕೈಗೆ ಬಿಗಿಯಾಗಿ ಕೂತಿದ್ದ ಹಾಗೇ ಅವನ ಶೂಗಳು ಕೂಡ ಒಳಪಾದದ ತಿರುವಿಗೆ ಬಿಗಿಯಾಗಿ ಒತ್ತಿದ್ದವು. ಪಪಾಖಾ ಟೋಪಿಯ ಮೇಲೆ ರುಮಾಲನ್ನು ಸುತಿದ್ದ. ಅದೇ ರುಮಾಲಿನ ಕಾರಣಕ್ಕಾಗಿ ಅಹ್ಮದ್ ಖಾನ್‍ನಿಂದ ಬೈಗುಳ ಕೇಳಿದ್ದ, ಆಮೇಲೆ ಜನರಲ್ ಕ್ಲುಗೆನೋನಿಂದ ಬಂಧನಕ್ಕೆ ಗುರಿಯಾಗಿದ್ದ, ಹಾಗಾಗಿ ಹಾಜಿ ಮುರಾದನು ಶಮೀಲ್‍ನ ಪಕ್ಷಕ್ಕೆ ಸೇರಲು ಆ ಟೋಪಿಯೊಝದು ಕಾರಣವಾಗಿತ್ತು.  

ಹಾಜಿ ಮುರಾದ್ ನಿರೀಕ್ಷಣಾ ಕೊಠಡಿಯ ಮರದ ಹಲಗೆಗಳ ನೆಲದ ಮೇಲೆ ಚುರುಕಾಗಿ ಹೆಜ್ಜೆ ಹಾಕುತ್ತ ನಡೆದ. ಅವನ ಒಂದು ಕಾಲು ಗಿಡ್ಡವಾಗಿದ್ದುದರಿಂದ ನಡೆಯುವಾಗ ಅವನ ತೆಳ್ಳನೆ ಮೈ ಸ್ವಲ್ಪ ಓಲಾಡುತಿತ್ತು. ಅವನ ಅಗಲವಾದ ಮುಖದಲ್ಲಿದ್ದ ಕಣ್ಣು ಯಾರನ್ನೂ ನೋಡದೆ ಸುಮ್ಮನೆ ನೇರವಾಗಿ ದಿಟ್ಟಿಸುತಿದ್ದವು. 

ಚೆಲುವನಾದ ಏಡ್ ಡಿ ಕ್ಯಾಂಪ್ ಅವನನ್ನು ಸ್ವಾಗತಿಸಿ, ದಯವಿಟ್ಟು ಕುಳಿತುಕೊಳ್ಳಿ ನೀವು ಬಂದಿರುವ ವಿಷಯ ಪ್ರಿನ್ಸ್ ಅವರಿಗೆ ತಿಳಿಸುತ್ತೇನೆ ಎಂದು ಒಳಕ್ಕೆ ಹೋದ. ಹಾಜಿ ಮುರಾದ್ ಕೂರಲಿಲ್ಲ. ಕೈಯನ್ನು ಕಠಾರಿಯ ಮೇಲಿಟ್ಟು ಒಂದು ಪಾದವನ್ನು ಸ್ವಲ್ಪ ಮುಂದಿರಿಸಿ ಎಲ್ಲರತ್ತಲೂ ತಿರಸ್ಕಾರದ ದೃಷ್ಟಿ ಬೀರಿದ. 

ಪ್ರಿನ್ಸ್‌ನ ದುಭಾಷಿಯಾಗಿ ಕೆಲಸ ಮಾಡುತಿದ್ದ ಪ್ರಿನ್ಸ್ ತರಖನೋವ್ ನೇರವಾಗಿ ಹಾಜಿ ಮುರಾದ್‍ನ ಬಳಿಗೆ ಬಂದು ಮಾತನಾಡಿಸಿದ. ಹಾಜಿ ಮುರಾದ್ ಮನಸಿಲ್ಲದೆ ತಟ್ಟನೆ ಚುರುಕಾಗಿ ಉತ್ತರ ಕೊಟ್ಟ. ಯಾರೋ ಪೋಲೀಸು ಅಧಿಕಾರಿಯ ವಿರುದ್ಧ ದೂರು ಕೊಡಲು ಬಂದಿದ್ದ ಕುಮ್ಯಕ್ ಪ್ರಿನ್ಸ್ ಒಬ್ಬಾತ ಪ್ರಿನ್ಸ್ ನ ಕೋಣೆಯಿಂದ ಹೊರ ಬಂದಮೇಲೆ ಏಡ್ ಡಿ ಕ್ಯಾಂಪ್ ಹಾಜಿ ಮುರಾದ್‍ನನ್ನು ಕೋಣೆಯ ಬಾಗಿಲಿಗೆ ಕರೆದೊಯ್ದು ದಾರಿ ತೋರಿ ಒಳಕ್ಕೆ ಕಳಿಸಿದ. 

ವರಾನ್ತಸೋವ್‍ ಮೇಜಿನ ಪಕ್ಕದಲ್ಲಿ ನಿಂತು ಹಾಜಿ ಮುರಾದ್‍ನನ್ನು ಸ್ವಾಗತಿಸಿದ. ನಿನ್ನೆಯ ದಿನ ಕಮಾಂಡರ್ ಇನ್ ಛೀಫ್‍ನ ವೃದ್ಧ ಮುಖದಲ್ಲಿದ್ದ ನಗುವಿನ ಬದಲಾಗಿ ಶಿಸ್ತು, ಕಾಠಿಣ್ಯ, ಗಾಂಭೀರ್ಯಗಳಿದ್ದವು. ದೊಡ್ಡ ಟೇಬಲ್ಲು, ವೆನೀಶಿಯನ್ ಬ್ಲೈಂಡ್‍ಗಳಿದ್ದ ದೊಡ್ಡ ಕಿಟಕಿಗಳು, ಇದ್ದ ಆ ದೊಡ್ಡ ಕೋಣೆಗೆ ಕಾಲಿಟ್ಟ ಹಾಜಿ ಮುರಾದ್ ಬಿಸಿಲಲ್ಲಿ ಬೆಂದ ಕೈಯನ್ನು ಬಿಳಿಯ ಕೋಟಿನ ಮೇಲೆ, ಎದೆಯ ಭಾಗದ ಮೇಲೆ ಇರಿಸಿ, ಕಣ್ಣು ತಗ್ಗಿಸಿ, ಒಂದಿಷ್ಟೂ ಆತುರವಿಲ್ಲದೆ ಟಾರ್ಟರ್ ಭಾಷೆಯಲ್ಲಿ ಸ್ಪಷ್ಟವಾಗಿ, ಗೌರವಪೂರ್ವಕವಾಗಿ  ಮಾತನಾಡಿದ. ಅವನು ಟಾರ್ಟರ್ ಭಾಷೆಯ ಕುಮ್ಯಕ್ ಉಪಭಾಷೆಯನ್ನು ಬಳಸಿದ. ಅವನು ಆ ನುಡಿಯಲ್ಲಿ ಚೆನ್ನಾಗಿ ಮಾತಾಡುತಿದ್ದ. 

‘ಮಹಾನ್ ಚಕ್ರವರ್ತಿಯವರ ಮತ್ತು ತಮ್ಮ ರಕ್ಷಣೆಯಲ್ಲಿರಲು ನನ್ನನ್ನು ನಾನು ಶರಣಾಗಿಸಿಕೊಳ್ಳುತಿದ್ದೇನೆ. ನನ್ನ ಮೈಯಲ್ಲಿ ರಕ್ತದ ಕೊನೆಯ ಹನಿ ಇರುವವರೆಗೂ ಬಿಳಿಯ ಚಕ್ರವರ್ತಿಯವರಿಗೆ ಸಂಪೂರ್ಣ ಶ್ರದ್ಧೆ ವಿಶ್ವಾಸಗಳೊಡನೆ ಸತ್ಯವಾಗಿ ಸೇವೆ ಸಲ್ಲಿಸುತ್ತೇನೆ. ನಿಮ್ಮ ಮತ್ತು ನನ್ನ ಶತ್ರುವಾದ ಶಮೀಲ್‍ನ ವಿರುದ್ಧ ನೀವು ನಡೆಸುತ್ತಿರುವ ಯುದ್ಧದಲ್ಲಿ ನನ್ನಿಂದ ನಿಮಗೆ ಸಹಾಯವಾದೀತೆಂದು ಆಶಿಸುತ್ತೇನೆ.’ 

ದುಭಾಷಿಯ ಮಾತನ್ನು ಪೂರಾ ಕೇಳಿ, ವರಾನ್ತಸೋವ್‍ ಹಾಜಿ ಮುರಾದ್‍ನತ್ತ ನೋಡಿದ, ಹಾಜಿ ಮುರಾದ್ ವರಾನ್ತಸೋವ್‍ನತ್ತ ನೋಡಿದ.

ಇಬ್ಬರ ಕಣ್ಣು ಕಲೆತವು. ಮಾತಿನಲ್ಲಿ ಹೇಳಲಾಗದ ವಿಷಯಗಳನ್ನು ಆ ನೋಟಗಳು ಹೇಳಿದವು. ದುಭಾಷಿ ಈ ಅರ್ಥದ ಮಾತು ಆಡಿಯೇ ಇರಲಿಲ್ಲ. ಮಾತಿಲ್ಲದೆ ಒಬ್ಬರಿಗೊಬ್ಬರು ಪೂರ್ಣ ಸತ್ಯವನ್ನು ಹೇಳಿಕೊಂಡರು. ‘ನೀನು ಹೇಳುತ್ತಿರುವ ಯಾವ ಮಾತನ್ನೂ ನಾನು ನಂಬುವುದಿಲ್ಲ. ಎಲ್ಲ ರಶಿಯನ್ನರ, ರಶಿಯನ್ ಸಂಗತಿಗಳ ಶತ್ರು ನೀನು. ಯಾವಾಗಲೂ ಶತ್ರುವೇ ಹೌದು. ನಿನಗೆ ಅಗತ್ಯಬಿತ್ತೆಂದು ಈಗ ಶರಣಾಗುತ್ತಿದ್ದೀಯ,’ ಎಂದು ವರಾನ್ತಸೋವ್‍ನ ಕಣ್ಣು ಹಾಜಿ ಮುರಾದ್‍ಗೆ ಹೇಳಿದವು. ಹಾಜಿ ಮುರಾದ್ ಇದನ್ನು ಅರ್ಥ ಮಾಡಿಕೊಂಡ ಆದರು ತನ್ನ ನಿಷ್ಠೆ ರಶಿಯಕ್ಕೆ ಎಂದು ಹೇಳುತ್ತಲೇ ಇದ್ದ. ಹಾಜಿ ಮುರಾದ್‍ನ ಕಣ್ಣು ಮಾತ್ರ, ‘ಈ ಮುದಿಯ ಸಾವಿನ ಯೋಚನೆ ಮಾಡಬೇಕು, ಯುದ್ಧದ ಚಿಂತೆಯಲ್ಲ. ಮುದುಕನಾದರೂ ಪಾಕಡಾ ಮನುಷ್ಯ. ಹುಷಾರಾಗಿರಬೇಕು,’ ಅನ್ನುತಿದ್ದವು. ವರಾನ್ತಸೋವ್‍ ಇದನ್ನು ಅರ್ಥಮಾಡಿಕೊಂಡರೂ ಯುದ್ಧದಲ್ಲಿ ಗೆಲ್ಲುವುದಕ್ಕಾಗಿ ಏನು ಹೇಳಬೇಕೋ ಅದನ್ನು ಹೇಳಿದ. 

‘ಅವನಿಗೆ ಹೇಳು, ನಮ್ಮ ಪ್ರಭುಗಳು ಎಷ್ಟು ಬಲಿಷ್ಠರೋ ಅಷ್ಟೇ ಕರುಣಾಳುಗಳು. ನಾನು ಕೋರಿಕೊಂಡರೆ ಅವರು ಬಹುಶಃ ನಿನ್ನನ್ನು ಕ್ಷಮಿಸಬಹುದು. ನಿನ್ನನ್ನು ತಮ್ಮ ಸೇವೆಗೆ ಬಳಸಿಕೊಳ್ಳ ಬಹುದು…ಹೇಳಿದೆಯಾ, ಇದನ್ನ?’ ಎಂದು ಕೇಳಿ ಹಾಜಿ ಮುರಾದ್‍ನತ್ತ ನೋಡುತ್ತ ಮುಂದುವರೆಸಿದ. ‘ಪ್ರಭುಗಳಿಂದ ಆಜ್ಞೆ ಬರುವವರೆಗೂ ನಾನು ಅವನ ಹೊಣೆಯನ್ನು ಹೊರುತ್ತೇನೆ, ಅವನಿಗೆ ನೆಮ್ಮದಿಯ ಆಶ್ರಯ ಕೊಡುತ್ತೇನೆ.’

ಹಾಜಿ ಮುರಾದ್ ಮತ್ತೊಮ್ಮೆ ಕೈಯನ್ನು ಎದೆಯ ಮಧ್ಯಭಾಗಕ್ಕೆ ಒತ್ತಿ ಉತ್ಸಾಹದಿಂದ ಮಾತಾಡಿದ.

ದುಭಾಷಿ ಹೇಳಿದ: ‘ಅವನು ಅನ್ನುತ್ತಾನೆ—ಮೊದಲು ಅವನು 1839ರಲ್ಲಿ ಅವರಿಯಾ ಪ್ರಾಂತವನ್ನು ಆಳುತ್ತಿದ್ದಾಗ ರಶಿಯನ್ನರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತಿದ್ದ, ಅವನನ್ನು ನಾಶಮಾಡಬೇಕೆಂದು ಅವನ  ಶತ್ರು ಅಹ್ಮದ್ ಖಾನ್ ಜನರಲ್ Klügenauನ ಬಳಿ ಅಸತ್ಯವಾದ ಆಪಾದನೆಗಳನ್ನು ಮಾಡಿರದಿದ್ದರೆ ನಿಷ್ಠೆ ಬದಲಾಗುತ್ತಿರಲಿಲ್ಲ.’

‘ನನಗೆ ಗೊತ್ತು, ನನಗೆ ಗೊತ್ತು,’ ಅಂದ ವರಾನ್ತಸೋವ್‍ (ಅಕಸ್ಮಾತ್ ಅವನಿಗೆ ಎಂದಾದರೂ ಗೊತ್ತಿದ್ದಿದ್ದರೂ ಅದನ್ನು ಎಂದೋ ಮರೆತುಬಿಟ್ಟಿದ್ದ) ಅವನು ಕೂರುತ್ತ ಹಾಜಿ ಮುರಾದನು ಗೋಡೆಗೆ ಒರಗಿಸಿದ್ದ ದಿವಾನ್ ಮೇಲೆ ಕೂರುವಂತೆ ಸನ್ನೆ ಮಾಡಿದ. ಹಾಜಿ ಮುರಾದ್ ಕೂರಲಿಲ್ಲ. ಅಂಥ ಪ್ರಮುಖ ವ್ಯಕ್ತಿಯ ಎದುರು ಕೂರಲೋ ಬೇಡವೋ ಎಂದು ತೀರ್ಮಾನ ಮಾಡಲಾರೆ ಎಂಬಂತೆ ತನ್ನ ಬಲಿಷ್ಠ ಭುಜಗಳನ್ನೊಮ್ಮೆ ಕೊಡವಿ ದುಭಾಷಿಗೆ ಹೀಗೆ ಹೇಳಿದ—

‘ಅಹ್ಮದ್ ಖಾನ್, ಶಮೀಲ್ ಇಬ್ಬರೂ ನನ್ನ ಶತ್ರುಗಳು. ಅಹ್ಮದ್ ಖಾನ್ ಸತ್ತು ಹೋದ, ನಾನು ಅವನ ಮೇಲೆ ಸೇಡು ತೀರಿಸಿಕೊಳ್ಳಲಾರೆ ಎಂದು ಪ್ರಿನ್ಸ್ ಗೆ ಹೇಳು. ಶಮೀಲ್ ಬದುಕಿದ್ದಾನೆ, ಅವನ ಮೇಲೆ ಸೇಡು ತೀರಿಸಿಕೊಳ್ಳದೆ ನಾನು ಪ್ರಾಣ ಬಿಡುವವನಲ್ಲ,’ ಎಂದು ಹುಬ್ಬು ಗಂಟಿಕ್ಕಿ, ಹಲ್ಲು ಕಚ್ಚಿ ನುಡಿದ. 

‘ಸರಿ, ಸರಿ. ಅವನು ಶಮೀಲ್‍ನ ಮೇಲೆ ಸೇಡು ಹೇಗೆ ತೀರಿಸಿಕೊಳ್ಳುತ್ತಾನಂತೆ, ಕೇಳು. ಹಾಗೇನೇ… ಕುಳಿತುಕೋ ಎಂದು ಅವನಿಗೆ ಹೇಳು,’ ಎಂದು ವರಾನ್ತಸೋವ್‍ ತಣ್ಣನೆ ದನಿಯಲ್ಲಿ ದುಭಾಷಿಗೆ ಹೇಳಿದ. 

ಕೂರಲು ಮತ್ತೊಮ್ಮೆ ನಿರಾಕರಿಸಿದ ಹಾಜಿ ಮುರಾದ್. ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ರಶಿಯನ್ನರು ಶಮೀಲ್‍ನನ್ನು ನಾಶಮಾಡುವುದಕ್ಕೆ ಸಹಾಯ ಮಾಡುವ ಉದ್ದೇಶದಿಂದಲೇ ನಾನು ರಶಿಯನ್ನರ ಪಕ್ಷಕ್ಕೆ ಬಂದಿದ್ದೇನೆ, ಎಂದು ಹೇಳಿದ. 

‘ಒಳ್ಳೆಯದು, ಬಹಳ ಒಳ್ಳೆಯದು, ಅವನು ನಿರ್ದಿಷ್ಟವಾಗಿ ಏನು ಮಾಡುತ್ತಾನಂತೆ? ಕೂತುಕೋ…ಕೂತುಕೋ!’ ಅಂದ  ವರಾನ್ತಸೋವ್‍.

ಹಾಜಿ ಮುರಾದ್ ಕುಳಿತ. ನನ್ನನ್ನು ಸೈನ್ಯದೊಂದಿಗೆ ಲೆಸ್ಗಿಯಾಕ್ಕೆ ಕಳಿಸಿದರೆ ಇಡೀ ದಾಗೆಸ್ತಾನವನ್ನು ಎತ್ತಿಕಟ್ಟುವ ಮಾತು ಕೊಡುತ್ತೇನೆ, ಆಗ ಶಮೀಲ್ ಅಧಿಕಾರ ಉಳಿಸಿಕೊಳ್ಳಲಾರ,’ ಎಂದು ಹೇಳಿದ. 

‘ಬಹಳ ಎಕ್ಸಲೆಂಟ್ ಯೋಚನೆ…ಯೋಚನೆ ಮಾಡುತ್ತೇನೆ,’ ಅಂದ ವರಾನ್ತಸೋವ್‍.

ಅವನ ಮಾತನ್ನು ತರ್ಜುಮೆ ಮಾಡಿ ಹಾಜಿ ಮುರಾದ್‍ಗೆ ಹೇಳಿದ ದುಭಾಷಿ.

ಹಾಜಿ ಮುರಾದ್ ಯೋಚನೆ ಮಾಡಿದ. 

‘ಸರದಾರ್‍ ಗೆ ಇನ್ನೊಂದು ಮಾತು ಹೇಳು, ನನ್ನ ಕುಟುಂಬ ನನ್ನ ಶತ್ರುವಿನ ವಶದಲ್ಲಿದೆ. ಅವರು ಬೆಟ್ಟದಲ್ಲಿರುವವರಗೆ ನಾನು ಅವರಿಗೆ ಸಹಾಯಮಾಡಲಾರೆ. ನಾನು ನೇರವಾಗಿ ಶಮೀಲ್‍ಗೆ ತಿರುಗಿಬಿದ್ದರೆ ಅವನು ನನ್ನ ಹೆಂಡತಿ, ನನ್ನ ತಾಯಿ, ನನ್ನ ಮಕ್ಕಳನ್ನು ಕೊಲ್ಲುತ್ತಾನೆ. ಪ್ರಿನ್ಸ್ ಅವರು ತಮ್ಮ ಹತ್ತಿರ ಇರುವ ಖೈದಿಗಳನ್ನು ಬಿಡುಗಡೆ ಮಾಡಿ ನನ್ನ ಕುಟುಂಬವನ್ನು ಬಿಡಿಸಲಿ, ನಾನು ಆಮೇಲೆ ಶಮೀಲ್‍ನ ನಾಶ ಮಾಡುತ್ತೇನೆ, ಇಲ್ಲವೇ ಸಾಯುತ್ತೇನೆ,’ ಎಂದು ಹೇಳು.

‘ಸರಿ, ಸರಿ, ಯೋಚನೆ ಮಾಡುತ್ತೇನೆ…ಈಗ ಅವನು ಹೋಗಿ ಚೀಫ್ ಆಫ್ ಸ್ಟಾಫ್ ಅವರನ್ನು ನೋಡಲಿ. ತನ್ನ ಸ್ಥಿತಿ, ಉದ್ದೇಶ, ಅಪೇಕ್ಷೆಗಳನ್ನೆಲ್ಲ ವಿವರವಾಗಿ ತಿಳಿಸಲಿ.’ ಎಂದ  ವರಾನ್ತಸೋವ್‍. 

ಹಾಜಿ ಮುರಾದ್ ಮತ್ತು ವರಾನ್ತಸೋವ್‍ ಅವರ ಮೊದಲ ಭೇಟಿ ಹೀಗೆ ಮುಗಿಯಿತು.

ಅಂದು ಸಂಜೆ, ಪೌರ್ವಾತ್ಯ ಶೈಲಿಯಲ್ಲಿ ಅಲಂಕರಿಸಿದ್ದ ಹೊಸ ಥಿಯೇಟರಿನಲ್ಲಿ ಇಟಾಲಿಯನ್ ಒಪೆರಾದ ಪ್ರದರ್ಶನ ನಡೆಯಿತು. ವರಾನ್ತಸೋವ್‍ ತನ್ನ ಬಾಕ್ಸ್ ಸೀಟಿನಲ್ಲಿ ಕುಳಿತಿದ್ದಾಗ ಕುಂಟುಗಾಲಿನ, ರುಮಾಲು ತೊಟ್ಟು ಎದ್ದು ಕಾಣುವ ಹಾಜಿ ಮುರಾದ್‍ನ ಆಕೃತಿ ಕಾಣಿಸಿ, ಮೊದಲ ಸಾಲಿನಲ್ಲಿ ಹೋಗಿ ಕುಳಿತಿತು. ಅವನು ವರಾನ್ತಸೋವ್‍ನ ಏಡ್ ಡಿ ಕ್ಯಾಂಪ್ ಲೋರಿಸ್-ಮೆಲಿಕೋವ್‍ ಜೊತೆಯಲ್ಲಿ ಬಂದ. ಹಾಜಿ ಮುರಾದ್‍ನನ್ನು ಅವನ ಸುಪರ್ದಿನಲ್ಲಿ ಇರಿಸಲಾಗಿತ್ತು. ಮೊದಲನೆಯ ಅಂಕ ಪೂರ್ತಿ ಪೌರ್ವಾತ್ಯ ಮುಸ್ಲಿಂ ಗಾಂಭೀರ್ಯದೊಡನೆ ಯಾವುದೇ ಸಂತೋಷ ತೋರದೆ ಎದ್ದು ಕಾಣುವ ಉದಾಸೀನದಿಂದ ಪ್ರದರ್ಶನವನ್ನು ನೋಡಿದ ಹಾಜಿ ಮುರಾದ್ ಅಂಕ ಮುಗಿಯುತಿದ್ದ ಹಾಗೆ ಎದ್ದು ನಿಂತು, ಸುತ್ತಲೂ ಇರುವ ಪ್ರೇಕ್ಷಕರನ್ನು ಶಾಂತವಾಗಿ ನೋಡುತ್ತ ಎಲ್ಲರ ಗಮನವನ್ನೂ ಸೆಳೆದು ಹೊರಟು ಹೋದ. 

ಮಾರನೆಯ ದಿನ ಸೋಮವಾರ. ವರಾನ್ತಸೋವ್‍ ಮನೆಯಲ್ಲಿ ಮಾಮೂಲು ಸಂಜೆಯ ಪಾರ್ಟಿ ನಡೆಯುವ ದಿವಸ. ಮರಗಳ ಮರೆಯಲ್ಲಿದ್ದ ಬ್ಯಾಂಡು ಸಂಗೀತ ನುಡಿಸುತಿತ್ತು, ಉಜ್ವಲವಾಗಿ ದೀಪಗಳುರಿಯುತಿದ್ದ ಹಾಲ್‍ನಲ್ಲಿ ಯುವತಿಯರು, ಅಷ್ಟು ಯುವತಿಯರಲ್ಲದವರು ತಮ್ಮ ಬತ್ತಲು ಕೊರಳು, ತೋಳುಗಳನ್ನೂ ಬಲುಮಟ್ಟಿಗೆ ಎದೆಯನ್ನೂ ತೋರುವಂಥ ಉಡುಪು ತೊಟ್ಟು ಸಮವಸ್ತ್ರ ತೊಟ್ಟ ಗಂಡಸರ ಅಪ್ಪುಗೆಯಲ್ಲಿ ಸುತ್ತಿ ಸುತ್ತಿ ನರ್ತಿಸುತಿದ್ದರು. ಬಫೆಯಲ್ಲಿ ಕೆಂಪು ಸ್ವಾಲೋ ಟೇಲ್ ಕೋಟು, ಬ್ರೀಚಸ್ ಮತ್ತು ಶೂ ತೊಟ್ಟ ಸೇವಕರು ಮಹಿಳೆಯರಿಗೆ ಶಾಂಪೇನ್, ಜೊತೆಗೆ ಸಿಹಿ ತಿನಿಸು  ನೀಡುತಿದ್ದರು. ‘ಸರ್ದಾರ್’ನ ಪತ್ನಿಗೆ ಬಹಳ ವಯಸ್ಸಾಗಿದ್ದರೂ ಮೈತೋರಿಸುವ ಅರೆ-ಉಡುಪು ತೊಟ್ಟು ಅತಿಥಿಗಳ ನಡುವೆ ಓಡಾಡುತ್ತ, ಸ್ನೇಹಪೂರ್ವಕವಾಗಿ ನಗುತ್ತ ಇದ್ದಳು. ದುಭಾಷಿಯ ಮೂಲಕ ಹಾಜಿ ಮುರಾದ್‍ಗೆ ಒಂದೆರಡು ಸ್ನೇಹದ ಮಾತು ತಲುಪಿಸಿದಳು.

ಹಾಜಿ ಮುರಾದ್ ನಿನ್ನೆಯ ದಿನ ಥಿಯೇಟರಿನಲ್ಲಿ ಪ್ರೇಕ್ಷಕರನ್ನು ಯಾವ ಉದಾಸೀನದಿಂದ ಕಂಡಿದ್ದನೋ ಅದೇ ಉದಾಸೀನದಲ್ಲಿ ಈಗಲೂ ಅತಿಥಿಗಳನ್ನು ನೋಡುತಿದ್ದ. ಆತಿಥೇಯಳ ನಂತರ ಮಿಕ್ಕ ಅರೆ ಬೆತ್ತಲೆ ಹೆಂಗಸರು ಅವನ ಬಳಿಗೆ ಬಂದು ಎಲ್ಲರೂ ನಿರ್ಲಜ್ಜೆಯಿಂದ ಅವನೆದುರು ನಿಂತು, ನಗುತ್ತಾ ಎಲ್ಲರೂ ಒಂದೇ ಪ್ರಶ್ನೆಯನ್ನು ಕೇಳುತಿದ್ದರು: ‘ನೀನು ನೋಡುತ್ತಿರುವುದೆಲ್ಲ ಹೇಗಿದೆ, ಹೇಗನ್ನಿಸುತ್ತಿದೆ?’ ಸ್ವತಃ ವರಾನ್ತಸೋವ್‍, ಬಂಗಾರದ ಭುಜಪಟ್ಟಿ, ಬಂಗಾರದ ಭುಜ ರಜ್ಜು, ಕೊರಳಿಗೆ ವೈಟ್ ಕ್ರಾಸ್ ಧರಿಸಿ ಅವನ ಬಳಿಗೆ ಬಂದು ಅದೇ ಪ್ರಶ್ನೆ ಕೇಳಿದ. ಹಾಜಿ ಮುರಾದ್ ಇಲ್ಲಿ ನೋಡಿದ್ದೆಲ್ಲದರಿಂದ ಸಂತೋಷ ಪಡದೆ ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವನೂ ಖಚಿತವಾಗಿ ನಂಬಿದ್ದ. ಮಿಕ್ಕ ಎಲ್ಲರಿಗೂ ಹೇಳಿದ ರೀತಿಯಲ್ಲೇ ಅವನಿಗೂ ಹಾಜಿ ಮುರಾದ್ ಉತ್ತರ ಹೇಳಿದ. ‘ನಮ್ಮ ಜನಗಳಲ್ಲಿ ಇಂಥವು ನಡೆಯುವುದಿಲ್ಲ,’  ಎಂದು ಹೇಳಿದನೇ ಹೊರತು ಹಾಗೆ ಇಲ್ಲದಿರುವುದು ಒಳ್ಳೆಯದೋ ಕೆಟ್ಟದ್ದೋ ಹೇಳಲಿಲ್ಲ. 

ಬಾಲ್ ಕಾರ್ಯಕ್ರಮದಲ್ಲಿ ಹಾಜಿ ಮುರಾದ್ ತನ್ನ ಕುಟುಂಬದವರನ್ನು ಬಿಡಿಸಿಕೊಂಡು ಬರುವ ಬಗ್ಗೆ ವರಾನ್ತಸೋವ್‍ನ ಹತ್ತಿರ ಪ್ರಸ್ತಾಪ ಮಾಡಿದ. ಅವನು ಹೇಳಿದ್ದು ಕೇಳಿಸಲೇ ಇಲ್ಲವೆಂಬಂತೆ ನಟಿಸಿ ವರಾನ್ತಸೋವ್‍ ಹೊರಟು ಹೋದ. ವ್ಯವಹಾರ ಮಾಡುವುದಕ್ಕೆ ಅದು ತಕ್ಕ ಸ್ಥಳವಲ್ಲ ಎಂದು ಲಾರಿಸ್ ಮೆಲಿಕೋವ್ ಆಮೇಲೆ ಹಾಜಿ ಮುರಾದ್‍ಗೆ ಹೇಳಿದ  

ಗಡಿಯಾರ ಹನ್ನೊಂದು ಬಡಿದಾಗ ಹಾಜಿ ಮುರಾದ್ ತನಗೆ ವರಾನ್ತಸೋವ್‍ ಕೊಟ್ಟಿದ್ದ ಗಡಿಯಾರ ನೋಡಿ ಸಮಯ ದೃಢಮಾಡಿಕೊಂಡು, ತಾನಿನ್ನು ಹೊರಡಬಹುದೇ ಎಂದು ಲಾರಿಸ್ ಮೆಲಿಕೋವ್‍ನನ್ನು ಕೇಳಿದ. ಅವನು, ‘ಹೋಗಬಹುದು, ಆದರೆ ಇರುವುದು ಒಳ್ಳೆಯದು,’ ಎಂದ. ಆದರೂ ಹಾಜಿ ಮುರಾದ್ ಏನೂ ಮಾತಾಡದೆ ತನಗಾಗಿ ನೀಡಿದ್ದ ನಾಲ್ಕು ಕುದುರೆ ಸಾರೋಟನ್ನು ಏರಿ ತನ್ನ ವಸತಿಗೆ ಹೊರಟು ಹೋದ. 

| ಮುಂದುವರೆಯುವುದು |

ಟಿಪ್ಪಣಿಗಳು

ಅಖ್ಮೆತ್ ಖಾನ್: ಅವರ್ ಸಮುದಾಯದ ಒಬ್ಬ ನಾಯಕ, ಹಾಜಿ ಮುರಾದ್‍ನ ವಿರೋಧಿ. 

ಕುಮ್ಯಕ್: ದಾಗೆಸ್ತಾನ್‍ದಲ್ಲಿನ ಒಂದು ಟರ್ಕಿ ಸಮುದಾಯ, ಕುಮ್ಯಕ್ ಭಾಷೆಯನ್ನಾಡುವವರು. 

ಲೆಸ್ಗಿಯಾ: ಸುನ್ನಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಈಶಾನ್ಯ ಕಕೇಶಿಯನ್ ಪ್ರಾಂತ್ಯ.

ವೈಟ್ ಕ್ರಾಸ್: ಪುಟ್ಟ ಗಾತ್ರದ ಬಿಳಿಯ ಶಿಲುಬೆಯು ತಮ್ಮ ರಾಷ್ಟ್ರವು ಜಗತ್ತಿನ ಮಹಾನ್ ರಾಷ್ಟ್ರವಾಗಿದೆ, ಕ್ರಿಶ್ಚಿಯನ್ ಧರ್ಮದ ತತ್ವ, ಕ್ರಿಶ್ಚಿಯನ್ ನೈತಿಕತೆ, ಒಬ್ಬ ಸೃಷ್ಟಿಕರ್ತ ದೇವರಲ್ಲಿ ನಂಬಿಕೆ ಈ ಸಾಧನೆಗೆ ಕಾರಣ ಎಂದು ಸುತ್ತಲಿನವರಿಗೆ ತಿಳಿಸುತ್ತದೆ ಎಂಬ ವಿವರಣೆ ಇದೆ. 

ಚಿತ್ರಗಳು: ಪಪಾಖಾ ಟೋಪಿ, ಸಿರ್ಕಾಸಿಯನ್ ಕೋಟು, ಹೈ ಟರ್ಬಬನ್, ಈ ಅಧ್ಯಾಯದಲ್ಲಿ ಹಾಜಿ ಮುರಾದ್ ಕಂಡ ರೀತಿ

‍ಲೇಖಕರು Admin

December 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: