ಕಳೆದುಹೋದ ದಿನಗಳಲ್ಲಿ ಪಡೆದುಕೊಳ್ಳುವ ಸಂಗತಿಗಳಿವೆ…

ಚಲಂ

ಒಬ್ಬ ಬರಹಗಾರ ತನ್ನ ಸುತ್ತಲ ಪರಿಸರ ಬಿಟ್ಟು ಮಾತನಾಡಿದರೆ ಏನಾಗುತ್ತದೆ? ಆ ಬರಹಗಾರನ ಕಥೆ, ಕಾದಂಬರಿಗಳು ಏನನ್ನು ಪ್ರತಿನಿಧಿಸುತ್ತವೆ? ಆ ಪ್ರದೇಶಕ್ಕೆ ಆ ಬರಹಗಾರ ಕೊಡುವ ಕಾಣ್ಕೆ ಏನು ಎಂಬಿತ್ಯಾದಿ ಪ್ರಶ್ನೆ ಮುನ್ನೆಲೆಗೆ ಬರುತ್ತಿರುವ ದಿನಗಳಿವು. ರಮ್ಯ ಲೋಕದಲ್ಲಿ ಸಿಕ್ಕ ಸ್ವಾತಂತ್ರ್ಯದ ಸುಖ ಅನುಭವಿಸುತ್ತಾ ಮೈಮರೆಯುತ್ತಿರುವಾಗ ಆ ಮೈಮರೆವಿಗೆ ದಂಡ ಕಟ್ಟುವಂತೆ ಒಂದೊಂದೋ ಸಮಸ್ಯೆಗಳು ಎದುರಿಗೆ ಬಂದು ಬೃಹಾದಾಕಾರ ತಾಳಿವೆ. ಆ ಸಮಸ್ಯೆಗಳು ಬಗೆ ಹರಿಯುವುದೇ ಇಲ್ಲ ಎಂಬ ಆತಂಕ ಹುಟ್ಟಿಸುತ್ತಿವೆ.
ಅದಕ್ಕೆ ರಾಜಕಾರಣಿ, ಅಧಿಕಾರಿವರ್ಗ ಎಲ್ಲವನ್ನೂ ದೂರುವುದು ಬಹಳ ಸುಲಭ. ಅದಕ್ಕಿಂತ ಹೆಚ್ಚಿನ ಆತಂಕ ದೂರುಗಳಿಗೂ ಅರ್ಹರಲ್ಲದ ಬರಹಗಾರರ ಜೀವನ ಹಾಗು ಬರಹ.

ಯಾಕೆ ಬರಹಗಾರ ಅಥವಾ ಬರಹಗಾರ್ತಿ ಸಮಕಾಲೀನ ಜನಜೀವನದ ಅವಜ್ಞೆಗೆ ತುತ್ತಾಗಿದ್ದಾರೆ ಅಂತ ಗಂಭೀರವಾಗಿ ಯೋಚಿಸುವ ದಿನಗಳಲ್ಲಿ ಹಿರಿಯ ಸಾಹಿತಿ, ರಂಗಕರ್ಮಿ ಪ್ರಸಾದ್ ರಕ್ಷಿದಿ ಒಂದು “ಕಳೆದುಹೋದ ದಿನಗಳು” ಎಂಬ ದಿಕ್ಸೂಚಿಯನ್ನು ನೀಡಿದ್ದಾರೆ.

ಒಂದು ಶತಮಾನ, ಅಂದರೆ ನೂರು ವರ್ಷಗಳಲ್ಲಿ ನಡೆದ ಸಂಗತಿಗಳನ್ನು ಕ್ರೋಡೀಕರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕೊಡಗು ಹಾಗು ಸಕಲೇಶಪುರ ಭಾಗದ ಒಂದು ಶತಮಾನದ ಸಾಕಷ್ಟು ಸಂಗತಿಗಳನ್ನು ರಂಗಕರ್ಮಿ, ಚಿಂತಕ ಪ್ರಸಾದ್ ರಕ್ಷಿದಿ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಗಣಪಯ್ಯ ಎಂಬುವವರು ಸೋಮವಾರಪೇಟೆ ಸಾಕಮ್ಮನ ತೋಟದಲ್ಲಿ ಮ್ಯಾನೇಜರ್ ಆಗಿ ಸೇರಿಕೊಂಡವರು. ಸಾಕಮ್ಮನ ಎಸ್ಟೇಟ್ ಸಾಕಮ್ಮನವರ ವ್ಯವಹಾರ ಕುಶಲತೆ ಹಾಗು ಕಾಫಿ ಕೃಷಿಯ ಸಾಧನೆಗಾಗಿ ಹೆಸರುವಾಸಿಯಾದದ್ದು. ಚಿಕ್ಕ ವಯಸ್ಸಿಗೆ ಮೂರನೇ ಹೆಂಡತಿಯಾಗಿ ಬಂದ ಸಾಕಮ್ಮನವರು ತಮ್ಮ ಪತಿಯ ನಿಧನಾನಂತರ ವಿಸ್ತರಿಸಿದ ಕಾಫಿ ಸಾಮ್ರಾಜ್ಯದ ಕತೆ ನಮಗಿಲ್ಲಿ ಸಿಗುತ್ತದೆ‌.

ಸಕಲೇಶಪುರದ ಅದೆಷ್ಟು ಜನ ಕಾಫಿ ಬೆಳೆಗಾರರು ಇಲ್ಲಿ ಬಂದಿದ್ದಾರೆ ಎಂಬುದನ್ನು ಅದೇ ತಾಲೂಕಿನವನಾಗಿ ಅಚ್ಚರಿಗಣ್ಣಿಂದ ಓದಿದೆ‌.ಇಷ್ಟು ಅಧ್ಯಯನ ಶೀಲ ಪೂರ್ಣ ದಾಖಲೆ ಇದೂವರೆಗಂತೂ ಸಿಕ್ಕಿಲ್ಲ.

ಗುಂಡೂರಾವ್ ಮುಖ್ಯಮಂತ್ರಿ ಆಗುವ ಮೊದಲು ಏನು ಮಾಡ್ತಿದ್ರು? ಬೇಳೂರಿನ ಬಿ ಬಿ ಶಿವಪ್ಪನವರ ಕುಟುಂಬ ಹೇಗಿತ್ತು? ಯಾವ ಯಾವ ಎಸ್ಟೇಟುಗಳು ಹೇಗೆ ರೂಪುಗೊಂಡವು ? ಹೀಗೆ ಅಸಂಖ್ಯಾತ ಕುತೂಹಲಕಾರಿ ಸಂಗತಿಗಳು ಅನಾವರಣಗೊಳ್ಳುತ್ತಾ ಸಾಗುತ್ತದೆ.

ನಿರೂಪಕರಾದ ಪ್ರಸಾದ್ ಅವರ ಹೆಸರ ಹಿಂದೆ ರಕ್ಷಿದಿ ಎಂಬ ಹಾನುಬಾಳು ಕಡೆಯ ಊರು ಹೇಗೆ ಸೇರಿಕೊಂಡಿತು? ಅವರ ತಂದೆಯವರ ಒಂದು ವರ್ಷದ ನಿರುದ್ಯೋಗ ಪರ್ವದ ನಂತರ ಹಾರ್ಲೆ ಎಂಬ ಸಕಲೇಶಪುರ ಬೇಲೂರು ಮಧ್ಯದ ಒಂದು ಎಸ್ಟೇಟ್ ವಹಿಸಿದ ಪಾತ್ರದ ಮೂಲಕ ಕಾಫಿನಾಡಿನ ಕಾರ್ಮಿಕ ಜೀವನ ಶಕ್ತವಾಗಿ ನಿರೂಪಣೆಗೊಳ್ಳುತ್ತಾ ಸಾಗುತ್ತದೆ.

ಸಕಲೇಶಪುರದ ಅದಷ್ಟೂ ತೋಟಗಳ ಜೊತೆ ಜೊತೆಗೆ ಅಲ್ಲಿನ ಪ್ರಯೋಗ ಶೀಲ ಜನರನ್ನು ಪರಿಚಯ ಮಾಡಿಕೊಟ್ಟ ಒಂದು ಪ್ರಮುಖ ಕೆಲಸ ನಡೆದಿದೆ‌.

ಬ್ರಿಟೀಷ್ ಒಡೆತನದ ತೋಟಗಳು ಕಾಲಾನಂತರ ಇಲ್ಲಿಯವರ ಸುಪರ್ದಿಗೆ ಬಂದವೇನೋ ಹೌದು. ಆದರೆ ಅಷ್ಟು ವಿಸ್ತಾರವಾದ ಎಸ್ಟೇಟನ್ನು ನಿಭಾಯಿಸುವುದು ಸುಲಭವೆ? ಬ್ರಿಟೀಷರು ಶಿಕಾರಿ ಮಾಡಲು ಇರಲಿ ಅಂತ ತಮ್ಮದೇ ವಿಸ್ತಾರವಾದ ಜಾಗ ಹೊಂದಿದ್ದರು ಎಂದು ಓದಿದಾಗ “ಅಬ್ಬಾ ಜೀವನ ಶೋಕಿಯೇ…” ಎನಿಸಿತು.

ಕಾಡು ಮನೆ ಎಸ್ಟೇಟ್ ಟೀ ಎಸ್ಟೇಟ್ ಆಗಿದ್ದು ಹಲವು ಪ್ರಯೋಗಗಳ ಬಳಿಕ ಎಂದು ಹೇಳುತ್ತಲೇ ಅಲ್ಲಿನ ವಾರಸುದಾರರ ಪ್ರಸ್ತಾಪವಾಗುತ್ತದೆ.
ಈ ಪುಸ್ತಕದಲ್ಲಿ ಡಾ. ರವೀಂದ್ರನಾಥ್ ಎಂಬ ವೈದ್ಯರು ಬರುತ್ತಾರೆ. ಅವರ ಕಾರ್ಯವೈಖರಿಯ ಬಗ್ಗೆ ನೀವು ಓದಿಯೇ ತಿಳಿಯಬೇಕು.
ಮಡಿಕೇರಿಯ ಆ ಕಾಲದ ನಗರದ ಮನೆಗಳಿಗೆ ಸೌದೆ ಒದಗಿಸುವ ಚಿತ್ರಣದ ಮೂಲಕ “ದೀನಬಂದು ಗಣೇಶಯ್ಯ” ಪರಿಚಯವಾಗುವ ಪರಿ ಬ್ರಿಟೀಷರ ಕಾಲದ ಜನಜೀವನವನ್ನು ನಮಗೆ ಪರಿಯಿಸುತ್ತದೆ.

ಗಾಂಧೀಜಿ ಬಂದಾಗ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಸಾಕಮ್ಮನವರು ಹಿಂದೇಟು ಹಾಕುವ ಮೂಲಕ ಹೇಗೆ ವ್ಯವಹಾರ ಪ್ರಜ್ಞೆ ಮೆರೆದರು ಅನ್ನುವುದು ಯಾವ ಕಾಲಕ್ಕೂ ಉದ್ಯಮ ಹಾಗು ರಾಜಕೀಯ ವ್ಯವಸ್ಥೆಗೆ ಇದ್ದ ಸಂಬಂಧವನ್ನು ಸೂಚಿಸುತ್ತದೆ.

ಏಲಕ್ಕಿ ಹಾಗು ಕಾಫಿಯ ಬೆಳವಣಿಗೆಯ ಜೊತೆಗೆ ಈ ಭಾಗದ ಜನಜೀವನವನ್ನು ನೋಡುತ್ತಾ ಸಾಗುವ ಕೃತಿ ವಾಸ್ತವ ನೆಲೆಗಟ್ಟಿನ ಸೃಜನಶೀಲವಾದುದು.

ಇಲ್ಲಿ ಹೇಳುತ್ತಿರುವುದು ಕಥೆಯಲ್ಲ. ಆದರೆ ಸಾವಿರ ಸಾವಿರ ಕಥೆ, ಕಾದಂಬರಿಗಳಿಗಾಗುವಷ್ಟು ಸಮೃದ್ದ ಸಂಗತಿಗಳಿವೆ‌ ಎಂಬುದು ಮನವರಿಕೆಯಾಗುತ್ತದೆ.

ಕೊಡಗು, ಸಕಲೇಶಪುರ ಭಾಗದ ಜನರಲ್ಲಿ ಸಾಹಿತಿಗಳೂ ಇದ್ದಾರೆ. ಅದರಲ್ಲಿ ಪ್ರಸಾದ್ ರಕ್ಷಿದಿಯವರೇ ಹೇಳುವಂತೆ ಭಾರತೀಸುತ, ಹಾಡ್ಲಹಳ್ಳಿ ನಾಗರಾಜ್ ಅವರನ್ನು ಬಿಟ್ಟರೆ ಈ ನೆಲಕ್ಕಂಟಿ ಬರೆದವರು ಇಲ್ಲ. ಇನ್ನೊಂದಷ್ಟು ಹೆಸರುಗಳಿವೆ. ಅವೆಲ್ಲಾ ಹೊರಗಿನ ಪ್ರಭಾವವನ್ನು ಅವಾಹಿಸಿಕೊಂಡು ನಗರಜೀವಿಗಳಾಗಿದ್ದರ ಪರಿಣಾಮ ಈ ಮಲೆಯಾದ್ರಿ ಸೀಮೆಯನ್ನು ಕಟ್ಟಿಕೊಡುವ ಬಗ್ಗೆ ಆಸಕ್ತಿಯಿಲ್ಲ.

ಓದುತ್ತಾ ಓದುತ್ತಾ ಬರಹಗಾರನ ಸಾಮಾಜಿಕ ಜವಬ್ದಾರಿಯನ್ನು ನೆನಪಿಸುವ ಮಹತ್ವದ ಕೆಲಸ ಮಾಡುವ ಈ “ಕಳೆದುಹೋದ ದಿನಗಳು” ಪುಸ್ತಕ ನಿಜಕ್ಕೂ ಅರ್ಥಪೂರ್ಣವಾದ ಕೃತಿ.

ಇದನ್ನು ಯಾಕೆ ಕಾದಂಬರಿಯನ್ನಾಗಿಸಲಿಲ್ಲ ಅಂತ ಯೋಚಿಸಿದೆ. ಕಾದಂಬರಿ ಪ್ರಕಾರದಲ್ಲಿ ಇಷ್ಟೊಂದು ಸಂಗತಿಗಳನ್ನು ಇಷ್ಟು ಶಕ್ತವಾಗಿ‌ ನಿರೂಪಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಹೆಚ್ಚಿನ ವಾಸ್ತವಾಂಶದ ಅಧಿಕೃತತೆ ದಕ್ಕುತ್ತಿರಲಿಲ್ಲ ಎಂಬ ಉತ್ತರ ಕಂಡುಕೊಂಡೆ.
ಒಬ್ಬ ಶಕ್ತ ರಂಗಕರ್ಮಿಯಾಗಿ, ಸಮಾಜಮುಖಿ‌ ಚಿಂತಕನಾಗಿ ಅದರಲ್ಲೂ ಒಬ್ಬ ಬರಹಗಾರನಾಗಿ ತನ್ನ ನೆಲದ ಋಣ ತೀರಿಸುವ ಒಂದು ಮಾದರಿಯನ್ನು ಪ್ರಸಾದ್ ರಕ್ಷಿದಿ ನಮಗೆ ಕಟ್ಟಿಕೊಟ್ಟಿದ್ದಾರೆ.

“ಕಳೆದುಹೋದ ದಿನಗಳು” ಪುಸ್ತಕ ಕಳೆದುಹೋದ ಅದೆಷ್ಟೋ ಸಂಗತಿಗಳನ್ನು ಸ್ವಾತಂತ್ರ್ಯ ಕಾಲದ “ಸ್ವತಂತ್ರ ರಾಜಕೀಯ ಪಕ್ಷದ” ಆದಿಯಿಂದ 2000 ಇಸವಿಯ ತನಕ ಹೇಳುತ್ತಾ ಹೋಗಿದೆ. ಅದಾದ 22 ವರ್ಷಗಳ ನಂತರ ಮತ್ತಷ್ಟು ಕಳೆದುಕೊಂಡ ಅಖಂಡ ವಿಷಾದವಿದೆ. ಅದರ ಬೀಜ ಎಲ್ಲಿಂದ ಬಿತ್ತು ಎಂಬುದನ್ನು ನೋಡಲು, ನೋಡಿ ಏನು ಮಾಡಬಹುದು ಅಂತ ಚಿಂತನೆ ಮಾಡಲಿಕ್ಕೆ ಅನುಕೂಲ ಆಕರಗ್ರಂಥ ನೀಡಿದ ಪ್ರಸಾದ್ ರಕ್ಷಿದಿ ಅವರಿಗೆ ನನ್ನ ಅನಂತ ಅಭಿನಂದನೆಗಳು.

‍ಲೇಖಕರು Admin

December 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: