ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ನರಿಯಂಥ ಹಿರೀಕ ವರಾನ್ತಸೋವ್…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

9

ಮೈಖೆಲ್ ಸೆಮ್ಯೊನೊವಿಚ್ ವರಾನ್ತಸೋವ್‍ ರಶಿಯದ ರಾಯಭಾರಿಯ ಮಗನಾಗಿದ್ದರಿಂದ ಇಂಗ್ಲೆಂಡಿನಲ್ಲಿ ಓದಿದ್ದ. ಅವನ ಕಾಲದ ಉನ್ನತಾಧಿಕಾರಿಗಳಲ್ಲಿ ಅಪರೂಪವಾಗಿದ್ದ ಯೂರೋಪಿಯನ್ ಶಿಕ್ಷಣವನ್ನು ಪಡೆದಿದ್ದ. ಅವನು ಮಹತ್ವಾಕಾಂಕ್ಷಿ, ಸೌಮ್ಯ ಸ್ವಭಾವದವನು. ಕೈಕೆಳಗಿನವರನ್ನು ಮರುಕದಿಂದ ಕಾಣುತ್ತಾ ತನಗಿಂತ ಮೇಲಿನವರೊಡನೆ ಜಾಣತನದಿಂದ ವರ್ತಿಸುತಿದ್ದ. ಅಧಿಕಾರ ಮತ್ತು ಅಧೀನತೆಗಳಿಲ್ಲದ ಬದುಕು ಅವನಿಗೆ ಅರ್ಥವೇ ಆಗುತ್ತಿರಲಿಲ್ಲ. ಎಲ್ಲ ಉನ್ನತ ಪದವಿ, ಪ್ರಶಸ್ತಿಗಳನ್ನು ಪಡೆದಿದ್ದ. ಜಾಣ ನೇನಾಪತಿಯೆಂದೂ ಕ್ರಾಸ್ನೆಯಿಯಲ್ಲಿ ನೆಪೋಲಿಯನ್‍ನನ್ನು ಸೋಲಿಸಿದವನೆಂದೂ ಗೌರವಕ್ಕೆ ಪಾತ್ರನಾಗಿದ್ದವನು. 

ಅವನ ವಯಸ್ಸು 1851ರಲ್ಲಿ ಎಪ್ಪತ್ತು ದಾಟಿತ್ತಾದರೂ ಇನ್ನೂ ಸಾಕಷ್ಟು ಉತ್ಸಾಹವಿತ್ತು, ಚುರುಕಾಗಿ ಓಡಾಡುತಿದ್ದ. ಅವನ ಬುದ್ದಿ ಸೂಕ್ಷ್ಮವಾಗಿ, ಸರಾಗವಾಗಿ ಓಡುತಿತ್ತು. ಅದನ್ನು ಬಳಸಿಕೊಳ್ಳುತ್ತ ಅಧಿಕಾರವನ್ನು ಉಳಿಸಿಕೊಂಡು ಜನಪ್ರಿಯತೆಯನ್ನು ಮತ್ತೂ ಗಟ್ಟಿ ಮಾಡಿಕೊಳ್ಳುತಿದ್ದ. ಭಾರೀ ಆಸ್ತಿ ಇತ್ತು-ಅವನ ಸ್ವಂತ ಆಸ್ತಿ, ಹೆಂಡತಿ  ಕೌಂಟೆಸ್ ಬ್ರಾನ್ಟ್‍ಸ್ಕಿಯಿಂದ ಬಂದ ಆಸ್ತಿ, ವೈಸ್ರಾಯ್ ಹುದ್ದೆಯ ಭಾರೀ ಸಂಬಳ ಅವನ ಪಾಲಿಗೆ ಇತ್ತು. ಕ್ರಿಮಿಯಾದ ದಕ್ಷಿಣ ಕರಾವಳಿಯಲ್ಲಿ ಅರಮನೆಯನ್ನು ಕಟ್ಟಿಸುವುದಕ್ಕೆ, ಅರಮನೆಯ ಮುಂದೆ ಉದ್ಯಾನ ನಿರ್ಮಿಸುವುದಕ್ಕೆ ತನ್ನ ಸಂಪತ್ತಿನ ಬಹಳಷ್ಟು ಪಾಲು ಖರ್ಚು ಮಾಡುತಿದ್ದ.

[ಮುರಾದ್‍ನ ಶರಣಾಗತಿಯ ಸುದ್ದಿ ಬಂದಿತು]

ಡಿಸೆಂ ಬರ್ 7, 1851ರ ಸಂಜೆ ಸುದ್ದಿತರುವವನ ಟ್ರೋಯ್ಕಾ ಟಿಫ್ಲಿಸ್ ಅರಮನೆಯ ಮುಂದೆ ಬಂದು ನಿಂತಿತು. ಮುಖವೆಲ್ಲ ಧೂಳಡರಿ ಕಪ್ಪಾಗಿದ್ದ, ದಣಿದ ಅಧಿಕಾರಿಯೊಬ್ಬ ಅದರಿಂದ ಇಳಿದ. ಹಾಜಿ ಮುರಾದ್‍ನ ಶರಣಾಗತಿಯ ಸುದ್ದಿಯನ್ನು ಜನರಲ್ ಕೋಜ್ಲೋವ್‍ಸ್ಕಿ ಅವನ ಮೂಲಕ ಕಳಿಸಿದ್ದ. ಸುದ್ದಿ ತಂದ ಅಧಿಕಾರಿ ಇಳಿದವನೇ ಜೋಮು ಹಿಡಿದಿದ್ದ ಕಾಲನ್ನೊಮ್ಮೆ ಜಾಡಿಸಿ, ಕಾವಲುಗಾರನನ್ನು ದಾಟಿ ವಿಶಾಲವಾದ ಕೈಸಾಲೆಗೆ ಪ್ರವೇಶಮಾಡಿದ. ಸಂಜೆಯ ಆರು ಗಂಟೆಯಾಗಿತ್ತು. ವರಾನ್ತಸೋವ್‍ ಆಗ ತಾನೇ ರಾತ್ರಿಯ ಊಟಕ್ಕೆ ಹೊರಟಿದ್ದ. ಸುದ್ದಿಗಾರ ಬಂದಿದ್ದಾನೆಂದು ತಿಳಿದು ವರಾನ್ತಸೋವ್‍ ತಕ್ಷಣವೇ ಅವನನ್ನು ಭೇಟಿ ಮಾಡಿದ. ಹಾಗಾಗಿ ಊಟಕ್ಕೆ ಒಂದೆರಡು ನಿಮಿಷ ತಡವಾಗಿ ಹೋದ. ಅವನು ಡ್ರಾಯಿಂಗ್‍ರೂಮಿಗೆ ಕಾಲಿಟ್ಟಾಗ ಊಟಕ್ಕೆ ಆಹ್ವಾನಿಸಿದ್ದ ಸುಮಾರು ಮೂವತ್ತು ಜನ ಅಲ್ಲಿದ್ದರು. ಪ್ರಿನ್ಸೆಸ್ ಎಲಿಸಬೆತ್ ಕ್ಸವೆರೇವ್ನಾ ವರಾನ್ತಸೋವ್‍ಳ ಸುತ್ತ ಕೂತಿದ್ದರು, ಕೆಲವರು ಕಿಟಕಿಗಳ ಹತ್ತಿರ ಪುಟ್ಟ ಗುಂಪುಗಳಾಗಿ ನಿಂತಿದ್ದರು. ಎಲ್ಲರೂ ಅವನತ್ತ ತಿರುಗಿ ನೋಡಿದರು. ವರಾನ್ತಸೋವ್‍ ತನ್ನ ಮಾಮೂಲು ಕಪ್ಪು ಬಣ್ಣದ ಮಿಲಿಟರಿ ಕೋಟು ತೊಟ್ಟಿದ್ದರೂ ಭುಜಪಟ್ಟಿಗಳು ಇರಲಿಲ್ಲ. ವೈಟ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಸೇಂಟ್ ಜಾರ್ಜ್ ಪದಕ ಕೊರಳಲ್ಲಿತ್ತು. ಅಲ್ಲಿ ಸೇರಿದ್ದವರನ್ನೆಲ್ಲ ಕಣ್ಣು ಕಿರಿದು ಮಾಡಿ ನೋಡುತ್ತ ಅವನ ನುಣ್ಣಗೆ ಕ್ಷೌರ ಮಾಡಿದ್ದ ನರಿ ಮುಖದಲ್ಲಿ ನಗು ಮೂಡಿತು. 

ಚುರುಕಾದ ಹೆಜ್ಜೆ ಇಡುತ್ತ ಮೃದುವಾಗಿ ನಡೆಯುತ್ತ ಬಂದು ತಡವಾದದ್ದಕ್ಕೆ ಮಹಿಳೆಯರ ಕ್ಷಮೆ ಕೋರಿದ. ಮಹನೀಯರಿಗೆ ಸ್ವಾಗತ ಕೋರಿದ. ಪ್ರಿನ್ಸೆಸ್ ಮನಾನಾ ಓರ್ಬೆಲ್ಯಾನಿಯ ಬಳಿಗೆ ಹೋದ. ಅವಳು ಎತ್ತರವಾಗಿದ್ದ, ಚೆಲುವೆಯಾದ, ಪೌರ್ವಾತ್ಯ ಹೆಣ್ಣು ಅನ್ನಿಸುತಿದ್ದ ನಲವತ್ತೈದು ವರ್ಷದ ಮಹಿಳೆ. ತನ್ನ ತೋಳನ್ನು ಅವಳತ್ತ ನೀಡಿ, ಅವಳ ಜೊತೆಯಾಗಿ ನಡೆಯುತ್ತ ಭೋಜನದ ಮೇಜಿನತ್ತ ಸಾಗಿದ. ಪ್ರಿನ್ಸೆಸ್ ಎಲಿಸಬೆತ್ ವರಾನ್ತಸೋವ್‍ ತನ್ನ ತೋಳನ್ನು ಟಿಫ್ಲಿಸ್‍ಗೆ ಅತಿಥಿಯಾಗಿ ಬಂದಿದ್ದ, ಕೆಂಚು ಕೂದಲಿನ ಪೊದೆ ಮೀಸೆಯ ಜನರಲ್‍ಗೆ ನೀಡಿ ಅವನ ಜೊತೆಯಾಗಿ ಹೆಜ್ಜೆ ಹಾಕಿದಳು. ಜಾರ್ಜಿಯದ ಪ್ರಿನ್ಸ್ ಒಬ್ಬಾತ ತನ್ನ ತೋಳನ್ನು ಪ್ರಿನ್ಸೆಸ್ ಎಲಿಸಬೆತ್ ವರಾನ್ತಸೋವ್‍ಳ ಗೆಳತಿ ಕೌಂಟೆಸ್ ಶ್ವಾಸೆಲ್‍ಗೆ ನೀಡಿದ; ಈ ಪ್ರಥಮ ದಂಪತಿ ಜೋಡಿಗಳ ಹಿಂದೆ ಏಡ್ ಡಿ ಕ್ಯಾಂಪ್ ಆಗಿದ್ದ ಡಾ. ಆಂದ್ರೇವ್ಸ್ಕಿ ಮತ್ತು ಇತರರು, ತಮ್ಮೊಡನೆ ಮಹಿಳೆಯರಿದ್ದವರು, ಇರದಿದ್ದವರು ಎಲ್ಲರೂ ಹೆಜ್ಜೆ ಹಾಕಿದರು. 

ಸಮವಸ್ತ್ರ ತೊಟ್ಟ ಸೇವಕರು ಅತಿಥಿಗಳು ಕೂರಲು ಅನುವಾಗುವ ಹಾಗೆ ಕುರ್ಚಿಗಳನ್ನು ಹಿಂದೆಳೆದು, ಅವರು ಕೂರಲು ಸಿದ್ಧವಾದ ತಕ್ಷಣ ಮುಂದೆ ಸರಿಸುತಿದ್ದರು. ಮನೆವಾರ್ತೆಯ ಮುಖ್ಯಸ್ಥನು ಹಬೆಯಾಡುತಿದ್ದ ಸೂಪ್‍ ಅನ್ನು ಬೆಳ್ಳಿಯ ಪಾತ್ರೆಯಿಂದ ಅತಿಥಿಗಳ ಬಟ್ಟಲಿಗೆ ಬಗ್ಗಿಸುವ ಆಚರಣೆಯನ್ನು ವಿಧಿವತ್ತಾಗಿ ನೆರವೇರಿಸಿದ. 

ಉದ್ದ ಮೇಜಿನ ಒಂದು ಬದಿಯ ಮಧ್ಯ ಭಾಗದಲ್ಲಿ ವರಾನ್ತಸೋವ್‍ ಕುಳಿತ. ಅವನೆದುರಿಗೆ ಅವನ ಹೆಂಡತಿ, ಆಕೆಯ ಬಲ ಪಕ್ಕದಲ್ಲಿ ಜನರಲ್ ಕೂತರು. ಪ್ರಿನ್ಸ್ನ ಬಲಭಾಗದಲ್ಲಿ ಗೌರವಾನ್ವಿತ ಮಹಿಳೆ, ಚೆಲುವೆ ಓಬ್ರೆಲ್ಯಾನಿ ಇದ್ದಳು. ಅವನ ಎಡಕ್ಕೆ ಗಂಭೀರ ಮುಖದ ಕೆಂಪು ಕೆನ್ನೆಯ ಜಾರ್ಜಿಯನ್ ಮಹಿಳೆ ಒಬ್ಬಾಕೆ ಜಗಮಗಿಸುವ ವಡವೆ ತೊಟ್ಟು ಒಂದೇ ಸಮ ಮುಗುಳುನಗೆ ಬೀರುತ್ತ ಕುಳಿತಿದ್ದಳು. 

ಏನು ಸುದ್ದಿ ಬಂದದ್ದು ಎಂದು ಹೆಂಡತಿ ಕೇಳಿದ ಮಾತಿಗೆ, ‘ಎಕ್ಸಲೆಂಟ್ ಮೈ ಡಿಯರ್! ಸೈಮನ್‍ಗೆ ಅದೃಷ್ಟ ಖುಲಾಯಿಸಿತು!’ ಎಂದು ವರಾನ್ತಸೋವ್‍ ಉತ್ತರ ಕೊಟ್ಟ. ಎಲ್ಲರಿಗೂ ಕೇಳಿಸುವ ಹಾಗೆ ಗಟ್ಟಿಯಾಗಿ ಹೊಸ ಸುದ್ದಿಯನ್ನು ಹೇಳಿದ (ಅವನಿಗೆ ಮಾತ್ರ ಅದು ಅನಿರೀಕ್ಷಿತ ಸುದ್ದಿಯಾಗಿರಲಿಲ್ಲ. ಯಾಕೆಂದರೆ ಮಾತುಕಥೆಗಳು ಬಹು ಕಾಲದಿಂದ ನಡೆದೇ ಇದ್ದವು). ಶಮೀಲ್‍ನ ದಂಡನಾಯಕ, ಬಹಳ ಧೈರ್ಯವಂತ ಹಾಜಿ ಮುರಾದ್ ರಶಿಯನ್ನರ ಪಕ್ಷಕ್ಕೆ ಸೇರುತ್ತಿದ್ದಾನೆ, ಇನ್ನೊಂದೆರಡು ದಿನಗಳಲ್ಲಿ ಅವನನ್ನು ಟಿಫ್ಲಿಸ್‍ಗೆ ಕರೆದುಕೊಂಡು ಬರುತ್ತಾರೆ ಎಂದು ಹೇಳಿದ.

ಎಲ್ಲರೂ—ಮೇಜಿನ ತುತ್ತ ತುದಿಯಲ್ಲಿ ಕೂತು ತಮ್ಮಷ್ಟಕ್ಕೇ ಏನೋ ಮಾತಾಡಿಕೊಂಡು ನಗುತಿದ್ದ ಯುವಕ ಏಡ್ ಡಿ ಕ್ಯಾಂಪ್‍ಗಳೂ ಸೇರಿದಂತೆ—ಎಲ್ಲರೂ ಮೌನವಾಗಿ ಸುದ್ದಿಯನ್ನು ಕೇಳಿದರು. 

ಪ್ರಿನ್ಸ್ ಮಾತು ಮುಗಿಸಿದ ಮೇಲೆ ಪ್ರಿನ್ಸೆಸ್ ತನ್ನ ಪಕ್ಕದಲ್ಲಿ ಕೂತಿದ್ದ ಪೊದೆ ಮಿಸೆಯ ಜನರಲ್‍ನನ್ನು, ‘ಜನರಲ್, ನೀವು ಯಾವತ್ತಾದರೂ ಈ ಹಾಜಿ ಮುರಾದ್‍ನನ್ನು ಭೇಟಿಯಾಗಿದ್ದಿರಾ?’ ಎಂದು ಕೇಳಿದಳು. 

‘ಒಂದಲ್ಲ ಬೇಕಾದಷ್ಟು ಸಲ ನೋಡಿದೇನೆ.’

ಬೆಟ್ಟಗಾಡಿನ ಜನರು 1843ರಲ್ಲಿ ಗೆರ್ಗೆಬಿಲ್‍ ಹಳ್ಳಿಯನ್ನು ವಶ ಮಾಡಿಕೊಂಡಿದ್ದರು. ಆಗ ಹಾಜಿ ಮುರಾದ್ ಜನರಲ್ ಪಾಸ್ಸೆಕ್‍ನ ಪ್ರತ್ಯೇಕವಾಗಿದ್ದ ತುಕಡಿಯ ಮೇಲೆ ಬಿದ್ದು ನಮ್ಮ ಕಣ್ಣೆದುರಿಗೇ ಕರ್ನಲ್ ಝೊಲೊತುಖಿನ್‍ನನ್ನು ನನ್ನು ಕೊಂದಿದ್ದ ಎಂದು ಜನರಲ್ ಕಥೆ ಹೇಳಿದ್ದ. 

ಜನರಲ್ಲನ ಕಥೆ ಕೇಳುತ್ತ ವರಾನ್ತಸೋವ್‍ ತೃಪ್ತಿಯಿಂದ ನಕ್ಕ. ಮಾಮೂಲು ಮಾತು ಕಥೆಯಲ್ಲಿ ಪಾಲ್ಗೊಂಡನೆಂದು ಸಂತೋಷಪಡುತಿದ್ದ. ಇದ್ದಕಿದ್ದ ಹಾಗೆ ವರಾನ್ತಸೋವ್‍ನ ಮುಖ ಇಳಿಬಿತ್ತು. ಹಾಜಿ ಮುರಾದ್‍ನನ್ನು ಎರಡನೆಯ ಬಾರಿ ಕಂಡ ಕಥೆಯನ್ನು ಜನರಲ್ ಶುರು ಮಾಡಿದ್ದ. ‘ನಿಮಗೆ ನೆನಪಿದೆಯಾ ಯುವರ್ ಎಕ್ಸಲೆನ್ಸಿ, ಡ್ರೈ ಬಿಸ್ಕತ್ ರೆಸ್ಕ್ಯೂ ಆಪರೇಶನ್ನು ನಡೆದಾಗ ಅವನೇ ಅಲ್ಲವಾ ಸಹಾಯಕ್ಕೆ ಹೋದ ನಮ್ಮ ತುಕಡಿಯ ಮೇಲೆ ಅಡಗಿ ದಾಳಿ ಮಾಡಿದ್ದು?’ 

ವರಾನ್ತಸೋವ್‍ ಕಣ್ಣು ಕಿರಿದು ಮಾಡುತ್ತಾ ‘ಎಲ್ಲಿ?’ ಎಂದು ಕೇಳಿದ. 

ಜನರಲ್ ಯಾವುದನ್ನು ‘ರೆಸ್ಕ್ಯೂ ಆಪರೇಶನ್’ ಎಂದು ಕರೆದಿದ್ದನೋ ಅದು ದಾರ್ಗೊ ಎಂಬಲ್ಲಿ ನಡೆದ ಕಾಳಗದಲ್ಲಿ ಇಡೀ ತುಕಡಿಯೊಂದು ಸರ್ವನಾಶವಾದ ಪ್ರಸಂಗವಾಗಿತ್ತು. ಸ್ವತಃ ಪ್ರಿನ್ಸ್ ವರಾನ್ತಸೋವ್‍ ಆ ತುಕಡಿಯ ನಾಯಕನಾಗಿದ್ದ. ಹೊಸ ತುಕಡಿಗಳು ಸಹಾಯ ಅಥವ ರೆಸ್ಕ್ಯೂಗೆ ಬಾರದೆ ಇದ್ದಿದ್ದರೆ ಸ್ವತಃ ವರಾನ್ತಸೋವ್‍ ಕೂಡ ಅಂದು ಸಾಯಬೇಕಾಗಿತ್ತು. ವರಾನ್ತಸೋವ್‍ ನಾಯಕತ್ವದಲ್ಲಿ ನಡೆದ  ದಾರ್ಗೊ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿತ್ತು, ಅನೇಕ ರಶಿಯನ್ನರು ಪ್ರಾಣ ಕಳೆದುಕೊಂಡಿದ್ದರು, ರಶಿಯದ ಅನೇಕ ತೋಪುಗಳು ಶತ್ರುಗಳ ಪಾಲಾಗಿದ್ದವು. ಅದು ಇಡೀ ದೇಶವೇ ನಾಚುವಂಥ ಪ್ರಸಂಗವಾಗಿತ್ತು. ಹಾಗಾಗಿ ಯಾರಾದರೂ ಆ ಘಟನೆಯನ್ನು ವರಾನ್ತಸೋವ್‍ನ ಎದುರಿನಲ್ಲಿ ನೆನೆದುಕೊಂಡರೆ ಅದನ್ನು ರೆಸ್ಕ್ಯೂ ಆಪರೇಶನ್ ಎಂದೇ ಸೂಚಿಸುತಿದ್ದರು. ಯಾಕೆಂದರೆ ವರಾನ್ತಸೋವ್‍ ಚಕ್ರವರ್ತಿಗೆ ಕಳಿಸಿದ ವರದಿಯಲ್ಲಿ ತಾನು ರೆಸ್ಕ್ಯೂ ಕಾರ್ಯಾಚರಣೆ ಮಾಡಿದೆನೆಂದೂ ಅದು ರಶಿಯನ್ ಸೈನ್ಯದ ಮಹಾ ಸಾಧನೆಯೆಂದೂ ಹೆಮ್ಮೆಯಿಂದ ಹೇಳಿದ್ದ. ಆದರೆ ರೆಸ್ಕ್ಯೂ ಎಂಬ ಮಾತು ಅಲ್ಲಿ ದೊರೆತದ್ದು ಉಜ್ವಲವಾದ ವಿಜಯವಲ್ಲ, ಅನೇಕ ಜೀವಗಳ ಬೆಲೆ ತೆರಬೇಕಾಗಿ ಬಂದ ಮಹಾಪರಾಧ ಅನ್ನುವುದು ಗೊತ್ತಾಗುತಿತ್ತು. ಎಲ್ಲರಿಗೂ ಇದು ತಿಳಿಯಿತು, ಕೆಲವರು ಜನರಲ್‍ನ ಮಾತಿನ ಅರ್ಥ ಗಮನಿಸಲಿಲ್ಲವೆಂಬಂತೆ ನಟಿಸಿದರು, ಇನ್ನು ಕೆಲವರು ಮುಂದೇನಾಗುತ್ತದೋ ಎಂದು ಆತಂಕ ಪಡುತಿದ್ದರು. 

ದಪ್ಪ ಮೀಸೆಯ ಜನರಲ್ ಮಾತ್ರ ಏನನ್ನೂ ಗಮನಿಸದೆ ಕಥೆ ಹೇಳುವುದರಲ್ಲೇ ಮೈ ಮರೆತಿದ್ದ. ಮಾಮೂಲು ದನಿಯಲ್ಲಿ ‘ರೆಸ್ಕ್ಯೂ ಹೊತ್ತಿನಲ್ಲಿ, ಯುವರ್ ಎಕ್ಸಲೆನ್ಸಿ…’ ಎಂದ. 

ತನಗೆ ಪ್ರಿಯವಾದ ವಿಷಯವನ್ನು ಎತ್ತಿಕೊಂಡಿದ್ದ ಜನರಲ್ ಹಾಜಿ ಮುರಾದನು ಹೇಗೆ ತುಕಡಿಗಳ ಮಧ್ಯೆ ಸಂಪರ್ಕ ತಪ್ಪಿಸಿ ಇಬ್ಬಾಗ ಮಾಡಿದ್ದ, ರೆಸ್ಕ್ಯೂ ತಂಡ ಬಾರದಿದ್ದರೆ (ರೆಸ್ಕ್ಯು ಅನ್ನುವ ಮಾತನ್ನು ಮತ್ತೆ ಮತ್ತೆ ಹೇಳುವುದಕ್ಕೆ ಅವನಿಗೆ ಇಷ್ಟ ಅನಿಸುವ ಹಾಗಿತ್ತು) ಅಲ್ಲಿದ್ದ ಯಾರೊಬ್ಬರೂ ಜೀವಂತ ಉಳಿಯುತ್ತಿರಲಲಿಲ್ಲ, ಯಾಕೆಂದರೆ…’

ಜನರಲ್ ಕಥೆಯನ್ನು ಪೂರ್ತಿ ಮಾಡಲಿಲ್ಲ. ಯಾಕೆಂದರೆ, ಏನು ನಡೆಯುತ್ತಿದೆ ಅನ್ನುವುದನ್ನು ಅರ್ಥಮಾಡಿಕೊಂಡಿದ್ದ ಮನಾನಾ ಓಬ್ರೆಲ್ಯಾನಿ ತಟ್ಟನೆ ಮಧ್ಯೆ ಮಾತಾಡಿದಳು. ‘ಜನರಲ್ ಅವರಿಗೆ ಟಿಫ್ಲಿಸ್‍ನಲ್ಲಿ ಏರ್ಪಾಡಾಗಿರುವ ವಸತಿ ಆರಾಮವಾಗಿದೆಯೇ?’ ಎಂದು ಕೇಳಿದಳು. ಆಶ್ಚರ್ಯಗೊಂಡ ಜನರಲ್ ಸುತ್ತಲೂ ಇದ್ದವರನ್ನು ನೋಡಿದ. ಮೇಜಿನ ತುದಿಯಲ್ಲಿದ್ದ ಅವನ ಏಡ್ ಡಿ ಕ್ಯಾಂಪ್‍ಗಳು ಅರ್ಥಪೂರ್ಣವಾಗಿ ತನ್ನನ್ನೇ ದಿಟ್ಟಿಸುತಿರುವುದು ಕಂಡ. ತಟ್ಟನೆ ಅವನಿಗೆ ಅರ್ಥವಾಯಿತು! ಪ್ರಿನ್ಸೆಸ್‍ಳ ಮಾತಿಗೆ ಉತ್ತರ ನೀಡದೆ, ಹುಬ್ಬು ಗಂಟಿಕ್ಕಿ, ಮೌನವಾದ, ತಟ್ಟೆಯಲ್ಲಿದ್ದ ಊಟವನ್ನು ಆತುರವಾಗಿ, ಅಗಿಯದೆ ಹಾಗೇ ನುಂಗಲು ಶುರು ಮಾಡಿದ. ತಿನಿಸುಗಳ ಕಾರ, ರುಚಿ ಎರಡೂ ನಿಗೂಢ ಅನಿಸುತ್ತಿತ್ತು. 

ಎಲ್ಲರೂ ಮುಜುಗರಪಡುತಿದ್ದರು. ಆದರೆ ಸಂದರ್ಭದ ಕಸಿವಿಸಿಯನ್ನು ಕಡಮೆ ಮಾಡಿದ್ದು ಜಾರ್ಜಿಯದ ಪ್ರಿನ್ಸ್, ಮಹಾ ಮೂರ್ಖನಾದರೂ ಅಸಾಮಾನ್ಯ ನಾಜೂಕಿನ, ಕಲಾತ್ಮಕ ಹೊಗಳಿಕೆಯನ್ನು ಮೈಗೂಡಿಸಿಕೊಂಡಿದ್ದ ಆಸ್ಥಾನಿಕ. ಅವನು ಪ್ರಿನ್ಸೆಸ್ ವರಾನ್ತಸೋವ್‍ಳ ಇನ್ನೊಂದು ಪಕ್ಕದಲ್ಲಿ ಕೂತಿದ್ದ. ಏನನ್ನೂ ಗಮನಿಸಿರದ ಅವನು ಹಾಜಿ ಮುರಾದ್ ಹೇಗೆ ಮೆಖ್ತುಲಿಯಲ್ಲಿ ಅಖ್ಮತ್ ಖಾನ್‍ನ ವಿಧವೆಯನ್ನು ಹೊತ್ತೊಯ್ದ ಅನ್ನುವ ಕಥೆ ಹೇಳುವುದಕ್ಕೆ ಶುರು ಮಾಡಿದ. 

‘ಅವತ್ತು ರಾತ್ರಿ ಹಳ್ಳಿಗೆ ಬಂದ. ಬೇಕಾದ್ದು ಎತ್ತಿಕೊಂಡ. ಕುದುರೆ ಮೇಲೆ ಹೇರಿಕೊಂಡ. ತನ್ನವರ ಗುಂಪಿನ ಜೊತೆ ಹೊರಟು ಹೋದ.’

‘ಅವನಿಗೆ ಅದೇ ಹೆಂಗಸು ಬೇಕು ಅಂತ ಯಾಕೆ ಅನಿಸಿತು?’ ಪ್ರಿನ್ಸೆಸ್ ಕೇಳಿದಳು.

‘ಓ, ಅವಳ ಗಂಡ ಅವನ ಶತ್ರು. ಅವನನ್ನ ಬೆನ್ನಟ್ಟಿ ಬಂದ. ಅವನು ಸೆರೆ ಕೈಗೆ ಸಿಗದೆ ಸತ್ತು ಹೋದ. ಅವನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಆಗಲಿಲ್ಲವಲ್ಲ, ಅವನ ವಿಧವೆ ಹೆಂಡತಿಯ ಮೇಲೆ ಸೇಡು ತೀರಿಸಿಕೊಂಡ.’

ಪ್ರಿನ್ಸೆಸ್ ಈ ಮಾತನ್ನು ಫ್ರೆಂಚ್ ಭಾಷೆಗೆ ತರ್ಜುಮೆ ಮಾಡಿ ತನ್ನ ಹಳೆಯ ಗೆಳತಿ ಕೌಂಟೆಸ್ ಶ್ವಾಸೆಲ್‍ಗೆ ಹೇಳಿದಳು. ಆಕೆ ಜಾರ್ಜಿಯದ ಪ್ರಿನ್ಸ್ ನ ಪಕ್ಕದಲ್ಲಿ ಕೂತಿದ್ದಳು. 

ಕೌಂಟೆಸ್ ಕಣ್ಣು ಮುಚ್ಚಿ, ತಲೆ ಆಡಿಸುತ್ತಾ ‘ಎಷ್ಟು ಭಯಂಕರ!’ ಎಂದು ಫ್ರೆಂಚಿನಲ್ಲಿ ಅಂದಳು.

‘ಉಹ್ಞುಂ, ಹಾಗಲ್ಲ! ನಾನು ಕೇಳಿದ್ದೇನೆ, ಅವನು ಸೆರೆಯಾಳುಗಳನ್ನ ಬಹಳ ಗೌರವದಿಂದ ನಡೆಸಿಕೊಳ್ಳುತಿದ್ದನಂತೆ. ಅವಳನ ಆಮೇಲೆ ಬಿಟ್ಟು ಕಳಿಸಿದ!’ ಎಂದು ನಗುತ್ತ ಹೇಳಿದ ವರಾನ್ತಸೋವ್‍. 

‘ಹೌದು, ಬಿಟ್ಟ. ತಪ್ಪುಕಾಣಿಕೆ ವಸೂಲು ಮಾಡಿದ!’

‘ಸರಿ, ಇರಬಹುದು. ಆದರೂ, ಅವನು ಬಹಳ ಗೌರವಸ್ಥನ ಹಾಗೆ ನಡೆದುಕೊಂಡ.’

ಪ್ರಿನ್ಸ್ ಹೇಳಿದ ಈ ಮಾತು ಮುಂದಿನ ಸಂಭಾಷಣೆಗಳ ಶೃತಿಯನ್ನು ನಿರ್ಧಾರ ಮಾಡಿತು. ಹಾಜಿ ಮುರಾದ್‍ಗೆ ಪ್ರಾಮುಖ್ಯ ಹೆಚ್ಚಾಗಿ ನೀಡಿದಷ್ಟೂ ಪ್ರಿನ್ಸ್ ಸಂತೋಷಪಡುತ್ತಾನೆ ಅನ್ನುವುದು ಆಸ್ಥಾನಿಕರಿಗೆಲ್ಲ ಅರ್ಥವಾಯಿತು.

‘ಅವನನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಅದ್ಭುತವಾದ ಮನುಷ್ಯ! ಬಹಳ ಧೈರ್ಯಸ್ಥ!’

‘ಗೊತ್ತಲ್ಲಾ, 1849ರಲ್ಲಿ ಹಾಡ ಹಗಲೇ ಅವನು ತೆಮಿರ್-ಖಾನ್-ಶುರಾಗೆ ನುಗ್ಗಿ ಅಂಗಡಿಗಳನ್ನೆಲ್ಲ ಲೂಟಿ ಮಾಡಿದ್ದ.’ 

ಮೇಜಿನ ತುದಿಯಲ್ಲಿದ್ದ ಅರ್ಮೇನಿಯನ್ ಒಬ್ಬನು, ಆ ಘಟನೆ ನಡೆದಾಗ ತೆಮಿರ್-ಖಾನ್-ಶುರಾದಲ್ಲಿದ್ದವನು ಹಾಜಿ ಮುರಾದ್‍ನ ಸಾಹಸಗಳ ಬಗ್ಗೆ ಹೇಳಿದ. 

ಊಟ ನಡೆಯುತಿದ್ದಷ್ಟೂ ಹೊತ್ತು ನಡೆದ ಮಾತೆಲ್ಲ ಹಾಜಿ ಮುರಾದ್‍ನ ಬಗ್ಗೆಯೇ ಇತ್ತು.

ಪ್ರತಿಯೊಬ್ಬರೂ ಅವನ ಧೈರ್ಯ, ಸಾಮರ್ಥ್ಯ, ಔದಾರ್ಯಗಳನ್ನು ಹೊಗಳಿದರು. ಯಾರೋ ಒಬ್ಬರು ಅವನು ಇಪ್ಪತ್ತಾರು ಸೆರೆಯಾಳುಗಳನ್ನು ಇರಿದು ಕೊಲ್ಲುವ ಆಜ್ಞೆ ಮಾಡಿದ್ದನ್ನು ಹೇಳಿದರು. ಆ ಮಾತಿಗೂ ತಿದ್ದುಪಡಿ ಬಂದಿತು. ‘ಏನು ಮಾಡುವುದಕ್ಕಾಗುತ್ತದೆ? ಯುದ್ಧವೆಂದರೆ ಯುದ್ಧ ಅಷ್ಟೇ,’ ಎಂದು ಫ್ರೆಂಚಿನಲ್ಲಿ ಹೇಳಿದರು. 

‘ಮಹಾ ಪುರುಷ ಅವನು.’

‘ಅವನೇನಾದರೂ ಯೂರೋಪಿನಲ್ಲಿ ಹುಟ್ಟಿದ್ದಿದ್ದರೆ ಇನ್ನೊಬ್ಬ ನೆಪೋಲಿಯನ್ ಆಗುತಿದ್ದ!’ ಎಂದ ಹೊಗಳಿಕೆಯ ಚತುರ, ಜಾರ್ಜಿಯದ ಪೆದ್ದ ಪ್ರಿನ್ಸ್. 

ನೆಪೋಲಿಯನ್ ಬಗ್ಗೆ ಮಾತಾಡಿದರೆ ವರಾನ್ತಸೋವ್‍ಗೆ ಸಂತೋಷವಾಗುತ್ತದೆ, ನೆಪೋಲಿಯನ್‍ನನ್ನು ಸೋಲಿಸಿದ್ದಕ್ಕಾಗಿ ಅವನಿಗೆ ವೈಟ್ ಕ್ರಾಸ್ ದೊರೆತಿದೆ ಅನ್ನುವದು ಮೂರ್ಖ ಪ್ರಿನ್ಸ್ ಗೆ ತಿಳಿದಿತ್ತು.

‘ಉಹ್ಞೂಂ, ನೆಪೋಲಿಯನ್ ಅಲ್ಲ, ಅಶ್ವದಳದ ಜನರಲ್ ಆಗುತಿದ್ದ ಅನ್ನಬಹುದು.’

‘ನೆಪೋಲಿಯನ್ ಅಲ್ಲದಿದ್ದರೆ ಅವನ ಸೇನಾ ನಾಯಕ ಮುರಾದ್ ಆಗತಿದ್ದ.’

‘ಇವನ ಹೆಸರೂ ಹಾಜಿ ಮುರಾದ್!’

‘ಹಾಜಿ ಮುರಾದ್ ಶರಣಾಗಿದ್ದಾನೆ, ಇನ್ನ ಶಾಮಿಲ್ ಕಥೆ ಕೂಡ ಮುಗಿದ ಹಾಗೆ,’ ಅಂದರು ಯಾರೋ. 

‘ಈಗ ಗೊತ್ತಾಗತ್ತೆ ಅವರಿಗೆ, ಈಗ ಅವರ ಆಟ ನಡೆಯಲ್ಲ,’ ಅಂದ ಇನ್ನೊಬ್ಬ. ‘ಈಗ’ ಅಂದರೆ ವರಾನ್ತಸೋವ್‍ ಅಧಿಕಾರದಲ್ಲಿರುವಾಗ ಅಂತ ಅರ್ಥ ಅನ್ನುವುದು ತಿಳಿಯಿತು.

‘ನಿಮಗೆ ಥ್ಯಾಂಕ್ಸ್ ಹೇಳಬೇಕು ನಾವು!’ ಎಂದು ಮನಾನಾ ಓಬ್ರೆಲ್ಯಾನಿ ಫ್ರೆಂಚಿನಲ್ಲಿ ಹೇಳಿದಳು 

ಪ್ರಿನ್ಸ್ ವರಾನ್ತಸೋವ್‍ ಅವನ ತಲೆಯೆತ್ತರಕ್ಕೆ ಏರುತಿದ್ದ ಹೊಗಳಿಕೆಯ ಅಲೆಗಳಿಗೆ ತಡೆಯೊಡ್ಡಲು ನೋಡಿದ. ಆದರೂ ಖುಷಿಪಡುತಿದ್ದ. ಊಟವಾದ ನಂತರ ತನ್ನ ಅತಿಥಿ ಮಹಿಳೆಯ ಕೈ ಹಿಡಿದು ಡ್ರಾಯಿಂಗ್ ರೂಮಿಗೆ ಕರೆದೊಯ್ಯುವಾಗ ಅವನು ಬಹಳ ಒಳ್ಳೆಯ ಮೂಡಿನಲ್ಲಿದ್ದ.

ಊಟದ ನಂತರದ ಕಾಫಿ ಡ್ರಾಯಿಂಗ್ ರೂಮಿಗೇ ಬಂದಿತು. ಪ್ರಿನ್ಸ್ ಎಲ್ಲರ ಬಗ್ಗೆಯೂ ಸ್ನೇಹ ತೋರುತಿದ್ದ. ಕಲ್ಲಿ ಮೀಸೆಯ ಜನರಲ್ ಹತ್ತಿರ ಹೋಗಿ ಅವನು ಮಾಡಿದ ತಪ್ಪನ್ನು ತಾನು ಗಮನಿಸಲೇ ಇಲ್ಲ ಅನ್ನುವ ಹಾಗೆ ತೋರಿಸಿಕೊಳ್ಳಲು ಪ್ರಯತ್ನಪಟ್ಟ. 

ಎಲ್ಲ ಅತಿಥಿಗಳನ್ನು ಮಾತಾಡಿಸಿ ಕಾರ್ಡ್ಸ್ ಟೇಬಲ್ಲಿನ ಮುಂದೆ ಕೂತ. ಅವನು ಹಳೆಯ ಫ್ಯಾಶನ್ನಿನ ಗೇಮ್ ಆಫ್ ಓಮ್‍ಬ್ರೆ ಮಾತ್ರ ಆಡುತಿದ್ದ. ಅವನ ಜೊತೆಗೆ ಜಾರ್ಜಿಯನ್ ಪ್ರಿನ್ಸ್, ಅರ್ಮೇನಿಯದ ಜನರಲ್ (ಅವನು ಓಮ್‍ಬ್ರೆ ಆಟವನ್ನು ವರಾನ್ತಸೋವ್‍ನ ಸೇವಕನಿಂದ ಹೇಳಿಸಿಕೊಂಡಿದ್ದ) ಮತ್ತು ಡಾ. ಆಂದ್ರಿಯೇವ್‍ಸ್ಕಿ ಅವನ ಜೊತೆಗೆ ಆಟಕ್ಕೆ ಕುಳಿತರು. 

ಪ್ರಥಮ ಅಲೆಕ್ಸಾಂಡರ್‍ನ ಚಿತ್ರದ ಮುಚ್ಚಳವಿದ್ದ ನಶ್ಯದ ಚಿನ್ನದ ಡಬ್ಬಿಯನ್ನು ಪಕ್ಕದಲ್ಲಿರಿಸಿಕೊಂಡು ಪ್ರಿನ್ಸ್ ನಯವಾದ ಕಾರ್ಡುಗಳ ಪ್ಯಾಕನ್ನು ಕೈಗೆತ್ತಿಕೊಂಡ. ಅಷ್ಟರಲ್ಲಿ ಅವನ ಇಟಾಲಿಯನ್ ಸೇವಕ ಗಿಯೊವನ್ನಿ ಪತ್ರವೊಂದನ್ನು ಬೆಳ್ಳಿಯ ತಟ್ಟೆಯಲ್ಲಿಟ್ಟುಕೊಂಡು ತಂದುಕೊಟ್ಟ. 

‘ಮತ್ತೊಬ್ಬ ಕೊರಿಯರ್ ತಂದುಕೊಟ್ಟ, ಯುವರ್ ಎಕ್ಸಲೆನ್ಸಿ.’

ವರಾನ್ತಸೋವ್‍ ಕಾರ್ಡುಗಳನ್ನು ಕೆಳಕ್ಕಿಟ್ಟು,, ಜೊತೆಯ ಆಟಗಾರರ ಕ್ಷಮೆ ಕೇಳಿ, ಪತ್ರವನ್ನು ಒಡೆದು ಓದಿದ.

ಪತ್ರ ಅವನ ಮಗನದ್ದು. ಹಾಜಿ ಮುರಾದ್ ಶರಣಾದ ರೀತಿಯನ್ನು, ಮೆಲ್ಲೆರ್ ಝಕೋಮೆಲೆಸ್ಕಿಯೊಡನೆ ನಡೆದ ಭೇಟಿಯನ್ನು ವಿವರಿಸಿದ್ದ. 

ಪ್ರಿನ್ಸೆಸ್ ಬಂದು ಮಗ ಏನು ಬರೆದಿದ್ದಾನೆ ಎಂದು ವಿಚಾರಿಸಿದಳು. 

‘ಎಲ್ಲ ಅದೇ ವಿಷಯ…ಆ ಸ್ಥಳದ ಕಮಾಂಡರನ ಜೊತೆಯಲ್ಲಿ ಏನೋ ಸ್ವಲ್ಪ ಇರಿಸುಮುರಿಸು. ನಮ್ಮ ಸೈಮನ್ ಮಾಡಿದ್ದು ತಪ್ಪು,’ ಎಂದು ಫ್ರೆಂಚಿನಲ್ಲಿ ಹೇಳಿ ಕೊನೆಗೂ ಎಲ್ಲ ಚೆನ್ನಾಗಿ ಮುಗಿಯಿತು’ ಎಂದು ಇಂಗ್ಲಿಶ್ ನುಡಿಗಟ್ಟು ಹೇಳಿ, ಪತ್ರವನ್ನು ಅವಳ ಕೈಗಿಟ್ಟು, ತಾನು ಎಲೆ ಹಂಚುವುದನ್ನೇ ಗೌರವಪೂರ್ಣವಾಗಿ ಕಾಯುತಿದ್ದ ಆಟಗಾರರತ್ತ ತಿರುಗಿದ. 

ಮೊದಲ ಸುತ್ತಿನ ಆಟ ನಡೆಯುತ್ತಿದ್ದಾಗ ವರಾನ್ತಸೋವ್‍ ತನಗೆ ಸಂತೋಷವಾದಾಗ ಯಾವಾಗಲೂ ಮಾಡುತಿದ್ದ ಹಾಗೆ ತನ್ನ ಬಿಳಿಯ ಸುಕ್ಕುಬಿದ್ದ ಕೈಯಲ್ಲಿ ಒಂದು ಚಿಟಿಕೆ ಫ್ರೆಂಚ್ ನಶ್ಯವನ್ನು ತೆಗೆದುಕೊಂಡು ಮೂಗಿಗೇರಿಸಿದ. 

| ಮುಂದುವರೆಯುವುದು |

ಟಿಪ್ಪಣಿ:

ಮೈಖೆಲ್ ಸೆಮ್ಯೊನೊವಿಚ್ ವರಾನ್ತಸೋವ್‍ 1782 – 18, ವರಾನ್ತಸೋವ್‍ನ ತಂದೆ, ರಶಿಯದ ಉನ್ನತವರ್ಗಕ್ಕೆ ಸೇರಿದ್ದ ಶ್ರೀಮಂತ. ಕಥೆಯಲ್ಲಿ ಇದುವರೆಗೆ ನೋಡಿದ ವರಾನ್ತಸೋವ್‍ನ ತಂದೆ. ರಶಿಯನ್ ಸೇನೆಯ ಫೀಲ್ಡ್ ಮಾರ್ಶಲ್ ಆಗಿದ್ದವನು. ನೆಪೋಲಿಯನ್ ವಿರುದ್ಧ ನಡೆದ ಯುದ್ಧದಲ್ಲಿ ಕೀರ್ತಿ ಪಡೆದವನು. ಚಿತ್ರ ನೋಡಿ

ಕ್ರಿಮಿಯಾದ ವಾರಮನ್ತಸೋವ್ ಅರಮನೆ: ಚಿತ್ರ ನೋಡಿ. 

ಕ್ರಾಸ್ನೋಯಿ: ಮಾಸ್ಕೋ ಆಕ್ರಮಣ ವಿಫಲವಾದಮೇಲೆ 1812ರಲ್ಲಿ ನೆಪೋಲಿಯನ್ ಹಿಂದೆ ಸರಿಯುತಿದ್ದಾಗ ಕ್ರಾಸ್ನೋಯಿ ಎಂಬಲ್ಲಿ ನಡೆದ ಯುದ್ಧದಲ್ಲಿ ಸೋತಿದ್ದ. ನೋಡಿ, ಯುದ್ಧ ಮತ್ತು ಶಾಂತಿಯ ಎರಡನೆಯ ಸಂಪುಟ. 

ಆರ್ಡರ್ ಆಫ್ ಸೇಂಟ್ ಜಾರ್ಜ್: ರಶಿಯದಲ್ಲಿ ವೀರ ಯೋಧರಿಗೆ ನೀಡಲಾಗುತಿದ್ದ ಪದಕ. ಚಿತ್ರ ನೋಡಿ. 

ಟಿಫ್ಲಿಸ್: ರಶಿಯನ್ ಸಾಮ್ರಾಜ್ಯದ ಭಾಗವಾಗಿದ್ದ ಜಾರ್ಜಿಯಾದ ರಾಜಧಾನಿ. 

ತೆಮಿರ್-ಖಾನ್-ಶುರಾ ರಶಿಯನ್ ಸಾಮ್ರಾಜ್ಯಕ್ಕೆ ಸೇರಿದ್ದ ದಾಗೆಸ್ತಾನ್‍ ಪ್ರಾಂತದ ಜಿಲ್ಲಾ ಕೇಂದ್ರ.

ಗೇಮ್ ಆಫ್ ಓಮ್‍ಬ್ರೆ: ಸ್ಪೇನಿನಲ್ಲಿ ಪ್ರಚಲಿತವಾಗಿದ್ದ ಹಳೆಯ ಕಾಲದ ಇಸ್ಪೀಟು ಆಟ. ಮೂರು ಜನರು ಆಡುತ್ತಾರೆ, 10-9-8 ಸಂಖ್ಯೆಯ ಯಾವ ಎಲೆಗಳೂ ಇರುವುದಿಲ್ಲ, ಉಳಿದ ನಲವತ್ತು ಎಲೆಗಳಲ್ಲಿ ತಲಾ ಹತ್ತು ಎಲೆ ಹಂಚಿಕೊಂಡು ಆಡುವ ಆಟ

‍ಲೇಖಕರು Admin

December 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: