-ಸಾಮಂತ್ರಿ ಜ್ಯೋತಿ
ಪ್ರೇಮದಲ್ಲಿ ಕಹಿಯೆಂಬ ಬೆಲ್ಲಕ್ಕೆ
ಬೇವಿನ ರಸ ಹಚ್ಚಲಾಗಿರುತ್ತದೆ..
ಮನಸಿನ ನಾಲಿಗೆಗೆ ಅದೂ ಮುಳ್ಳಿನಂತೆ ಕಾಣುವ
ಸುಂದರ ಹೂವಾಗಿರುತ್ತದೆ..
ಎಂದೆಲ್ಲ ತತ್ವ ಹೇಳುವ ಅವಳ ಕಣ್ಣುಗಳು
ಪ್ರತೀಕ್ಷಣ ಹುಡುಕುತ್ತಲೇ ಇರುತ್ತವೆ ಯಾರನ್ನೋ
ಮೊನ್ನೆ ಕಳೆದ ಹತ್ತುರೂಪಾಯಿ ನೋಟಲ್ಲಿ
ಬರೆದ ಹೆಸರಿನಂತೆ ಹಣೆಯ ನೆರಿಗೆಗಳು
ಆತನ ದೂರದ ಪರಿಯ ಬಿಂಬಿಸುತ್ತಲೇ ಇರುತ್ತವೆ..
ಶ್ರದ್ಧೆಯೆಂಬುದು ಬೇರೆಯೇ ಬಲವನ್ನ
ಬೇಡುತ್ತದೆ ಒಲವಲ್ಲಿ..
ಇರುವುದಕ್ಕೆ ಹೋಗುವುದಕ್ಕೆ
ಕಳೆಯುವುದಕ್ಕೆ ಚಿಟ್ಟೆಯಾಗಿ ಹಾರುವುದಕ್ಕೆ
ಬಾಡದೇ ತಪಸ್ಸಿಗಿಳಿದ ಅದೇ ಹೂವನ್ನು ಮುತ್ತುವುದಕ್ಕೆ..
ಮತ್ತದೇ ಫಿಲಾಸಫಿ, ಕಾಫಿ ಕಪ್ಪನ್ನ
ಜೋಪಾನವಾಗಿ ಎರಡೂ
ಕೈಯಿಂದ ಹಿಡಿಯುತ್ತಾಳೆ
ಬಿದ್ದು ಒಡೆದೀತೆಂದಲ್ಲ;
ಹಸ್ತಕ್ಕೆ ಬೇಕಾದ ವಿಟಮಿನ್ ಗಾಗಿ..
ನೀವು ರಾತ್ರಿ ತಡವಾಗಿ ಮಲಗಿ
ತುಸು ದಣಿಯಲಿ ದೇಹಮಾನಸಗಳು
ಕನಸುಗಳ ತುಂಬಿಕೊಂಡು ಯಾರ ದಾರಿ
ಹಿಡಿಯಲಿದ್ದೀರಿ?! ಬರಿಯ ಭಾವನೆಗೆ
ಇಲ್ಲಿ ನೂರೆಂಟು ತಕರಾರು.. ನಿಜದ ನಿದಿರೆಗೆ
ತಡಕಾಡಬೇಕಿಲ್ಲ ಯಾರೂ..
ಒಂದು ಮಾತಿಗೆ ಮೌನಕ್ಕೆ ನಗೆಗೆ ನಿಟ್ಟುಸಿರಿಗೆ
ಭೂತಧಾತ್ರಿಯಂತೆ ಪೋಷಿಸುವ ತಾಕತ್ತಿದೆ..
ಹೀಗೆ ಹೇಳುತ್ತಲೇ ನಿದಿರೆಗೆಡುತ್ತಾಳೆ
ಮುಂಜಾನೆಗಳ ದೂರುವ ಧೈರ್ಯವಾಗದೆ
ರಾತ್ರಿಗಾಗಿ ಕಾಯುತ್ತಾಳೆ..ಬೆಳಗಾಗಿಸಲು..






0 Comments