ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರೀತಿ-ಪ್ರೇಮ-ವಿರಹ-ಜೀವನ….'

-ವೀರಣ್ಣ ಮಂಠಾಳಕರ್

ಈ ಪ್ರೀತಿ-ಪ್ರೇಮ ಜೀವನ. ಇವುಗಳ ಮಧ್ಯೆ ಒದ್ದಾಡುವ ಜೀವಂತ ಶರೀರಗಳು. ಒಂದಕ್ಕೊಂದು ಸ್ಪಂಧಿಸುವ, ಭಾವನಾ ಲೋಕದಲ್ಲಿ ವಿಹರಿಸುವ ಕಲ್ಪನೆಯೆಂಬ ಕಣಿವೆಯಲ್ಲಿ ಹೊಸ ಕನಸುಗಳನ್ನು ಹೊಸೆಯುತ್ತಾ ಸಾಗುತ್ತಿರುವ ಯುವ ಪ್ರೇಮಿಗಳು. ಈ ಉಸಿರಿರುವತನಕ ನಿನ್ನ ಹೆಸರನ್ನೇ ಬರೆದಿರುತ್ತೇನೆ ಎಂದು ಹೇಳುವ ಇಬ್ಬರ ಮನಸ್ಸಿನ ಬೇಗುದಿಯಲ್ಲಿ ಅದೆಂಥದೋ ತವಕ, ತಲ್ಲಣಗಳು. ಹೇಳಿಕೊಳ್ಳದಂತಹ ಮಾತುಗಳೆಲ್ಲ ಮೌನವಾಗಿ ಬಿಡುತ್ತವೆ. ನಿನ್ನ ಬಿಟ್ಟು ಈ ಪ್ರಪಂಚವೇ ಇಲ್ಲವೆನ್ನುವ ರೀತಿಯಲ್ಲಿ ನಡೆಯುವ ಪ್ರೇಮಿಗಳ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಲೇ ಹೋಗುತ್ತದೆ. ರೆಕ್ಕೆ ಬಿಚ್ಚಿ ಹಾರಾಡುವ ಹಕ್ಕಿಯಂತೆ ಬಾನಂಗಳದಲ್ಲಿ ತೇಲಾಡುವ ಪರಿ ಅಬ್ಬಬ್ಬಾ…! ವಣರ್ಿಸಲಾಗದು. ಪದಗಳಲ್ಲಿ ಹಿಡಿದಿಡಲಾಗದಷ್ಟು ವರ್ಣರಂಜಿತ.
ಜೀವನ (ಲೈಫ್) ಎಂದರೆ ಇಷ್ಟೆನಾ! ಎಂದು ಕೇಳುವವರು ಇದ್ದಾರೆ. ಜೀವನದ ಬಗ್ಗೆ ಒಂದು ಕ್ಷಣ ಅಚ್ಚರಿಯಾಗುತ್ತದೆ. ರೋಮಾಂಚನವಾಗುತ್ತದೆ. ಬದುಕಿನ ಬಗ್ಗೆ ಚಿಂತನೆ ಮಾಡುತ್ತಾ ಹೋದಂತೆಲ್ಲ ಹಲವರು ತಮ್ಮ ಬಗ್ಗೆ ತಾವೇ ಆಳವಾದ ಚಿಂತನೆ ಮಾಡಿಕೊಂಡಿರುವುದಿಲ್ಲ. ಬದುಕೇನೆಂಬುದು ಸರಿಯಾದ ರೀತಿಯಲ್ಲಿ ಅಥರ್ೈಸಿಕೊಂಡಿರುವುದಿಲ್ಲ. ಹುಟ್ಟು ಮತ್ತು ಸಾವಿನ ಮಧ್ಯೆ ಬದುಕಿದ್ದು ನಿಸ್ಪ್ರಯೋಜಕವೆಂದು ತಿಳಿದುಕೊಂಡಿರುವವರು ಇಲ್ಲಿದ್ದಾರೆ. ಜೀವನ ಇಷ್ಟೇನಾ….? ಎಂಬಂತಹ ನಿರಾಸೆದಾಯಕ ಮಾತುಗಳು ಕೇಳಿ ಬರುವುದು ಎಲ್ಲಿ? ಯಾಕೆ? ಹೇಗೆ?! ಎಂಬುದನ್ನು ಚಿಂತಿಸುವಂತಾಗಬಹುದು.

ಪ್ರೀತಿಯೆಂಬುದು ಎಲ್ಲರ ಪಾಲಿನ ಬೆಣ್ಣೆ ಮುದ್ದೆಯಾಗಿರುವುದಿಲ್ಲ. ಸುಂದರವಾಗಿ ಅರಳಿದ ಹೂವೊಂದು ಬಾಡಿ ಹೋಗಲೇಬೇಕು. ಮತ್ತೆ ಮತ್ತೆ ಅರಳುವುದಕ್ಕೆ ಸಜ್ಜಾಗುವ ಮಿಡಿಗಳನ್ನು ನೋಡಿ ನಾವು ಕೂಡ ಚೈತನ್ಯದ ಚಿಲುಮೆಯಾಗಿ ಹೊಸ ಭರವಸೆ, ಭಾವನೆಗಳೊಂದಿಗೆ ಜೀವಿಸುವ ಸಂಕಲ್ಪವನ್ನು ಮಾಡಬೇಕು. ಕಲ್ಲು ಬಂಡೆಯಂತಹ ಮನಸ್ಸುಗಳಲ್ಲಿ ಪ್ರೀತಿಯ ಹೂ ಅರಳದೇ ಹೋಗುವ ಸಂದರ್ಭದಲ್ಲಿ ಅಲ್ಲಿ ಭಗ್ನ ಪ್ರೇಮಿಯೊಬ್ಬನ ದಂತಕಥೆ ಶುರುವಾಗಬಹುದು. ಒಂದು ವೇಳೆ ಕಲ್ಲಿನಲ್ಲೂ ಶಿಲೆ ಕೆತ್ತಿದ ಹಾಗೇ, ಪ್ರೀತಿಯೆಂಬುದು ಕಲ್ಲು ಬಂಡೆಯಂತಹ ಮನಸ್ಸುಗಳಲ್ಲಿಯೂ ಅರಳಿಕೊಂಡು ಬಿಟ್ಟರೆ ಅಚ್ಚರಿಯಲ್ಲ. ಅದು ಎಂದಿಗೂ ಎಂದೆಂದಿಗೂ ಶಾಶ್ವತವಾಗುಳಿಯುವ ಹಂಬಲವನ್ನು ಹೊಂದಿರುತ್ತದೆ ಎನ್ನಬಹುದು. ಪ್ರೀತಿ ಹೇಳಿ ಕೇಳಿ ಹುಟ್ಟುವುದಲ್ಲ. ಅದು ಕಾಡಿ ಬೇಡಿ ಪಡೆಯುವುದು ಅಲ್ಲ. ತಾನಾಗಿಯೇ ಒಲಿದು ಬಂದರೆ…..
ಪ್ರೀತಿ-ಪ್ರೇಮದಲ್ಲಿ ನೊಂದು ಬೆಂದವರಿಗೆ ಬದುಕಿನ ಬಗ್ಗೆ ಸರಿಯಾದ ಮಾರ್ಗವನ್ನು ಸಿಗದೇ ಒದ್ದಾಡುವ ಪರಿಸ್ಥಿತಿ. ಅವಳು/ಅವನು ಸಿಗಲಿಲ್ಲ ಎಂಬ ನೋವು ಸದಾ ಕಾಡುತ್ತಿರುತ್ತದೆ. ಕಾದ ಕಬ್ಬಿಣದ ಸಲಾಕೆ ಕಿವಿಯೊಳಗಿಟ್ಟಂತೆ ಭಾಸವಾಗುತ್ತದೆ. ಹೃದಯ ಬಡಿತದ ಉಸಿರಾಟಕ್ಕೆ ನೇಣು ಬಿಗಿದಂತಾಗುತ್ತದೆ. ಪ್ರೀತಿ ಸೋತರೂ ಬದುಕನ್ನು ಗೆಲ್ಲುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಯುವ ಪ್ರೇಮಿಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಯಾರೇ ಆಗಿರಲಿ ಪ್ರೀತಿಯೆಂಬ ವಿಷಯದಲ್ಲಿ ಒಂದೊಮ್ಮೆ ಬಿದ್ದು ತೇಲಿ ಹೋಗುವವರೇಷ್ಟೊ, ಪ್ರೀತಿ-ಪ್ರೇಮದಲ್ಲಿಯೇ ಮುಳುಗಿ ಒದ್ದಾಡುವವರೇಷ್ಟೊ.
ಅಂತೂ ಪ್ರತಿ ವರ್ಷದ ಸಂಭ್ರಮ ಹಂಚಿಕೊಳ್ಳಲು ಕೆಲವೇ ಕ್ಷಣಗಣನೆ ಶುರುವಾಗಿದೆ. ಅದನ್ನೇ ನೆಪ ಮಾಡಿ ಪ್ರೀತಿ ಸಿಗಲಿಲ್ಲ. ಆ ಪ್ರೀತಿಗೆ ನಾನು ಅರ್ಹನಲ್ಲ ಎಂದು ಕೊರಗುವುದು ಬೇಡ. ಆ ಪ್ರೀತಿ ಮತ್ತೆ ಮರಳಿ ಪಡೆಯುವುದಕ್ಕೆ ಜೀವನದಲ್ಲಿ ದೃಢ ವಿಶ್ವಾಸವನ್ನು ಹೊಂದಬೇಕು. ನಾವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ, ಛಲ, ನಂಬಿಕೆ. ಜೀವನದ ಸಾಧನೆಯ ಗುರಿಯನ್ನಿಟ್ಟುಕೊಂಡರೆ ಅಲ್ಲೊಂದು ಮತ್ತೆ ಎಂದೂ ಮರೆಯಾಗದ ಹೊಚ್ಚ ಹೊಸ ಪ್ರೀತಿಯೊಂದು ಸೃಷ್ಟಿಯಾಗುತ್ತದೆ. ಮರೆಯಲಾಗದ ಅವಳ/ಅವನ ಪ್ರೀತಿ, ನೆನಪುಗಳಿಗಿಂತ ಕಾಯಕನಿಷ್ಠೆ ಎಂದಿಗೂ ನಮ್ಮ ಕೈ ಬಿಡುವುದಿಲ್ಲ. ನಾವು ಅದನ್ನು ಪ್ರೀತಿಸಿದರೆ ಅದು ನಮ್ಮನ್ನು ಸಲಹುತ್ತದೆ.
ಯುವ ಪ್ರೇಮಿಗಳ ಮನಸ್ಸಿನ ಮಾತು ಮೌನವಾಗಿ, ಧ್ಯಾನವೆಂಬುದು ದೇವರಾಗಿ, ಪ್ರೀತಿಯೇ ನನ್ನುಸಿರು ಎಂದು ಗುನುಗುನಿಸುವ ಪ್ರೇಮಿಗಳ ಪಾಲಿಗೆ ಸುಂದರ ಕನಸುಗಳು ಗರಿಬಿಚ್ಚಿ ಕುಣಿಯುತ್ತಿವೆ. ಅವಳದೇ ಧ್ಯಾನ, ಅವಳ ಕನವರಿಕೆಯಲ್ಲಿಯೇ ಜೀವನವೆಲ್ಲ ಕಳೆದು, ಸಿಗುವ ಬೊಗಸೆ ಪ್ರೀತಿಗಾಗಿ ಕೈವೊಡ್ಡಿ ಬೇಡಿಕೊಳ್ಳುವ, ನಿವೇದಿಸಿಕೊಳ್ಳುವ ಸಮಯ ಕೇವಲ ಪ್ರೇಮಿಗಳ ದಿನಕ್ಕಷ್ಟೇ ಸೀಮಿತವಾಗಬಾರದು. ಅದು ಪ್ರತಿದಿನ ಪ್ರತಿಕ್ಷಣದ ಸಂಭ್ರಮವಾಗಬೇಕು. ಅನುದಿನವು ನೆನಪಿಸುವಂತಹ ಪ್ರೀತಿ ಹೆಮ್ಮರವಾಗಿ ಬೆಳೆಯಬೇಕು. ಪ್ರೀತಿಯಿಲ್ಲದೇ ಏನನ್ನು ಸಾದಿಸಲಾಗದು. ನಾವು ಮಾಡುವ ಕೆಲಸ ಕಾರ್ಯದಲ್ಲಿಯೂ ಪ್ರೀತಿ-ಶೃದ್ಧೆ-ವಿನಯ ತೋರಿದರಷ್ಟೇ ಅಲ್ಲಿ ತೃಪ್ತಿ, ನೆಮ್ಮದಿಗೆ ನೆಲೆಯಾಗುತ್ತದೆ.
 

‍ಲೇಖಕರು G

3 March, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading