ಮತ್ತೊಂದು ಗುಲ್ಜಾರ್ ಕವಿತೆ

ಹಸಿರು ಕ್ಷಣಗಳು

(ಸಬ್ಜ್ ಲಮ್ಹೇಂ)

ಅನು: ಲಕ್ಷ್ಮೀಕಾಂತ ಇಟ್ನಾಳ

ಮೂಲ : ಗುಲ್ಜಾರ ಸಾಹಬ್

 

ಬಿಳಿಯ ಹದ್ದೊಂದು ಅಯಾಸಗೊಂಡು ಕೆಳಗಿಳಿದಾಗ
ಬೆಟ್ಟಗಳಿಗೆ ಹೇಳುತ್ತಿಹುದು
ಎತ್ತರದ ಮರಗಳ ಹಳೆಯ ಕತೆಗಳನ್ನು,
 
“ಅಲ್ಲೊಂದು ಬಹು ಎತ್ತರದ ದೇವದಾರ ಮರವಿತ್ತು, ಮೊದಲು,
ಅದು ಮೋಡಗಳನ್ನು, ತನ್ನ ಎಲೆಗಳಿಗೆ, ರುಮಾಲಿನಂತೆ ಸುತ್ತುತ್ತ,
ಕೆಲವೊಮ್ಮೆ ಶಾಲಿನಂತೆ ಮೈತುಂಬ ಹೊದೆಯುತ್ತಿತ್ತು,
ಗಾಳಿಯನ್ನು, ಬಾಹುಗಳಿಂದ ತಡೆಯುತ್ತ
ಅತ್ತಿತ್ತ ತೂಗುತ್ತ, ಅದಕ್ಕೆ ಹೇಳುತ್ತಿತ್ತು,
“ಈ ಕಾಲುಗಳು ನೆಲೆಯೂರದೆ ಇದ್ದಲ್ಲಿ, ನಿನ್ನೊಂದಿಗೇ ಬರುತ್ತಿದ್ದೆ!”

“ಅದೋ ಅಲ್ಲಿ ಆ ಕಡೆ, ಬೀಟೆ ಇತ್ತು, ಜಾಲಿಗಿಂತ ತುಸು ಮುಂದೆ,
ಬಲು ತಿಕ್ಕಾಟವಿತ್ತು ಅವೆರಡಕ್ಕೂ,… ಒಂದು ಖರೆ ಮಾತೆಂದರೆ,
ಬೀಟೆಯ ಎತ್ತರಕ್ಕೆ ಜಾಲಿಗೆ ನಿಜಕ್ಕೂ ಹೊಟ್ಟೆಕಿಚ್ಚಿತ್ತು,
ಬೀಟೆಯ ಕೊರಳಿಂದ ಇಂಪಾದ ಸಿಳ್ಳು ಹೊರಟಾಗೆಲ್ಲ,
ಬಾನಾಡಿಗಳು ರೆಂಬೆಗಳಲ್ಲಿ ಕುಳಿತು, ನಕಲು ಮಾಡಿ ನಗುತ್ತಿದ್ದವು!
 
ಅಲ್ಲೊಂದು ಮಾವು, ಬಲು ದಿನವಿತ್ತು,
ಹೂಬಿಡೋ ಸಮಯದಲ್ಲಿ ಅಲ್ಲಿಗೊಂದು ಕೋಗಿಲೆ,
ಬಾ…ಳ ಅಂದ್ರ ಬಾ…..ಳ ವರ್ಷದಿಂದ ಬರುತ್ತಿತ್ತು,
ಅದೋ ಅಲ್ಲಿ, ಮೂರ್ನಾಲ್ಕು ಸಂಕೇಸರಗಳಲ್ಲಿ ,
ಈಗ ಉಳಿದಿರುವುದೊಂದೇ,
ಎಷ್ಟು ಜೋಪಾನವಾಗಿ ಪೊರೆಯುತ್ತಿದೆ ಇಂದಿಗೂ
ತನ್ನ ದೇಹದ ಮೇಲೆ ಕೆತ್ತಿದ, ಆ ನಿರ್ದಯ ಹೆಸರನ್ನೇ!
 
ಈ ಕಡೆಗೊಂದು ಬೇವಿತ್ತು, ಸರಕಲಿನಲ್ಲಿ,
ಬೆಳದಿಂಗಳೊಡನೆ ಅನುರಾಗದಲ್ಲಿತ್ತು-
ಅದರೆಲೆಗಳು ನಾಚಿಕೆಯಿಂದ ನೀಲಿಯಾಗುವುದನ್ನು ಕಂಡಿದ್ದೇನೆ”,
……ಹಾರಾಡುವಾಗ,
 
“ಮತ್ತೆ ಸ್ವಲ್ಪ ಆ ಕಡೆಯಲ್ಲಿ,
ಒಂದೆರಡು ಬಾರಿ ರೆಕ್ಕೆ ಬಡಿಯುವ ದೂರದಲ್ಲಿ,
ಗುಂಪು ಗುಂಪಾಗಿ ಗಿಡಗಳಿದ್ದವು,
ಸೊಂಪಾಗಿ ಉಸಿರಾಡುತ್ತಿದ್ದವು,
ಹುಡುಕಿದರೂ ಇಲ್ಲಪ್ಪೊ,
ಆ ಬೋಳು ಬೆಟ್ಟದ ಮೇಲೆ ಈಗ ಒಂದೂ!
 
ನೋಡಲಿಲ್ಲವಾದರೂ, ಕೇಳಿದ್ದೆ,
ಆ ಮೈದಾನದ ಸೆರಗಂಚಲ್ಲಿ
ಆಲದ ಬೊಡ್ಡೆಗಿಂತಲೂ ದೊಡ್ಡದೊಂದು,
ದೇವಗಣಗಿಲೆ ಇರುತ್ತಿತ್ತು,
ಎಲ್ಲಿಂದ ಕಡಿದೊಯ್ದರೋ,
ಅಲ್ಲಿಂದಲೇ ಹಾಲು ಪುಟಿಯುತ್ತಿತ್ತು!
ಯಾವ ಚಿಗುರಿಗಿಟ್ಟಿತ್ತೋ!
ತನ್ನದೇ ಮನೆಯಿಂದ ದೇಹ,
ಅದೆಷ್ಟೋ ತುಂಡುಗಳಲ್ಲಿ ಹೋಗಿತ್ತು !!
 
ಬಿಳಿಯ ಹದ್ದೊಂದು ಒಣ ಮರದ ಮೇಲೆ ಕುಳಿತು
ಬೆಟ್ಟಗಳಿಗೆ ಹೇಳುತ್ತಿಹುದು,
ಎತ್ತರದ ಮರಗಳ ಹಳೆಯ ಕತೆಗಳನ್ನು,
ಅವುಗಳನ್ನು ಕೋವಿ,ಕೊಡಲಿಗೈಗಳ ಈ ಮನುಷ್ಯ,
ತುಂಡು ತುಂಡಾಗಿ ಕತ್ತರಿಸಿ, ಸೀಳಿ, ದಹಿಸುತ್ತಿಹನು!
ಇವನ ದಾಹಕ್ಕೆ ಸಾಲುತ್ತಿಲ್ಲ ಏನೂ!

‍ಲೇಖಕರು G

March 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Hanumanth Ananth Patil

    ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
    ಹದ್ದು ಎತ್ತರದ ಮರಗಳು ಗುಡ್ಡ ಬೆಟ್ಟಗಳ ಅವಿನಾಭಾವ ಸಂಬಂಧವನ್ನು ಚೆನ್ನಾಗಿ ಕಟ್ಟಿ ಕೊಡುವ ಕವಿ ಗುಲ್ಜಾರರ ಸೊಗಸಾದ ಕವನ, ಅಷ್ಟೆ ಅರ್ಥಪೂರ್ಣವಾದ ಅನುವಾದ ಕವನ ಖುಷಿ ನೀಡಿತು.

    ಪ್ರತಿಕ್ರಿಯೆ
  2. Vithal Katti

    ಗುಲ್ಜಾರರ ಮಿಡಿತವನ್ನು ನೀವು ಅರ್ಥೈಸಿಕೊಳ್ಳುವಂತೆ ನಮಗೇಕೆ ಸಾಧ್ಯವಾಗುವದಿಲ್ಲ? ಬಹಳ ಸುಂದರ ಕವಿತೆಯ ಅರ್ಥಪೂರ್ಣ ಅನುವಾದ.

    ಪ್ರತಿಕ್ರಿಯೆ
  3. Rohini Satya

    ಹದ್ದು, ಬೆಟ್ಟಗಳು, ಎತ್ತರದ ಮರದ ಹಳೆಯ ಕತೆಗಳು …ನಿರಂತರವಾಗಿ ಪರಿಸರದಮೇಲೆ ಮಾನವನಿಂದಾಗುತ್ತಿರುವ ದೌರ್ಜನ್ಯವನ್ನು ಹೊಸ ಕೋನದಲ್ಲಿ ಆವಿಷ್ಕಾರ ಮಾಡಿದ ಪದ್ಯ.
    “ಈ ಕಾಲುಗಳು…..” ಬಾನಾಡಿಗಳು ನಕಲು ಮಾಡಿ…..” ಎಂತಹ ಸುಂದರ ಕಲ್ಪನೆ!
    ಅದೆಷ್ಟು ತುಂಡುಗಳಲ್ಲಿ….ಅವು ತುಂಡಾಗುವಾಗ ತಗುಲಿದ ಪೆಟ್ಟು ಪರಿಸರ ಪ್ರೆಮಿಗಳ ಎದೆಗೂ ತಾಗುತ್ತೆ.
    ಒಂದೊಳ್ಳೆ ಪದ್ಯವನ್ನ ಅಂದವಾಗಿ ಕನ್ನಡವಾಗಿಸಿದ್ದೀರ , ಧನ್ಯವಾದಗಳು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: