ಪ್ರೀತಿ ಅರಳುವ ಮತ್ತು ನರಳುವ ರೀತಿ

              ಛಿದ್ರ ಸ್ವರೂಪದ ಮನಸ್ಸು+ ಭಗ್ನ ಹೃದಯದ ಪ್ರೇಮ = ತಮಾಶಾ 

WP_20151116_005

ರಾಜೀವ ನಾರಾಯಣ ನಾಯಕ

ಒಂದು ಸಿನಿಮಾ ಕಾಲವಿತ್ತು. ಹುಡುಗ ಹುಡುಗಿ ಒಂದು ನಾಟಕೀಯ ಸನ್ನಿವೇಶದಲ್ಲಿ ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಅವರ ಕಣ್ಣುಗಳು ಪರಸ್ಪರ ಬೆಸೆದು ಪ್ರಥಮ ನೋಟದಲ್ಲೇ ಪ್ರೀತಿ ಬೀಜ ಮೊಳಕೆಯೊಡೆಯುತ್ತದೆ, ಚಿಗುರೊಡೆದು ಹೆಮ್ಮರವಾಗುತ್ತದೆ. ಪಾರ್ಕಿನಲ್ಲಿ ಹಾಡುತ್ತಾರೆ ಕುಣಿಯುತ್ತಾರೆ ಮರ ಸುತ್ತುತ್ತಾರೆ. ಪ್ರೀತಿರೆಕ್ಕೆಗಳು ಮೂಡಿ ಆಕಾಶದಲ್ಲಿ ತೇಲುತ್ತಿರುವಾಗಲೇ ವಿಲ್ಲನ್ (ಹುಡುಗಿಯಣ್ಣ ಅಥವಾ ಹುಡುಗನಪ್ಪ) ಎಂಟ್ರಿಯಾಗಿ ಈ ಪ್ರೀತಿಯನ್ನು ಹೊಸಕಿಹಾಕಲು ಪ್ರಯತ್ನಿಸುತ್ತಾನೆ. ಬಾಹ್ಯ ವಿರೋಧ ಹೆಚ್ಚಿದಷ್ಟೂ ಪ್ರೀತಿ ಅಮರ ಮಧುರ ಪ್ರೇಮದ ಸ್ಥಾನ ಪಡೆಯುತ್ತಾ ಸಾಗುತ್ತದೆ. ಅನೇಕ ಅಡೆತಡೆಗಳನ್ನು ದಾಟಿ ಕೊನೆಗೆ ನಮ್ಮ ಚಿತ್ರ ನಿರ್ದೇಶಕರ ಬುದ್ಧಿಭಾವಕ್ಕೆ ತಕ್ಕಂತೆ ಪ್ರೀತಿ ಶುಭಂ ಆಗುತ್ತದೆ!

tamasha2ಇಂದಿನ ಜಾಗತೀಕರಣದ ಯುಗದಲ್ಲಿ, ಅಪೂರ್ವ ವ್ಯಕ್ತಿ ಸ್ವಾತಂತ್ರ್ಯದ ಹಿನ್ನಲೆಯಲ್ಲಿ ಪ್ರೀತಿ ಪ್ರೇಮಗಳು ಭಿನ್ನ ಸ್ವರೂಪವನ್ನು ಪಡೆದುಕೊಂಡಿವೆ. ಮುಕ್ತ ವಾತಾವರಣದಲ್ಲಿ ಈಗ ಪ್ರೀತಿಗೆ ಬಾಹ್ಯ ಖಳನಾಯಕರು ಅಷ್ಟೇನು ಇಲ್ಲ. ಆದರೆ ನಮ್ಮೊಳಗಿನ ಶಿಥಿಲ ಮನಸುಗಳೇ ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ ಇಮ್ತಿಯಾಜ್ ಅಲಿ ಇತ್ತೀಚಿನ  ತಮ್ಮ “ತಮಾಶಾ” ಚಿತ್ರದಲ್ಲಿ ಆಧುನಿಕತೆಯ ಸಂಕೀರ್ಣತೆಯಲ್ಲಿ ಪ್ರೀತಿ ಅರಳುವ ಮತ್ತು ನರಳುವ ರೀತಿಯನ್ನು ಅತ್ಯಂತ ಸೂಕ್ಷ್ಮತೆಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಚಿತ್ರದಲ್ಲಿ ಕಥಾ ಹಂದರ ಅಂಥದ್ದೇನಿಲ್ಲ.  ಬಾಲಕನಿದ್ದಾಗ ಕಥೆಗಳೆಂದರೆ ಜೀವ ಬಿಡುವ ಹುಡುಗ ವೇದ್ ಮಹಾತ್ವಾಕಾಂಕ್ಷಿ ತಂದೆಯ ಒತ್ತಡಕ್ಕೆ ಮನಸ್ಸಿಗೆ ಒಗ್ಗದ ಸ್ಪರ್ಧಾತ್ಮಕ ಬದುಕಿಗೆ ಢಿಕ್ಕಿಹೊಡೆಯುತ್ತಿರುತ್ತಾನೆ. ಕಥೆ ಪುರಾಣ ನಾಟಕವೆಂದರೆ ಇಷ್ಟಪಡುತ್ತಿದ್ದವನಿಗೆ ಮನಸು ಒಲಿದಂತೆ ಬದುಕಲಾಗದ ಸ್ಥಿತಿ  ಅಸ್ಥಿರತೆಗೆ ಕಾರಣವಾಗುತ್ತದೆ. ದೊಡ್ಡವನಾಗುತ್ತಿದ್ದಂತೆಯೇ ಬದುಕೂ ನಾಟಕ ಎನಿಸುತ್ತದೆ; ಎಲ್ಲರೂ ಮುಖವಾಡ ಧರಿಸಿದವರಂತೆ ಕಾಣುತ್ತಾರೆ. ಆಧುನಿಕತೆ ನಮ್ಮೊಳಗಿನ ಅಸಲಿತನವನ್ನು ಹೊಸಕಿ ಮುಖವಾಡದಲ್ಲಿ ಬದುಕುವ ವಿಪರ್ಯಾಸವು ಅವನನ್ನು ಧಿಕ್ಕೆಡಿಸುತ್ತದೆ. ಸ್ವತ: ತನ್ನೊಳಗೂ ಇಂಥ ಇಬ್ಬಂದಿತನ ಇರುವುದನ್ನು ಕಾಣುತ್ತಾನೆ. ಪ್ರೀತಿಯಂಥ ಪ್ರೀತಿಯಲ್ಲಿ ನಿಜ ಸ್ವರೂಪ ದರ್ಶನವಾದರೂ ಅದೂ ಅಶಾಶ್ವತವಾಗುವ ಶೋಚನೀಯ ಸ್ಥಿತಿಯಲ್ಲಿ ಮನುಷ್ಯನಿದ್ದಾನೆ- ಇದು ಚಿತ್ರಕತೆಯ ಒಂದು ಮುಖ.

tamasha3ಚಿತ್ರಕತೆಯ ಇನ್ನೊಂದು ಮುಖ-ಸಮಾನಾಂತರ ರೇಖೆಗಳಲ್ಲಿ ಸಾಗುವ ವ್ಯಕ್ತಿಗಳ ಬದುಕು ಯಾವುದೋ ದಿವ್ಯ ಮುಖಾಮುಖಿಯಲ್ಲಿ ಅವರ ವ್ಯಕ್ತಿತ್ವದ ಸ್ವರೂಪವನ್ನೇ ಬದಲಾಯಿಸಬಲ್ಲದು ಎನ್ನುವುದು. ಅದು ಭೌತಿಕವಾಗಿ ಬೇರೆಯಾದರೂ ಮಾನಸಿಕ ಸ್ತರದಲ್ಲಿ ಅಂಟಿಕೊಂಡಿರುವ, ಬಯಸಿದರೂ ಬಿಡಿಸಿಕೊಳ್ಳಲಾಗದ ಸಂಬಂಧವೂ ಆಗಬಲ್ಲದು. ಸಿನಿಮಾದಲ್ಲಿ ವೇದ್ ಮತ್ತು ತಾರಾ ಭೇಟಿಯಾಗುವುದು ಒಂದು ವಿಲಕ್ಷಣ ಸನ್ನಿವೇಶದಲ್ಲಿ. ತನ್ನ ನಿಜ ಅಸ್ತಿತ್ವದ ಹುಡುಕಾಟದಲ್ಲಿ ಫ್ರಾನ್ಸಿನ ಕಾರ್ಸಿಕಾ ದ್ವೀಪಕ್ಕೆ ಬಂದಿರುವ ಯುವಕ ವೇದ್ ಮತ್ತು ಕಾಮಿಕ್ ಪಾತ್ರ ಆಸ್ಟಿರಿಕ್ಸ್ ಆಕರ್ಷಣೆಯಿಂದ ಇದೇ ದ್ವೀಪಕ್ಕೆ ಬಂದು ಇನ್ನೇನು ಭಾರತಕ್ಕೆ ಮರಳಲಿರುವ ತಾರಾ; ಭಾರತದಲ್ಲಿ ಭವ್ಯ ಬದುಕು ಅವಳಿಗಾಗಿ ಕಾದಿದೆ. ಆದರೆ ಪಾಸಪೋರ್ಟ್ ಕಳೆದುಕೊಂಡು ಇಲ್ಲಿಯೇ ಉಳಿಯಬೇಕಾದ ಆಕಸ್ಮಿಕ ಜರುಗುತ್ತದೆ. ಬೇರೆಯದೇ ಬದುಕೊಂದು ಈ ದ್ವೀಪದಲ್ಲಿ ಹೊಂಚು ಹಾಕಿ ಕೂತಿರುವುದು ಇಬ್ಬರಿಗೂ ತಿಳಿದಿಲ್ಲ.

ಪರಸ್ಪರ ಪರಿಚಯದ ಪಾರಂಪರಿಕ ರೀತಿಯಿಂದ ವಿಭಿನ್ನವಾಗಿರಲು ಬಯಸುವ ವೇದ್ ಮತ್ತು ತಾರಾ ನಿಜ ಪರಿಚಯ ಮಾಡಿಕೊಳ್ಳದೇ ಕಾಲ್ಪನಿಕ ಹೆಸರುಗಳನ್ನಿಟ್ಟುಕೊಂಡು, ದ್ವೀಪದಲ್ಲಿರುವಷ್ಟು ದಿನ ಜೊತೆಯಾಗಿ ಜೀವನವನ್ನು ಅರ್ಥೈಸಿಕೊಳ್ಳುವ ಮತ್ತು ಭಾರತಕ್ಕೆ ಮರಳಿದ ಮೇಲೆ ಮತ್ತೆಂದೂ ಭೇಟಿಯಾಗದಿರುವ ಒಪ್ಪಂದ ಮಾಡಿಕೊಳ್ಳುತ್ತಾರೆ. ಅಪರಿಚಿತತೆ ಮತ್ತು  ಅಂಟಿಕೊಳ್ಳದ ಸಂಬಂಧದ ವಾಗ್ದಾನದಲ್ಲಿ ಇಬ್ಬರ ಅಸಲಿ ಅಂತರಂಗವು ತೆರೆದುಕೊಳ್ಳುತ್ತದೆ. ಪ್ರತಿ ಕ್ಷಣವನ್ನೂ ಅರ್ಥಪೂರ್ಣವಾಗಿ ಕಳೆಯುತ್ತಾರೆ. ಬದುಕು ಎಷ್ಟು ಸುಂದರ ಎಂದುಕೊಳ್ಳುತ್ತಿರುವಾಗಲೇ ತಾರಾಳಿಗೆ ಭಾರತಕ್ಕೆ ಮರಳಲು ಅಗತ್ಯವಿರುವ ಎಲ್ಲ ಕಾಗದಪತ್ರಗಳು ತಲುಪುತ್ತವೆ. ತಕ್ಷಣವೇ ಹೊರಟುನಿಲ್ಲುತ್ತಾಳೆ. ಅರೆನಿದ್ದೆಯಲ್ಲಿರುವ ವೇದನಿಗೆ ಚುಂಬಿಸಿ (ಆ ವರೆಗೆ ಅದೆಲ್ಲ ನಿಷಿದ್ಧವಾಗಿರುತ್ತದೆ) ಕೋಲ್ಕತ್ತಾಕ್ಕೆ ಮರಳುತ್ತಾಳೆ. ವೇದ್ ಕೂಡ ಕೆಲವು ದಿನ ಬಿಟ್ಟು ದೆಹಲಿಗೆ ಮರಳುತ್ತಾನೆ.

ಅವರ ಬದುಕು ಯಥಾ ಪ್ರಕಾರ ಸಮಾನಾಂತರ ರೇಖೆಗಳಲ್ಲಿ ಚಲಿಸುತ್ತಿರುತ್ತದೆ; ಆದರೆ ಬಿರುಕು ಬಿಟ್ಟ ಹೃದಯಗಳೊಂದಿಗೆ! ತಾರಾಳ ಹೃದಯವಂತೂ ದ್ವೀಪದಲ್ಲಿ ಏನನ್ನೋ ಪಡೆದುಕೊಂಡಾಗಲೆ ಇನ್ನೇನನ್ನೋ ಕಳೆದುಕೊಂಡಂತಾಗಿರುತ್ತದೆ. ಹೀಗಿರಲು ನಾಲ್ಕು ವರ್ಷಗಳ ನಂತರ ಮತ್ತೆ ಅವರ ಭೇಟಿಯಾಗುತ್ತದೆ. ಈ ಬಾರಿ ಅವರು ತಮ್ಮ ನೈಜ ಪರಿಚಯ ಮಾಡಿಕೊಳ್ಳುತ್ತಾರೆ. ಈ ಸಲದ ಭೇಟಿ ಅನಿರೀಕ್ಷಿತವಲ್ಲ. ಬದುಕು ಹೊಂಚಿ ಹಾಕಿದ್ದೂ ಅಲ್ಲ! ಇಬ್ಬರ ಮನಸುಗಳೂ ಇಂಥ ಮಿಲನದ ಸುಪ್ತ ನಿರೀಕ್ಷೆಯಲ್ಲಿದ್ದವು. ಆದರೆ ನಿರೀಕ್ಷಿತವಾದುದರಲ್ಲಿ ಮಾಂತ್ರಿಕತೆ ಮಾಯವಾಗಿರುತ್ತದೆ…ಇಬ್ಬರೂ ಮತ್ತೆ ಆಗಾಗ ಭೇಟಿಮಾಡಿದರೂ ಕಾಲವು ಅವರ ವ್ಯಕ್ತಿತ್ವವನ್ನು ಬದಲಾಯಿಸಿರುತ್ತದೆ. ಕಾರ್ಪರೇಟ್ ಜಗತ್ತಿನ ಯಶಸ್ಸಿನ ಓಟದಲ್ಲಿ ವೇದನ ಸ್ವರೂಪ ಬದಲಾಗಿದೆ. ಗುರಿ ಯಶಸ್ಸು ಸಾಧನೆಗಳೇ ಮಂತ್ರವಾಗಿರುವ ಕಾರ್ಪರೇಟ್ ಮನುಷ್ಯತ್ವದ ಸೂಕ್ಷ್ಮತೆಗಳನ್ನು ಚಿವುಟಿಹಾಕುವುದನ್ನು ಆತ ಸ್ವೀಕರಿಸಿದ್ದಾನೆ. ಮೊದಲಿನ ವೇದ್ ಮಾಯವಾಗಿರುವುದನ್ನು, ಆತ ಕಂಪನಿಯೊಂದರ ಫಿನಿಶ್ಡ್ ಪ್ರಾಡಕ್ಟ್ ನಂತಾಗಿರುವುದನ್ನು ಕಂಡು ನಿರಾಶಳಾಗುವ ತಾರಾ ಆತನ ಮದುವೆ ಪ್ರಸ್ತಾಪವನ್ನು ನಿರಾಕರಿಸುತ್ತಾಳೆ.

ಶ್ರೀಮಂತಿಕೆಯ ತಾರಾ ಅಂತಸ್ತಿನ ಕಾರಣಕ್ಕೆ ತನ್ನನ್ನು ತಿರಸ್ಕರಿಸಿದಳು ಎಂಬ ಕೀಳರಿಮೆಯಿಂದ ವೇದ್  ಚಿತ್ತಕ್ಷೋಭೆಗೊಳಗಾಗುತ್ತಾನೆ. ಹೆತ್ತವರು ಸಮಾಜ ವೃತ್ತಿ ಎಲ್ಲರೂ ಬಯಸುವ ಶಿಸ್ತು ಪರಿಶ್ರಮ ಕೃತಕ ನಯವಿನಯ -ಇವೆಲ್ಲವನ್ನೂ ಆಹ್ವಾನಿಸಿಕೊಂಡ ವೇದ್; ಕಥೆ ಹಾಡು ಕುಣಿತ ಸ್ನೇಹ,ಹರಿವ ನೀರಿನಂಥ ಜೀವಂತಿಕೆಯ ವೇದ್ -ಯಾವುದು ಅಸಲಿ ಯಾವುದು ನಟನೆ? ತಾನು ಯಾರು? ತನ್ನ ನಿಜ ಅಸ್ತಿತ್ವವೇನು? ವೇದ್ ಗೊಂದಲದಿಂದ ಮನೋರೋಗಿಯಾಗುತ್ತಾನೆ. ಇತ್ತ ವೇದ್ ದೂರವಾದಷ್ಟೂ ತಾರಾ ಪ್ರೀತಿಯ ದಾಹದಲ್ಲಿ ಬೇಯುತ್ತಾಳೆ. ಭಗ್ನ ಹೃದಯದ ಬದುಕು ಅವಳದಾಗುತ್ತದೆ. tamasha1

ಇದು ಗ್ರೇಟ್ ಚಿತ್ರವಲ್ಲ. ವೀಕ್ಷಣೆಯ ಸಮಯದಲ್ಲಿ ಬೋರ್ ಹೊಡೆಸುತ್ತದೆ. ಹಲವು ಬಾರಿ ಕಥಾ ಕೇಂದ್ರವಿಲ್ಲದೇ ಸೊರಗುತ್ತದೆ. ಆದರೆ ಚಿತ್ರದಲ್ಲಿರುವ ಮತ್ತು ಅಲ್ಲಿ ಇಲ್ಲದ ಅನೇಕ ಅಂಶಗಳು ಆ ನಂತರವೇ ನಿಮ್ಮನ್ನು ಕಾಡುತ್ತವೆ.ವೇದನಾಗಿ ರಣಬೀರ್ ಕಪೂರ್ ಅತ್ಯುತ್ತಮವಾಗಿ ಅಭಿನಯಿಸಿದ್ದಾನೆ. ಆದರೆ ನಿಜಕ್ಕೂ ಮನ ಗೆಲ್ಲುವವಳು ದೀಪಿಕಾ ಪಡುಕೋಣೆ ಎನ್ನುವ ಅಪ್ಸರೆ!  ಹೃದಯದಲ್ಲೇಳುವ ಎಂಥ ಸೂಕ್ಷ್ಮ ತಳಮಳವನ್ನೂ ತನ್ನ ತಿಳಿನೀರ ತ್ವಚೆಯ ಮುಖದಲ್ಲಿ ಅಭಿವ್ಯಕ್ತಪಡಿಸಬಲ್ಲ ಪ್ರತಿಭಾವಂತೆ ಈಕೆ. ಇಡೀ ಚಿತ್ರಕತೆಯನ್ನು ವೇದನ ಸುತ್ತ ಹೆಣೆದು ಇಮ್ತಿಯಾಜ್ ಅಲಿ ತಾರಾ ಪಾತ್ರಕ್ಕೆ, ಇಡೀ ಚಿತ್ರಕ್ಕೆ ಅನ್ಯಾಯ ಮಾಡಿದ್ದಾರೆ.

ಕೊನೆಯಲ್ಲಿ ಅರೆಭ್ರಾಂತಿಯ ಸ್ಥಿತಿ ತಲುಪಿದ ವೇದ್, ಬಾಲಕನಿದ್ದಾಗ ಕಥೆ ಹೇಳುತ್ತಿದ್ದ ಮುದುಕನನ್ನು ಹುಡುಕಿ ಹೋಗುತ್ತಾನೆ. ಈ ಸಲ ತಾನೇ ಕಥೆ ಹೇಳುತ್ತಾನೆ. ಹುಡುಗ ಹುಡುಗಿಯರ ಪ್ರೇಮ ಕಥೆ ಕಟ್ಟಿ ಅಪೂರ್ಣ ಹಂತದಲ್ಲಿ ನಿಲ್ಲಿಸಿ ಅದನ್ನು ಪೂರ್ಣಗೊಳಿಸು ಎನ್ನುತ್ತಾನೆ. ಮುದುಕನಿಗೆ ಇದು ತನ್ನದೇ ಕಥೆ, ಈತ ತನ್ನನ್ನು ಅಪಹಾಸ್ಯ ಮಾಡುತ್ತಿದ್ದಾನೆ ಎಂಬ ಸಿಟ್ಟಿನಿಂದ ಎದ್ದು ಹೋಗುತ್ತಾನೆ. ಅದ್ಭುತ ಕಥೆ ಹೇಳುತ್ತಿದ್ದ ಮುದುಕನ ಭಗ್ನ ಹೃದಯವೂ, ಅದನ್ನು ಮರೆಯಲು ಆತ ಕತೆಕಟ್ಟಿ ರಂಜಿಸುವ ವಾಸ್ತವ ಸತ್ಯವೂ ತೆರೆದುಕೊಳ್ಳುತ್ತದೆ. ಎಲ್ಲರೂ ಅಪೂರ್ಣರು, ಸೃಜನಶೀಲ ಹುಡುಕಾಟವೇ ಎಲ್ಲ ನೋವುಗಳ ಮರೆಸುವ ಮದ್ದು ಎನ್ನುವ ದರ್ಶನದೊಂದಿಗೆ ಚಿತ್ರ ಮುಗಿಯುತ್ತದೆ. ಚಿತ್ರದ ವಸ್ತು ಮನಸ್ಸನ್ನು ಕಾಡುವುದು ಮಾತ್ರ ಮುಂದುವರಿಯುತ್ತದೆ!                                                                            

‍ಲೇಖಕರು admin

December 7, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: