ಬೆಂಗಳೂರಿಗೆ ಬಂದವರು ಆಟೋದಲ್ಲಿ ಹೋಗದೆ ಇರ್ತಾರಾ?

ಆಟೋ ಮಹಾತ್ಮೆ sandeep kammath ಸಂದೀಪ್ ಕಾಮತ್ 

‘ಊರಿಗೆ ಬಂದವಳು ನೀರಿಗೆ ಬರದೇ ಇರ್ತಾಳಾ?’ ಅನ್ನೋ ಗಾದೆ ಥರ ‘ಬೆಂಗಳೂರಿಗೆ ಬಂದವರು ಆಟೋದಲ್ಲಿ ಹೋಗದೆ ಇರ್ತಾರಾ?’ ಅನ್ನೋ ಗಾದೆ ಹುಟ್ಟು ಹಾಕಬಹುದೇನೋ ಬೆಂಗಳೂರಿನಲ್ಲಿ! ಎಲ್ಲಾ ಊರಿನಲ್ಲೂ ಆಟೋ ಇದ್ದೇ ಇದೆ, ಮತ್ತೆ ಜನ ಅದನ್ನು ಬಳಸೇ ಬಳಸುತ್ತಾರೆ. ಬೆಂಗಳೂರೇನು ಸ್ಪೆಶಲ್ ಅಂಥ ನಿಮಗನಿಸಿರಬಹುದು. ಬೆಂಗಳೂರಿನಲ್ಲಿ ಬಹುತೇಕ ಜಾಗಗಳಿಗೆ ನೇರವಾದ ಬಸ್ ಇರದೇ ಇದ್ದುದರಿಂದ ಇಲ್ಲಿ ಆಟೋದಲ್ಲಿ ಹೋಗೋದು ಎಲ್ಲರಿಗೂ ಅನಿವಾರ್ಯ. ಮುಂಬಯಿಯಂಥ ಊರಿಂದ ಬೆಂಗಳೂರಿಗೆ ಬಂದ ಹಲವರಿಗೆ ಒಂದು ವಿಷಯದಲ್ಲಿ ಕೆಲವೊಮ್ಮೆ ಮುಜುಗರವಾಗುವುದುಂಟು! ಅದೇನಂದರೆ ‘ಆಟೋ……’ ಅಂತ ಕರೆದ ತಕ್ಷಣ ಯಾರೂ ಬರದೆ ಇರುವುದು! ಮುಂಬಯಿಯಲ್ಲಿ ‘ಟ್ಯಾಕ್ಸೀ..’ ಅಂದ ತಕ್ಷಣ ಕಪ್ಪು-ಹಳದಿ ಬಣ್ಣದ ಟ್ಯಾಕ್ಸಿಯೊಂದು ನಿಮ್ಮ ಮುಂದೆ ಹಾಜರಾಗುತ್ತೆ. ನೀವೂ ಟ್ಯಾಕ್ಸಿ ಹತ್ತಿ ಬೇಕಾದಲ್ಲಿ ಹೋಗುತ್ತೀರ. ಅಷ್ಟೆ! ಆದ್ರೆ ಬೆಂಗಳೂರಿನಲ್ಲಿ ಆ ಥರ ಅಲ್ಲ. ಇಲ್ಲಿ ಆ ರೀತಿ ಕರೆದರೆ ಬರುವ ಟ್ಯಾಕ್ಸಿಗಳಿಲ್ಲ! ಇಲ್ಲಿ ಇರುವುದು ಆಟೋಗಳು. ಅದೂ ಕರೆದರೆ ಬಾರದ ಆಟೋಗಳು!

auto3ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗೋದಕ್ಕೆ ಸ್ವಲ್ಪ ಮಟ್ಟಿನ ಅನುಭವ ಅಗತ್ಯ. ಆಟೋಗಳು ಕರೆದರೆ ಬರದೇ ಇರೋದಕ್ಕೂ ಕಾರಣ ಇದೆ. ಇಲ್ಲಿ ಆಟೋ ಹತ್ತೋದಕ್ಕೆ ಮೊದಲು ಒಂದು ಚಿಕ್ಕ ಸಂದರ್ಶನ ಇರುತ್ತೆ! ಆ ಸಂದರ್ಶನದಲ್ಲಿ ನೀವು ಯಶಸ್ವಿಯಾದರೆ ಮಾತ್ರ ನಿಮಗೆ ಆಟೊದಲ್ಲಿ ಕೂರುವ ಅವಕಾಶ! ನಿಮಗೆ ಮಲ್ಲೇಶ್ವರಂಗೆ ಹೋಗಬೇಕು ಅಂದುಕೊಳ್ಳಿ. ಮೊದಲಿಗೆ ಎಲ್ಲಾದರೂ ಖಾಲಿ ನಿಂತಿರುವ ಅಟೋ ಇದೆಯಾ ನೋಡಬೇಕು. ಖಾಲಿ ಅಂದ್ರೆ ತೀರ ಡ್ರೈವರೂ ಇರದ ಆಟೋ ಅಲ್ಲ! ಒಂದು ವೇಳೆ ಖಾಲಿ ಆಟೋ ನಿಂತಿದ್ದಲ್ಲಿ, ಡ್ರೈವರ್ ಏನು ಮಾಡುತ್ತಿದ್ದಾನೆ ಅಂತ ನೋಡಬೇಕು. ನಿಮಗೆ ಡ್ರೈವರ್ ಕಾಣದೆ ಬರೀ ಎರಡು ಕಾಲುಗಳು ಹಿಂದಿನ ಸೀಟುಗಳಿಂದ ಹೊರಗೆ ಚಾಚಿರೋದು ಕಂಡರೆ, ಆ ಕಡೆ ಹೋಗಲೇ ಬೇಡಿ. ಆ ಡ್ರೈವರ್ ಮಲಗಿದ್ದಾನೆ ಅಂತ ಅರ್ಥ! ಅವನು ಬರೋದು ಡೌಟೇ. ಹಾಗಾಗಿ ಬೇರೆ ಆಟೊ ನೋಡಿ.

ಒಂದು ವೇಳೆ ಡ್ರೈವರ್ ತನ್ನ ಸೀಟಿನಲ್ಲಿದ್ದರೆ, ಅವನ ಬಳಿ ಹೋಗಿ “ಮಲ್ಲೇಶ್ವರಂ” ಅಂತ ಹೇಳಿ. ಅಲ್ಲಿಗೆ ಸಂದರ್ಶನ ಶುರು! ಅವನು “ಮಲ್ಲೇಶ್ವರಂನಲ್ಲಿ ಎಲ್ಲಿ ?” ಅಂತ ಕೇಳ್ತಾನೆ. ನೀವು ಹೇಳಿದ ಉತ್ತರ ಅವನಿಗೆ ಇಷ್ಟ ಆದ್ರೆ ನೀವು ಸಿಲೆಕ್ಟ್ ಅಂತ ಅರ್ಥ. ಇಲ್ಲದಿದ್ದಲ್ಲಿ ಸಂದರ್ಶನ ಮುಂದುವರೆಯುತ್ತೆ! “ಮೇನ್ ರೋಡಲ್ಲೇನಾ? ಅಥವ ಒಳಗೆ ಹೋಗ್ಬೇಕಾ?”, “ಎಷ್ಟು ಜನ ಇದ್ದೀರಿ, ಲಗೇಜ್ ಇದೆಯಾ” ಹೀಗೆ ಪ್ರಶ್ನೆ ಮುಂದುವರೆಯುತ್ತೆ. ನಿಜ ಹೇಳ್ಬೇಕಂದ್ರೆ ಈ ಪ್ರಶ್ನೆಗಳೆಲ್ಲ ನೆಪ ಮಾತ್ರ. ನೀವು “ಮಲ್ಲೇಶ್ವರಂ” ಅಂದಾಕ್ಷಣ ಅವನು ಏನೂ ಪ್ರಶ್ನೆ ಕೇಳಿಲ್ಲ ಅಂದರೆ ಅವನು ಮೀಟರ್ ಪ್ರಕಾರ ಬರೋದಿಕ್ಕೆ ಒಪ್ಪಿದ್ದಾನೆ ಅಂತ ಅರ್ಥ. “ಮಲ್ಲೇಶ್ವರಂನಲ್ಲಿ ಎಲ್ಲಿ. ಮೇನ್ ರೋಡಲ್ಲೇನಾ ಅಥವ ಒಳಗೆ ಹೋಗ್ಬೇಕಾ ?..” ಅಂತೆಲ್ಲಾ ಕೇಳಿದ್ರೆ ಅವನು ಮೀಟರ್ ಮೇಲೆ ಇಪ್ಪತ್ತು ರೂ ಹೆಚ್ಚಿಗೆ ಕೇಳ್ತಾನೆ ಅಂತ ಅರ್ಥ. ನೀವು ಈವರೆಗೆ ಯಾರೂ ಹೋಗದಿರುವಂಥ ಸ್ಥಳಕ್ಕೆ ಹೋಗ್ತಿದ್ದೀರಾ ಅಂತ ನಿಮ್ಮನ್ನು ನಂಬಿಸಿ, ಹೆಚ್ಚಿಗೆ ಹಣ ಕೇಳುವ ತಂತ್ರ ಇದು. ಡ್ರೈವರ್ ಜೊತೆ ಮೊದಲ ಸುತ್ತಿನ ಮಾತುಕತೆ ಮುಗಿದು ನೀವು ಆಟೋ ಹತ್ತಿದ್ರೆ ಅಲ್ಲಿಗೆ ಒಂದು ಹಂತ ತಲುಪಿದ್ರಿ ಅಂತ ಅರ್ಥ. ಈಗ ಡ್ರೈವರ್ ಮೀಟರ್ ಹಚ್ಚಿ ಡುರ್ರ್ ಡುರ್ರ್ ಅಂತ ಆಟೋ ಶುರು ಮಾಡ್ತಾನೆ.

auto meterಇನ್ನು ಮುಂದಿನ ಹಂತ! ಸ್ವಲ್ಪ ಹೊತ್ತಿನ ನಂತರ ಮೂರು ರಸ್ತೆ ಕೂಡುವಲ್ಲಿ ಒಮ್ಮೆ ಹಿಂದೆ ತಿರುಗಿ “ಸಾರ್/ಮ್ಯಾಡಮ್ ಸ್ಯಾಂಕಿ ರೋಡ್ ಮೇಲೆ ಹೋಗ್ಲಾ ಇಲ್ಲ ಮೇಖ್ರಿ ಸರ್ಕಲ್ ಮೇಲ್ ಹೋಗ್ಲಿ?” ಅಂತ ಕೇಳ್ತಾನೆ. ಇದು ನಿಮಗೆ ಆ ಪ್ರದೇಶದ ಬಗ್ಗೆ ಎಷ್ಟು ಮಾಹಿತಿ ಇದೆ ಅನ್ನೋ ಟೆಸ್ಟ್. ಆಗಿದ್ದಾಗ್ಲಿ ಅಂತ ದೇವರ ಮೆಲೆ ಭಾರ ಹಾಕಿ ಸ್ಯಾಂಕಿ ರೋಡ್ ಅಥವಾ ಮೆಖ್ರಿ ಸರ್ಕಲ್ ಅಂತ ಹೇಳಿದ್ರೆ ನೀವು ಬಚಾವ್. ಅದು ಬಿಟ್ಟು “ನನಗೆ ಈ ಕಡೆ ಏರಿಯಾ ಅಷ್ಟಾಗಿ ಗೊತ್ತಿಲ್ಲ. ನೀವೇ ಯಾವುದು ಹತ್ತಿರ ಆ ರೋಡಲ್ಲಿ ಕರ್ಕೊಂಡು ಹೋಗಿ” ಅಂದ್ರೆ ಆಷ್ಟೆ! ಪವರ್ ಆಫ್ ಅಟಾರ್ನಿ ಬರೆದು ಕೊಟ್ಟ ಹಾಗೆ! ನೀವು ಬೆಂಗಳೂರು ದರ್ಶನ ಮಾಡಿ ಆರಾಮಾಗಿ ಹೋಗಬಹುದು!

ಆಟೋ ಹತ್ತಿದ ಮೇಲೆ ನೀವು ಮುಖ್ಯವಾಗಿ ಮಾಡಬೇಕಾದ ಕೆಲಸ ಅಂದ್ರೆ ಮೀಟರ್ ಮೇಲೆ ಒಂದು ಕಣ್ಣಿಟ್ಟಿರೋದು. ನೀವು ಗಮನಿಸಿರಬಹುದು. ಹಲವು ಸಲ ನಾವು ಬೆಳಿಗ್ಗೆ ಎಚ್ಚರ ಆದ ತಕ್ಷಣ ಒಮ್ಮೆ ಗಡಿಯಾರ ನೋಡಿ ‘ಒಂದು ಹತ್ತು ನಿಮಿಷ ಮಲಗೋಣ’ ಅಂದುಕೊಂಡು ಮಲಗಿದ್ರೆ ಮತ್ತೆ ಎಚ್ಚರ ಆದಾಗ ಅರ್ಧ ಗಂಟೆ ಆಗಿರುತ್ತೆ! ಆಟೋದಲ್ಲೂ ಹೀಗೇ. ನೀವು ಮೀಟರ್ ಮೇಲೆ ಕಣ್ಣಿಡದೆ ರಸ್ತೆ ಬದಿಯಲ್ಲಿ ಹೋಗ್ತಿರೊ ಹುಡುಗಿಯರನ್ನೋ, ಅಂಗಡಿಯಲ್ಲಿ ನೇತು ಹಾಕಿರೋ ಸೀರೆಗಳನ್ನೋ ನೋಡಿ ಮೈ ಮರೆತರೆ, ಆಟೋ ಮೀಟರ್ ಪೆಟ್ರೋಲ್ ಬಂಕ್ ಮೀಟರ್ ಥರ್ ಜಂಪ್ ಆಗಿರುತ್ತೆ. ಇನ್ನು ಕೆಲವು ಸಲ ನಾವು ಹತ್ತಿದ ತಕ್ಷಣ ಮೀಟರ್ ಚೇಂಜ್ ಮಾಡಿಯೇ ಇರಲ್ಲ. ಹಿಂದಿನ ಅಂಕಿಯಿಂದಲೆ ಅದು ಮುಂದುವರೆಯುತ್ತೆ!

ಕೆಲವೊಮ್ಮೆ ಆಟೋದವರು ಮೀಟರ್ ಹಾಕದೆ “ಇಪ್ಪತ್ತು ರೂ ಆಗುತ್ತೆ” ಅಂತಾರೆ. ಅಂಥ ಸಂದರ್ಭದಲ್ಲಿ ಎರಡೆರಡು ಸಲ ಇಪ್ಪತ್ತು ಅಂತ ಖಚಿತ ಮಾಡಿಯೇ ಆಟೋ ಹತ್ತಬೇಕು. ಒಮ್ಮೆ ನನಗೆ ಆಟೋದವನು “ಇಪ್ಪತ್ತು” ಅಂತ ಹೇಳಿ, ಇಳಿಯುವಾಗ ನಾನು “ಎಪ್ಪತ್ತು” ಹೇಳಿದ್ದು ಅಂತ ಜಗಳ ಮಾಡಿ ವಸೂಲಿ ಮಾಡಿದ್ದ. ಯಾವುದಕ್ಕೂ ಇಂಥ ಸಂದರ್ಭದಲ್ಲಿ ಹರ್ಬಜನ್ ಸಿಂಗ್ ಮಂಕಿ ಅಂದ ಪ್ರಕರಣ ನೆನಪಿಸಿಕೊಂಡರೆ ಒಳ್ಳೆಯದು!

ಬೆಂಗಳೂರಿನ ಆಟೋಗಳ ವಿಶೇಷತೆ ಅಂದ್ರೆ ಅವರು ಯಾವತ್ತೂ ಎಲ್ಲೇ ಕರೆದರೂ “ಬರಲ್ಲ” ಅನ್ನೋದೇ ಇಲ್ಲ! ಬದಲಾಗಿ ಡುರ್ರ್ ಅಂತ ಮುಂದೆ ಹೋಗೇ ಬಿಡ್ತಾರೆ. ಹಾಗೆ ಹೋದ್ರೆ ಬರಲ್ಲ ಅಂತ ತಾನೆ ಲೆಕ್ಕ. ಹಾಗೇನಾದ್ರೂ ಹೋಗದೆ ಅವನು ಹಿಂದಿನ ಸೀಟ್ ಕಡೆ ನೊಡಿದ್ರೆ “ಹತ್ತಿ” ಅಂತ ಅರ್ಥ! ಅದು ಬಿಟ್ಟು ಇನ್ನೂ ಏನೋ ಆಲೋಚನೆ ಮಾಡ್ತಿದ್ರೆ, ಅವನು ಸಂದರ್ಶನಕ್ಕೆ ತಯಾರಿ ನಡೆಸ್ತಾ ಇದ್ದಾನೆ ಅಂತ ಅರ್ಥ!

ಹೀಗೆ ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗೊದಕ್ಕೂ ಸ್ವಲ್ಪ ಅನುಭವ ಅಗತ್ಯ. ನಿಮ್ಮ ಆಟೋ ಪ್ರಯಾಣ ಸುಖಕರವಾಗಲಿ ಅನ್ನೊದೇ ನನ್ನ ಹಾರೈಕೆ!

[ಈ ಪ್ರಬಂಧ ಅಮೆರಿಕಾದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಕಟಗೊಂಡ

‘ಹರಟೆ ಕಟ್ಟೆ’ ಪ್ರಬಂಧ ಸಂಕಲನದಲ್ಲಿ ಪ್ರಕಟಗೊಂಡಿದೆ.]

‍ಲೇಖಕರು admin

December 7, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: