ಭವ್ಯ ಕಬ್ಬಳಿ
ಬದುಕನ್ನು ಹೆಚ್ಚು
ಬಿಗಿದಪ್ಪಬಾರದು,
ಒಮ್ಮೊಮ್ಮೆ
ಕೊಂಚ ವಿರಾಮವನ್ನೂ ಕೊಡದೆ
ಇಂಚಿಂಚು ಕೊಲ್ಲುತ್ತಾ
ಬಾಚಿತಬ್ಬಿದ ಕೈಗಳಿಂದ
ಸದ್ದಿಲ್ಲದೆಯೇ ಜಾರಿಬಿಡುತ್ತದೆ
ಎಲ್ಲ ಸೋಲುಗಳೂ ಒಂದೇ
ಪ್ರೀತಿಯದು ಕೊಂಚ ದುಬಾರಿಯಷ್ಟೆ,
ದುಬಾರಿಯೆನಿಸಿದರೂ
ಎಲ್ಲವನ್ನೂ ಸುಲಭವಾಗಿ ಧಕ್ಕಿಸಿಕೊಡುವ
ಪ್ರೀತಿಯಲ್ಲಿ, ನನಗೂ ಸ್ವಲ್ಪ ಪಾಲು ಕೊಡು

ಬೊಗಸೆ ಮಾತ್ರ ಹೃದಯದಲಿ
ಆಗಸದಷ್ಟು ಆಸೆಯನ್ನು,
ಆಗಸದಷ್ಟಿದ್ದರೂ ಅದರೊಳಗೂ
ಖಾಲಿತನವನ್ನು ಪರಿಚಯಿಸುವ
ಪ್ರೀತಿ, ನನಗೂ ಸ್ವಲ್ಪ ಇರಲಿ ಬಿಡು
ಹೊಕ್ಕುಳಿನೊಳಗೆ ಜಾರಿದ ನೋವೊಂದು
ಕಣ್ಣಲ್ಲಿ ಅರಳಿ
ಕೆನ್ನೆ ಮೇಲೆ ಮೂಡುವ ಕಲೆಯನ್ನು,
ನನಗಾಗಿಯಾದರೂ ಅಳಿಸಿಬಿಡು
ಎದೆಗೆ ಬಿದ್ದ ಕಲ್ಲನ್ನು ಕರಗಿಸಿ
ಯಾವುದೊ ಶಿಲೆಯನ್ನಾಗಿಸುವ
ಕಲೆಯನ್ನು,
ನನಗೂ ಸ್ವಲ್ಪ ಹೇಳಿಕೊಡು
ಇಲ್ಲವೆ, ನನನ್ನೇ ನಿನ್ನೊಳಗಿನ ಶಿಲೆಯನ್ನಾಗಿಸಿಬಿಡು
ಉಸಿರಿಲ್ಲದೆಯೂ
ಬದುಕಿ ಬಿಡಬಹುದು
ಪ್ರೀತಿಯಿಲ್ಲದೆ
ಜೀವಿಸುವುದಾದರೂ ಹೇಗೆ?
ಪ್ರೀತಿಯಲಿ,
ನಾನು ನಿನ್ನ ರೀತಿಯಲ್ಲ
ನೀನು ನನ್ನ ರೀತಿಯಲ್ಲ
ಹೀಗಿದ್ದರೂ, ಇಬ್ಬರೂ ಬೇರೆ ಅನ್ನಿಸುವುದಾದರೂ ಹೇಗೆ?
ಪ್ರೀತಿಯು ಬಿಗಿದಪ್ಪಿದ ಬದುಕಿನಂತೆಯೇ, ಎದೆಯ ಬಗೆದರು ಸದ್ದಿಲ್ಲ
ಆದರೆ ತಬ್ಬುವವರು ನಾವಲ್ಲ
ಯಾವ ಬೆಚ್ಚಗಿನ
ಹೆಗಲಿನಾಸರೆಯೂ ಇಲ್ಲದೆ,
ತಣ್ಣನೆಯ ಮಾತೊಂದರ
ಕಿಡಿ ಸೋಕದೆ,
ನಮ್ಮೊಳಗಿನ ಭಗ್ನಪ್ರೇಮಿಯೊಬ್ಬ
ಸಾಯುವುದಾದರೂ ಹೇಗೆ?
ಮತ್ತೆ ಜೀವಿಸುವುದಾದರೂ ಹೇಗೆ?






Very nice
Good one..
ಚೆನ್ನಾಗಿದೆ