ಹೀಗೊಂದು ಪ್ರೇಮ ಕವನ
ಶ್ರುತಿ ಬಿ.ಆರ್
ಹದಿನೇಳರರೆಯದಲಿ
ನಾನೂ ಬರೆದಿದ್ದೆ ಸೊಗಸಾಗಿ,
ಪ್ರೀತಿಯ ಕುರಿತಾಗಿ!
ಪ್ರೇಮ ಕವನ ಗೀಚಿ ಗೀಚಿ
ಒಳಗೊಳಗೆ ನಸು ನಾಚಿ
ಪುಳಕಗೊಂಡಿದ್ದೆ!
ಪ್ರೀತಿಯದುವೆ ಪಾರಿಜಾತ,
ಹೊಳೆವ ಮಿಂಚು ಕಣ್ಣ ನೋಟ!
ಕೈಗೆ ಕೈ ಸೋಕಿದಾಗ,
ಎದೆಯ ಒಳಗೆ ನೂರು ಚಿಟ್ಟೆ!
ಮೈಯಲೇನೋ ಕಚಗುಳಿ,
ಎಂದೆಲ್ಲಾ ಬರೆದು ಬೀಗಿದ್ದೆ ಬಿಂಕದಲಿ
ಎಂಥಾ ಜಾಣೆ ನಿಮ್ಮ ಹುಡುಗಿ,
ಅವಳ ಕವಿತೆ ಸೊಬಗ ಸುಗ್ಗಿ!
ಎಂದಾಗ ನಾಲ್ಕು ಮಂದಿ
ನನ್ನ ಅಪ್ಪ ಬೆನ್ನ ತಟ್ಟಿ
ಹೆಮ್ಮೆಯಿಂದ ನುಡಿದಿದ್ದ
ಹೌದೌದು ಬಲು ಜಾಣೆ ನಮ್ಮ ಪುಟ್ಟಿ!
ಹದಿಹರೆಯದಲಿ ಬರೆಯಬಹುದು
ಪ್ರೀತಿ ಪ್ರೇಮ ಕುರಿತು
ಕಲ್ಪನೆಯ ಕವಿತೆ,
ಇಪ್ಪತ್ತರಂಚಿನಲಿ ಸಿಕ್ಕಾಗ,
ಕನಸಿನ ಹುಡುಗ
ಊರ ತುಂಬೆಲ್ಲಾ ಗುಡುಗು!
ನನ್ನ ಪ್ರೇಮಿಯವನೆಂದಾಗ
ಮನೆಮಂದಿಯೆಲ್ಲ ವ್ಯಘ್ರ
ಮರ್ಯಾದೆ ನೆಪದಲಿರಿದರವನ!
ಮುರಿಯಿತೆನ್ನ ಸ್ವಪ್ನ,
ಕಮರಿತೆನ್ನ ಆಸೆ ಹೂವು!
ಕೇಳು ಮಗಳೆ, ಪ್ರೀತಿ ಪ್ರೇಮ
ಬರೆಯಲಿಕ್ಕುಂಟು
ಮಾಡಲಿಕ್ಕಿಲ್ಲ!
ಬರೆವಾಗ ಮೆಚ್ಚಿ ಮರುಳಾದಾರು,
ಪ್ರೀತಿಸುವೆನೆಂದಾಗ
ಪ್ರೇಮವಲ್ಲವಿದು ಕಾಮವೆಂದು!
ಮೂದಲಿಸಿಯಾರು
ನಡೆತೆಗೆಟ್ಟವಳೆಂದು!
ಮರೆಯದಿರು ಮಗಳೆ,
ಬರೆಯಲಿಕ್ಕುಂಟು, ಮಾಡಲಿಕ್ಕಲ್ಲ!!





Wow!!! Thumba channagi ede.
Thank you
Ishta aayitu nimma kavite.
Thank you
ಕುಸುಮ ಅವರೇ ನಿಮ್ಮ ಕವಿತೆ ಸೂಕ್ಷ್ಮವಾಗಿ ಒಂದು ಸಂದೇಶ ಕೊಟ್ಟಿರುವುದು. ತುಂಬ ಇಷ್ಟವಾಯಿತು.