
ಬಿದಲೋಟಿ ರಂಗನಾಥ್
ಅಂಬೇಡ್ಕರ್ ತೊಟ್ಟಿದ್ದ ಛಾಳೀಸು
ಕೊರಗುತ್ತಿದೆ ಫಲಿಸದ ಕನಸುಗಳ
ಮುಂದಾಕಿಕೊಂಡು..
ಅದು, ಎಲ್ಲರ ಮಬ್ಬು ಕಣ್ಣುಗಳ
ಅಪ್ಪಲು ತಯಾರಿದೆ
ಜಾತಿಗಳ ನೂಕಿ..
ಅರಿವಿನ ಗೂಡೊಳಗೆ
ಉಸಿರಾಡುವ ಛಾಳೀಸು
ಕಲ್ಲೊಡೆಯುವ ಮಂದಿಯ ಕೈಯೊಳಗೆ
ಹೂವಾಗಿ ಅರಳುತ್ತದೆ
ನೋವಿಗೆ ಮದ್ದಾಗಿ
ಕನಸಿಗೆ ಕಣ್ಣಾಗಿ
ಬೆಂಕಿಗೆ ನೀರಾಗಿ
ಹೂವಿನ ಸೊಂಟಕೆ ನೂಲಾಗಿ
ಬದುಕಿಗೆ ದಾರಿ ದೀಪವಾಗಿ
ಬೆಳಗುವ ಈ ಛಾಳೀಸಿನ ಒಳಗಣ್ಣು
ಅಸಮಾನತೆಯ ಸುಡಲು
ಬೆಂಕಿಯೂ ಆಗುತ್ತದೆ.
ನೀವು ,
ಈ ಛಾಳೀಸನ್ನು ಹಾಕಿಕೊಳ್ಳುವುದಾದರೆ,
ಒಂದಿರುವ ಛಾಳೀಸು ನೂರಾಗುತ್ತದೆ.ನೂರು
ಸಾವಿರವೂ ಆಗುತ್ತವೆ
ಹಾಕಿಕೊಂಡಾಗಿನ ಬದಲಾಗುವ
ನಿಮ್ಮ ಹೆಜ್ಜೆಗಳು ದಿಟ್ಟವಾಗಿ
ಪಂಚಮರ ಮನೆಗಳತ್ತ ನುಗ್ಗಿ
ಅವರ ಕೈ ಹಿಡಿದು ಶೋಷಣೆಯ
ಕಣ್ಣೀರ ಹೊರೆಸುತ್ತವೆ.
ಕಡೆಗಣ್ಣಾಗಿದ್ದ ನಿಮ್ಮವು
ಪ್ರೀತಿ ವಾತ್ಸಲ್ಯದ ಪಳ ಪಳ ಹೊಳೆಯುವ
ಕಣ್ಣಾಗುತ್ತವೆ…
ಶೋಷಣೆಯ ನಿಮ್ಮ ನಿಲುವು
ಬದಲಾಗಿ ಮನುಷ್ಯತ್ವ ಉಸಿರಾಡುತ್ತೀರಿ.!
ಇದು, ಬೆಲೆ ಕಟ್ಟಲಾಗದ
ಅಂಬೇಡ್ಕರ್ ತೊಟ್ಟಿದ್ದ ಛಾಳೀಸು.!!
ಇದನ್ನು ತೊಟ್ಟು
ಇದರೊಳಗೆ ಮುರಿದು ಬಿದ್ದ.
ಅಂಬೇಡ್ಕರ್ ಜೀ ಕನಸುಗಳಿಗೆ ನೀವೆ ರೆಕ್ಕೆ ಕಟ್ಟಿ.
ನಿರಾಳವಾಗಲಿ ಆ ಉಸಿರಿಗೆ.






0 Comments