ಚಿ ಜ ರಾಜೀವ
ನಮ್ಮ ಬೆನ್ನ ಹಿಂದೆ ನೀನೋ
ನಿನ್ನ ಬೆನ್ನ ಹಿಂದೆ ನಾವೋ
ಹೀಗೋ ಹಾಗೋ
ಪ್ರಿಯ ಗಾಂಧಿ
ನೀ ನಮ್ಮೊಂದಿಗಿರುವೆ
ನಮ್ಮ ಬೆನ್ನೆಲುಬಾಗಿರುವೆ
ಊರುಗೋಲಾಗಿಯೋ
ಮಡಚಿದ ಹಾಳೆಯಾಗಿಯೋ
ಕತ್ತರಿಸಿದ ಆಕೃತಿಯಾಗಿಯೋ
ಹೇಗೋ ಹಾಗೆ
ಪ್ರಿಯ ಗಾಂಧಿ
ನೀ ನಮ್ಮೊಂದಿಗಿರುವೆ
ನಮ್ಮ ನೆರಳಾಗಿರುವೆ

ರೂಪ ಯಾವುದಾದರೇನು
ಚಿತ್ರದ ಪರಿಕರ ಏನಾದರೇನು
ಕಸವೋ ರಸವೋ
ಪ್ರಿಯ ಗಾಂಧಿ
ನೀ ನಮ್ಮೊಂದಿಗಿರುವೆ
ನಮ್ಮ ಉಸಿರಾಗಿರುವೆ
ನಿನ್ನ ಹೆಸರು, ಪಟ, ಪ್ರತಿಮೆ,ನೆನಪು
ಅಸ್ತಿತ್ವವನ್ನೆ ಅಳಿಸಿಹಾಕುವ ಪ್ರಯತ್ನ ಇಲ್ಲಂತೂ
ಸದ್ದಿಲ್ಲದೆ ಸಾಗಿದೆ
ಪ್ರಿಯ ಗಾಂಧಿ
ಅದು ಅಸಾಧ್ಯದ ಮಾತು,
ಶ್ರದ್ಧಾವಂತ
ಆಸ್ತಿಕರು ನಂಬುವ
ದೇವರಿಗೆಲ್ಲಿಯ ರೂಪ
ಅದೊಂದು ನಂಬಿಕೆ
ಭರವಸೆ…
ಗಾಂಧಿ ನೀ ದೇವರಲ್ಲದ ದೇವರು !






0 Comments