ಪ್ರಸಾದ ರಕ್ಷಿದಿ ಓದಿದ ʼವೈದ್ಯನ ವಗೈರೆಗಳುʼ

ಪ್ರಸಾದ ರಕ್ಷಿದಿ

ಹೆಸರೇ ಹೇಳುವಂತೆ ವೈದ್ಯರೊಬ್ಬರ ಅನುಭವ ಬರಹಗಳು. ಡಾ.ಎ.ಪಿ.ಭಟ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ‌ಅನುಭವಗಳನ್ನು ಹಂಚಿಕೊಳ್ಳುತ್ತಿರುವವರು. ಆದ್ದರಿಂದ ಅವರು ಪರಿಚಿತರ ನಡುವೆ ಹೇಗೋ ಹಾಗೆಯೇ ನೆಟ್ಟಿಗರ ನಡುವೆಯೂ ಸ್ನೇಹಮಯಿ. ವೃತ್ತಿಯಿಂದ ವೈದ್ಯರಾಗಿದ್ದರೂ, ಡಾ.ಭಟ್ ಅವರ ಆಸಕ್ತಿಗಳು ಬಹುಮುಖಿ. ಅವರು ಸಾಹಿತ್ಯ, ಕಲೆ, ಸಂಗೀತ ಮುಂತಾದವುಗಳಲ್ಲಿ ಅಭಿರುಚಿ ಹೊಂದಿದವರು.

ಇವೆಲ್ಲವೂ ಅವರ ವೃತ್ತಿ ಜೀವನದ ಮೇಲೆ ಸಹಜವಾಗಿ ಪರಿಣಾಮ ಬೀರಿವೆ. ಅವರ ಈ ಬರಹಗಳಲ್ಲಿ ನಾನು ಗಮನಿಸಿದಂತೆ ಮೂರು ವಿಭಾಗಗಳಿವೆ. ಮೊದಲನೆಯದು ರೋಗಗಳು ಮತ್ತು ಇತರ ದೈಹಿಕ ಸಮಸ್ಯೆಗಳ ಬಗೆಗಿನ ಬರಹಗಳು. ದಿನ ನಿತ್ಯದ ಹಲವು ಸಾಮಾನ್ಯ ರೋಗಗಳಿಂದ ಪ್ರಾರಂಭವಾಗಿ, ನಿರ್ಲಕ್ಷ್ಯ ಮಾಡಿದರೆ ಪ್ರಾಣಾಂತಿಕವಾಗಬಲ್ಲ ಕಾಯಿಲೆಗಳ ವರೆಗೆ ಹಲವಾರು ಮಾಹಿತಿಗಳಿವೆ. ಸರಳ ಚಿಕಿತ್ಸೆಗಳಿವೆ ಪ್ರಾರಂಭದ ಹಂತದಲ್ಲೇ ನಾವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಯ ಕ್ರಮಗಳಿವೆ.

ಇವೆಲ್ಲವನ್ನೂ ಸಾಮಾನ್ಯ ಓದುಗನಿಗೆ ಅರ್ಥವಾಗುವಂತೆ ಲೇಖಕರು ಸರಳ ಭಾಷೆಯಲ್ಲಿ ನಿರೂಪಿಸಿದ್ದಾರೆ. ರೂಡಿಯಲ್ಲಿ ಇರುವ ಇಂಗ್ಲಿಷ್ ಪದಗಳನ್ನು ಹಾಗೇಯೇ ಬಳಸಿದ್ದಾರೆ, ಕೆಲವು ಕಡೆ ಇಂಗ್ಲಿಷ್ ಜೊತೆಯಲ್ಲಿ ಪರ್ಯಾಯ ಕನ್ನಡ ಪದಗಳನ್ನು ಬಳಸಿರುವುದು ಓದುಗನ ಪದ ಜ್ಞಾನವನ್ನು ವಿಸ್ತರಿಸಲು ಸಹಾಯಕವಾಗಿದೆ.

ಎರಡನೆಯದು ವೈದ್ಯರ ಸ್ವಂತ ಅನುಭವಗಳು.. ಇದು ಕೂಡಾ ಬಹಳ ವಿಸ್ತಾರವಾಗಿದೆ. ಡಾ.ಭಟ್ ಅವರು ಹಲವಾರು ಕಡೆಗಳಲ್ಲಿ ಹಾಗೇಯೇ ವಿದೇಶಗಳಲ್ಲಿ ಅದರಲ್ಲೂ ‌ಮುಖ್ಯವಾಗಿ ಗಲ್ಫ್ ದೇಶಗಳಲ್ಲಿ ಕೆಲಸಮಾಡಿರುವುದರಿಂದ ಬೇರೆ ಬೇರೆ ರೀತಿ ಜನರ ಮತ್ತು ಜನಜೀವನದ ಅನುಭವಗಳು ಇಲ್ಲಿ ದಾಖಲಾಗಿವೆ.

ಇಲ್ಲೆಲ್ಲ ನಮಗೆ ಕಾಣುವುದು ಒಬ್ಬ ಸಹೃದಯ ಮಾನಪ್ರೇಮಿಯ ತುಡಿತಗಳನ್ನು. ಭಾರತೀಯರಿರಲಿ, ಪಾಕಿಸ್ತಾನಿ ಇರಲಿ ಸಾಮಾನ್ಯ ಜನರು ಎಲ್ಲ ಕಡೆಯೂ ಒಂದೇ. ಕೆಟ್ಟವರು ಮತ್ತು ಒಳ್ಳೆಯವರು. ಎಲ್ಲಕಡೆಯೂ ಇರುತ್ತಾರೆ. ಅದಕ್ಕೆ ಧರ್ಮ, ಜಾತಿ. ದೇಶಗಳ ಬೇಧವಿಲ್ಲ ಎಂದು ತಮ್ಮ ಅನುಭವ ಗಳ ಮೂಲಕವೇ ನಿರೂಪಿಸುತ್ತ ಹೋಗುತ್ತಾರೆ.

ಅಲ್ಲಿ ಇವರ ಗೆಳೆಯ ರಾಗಿದ್ದ ಪಾಕಿಸ್ತಾನಿ ವೈದ್ಯ ಡಾ.ಶಂಶೀರ್, ಇವರಿಂದ ಹಣ ಪಡೆಯಲು ನಿರಾಕರಿಸುತ್ತಿದ್ದ ಪಾಕಿಸ್ತಾನಿ ಕ್ಷೌರಿಕ ಇದಕ್ಕೆ ಉದಾಹರಣೆಯಾಗಿದ್ದಾರೆ. ಹಾಗೇಯೇ ಕೆಟ್ಟದ್ದನ್ನು ಕಂಡಾಗ ಟೀಕೆ ಮಾಡಬೇಕಾದಾಗ ನಯವಾಗಿಯೇ ಟೀಕಿಸಿದ್ದಾರೆ. ಮೂರನೆಯದಾಗಿ ಇತರೆ ಅನುಭವಗಳು. ಅಂದರೆ ಸಾಹಿತ್ಯ, ಕಲೆ, ಯಕ್ಷಗಾನ, ಸಂಗೀತ ಇವುಗಳ ಮೂಲಕ ಪಡೆದ ಅನುಭವಗಳು ಹಾಗೂ ವ್ಯಕ್ತಿ ಚಿತ್ರಗಳು.

ಇಲ್ಲಿ ಕೂಡಾ ಲೇಖಕರು ಹಲವಾರು ವಿಭಿನ್ನ ಸಂಗತಿಗಳನ್ನು, ವೈವಿದ್ಯಮಯ – ಜೀವಪರ ತುಡಿತ ಮಿಡಿತಗಳನ್ನೇ ಮುಖ್ಯವಾಗಿ ದಾಖಲಿಸಿದ್ದಾರೆ. ಕರ್ನಾಟಕ ಕಂಡ ಅನೇಕ ಚಳುವಳಿಗಳ ಬಗ್ಗೆ ಬರಹಗಳಿವೆ. ‘ಅತೃಪ್ತಿಕರ, ಬಲಹೀನ ಮತ್ತು ಸಾಮಾನ್ಯ ಜನತೆಯ ವಿಶ್ವಾಸ ಹೊಂದಿರದ ನ್ಯಾಯಾಂಗ ವ್ಯವಸ್ಥೆ ಹೊಂದಿರುವ ದೇಶವು ಪ್ರಗತಿಪರ ಮತ್ತು ಸಂತುಷ್ಟ ಆಗಿರಲು ಸಾಧ್ಯವಿಲ್ಲ’ ಎಂಬ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮಾತು.

ಇಲ್ಲಿ ಸಕಾಲಿಕವಾಗಿ ಉಲ್ಲೇಖವಾಗಿದೆ. ಒಟ್ಟು ಬರಹಗಳು ಮಾನವ ಪ್ರೀತಿಯಿಂದ ಮಾತ್ರವಲ್ಲ ಸಹಜವಾದ ತೆಳು ಹಾಸ್ಯ ಭರಿತವಾಗಿ ಇರುವುದರಿಂದಲೂ ಓದುಗರನ್ನು ಸೆಳೆಯುತ್ತದೆ. ಕೆಲವು ಹಾಸ್ಯ ಪ್ರಸಂಗಗಳು ಗೊರೂರರ ಬರಹಗಳನ್ನು ನೆನಪಿಸುತ್ತವೆ.
ಪುಸ್ತಕದ ಉದ್ದಕ್ಕೂ ಇರುವ, ಕಲಾವಿದ ದಿನೇಶ್ ಕುಕ್ಕುಜಡ್ಕ ರಚಿಸಿದ ಸಾಂದರ್ಭಿಕ ಚಿತ್ರಗಳು ಓದಿನ ರುಚಿಗೆ ಪೂರಕವಾಗಿವೆ..
ಇಷ್ಟೆಲ್ಲಾ ಹೇಳಿದ ಮೇಲೆ ನಾನೇನೂ ಹೇಳದಿದ್ದರೆ ಹೇಗೆ.

107 ಅಧ್ಯಾಯಗಳಲ್ಲಿ ಹರಡಿರುವ,ಈ ಬರಹಗಳನ್ನು ಸ್ವಲ್ಪ ವಿಸ್ತರಿಸಿ. ಮೂರು ವಿಭಾಗಗಳನ್ನು ಪ್ರತ್ಯೇಕವಾಗಿ ಪ್ರಕಟಿಸಬಹುದು ಎಂದು ನನ್ನ ಪುಕ್ಕಟೆ ಸಲಹೆ

‍ಲೇಖಕರು Admin

December 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: