ಪ್ರಸಾದ್ ನಾಯ್ಕ್ ನೋಡಿದ ‘ಕಾಂತಾರ’

ಪ್ರಸಾದ್ ನಾಯ್ಕ್

ಹಾಗೆ ನೋಡಿದರೆ ನಾವೆಲ್ಲಾ ದೈವಗಳೊಂದಿಗೆ ಬೆಳೆದವರು. ಹಲವು ಕಾರಣಗಳಿಂದಾಗಿ ಆಸ್ತಿಕತೆಯಿಂದ ಇಷ್ಟಿಷ್ಟೇ ದೂರಾಗುತ್ತಿದ್ದ ನನ್ನಂಥವರನ್ನು ಅಗ್ನಾಸ್ಟಿಕ್ ಆಗಿ ಉಳಿಸಿದ್ದು ಮತ್ತು ಈ ಕಾಲದಲ್ಲೂ ಪವಾಡಗಳನ್ನು ನಂಬುವಂತೆ ಮಾಡಿದ್ದು ತುಳುನಾಡ ದೈವಗಳು. ಹೀಗಾಗಿ ದೈವಗಳೆಂದರೆ ನಮಗೆಲ್ಲಾ ಆಕರ್ಷಣೆ, ಅಚ್ಚರಿ, ಕುತೂಹಲ, ಒಂದಿಷ್ಟು ಭಕ್ತಿ ಮತ್ತು ಒಂಚೂರು ನಿಗೂಢ ಭಯವೂ ಕೂಡ. ದೈವಗಳ ಕಣ್ಸೆಳೆಯುವ ಬಣ್ಣಗಳು, ದೈವಿಕವೆನಿಸುವ ಅಬ್ಬರ, ದಂತಕಥೆಗಳ ಸರಣಿ, ದೈವಗಳಿಂದಾಗಿ ಈ ನೆಲದ ಸೊಗಡು ಪರಂಪರೆಯಾಗಿ ಮುಂದುವರಿಯುತ್ತಿರುವ ಸೊಬಗು… ಹೀಗೆ ಇವುಗಳಿಗಿರುವ ಆಯಾಮಗಳು ಹತ್ತಾರು. ಒಟ್ಟಿನಲ್ಲಿ ಕತೆಗಳ ನಡುವಿನಲ್ಲೇ ಬೆಳೆದಿರುವ ನನ್ನಂತಹ ಕರಾವಳಿ ಮಂದಿಯ ಬದುಕಿನಲ್ಲಿ ದೈವಗಳ ಪಾತ್ರ ದೊಡ್ಡದಿದೆ.

ದೈವದೇವರುಗಳ ದಯೆ ಸದಾ ನಿಮ್ಮ ಮೇಲಿರಲಿ ಎಂದು ನಮ್ಮ ಕಡೆ ಆಶೀರ್ವದಿಸುತ್ತಾರೆ. ಆ ಕ್ರಮವೇ ಹಾಗೆ. ಮೊದಲು ಬರುವುದು ದೈವ. ನಂತರ ದೇವರುಗಳು. ದೈವಗಳ ಮಾತುಗಳು ಅರ್ಥವಾಗುವುದು ಅಷ್ಟಿಷ್ಟಾದರೂ, ಅವುಗಳ ಬಾಯಿಯಲ್ಲಿ ತುಳುವನ್ನು ಕೇಳುವುದು ಚಂದ. ನಾವೆಲ್ಲಾ ಚಿಕ್ಕವರಿದ್ದಾಗ ದೈವವು ಸವಾರಿ ಹೋಗುವ, ಅಬ್ಬರದಿಂದ ಹೆಜ್ಜೆ ಹಾಕುವ ದೃಶ್ಯಗಳು ನಮಗೆ ಭಯಾನಕವಾಗಿ ಕಾಣಿಸುತ್ತಿದ್ದವು. ಕತ್ತಲ ಹಿನ್ನೆಲೆಯಲ್ಲಿ ಮತ್ತು ಪಂಜುವಿನ ಬೆಳಕಿನಲ್ಲಿ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದ ಆ ದೃಶ್ಯಗಳು ನಮಗೆ ಚಲನೆಯಲ್ಲಿದ್ದ ಮೋಹಕ ಕಲಾಕೃತಿಗಳಂತೆ ಕಾಣುತ್ತಿದ್ದವು.

ಇನ್ನು ಹಿನ್ನೆಲೆಯಲ್ಲಿ ಲಯಬದ್ಧವಾಗಿ ಮೂಡಿಬರುತ್ತಿದ್ದ ಗಂಟೆ-ಜಾಗಟೆಗಳ ಅಬ್ಬರದಲ್ಲಿ, ಅಪರೂಪಕ್ಕೊಮ್ಮೆ ಕೆಲವರಿಗೆ ಚಿತ್ರವಿಚಿತ್ರ ಶಕ್ತಿಗಳು ಆವಾಹನೆಯಾಗಿ ಸುತ್ತಮುತ್ತಲಿನವರಲ್ಲಿ ಕೆಲ ಕಾಲ ಗೊಂದಲವುಂಟಾಗುವುದೂ ಇರುತ್ತಿತ್ತು. ಆಗೆಲ್ಲಾ ನಂಬಿಕೆ-ವಿಜ್ಞಾನಗಳನ್ನು ಚೌಚೌ ಬಾತ್ ಮಾಡಿ ಹತ್ತು ಮಂದಿ ಹತ್ತಾರು ವಾದಗಳನ್ನು ಹೆಣೆಯುವುದೆಲ್ಲಾ ನೋಡಲು ಚಿಣ್ಣರಾದ ನಮಗೆ ಗಮ್ಮತ್ತಿನ ಸಂಗತಿಯಾಗಿತ್ತು.

ಈ ಬಾರಿ ಹರಿಯಾಣಾದ ಗುರುಗ್ರಾಮದಲ್ಲಿ ಕಾಂತಾರ ಚಿತ್ರದ ಶೋ ನಡೆಯುತ್ತಿದ್ದಾಗಲೂ ಅಂಥದ್ದೊಂದು ನಿಗೂಢವಾದ ಟ್ರಾನ್ಸ್ ಒಂದನ್ನು ಕತ್ತಲ ಟಾಕೀಸಿನೊಳಗೆ ನಾನು ಕಾಣುತ್ತಿದ್ದೆ. ಭನ್ಸಾಲಿಯವರ ಸಿನೆಮಾಗಳಲ್ಲಿ ಕಾಣಸಿಗುವ ಮೋಹಕ ಫ್ರೇಮುಗಳಂತೆ, ಸುಂದರ ತೈಲಚಿತ್ರಗಳಂತೆ ಕಾಣುತ್ತಿದ್ದ ಕಾಂತಾರದ ದೃಶ್ಯಗಳೂ ಕೂಡ ಒಂದರೆಕ್ಷಣ ಬಿಡದೆ ವೀಕ್ಷಕರ ದೃಷ್ಟಿಯನ್ನು ತೆರೆಗೆ ಅಂಟಿಸಿಕೊಂಡಿದ್ದವು. ದೈವಗಳ ಸಂಸ್ಕೃತಿಯ ಬಗ್ಗೆ ಅಷ್ಟಾಗಿ ತಿಳಿಯದಿದ್ದವರು ಕೂಡ ಇದರಲ್ಲಿ ಸತ್ಯವೆಷ್ಟು-ಕಲ್ಪನೆಯೆಷ್ಟು ಎಂದು ತಿಳಿಯದೆ, ಸಿನೆಮಾ ಮುಗಿಸಿ ಮನೆಗೆ ಮರಳಿದ ನಂತರ ಸ್ವಲ್ಪ ರಿಸರ್ಚ್ ಮಾಡಿ ನೋಡಲೇಬೇಕು ಎಂಬ ಕುತೂಹಲದಲ್ಲಿ ಹೋಗುತ್ತಿದ್ದರು.

ಇನ್ನು ನನ್ನ ಸಹೋದ್ಯೋಗಿಯೊಬ್ಬರು ಮಧ್ಯಪ್ರದೇಶದಲ್ಲಿರುವ ದೈವವೊಂದರ ಬಗ್ಗೆ ಉಲ್ಲೇಖಿಸುತ್ತಾ, ಹರಕೆಯನ್ನು ಮನ್ನಿಸದ ಆ ಭಾಗದ ದೈವಗಳಿಗೆ ಗ್ರಾಮಸ್ಥರೇ ಕ್ಲಾಸ್ ತೆಗೆದುಕೊಳ್ಳುವ ಬಗ್ಗೆ ಹೇಳಿ ಅಚ್ಚರಿಯನ್ನು ಮೂಡಿಸಿದರು. ಅಂತೂ ತನ್ನ ಪೋಸ್ಟರಿನಿಂದ ಹಿಡಿದು, ಕಥೆಯ ಪ್ರಸ್ತುತಿಯವರೆಗೂ ಇಂಥದ್ದೊಂದು ಸದಭಿರುಚಿಯ ಕುತೂಹಲವನ್ನು ವೀಕ್ಷಕರಲ್ಲಿ ಇಳಿಸಿದ್ದು ಮತ್ತು ಉಳಿಸಿದ್ದು ಕಾಂತಾರ ಚಿತ್ರದ ಹೆಗ್ಗಳಿಕೆ ಎಂದರಡ್ಡಿಯಿಲ್ಲ.

ಚಿಕ್ಕಪುಟ್ಟ ಕೊರತೆಗಳ ಹೊರತಾಗಿಯೂ ಕಾಂತಾರ ಚಿತ್ರವು ಒಟ್ಟಾರೆಯಾಗಿ ಗೆದ್ದಿರುವುದು ಸತ್ಯ. ಯಾವುದೇ ಅನಗತ್ಯ ಹೈಪ್-ಬಿಲ್ಡಪ್ ಗಳ ಅಗತ್ಯವಿಲ್ಲದೆ, ಒಬ್ಬರಿಂದೊಬ್ಬರಿಗೆ ಸಾಗಿದ ರೆಕಮಂಡೇಷನ್ನುಗಳ ಸಹಯೋಗದೊಂದಿಗೆ ನೂರಾರು ಆಸಕ್ತರನ್ನು ಚಿತ್ರವು ತಲುಪಿದೆ. ಇವುಗಳಲ್ಲದೆ ದೈವಗಳ ಬಗ್ಗೆ ಬಲ್ಲ ಮತ್ತು ಈ ಬಗ್ಗೆ ಮತ್ತಷ್ಟು ತಿಳಿಯಲು ಆಸಕ್ತರಿರುವ ಸಿನೆಮಾ ಪ್ರೇಮಿಗಳಲ್ಲದವರಲ್ಲೂ ಇದು ಕುತೂಹಲವನ್ನು ಮೂಡಿಸಿದೆ. ಯಾವ ಚಿತ್ರವಾದರೂ ಗಳಿಕೆ-ವಿಮರ್ಶೆ-ಅವಾರ್ಡು-ಸ್ಟಾರ್ ರಿವ್ಯೂಗಳೆಲ್ಲ ಒಬ್ಬ ಸಾಮಾನ್ಯ ವೀಕ್ಷಕನಿಗೆ ಮುಖ್ಯವಾಗುವುದು ಅಷ್ಟರಲ್ಲೇ ಇದೆ. ಹೀಗಾಗಿ ಎಲ್ಲದಕ್ಕಿಂತ ಮುಖ್ಯವಾಗಿ ಇದು ಬಹುಕಾಲ ನೆನಪಿನಲ್ಲುಳಿಯುವ ಚಿತ್ರ ಎಂಬ ಅಂಶವೇ ಕಾಂತಾರದ ನಿಜವಾದ ಗೆಲುವು.

‍ಲೇಖಕರು Admin

October 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: