ಹಾಡ್ಲಹಳ್ಳಿ ನಾಗರಾಜ್ ಅಂಕಣ – ಜೇಡರ ಬಲೆ…

ನೆಲದ ಬನಿಯನ್ನು ಅದ್ಭುತವಾಗಿ ಕಟ್ಟಿಕೊಡುವ ಲೇಖಕರಲ್ಲಿ ಮುಖ್ಯರಾದವರು- ಹಾಡ್ಲಹಳ್ಳಿ ನಾಗರಾಜ್. ಅವರ ಕೃತಿಗಳು ಈಗಾಗಲೇ ಓದುಗರ ಮನ ಸೆಳೆದಿವೆ.

‘ದಾಟು ಹಲಗೆ’ ಅವಧಿಗಾಗಿಯೇ ಅವರು ಬರೆದ ಅಂಕಣ.

ಸಿದ್ಧಗಂಗಾ ಮಠದಲ್ಲಿನ ಅವರ ನೆನಪುಗಳನ್ನು ಓದುಗರಿಗೆ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಓದುಗರಿಗೆ ಇನ್ನಷ್ಟು ಬೇಕು ಎನ್ನುವ ಹಂತದಲ್ಲಿಯೇ ಅಂಕಣಕ್ಕೆ ವಿರಾಮ ನೀಡಲು ಬಯಸಿದ್ದಾರೆ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಪುನರಾರಂಭವಾಗಲಿದೆ.

ಹಾಡ್ಲಹಳ್ಳಿ ನಾಗರಾಜ್ ಅವರಿಗೂ, ಚಲಂ ಹಾಡ್ಲಹಳ್ಳಿ ಅವರಿಗೂ ವಂದನೆಗಳು

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

12

ವಾರದಲ್ಲಿ ಆರು ದಿನ ಎರಡು ಹೊತ್ತು ತಿಳಿಸಾರು ಅನ್ನದ ಊಟ. ಭಾನುವಾರ ಮಾತ್ರ ವಿಶೇಷ. ಬೆಳಗಿನ ಟೀ ಉಪ್ಪಿಟ್ಟು, ತೆಂಗಿನಕಾಯಿ ಹಾಕಿದ ಸಾರು, ರಾತ್ರಿ ಊಟಕ್ಕೆ ಮೊಸರು. ವಾರದ ದಿನ ಬೆಳಗಿನಿಂದ ಸಂಜೆಯವರೆಗೆ ಕಾಲೇಜಿನಲ್ಲಿದ್ದರೆ ಭಾನುವಾರ ಪೂರ್ತಿ ಬಿಡುವು. ಬೆಳಗ್ಗೆ ಬಟ್ಟೆ ಒಗೆಯುವುದು. ಮಧ್ಯಾಹ್ನದವರೆಗೆ ಓದು ಬರಹ. ಸಂಜೆ ಪೇಟೆಯ ಕಡೆಗೆ ಒಂದು ದೀರ್ಘ ವಾಕ್. ಜೇಬಲ್ಲಿ ದುಡ್ಡಿದ್ದರೆ ಹೆಲ್ತ್ ಕ್ಯಾಂಟೀನಿನಲ್ಲಿ ಒನ್ ಬೈಟೂ ಮಸಾಲೆ ದೋಸೆ. ಎಲ್ಲಾ ಸಿನಿಮಾ ಥಿಯೇಟರ್ಗಳ ಸುತ್ತ ಪ್ರದಕ್ಷಿಣೆ, ಆಸೆಯಿಂದ ವಾಲ್ ಪೋಸ್ಟ್ ವೀಕ್ಷಣೆ.

ಮಿಕ್ಕಂತೆ ಎಲ್ಲಾ ದಿನವೂ, ಓದು ಬರಹ ಸೇರಿದಂತೆ, ಅಡಿಗೆ, ಪಾತ್ರೆ ತೊಳೆಯುವುದು ಎಲ್ಲವೂ ಟೈಮ್ ಟೇಬಲ್ಲಿನಂತೆ.
ಬಾತ್ ರೂ ಮು ಟಾಯ್ಲೆಟ್ಗೆ ಹೋಗಿ ಬರುವುದೂ ಸಹಾ ಬೆಳಗ್ಗೆ ಏಳರಿಂದ ಎಂಟರ ಒಳಗೆ. ಅದನ್ನು ನಿಗದಿಪಡಿಸಿದ್ದವರು ಓನರ್. ಆ ವೇಳೆಯಲ್ಲಿ ಮಿಕ್ಕವರಾರೂ ಅಲ್ಲಿ ಸುಳಿಯುವಂತಿಲ್ಲ.
ರೂಮೊಳಗಿದ್ದಾಗ ಒಳಗಿನಿಂದ ಚಿಲಕ ಹಾಕಿಕೊಂಡು ಗೃಹಬಂಧನ.

ರೂಮಿನಿಂದ ಹೊರಟಾಗ ಶೆಟ್ಟಿಯ ಎಂದಿನ ತಿರಸ್ಕಾರದ ನೋಟ, ವೆಂಕಟರಮಣ ಜೊತೆಯಲ್ಲಿಲ್ಲದ ವೇಳೆ ಕಾಮಾಕ್ಷಿಯ ಸಣ್ಣ ಕಿರುನಗೆ .ಅದೇನಾದರೂ ಅವನ ಗಮನಕ್ಕೆ ಬಂದರೆ ‘ನಿನಗೆ ಬಯಲು ಸೀಮೆ ಗಾಳಿ ಒಗ್ಗಿ ಬಿಟ್ಟಿದೆ ಕಣಾ. ಮಠದ ಮುದ್ದೆ ತಿಂದ ಮೇಲೆ ಮೈ ಕೈ ತುಂಬಿಕಂಡಿದೀಯಾ. ಮೀಸೆನೂ ಮೂಡಿದಾವೆ.. ಹಂಗಾಗೆ ಹುಡುಗೀರು ನಿನ್ನ ಕಡೆ ನೋಡಿ ನಗೆ ಬೀರ್ತಾರೆ’ ಎಂದು ಛೇಡಿಸುತ್ತಿದ್ದ.

‘ಇದೆಲ್ಲದರ ನಡುವೆ ನಮ್ಮ ಓದೂ ಬಹಳ ಶಿಸ್ತಿನಿಂದ ಅಚ್ಚುಕಟ್ಟಾಗಿ ಸಾಗಿತ್ತು’.

ನಾವು ಯಾವುದೇ ಸುದ್ದಿಗೆ ಗಮನ ಹರಿಸದೆ ನಮ್ಮ ಪಾಡಿಗೆ ನಾವು ಇದ್ದು ಬಿಟ್ಟಿದ್ದೆವು. ಹಾಗಿದ್ದಾಗಲೂ ಹೊರಗಡೆ ರೂಮಿನಲ್ಲಿದ್ದ ಹುಡುಗಿಯರ ಸುದ್ದಿ ಜನರ ಬಾಯಲ್ಲಿ ಹರಿದಾಡುತ್ತ ನಮ್ಮ ಕಿವಿಗೂ ಬೀಳುತ್ತಿತ್ತು. ಕಾಮಾಕ್ಷಿ ಒಬ್ಬ ಕಾಲೇಜು ಹುಡುಗನ ಗೆಳೆತನ ಬೆಳೆಸಿರುವ ಬಗ್ಗೆ, ಅವನೊಂದಿಗೆ ಓಡಾಡುತ್ತಿರುವ ಬಗ್ಗೆ ಮೊದ ಮೊದಲಿಗೆ ಗುಸು ಗುಸು ನಡೆದಿತ್ತು.

ಕ್ರಮೇಣ ವಾರಾಂತ್ಯದಲ್ಲಿ ರೂಮಿಗೆ ಬರುತ್ತಿದ್ದುದನ್ನು ಆಕೆ ಕಡಿಮೆ ಮಾಡಿದ್ದಳು. ಶನಿವಾರ ಊರಿಗೆ ಹೋಗುವುದಾಗಿ ತನ್ನ ಗೆಳತಿಯ ಬಳಿ ಹೇಳಿ ಭಾನುವಾರ ಸಂಜೆ ವಾಪಾಸು ಬರುತ್ತಿದ್ದಳು.

ಕಿಶೋರ್ ಎಂಬ ಶ್ರೀಮಂತ ಹುಡುಗನೊಂದಿಗೆ ಆ ದಿನಗಳಲ್ಲಿ ಗುಬ್ಬಿ ಗೇಟ್ ಸರ್ಕಲ್ನಲ್ಲಿ ತಿರುಗಾಡುತ್ತಿರುತ್ತಾಳೆಂದೂ, ಒಮ್ಮೊಮ್ಮೆ ಅಲ್ಲಿನ ಲಾಡ್ಜ್ ನಿಂದ ಇಬ್ಬರೂ ಹೊರಬರುವುದನ್ನು ಜನ ಕಂಡಿದ್ದಾರೆಂದೂ ಗುಟ್ಟು ಹರಿದಾಡಿತು. ಅದರ ವಾಸನೆ ಅವರ ಹಳ್ಳಿಯ ಮನೆಗೂ ಬಡಿಯಿತು.

ಒಂದು ಶನಿವಾರ ರಾತ್ರಿ ಅವಳ ತಾಯಿ ಊರಿಂದ ಬಂದಳು. ಅವಳು ಊರಿಗೆ ಹೋಗುವುದಾಗಿ ಬೆಳಗ್ಗೆಯೇ ತಿಳಿಸಿ ಹೋಗಿರುವುದಾಗಿ ಅವಳ ಸಹಪಾಠಿ ಹೇಳಿದಳು. ಅವಳ ತಾಯಿ ಅಲ್ಲಿಯೇ ಕಾದಳು. ಭಾನುವಾರ ರಾತ್ರಿ ಕಾಮಾಕ್ಷಿ ರೂಮಿನ ಬಳಿ ಬಂದಳು. ಅವಳೊಂದಿಗೆ ಆ ಹುಡುಗ. ಕಾದಿದ್ದ ಅವಳ ಅಮ್ಮಪೊರಕೆ ತೆಗೆದುಕೊಂಡು ಅವನಿಗೆ ಚೆನ್ನಾಗಿ ಬಾರಿಸಿದಳು. ಬೆಳಗ್ಗೆ ಮಗಳನ್ನೆಳೆದುಕೊಂಡು ಊರಿಗೆ ಹೋದಳು.

ಮನೆಯವರೆಲ್ಲಾ ಸೇರಿ ಅವಳಿಗೆ ಚೆನ್ನಾಗಿ ತದಕಿ ಬುದ್ಧಿ ಹೇಳಿದರು. ಇನ್ನೆಂದೂ ಅವನ ಸಹವಾಸ ಮಾಡುವುದಿಲ್ಲವೆಂದು ಒಪ್ಪಿಕೊಂಡಳು.

‘ಹೋಗಿ ಪರೀಕ್ಷೆ ಬರೆದು ಬಂದು ಬಿಡು’ ಎಂದು ಒಂದು ವಾರ ಕಳೆದು ಮತ್ತೆ ಕಳಿಸಿಕೊಟ್ಟರು.
ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದಂತಿತ್ತು.

ಫೆಬ್ರವರಿ ತಿಂಗಳೂ ಬಂತು. ಫೈನಲ್ ಡಿಗ್ರಿ ಪರೀಕ್ಷೆಗೆ ಎರಡೇ ತಿಂಗಳು ಬಾಕಿ. ಅದಕ್ಕೆ ಒಂದೆಡೆ ನಮ್ಮ ಸಿದ್ಧತೆ ಭರದಿಂದ ಸಾಗಿದ್ದರೆ, ಇನ್ನೊಂದೆಡೆ ಶಿವರಾತ್ರಿಯ ಕಾವು ಏರುತ್ತಿತ್ತು.

ಶಿವರಾತ್ರಿ ಬಂತೆಂದರೆ ಇಡೀ ಜಿಲ್ಲೆಯಲ್ಲಿ, ಅದರಲ್ಲೂ ಸಿದ್ಧಗಂಗಾ ಮಠದಲ್ಲಿ ಬಹಳ ಸಂಭ್ರಮ. ಹಬ್ಬದ ವಿಶೇಷ ಆಚರಣೆಗಳ ಜೊತೆಗೆ ತಿಂಗಳ ಕಾಲ ನಡೆಯುವ ದನಗಳ ಜಾತ್ರೆ.

‘ಇದೇ ಕೊನೆಯ ವರ್ಷ. ಪರೀಕ್ಷೆ ಬರೆದು ಹೋದರೆ ಮತ್ತೆ ಬರುವ ಅವಕಾಶವಿಲ್ಲ. ಸಿದ್ಧಗಂಗೆ ಜಾತ್ರೆ ತಪ್ಪಿಸಬಾರದು’ ಎಂದು ನಾವಿಬ್ಬರೂ ಮಾತಾಡಿಕೊಂಡಿದ್ದೆವು.

‘ಸುಮ್ಮನೆ ಕಾಲ ವ್ಯರ್ಥ ಮಾಡುವುದು ಬೇಡ. ತೆಪ್ಪೋತ್ಸವ ಹೇಗೂ ಭಾನುವಾರವೇ ಬರುತ್ತದೆ. ಅಂದು ಹೋಗಿ ಬೆಳಗಿನಿಂದ ಸಂಜೆಯವರೆಗೂ ತಿರುಗಾಡಿಕೊಂಡು ಬರೋಣ’ ಎಂದು ವೆಂಕಟರಮಣ ಹೇಳಿದ್ದ.

ದನದ ಜಾತ್ರೆ ಶುರುವಾದಾಗಿನಿಂದಲೂ ಮಠದಲ್ಲಿ ಜನ ಜಂಗುಳಿಯಿದ್ದರೂ ಶಿವರಾತ್ರಿಯ ತೆಪ್ಪೋತ್ಸವದ ದಿನ ಬೆಳಗ್ಗಿನಿಂದಲೇ ಪ್ರವಾಹದೋಪಾದಿಯಲ್ಲಿ ಜನ ಹರಿದು ಬರುತ್ತಿದ್ದರು. ಸಂಜೆಯ ವೇಳೆಗಂತೂ ಜನ ಸಾಗರವೇ.

ನಾವು ಮಠದ ಆವರಣದ ಜನಜಂಗುಳಿಯ ನಡುವೆಯೇ ಕೆಲ ಕಾಲ ತಿರುಗಾಡಿ ನಂತರ ಒಂದು ಎತ್ತರದ ಕಟ್ಟಡ ಏರಿ ನಿಂತು ವೀಕ್ಷಿಸಿದೆವು. ನೆಲವೇ ಕಾಣದಷ್ಟು ಜನ ಸಾಗರ. ಇರುವೆಗಳಂತೆ ಜನ ಪುತುಗುಡುತ್ತಿದ್ದಾರೆ. ಅವರ ತಲೆಗಳು ಮಾತ್ರ ಮೇಲಿನಿಂದ ಗೋಚರಿಸುತ್ತಿವೆ.

ಜನ ಸಂದಣಿಯ ನಡುವೆ ಮುಚ್ಚಿ ಹೋದಂತೆ ತೋರುವ ವಿವಿಧ ತಿಂಡಿ ಅಂಗಡಿಗಳು, ಕರಕುಶಲ ವಸ್ತುಗಳ ಮಳಿಗೆಗಳು, ಸಣ್ಣ ಪುಟ್ಟ ಹೋಟೆಲುಗಳು, ಜನರ ಗದ್ದಲದ ನಡುವೆ ಈ ಅಂಗಡಿ ಹೋಟೆಲುಗಳಿಂದ ಹೊಮ್ಮುತ್ತಿದ್ದ ಚಿತ್ರ ವಿಚಿತ್ರ ಸದ್ದು ಬೇರೆ.

ಒಂದೆಡೆ ಅಗಲವಾದ ಒಂದು ಕಾವಲಿಯ ಮೇಲೆ ಏಕಕಾಲಕ್ಕೆ ಹತ್ತಾರು ಮಸಾಲೆ ದೋಸೆಗಳನ್ನು ಹುಯ್ಯುತ್ತಿದ್ದರು. ಕಾದ ಕವಲಿಯ ಮೇಲೆ ಎಣ್ಣೆ ತಿಕ್ಕಿ ಅದರ ಮೇಲೆ ನೀರು ಚಿಮುಕಿಸಿದಾಗ ‘ಚೊಂಯ್’ ಎಂದು ಸದ್ದು ಮಾಡುತ್ತಾ ಮೇಲೇಳುತ್ತಿದ್ದ ಆವಿ. ಹುಯ್ದ ದೋಸೆಗಳ ಮೇಲೆ ಸವರುತ್ತಿದ್ದ ಹಳದಿ ಚಟ್ನಿ, ಅದರ ಮೇಲೆ ಹದವಾಗಿ ಹರಡುತ್ತಿದ್ದ ಆಲೂಗಡ್ಡೆ ಪಲ್ಯ ಕಾವಲಿಯ ಶಾಖಕ್ಕೆ ಬೇಯುತ್ತಾ ಹೋದಂತೆ ಹರಡುತ್ತಿದ್ದ ಪರಿಮಳ ಮೇಲೆ ನಿಂತಿದ್ದ ನಮ್ಮ ಮೂಗಿಗೂ ತಾಕಿ ಬಾಯಲ್ಲಿ ನೀರೂರಿಸಿ ಬಿಟ್ಟಿತು.

‘ದನದ ಜಾತ್ರೆ, ವಸ್ತು ಪ್ರದರ್ಶನ ಎಲ್ಲಾ ತಿರುಗಾಡಿ ಸಂಜೆಯ ವೇಳೆಗೆ ಮತ್ತೆ ಬರೋಣ…. ಬೇರೆ ಏನೂ ಖರ್ಚು ಮಾಡುವುದು ಬೇಡ… ಒಂದೊಂದು ಮಸಾಲೆ ದೋಸೆ ತಿಂದು ನಂತರ ತೆಪ್ಪೋತ್ಸವ ನೋಡಲು ಹೋಗಬಹುದು’ ಎಂದ ವೆಂಕಟರಮಣ.

ವಸ್ತುಪ್ರದರ್ಶನ, ದನಗಳ ಜಾತ್ರೆ ದಾಟಿದರೆ ಸಿನಿಮಾ ಟೆಂಟುಗಳು. ಮಧ್ಯಾಹ್ನದ ಎರಡು ಗಂಟೆಯ ಶೋಗೆ ಲೌಡ್ ಸ್ಪೀಕರ್ ಮುಖಾಂತರ ಪ್ರಚಾರ ನಡೆದಿತ್ತು.

ಎದುರಿನ ಟೆಂಟಿನಲ್ಲಿ ‘ಒಂದೇ ಬಳ್ಳಿಯ ಹೂಗಳು’ ಸಿನಿಮಾ. ವಾಲ್ ಪೋಸ್ಟ್ ನೋಡುತ್ತಾ ನಿಂತಿದ್ದೆವು.
‘ಈ ದಿನ ಮಧ್ಯಾಹ್ನದ ಆಟ ‘ಜೇಡರ ಬಲೆ’ ನೋಡಲು ಮರೆಯದಿರಿ. ಮರೆತು ನಿರಾಶರಾಗದಿರಿ” ಪಕ್ಕದ ಟೆಂಟಿನ ಧ್ವನಿವರ್ಧಕದಿಂದ ಹೊರಟ ಮಾತು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯಿತು.

‘ಹಿಂದಿನ ವರ್ಷವಷ್ಟೇ ಥಿಯೇಟರುಗಳಿಗೆ ರಿಲೀಜ್ ಆಗಿದ್ದ ‘ಜೇಡರ ಬಲೆ’ಯನ್ನು ಬಹುತೇಕ ಕಾಲೇಜು ಹುಡುಗರು ನೋಡಿದ್ದರು. ಆದರೆ ನಾವು ನೋಡಿರಲಿಲ್ಲ.

ಅದರ ಬಗೆಗಿನ ಪ್ರಶಂಸೆ, ಆಕರ್ಷಕ ವಾಲ್ ಪೋಸ್ಟ್ ಎಲ್ಲ ನೆನಪಾಗಿ ಆಸೆಯಿಂದ ಆ ಕಡೆ ಹೆಜ್ಜೆ ಹಾಕಿದೆವು. ಅಲ್ಲಿ ಜನ ಕಿಕ್ಕಿರಿದಿದ್ದರು. ಈ ಜುಡುಗೆಯಲ್ಲಿದ್ದ ಜಯಂತಿಯ ಅಂಗಸೌಷ್ಟವ ನೋಡಲು ವಾಲ್ ಪೋಸ್ಟ್ ಎದುರು ಜನ ನೂಕಾಡುತ್ತಿದ್ದರು. ನಾವೂ ಅವರಲ್ಲಿ ಸೇರಿಕೊಂಡು ಕಣ್ಮನ ತಣಿಸಿಕೊಳ್ಳ ತೊಡಗಿದೆವು.

‘…. ಮರೆತು ಮರುಗದಿರಿ’ ಮತ್ತೆ ಮೈಕ್ ಅರಚಿತು.
ವೆಂಕಟರಮಣ ನನ್ನ ಮುಖಭಾವ ಓದುವವನಂತೆ ನೋಡಿದ.
‘ನೋಡಾಣ್ವೇನಾ’? ಎಂದ .‘ಹೂಂ’ ಎಂದೆ. ‘ಹಂಗಾದ್ರೆ ಮಸಾಲೆ ದೋಸೆ ಇಲ್ಲ’ ಎನ್ನುತ್ತಾ ಚಿಲ್ಲರೆ ತೆಗೆದು ನನ್ನ ಕೈಗೆ ಹಾಕಿ ‘ಟಿಕೆಟ್ ತಗಾ’ ಎನ್ನುತ್ತಾ ವಾಲ್ ಪೋಸ್ಟ್ ಬಳಿ ಹೋಗಿ ಸ್ವಿಮ್ ಸೂಟಿನ ಜಯಂತಿಯನ್ನು ನೋಡುತ್ತಾ ನಿಂತುಕೊಂಡ.

ಕ್ಯೂ ಸಾಗುತ್ತಾ ನಾನು ವಾಲ್ ಪೋಸ್ಟ್ ಸಮೀಪ ಬಂದಿದ್ದೆ. ನನ್ನ ಹಿಂದಿನ ಕ್ಯೂ ಬಹಳ ರಷ್ಷಾಗಿತ್ತು. ದೂರದಲ್ಲಿ ಕಾಮಾಕ್ಷಿ ತನ್ನ ಗೆಳತಿಯೊಂದಿಗೆ ಬರುವುದು ಕಾಣಿಸಿತು. ಕ್ಯೂನ ಹಿಂದೆ ಸೇರಿಕೊಂಡರೆ ಅವರಿಗೆ ಟಿಕೆಟ್ ಸಿಕ್ಕುವ ಸಾಧ್ಯತೆ ಇರಲಿಲ್ಲ. ನಾನು ಮುಂದೆ ನಿಂತಿರುವುದು ಅವರಿಗೆ ಕಂಡಿತು. ಮುಖ ಅರಳಿಸಿಕೊಂಡು ನನ್ನ ಬಳಿ ಓಡಿ ಬಂದು ‘ನಮಗೂ ಟಿಕೆಟ್ ತಗಳ್ರಿ’ ಎಂದು ಬೇಡಿಕೆಯಿಟ್ಟಳು ಕಾಮಾಕ್ಷಿ. ನನಗೆ ಏನು ಹೇಳಬೇಕೆಂದು ತೋಚಲಿಲ್ಲ.
‘ರೀ ರೀ ತಕ್ಕೊಡ್ರಿ..’ ಕಾಮಾಕ್ಷಿ ಬೇಡಿಕೊಳ್ಳುತ್ತಿದ್ದಳು. ಅಲ್ಲೇ ಸನಿಹದಲ್ಲೆ ಇದ್ದ ವೆಂಕಟರಮಣ ಓಡಿ ಬಂದು ನನ್ನನ್ನು ಕ್ಯೂನಿಂದ ಈಚೆಗೆ ಎಳೆದುಕೊಂಡು ‘ಸಿನಿಮಾ ಬೇಡ ಬಾ’ ಎಂದ. ಇನ್ನೇನು ಟಿಕೆಟ್ ಕೈಗೆ ಬಂದು ಟೆಂಟ್ ಒಳಗೆ ಹೋಗಿ ಸಿನಿಮಾ ಸವಿಯ ಬೇಕೆಂದಿದ್ದ ನನಗೆ ನಿರಾಸೆಯಾಯಿತು.

ಸ್ವಲ್ಪ ದೂರ ಎಳೆದುಕೊಂಡು ಹೋದ ಅವನು ‘ನನಗೂ ಬಹಳ ನಿರಾಸೆ ಆಯ್ತು ಮಾರಾಯ…. ಅವರು ಇಲ್ಲಿಗೂ ಬಂದ್ರಲ್ಲ’ ಎಂದು ನಿಟ್ಟುಸಿರು ಬಿಟ್ಟ.

‘ಜಯಂತಿಯ ಜೇಡರ ಬಲೆ ನೋಡದೇ ಇದ್ರೆ ಅಷ್ಟೇ ಹೋಯ್ತು. ಡಿಗ್ರಿ ಪಾಸ್ ಮಾಡದ್ ನೋಡಾಣ ಬಾ’ ಎನ್ನುತ್ತಾ ತುಮಕೂರಿನ ದಾರಿಯಲ್ಲಿ ಹೆಜ್ಜೆ ಹಾಕತೊಡಗಿದ.

ಅಡಿಗೆ, ಊಟ, ಓದು, ಇಷ್ಟರಲ್ಲೇ ತಲ್ಲೀನರಾಗಿದ್ದ ನಮಗೆ ತಿಂಗಳು ಕಳೆದದ್ದೇ ತಿಳಿಯಲಿಲ್ಲ.
ಪರೀಕ್ಷೆ ಶುರುವಾಯಿತು. ಸಾಕಷ್ಟು ಪರಿಶ್ರಮ ಹಾಕಿದ್ದ ನಮಗೆ ಪರೀಕ್ಷೆ ಎದುರಿಸುವುದೇನೋ ಅಂತಹಾ ಕಷ್ಟ ಎನಿಸಲಿಲ್ಲ.

ಇನ್ನೇನು ಕೊನೆಯ ದಿನ. ಅಂದು ರಾತ್ರಿ ಮನೆಯ ವಾತಾವರಣದಲ್ಲಿ ಏನೋ ಪ್ರಕ್ಷುಬ್ದತೆ ಇದ್ದಂತಿತ್ತು. ಹೊರಗಡೆ ರೂಮಿಗೆ ಕಾಮಾಕ್ಷಿಯ ತಾಯಿ ಇನ್ನೊಬ್ಬ ಬಂಧುವಿನೊಂದಿಗೆ ಬಂದಿದ್ದಳು. ಓನರ್ ಮನೆಯಲ್ಲಿ ರೂಮಿನ ಹುಡುಗಿಯರ ಹೆಸರು ಹಿಡಿದು ಗುಸು ಗುಸು ಮಾತಾಡಿಕೊಳ್ಳುತ್ತಿದ್ದುದು ಕೇಳಿಸಿತು. ಅದೆಲ್ಲಾ ನಮಗ್ಯಾಕೆ ಎಂದುಕೊಂಡು ಕೊನೆಯ ದಿನದ ಪರೀಕ್ಷೆಯ ಸಿದ್ಧತೆಗೆ ಗಮನ ಹರಿಸಿದೆವು.

ಮಧ್ಯಾಹ್ನಕ್ಕೆ ಪರೀಕ್ಷೆ ಮುಗಿಯಿತು. ‘ಇನ್ನೇನು ಪಾರಾದೆವು. ನಾಳೆ ಊರ ಕಡೆ ಹೊರಡುವುದೇ’ ಎಂದು ಕೊಳ್ಳುತ್ತಾ ಅದೇ ವಿಷಯ ಚರ್ಚಿಸಿಕೊಂಡು ರೂಮ ಬಳಿ ಬಂದೆವು. ಶೆಟ್ಟಿಯ ಅಂಗಡಿಯ ಬಳಿ ಮೂರ್ನಾಲ್ಕು ಜನ ಹಳ್ಳಿಯ ಗಂಡಸರು ನಿಂತುಕೊಂಡು ಬೀಡಿ ಸೇದುತ್ತಾ ಶೆಟ್ಟಿಯೊಂದಿಗೆ ಮಾತಿಗೆ ತೊಡಗಿದ್ದರು.

ನಾವು ಸಮೀಪಿಸಿದಂತೆ ನಮ್ಮನ್ನೇ ತದೇಕವಾಗಿ ನೋಡಿದರು.
ಯಾರಾದರೇನು ನಮಗೇನಂತೆ ಎಂಬಂತೆ ನಮ್ಮ ಪಾಡಿಗೆ ನಾವು ರೂಮಿನ ಕಡೆ ಹೋದೆವು.
‘ನೋಡಿ ಹೆಂಗೆ ಕೊತ್ತಿಯಂಗೆ ಹೋಗ್ತಾ ಇದಾರೆ.. ಇಂತಾ ಮನೆ ಹಾಳರನ್ನೆಲ್ಲಾ ಮನೆಯೊಳಗೆ ಸೇರಿಸಿಕೊಂಡ್ರೆ ಏನಾಗುತ್ತೆ.. ಇವರನ್ನ ಹಿಡಿದು ಚೆನ್ನಾಗಿ ತದಕಬೇಕು’ ಎಂದು ಶೆಟ್ಟಿ ಹೇಳುತ್ತಿದ್ದ.

ನಾವು ಮಾಮೂಲಿನಂತೆ ರೂಮೊಳಗೆ ಹೋಗಿ ಬಾಗಿಲು ಹಾಕಿಕೊಂಡೆವು.

ಅಂಗಡಿ ಬಳಿ ಇದ್ದವರು ಮುಂದಿನ ರೂಮಿನ ಬಳಿಗೆ ಬಂದರು.

‘ನಮ್ಮ ಹುಡುಗಿಯರನ್ನು ತಂದು ಇಂತಾ ಕಡೆ ಬಿಟ್ಟವಲ್ಲ… ನಮ್ಮದೇ ತಪ್ಪು’ ಎಂದು ಒಬ್ಬ ಆವೇಶದಿಂದ ಹೇಳುತ್ತಿದ್ದ.

‘ಈ ಸೂಳೆ ಮಕ್ಳ ಸುಮ್ನೆ ಬಿಡ ಬಾರ್ದು ಬಾವ’ ಇನ್ನೊಬ್ಬ ಗುಡುಗಾಡುತ್ತಿದ್ದ.
ನಮ್ಮನ್ನೇ ಉದ್ದೇಶಿಸಿ ಅವರು ಮಾತಾಡುತ್ತಿದ್ದಾರೆ ಎಂಬುದು ತಿಳಿದು ಭಯವಾಯಿತು.
ಏನೂ ತಪ್ಪು ಮಾಡದ ನಾವು ಇದ್ಯಾವ ಬಲೆಯಲ್ಲಿ ಸಿಲುಕಿಕೊಂಡು ಬಿಟ್ಟೆವು… ಅದೂ ಪರೀಕ್ಷೆ ಮುಗಿಸಿ ಸಂಭ್ರಮದಿಂದ ಊರಿಗೆ ಹೋಗಬೇಕಾದ ದಿನ… ಏನು ಮಾಡುವುದು.. ತೋಚದೆ ಕಸಿವಿಸಿಗೊಳಗಾಗ ತೊಡಗಿದೆವು.
ಹೊರಗಿನ ರೂಮಿನ ಬಾಗಿಲು ತೆರೆದುಕೊಂಡಿತು. ಕಾಮಾಕ್ಷಿಯ ತಾಯಿ ಮಗಳ ಬೆನ್ನಿಗೆ ಗುದ್ದುತ್ತಾ ‘ಈ ಮುಂಡೆಗೆ ಯಾಕೆ ಬೇಕಾಗಿತ್ತು… ಅವನು ಯಾವನನ್ನೊ ಕಟ್ಟಿಗೊಂಡು ಕುಣುದ್ಲಲ್ಲ… ಪಾಪ, ಈ ಹುಡುಗರ ಮೇಲೆ ಯಾಕೆ ಇಲ್ಲದ್ದು ಹೇಳಿ ಪಾಪ ಕಟ್ಟಿಕೊಳ್ತೀರಿ… ಎಂದು ಅಳುತ್ತಲೇ ಹೇಳುತ್ತಿದ್ದುದು ರೂಮಿನಲ್ಲಿದ್ದ ನಮಗೆ ಕೇಳುತ್ತಿತ್ತು.
ಕ್ಷಣಕಾಲ ಹೊರಗೆ ನಿಶ್ಶಬ್ಧ ಆವರಿಸಿತು.

‘ಈಗ ನಡಿರಿ.. ಆಸ್ಪತ್ರೆಗೆ ಹೋಗಿ ಇವ್ಳ ಹೊಟ್ಟೆಲಿರ ಪಾಪ ತಗ್ಸದ ನೋಡಾಣ’ ಎಂದು ಅವಳೇ ಹೇಳುತ್ತಿದ್ದಳು.
ಬೆಳಗ್ಗೆ ಎದ್ದು ಟ್ರಂಕು ಬೆಡ್ಡು ಕಟ್ಟಿಕೊಂಡು ಊರ ದಾರಿ ಹಿಡಿಯಲು ಬಸ್ ನಿಲ್ದಾಣದ ಕಡೆ ಹೊರಟೆವು.
ಒಂದು ತಿಂಗಳು ಕಳೆದು ಪರೀಕ್ಷೆಯ ರಿಜಲ್ಟ್ ಬಂದಿತು.

ನಾವಿಬ್ಬರೂ ಪದವಿ ಪರೀಕ್ಷೆಯಲ್ಲಿ ಪಾಸಾಗಿದ್ದೆವು.

| ಮುಕ್ತಾಯ ।

‍ಲೇಖಕರು Admin

October 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: