ಪ್ರದೀಪ ಆರ್ ಎನ್ ಓದಿದ ‘ಬದುಕು’

ಈ ಶತಮಾನದ ಆರಂಭದ ದಲಿತ ಮಹಿಳಾ ಮಹಾ ಕಾದಂಬರಿ ‘ಬದುಕು’

ಪ್ರದೀಪ ಆರ್ ಎನ್

ಗೀತಾ ನಾಗಭೂಷಣ ಅವರ ಪ್ರಸಿದ್ಧ ಕಾದಂಬರಿ ‘ಬದುಕು’ ೨೧ನೇ ಶತಮಾನದ ಆರಂಭದಲ್ಲಿ(೨೦೦೧)ಪ್ರಕಟಗೊಂಡಿತು.  ಕನ್ನಡದ ಮೊದಲ ಮಹಿಳಾ ಸಾಹಿತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ತಂದುಕೊಟ್ಟ ಕಾದಂಬರಿ ಇದು. ಕನ್ನಡ ದಲಿತ ಸಾಹಿತ್ಯದ ಅಧ್ಯಯನದಲ್ಲಿ ನಾವು ಓದಲೇ ಬೇಕಾದ ಒಂದಷ್ಟು ಪಠ್ಯಗಳನ್ನು ಪಟ್ಟಿಮಾಡಿದಾಗ; ಚೋಮನದುಡಿ, ಊರು-ಕೇರಿ, ಕುಸುಮಬಾಲೆ,ಗವರ್ನಮೆಂಟ್ ಬ್ರಾಹ್ಮಣ ಇಂಥ ಕೆಲವು ಕೃತಿಗಳನ್ನು ಸೂಚಿಸಲಾಗುತ್ತೆ. ಆದರೆ ಗೀತಾನಾಗಭೂಷಣರ ‘ಬದುಕು’ ಕಾದಂಬರಿ ಅದರ ಉತ್ತರ ಕರ್ನಾಟಕದ ಕಲ್ಬುರ್ಗಿ ಭಾಷೆಯ ದೃಷ್ಟಿಯಿಂದಲೋ, ಇಲ್ಲಾ ಅದು ಗಾತ್ರದಲ್ಲಿ ದೊಡ್ಡದು(೫೦೦ಪುಟಗಳು) ಎಂಬ ಕಾರಣಕ್ಕೊ ಏನೋ ಓದುಗರ ಗಮನವನ್ನಾಗಲಿ ಮತ್ತು ಮೇಲೆ ಸೂಚಿಸಿದ ಪಠ್ಯಗಳ ಸಾಲಿನಲ್ಲಾಗಲಿ ಕಾಣಸಿಗದಾಗಿದೆ.

ಈ ಕಾದಂಬರಿ ಓದಿದಾಗ ನನಗೆ ತೋರಿದ ವಿಚಾರವೆಂದರೆ ಈಗಾಗಲೇ ಹೆಸರಿಸಿದ ಮೇಲಿನ ಪ್ರಮುಖ ಕೃತಿಗಳ ಎಲ್ಲಾ ಸಾರವೂ ಇದೊಂದೆ ಕಾದಂಬರಿಯಲ್ಲಿ ಅಭಿವ್ಯಕ್ತವಾಗಿದೆ ಎಂದರೆ ಸುಳ್ಳಗಲಾರದು. ಗೀತಾನಾಗಭೂಷಣ ಅವರು ತಮ್ಮ ಕಲ್ಬುರ್ಗಿ ನೆಲದ ಸುತ್ತಮುತ್ತಲಿನ ಹಳ್ಳಿಗಾಡಿನ ಹಾಗೂ ತಾವು ಕಂಡ ದಲಿತ ಜನರ ಲೋಕವನ್ನ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ದಲಿತ ವರ್ಗದ ಸಂಸ್ಕೃತಿ, ರಾಜಕೀಯ, ಕಾಮ, ಹೆಣ್ಣಿನ ಪ್ರತಿರೋಧ, ನೋವಿನ ನಡುವೆಯೂ ಆ ಮುಗ್ಧ ಜನರ ಹಾಸ್ಯ ಎಲ್ಲವನ್ನೂ ಒಳಗೊಂಡ ಒಂದು ಮಹಾ ಕಾದಂಬರಿ ಇದು. 

ಬದುಕು ಕಾದಂಬರಿ ಈಗ ಬದುಕ್ಕುತ್ತಿರು, ಹಿಂದೆ ಬದುಕಿದ್ದ, ಮುಂದೆ ಬದುಕಬೇಕಾದ ತನ್ನ ಜನರ ಆಗು-ಹೋಗು-ಇರುವಿಕೆಯನ್ನು ಹೇಳುತ್ತಾ ಹೋಗುತ್ತದೆ. ಮೇಗಲಕೇರಿಯ ಗೌಡರ ಮಗ ತನ್ನ ಪ್ರಿಯತಮ ಲಿಂಗರಾಜುವಿಗಾಗಿ ಗಂಡನನ್ನೆ ಬಿಟ್ಟು ಬರುವ ಕಾಶಮ್ಮ. ಅವಳಿಗಾಗಿ ಹೆಂಡತಿ ನೀಲವ್ವನನ್ನೆ ಬಿಟ್ಟು ಬರುವ ಲಿಂಗರಾಜು. ಅಮ್ಮನವರ ಗುಡಿಯ ಪೂಜಾರಿ ಸಾಬಯ್ಯನ ಸೇಂದಿಯನ್ನೆಲ್ಲಾ ಪೂಜೆಯ ಹೆಸರಿನಲ್ಲಿ ಸ್ವಾಹ ಮಾಡುವುದು. ಕೇರಿಯ ಹೆಂಗಸರೆಲ್ಲಾ ಖುಷಿಯಾಗಲಿ, ದುಃಖವಾಗಲಿ ಸೇಂದಿ ಕುಡಿದು ತೇಲುವುದು ಸಹಜವೆಂಬಂತೆಯೇ ಮೂಡಿಬಂದಿದೆ.

ದೇವಿಗೆ ಜೋಗತಿ ಬಿಡುವ ಮೂಲಕ ಕೇರಿಯ ಹೆಣ್ಣುಮಕ್ಕಳು ಉಳ್ಳವಾರ ತೀಠೆಗೆ ಬಲಿಯಾಗುತ್ತಾರೆ. ಇದರಲ್ಲಿ ನೀಲವ್ವ ಕೂಡ ಒಬ್ಬಳು. ತನ್ನ ಪ್ರಿಯಕರ ತುಕಾರಾಮನನ್ನು ಪ್ರೀತಿಸಿ ಮದುವೆಯಾಗಬೇಕೆಂದು ಕನಸುಕಂಡಿದ್ದ ನೀಲವ್ವ ತನ್ನವ್ವನ ಹರಕೆಗಾಗಿ ಜೋಗತಿಯಾಗುತ್ತಾಳೆ. ನಂತರ ಊರಿನ ಗೌಡನಿಂದ ಅತ್ಯಾಚಾರಕ್ಕೂ ಒಳಗಾಗುತ್ತಾಳೆ. ಕೊನೆಗೆ ನೊಂದ ನೀಲವ್ವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವಳು. ಈ ಜೋಗತಿ ಬಿಡುವ ಅನಿಷ್ಟ ಪದ್ಧತಿಯನ್ನು ಅಲ್ಲಿ ವಿದ್ಯಾವಂತರಾದ ಯಾವ ಮೇಲ್ವರ್ಗದ ಪುರುಷರು ಪ್ರಶ್ನಿಸುವುದಿಲ್ಲ.

ಇಡೀ ಕಾದಂಬರಿಯಲ್ಲಿ ಅಕ್ಷರ ಕಲಿಯದ ಮಲ್ಲವ್ವ ಮಾತ್ರ ಇದನ್ನ ಸೂಕ್ಷವಾಗಿ ಪ್ರಶ್ನಿಸುತ್ತಾಳೆ. “ನನಗ್ಯಾಕೋ ಸಂಶ ಬರ್ತದ ನೋಡು… ಆ ದೇವತಿ ಈ ಹೆಣ್ಣು ಪೋರಿಗೊಳಿಗೆ ‘ಜೋಗಣಿ’ ಆಗಿ ಹಾದರ ಮಾಡಂತ ಹೇಳ್ತಾಳಂತಿ? ಅಕಿನೂ ಹೆಣ್ಣಲ್ಲ? ದೇವರಾದ್ರೆನೂ ದೆವ್ವಾದ್ರೆನೂ ಹೆಣ್ಣ ಹೆಣ್ಣೇ ಅಲ್ಲೇನು? ಹಿಂತ ಹಲ್ಕಟ್ ಹರಕಿ ಮಾಡ್ರಿ ಅಂತ ಹೇಳ್ತಾಳೇನು ದೇವಿ… ಮತ್ತ ಹಿಂತಾ ಹರಕಿ, ಅದೇ ಕೆಳಜಾತಿ ಮಂದಿನೇ ಮಾಡ್ತಾರ…ಮ್ಯಾಲಿನ ಜಾತಿ ಮಂದಿ ತಮ್ಮ ಹೆಂಗಸರಿಗಿ ಹಿಂಗ್ ಜೋಗಣಿ ಬಿಡ್ತಾರಾ ಎಂದರೆ? ಅವರಿಗಿಲ್ಲದ ಹರಕಿ ಇವರಿಗ್ಯಾಕೋ…ಇದರ ಹಿಂದ ಏನರೆ, ನಮಗ ತಿಳಿಲಾರ್ದ ಮಸಲತ್ತ ಗಿಸಲತ್ತ ಅದಾನೋ ಏನೋ ಅಂತ…” ಎಂದು ತನ್ನ ಗಂಡ ಮಲ್ಲಪ್ಪನ ಬಳಿ ಮಲ್ಲವ್ವ ಹೇಳುತ್ತಾಳೆ ಆದರೆ ಅವನ ಬಳಿ ಇದಕ್ಕೆ ಉತ್ತರವಿಲ್ಲ! ಜೋಗತಿ ಬಿಡುವುದು ಒಂದು ರೀತಿಯ ಸೂಳೆಗಾರಿಕೆ ಎಂದು ಅದನ್ನು ವಿರೋಧಿಸುತ್ತಾಳೆ ಮಲ್ಲವ್ವ. ಬಸುರಿಯಾದ ಕಲ್ಲವ್ವನ ಈಗಾಗಲೇ ಮೂರ್ನಾಲ್ಲು ಮಕ್ಕಳ ತಾಯಿ, ಎಂಟು ತಿಂಗಳ ಗರ್ಭಿಣಿಯ ಮೇಲೆ ತನ್ನ ಕುಡುಕ ಗಂಡ ಮುಕ್ಯಾ ಕಾಮದ ತೃಷೆ ತೀರಿಸಿಕೊಳ್ಳಲು ಅವಳ ಮೈ ಮೇಲೆ ದಾಳಿಮಾಡುತ್ತಾನೆ.

ಮನೆಯಲ್ಲಿ ಅಡುಗೆ ಮಾಡಲು ಏನೋ ಇಲ್ಲದೆ ಹಸಿದಿದ್ದ ಆಕೆ ಮರಣಹೊಂದುತ್ತಾಳೆ. ಬೆತ್ತಲೆಯಾಗಿ ಬಿದ್ದಿದ ಇವಳ ಹೆಣದ ಮೈಮೇಲೆ ತನ್ನ ಎಳೆಯಕಂದಮ್ಮಗಳು ಆಟವಾಡುತ್ತಿರುತ್ತವೆ. ಮಗುವೊಂದು ಹಸಿವಿನಿಂದ ಅವಳ ಕಳೆಬರದ ದೇಹದ ಎದೆಯಿಂದ ಹಾಲನ್ನು ಕುಡಿಯಲು ಪ್ರಯತ್ನಿಸುತ್ತಿರುತ್ತದೆ. ಇದನ್ನ ಕಂಡ ಕೇರಿಯ ಅಕ್ಕಪಕ್ಕದ ಮಹಿಳೆಯರ ಕಣ್ಣಲ್ಲಿ ನೀರು ಬರುತ್ತದೆ. ಅಬ್ಬಾ…!ಎಂದು ಓದುಗರಲ್ಲೂ ಕಣ್ಣೀರು ಬರಿಸುವಂತ ಅನೇಕ ಪ್ರಸಂಗಗಳು ಇದರಲ್ಲಿವೇ.

ಈ ಕಾದಂಬರಿ ಕುರಿತು ಹೇಳಲು ಬಹಳಷ್ಟಿದೆ. ಆದರೆ ಅದನ್ನ ನಾವು ಓದುವುದರ ಮೂಲಕವೇ ಅನುಭವಕ್ಕೆ ತಂದುಕೊಳ್ಳಬೇಕು. “ಬದುಕು” ದಲಿತ ಮಹಿಳೆಯೊಬ್ಬರು ಬರೆದ ದಲಿತ ಕಾದಂಬರಿಯಾದರು. ಇಲ್ಲಿ ಮೇಲ್ವರ್ಗ ಮತ್ತು ಕೆಳವರ್ಗದ ಕಿತ್ತಾಟ ಅಸಮಾನತೆಗಿಂತ ಹೆಚ್ಚಾಗಿ ಈ ಕೃತಿ ದಲಿತರ ಸಂಸ್ಕೃತಿ ಹಾಗೂ ಅಲ್ಲಿನ ಮಹಿಳೆಯರ ಪರಿಸ್ಥಿಯನ್ನೆ ಹೆಣ್ಣು ಕೇಂದ್ರವಾಗಿರಿಸಿಕೊಂಡಿದೆ.

ಮೂಢನಂಬಿಕೆ, ಲೈಂಗಿಕತೆ, ಸಂಸ್ಕೃತಿ, ಸಂಸಾರ, ಎಂಬ ಹೆಸರಿನಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ದಬ್ಬಾಳಿಕೆ ಈ ಕಾದಂಬರಿಯಲ್ಲಿ ಕಾಣಸಿಗುತ್ತದೆ. ಕನ್ನಡ ಸ್ತ್ರೀವಾದ ಸಾಹಿತ್ಯ ಪ್ರವೇಶಿಸುವ ಮುನ್ನ “ಮನುಸ್ಮೃತಿ” ಯೊಂದಿಗೆ ಓದಲೇ ಬೇಕಾದ ಮತ್ತೊಂದು ಕೃತಿ ಗೀತಾನಾಗಭೂಷಣ ಅವರ ಈ “ಬದುಕು”…(ಇದು ಟಾಲ್ಸ್ಟಾಯ್ ಅವರ “ಅನ್ನಾಕರೆನಿನಾ” ಹಾಗೂ “ರಿಸರೆಕ್ಸನ್” ಕಾದಂಬರಿಯ ಸಾಲಿನಲ್ಲಿ ಸೇರಬಲ್ಲ ಕೃತಿ )

‍ಲೇಖಕರು Admin

March 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಕಾದಂಬರಿ ನನ್ನ ಬಳಿ ಇದೆ. ಸದ್ಯದಲ್ಲೇ ಓದಲಿದ್ದೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: