ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿ ‘ಮುಟ್ಟು’ ಕಳೆದಾಗಲೂ ಹೊಸತಾಗುವ ನೀನು

ಸದಾಶಿವ ಸೊರಟೂರು

**

ಎದೆಯಿಂದ ದಡದಡ ಇಳಿದು

ಹೊರಟು ಹೋಗುವಾಗ

ಅಚಾನಕ್ಕಾಗಿ ಜಾರಿ ಬಿದ್ದ

ನಿನ್ನ ಮುಟ್ಟಿನ‌ ಹನಿಯೊಂದನ್ನು

ಹೆಕ್ಕಿಕೊಂಡು

ನನ್ನ ಜೀವವನ್ನು ಮಡಚಿ 

ಅದಕ್ಕೆ ಬೆಚ್ಚಗೆ ಸುತ್ತಿ

ಎದೆಯ ದೇವರಮನೆಯಲ್ಲಿಟ್ಟಿದ್ದೇನೆ.. 

ಹೊರಡು ನನ್ನದೇನು ತಕರಾರಿಲ್ಲ

ಸಿಕ್ಕಾರು ಯಾರಾದರೂ

ನಿನ್ನ ನಗುವಿಗೆ..

ಸಿಗಬಹುದು ಬೇಸರಕ್ಕೂ ಅಳುವಿಗೂ

ಮುಟ್ಟಿನ ಹನಿಗೂ 

ಜೊತೆಯಾಗುವವರು ಸಿಗುತ್ತಾರಾ 

ನೋಡು

ಸಿಕ್ಕರೆ ಅಡ್ಡಿಯಲ್ಲ ಹೊರಡು..‌

ನಿನಗೆ ಗೊತ್ತಾ ನೀ ಮುಟ್ಟಾದ ದಿನ

ನಿನ್ನ ಒಳ ಕರೆದು

ನಾನು ದೇವರನ್ನು ಹೊರ ಹಾಕುತ್ತಿದ್ದೆ

ಮುಟ್ಟಾದ ನಂತರ 

ಎಷ್ಟು ದಿನ ಕೂಡದೆ ಉಳಿಯ ಬೇಕು ಎಂದು

ಬೆರಳು ಎಣಿಸುತ್ತಾರೆ..

ನಾನೂ ಬೆರಳು ಎಣಿಸುತ್ತಿದ್ದೆ

ಕೂಡುವುದಕ್ಕಲ್ಲ.. 

ಕಳೆಯುವುದಕ್ಕೆ..

ನಿನ್ನೊಳಗಿನ ಎಲ್ಲಾ ದುಗುಡಗಳನ್ನು..! 

ಪ್ರತಿ ಮುಟ್ಟು ಕಳೆದಾಗಲೂ ಹೊಸತಾಗುವ

ನೀನು

ಮಳೆ ಸುರಿದ ಮಾರನೆ ದಿನ ನಗುವ ಬಾನು..

ಕಾಳಜಿಯಾಗುತ್ತದೆ ನನಗೆ

ನಿನ್ನ ಬದುಕಿನೊಳಗೆ ಯಾರು

ಬಂದರು,

ಯಾರು ಹೋದರು.. ಎಂಬುದಕ್ಕಲ್ಲ..

ಯಾರು ನಿನ್ನನ್ನು ಐದು ದಿನ ಆಚೆ

ಹಾಕುವರೊ

ಕೈಯಿಂದ ದೇವರ ದೀಪ ಕಸಿಯುವರೊ

ರಂಗೋಲಿಯ ಚುಕ್ಕಿ ತಪ್ಪಿಸುವರೊ

ಮುಟ್ಟು ಬಿಕ್ಕಳಿಸುವಂತೆ

ನೀನು ತತ್ತರಿಸುವಂತೆ

ಮಾಡಬಲ್ಲರೋ.. ಎಂಬುದಕ್ಕೆ! 

ಈಗೀಗ 

ತಿಂಗಳಿಗೊಮ್ಮೆ ದೇವರು ಆಚೆ ಹೋಗಲು

ಹಟ ಹಿಡಿಯುತ್ತಾನೆ

ನಿನ್ನನ್ನು ಒಳಗೆ ಕರೆಯಲು ಆಚೆ ಬಂದು

ನಿಲ್ಲುತ್ತೇನೆ

ರಸ್ತೆಯ ತುಂಬೆಲ್ಲಾ ಹುಡುಗಿಯರು; 

ನಿನ್ನ ಹೊರತು! 

ಮತ್ತೆ ದೇವರಿಗೆ ಗದರಿ ಬಾಗಿಲಿಕ್ಕಿಕೊಂಡು

ಬಿಕ್ಕಳಿಸುತ್ತೇನೆ!

‍ಲೇಖಕರು Admin MM

10 May, 2024

1 Comment

  1. Rakesh Bandol

    ನಿನಗೆ ಗೊತ್ತಾ ನೀ ಮುಟ್ಟಾದ ದಿನ

    ನಿನ್ನ ಒಳ ಕರೆದು

    ನಾನು ದೇವರನ್ನು ಹೊರ ಹಾಕುತ್ತಿದ್ದೆ

    Nice poem… Nice lines….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading