ಜಯಶ್ರೀನಿವಾಸ ರಾವ್ ಅನುವಾದಿಸಿದ ಇವಾಂಕಾ ಮೊಗಿಲ್ಸ್ಕಾಕವಿತೆಗಳು

ಮೂಲ : ಇವಾಂಕ ಮೊಗಿಲ್ಸ್ಕಾ

**

ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್

**

ಬಲ್ಗೇರಿಯಾ ದೇಶದ ಕವಿ ಇವಾಂಕಾ ಮೊಗಿಲ್ಸ್ಕಾಅವರ ಕವನಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಆ್ಯಂಜೆಲಾ ರೊಡೆಲ್-ರವರು, (Angel Rodel) ಮೊಗಿಲ್ಸ್ಕಾಅವರ ಕವನಗಳ ಬಗ್ಗೆ ಹೀಗನ್ನುತ್ತಾರೆ: “ಅವರ ಕವನಗಳು ಪುಟದಿಂದ ಮೇಲಕ್ಕೆ ಜಿಗಿಯುತ್ತದೆ – ಇದರಲ್ಲಿ ಆಶ್ಚರ್ಯವೇನಿಲ್ಲ, ಏಕೆಂದರೆ ಅವರು ಕವಿ ಮಾತ್ರವಲ್ಲ, ರಂಗ-ನಿರ್ದೇಶನ ಆಧ್ಯಯನ ಮಾಡಿದ, ರಂಗಮಂಚ ಹಾಗೂ ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಪಳಗಿದವರು. ಅವರ ಕವನಗಳಲ್ಲಿ “ಧ್ವನಿ” ಅವಿಭಾಜ್ಯ ಅಂಗವಾಗಿರುವುದು. ಈ “ಧ್ವನಿ”ಯಿಂದ ಸುತ್ತುವರಿದ, ಆಶು-ರಚನೆಯ ‘ಧ್ವನಿಚಿತ್ರಗಳ’ (soundscapes) ಮೂಲಕ ಪ್ರದರ್ಶಿಸಲಾದ ಇವರ ಕವನಗಳನ್ನು ಅನುವಾದ ಮಾಡುವ ಪ್ರಕ್ರಿಯೆ ನನಗೆ ತುಂಬ ಖುಷಿ ಕೊಟ್ಟಿತ್ತು. ನಿಮ್ಮ ಮನಸ್ಸಿನ ಕಣ್ಣುಗಳ (ಅಥವಾ ಕಿವಿಯ?) ಮೂಲಕ ಅನುಭವಿಸಲು ಸಾಧ್ಯವಾಗುವಂತಹ ಕವನಗಳು ಇವರದ್ದು. ತಮ್ಮ ಕಾವ್ಯದಲ್ಲಿ ಹಾಗೂ ಕತೆ, ಕಾದಂಬರಿಗಳಲ್ಲಿ ಸೂಕ್ಷ್ಮವಾದ ಸ್ತ್ರೀ ನಿರೂಪಣೆಯ ದೃಷ್ಟಿಕೋನದಿಂದ ಬರೆಯುವ ಇವರದ್ದು ಬಲ್ಗೇರಿಯನ್ ಸಾಹಿತ್ಯಲೋಕದಲ್ಲಿ ಬಹು ಅಗತ್ಯವಿರುವ ಧ್ವನಿ.”

1981-ರಲ್ಲಿ ಜನಿಸಿದ ಇವಾಂಕಾ ಮೊಗಿಲ್ಸ್ಕಾ ಬಲ್ಗೇರಿಯಾದ ಉದಯೋನ್ಮುಖ ಬಹುಮುಖ ಪ್ರತಿಭೆಯ ಸಾಹಿತಿಗಳಲ್ಲಿ ಪ್ರಮುಖರು. ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ ಹೆಸರು ಪಡೆದಿದ್ದಾರೆ. ಅವರು ಸೊಫಿಯಾದ ಸೇಂಟ್ ಕ್ಲೆಮೆಂಟ್ ಓಹ್ರಿಡ್ಸ್ಕಿ ವಿಶ್ವವಿದ್ಯಾಲಯದಿಂದ (University of St. Kliment Ohridski) ‘ಬ್ಯಾಚುಲರ್ ಆಫ್ ಪಬ್ಲಿಕ್ ರಿಲೇಶನ್ಸ್’ ಪದವಿ ಪಡೆದಿದ್ದಾರೆ ಹಾಗೂ ಕ್ರಾಸ್ತ್ಯೊ ಸಾರಾಫೋವ್ ನ್ಯಾಷನಲ್ ಅಕಾಡೆಮಿ ಫಾರ್ ಥಿಯೇಟರ್ ಎಂಡ್ ಫೀಲ್ಮ್ ಅರ್ಟ್ಸ್-ನಿಂದ (Krastyo Sarafov NATFA) ರಂಗ-ನಿರ್ದೇಶನದಲ್ಲಿ ತರಬೇತಿ ಪಡೆದಿದ್ದಾರೆ.

ಮೊಗಿಲ್ಸ್ಕಾ ರಂಗ-ಪ್ರದರ್ಶಕರಾಗಿಯೂ (performer) ಹೆಸರು ಗಳಿಸಿದ್ದಾರೆ. ತಮ್ಮ ಕವನಗಳನ್ನು ಹಾಗೂ ಕಥೆ-ಕಾದಂಬರಿಗಳ ಭಾಗಗಳನ್ನು ಸಂಗೀತ ಹಾಗೂ ನಟನೆಯೊಂದಿಗೆ ರಂಗದ ಮೇಲೆ ಪ್ರದರ್ಶಿಸುತ್ತಾರೆ. ತಮ್ಮ ಕವನಗಳ ಮೇಲೆ ಆಧಾರಿಸಿದ ‘DNA of Words – an Instrument for Playing Poetry’ ಎಂಬ ಅಂತರ-ಸಂವಾದೀಯ ಪ್ರದರ್ಶನವನ್ನು (interactive performance) ಬ್ರೆಮೆನ್, ಬರ್ಲಿನ್, ಹಾಗೂ ಬಾರ್ಸೆಲೋನಾ ನಗರಗಲ್ಲಿ ನಡೆದ ಸಾಹಿತ್ಯ ಉತ್ಸವಗಳಲ್ಲಿ ಪ್ರದರ್ಶಿಸಿದ್ದಾರೆ ಹಾಗೂ ತಮ್ಮ ಎರಡು ಕಾದಂಬರಿಗಳ ಅನುವಾದಿತ ಭಾಗಗಳನ್ನು ಹಂಗೆರಿ-ಯ ಬುಡಾಪೆಸ್ಟ್ ಹಾಗೂ ಪೆಕ್ಸ್ ನಗರಗಳಲ್ಲಿ ವಾಚನ-ಪ್ರದರ್ಶನ ನೀಡಿದ್ದಾರೆ. ಸಾಹಿತ್ಯದ ಹೊರತಾಗಿ ಇವರು ಸ್ವತಂತ್ರ ಕಾಪಿರೈಟರ್ (ಜಾಹೀರಾತುಗಳನ್ನು ರೂಪಿಸುವ ಹಾಗೂ ಬರೆಯುವ ಕಾರ್ಯ) ಆಗಿ ಕೆಲಸ ಮಾಡುತ್ತಿದ್ದಾರೆ.

ಇದುವರೆಗೆ ಮೊಗಿಲ್ಸ್ಕಾ-ರವರು ಎರಡು ಕವನ ಸಂಕಲನಗಳು (DNA, 2004; Otherwise, 2010), ಎರಡು ಕಾದಂಬರಿಗಳು (Places to Get Lost, 2007; Sudden Streets, 2013), ಎರಡು ಕಥಾ ಸಂಗ್ರಹಗಳು (This Land, That Land, 2017; Ordinary Miracles, 2023), ಹಾಗೂ ಒಂದು ಮಕ್ಕಳ ಕಿನ್ನರಕಥೆಗಳ ಸಂಗ್ರಹವನ್ನು (Colorful Soap Bubbles, 2022) ಪ್ರಕಟಿಸಿದ್ದಾರೆ. ಅವರ ಎರಡೂ ಕವನ ಸಂಕಲನಗಳಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ – 2005-ರಲ್ಲಿ ಚೊಚ್ಚಲ ಸಂಕಲನಕ್ಕಾಗಿ ಹಾಗೂ 2012-ರಲ್ಲಿ ವರ್ಷದ ಅತ್ಯುತ್ತಮ ಸಂಕಲನಕ್ಕಾಗಿ; ಹಾಗೂ ಮಕ್ಕಳ ಕಥೆಗಳ ಸಂಗ್ರಹಕ್ಕಾಗಿ 2023-ರ ರಾಷ್ಟ್ರೀಯ ಪ್ರಶಸ್ತಿಯೂ ಗೆದ್ದಿದ್ದಾರೆ. ಇವಾಂಕಾ ಮೊಗಿಲ್ಸ್ಕಾ-ರ ಕವನಗಳು ಹಾಗೂ ಗದ್ಯ ಬರಹಗಳು ಇಂಗ್ಲಿಷ್, ಫ್ರೆಂಚ್, ಹಂಗೇರಿಯನ್, ಸರ್ಬಿಯನ್, ರಷ್ಯನ್, ಫಾರ್ಸಿ, ಬಾಂಗ್ಲಾ ಭಾಷೆಗಳಿಗೆ ಹಾಗೂ ಈಗ ಕನ್ನಡ ಭಾಷೆಗೂ ಅನುವಾದವಾಗಿವೆ ಹಾಗೂ ಈ ಭಾಷೆಗಳ ಸಾಹಿತ್ಯ ಸಂಕಲನಗಳು ಹಾಗೂ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ತಮ್ಮ ಕವನ ಬರೆಯುವ ಪ್ರಕ್ರಿಯೆಯ ಬಗ್ಗೆ, ತಾನು ಯಾರಿಗಾಗಿ ಬರೆಯುತ್ತೇನೆ, ಹಾಗೂ ಕಾವ್ಯದ ಮಹತ್ವದ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ, “ನಾನು ಯಾವಾಗಲೂ ನನಗಾಗಿ ಬರೆಯುತ್ತೇನೆ. ಪ್ರಪಂಚದೊಂದಿಗೆ ಅಥವಾ ನನ್ನೊಂದಿಗೆ ಸಮನ್ವಯಗೊಳಿಸಲು ನಾನು ಹೇಳಬೇಕಾದ ಕಲ್ಪನೆ ಅಥವಾ ಕಥೆಯನ್ನು ನಾನು ಹೊಂದಿದ್ದೇನೆ. ನಾನು ಅವುಗಳನ್ನು ಬರೆಯುವ ಮೊದಲು ಅಚ್ಚುಕಟ್ಟಾದ ಪದಗಳ ಲಯವನ್ನು ಕೇಳಲು ಇಷ್ಟಪಡುತ್ತೇನೆ. ಕವಿತೆಯನ್ನು ಬರೆದ ನಂತರ, ಸಂಪಾದಿಸಿದ ನಂತರ, ಸಾವಿರ ಬಾರಿ ಓದಿದ ನಂತರ ಇತರರು, ಓದುಗರು ಬರುತ್ತಾರೆ. ಎಲ್ಲಾ ಜನರು ಒಂದೇ ರೀತಿಯ ವಿಷಯಗಳಿಂದ ಉತ್ಸುಕರಾಗುತ್ತಾರೆ ಎಂದು ನಾನು ನಂಬುತ್ತೇನೆ ಮತ್ತು ಅವರಿಗೆ ನನ್ನ ದೃಷ್ಟಿಕೋನವನ್ನು ನೀಡಲು ನಾನು ಬಯಸುತ್ತೇನೆ. ವಾಸ್ತವವಾಗಿ ಹೇಳಬೇಕೆಂದರೆ, ನಾನು ಇತರರಿಗಾಗಿಯೂ ಬರೆಯುತ್ತೇನೆ ಎಂದೇ ಅನಿಸುತ್ತದೆ.”

“ಪದಗಳು ಅಪಾಯಕಾರಿ ಮತ್ತು ಅವುಗಳನ್ನು ಕ್ಷುಲ್ಲಕವಾಗಿ ನೋಡಬಾರದು. ಕಾವ್ಯವು ಅತ್ಯಂತ ಪ್ರಾಚೀನ ಕಲೆಗಳಲ್ಲಿ ಒಂದಾಗಿದೆ ಮತ್ತು ಮುಕ್ತ ಮನಸ್ಸಿನ ಜನರು ಇರುವವರೆಗೂ ಕಾವ್ಯಕ್ಕೆ ಮಹತ್ವವಿರುತ್ತೆ. ಒಂದು ಕವಿತೆ ಜಗತ್ತನ್ನು ಬದಲಾಯಿಸಬಲ್ಲದು ಎಂಬ ಕಲ್ಪನೆ ಕಷ್ಟವೆಂದೇ ಅನಿಸಿದರೂ, ಅದು ಹನ್ನೆರಡು ಜನರನ್ನು ಬದಲಾಯಿಸಲು ಸಾಧ್ಯವಾದರೆ, ನಂತರ ಆ ಹನ್ನೆರಡು ಜನರು ಮತ್ತೊಂದು ಹನ್ನೆರಡು ಜನರಿಗೆ ಜೀವನದ ಸೌಂದರ್ಯವನ್ನು ಅನುಭವಿಸಲು ಸಹಾಯ ಮಾಡುವುದಾದರೆ ಹೇಗೆ? ಇಷ್ಟು ಆದರೂ ಒಳ್ಳೆಯದೇ.”

ಇಲ್ಲಿರುವ ಇವಾಂಕಾ ಮೊಗಿಲ್ಸ್ಕಾ-ರ ಏಳು ಕವನಗಳಲ್ಲಿ ಮೊದಲ ಆರು ಕವನಗಳನ್ನು ಆ್ಯಂಜೆಲಾ ರೊಡೆಲ್-ರವರು, (Angel Rodel) ಹಾಗೂ ಕೊನೆಯ ಕವನವನ್ನು ಕ್ಯಾಟರಿನಾ ಸ್ಟೊಯ್ಕೋವಾ-ಕ್ಲೆಮರ್-ರವರು (Katerina Stoykova-Klemer) ಮೂಲ ಬಲ್ಗೇರಿಯನ್‌ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿದ್ದಾರೆ.

**


ಭಾವಚಿತ್ರ
ಮೂಲ: Portrait

ಕೆಲವೊಮ್ಮೆ ಅದ್ಭುತವಾದ ಕತೆಗಳನ್ನು ಹೇಳುತ್ತಾಳವಳು.
ದಿನವನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕಡಿದು ತಿನ್ನುತ್ತಾಳವಳು.
ಕತ್ತಲಲ್ಲಿ ನಗುತ್ತಾಳವಳು.
ಸಂಪೂರ್ಣ ಸೂರ್ಯ-ಕಾಂತಿ ಅವಳ ಕಾಯ,
ಕೆಲ ಬಿಳಿ ಮೋಡಗಳ ಸಹಿತ.

ಕೆಲವೊಮ್ಮೆ ಪ್ರತಿದಿನದ ಹಲಗೆಯ ಮೇಲೆ ತಾನಾಗಿಯೇ ಮಲಗುತ್ತಾಳೆ.
ಹೇಗಿದ್ದರೂ ಅಡ್ಡಿಯಿಲ್ಲ ಅವಳಿಗೆ.
ಶಬ್ಧಗಳಿಲ್ಲ.
ಕತೆಗಳಿಲ್ಲ.
ನಗಲು ಯೋಗ್ಯವಾದ ಕತ್ತಲೆಯಿಲ್ಲ.
ಅವಳಿಗೆ ಎಷ್ಟು ನಿರಾಸಕ್ತಿಯೆಂದರೆ
ನೀವು ಸೋಜಿಗಪಡಬಹುದು
ಇದು ಬಿರುಗಾಳಿಯ ಮುಂಚಿನ ಶಾಂತತೆಯಾ,
ಅಥವಾ ಅದರ ಕೇಂದ್ರಬಿಂದುವಾ?

**


ದಿನ ಕರಗಿಹೋಗುತ್ತಿದೆ
ಮೂಲ: The Day Dissolves

ದಿನ ಕರಗಿಹೋಗುತ್ತಿದೆ,
ಮೇಜಿನ ಮೇಲೆ ಯಾರೋ
ಮರೆತಿಟ್ಟ ನೀರಿನ ಗ್ಲಾಸಿನಲ್ಲಿ
ವಿಟಮಿನ್ ಮಾತ್ರೆಗಳು
ಕರಗಿಹೋಗುವ ಹಾಗೆ.

ಅದು ಹಿಸ್ಸೆನ್ನುತ್ತೆ.
ಅದು ಶಾಂತವಾಗಿ ಗುಳುಗುಳಿಸುತ್ತೆ.
ಸುತ್ತಮುತ್ತ ಯಾರೂ ಇಲ್ಲ
ಅದರ ಚಿಲ್ಲರೆ ಗೋಳುಗಳನ್ನು ಕೇಳಿಸಿಕೊಳ್ಳಲು,
ಹಾಗೇ ಸುಮ್ಮನಾಗುತ್ತೆ,
ನೀರ್ಗುಳ್ಳೆಗಳು ಟಪ್‌-ಟಪ್ಪೆಂದು ಸಿಡಿಯುತ್ತವೆ,
ಶೇಷಲೇಶಗಳು ತಳಸೇರುತ್ತವೆ.

ಸಾಯಂಕಾಲ, ಮನೆಯವರು
ಮರಳುತ್ತಾರೆ,
ಅದನ್ನು ಸಿಂಕಿನೊಳಗೆ ಸುರಿಯುತ್ತಾರೆ.

**

ಅವಳಿಗೆ ಬದಿಹೊಲೆಯದ ಆಕಾಶ ಬೇಕು
ಮೂಲ: She wants an unhemmed sky

ಅವಳಿಗೆ ಬದಿಹೊಲೆಯದ ಆಕಾಶ ಬೇಕು,
ಅದರ ಅಂಚುಗಳು ಜೂಲುಜೂಲಾಗಿರಬೇಕು,
ಏಕೆಂದರೆ
ಅದು ಹೆಣಿಗೆ ಬಿಚ್ಚಿದಾಗ,
ಅವಳು ಹಾರಿ
ಒಂದು ದಾರವನ್ನು ಹಿಡಿದು,
ಅದರ ಹಿಂದೆ ಏರಿ
ಆಕಾಶದವರೆಗೆ ಹತ್ತಬಹುದು.

**

ಅವಳೊಂದು ರಸ್ತೆಯನ್ನು ಹುಡುಕುತ್ತಿದ್ದಾಳೆ
ಮೂಲ: She’s looking for a street

ಅವಳೊಂದು ರಸ್ತೆಯನ್ನು ಹುಡುಕುತ್ತಿದ್ದಾಳೆ.
ಅದು ನಕ್ಷೆಯಲ್ಲಿಲ್ಲ.
ಅದರ ಫೋಟೋಗಳನ್ನು ಯಾರೂ ತೆಗೆದಿಲ್ಲ.

ಅದಕ್ಕೆ ಹೆಸರಿಲ್ಲ.
“ಅದು ಇದೇಂತ ನನಗ್ಗೊತ್ತು,”
ಸಿಟ್ಟಿನಿಂದ ಹೇಳುತ್ತಾಳವಳು,
“ಆದರೆ ಎಲ್ಲಿದೇಂತ ಗೊತ್ತಾಗ್ತಾ ಇಲ್ಲ!”
ಗೊಣಗುತ್ತಾ, ಅದೇ ರಸ್ತೆಯಲ್ಲಿ ನಡೆದು ಹೋಗುತ್ತಾಳೆ.

**

ಎಲೆಗಳು ಗಮನವಿಟ್ಟು ಕೇಳುತ್ತವೆ
ಮೂಲ: The leaves listen closely

ಎಲೆಗಳು ಗಮನವಿಟ್ಟು ಕೇಳುತ್ತವೆ
ಗಾಳಿಯ ಹೊಸ ಹೊಂಚನ್ನು
ಅರಿಯಲು,
ಅದರ ಮುನ್‌-ರುಚಿ ನೋಡಲು,
ಅದನ್ನು ಮುನ್‌-ಗ್ರಹಿಸಲು,
ಅದನ್ನು ಮುನ್-ಯೋಚಿಸಲು,
ಗೆಲ್ಲಲು.

ಒಂದು ನೆನಪು ಇರಲೆಂದು,
ಒಂದು ಮುನ್- ಮತ್ತು
ಒಂದು ಹಿನ್-ನುಡಿಯೊಂದಿಗೆ
ಒಂದು ಕಾದಂಬರಿ ಬರೆಯಲಿಕ್ಕಾಗಿ.

**


ಯೌವನ
ಮೂಲ: Youth

ಕಿಟಕಿಯಿಂದ ನನಗೆ ಕಾಣಿಸುವುದು
ಒಂದು ಕಾರು, ಒಂದು ಮರ, ಒಂದು ರಸ್ತೆ-ಚಿಹ್ನೆ ಮಾತ್ರ.
ಒಂದು “ಸ್ಟಾಪ್” ಚಿಹ್ನೆ.
ಎಲೆಗಳು ಉದುರುತ್ತಿವೆ.
ನಾನು ಅವುಗಳನ್ನೆಲ್ಲ ಶೇಖರಿಸುವೆ.

ನನಗೊಂದು ಅರಿವೆಯ ಹೊಲೆದುಕೊಳ್ಳುವೆ.
ನಾನೊಂದು ನಡೆದಾಡುವ ಮರವಾಗುವೆ
ಮತ್ತೆ ನಾನು ಓಡಿ ಹೋಗುವೆ.
ಆ ರಸ್ತೆ-ಚಿಹ್ನೆಯ ಮೇಲೆ ಸೇಡು ತೀರಿಸಿಕೊಳ್ಳಲು.

**


ಸಾರಾಂಶ
ಮೂಲ: Summary

ಜೇಡವೊಂದು ಬಲೆಯ ಕಟ್ಟಿತು.
ದುಂಬಿಗದು ಹೂವಂತನಿಸಿತು.
ಜೇಡಕ್ಕೆ ಮೋಹವಾಯಿತು ದುಂಬಿಯ ಮೇಲೆ.
ದುಂಬಿಗೆ ಮೋಹವಾಯಿತು ಜೇಡದ ಮೇಲೆ.
ಅವೆರಡೂ ಹಸಿವೆಯಿಂದ ಸತ್ತವು.

**

ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.

ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ,’ ‘ಮ್ಯೂಜ಼್ ಇಂಡಿಯ,’ ಹಾಗೂ ‘ಮೈದಾನಂ’-ನಲ್ಲಿ ಪ್ರಕಟವಾಗಿವೆ. ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ‘ಅವಧಿ’, ಕೆಂಡಸಂಪಿಗೆ, ಭಾಷಾ ಭಾರತಿ, ಹಾಗೂ ಋತುಮಾನ ದಲ್ಲಿ ಪ್ರಕಟವಾಗಿವೆ. ಇವರು ಕನ್ನಡಕ್ಕೆ ಅನುವಾದಿಸಿದ ಪೋಲಿಷ್ ಭಾಷಾ ಕವನಗಳ ಸಂಕಲನ, “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’, ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಏಪ್ರಿಲ್ 2022-ರಲ್ಲಿ ಪ್ರಕಟಿಸಿತು.

‘ದ ಹಿಂದು’ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ ಡಿಸೆಂಬರ್ 2020ರ ಅವಧಿಯಲ್ಲಿ ಪ್ರಕಟಿಸಿತ್ತು. ಜಯಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFL-ನಲ್ಲಿ (ಈಗ The EFL University), ‘Translation and Transformation: The Early Days of the Novel in Kannada’ ಶಿರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದ ಇವರು ಪ್ರಸ್ತುತ ಹೈದರಾಬಾದಿನ ‘ಅರೋರಾಸ ಟೆಕ್ನೊಲಾಜಿಕಲ್ ಅಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್’ ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ.

‍ಲೇಖಕರು Admin MM

May 10, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: