
ವಾಸುದೇವ ನಾಡಿಗ್
ಪದ್ಯ ಬರೆಯುವಾಗಲೆಲ್ಲ
ಕಿಸಕ್ಕನೆ ನಕ್ಕಂತಾಗುತ್ತದೆ ಯಾರೋ
ಏನು ಬರೆದರೂ ನನ್ನದಾಗದ
ಯಾವುದೋ ಋಣ ತಿವಿದಂತಾಗುತ್ತದೆ
ದೇವತೆ ತಂದು ಕೊಟ್ಟ
ಯಾವ ಕೊಡಲಿಯೂ ನನ್ನದಾಗದು
ಅಂಗಳದಲ್ಲಿ ಬಿತ್ತಿದ ಹೂವಿನಲ್ಲಿ
ಮಣ್ಣ ಹಂಗಿನ ಘಮಲು
ಪ್ರತಿಸಾಲು ಮುಗಿದಮೇಲೂ
ಯಾರೋ ಹಂಗಿಸಿದಂತಾಗುತ್ತದೆ.
ನನ್ನ ಪದ್ಯಗಳನ್ನು ಗೆದ್ದಲು ತಿನ್ನುತಿರುವಾಗ
ಯಾರೋ ಮುಗುಳ್ನಕ್ಕಂತಾಗುತ್ತದೆ
ಪ್ರತಿ ಪ್ರತಿಮೆಗಳು ತಂದ ಕಡವಾಗಿ
ಹರವಿದ ಉಪಮೆಗಳೆಲ್ಲವೂ ಎರವಲಾಗಿ
ಜೋಡಿಸಿದ ಪದ ಸುರಿದ ಅರ್ಥ
ತೊಡಿಸಿದ ರೂಪಕದ ತೊಡವು
ಕದ್ದು ಬದಲಾಯಿಸಿದ ಬಣ್ಣದ ಪಟವಾಗಿ
ಹೆಸರಿನ ಹಠಕ್ಕೋ ಉಸಿರಿನ ಮೋಹಕ್ಕೋ
ಸರಿದ ದಾರಿಗಳೆಲ್ಲ ಹರಿದ ಅನ್ಯರ ಪಾದ
ಪದಪದಗಳೆಲ್ಲ ನಗೆಪಾಟಲು
ಅಹಂಕಾರದಲಿ ಕೊಳೆವ ನನ್ನ ಕವಿತೆಗಳೆಲ್ಲಾ
ದಣಿದಹಕ್ಕಿಯೊಂದು ಉದುರಿಸಿ ಹೋದ ಬಣ್ಣದ ಗರಿಗೆ
ಅಂಟಿಕೊಂಡ ಧೂಳು..





ನಾಡೀಗ್ ಸರ್,ನಿಮ್ಮ ಕವಿತೆಯಲ್ಲಿ ವಿಷಾದ ಭರಿತ ಭಾವ ಚಿಲುಮೆ ಉಕ್ಕಿದೆ.ಕೊನೆಯ ಮೂರು ಸಾಲು ಅದ್ಬುತ ರೂಪಕ
ದೈವದತ್ತವಾದ ಕೊಡುಗೆಯಿಂದ ಆಂತರ್ಯದ ಸಹಜ ಅಭಿವ್ಯಕ್ತಿಯಾಗಿ ಹೊಮ್ಮಬೇಕಾದ ಕಾವ್ಯ, ಇಂದು ಎರವಲು ಪರಿಕರಗಳಿಂದ ಅವಸರದಲ್ಲಿ ಜೋಡಿಸಿಟ್ಟ ಸರಕಿನಂತಾಗಿ ಎಲ್ಲೆಡೆ ಕಣ್ಣಿಗೆ ರಾಚುತ್ತಿದೆ..ಒಣ ಪ್ರತಿಷ್ಠೆ, ಹೆಸರು, ಪ್ರಶಸ್ತಿಗಳಿಗಾಗಿಯೇ ಬರೆಯುವ ಒಂದು ಗುಂಪೇ ನಿರ್ಮಾಣವಾಗಿರುವುದನ್ನು ಇಂದಿನ ಕಾಲಘಟ್ಟಕ್ಕೆ ಅತ್ಯಂತ ಸೂಕ್ತವಾದ ಕವನ….ಅಭಿನಂದನೆಗಳು.
ಚೆನ್ನಾಗಿದೆ.
ಕವಿತೆ ತುಂಬಾ ಫ್ರೆಶ್ ಇದೆ ಸರ್, ಅಭಿನಂದನೆಗಳು. ‘ಉಸಿರುಗಟ್ಟಿಸುವ ವಾತಾವರಣದಲ್ಲಿ ಕಾವ್ಯ ಅರಳದು’ ಅಂತ ಎಲ್ಲೋ ಎಂದೋ ಓದಿದ್ದು, ನಿಮ್ಮ ಈ ಪದ್ಯ ಓದಿದಮೇಲೆ ತಟ್ಟನೆ ಹೊಳೆದಂತಾಯಿತು..
thanks kaaavyaa. namma barahagalhu namage out dated anisuvudu dodda sihi satya
thanks snehitare