ಯಾರ್ರೀ… ಹೈದ್ರಾಬಾದ್ !!

ಭರತ್ ಸ ಜಗನ್ನಾಥ್

ತೆಲಂಗಾಣದ ಹೈದರಾಬಾದ್ ನಲ್ಲಿ ಮೂರು ಕನ್ನಡ ನಾಟಕಗಳನ್ನು ಪ್ರದರ್ಶಿಸಲು ನಮ್ಮ ತಯಾರಿ ಬಹು ದಿನಗಳಿಂದ ನಡೆದಿತ್ತು. ವಿಜಯನಗರ ಬಿಂಬ ೫೦ ಜನರೊಂದಿಗೆ ಟ್ರೈನೇರಿತ್ತು. ನಾನು ಹೇಳುತ್ತಿರುವುದು ಒಂದು ವಾರದ ಹಿಂದಿನ ಕಥೆ.. ಅಲ್ಲಿ ಕಳೆದ ಮೂರು ದಿನಗಳ ಕಥೆ ನನ್ನೊಳಗೇ ಇದ್ದು ಬಿಡಲು ಏಕೋ ಒಪ್ಪುತ್ತಿಲ್ಲ.. ಆದ್ದರಿಂದ ಇದೋ ಒಂದಿಷ್ಟು ಇಲ್ಲಿದೆ. ಸ್ವೀಕರಿಸಿ.

ಅವತ್ತು ನಮ್ಮ ತೆಲೆಂಗಾನ ವಾಸದ ಕೊನೆಯ ದಿನ. ಮೂರೂ ನಾಟಕಗಳ ಪ್ರದರ್ಶನ ಯಶಸ್ವಿಯಾಗಿ ಮುಗಿಸಿದ್ದೆವು. ಸೋ ಮನಸ್ಸು ನಿರಾಳ ನಿರಾಳ. ಬೆಳಗ್ಗೆ ಎದ್ದು ತಯಾರಾಗಿ ಕುಳಿತೆವು. ” ಸುಧಾ ಕಾರ್ ಮ್ಯೂಸಿಯಂ” ಎಂದರು, ನಾವೂ ಸೈ ಎಂದು ಹೊರಟೆವು. ಎಲ್ಲಾ ಮಕ್ಕಳು ಕೆಲವು ಹಿರಿಯರೊಡನೆ ಹೊರಟೆವು. ಕೆಲವರು (ಹೆಂಗಸರು ಎಂದು ಸ್ಪಷ್ಟೀಕರಣ ಬೇಕಿಲ್ಲ ಅನ್ಸತ್ತೆ) ಚಾರ್ಮಿನಾರ್ ಬಳಿ ಮುತ್ತಿನ ಬೇಟೆಯಲ್ಲಿ ತಲ್ಲೀನರಾಗಲು ಹೊರಟರು.

ಇತ್ತ ನಾವು ಎರಡು ಗಾಡಿ ಹತ್ತಿದೆವು, ನನಗೆ ಬಹಳ ವಿಚಿತ್ರವಾಗಿ ಕಂಡ ವ್ಯಕ್ತಿ, ಆ ಗಾಡಿಯ ಡ್ರೈವರ್. ಒಬ್ಬ ತಾತಪ್ಪ.. ವಯಸ್ಸಾಗಿತ್ತು, ಕನ್ನಡ ಬರುತ್ತಿರಲಿಲ್ಲ. ಗಾಡಿ ಹತ್ತಿದೆವು ನಮ್ಮ ವಿಶ್ವನಾಥ್ ಮಂಡಿ ಸರ್ ಹಾಗು ಮಂಜುನಾಥ್ ಅಲ್ಸೆ ಸರ್ ಡ್ರೈವರ್ ಪಕ್ಕ ಕೂತರು. ಹತ್ತಿ ಹೊರೆಟದ್ದೇ ತಡ , ಬಡ ಬಡ ಎಂದು ಒಂದೇ ಸಮನೆ ಹಿಂದಿಯಲ್ಲಿ ಮಾತನಾಡಲಾರಂಭಿಸಿದ. ಅವನ ಮಾತಿನ ಸ್ಪೀಡು ಗಾಡಿಯ ಸ್ಪೀಡಿಗಿಂತ ಕಡಿಮೆಯಿದ್ದರೂ ನನಗೋ.. ಊಹುಂ, ಹಿಂದಿಯ ಒಟ್ರುಸುಳಿಯೂ ಅರ್ಥವಾಗುವುದಿಲ್ಲ, ಅವನಿಗೆ ತಕ್ಕಂತೆ ಮಂಡಿ ಸರ್ ಹಾಗು ಅಲ್ಸೆ ಸರ್ ಕೂಡ ಉತ್ತರಿಸಲಾರಂಭಿಸಿದರು.

ಹೀಗೇ ಹೋಗುತ್ತಾ, ನಮ್ಮ ಮತ್ತೊಂದು ಗಾಡಿ ಹಿಂದೆಯೇ ಕೆಟ್ಟು ನಿಂತು ಹೋಯಿತು. ನನ್ನ ಪಕ್ಕದಲ್ಲಿದ್ದ ಸುಷ್ಮಾ ಗುಬ್ಬಿ ಮೇಡಂ ’ ಅಯ್ಯೋ ಆ ಗಾಡಿ ನಿಂತೋಗಿದೆ, ನಿಲ್ಸಿ” ಎಂದರು.. ತಾತಪ್ಪ… ಜಪ್ಪಯ್ಯ ಎನ್ನಲಿಲ್ಲ. ” ನಿಲ್ಸು ಗುರು.. ಆ ಗಾಡಿ ನಿಂತೋಗಿದೆ” ಎಂದೆ.. ತನ್ನಪಾಡಿಗೆ ಮಾತನಾಡುತ್ತಿದ್ದ. ಕಡೆಗೆ ಮಹದೇವಸ್ವಾಮಿ ಸರ್ ಹಿಂದಿಯಲ್ಲಿ ನಾವು ಹೇಳಿದ್ದನ್ನೇ ಹೇಳಿರಬೇಕು, ತಾತಪ್ಪ ಗಾಡಿ ನಿಲ್ಲಿಸಿ, ಆ ಡ್ರೈವರ್ ಗೆ ಫೋನ್ ಮಾಡಿ ಬೈಯ್ಯಲಾರಂಭಿಸಿದ. ಚಾರ್ ಮಿನಾರ್ ರಸ್ತೆಯಲ್ಲಿ ನಿಲ್ಲಿಸಿ ” ಇಲ್ಲೆ ಇರಿ” ಎಂದು ಅವನ ಭಾಷೆಯಲ್ಲಿ ಹೇಳಿ ಸೀದ ನಡೆದ. ಒಳಗೆ ಧಗೆ… ಇಳಿದೆವು, ಮನುಷ್ಯ ಪತ್ತೆಯೇ ಇಲ್ಲ.

ಮಾದೇವಣ್ಣ ಮತ್ತು ಅಲ್ಸೆ ಸರ್ ಹುಡುಗರೊಟ್ಟಿಗೆ ಇದ್ದರು, ನಾನು ಗುಬ್ಬಿಯಕ್ಕ ಹಾಗು ಮಂಡಿ ಸರ್ ಚಾರ್ಮಿನಾರ್ ನೋಡಲು ಇಳಿದು ಹೊರಟೆವು. ಅಂದು ಬೆಳಗ್ಗೆ ತಾನೆ ಅಪ್ಪ ” ಚಾರ್ಮಿನರ್ ಮುಂದೆ ಒಂದ್ ಫೋಟೊ ತೆಗಿಸ್ಕೋ” ಎಂದು ಆರ್ಡರ್ ಮಾಡಿದ್ದರು. ಅದಕ್ಕೆ ತಕ್ಕಂಥೆ ಡ್ರೈವರ್ ತಾತಪ್ಪ ಇಳಿದು ಹೊರಟಿದ್ದ. ಸರಿಯಾದ ಸಮಯ ಎಂದು ನಾವು ಹಾಗೇ ಮುಂದೆ ನಡೆದು ಹೋಗುತ್ತಿದ್ದೆವು. ಆ ಬದಿ ಈ ಬದಿ ನೋಡಿದಾಗ ನನಗೆ ಥಟ್ಟನೆ ನೆನಪಾದದ್ದು ಕಶ್ಯಪಣ್ಣ- ಬೃಂದಾತ್ಗೆ, ಗುಬ್ಬಿಯಕ್ಕ ಗೆ ಅವರ ಗಂಡ ಭಾಸ್ಕರ್.. ಈ ಮೂರೂ ಜನ ದಂತವೈದ್ಯರು. ’ಹೈದೆರಾಬಾದ್ ಗಲ್ಲಿಯಲ್ಲಿ ದಂತವೈದ್ಯರು’ ಒಳ್ಳೆ ಟೈಟಲ್ ಏನೋ ಸಿಕ್ತು, ಆದ್ರೆ ಅಕ್ಕ ಪಕ್ಕ ಹೂವಿನಂಗಡಿಗಳಂತೆ “ಡೆಂಟಲ್ ಹಾಸ್ಪಿಟಲ್” ಎಂದು ಬೋರ್ಡ್ ಗಳಿದ್ದವು. ನಮಗೆ ಒಂದು ಕ್ಷಣ ಗಾಬರಿ ಆಯಿತು. ಆ ಗಲ್ಲಿಯಲ್ಲೇ, ಅಕ್ಕ-ಪಕ್ಕದಲ್ಲೇ ಸುಮಾರು ಇಪ್ಪತ್ತೈದರಿಂದ ಮೂವತ್ತು ಕ್ಲಿನಿಕ್ ಗಳು. ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡು ಸಿಕ್ಕಿದ್ದೇ ಚಾನ್ಸು ಎಂದು ಫೋಟೋಗಳ ಸೆರೆಹಿಡಿದು ಮುನ್ನಡೆದೆವು.

ನೋಡಿದರೆ, ವಿಶ್ವವಿಖ್ಯಾತ ಚಾರ್ಮಿನಾರ್. ನನಗೆ ಅಷ್ಟೇನು ವಿಶೇಷ ಎನ್ನಿಸಲಿಲ್ಲ ಆದರೂ ಅಪ್ಪನ ಮಾತಿಗೆ ಬೆಲೆ ಕೊಟ್ಟು ಒಂದೆರಡು ಫೋಟೊ ನಾಲ್ಕೈದು ಸೆಲ್ಪಿ ಕ್ಲಿಕ್ಕಿಸಿ ಕೊಂಡೆವು ಮೂರೂ ಜನ. ಬಾಯಾರಿದ್ದರಿಂದ ಅಲ್ಲೇ ಪಕ್ಕದಲ್ಲಿ ಕಬ್ಬಿನ ಹಾಲು ಕುಡಿದು ತಾತಪ್ಪನ ಆಗಮನದ ಭಯದಿಂದ ಕಾರಿದ್ದ ಕಡೆಗೆ ನಡೆದೆವು. ದಾರಿಯುದ್ದಕ್ಕೂ ಮಂಡಿ ಸರ್, ಗುಬ್ಬಿಯಕ್ಕ “ತಾತ ಬಂದಿದ್ದರೆ?” ಎಂದು ಮಾತನಾಡುತ್ತಲೇ ಇದ್ದರು.

ಮಾಸ್ಕ್ ಗಳಿದ್ದ ಗಲ್ಲಿ ಅದು. ಥಟ್ಟನೆ ” ಗೋವಿಂದ ಹರಿ ಗೋವಿಂದ” ಎಂದು ನಮಾಜ಼್ ಹೊರಡುವ ಸ್ಪೀಕರ್ ನಿಂದ ಸದ್ದಾಯಿತು. ಒಂದೆರಡು ಕ್ಷಣ ಆಚೀಚೆ ನೋಡಿದೆ. ಮೈ ಝುಂ ಎಂದಿತು. ಗುಬ್ಬಿಯಕ್ಕ “ದಿಸ್ ಈಸ್ ವೈ ಮೈ ಇಂಡಿಯಾ ಈಸ್ ಟಾಲರೆಂಟ್” ಎಂದರು. ಚಾರ್ಮಿನಾರ್ ನೋಡಿದ ಖುಷಿಗಿಂತಲೂ ಇದು ನನಗೆ ಅಚ್ಚಳಿಯದ ಕ್ಷಣವಾಯಿತು. ಮತ್ತೆ ತಾತನ ನೆನಪಿಸಿಕೊಂಡು ಓಡಿದರೆ ತಾತಪ್ಪ ಹಾಯಾಗಿ ಬೀಡಿ ಸೇದುತ್ತ ಆಗ ಬರುತ್ತಿದ್ದಾನೆ. ಪಾಪ ಮಕ್ಕಳೆಲ್ಲ ಅವನನ್ನು ಕಂಡ ಕೂಡಲೆ ಮತ್ತೆಲ್ಲಿ ತಡ ಮಾಡುತ್ತಾನೋ ಎಂದು ಓಡಿ ಹೋಗಿ ಗಾಡಿ ಹತ್ತಿದರು.

ಪಯಣ ಸಾಗಿತು. ಬಹುಶಃ ಆ ಗಾಡಿಯನ್ನು ರಿಪೇರಿಗೆ ಬಿಟ್ಟು ಬಂದಿದ್ದಾನೆ ನಮ್ಮನ್ನು ಬಿಟ್ಟು ಹೋಗಿ ಅವರನ್ನು ಕರೆ ತರುತ್ತಾನೆ ಎಂದುಕೊಂಡೇ ಅಲ್ಲಿಗೆ ಸಾಗಿದೆವು. ಅಲ್ಲಿ ಇಳಿದು ನೋಡಿದರೆ ನಮಗಿಂತಲೂ ಮುಂಚೆಯೇ ಆ ಗಾಡಿಯವರೆಲ್ಲರೂ ಬಂದು ನಮಗೆ ಕಾಯುತ್ತಿದ್ದಾರೆ.. ಆ ತಾತಪ್ಪ ಎಲ್ಲಿ ಹೋಗಿದ್ದ? ಏನು ಮಾಡಿದ.. ಇವೆಲ್ಲವು ’?’ ಆಗಿಯೇ ಉಳಿದುಕೊಂಡಿತು. ಮ್ಯೂಸಿಯಂ ಗೆ ಕಾಲಿಡುತ್ತಲೇ ಹುಡುಗಿಯರು ನನ್ನ ಮೊಬೈಲ್ ಕೇಳಿದರು. ಕೊಟ್ಟುಬಿಟ್ಟೆ… ಬಗೆಬಗೆಯ ಕಾರ್ ಗಳನ್ನು ನೋಡುತ್ತಾ ಫೋಟೋ ಸೆಷನ್ ಮಾಡುತ್ತಾ ನಡೆದೆವು. ಅಲ್ಲೊಂದು ಪೆನ್ ಕಾರ್ ಇತ್ತು . ಕಶ್ಯಪಣ್ಣ, ” ಬಾ ಮಗ, ಪೆನ್ ಕಾರ್ ಮುಂದೆ ಸೆಲ್ಪಿ ತಗೊಳೋಣ” ಎಂದರು .ಇಬ್ಬರು ಪೋಸ್ ಕೊಟ್ಟು ಸೆಲ್ಪಿ ತೆಗೆದುಕೊಂಡೆವು. ನಂತರ ಮತ್ತೆ ಗಾಡಿ ಹತ್ತಿ ಸಾಹಿತ್ಯ ಮಂದಿರಕ್ಕೆ ಹೋಗುವಾಗ ಮೊಬೈಲ್ ನೋಡಿದರೆ, ನೋರೈವತ್ತಕ್ಕೂ ಹೆಚ್ಚು ಫೋಟೋಗಳು.. ಹೆಜ್ಜೆ ಹೆಜ್ಜೆಗೂ ಹುಡುಗಿಯರು ಸೆಲ್ಪಿ ತೆಗೆದುಕೊಂಡಿದ್ದಾರೆ.. ಅಬ್ಬಾ!!! ಸಾಕಾಗಿಹೋಯಿತು.

ಅಲ್ಲಿ ಬರುವಷ್ಟರಲ್ಲಿ ಊಟದ ಸಮಯವಾಗಿತ್ತು.ಶೈಲೇಶ್ ಅಂಕಲ್, “ಬ್ಯಾಟು ಬಾಲು ತಂದ್ರೆ ಒಂದ್ ಒಳ್ಳೆ ಕ್ರಿಕೆಟ್ ಆಡಬಹುದಿತ್ತು ಮಗ” ಅಂದ್ರು. ನಾನೂ, ” ಮನಸಿನ ಮಾತ್ ಹೇಳಿದ್ರಿ ಅಂಕಲ್” ಅಂತ ಒಂದ್ ಡೈಲಾಗ್ ಹೊಡೆದು ನಾನು ಗುಬ್ಬಿಯಕ್ಕ, ಮಂಡಿ ಸರ್ ಸೈಲೆಂಟಾಗಿ ಎಸ್ಕೇಪ್ ಆಗಲು ಪ್ರಯತ್ನಿಸಿದೆವು. ಅಷ್ಟರಲ್ಲಿ ಎಲ್ಲರೂ ” ಊಟ ಮಾಡ್ಕೊಂಡು ಹೋಗಿ” ಎಂದರು, ನಾವು ಬ್ಯಾಟು ಬಾಲು ತರಲು ಹೊರಟಿದ್ದೇವೆ ಎಂದುಕೊಂಡು. ನಾವು ಮುಗುಳ್ನಕ್ಕು, ಒಬ್ಬರ ಮುಖ ಒಬ್ಬರು ಮತ್ತೆ ನೋಡಿಕೊಂಡೆವು. ” ಯಕ್ಕ, ಮೆತ್ತಗೆ ಹೋಗಿ ಕಶ್ಯಪಣ್ಣನ್ ಕಿವಿಲಿ ಹೇಳಿ” ಎಂದು ಅವರ ಕಿವಿಯಲ್ಲಿ ಹೇಳಿದೆ . ಗುಬ್ಬಿಯಕ್ಕ ಹೋಗಿ “ಸರ್ ,ನಾವು ಹೋಗಿ ಬಿರಿಯಾನಿ ತಿನ್ಕೊಂಡ್ ಬರ್ತೀವಿ” ಎಂದರು. ಕಶ್ಯಪಣ್ಣ ಒಮ್ಮೆ ನಕ್ಕು ”ಹೋಗ್ಬನ್ನಿ” ಎಂದರು. ನನ್ನ ಮುಖ ನೋಡಿ ನನ್ನ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂದು ಹೇಳುವ ಕೆಲವೇ ಮಂದಿಯಲ್ಲಿ ಮಾಲಾ ಆಂಟಿ ಪ್ರಮುಖರು. ”ಎಲ್ಲೋ ಹೊರೆಟೆ ಕಳ್ಳ?” ಎಂದರು ” ಹೋಗಿ ಬಿರಿಯಾನಿ ತಿನ್ಕೊಂಡ್ ಬರ್ತೀವಿ, ಬರ್ತೀರ?” ಎಂದು ಪಿಸುಗುಟ್ಟಿದೆ. “ಪಾಪಿ, ಹೋಗ್ಬಾ, ಬರ್ತಾ ಪೆಪ್ಸಿ ತಗೊಂಡ್ ಬಾ” ಎಂದರು, ಮರುಕ್ಷಣವೇ ಎಸ್ಕೇಪ್. ” ಏ ಎಲ್ರನ್ನೂ ಕರ್ಕೊಂಡ್ ಹೋಗ್ಬಹುದಿತ್ತು” ಎಂದೆ, ಆದರೆ ಅಲ್ಲಿ ತರೆಸಿದ್ದ ಊಟ ವೇಸ್ಟ್ ಆಗತ್ತೆ ಎಂದು ಸ್ವಯಂ ತಿಳಿದುಕೊಂಡು ಸುಮ್ಮನಾದೆ.

ಅಲ್ಲಿ ಹೋಗಿ ಕುಳಿತು, ನಾನು ಗುಬ್ಬಿಯಕ್ಕ ಜೋಶ್ ಇಂದ ” ಹೈದೆರಾಬಾದಿ ಬಿರಿಯಾನಿ” ಎಂದೆವು ಸರ್ವರ್ ಗೆ, ಅವನು ವೆಜ್ ಆ ನಾನ್ ವೆಜ್ ಆ ಕೇಳಿದ.. ಇಬ್ಬರೂ ವೆಜ್ ಎಂದೆವು.. ಮಂಡಿ ಸರ್ ಮುಖ ಪೆಚ್ಚಾಗಿ… “ಅಯ್ಯೊ ನಿಮ್ಮ.. ನೀವ್ ಕೊಟ್ ಬಿಲ್ಡಪ್ ಗೆ, ಕದ್ದು ನಾನ್ವೆಜ್ ತಿಂತೀರ ಅಂತ ಅಂದ್ಕೊಂಡೆ” ಎಂದರು… ಸೀನ್ ಎ ಇಲ್ಲ.. ಎಂದು ಜೋರಾಗಿ ಹೇಳಿದೆ. ಬೆಳಿಗ್ಗೆ, ” ಇವತ್ತು ಏಕಾದಶಿ” ಎಂದು ಹೇಳಿ ಅಪ್ಪ ಫೋನ್ ಇಟ್ಟಿದ್ದರು.. ಏನಾಗಲ್ಲ ಎಂದು ಸರ್ರಿಯಾಗಿ ಬಾರಿಸಿದೆವು. ಖಾರ ಖಾರ, ಕಣ್ಣಲ್ಲೆಲ್ಲಾ ನೀರು, ಕಣ್ಣೀರು ಒರೆಸಿ ಒರೆಸಿ ಟಿಶು ಪೇಪರ್ ಗಳು ಖಾಲಿಯಾದವು. ಒಳ್ಳೆ ಬಿರಿಯಾನಿ ನೀಡಿದ್ದಕ್ಕೆ ಆತನಿಗೊಂದು ಥ್ಯಾಂಕ್ಸ್ ಹೇಳಿ ಕೈಯ್ಯಲ್ಲಿ ಪೆಪ್ಸಿ ಹಿಡಿದು ನಡೆದೆವು…

ಅಲ್ಲಿ ಹೇಳಿ ಬಂದಿರುವುದು ಬ್ಯಾಟ್ ತರುತ್ತೇವೆಂದು, ಅದೇ ಇಲ್ಲದೆ ಹೋದರೆ ಅಷ್ಟೆ… ಥಟ್ಟನೆ ನೆನಪಾಗಿ ಮೈನ್ ರೋಡಿಗೆ ಹೋದೆವು.. ನಮ್ಮ ಸಮಾಧಾನಕ್ಕೆ ಒಮ್ಮೆ ಶೈಲೇಶ್ ಅಂಕಲ್ಗೆ ಫೋನ್ ಮಾಡಿ ” ಅಂಕಲ್, ತರ್ತಿದೀವಿ… ರೆಡಿ ತಾನೆ?” ಎಂದೆ, ” ನಾವ್ ರೆಡಿ ಮಗ” ಎಂದ್ರು… ಸರಿ ಎಂದು ಒಂದೆರಡು ಕಡೆ ವಿಚಾರಿಸಿದೆವು.. ಇಲ್ಲ ಇಲ್ಲ ಎಂದರು.ಕಡೇಗೆ ಬಿಗ್ ಬಜ಼ಾರ್ ಏ ಗತಿ ಎಂದು ಹೊರಡುವಾಗ ಮೂಲೆಯಲ್ಲಿ ಒಂದು ಅಂಗಡಿ ಕಾಣಿಸಿತು. ಗುಬ್ಬಿಯಕ್ಕ ೨೩೦ರೂ. ಬ್ಯಾಟನ್ನು ೧೮೦ಕ್ಕೆ ಇಳಿಸಿದರು. ಅಬ್ಬ!! ಆ ದಿನ ನಿಜಕ್ಕು ಅವರು ಗ್ರೇಟ್ ಆದರು.. ಆದರೆ ಅಂದು ಥ್ಯಾಂಕ್ಸ್ ಹೇಳಲು ಸಾಧ್ಯವಗಲಿಲ್ಲ.. ಹೇಳಿದರೆ ಅವರಿಗೆ ಇಷ್ಟವೂ ಆಗುವುದಿಲ್ಲ.. ಆದ್ರೂ.. ಥ್ಯಾಂಕ್ಸ್ ಫ಼ಾರ್ ದಿ ಬಿರಿಯಾನಿ ಅಂಡ್ ಬ್ಯಾಟ್ ಗುಬ್ಬಿಯಕ್ಕ 😉 ಹೀಗೆ ಹೋದಲ್ಲೆಲ್ಲಾ ಜೊತೆಗಿರಿ 😛
ಬ್ಯಾಟ್ಯು ಬಾಲು ಹಿಡಿದು ಓಡಿದರೆ ಹೊರಗೆ ಮಾಲಾ ಆಂಟಿ, ಲತಾ ಆಂಟಿ, ಮೀನಾ ಆಂಟಿ ಮತ್ತು ಹುಡುಗಿಯರ ಗ್ಯಾಂಗ್ ಫೋಟೋಸೆಷನ್ ನಡೆಸ್ತಿದಾರೆ .. ಒಳಗೆ ಓಡಿದೆವು.. ಶೈಲೇಶ್ ಅಂಕಲ್, “ಬಂದ್ರಾ ಬನ್ನಿ..” ಎಂದು ಎದ್ದು ನಿಂತರು.. ಶುರು ಮಾಡೇ ಬಿಡೋಣ ಎಂದು ಹೊರನಡೆದೆವು.. ಬಾಯ್ಸ್ ಗ್ಯಾಂಗ್ ಕಾದು ಕಾದು ಸಾಕಾಗಿದ್ದರು, ಬಂದೊಡನೆ ರಪ್ ಎಂದು ಎದ್ದು ತಯಾರಾದರು. ಹುಡುಗಿಯರು ನಾವೂ ಬರ್ತೀವಿ ಎಂದು ಓಡಿ ಬಂದರು.. ಹುಡುಗರೆಲ್ಲ ಸಾಧ್ಯವೇ ಇಲ್ಲ ಎಂಬಂತೆ ತಲೆ ಆಡಿಸಿದರು.. ನಾನು “ಏ ಅವೆಲ್ಲ ಆಗಲ್ಲ” ಎಂದೆ, ಸಿಂಚನಾಗೆ ಕೋಪ ಬಂದು..

“ಅಪ್ಪ, ನಾವ್ ಆಡ್ಲೇ ಬೇಕು, ಇವ್ನು ಯಾವ್ದಕ್ಕೂ ಸೇರಿಸ್ಕೊಳ್ಳೊಲ್ಲ” ಎಂದಳು ಕಂಪ್ಲೇಂಟ್ ಮಾಡಿದಳು.. ಕಡೆಗೆ, ಎಲ್ಲರೂ ಸೇರಿ ಐದು ಟೀಮ್ ಆಗಿ ಆಟ ಶುರು ಮಾಡಿದೆವು.. ನಮ್ ಟೀಂ ಗೆ ಸುಮಂತ ಕ್ಯಾಪ್ಟನ್ನು.. ಅದು ಟು-ಡಿ, ಇದು ಫ಼ೋರು, ಸಿಕ್ಸ್ ಔಟು, ಗೋಡೆ ಔಟು ಎಂದೆಲ್ಲಾ ಗಲ್ಲಿ ಕ್ರಿಕೆಟ್ ರೂಲ್ ಹಾಕಿದೆವು.. ಆಟ ಶುರು ಮಾಡಿದೆವು.. ಮಿಸ್ಟರ್ ದಯಾನಂದ್ ಸಾಗರ್ ಅಂಡ್ ಟೀಂ ಚೀರ್ ಬಾಯ್ಸ್ ಅಂಡ್ ಗರ್ಲ್ಸ್ ಆದರು. ಹಂಗು ಹಿಂಗು, ಅವ್ರ್ಮೇಲೆ ಇವ್ರು ಇವ್ರ್ಮೇಲೆ ಅವ್ರು ಆಡಿ, ಬೌಲಿಂಗ್ ಸಿಕ್ಕಿಲ್ಲ ಎಂದು ಒಂದಿಬ್ಬ್ರು ಅತ್ತು, ಮೋಸ ಅಂತ ನಮ್ ಸೂರ್ಯ ಕಣ್ಣೀರ್ ಹಾಕೊಂಡು ಎಲ್ಲಾ ಆಯ್ತು ಕೊನೆಗು ಯಾರೂ ಗೆಲ್ಲದ ಕ್ರಿಕೆಟ್ ಆಟ ಮುಗ್ಸಿದ್ವಿ.. ಅಂದು ನಿಜಕ್ಕೂ ಸಖತ್ತಾಗಿ ಆಡಿದ್ದು ರವಿ ಅಂಕಲ್, ಗುಬ್ಬಿಯಕ್ಕ, ಶಮಂತ, ಸುಮಂತ, ಸಾಗರಣ್ಣ ಹಾಗು ಮೂರ್ ಬಾಲ್ ಆದಿದ್ರೂ ಚೆನ್ನಗಿ ಆಡಿದ್ದು ಶೈಲೇಶ್ಅಂಕಲ್.. ಹೀಗೆ ಆಟ ಮುಗಿಸಿ, ಟ್ರೈನ್ ಹತ್ತಲು ತಯಾರಾದೆವು… ಒಟ್ನಲ್ಲಿ ಕಡೆ ದಿನ ಇಷ್ಟೆಲ್ಲ ತರ್ಲೆ, ಮೋಜು ಎಲ್ಲಾ ನಡೆಸಿದ್ದೆವು…

ಇದು ಕೇವಲ ಒಂದು ದಿನದ ಝಲಕ್..

‍ಲೇಖಕರು admin

December 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Praveen Chitapur

    ಹೈದರಾಬಾದಿಗೆ ಬಂದು ನಮ್ಮನ್ನು ರಂಜಿಸಿದ್ದಕ್ಕೆ ವಿಜಯನಗರ ಬಿಂಬದ ಎಲ್ಲ ಸದಸ್ಯರಿಗೂ ಧನ್ಯವಾದಗಳು.ಹೈದರಾಬಾದಿನಲ್ಲಿ ನಿಮ್ಮ ವಾಸ ಸುಖವಾಗಿತ್ತೆಂದು ಈ ಲೇಖನದ ಮೂಲಕ ತಿಳಿಯಿತು 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: