ಓಶೋ ಎಂಬ ಭ್ರಮೆ; ಓಶೋ ಎಂಬ ನಿಜ

g p basavaraju

 

 

 

 

ಜಿ.ಪಿ.ಬಸವರಾಜು

ಸಾವಿರಾರು ಜೆನ್ ಕತೆಗಳನ್ನು ಹೇಳುತ್ತಿದ್ದ ಓಶೋ ಹೇಳಿದ ಒಂದು ಅದ್ಭುತ ಕತೆ ಇಲ್ಲಿದೆ: ಜೆನ್ ಧರ್ಮದ ಪಿತಾಮಹ ಎಂದು ಕರೆಯುವ ಬೋಧಿಧರ್ಮ ಈ ಜೆನ್ ಧರ್ಮವನ್ನು ಚೀನಾಕ್ಕೆ ತೆಗೆದುಕೊಂಡು ಹೋದ. ಆ ವೇಳೆಗೆ ಅವನ ಬಗ್ಗೆ ಅನೇಕ ಕತೆಗಳು ಹಬ್ಬಿದ್ದವು. ಅವನ ಪ್ರತಿಭೆಯ ಬಗ್ಗೆ, ಅವನ ಅಸಂಗತ ವ್ಯಕ್ತಿತ್ವದ ಬಗ್ಗೆ, ಅವನ ಅರಿವು, ಅವನು ಏರಿದ ಎತ್ತರ, ಅವನು ಜೆನ್ ಧರ್ಮವನ್ನು ಮನಗಾಣಿಸುತ್ತಿದ್ದ ರೀತಿ ಎಲ್ಲವೂ ದಂತಕತೆಗಳಾಗಿ ಚಾಲ್ತಿಯಲ್ಲಿದ್ದವು.

ಬೋಧಿಧರ್ಮ ಚೀನಾ ತಲುಪಿದಾಗ ಅವನನ್ನು ಬರಮಾಡಿಕೊಳ್ಳಲು ಚಕ್ರವರ್ತಿಯೇ ಅಲ್ಲಿಗೆ ಬಂದಿದ್ದ. ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡು ಬಂದಿದ್ದ ಚಕ್ರವರ್ತಿಗೆ ಬೋಧಿಧರ್ಮನನ್ನು ನೋಡಿ ಗಾಬರಿಯಾಯಿತು; ಮುಜುಗರವೂ ಆಯಿತು. ಹುಚ್ಚನಂತೆ ಕಾಣಿಸುತ್ತಿದ್ದ ಬೋಧಿಧರ್ಮ. ಒಂದು ಪಾದಕ್ಕೆ ಶೂ; ಇನ್ನೊಂದು ಶೂ ತಲೆಯ ಮೇಲಿತ್ತು. ಒಂದು ಬಗೆಯ ನಿರಾಶೆಯಲ್ಲಿದ್ದ ಚಕ್ರವರ್ತಿ ಹೇಗೋ ಅದೆಲ್ಲವನ್ನು ಸಹಿಸಿಕೊಂಡ. ಅವರಿಬ್ಬರೇ ಇದ್ದ ಹೊತ್ತನ್ನು ನೋಡಿಕೊಂಡು, ‘ಯಾಕೆ ಇದು ಹೀಗೆ?’ ಎಂದು ವಿನಯವಾಗಿಯೇ ಕೇಳಿದ.

forest treeಬೋಧಿಧರ್ಮ ಹೇಳಿದ: ‘ಇದಿನ್ನೂ ಬರಿ ಆರಂಭ.. ನಾನೆಂದರೆ ಬರೀ ವಿರೋಧಾಭಾಸಗಳೇ. ಶೂ ಕೇವಲ ಸಂಕೇತ ಮಾತ್ರ. ವಾಸ್ತವದಲ್ಲಿ ನಾನು ಒಂದು ಕಾಲನ್ನು ತಲೆಯ ಮೇಲೆ ಇರಿಸಿಕೊಳ್ಳಬಯಸಿದ್ದೆ.’

ಬೋಧಿಧರ್ಮನಂತೆ, ಈ ಕತೆಯನ್ನು ಹೇಳಿದ ಓಶೋ ಕೂಡಾ ಹಲವು ವೈರುಧ್ಯಗಳನ್ನು ತನ್ನ ಅರಿವಿನಲ್ಲಿ, ಆಳ್ತನದಲ್ಲಿ ತುಂಬಿಕೊಂಡಿದ್ದ. ಅವನ ಓದು, ಪಾಂಡಿತ್ಯ, ಪ್ರತಿಭೆ ಸರಿಸಾಟಿ ಇಲ್ಲದಂತೆ ಮಿಂಚುತ್ತಿತ್ತು. ಈ ಮಿಂಚಿಗೆ ಮರುಳಾಗಿ ಓಶೋನ ಶಿಷ್ಯರಾದವರು ಲಕ್ಷಾಂತರ ಮಂದಿ. ಮೊದಲು ಭಾರತದಲ್ಲಿ ಮಿಂಚಿ ಜನರನ್ನು ಗಲಿಬಿಲಿಗೊಳಿಸಿದ ಓಶೋ ರಾಷ್ಟ್ರದಿಂದ ರಾಷ್ಟ್ರಕ್ಕೆ ಜಿಗಿಯುತ್ತ ಹೋದ. ಹೋದಲ್ಲೆಲ್ಲ ಜನ ಮುತ್ತಿಕೊಳ್ಳುತ್ತಿದ್ದರು. ಅವನ ಮಾತುಗಳನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿದ್ದರು. ಅವನ ಸಿದ್ಧಾಂತಗಳನ್ನು ಅನುಸರಿಸಲು ನೋಡುತ್ತಿದ್ದರು. ಅವನ ಶಿಷ್ಯರಾಗಿ ಬದುಕಲು, ಬದುಕಿನ ಭಿನ್ನ ದಾರಿ ತುಳಿಯಲು ಹವಣಿಸುತ್ತಿದ್ದರು.

ಓಶೋ ಒಂದು ಬೆಳಕು, ಓಶೋ ಒಂದು ತತ್ವದರ್ಶನ; ಓಶೋ ಒಬ್ಬ ಭಗವಾನ್ ಹೀಗೆ ಅನೇಕ ರೂಪಗಳನ್ನು, ರೂಪಾಂತರಗಳನ್ನು ಶಿಷ್ಯರು ಓಶೋಗೆ ಕೊಟ್ಟು ಸಂತೃಪ್ತಿಪಟ್ಟುಕೊಳ್ಳಲು ನೋಡಿದರು. ಅನೇಕ ರಾಷ್ಟ್ರಗಳಲ್ಲಿ ಓಶೋ ಕೇಂದ್ರಗಳು ಆರಂಭವಾದವು. ಮಿಲಿಯಾಂತರ ಶಿಷ್ಯರು ಓಶೋನನ್ನು ಒಪ್ಪಿಕೊಂಡು, ಅವನ ವಿಚಾರ ಧಾರೆಗೆ ತಲೆಬಾಗಿದರು. ಅನೇಕರು ತಮ್ಮ ಬದುಕನ್ನೇ ಓಶೋಗಾಗಿ ಮುಡುಪಿಟ್ಟರು.

ಓಶೋ ಪಾಂಡಿತ್ಯ ಬಹಳ ಹರಿತವಾಗಿತ್ತು. ಹಿಂದೂ, ಬೌದ್ಧ, ಜೈನ, ಕ್ರಿಶ್ಚಿಯನ್, ಇಸ್ಲಾಂ, ಸಿಖ್ ಹೀಗೆ ಪ್ರಮುಖ ಧರ್ಮಗಳನ್ನೆಲ್ಲ ಅರೆದು ಕುಡಿದವನಂತೆ ಓಶೋ ಮಾತನಾಡುತ್ತಿದ್ದ. ಜೆನ್, ತಾವೋ, ತಾಂತ್ರ್ರಿಕ ದಾರಿಗಳು, ಅತೀಂದ್ರಿಯ ನಿಗೂಢಗಳು ಎಲ್ಲವೂ ಅವನಿಗೆ ತಿಳಿದಂತೆಯೂ ತೋರುತ್ತಿತ್ತು. ಧ್ಯಾನದಲ್ಲಿ ತನ್ನದೇ ವಿಧಾನಗಳನ್ನು ಓಶೋ ರೂಪಿಸಿದ್ದ. ಜಗತ್ತಿನ ಅನೇಕ ಅತೀಂದ್ರಿಯರ ದಾರಿಗಳನ್ನು ಅವನು ಅರಿತಂತೆಯೂ ಇದ್ದ. ಎಲ್ಲವನ್ನೂ ಎಲ್ಲ ಧರ್ಮಗಳಿಂದಲೂ ಅತ್ಯುತ್ತಮವಾದುದನ್ನು ತೆಗೆದು ತನ್ನದೇ ಮಾರ್ಗವನ್ನು ಅವನು ರೂಪಿಸಿಕೊಂಡಂತೆಯೂ ಅವನ ಶಿಷ್ಯರಿಗೆ ಕಾಣುತ್ತಿತ್ತು.

20ನೇ ಶತಮಾನದ ಅತ್ಯಂತ ಅಪಾಯಕಾರಿ ಧಾರ್ಮಿಕ ಗುರುಗಳಲ್ಲಿ ಓಶೋ ಒಬ್ಬನೆಂದು ಹೇಳುವ ಮಾತುಗಳು, ಬರಹಗಳು ಹಬ್ಬಿದ್ದವು. ಗುಜ್ರೆಫ್, ಕ್ರೊಲಿಯ ಜೊತೆಗೆ ಓಶೋನನ್ನು ಸೇರಿಸಿ ಇವರು ಮೂವರೂ ಅತ್ಯಂತ ಪ್ರಭಾವೀ ಮತ್ತು ಅಪಾಯಕಾರಿ ಧರ್ಮಗುರುಗಳು ಎಂದು ಹೇಳಲಾಗುತ್ತಿತ್ತು. ಓಶೋನನ್ನು ಒಮ್ಮೆ ಭೇಟಿಮಾಡಿದರೆ ಸಾಕು, ಮರುಳಾಗುವವರೇ ಹೆಚ್ಚು. ಅವನ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಭಾವನೆ ಎಲ್ಲೆಲ್ಲೂ ಮೂಡಿತ್ತು. ರೋಲ್ಸ್ ರಾಯ್ ಕಾರಿನಲ್ಲಿ ಕುಳಿತು ಓಶೋ ಸಾಗುವಾಗ ಒಂದೇ ಒಂದು ಕ್ಷಣ ಅವನ ದರ್ಶನವಾದರೆ ಸಾಕು ಎಂದು ಭಕ್ತರು ಸಾಲುಗಟ್ಟಿ ರಸ್ತೆಯ ಪಕ್ಕ ನಿಂತಿರುತ್ತಿದ್ದರು. ಅವನಿಗಾಗಿ ತಮ್ಮ ಸಂಪತ್ತನ್ನೆಲ್ಲ ಕೊಟ್ಟುಬಿಡುವ ಶಿಷ್ಯರೂ ಇದ್ದರು.

ಹಣ, ಸಂಪತ್ತು, ಜನಪ್ರಿಯತೆ, ಶಿಷ್ಯ ಸಮೂಹ ಓಶೋನನ್ನು ಪ್ರಸಿದ್ಧಿಯ ತುತ್ತ ತುದಿಯಲ್ಲಿ ನಿಲ್ಲಿಸಿದವು. ಓಶೋ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದ. ಸಾಂಸ್ಥಿಕ ಧರ್ಮಗಳಲ್ಲಿರುವ ಕಸುರನ್ನು ಎತ್ತಿ ತೋರಿಸುತ್ತಿದ್ದ. ಅವುಗಳನ್ನು ಕಟುವಾಗಿ ಟೀಕಿಸುತ್ತಿದ್ದ. ಲೈಂಗಿಕ ವಿಚಾರಗಳನ್ನು ಮಾತನಾಡುವಾಗ ಯಾವ ಮುಜುಗರವೂ ಅವನಿಗೆ ಇರಲಿಲ್ಲ. ರಾಜಕಾರಣಗಳನ್ನು ಬೈಯುತ್ತಿದ್ದ. ಹೀಗಾಗಿ ಅವನಿಗೆ ಶಿಷ್ಯರಿರುವಂತೆಯೇ ಶತ್ರುಗಳೂ ಇದ್ದರು.

ಅಪಾರ ಸಂಪತ್ತು ಬಂದು ಬಿದ್ದಾಗ ಆಗಬಹುದಾದ ಎಲ್ಲ ಕೇಡುಗಳೂ ಓಶೋವನ್ನು ಸುತ್ತುವರಿದವು. ಓಶೋ ಕೇಂದ್ರಗಳೆಂದರೆ ಮುಕ್ತ ಲೈಂಗಿಕ ಚಟುವಟಿಕೆಗಳು, ಬೇಕಾಬಿಟ್ಟಿಯಾಗಿ ಬಳಸಲು ಮಾದಕ ವಸ್ತುಗಳು, ಅಡೆತಡೆ ಇಲ್ಲದ ನಡವಳಿಕೆ, ಸಂಪತ್ತನ್ನು ಲಪಟಾಯಿಸುವ ಹುನ್ನಾರಗಳು, ಸರ್ವಾಧಿಕಾರದ ನಾಯಕರು, ಓಶೋ ಕೇಂದ್ರಗಳು ನಿಗೂಢ ಕೇಂದ್ರಗಳು ಎನ್ನುವಂಥ ಭಾವನೆ ಬೇರುಬಿಟ್ಟಿತ್ತು. ಧರ್ಮಗಳ ಒಳಗಿರುತ್ತಿದ್ದ ಎಲ್ಲ ಕಟ್ಟುಪಾಡುಗಳನ್ನು ಉಲ್ಲಂಘಿಸುತ್ತಿದ್ದ ಓಶೋ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಕಟ್ಟುಪಾಡುಗಳನ್ನೂ ಮುರಿಯಲು ನೋಡಿದ. ರಾಷ್ಟ್ರಗಳು, ಅವುಗಳ ಪ್ರವೇಶಕ್ಕಿರುವ ನಿಯಮಗಳನ್ನು ಇತ್ಯಾದಿ ಎಲ್ಲವನ್ನೂ ಧಿಕ್ಕರಿಸಲು ಓಶೋ ಮುಂದಾದ.

ತಮ್ಮದೇ ಸಾಮ್ರಾಜ್ಯವನ್ನು ಹುಟ್ಟುಹಾಕಬೇಕೆಂಬ ಓಶೋ ಶಿಷ್ಯರ ಬಯಕೆ ಅಮೆರಿಕದ ಆರೆಗನ್ನಲ್ಲಿ 64,000 ಎಕರೆ ಭೂಮಿಯನ್ನು ಕೊಂಡಿತು. ಅಲ್ಲಿ ಓಶೋ ಶಿಷ್ಯರು ನೆಲಸಿದರು. ಸುತ್ತಮುತ್ತಲಿನ ನಾಗರಿಕರು ತಮಗೆ ತೊಂದರೆ ಕೊಡಬಾರದೆಂದು, ಅವರನ್ನು ಓಡಿಸುವ ಹುನ್ನಾರವೂ ನಡೆಯಿತು. ಜನರಿಗೆ ವಿಷ ಹಾಕುವ ಹಂತಕ್ಕೂ ಅದು ಹೋಗಿ ಅಮೆರಿಕ ಸರ್ಕಾರ ಇಡೀ ಪ್ರಕರಣವನ್ನು ತನಿಖೆ ಮಾಡಿತು. ತನಿಖೆಯಿಂದ ಅನೇಕ ರಹಸ್ಯಗಳು ಹೊರಬಿದ್ದವು. ಓಶೋ ಬಾಕಿ ಉಳಿಸಿಕೊಂಡಿದ್ದ ತೆರಿಗೆ ಐದು ಮಿಲಿಯನ್ ಡಾಲರ್ ಗೂ ಮಿಕ್ಕಿತ್ತು. ಇದೆಲ್ಲ ಸೇರಿ ಓಶೋ ಜೈಲು ಸೇರಬೇಕಾಯಿತು. ಅಮೆರಿಕ ಈ ಅಪಾಯಕಾರಿ ವ್ಯಕ್ತಿಯನ್ನು ತನ್ನ ರಾಷ್ಟ್ರದಿಂದಲೇ ಹೊರಹಾಕಿತು. ಕೈಗೆ ಸಿಕ್ಕಷ್ಟು ಸಂಪತ್ತನ್ನು ದೋಚಿಕೊಂಡು ತಮ್ಮದೇ ವಿಮಾನದಲ್ಲಿ ಹಾರಲು ಓಶೋ ಮತ್ತವನ ಶಿಷ್ಯರು ಪ್ರಯತ್ನಿಸಿದರು.

ಎಷ್ಟೋ ರಾಷ್ಟ್ರಗಳನ್ನು ಸುತ್ತಿದರೂ ಎಲ್ಲಿಯೂ ಜಾಗವೇ ಸಿಕ್ಕಲಿಲ್ಲ. ಯಾರೂ ಈ ‘ಸೆಕ್ಸ್ ಗುರು’ವಿಗೆ ಒಂದು ಅಂಗುಲ ಭೂಮಿಯನ್ನೂ ನೀಡಲಿಲ್ಲ. ಓಶೋ ಕೊನೆಗೆ ಬಂದು ಸೇರಿದ್ದು ತಾಯಿನಾಡಿಗೆ; ಪೂನಾದ ತನ್ನ ಪೂರ್ವಾಶ್ರಮಕ್ಕೆ. ಈ ವೇಳೆಗಾಗಲೇ ತನ್ನ ಆರೋಗ್ಯವನ್ನು ಕಳೆದುಕೊಂಡಿದ್ದ ಓಶೋ 1990ರ ಜನವರಿ 19 ರಂದು ತೀರಿಹೋದ. ಆಗ ಆತನ ವಯಸ್ಸು ಕೇವಲ 58 ವರ್ಷ.

ಓಶೋ ಬದುಕಿದ್ದರೆ 2015ರ ಡಿಸೆಂಬರ್ 11ಕ್ಕೆ 85ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿತ್ತು. ಆದರೆ ಓಶೋ ಹೆಚ್ಚು ಕಾಲ ಬದುಕಲೇ ಇಲ್ಲ. ಓಶೋ ಇಲ್ಲವಾಗಿದ್ದರೂ, ಅವನ ವಿಚಾರಗಳು ಉಳಿದಿವೆ. ಓಶೋ ಕೇಂದ್ರಗಳು ಬೆಳೆಯುತ್ತಲೇ ಇವೆ. ಓಶೋ ನೀಡಿದ್ದ ಪ್ರವಚನಗಳು ಪುಸ್ತಕಗಳಾಗಿ ಮುದ್ರಣಗೊಳ್ಳುತ್ತಲೇ ಇವೆ. ಓಶೋ ಹೆಸರಿನಲ್ಲಿ 650 ಪುಸ್ತಕಗಳಿವೆ. 55 ಭಾಷೆಗಳಲ್ಲಿ ಈ ಕೃತಿಗಳು ದೊರೆಯುತ್ತಿವೆ. ಬದುಕಿನ ಅರ್ಥವನ್ನು ಹುಡುಕುವವರಂತೂ ಓಶೋ ಕೇಂದ್ರಗಳಿಗೆ ಎಡತಾಕುತ್ತಲೇ ಇದ್ದಾರೆ. ಇಂಥವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಹಾಗಾದರೆ ಓಶೋ ಹೇಳಿದ್ದೇನು?
ಓಶೋ ಯಾವುದರ ಬಗ್ಗೆ ಮಾತನಾಡಿದರೂ, ಅದರ ಆಳಕ್ಕಿಳಿದು ಮಾತನಾಡುತ್ತಿದ್ದ. ಅವನ ಹೃದಯಕ್ಕೆ ಹತ್ತಿರವಾಗಿದ್ದ ಸಂಗತಿ ಎಂದರೆ ಧ್ಯಾನ. ‘ಧ್ಯಾನ ಏಕಾಗ್ರತೆಯಲ್ಲ, ಅದೊಂದು ವಿಶ್ರಾಂತಿ.. .. ನೀನು ಹೆಚ್ಚು ಹೆಚ್ಚು ಆರಾಮಾಗಿದ್ದಂತೆ ನೀನು ಹೆಚ್ಚೆಚ್ಚು ತೆರೆದುಕೊಳ್ಳಬಯಸುವೆ, ಮೆತುವಾಗುವೆ.. .. ವಿಶ್ರಾಂತಿ ಎಂದರೆ ಏನೂ ಮಾಡುವುದಕ್ಕೆ ಇರದ ಒಂದು ಸ್ಥಿತಿಗೆ ನಿನ್ನನ್ನು ನೀನೇ ಒಳಪಡಿಸುವುದು.. .. ಸುಮ್ಮನೆ ಕಣ್ಣು ಮುಚ್ಚಿ ಸುತ್ತೆಲ್ಲ ನಡೆಯುವುದನ್ನು ಕೇಳಿಸಿಕೊ. ಯಾವುದನ್ನೂ ಗಮನಭಂಗವೆಂದು ಭಾವಿಸುವುದು ಬೇಡ. ಅದನ್ನು ಗಮನಭಂಗವೆಂದು ಪರಿಗಣಿಸಿದ ಕ್ಷಣವೇ ನೀನು ದೇವರನ್ನು ತಿರಸ್ಕರಿಸುವೆ. ಈ ಕ್ಷಣದಲ್ಲಿ ದೇವರು ಒಂದು ಹಕ್ಕಿಯಾಗಿ ನಿನ್ನಲ್ಲಿಗೆ ಬಂದಿದ್ದಾನೆ. ನಿರಾಕರಿಸಬೇಡ. ನಿನ್ನ ಬಾಗಿಲು ಬಡಿದಿದ್ದಾನೆ ಒಂದು ಹಕ್ಕಿಯಾಗಿ. ಮರುಕ್ಷಣದಲ್ಲಿ ಅವನು ಬಂದಿದ್ದಾನೆ ಒಂದು ನಾಯಿಯಾಗಿ-ಬೊಗಳುತ್ತಿದ್ದಾನೆ ಅಥವಾ ಒಂದು ಮಗುವಾಗಿ ಚೀರಾಡುತ್ತ, ಅಳುತ್ತ ಅಥವಾ ಒಬ್ಬ ಹುಚ್ಚನಾಗಿ ನಗುತ್ತಾ.. ..’

ಓಶೋ ಎಂದು ಕರೆಯುವ ಭಗವಾನ್ ರಜನೀಶ್ ಚಿಂತನೆಯಲ್ಲಿ ಬಹಳ ಮುಖ್ಯವಾದದ್ದು, ಜೀವ ಜಗತ್ತಿನ ನಡುವೆ, ಪರಿಸರದ ಜೊತೆ ಒಂದು ಸಂಬಂಧವನ್ನು ಹೆಣೆಯುವುದು. ಇದು ಕಣ್ಣಿಗೆ ಕಾಣಿಸದೇ ಹೋಗಬಹುದು; ಆದರೆ ಸಂಬಂಧವನ್ನಂತೂ ಬೆಸೆದಿದೆ. ಅದೊಂದು ಜೈವಿಕ ಸಂಬಂಧ. ಈ ಹಕ್ಕಿ, ಈ ಮರ, ಈ ಆಕಾಶ, ಈ ಸೂರ್ಯ, ಈ ಭೂಮಿ, ಈ ನೀನು ಮತ್ತು ಈ ನಾನು-ಎಲ್ಲ ಸಂಬಂಧವುಳ್ಳವರಾಗಿದ್ದೇವೆ. ಅದೊಂದು ಜೈವಿಕ ಕೂಟ; ಜೈವಿಕ ಬಂಧ. ನೀನು, ನಾನು ಇರಬೇಕೆಂದರೆ ಈ ಸಂಬಂಧದ ಕೊಂಡಿಯಲ್ಲಿರುವ ಎಲ್ಲದೂ ಉಳಿಯಬೇಕು. ಆದ್ದರಿಂದ ಯಾವುದನ್ನೂ ನಿರಾಕರಿಸಬೇಡ ಎಂದು ಹೇಳುತ್ತಾನೆ ರಜನೀಶ್.

ಮನುಷ್ಯ ಎಷ್ಟೇ ದುಷ್ಟನಂತೆ ಕಂಡರೂ, ಹಲವು ಗೋಜಲುಗಳಲ್ಲಿ ಮುಳುಗಿದಂತೆ ಕಂಡರೂ, ಅರಿವಿನ ಆಳಕ್ಕಿಳಿದು ಮಾತನಾಡುವ, ಸಕಲ ಜೀವಕೋಟಿಯ ಬಗ್ಗೆ ಪ್ರೀತಿ ಮತ್ತು ಕರುಣೆಯನ್ನು ತೋರುವ ಮನುಷ್ಯ, ಜೀವ ಸಂಕುಲಕ್ಕೆ ಹತ್ತಿರದ ಮನುಷ್ಯನಾಗಿ ಭಾಸವಾಗುತ್ತಾನೆ. ಈ ಕಾರಣಕ್ಕೇ ಇರಬೇಕು, ಓಶೋ ಕೇಂದ್ರಗಳು ಮತ್ತು ಓಶೋ ಚಿಂತನಧಾರೆ ಹರಿಗಡಿಯದೆ ಉಳಿದುಕೊಂಡಿರುವುದು.

‍ಲೇಖಕರು admin

December 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. asha

    Osho was poisoned by the US Government with Polonium, a radioactive material which resulted in his premature death. This was admitted by Osho himself. The reason for this was a lot of Christians in the US and world over were denouncing chrisitanity and joining the Osho movement which was not palatable to the church, which prodded the US Government to act. He was not allowed any European countries also was for the same reason..pressure from Vatican

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: