ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ನಾಲ್ಕು ಗೋಡೆಗಳು…

ಇಂಗ್ಲಿಷ್ ಮೂಲ: ವಿನೀತಾ ಶರ್ಮ

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ವಾಸ್ತುತಜ್ಞನ ನಕ್ಷೆಯ
ಮಸಿಯ ನಿರ್ಜಿವ ಗೆರೆಗಳಿಂದೆದ್ದು ಬಂದು
ನಾಲ್ಕು ಗೋಡೆಗಳು ಸರಸರನೆ ಬೆಳೆದು ನಿಂತವು.
ಇಟ್ಟಿಗೆ ಗಾರೆಗಳ ಪದರ ಪದರಗಳು
ಬಯಲನ್ನು ಒಳಗು ಹೊರಗು ಮಾಡಿದವು.
ಎತ್ತರಕ್ಕೆ ಭದ್ರವಾಗಿ ಬೆಳೆದು
ಒಂದು ದಿನ ತಾರಸಿಯನ್ನು ಮುಟ್ಟಿ
ನೀಲಿ ಆಕಾಶವನ್ನು ಮರೆಮಾಡಿ ಮನೆಯಾಯಿತು.
ಆನಂದದಿಂದ ಅವರು ಗೃಹಪ್ರವೇಶ ಮಾಡಿದರು.

ಅಡಿಗೆ ಕಟ್ಟೆ, ಊಟದ ಮೇಜು, ಮತ್ತು
ಬೆಡ್ ರೂಮ್ ಗಳ ನಡುವೆ ನಡೆದಾಡುತ್ತಾ
ಅವಳು ದಿನ ಕಳೆದಳು.
ಕೆಲವೊಮ್ಮೆ ಗೋಡೆಯ ಕನ್ನಡಿಯಲ್ಲಿ
ಪ್ರತಿಬಿಂಬ ನೋಡಿಕೊಂಡು
ನಿರಾಸಕ್ತಿಯ ಮುಗುಳ್ನಗೆಯಲ್ಲಿ
ಲಿಪ್ ಸ್ಟಿಕ್ ಲೇಪಿಸಿಕೊಂಡಳು.

ಆಗಾಗ ಅವಳಲ್ಲಿ ಪ್ರಶ್ನೆ ಮೂಡುತ್ತಿತ್ತು
ಒಂದು ದಿನ ಕೇಳಿಯೇ ಬಿಟ್ಟಳು ಗೋಡೆಗಳನ್ನು
ಯಾಕೆ ಈ ನಾಲ್ಕು ಗೋಡೆಗಳು ಅವನಿಗೆ
ಒಂದು ಗ್ರೀನ್ ರೂಮಿನಂತೆ ಅನ್ನಿಸುತ್ತದೆ?
ಗೋಡೆಯ ಹೊರಗೆ ಹೋಗುವಾಗ ಅವನು
ಎಚ್ಚರಿಕೆಯಿಂದ ತೊಟ್ಟುಕೊಳ್ಳುವ ಮೇಕಪ್,
ವೇಷಭೂಷಣ ಜೊತೆಗೆ ವ್ಯಕ್ತಿತ್ವವನ್ನು ತೆಗೆದುಹಾಕಲು?
ನಿಮ್ಮ ಎಂಟು ಇಂಚಿನ ದಪ್ಪಳತೆಯ ವಿಶೇಷವೇನು?

ಗೋಡೆಗಳು ನಕ್ಕವು ಅವಳನ್ನು ನೋಡಿ
ಪಿಸುನುಡಿದವು
ಹತ್ತಿರದಿಂದ ನೋಡು
ಗೋಡೆ ಅವನ ಒಳಗೇ ಇದೇ
ಗ್ರೀನ್ ರೂಮ್, ನಾನಲ್ಲ,
ಬಹುಶಃ ಪ್ರತಿಫಲನದ ಪ್ರೊಜೆಕ್ಟರ್ ಅನ್ನಬಹುದು

ಗೋಡೆಯ ಮೇಲೆ ತೂಗುಹಾಕಿದ್ದ
ಅವರ ಸುಂದರ ಫೋಟೋ ಸರಿಪಡಿಸುತ್ತಾ
ಅವಳು ಸಣ್ಣಗೆ ಮುಗುಳ್ನಕ್ಕಳು
ಗೋಡೆಗಳೂ ನಕ್ಕವು.

‍ಲೇಖಕರು Admin

15 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading