ಪ್ರತಿಭಾ ನಂದಕುಮಾರ್ ಅನುವಾದಿತ ಸಣ್ಣ ಕಥೆಗಳು…

ಮೂಲ : ದಾನೀಲ್ ಖಾರ್ಮ್ಸ್

ಕನ್ನಡಕ್ಕೆ : ಪ್ರತಿಭಾ ನಂದಕುಮಾರ್

Daniil Kharms (1905 – 1942) ಸೋವಿಯತ್ ರಷಿಯಾದ ಅಸಂಗತ ಕವಿ, ನಾಟಕಕಾರ, ಸಾಹಿತಿ.  ತನ್ನ ಹೆಚ್ಚಿನ ಬರಹಗಳನ್ನು ಭೂಗತವಾಗಿ ರಚಿಸಿದ.  ಏಕೆಂದರೆ ಅಂತಹ ಬರಹಗಳನ್ನು ರಚಿಸುವ ಸೋಶಿಯೇಟಿಗಳನ್ನು ಸ್ಟಾಲಿನ್ ನಿಷೇಧಿಸಿದ್ದ. 1931 ರಲ್ಲಿ ಅವನನ್ನು ಸೋವಿಯತ್ ವಿರೋಧಿ ಚಟುವಟಿಕೆಗಳ ಆಪಾದನೆಯ ಮೇಲೆ ಬಂಧಿಸಲಾಯಿತು. 

ಒಂದು ವರ್ಷ ಜೈಲಿನಲ್ಲಿತ್ತು ನಂತರ ಕುರ್ಸ್ಕ್ ಗೆ ಗಡಿಪಾರು ಮಾಡಲಾಯಿತು. ಅವನು ಯಥೇಚ್ಛವಾಗಿ ಬರೆದ ಮಕ್ಕಳ ಸಾಹಿತ್ಯ ಕೃತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಯಾವುದೇ ಸಾಹಿತ್ಯವನ್ನು ಬರೆಯಬಾರದೆಂದು ಕಟ್ಟಪ್ಪಣೆ ಮಾಡಲಾಯಿತು. ನಂತರ ಅವನು ಅನೇಕ ಅಸಂಗತ  ಕವನ ಕಥೆ ನಾಟಕಗಳನ್ನು ಬರೆದು ತನ್ನ ಮೇಜಿನ ಡ್ರಾಯರಿನಲ್ಲಿ ಅಡಗಿಸಿಟ್ಟಿದ್ದ.

1941 ಆಗಸ್ಟ್ ನಲ್ಲಿ ಲೆನಿನ್ ಗ್ರಾಡ್ ಮುತ್ತಿಗೆಗೆ ಮೊದಲು “ಸೋಲಿನ ಪ್ರಚಾರ ಮಾಡುವ” ಆಪಾದನೆಯ ಮೇಲೆ (spreading defeatist propaganda) ಖಾರ್ಮ್ಸ್ ನನ್ನು ಮತ್ತೆ ಬಂಧಿಸಿ ಆತನಿಗೆ ಬುದ್ದಿ ಸರಿಯಿಲ್ಲವೆಂದು ಘೋಷಿಸಿ ಮಿಲಿಟರಿ ಜೈಲಿನಲ್ಲಿ ಬಂಧಿಸಿಡಲಾಯಿತು. 1942ರಲ್ಲಿ ಲೆನಿನ್ ಗ್ರಾಡ್ ಬರಗಾಲಕ್ಕೆ ತುತ್ತಾದಾಗ ಖಾರ್ಮ್ಸ್ ಜೈಲಿನಲ್ಲಿ ಹಸಿವಿನಿಂದ ಸತ್ತ.  ಆಗ ಅವನ ವಯಸ್ಸು 36.  ಮಿಖಾಯಿಲ್ ಗೋರ್ಬಚೇವ್ ನ ಗ್ಲಾಸ್ ನೋಸ್ಟ್ ನಂತರವೇ ಖಾರ್ಮ್ಸ್ ನ ಬರಹಗಳು ಇಂಗ್ಲಿಷಿಗೆ ಅನುವಾದವಾಗಿ ಹೊರಜಗತ್ತಿಗೆ ಬಂದಿದ್ದು. 2009ರಲ್ಲಿ Matvei Yankelevich ಇಂಗ್ಲಿಷಿಗೆ ಅನುವಾದ ಮಾಡಿದ Today I Wrote Nothing: The Selected Writings of Daniil Kharms ಬಹಳ ಜನಪ್ರಿಯವಾಯಿತು. ಇವನ ಬಗ್ಗೆ ಹಾಲಿವುಡ್ ಒಂದು ಚಿತ್ರವನ್ನೂ ತೆಗೆದಿದೆ.  ಅವನ ಕೆಲವು ಅಸಂಗತ ಸಣ್ಣ ಕಥೆಗಳ ಅನುವಾದ ಇದು: 

1 ನೀಲಿ ನೋಟ್ ಪುಸ್ತಕ ನಂಬರ್ 2

ಒಂದಾನೊಂದು ಕಾಲದಲ್ಲಿ ಒಬ್ಬ ಕೆಂಚುಕೂದಲ ಮನುಷ್ಯನಿದ್ದ. ಅವನಿಗೆ ಕಣ್ಣುಗಳಿರಲಿಲ್ಲ. ಕಿವಿಗಳೂ ಇರಲಿಲ್ಲ. ಅವನಿಗೆ ನಿಜವಾಗಿ ಕೂದಲೂ ಇರಲಿಲ್ಲ, ಹಾಗಾಗಿ ಅವನನ್ನು ಸುಮ್ಮನೆ ಕೆಂಚುಕೂದಲ ಮನುಷ್ಯ ಅಂತ ಕರೆಯುತ್ತಿದ್ದರು. 

ಅವನಿಗೆ ಬಾಯಿಲ್ಲದುದರಿಂದ ಅವನಿಗೆ ಮಾತನಾಡಲಾಗುತ್ತಿರಲಿಲ್ಲ. ಅವನಿಗೆ ಮೂಗು ಸಹಾ ಇರಲಿಲ್ಲ. 

ಅವನಿಗೆ ಕೈಗಳು ಮತ್ತು ಕಾಲುಗಳು ಕೂಡಾ ಇರಲಿಲ್ಲ.  ಅವನಿಗೆ ಹೊಟ್ಟೆಯೂ ಇರಲಿಲ್ಲ ಮತ್ತು ಬೆನ್ನು ಇರಲಿಲ್ಲ ಹಾಗೂ ಅವನಿಗೆ ಬೆನ್ನುಮೂಳೆ ಇರಲಿಲ್ಲ ಮತ್ತು ಯಾವುದೇರೀತಿಯ ಕರುಳುಗಳೂ ಇರಲಿಲ್ಲ.  ವಾಸ್ತವವಾಗಿ ಅವನಿಗೆ ಏನೂ ಇರಲಿಲ್ಲ.  ಹಾಗಾಗಿ ನಾವು ಯಾರ ಬಗ್ಗೆ ಮಾತಾಡುತ್ತಿದ್ದೇವೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. 

ಹಾಗಾಗಿ ಇನ್ನು ಮೇಲೆ ನಾವು ಅವನ ಬಗ್ಗೆ ಮಾತಾಡದಿರುವುದು ಕ್ಷೇಮ.  

2 ಒಂದು ಸಾನೆಟ್ 

ಇವತ್ತು ನನಗೊಂದು ಅದ್ಭುತ ನಡೆಯಿತು, ಇದ್ದಕ್ಕಿದ್ದಂತೆ ನನಗೆ ಯಾವುದು ಮೊದಲು ಬರುತ್ತದೆ ಅನ್ನುವುದು ಮರೆತೇ ಹೋಯಿತು – ಏಳೋ ಅಥವಾ ಎಂಟೋ?

ನಾನು ಪಕ್ಕದ ಮನೆಗೆ ಹೋಗಿ ಈ ಬಗ್ಗೆ ಅವರ ಅಭಿಪ್ರಾಯ ಕೇಳಿದೆ. 

ಅವರಿಗೆ ಮತ್ತು ನನಗೆ ಆದ ಅತ್ಯಾಶ್ಚರ್ಯವೆಂದರೆ ಇದ್ದಕ್ಕಿದ್ದಂತೆ ಅವರಿಗೂ ಗೊತ್ತಾಯಿತು ಅವರಿಗೂ ಎಣಿಸುವುದು ಮರೆತುಹೋಗಿತ್ತು. ಅವರಿಗೆ 1, 2, 3, 4, 5 ಮತ್ತು 6 ನೆನಪಿತ್ತು  ಅದರ ನಂತರ ಏನು ಬರುತ್ತದೆ ಅನ್ನುವುದು ಮರೆತುಹೋಗಿತ್ತು. 

ನಾವೆಲ್ಲಾ ಒಟ್ಟಿಗೇ ಒಂದು ದಿನಸಿ ಅಂಗಡಿಗೆ ಹೋದೆವು.  ಅದೇ ಆ ನಾಮನ್ಸ್ಕಾಯ ಮತ್ತು ಬಸ್ಸಯ್ಯನಿವ ರಸ್ತೆಗಳ ಮೂಲೆಯಲ್ಲಿರುವ ಅಂಗಡಿಗೆ. ನಮಗೊದಗಿದ ವಿಪತ್ತಿನ ಬಗ್ಗೆ ಕ್ಯಾಶಿಯರ್ ನನ್ನು ಕೇಳಬೇಕೆಂದು. ಅವಳು ನಮ್ಮತ್ತ ಒಂದು ಬೇಸರದ ನಗೆ ಎಸೆದು ಅವಳ ಬಾಯಿಂದ ಚಿಕ್ಕದೊಂದು ಸುತ್ತಿಗೆ ತೆಗೆದು, ಅವಳ ಮೂಗನ್ನು ಚಿಕ್ಕದಾಗಿ ಹಿಂದೆ ಮುಂದೆ ಆಡಿಸಿ ಹೇಳಿದಳು:

– ನನ್ನ ಅಭಿಪ್ರಾಯದಲ್ಲಿ, ಏಳರ ನಂತರ ಎಂಟು ಬಂತೆಂದರೆ ಮಾತ್ರ ಎಂಟಕ್ಕೆ ಮೊದಲು ಏಳು ಬರುತ್ತದೆ. 

ನಾವು ಕ್ಯಾಶಿಯರ್ ಗೆ ಧನ್ಯವಾದ ತಿಳಿಸಿ ಸಂತೋಷದಿಂದ ಅಂಗಡಿಯಿಂದ ಹೊರಗೆ ಓಡಿದೆವು. ಆದರೆ ಅವಳ ಮಾತುಗಳನ್ನು ಎಚ್ಚರಿಕೆಯಿಂದ ಯೋಚಿಸಿದಾಗ ಅವಳ ಮಾತಿನಲ್ಲಿ ಯಾವುದೇ ಅರ್ಥವಿರಲಿಲ್ಲ ಎಂದು ತಿಳಿದು ನಮಗೆ ಮತ್ತೆ ಬೇಸರವಾಯಿತು.

ಈಗ ನಾವೇನು ಮಾಡುವುದು? ನಾವು ಬೇಸಿಗೆ ತೋಟಕ್ಕೆ ಹೋಗಿ ಮರಗಳನ್ನು ಎಣಿಸಲು ಶುರು ಮಾಡಿದೆವು.  ಆದರೆ ಆರು ತಲುಪಿದ ತಕ್ಷಣ ನಾವು ಎನಿಸುವುದನ್ನು ನಿಲ್ಲಿಸಿ ಜಗಳ ಮಾಡತೊಡಗಿದೆವು: ಕೆಲವರು ನಂತರ ಏಳು ಬರಬೇಕೆಂದೂ ಮತ್ತೆ ಕೆಲವರು ಎಂಟು ಬರಬೇಕೆಂದೂ ಕಿತ್ತಾಡತೊಡಗಿದರು. 

ಬಹಳ ಹೊತ್ತು ನಾವು ವಾದಿಸುತ್ತಲೇ ಇದ್ದೆವು. ಕೊನೆಗೆ ಏನೋ ಅದೃಷ್ಟಕ್ಕೆ ಒಂದು ಮಗು ಮರದ ಕೊಂಬೆಯಿಂದ ಜಾರಿ ಬಿದ್ದು ಅದರ ಎರಡೂ ದವಡೆಗಳನ್ನು ಮುರಿದುಕೊಂಡಿತು. ಅದರಿಂದ ನಮ್ಮ ವಿವಾದಕ್ಕೆ ತೆರೆ ಬಿತ್ತು. 

ನಂತರ ನಾವೆಲ್ಲಾ ಮನೆಗೆ ಹೋದೆವು.

3 ಬೀಳುವ ಮುದುಕಿಯರು 

ತನ್ನ ಅತೀ ಕುತೂಹಲದಿಂದಾಗಿ ಒಬ್ಬಳು ಮುದುಕಿ ಕಿಟಕಿಯಿಂದ ಬಿದ್ದು ನೆಲಕ್ಕಪ್ಪಳಿಸಿ ಸತ್ತಳು. 

ಮತ್ತೊಬ್ಬಳು ಮುದುಕಿ, ತನ್ನ ಅತಿ ಕುತೂಹಲದಿಂದಾಗಿ  ಬಿದ್ದವಳನ್ನು ನೋಡಲು ಕಿಟಕಿಯಿಂದ ಬಗ್ಗಿ ನೋಡುತ್ತಾ ಅವಳೂ ಕೆಳಗೆ ಬಿದ್ದು ಅಪ್ಪಚ್ಚಿಯಾದಳು. 

ಆಮೇಲೆ ಮೂರನೆಯವಳು ಕಿಟಕಿಯಿಂದ ಬಿದ್ದಳು. ನಂತರ ನಾಲ್ಕನೆಯವಳು, ಆಮೇಲೆ ಐದನೆಯವಳು. 

ಆರನೇ ಮುದುಕಿ ಕಿಟಕಿಯಿಂದ ಬಿದ್ದಾಗ ಅವರನ್ನು ನೋಡುವುದು ನನಗೆ ಬೋರಾಗಿ ನಾನು ಮಾಲ್ತಸೆವ್ ಮಾರುಕಟ್ಟೆಗೆ ಹೋದರೆ ಅಲ್ಲಿ ಹೇಳಿದರು ಯಾರೋ ಕುರುಡಿಯೊಬ್ಬಳಿಗೆ ಹೆಣೆದ ಶಾಲು ಕೊಟ್ಟರಂತೆ. 

4 ವಿಷಯ

ಒಂದು ಸಲ ಓರ್ಲೋವ್ ಸಿಕ್ಕಾಪಟ್ಟೆ ಜಜ್ಜಿದ ಕಾಳುಗಳನ್ನು ತಿಂದು ಸತ್ತ. ಒರ್ಲೋವ್  ಬಗ್ಗೆ ತಿಳಿದು ಕ್ರೈಲೊವ್ ಕೂಡಾ ಸತ್ತ. ಆದರೆ ಸ್ಪ್ರಿಡೊನೊವ್  ಕಾರಣವಿಲ್ಲದೆ ಸತ್ತ. ಅವನ ಹೆಂಡತಿ ಅಡಿಗೆ ಮನೆಯ ಕಟ್ಟೆಯಿಂದ ಬಿದ್ದು ಸತ್ತಳು. ಆದರೆ  ಸ್ಪ್ರಿಡೊನೊವ್ ಮಕ್ಕಳು ಕೊಳದಲ್ಲಿ ಮುಳುಗಿ ಸತ್ತರು. ಈ ನಡುವೆ ಸ್ಪ್ರಿಡೊನೊವ್ ನ ಅಜ್ಜಿ ಕುಡುಕಿಯಾಗಿ ಹಾಳಾದಳು. ಆದರೆ ಮಿಖೈಲೊವ್ ತಲೆಬಾಚುವುದನ್ನು ನಿಲ್ಲಿಸಿ ಕಾಯಿಲೆಬಿದ್ದ. ಮತ್ತು ಕ್ರುಗ್ ಲೋವ್ ಚಾಬೂಕು ಹಿಡಿದ ಹುಡುಗಿಯೊಬ್ಬಳ ಚಿತ್ರ ಬರೆದು ಹುಚ್ಚನಾದ.  ಮತ್ತು ಪೆರಿಸ್ಟೋಸೊವ್ ಗೆ ಯಾರೋ ನಾನೂರು ರೂಪಾಯಿಗಳನ್ನು ಕಳಿಸಿದರು ಮತ್ತು ಅದರಿಂದ ಅವನಿಗೆ ಎಷ್ಟು ಧಿಮಾಕು ಬಂತೆಂದರೆ ಅವನನ್ನು ಕೆಲಸದಿಂದ ವಜಾ ಮಾಡಿದರು.  

ಒಳ್ಳೆಯ ಮನುಷ್ಯರಿಗೆ ಒಳ್ಳೆಯ ಬದುಕು ಬಾಳಲು ಬರಲ್ಲ.

5 ಪುಷ್ಕಿನ್ ಬದುಕಿನ ಘಟನೆಗಳು 

1. ಪುಷ್ಕಿನ್ ಒಬ್ಬ ಕವಿ ಮತ್ತು ಸದಾ ಏನಾದರೂ ಬರೆಯುತ್ತಿದ್ದ. ಒಂದು ಸಲ ಝುಕೊವ್ಸ್ಕಿ ಅವನು ಬರೆಯುತ್ತಿದ್ದುದನ್ನು ಓದಿ ಜೋರಾಗಿ ಉದ್ಗರಿಸಿದ – ಅಯ್ಯೋ.. ನಿನಗೆ ಬರಿಯಕ್ಕೆ ಏನೇನೂ  ಬರಲ್ಲ! 

ಅವತ್ತಿನಿಂದ ಪುಷ್ಕಿನ್ ಗೆ ಅವನ ಬಗ್ಗೆ ಬಹಳ ಪ್ರೀತಿ ಬಂತು ಮತ್ತು ಅವನನ್ನು ಸ್ನೇಹದಿಂದ ಝುಕೋವ್ ಎಂದು ಕರೆಯಲಾರಂಭಿಸಿದ. 

2. ನಮಗೆಲ್ಲ ಗೊತ್ತಿರುವಂತೆ ಪುಷ್ಕಿನ್ ಗೆ ಗಡ್ಡ ಬೆಳೆಯಲೇ ಇಲ್ಲ. ಪುಷ್ಕಿನ್ ಗೆ ಇದರ ಬಗ್ಗೆ ತುಂಬಾ ಚಿಂತೆ ಇತ್ತು ಮತ್ತು ಅವನಿಗೆ ಪುಷ್ಕಳವಾದ, ಘನವಾದ ಗಡ್ಡ ಬಿಟ್ಟ ಝಕಾರಿನ್ ಬಗ್ಗೆ ಹೊಟ್ಟೆಕಿಚ್ಚು ಉಂಟಾಯಿತು.  “ಅವನದು ಬೆಳಿಯುತ್ತೆ, ನನ್ನದು ಬೆಳಿಯೋದಿಲ್ಲ” ಅಂತ ಪುಷ್ಕಿನ್ ಆಗಾಗ ಝಕಾರಿನ್ ಕಡೆಗೆ ತನ್ನ ಉಗುರು ತೋರಿಸುತ್ತಾ ಹೇಳುತ್ತಿದ್ದ ಮತ್ತು ಪ್ರತಿಸಲ ಅವನು ಹೇಳಿದ್ದು ಸರಿಯಾಗಿತ್ತು.

3. ಒಂದು ಸಲ ಪೆಟ್ರಶೆವ್ಸ್ಕಿ ಕೈಗಡಿಯಾರ ಕೆಟ್ಟುಹೋಯಿತು, ಅವನು ಪುಷ್ಕಿನ್ ಗೆ ಹೇಳಿಕಳಿಸಿದ. ಪುಷ್ಕಿನ್ ಬಂದು ನೋಡಿ ಸುಮ್ಮನೆ ಕುರ್ಚಿಯ ಮೇಲೆ ಹಾಕಿದ.  ಪೆಟ್ರಶೆವ್ಸ್ಕಿ ಅವನತ್ತ ನೋಡಿ “ಏನಂತೀಯಾ ಗೆಳೆಯಾ ಪುಷ್ಕಿನ್?” ಎಂದ.  “ಇದು ಸ್ಟಾಪ್ ವಾಚ್” ಅಂದ ಪುಷ್ಕಿನ್. 

4. ಒಂದು ಸಲ ಪುಷ್ಕಿನ್ ಕಾಲು ಮುರಿದಾಗ ಅವನು ಗಾಲಿಯ ಮೇಲೆ ಓಡಾಡತೊಡಗಿದ. ಪುಷ್ಕಿನ್ ಗೆಳೆಯರಿಗೆ ಅವನನ್ನು ರೇಗಿಸುವುದು ಮಜಾ ಅನ್ನಿಸಿ ಅವನ ಗಾಲಿಯನ್ನು ಹಿಡಿದೆಳೆಯುತ್ತಿದ್ದರು. ಪುಷ್ಕಿನ್ ಗೆ ಇದರಿಂದ ಸಿಕ್ಕಾಪಟ್ಟೆ ಕೋಪ ಬಂತು ಮತ್ತು ಅವನು ತನ್ನ ಗೆಳೆಯರ ಬಗ್ಗೆ ಕೆಟ್ಟ ಕವನಗಳನ್ನು ಬರೆದ. ಆ ಕವನಗಳನ್ನು ಅವನು “ಚುಟುಕಗಳು” ಎಂದು ಕರೆದ.

5. 1829 ರ ಬೇಸಿಗೆಯನ್ನು ಪುಷ್ಕಿನ್ ತನ್ನ ಹಳ್ಳಿಯಲ್ಲಿ ಕಳೆದ.  ಬೆಳಿಗ್ಗೆ ಬೇಗ ಎದ್ದು ಒಂದು ಚೊಂಬು ತಾಜಾ ಹಾಲು ಕುಡಿದು ನದಿಯಲ್ಲಿ ಸ್ನಾನ ಮಾಡಲು ಓಡುತ್ತಿದ್ದ.  ನದಿಯಲ್ಲಿ ಸ್ನಾನ ಮಾಡಿ ಹುಲ್ಲಿನ ಮೇಲೆ ಮಲಗಿ ರಾತ್ರಿ ಊಟದವರೆಗೂ ನಿದ್ದೆ ಮಾಡುತ್ತಿದ್ದ. ರಾತ್ರಿ ಊಟದ ನಂತರ ಪುಷ್ಕಿನ್ ಹ್ಯಾಮೋಕ್ ನಲ್ಲಿ ಮಲಗುತ್ತಿದ್ದ. ಯಾರಾದರೂ ದುರ್ವಾಸನೆ ಬೀರುವ ರೈತರು  ನಡೆದುಹೋದರೆ ಪುಷ್ಕಿನ್ ಅವರತ್ತ ತಲೆ ಆಡಿಸಿ ಬೆರಳುಗಳಿಂದ ಮೂಗು ತಿರುಚುತ್ತಿದ್ದ. ಮತ್ತು ಆ ದುರ್ವಾಸನೆ ಬೀರುವ ರೈತರು ತಮ್ಮ ಟೊಪ್ಪಿ ಕೆರೆಯುತ್ತಾ “ಪರವಾಗಿಲ್ಲ” ಅನ್ನುತ್ತಿದ್ದರು.

6.  ಪುಷ್ಕಿನ್ ಗೆ ಕಲ್ಲು ಎಸೆಯುವುದು ಅಂದರೆ ಇಷ್ಟ. ಕಲ್ಲು ಕಂಡರೆ ಸಾಕು ಎತ್ತಿ ಎಸೆಯುತ್ತಿದ್ದ. ಒಂದೊಂದು ಸಲ ಅವನಿಗೆ ಎಂಥಾ ಸಿಟ್ಟು ಬರುತ್ತಿತ್ತೆಂದರೆ ಅಲ್ಲಿ ನಿಂತು, ಮುಖ ಎಲ್ಲ ಕೆಂಪು ಮಾಡಿಕೊಂಡು,  ಜೋರಾಗಿ ತೋಳು ಬೀಸುತ್ತಾ ಕಲ್ಲು ಬೀಸುತ್ತಿದ್ದ. ನಿಜಕ್ಕೂ ಅದು ಭಯಂಕರವಾಗಿರುತ್ತಿತ್ತು!

7. ಪುಷ್ಕಿನ್ ಗೆ ನಾಲ್ವರು ಗಂಡುಮಕ್ಕಳಿದ್ದರು, ಎಲ್ಲರೂ ದಡ್ಡರು. ಅವರಲ್ಲಿ ಒಬ್ಬನಿಗೆ ನೆಟ್ಟಗೆ ಕುರ್ಚಿಯಲ್ಲಿ ಕೂರಲೂ ಬರದೇ ಬಿದ್ದುಬಿಡುತ್ತಿದ್ದ. ಹಾಗೆ ನೋಡಿದರೆ ಸ್ವತಃ ಪುಷ್ಕಿನ್ ಗೇ ಕುರ್ಚಿಯಲ್ಲಿ ಸರಿಯಾಗಿ ಕೂರಲು ಬರುತ್ತಿರಲಿಲ್ಲ.  ಅವರು ಟೇಬಲ್ ಬಳಿ ಕೂತಿದ್ದರೆ ಒಂದು ಕಡೆ ಪುಷ್ಕಿನ್ ತನ್ನ ಕುರ್ಚಿಯಿಂದ ಬೀಳುತ್ತಿದ್ದರೆ ಇನ್ನೊಂದು ಕಡೆ ಅವನ ಮಗ. ಇಬ್ಬರಲ್ಲಿ ಯಾರನ್ನು ನೋಡಬೇಕೆನ್ನುವುದೇ ಗೊತ್ತಾಗುತ್ತಿರಲಿಲ್ಲ.

‍ಲೇಖಕರು Admin

March 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: