ಜಯಲಕ್ಷ್ಮಿ ಪಾಟೀಲ್ ಅಂಕಣ- ಇಂಜಿನಿಯರಿಂಗ್ ಗೆ ಅಡ್ಮಿಶನ್ ಮಾಡಿಸಿದರು….

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

25

ಪಿಯುಸಿ ಓದುವಾಗ ನಮ್ಮ ಓಣಿಯಲ್ಲೇ ಕೆಲವರು ನನ್ನ ಸಹಪಾಠಿಗಳಿದ್ದರು. ನನ್ನ ಬಾಲ್ಯ ಸ್ನೇಹಿತ ಸುಧೀರ ಹಸರಡ್ಡಿ, ತೇಜಶ್ರೀ ಹಿರೇಮಠ, ವಿದ್ಯಾ ಹಿಪ್ಪರಗಿ, ಮೀನಾಕ್ಷಿ ಹುಡೇದ್, ವನಮಲಾ ರಾಠೋಡ್, ಪದ್ಮಾ ಕುಂಟೆ ಮತ್ತು ಇನ್ನೂ ಒಂದಿಷ್ಟು ಜನ ಹುಡುಗರು. ಇತ್ತ ತೇಜು (ತೇಜಶ್ರೀ) ಮನೆ, ಅತ್ತ ಸುಧಿಯ ಮನೆ, ನಡುವೆ ನನ್ನಜ್ಜಿಯ ಮನೆ. ಎರಡೂ ಬದಿಯಲ್ಲಿ ಕೇವಲ ಕಂಪೌಂಡ್ ಮಾತ್ರ ಅಡ್ಡವಾದರೂ ನಮ್ಮನೆಯಲ್ಲಿ ಏನೇ ಮಾತಾಡಿದರೂ ಏರುದನಿಯ ಮಾತು. ಆದರೆ ಈ ಅಕ್ಕಪಕ್ಕದ ಎರಡೂ ಮನೆಗಳಲ್ಲಿ ಅದೆಷ್ಟು ಸಣ್ಣ ದನಿಯಲ್ಲಿ ಮಾತಾಡುತ್ತಿದ್ದರೆಂದರೆ ಮನೆಯಲ್ಲಿ ಜನರಿದ್ದಾರೋ ಇಲ್ಲವೋ ಎಂದು ಅನುಮಾನ ಬರುವಷ್ಟು. 

ಬಾಲ್ಯದಲ್ಲಿ ಮಹಾ ತರಲೆಯಾಗಿದ್ದ ಹಸರಡ್ಡಿ ಸುಧಿ ಈಗ ನಂಬಲೇ ಆಗದಷ್ಟು ಸೈಲೆಂಟ್ ಆಗಿದ್ದ. ನನ್ನ ಜೊತೆ ಮುಂಚಿನಂತೆ ಜಗಳವಾಡುವುದು ದೂರದ ಮಾತು, ಮಾತೇ ಆಡುತ್ತಿರಲಿಲ್ಲ. ಬಿಜಾಪುರಕ್ಕೆ ಬಂದ ಹೊಸತರಲ್ಲಿ ಒಂದೆರಡು ಸಲ ನಾನು ಮಾತನಾಡಲು ಪ್ರಯತ್ನಿಸಿ ಅವನು ಅಪರಿಚಿತನಂತೆ ಹಾಂ ಹೂಂ ಎಂದು ಚುಟುಕಾಗಿ ಉತ್ತರಿಸಿದ್ದನ್ನು ಕಂಡು ನಾನೂ ಮಾತು ನಿಲ್ಲಿಸಿದೆ ಅವನೊಂದಿಗೆ.

ಮುಂದೆ ನಾನು ಮುಂಬೈಯಲ್ಲಿದ್ದಾಗ ಅಲ್ಲಿನ ಗುರುತು ಪತ್ರಿಕೆಗಾಗಿ ಬಾಲ್ಯದ ನೆನಪುಗಳು ಎಂಬ ವಿಷಯದ ಮೇಲೆ ಲೇಖನವೊಂದನ್ನು ಬರೆದುಕೊಡಲು ಅಲ್ಲಿನ ಕವಿಮಿತ್ರ ಗೋಪಾಲ್ ಕೇಳಿದ್ದಾಗ ನನ್ನ ಮತ್ತು ಸುಧಿಯ ಗೆಳೆತನವನ್ನು ಅದರಲ್ಲಿ ನೆನಪಿಸಿಕೊಂಡಿದ್ದೆ. ಅದನ್ನೋದಿ ಗೋಪಾಲ್ ಗೆ ಅದೇನನ್ನಿಸಿತೋ ಗೊತ್ತಿಲ್ಲ, ನಿಮ್ಮ ಹೆಸರಲ್ಲಿ ಹಾಕುವುದು ಬೇಡ ಸುಮ್ಮನೆ ರಗಳೆ ಎಂದು ಹೇಳಿ ಜಯಾ ದಹಿಸರ್ (ದಹಿಸರ್ ನಾನವು ಮುಂಬೈಯಲ್ಲಿದ್ದ ಪ್ರದೇಶ) ಎಂದು ಹಾಕಿದರು. ಬಾಲ್ಯದ ಮುಗ್ಧ ಶುದ್ಧ ಗೆಳೆತನದ ಕುರಿತಿದ್ದ ಬರಹವನ್ನೂ ಗಂಡು ಹೆಣ್ಣು ಎನ್ನುವ ದೃಷ್ಠಿಕೋನದಿಂದ ನೋಡಿದ್ದರ ಬಗ್ಗೆ ಅಂದೂ ಆಕ್ಷೇಪವಿತ್ತು, ಇಂದೂ ಸಹ.

ಇನ್ನೊಂದು ಪಕ್ಕದ ಮನೆಯಲ್ಲಿರುತ್ತಿದ್ದ ತೇಜು ನಮ್ಮ ಅಷ್ಟೂ ಬ್ಯಾಚುಗಳ ವಿದ್ಯಾರ್ಥಿಗಳಲ್ಲಿಯೇ ಅವ್ವಲ್ ನಂಬರಿನಾಕೆ. ಓದಿನಲ್ಲಿ ಮಾತ್ರವಲ್ಲ ತೇಜುನ ಮಾತು, ನಡೆ ಕೂಡ ಉಳಿದವರಿಗೆ ಮಾದರಿ ಎಂಬಂತೆ ಮೃದು. ಪರಿಚಯವಾದ ಆರಂಭದಲ್ಲಿ ಆಕೆಯೊಡನೆ ಮಾತನಾಡಲು ನನಗೆ ಆಸೆಯಾಗುತ್ತಿದ್ದರೂ ಒಂದು ಹಿಂಜರಿತವಿತ್ತು. ಅದಕ್ಕೆ ಕಾರಣ ನಾನು ಹಳ್ಳಿಯಿಂದ ಬಂದವಳು ಎಂದಷ್ಟೇ ಆಗಿರದೇ ಆಕೆ ಪ್ರೈಮರಿ ಸೈನಿಕ್ ಸ್ಕೂಲ್ ಮತ್ತು ಹೈಸ್ಕೂಲ್ ದರಬಾರ್ ಹೈಸ್ಕೂಲ್ ನಲ್ಲೂ ಮುಗಿಸಿದ್ದಾಳೆ ಮತ್ತು ಅಲ್ಲೂ ಅವಳು ರ್ಯಾಂಕ್ ಸ್ಟೂಡೆಂಟ್ ಆಗಿದ್ದಳು ಅನ್ನುವುದಗಿತ್ತು.

ಸೈನಿಕ ಶಾಲೆ ಮತ್ತು ದರಬಾರ್ ಹೈಸ್ಕೂಲ್ ಅಂದೂ ಇಂದೂ ಬಿಜಾಪುರದ ಪ್ರತಿಷ್ಠಿತ ಶಾಲೆಗಳು. ಆದರೆ ನಿಧಾನಕ್ಕೆ ನಮ್ಮ ನಡುವೆ ಸ್ನೇಹ ಕುದುರಿತು. ಅಷ್ಟರಲ್ಲಿ ನಮ್ಮ ಪಿಯುಸಿ ಮೊದಲ ವರ್ಷ ಮುಗಿತ್ತು. ನನಗೆ ತಿಳಿಯದ ಗಣಿತದ ಎಷ್ಟೋ ಸಮಸ್ಯೆಗಳನ್ನ ತೇಜು ಹತ್ತಿರ ಕೇಳಿ ತಿಳಿದುಕೊಳ್ಳುತ್ತಿದ್ದೆ. ತೇಜುನ ತಂದೆ ಕೂಡ ನಮ್ಮ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಈಗ ತೇಜು ಆಸ್ಟ್ರೇಲಿಯಾದಲ್ಲಿದ್ದಾಳೆ. ತೇಜು ಕಂಪ್ಯೂಟರ್ ಇಂಜಿನಿಯರ್.

ಮೊದಲ ವರ್ಷದ ಪಿಯುಸಿ ಮುಗಿಯುತ್ತಿದ್ದಂತೆಯೇ ಕಾಲೇಜಿಗೆ ರಜೆಗೆ ಊರಿಗೆ ಹೋಗದೆ ಟ್ಯೂಷನ್ನಿಗೆ ಹೋಗತೊಡಗಿದೆ. ಈಗ ಅದನ್ನು ವೆಕೇಶನ್ ಕ್ಲಾಸಸ್ ಅಂತಾರೆ. ಗೋಡಬೋಲೆ ಮಹಲ್ ಏರಿಯಾದಲ್ಲಿ, ಮೊದಲ ಮಹಡಿಯಲ್ಲಿ ನಡೆಯುತ್ತಿತ್ತು. ಗೋಖಲೆ ಸರ್ ಟ್ಯೂಷನ್ ತೆಗೆದುಕೊಳ್ಳುತ್ತಿದ್ದವರು. ಮರಾಠಿ ಮಹಾವಿದ್ಯಾಲಯದಲ್ಲಿ ಹೈಸ್ಕೂಲಿನ ಮಕ್ಕಳಿಗೆ ಗಣಿತ ಹೇಳುತ್ತಿದ್ದ ಗೋಖಲೆ ಸರ್, ರಿಟೈರ್ ಆದ ಮೇಲೆ ಪಿಯೂಸಿ ಮಕ್ಕಳಿಗೆ ಫಿಸಿಕ್ಸ್, ಚೆಮೆಸ್ಟ್ರಿ ಮತ್ತು ಮ್ಯಾಥ್ಸ್ ಹೇಳಿಕೊಡುತ್ತಿದ್ದರು. ಕೆಲವೊಮ್ಮೆ ಬೆಳಿಗ್ಗೆ ಮತ್ತೆ ಕೆಲವೊಮ್ಮೆ ಸಂಜೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ನನ್ನಂಥ ಹಳ್ಳಿಯಿಂದ ಬಂದ ಮಕ್ಕಳಿಗೂ ಅರ್ಥವಾಗುವಂತೆ ಅವರು ಟ್ಯೂಶನ್ ತೆಗೆದುಕೊಂಡಿದ್ದರಿಂದಲೇ ಮುಂದೆ ಕಾಲೇಜು ಶುರುವಾದಾಗ ಅರ್ಥ ಮಾಡಿಕೊಳ್ಳುವುದು ಅಷ್ಟು ಕಷ್ಟವಾಗಲಿಲ್ಲ.

ಟ್ಯೂಶನ್ನಿಗೆ ಹೋಗುವ ಸಮಯದಲ್ಲೇ ಹಿಂದಿ ಚಲನಚಿತ್ರ ‘ಹೀರೊ’ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದು. ಕ್ಯಾ ಬೀಡು, ಅಪುನ್ ಕಾ ಸ್ಟೈಲಿಚ್ ಐಸಾ ಎಂದೆಲ್ಲ ಮಾತನಾಡುವ ಮುಂಬೈನ ಧಾರಾವಿ ಭಾಷೆಯಲ್ಲಿ ಮಾತನಾಡುವ ಜಾಕಿ ಶರಾಫ್ ಸಿನಿಮಾ ನೋಡಿ ಬಂದ ಹುಡುಗಿಯರೆಲ್ಲರ ಮನಸ್ಸನ್ನು ಕದ್ದು ಬಿಟ್ಟಿದ್ದ. ಆಗ ಜಾಕಿ ಎಂದರೆ ಒಂಥರಾ ಅಮಲು.

ಹೀರೊ ಸಿನಿಮಾದ ಪೋಸ್ಟರ್ ನೋಡಿದರೂ ಸಾಕು ಅವನೇ ಸಾಕ್ಷಾತ್ ಎದುರು ಬಂದನೇನೋ ಎಂಬಂತೆ ಆಡುತ್ತಿದ್ದೆವು. ಅಂಥದ್ದರಲ್ಲಿ ಟ್ಯೂಷನ್ ಮುಗಿಸಿ ಮರಳಲು ನಿಲ್ಲುತ್ತಿದ್ದ ಸಿಟಿ ಬಸ್ ಸ್ಟಾಪ್ ಎದುರಿಗೇ ಇರುವ ಔಷಧಿ ಅಂಗಡಿಯಲ್ಲೊಬ್ಬ ಸ್ವಲ್ಪ ಮಟ್ಟಿಗೆ ಜಾಕಿ ಶರಾಫ್ ನನ್ನು ಹೋಲುವ ವ್ಯಕ್ತಿಯೊಬ್ಬ ನಮ್ಮ ಕಣ್ಣಿಗೆ ಬೀಳಬೇಕೆ! ಅಂದಿನಿಂದ ಗುಡಿ ಎದುರು ಬಂದಾಗ ನಮಗೇ ತಿಳಿಯದಂತೆ ಕೈ ಮುಗಿಯುವುದೋ, ಮನಸ್ಸಲ್ಲೇ ವಂದಿಸುವುದೋ ಮಾಡುತ್ತೇವಲ್ಲ, ಹಾಗೆ ಆ ಬಸ್ ಸ್ಟಾಪ್ ಗೆ ಬರುತ್ತಿದ್ದಂತೆಯೇ ನಮ್ಮಲ್ಲಿ ಯಾರಾದರೊಬ್ಬರು ಕದ್ದು ಅಂಗಡಿ ಕಡೆಗೆ ನೋಡಿ ಆ ಮನುಷ್ಯ ಅಲ್ಲಿದ್ದಾನೋ ಇಲ್ಲವೋ ಅನ್ನುವುದನ್ನು ಉಳಿದವರಿಗೆ ಹೇಳುವುದು, ಅವನಲ್ಲಿದ್ದಾನೆ ಎಂದರೆ ಜಾಕಿಯನ್ನೇ ನೋಡುತ್ತಿದ್ದೇವೆ ಎಂಬಂತೆ ಆಗಾಗ ಆ ಕಡೆ ನೋಡುವುದು, ಅವನೇನಾದರೂ ನಮ್ಮತ್ತ ದೃಷ್ಟಿ ಹೊರಳಿಸಿದರೆ ಸಿಕ್ಕುಬಿದ್ದ ಕಳ್ಳರಂತೆ ಬೇರೆಡೆ ನೋಡಿದಂತೆ ನಟಿಸುವುದು ನಡೆಯುತ್ತಿತ್ತು.

ಬಹುಶಃ ನಾವೆಲ್ಲ ಅವನನ್ನೇ ನೋಡುತ್ತಿದ್ದೇವೆ ಅಂದುಕೊಳ್ಳುತಿದ್ದನೇನೊ ಆಸಾಮಿ. ಒಂದರ್ಥದಲ್ಲಿ ಅವನು ಹಾಗಂದುಕೊಳ್ಳುವುದು ನಿಜವೇ ಆದರೂ ನಾವು ಅವನಲ್ಲಿನ ಜಾಕಿ ಹೋಲಿಕೆಯನ್ನು ಕಂಡು ಹಾಗೆ ಆಡುತ್ತಿದ್ದೆವು ಎಂದು ಈಗ ಹೇಳಬಲ್ಲೆನಾದರೂ ಆಗ ಅವನನ್ನೇ ಜಾಕಿ ಶರಾಫ್ ಎಂಬಂತೆ ನೋಡುತ್ತಿದ್ದುದು ಸುಳ್ಳಲ್ಲ. ಆ ದಿನಗಳಲ್ಲಿ ನಾನೇನಾದರೂ ಸಿನಿಮಾ ಹೀರೊಗಳಲ್ಲಿ ಡಾ. ರಾಜಕುಮಾರ್, ವಿಷ್ಣುವರ್ಧನ್ ಅವರ ನಂತರ ತುಂಬಾ ಇಷ್ಟಪಟ್ಟಿದ್ದೆ ಅಂತಾದರೆ ಅದು ಜಾಕಿ ಶರಾಫ್. ನಂತರದಲ್ಲಿ ಅನಿಲ್ ಕಪೂರ್ ದೈವವಾಗಿದ್ದ ಕೆಲವು ವರ್ಷ.

ಚಿಕ್ಕವಳಿದ್ದಾಗ ಬೆಳೆದಿದ್ದು ಬಿಜಾಪುರದಲ್ಲೇ ಆದರೂ ಈಗ ಅಲ್ಲಿನ ಧೂಳು ಅಲರ್ಜಿಯಾಗತೊಡಗಿತ್ತು. ದಿನವೂ ಬೆಳಿಗ್ಗೆ ಎದ್ದ ಕೂಡಲೇ ಕನಿಷ್ಠ ೧೦ ರಿಂದ ೧೦೦ರವರೆಗೆ ಆಂಕ್ಷಿ ಎಂದು ಸೀನುತ್ತಿದ್ದೆ! ಅದು ಎಷ್ಟರ ಮಟ್ಟಿಗೆ ಎಂದರೆ ತೇಜುನ ತಾಯಿ ನನಗೆ ಆಗಾಗ, “ಪಪ್ಪಿ ನಾ ಇತ್ತಿತ್ತಲಾಗ ಅಲಾರಂ ಇಡೂದ ಬಿಟ್ಟೇನಿ. ನೀ ಮುಂಜಾನೆದ್ದು ಸೀನಾಕ ಚಾಲೂ ಮಾಡ್ತಿಯಲ್ಲ ಆಗ ತಂತಾನ ಎಚ್ಚರಾಕ್ಕತಿ” ಎಂದು ತಮಾಷೆ ಮಾಡುವಷ್ಟು. ಅದೇನು ಅತಿಶಯೋಕ್ತಿ ಆಗಿರಲಿಲ್ಲ.

ಅಲರ್ಜಿ ಎಂದು ಅಪ್ಪ ನನಗೆ ಆಕ್ಟಿಫೈಡ್ ಮಾತ್ರೆ ತೆಗೆದುಕೊಳ್ಳಲು ಹೇಳಿದ್ದರು. ಅದನ್ನು ತೆಗೆದುಕೊಂಡಾಗ ನೆಗಡಿ ನಿಲ್ಲುತ್ತಿತ್ತಾದ್ದರೂ ಆ ಮಾತ್ರೆಯಿಂದ ನಿದ್ದೆ ಬರುತ್ತಿತ್ತು. ನೆಗಡಿಯ ಪ್ರಭಾವ ಮತ್ತು ಆಕ್ಟಿಫೈಡಿನ ಪ್ರಭಾವದಿಂದ ನನ್ನ ಕಣ್ಣುಗಳು ಒಂಥರಾ ಅಮಲಿನಲ್ಲಿದ್ದೇನೆ ಎಂಬಂತೆ ಅರೆನಿಮಿಲಿತವಾಗಿರುತ್ತಿದ್ದವು. ಗೆಳತಿಯರೆಲ್ಲ ಅದನ್ನು ತಕಂಡು ತಮಾಷೆ ಮಾಡಿ ನಗುತ್ತಿದ್ದಾಗ ನನಗೂ ನಗು ಬರೋದು. ಈ ಆಕ್ಟಿಫೈಡನ್ನ ನನಗೆ ಮೊನ್ನೆಯಷ್ಟೇ ನೆನಪಿಸಿದ್ದು ಮುಂದೆ ಡಿಗ್ರಿ ಓದುವಾಗ ಸ್ನೇಹಿತೆಯಾಗಿ ಇವತ್ತಿಗೂ ಆದೇ ಆಪ್ತತೆಯಿಂದರುವ ಸುಹಾಸಿನಿ. ಈಗಲೂ ಅದೇ ನಗು, ತಮಾಷೆ. ಇಬ್ಬರೂ ಮನಸಾರೆ ನಕ್ಕೆವು ಅದನ್ನು ನೆನೆದು. ಆದರೆ ಆಗ ಸತತವಾಗಿ ಕಾಡಿದ ಈ ನೆಗಡಿಯಿಂದಾಗಿ ಎರಡನೇ ವರ್ಷದ ಪಿಯೂಸಿ ಪರೀಕ್ಷೆಯ ವೇಳೆಗೆ ಆಗಾಗ ಸಣ್ಣಗೆ ಜ್ವರ ಕಾಡತೊಡಗಿತು.

ಸುಸ್ತಾಗಿ ಸುತ್ತೀ ಸುತ್ತೀ ಮಲಗಬೇಕು ಅನಿಸುತ್ತಿತ್ತು. ಆದರೆ ಜಗತ್ತಿನ ಸಮಸ್ತ ತಂದೆ ತಾಯಿಗಳಿಗೆ ಪರೀಕ್ಷೆಯ ವೇಳೆಗೆ ಮಕ್ಕಳು ಓದುವುದನ್ನು ಬಿಟ್ಟು ಸುಸ್ತೆಂದು ಮಲಗಿದರೆ ಅದು ನೆಪ ಎಂದು ಹೇಗನ್ನಿಸುತ್ತದೆಯೋ ನನ್ನ ಅಪ್ಪ ಅವ್ವಗೂ ಹಾಗೇ ಅನಿಸಿ ನೆವಾ ಎಲ್ಲಾ ಬಿಟ್ಟು ಸುಮ್ನ ಓದು ಎಂದು ಗದರುತ್ತಿದ್ದರು. ಅದೇ ವೇಳೆಗೆ ಅವ್ವ ನನ್ನ ತಮ್ಮಂದಿರ ಮತ್ತು ತಂಗಿಯರ ಉತ್ತಮ ಶಿಕ್ಷಣಕ್ಕಾಗಿ ಬಿಜಾಪುರದಲ್ಲೇ ಇರುವುದೆಂದು ನಿರ್ಧರಿಸಿದರು.

ಬಿಜಾಪುರದಲ್ಲಿ ನನ್ನಜ್ಜಿ ಮನೆಯ ಹಿಂದಿನ ಎದುರಿನ ಸಾಲಿನಲ್ಲಿ ನಮ್ಮ ಮನೆ ಇದೆ. ಅವ್ವ ಬಿಜಾಪುರಕ್ಕೆ ಬರುವವರೆಗೂ ಅದನ್ನು ಬಾಡಿಗೆ ಕೊಟ್ಟಿದ್ದರು. ಈಗ ಬಾಡಿಗೆದಾರರನ್ನು ಬಿಡಿಸಿ ಅಲ್ಲಿ ನೆಲೆಸತೊಡಗಿದ ಮೇಲೆ ನಾನು ಅಜ್ಜಿ ಮನೆಯಿಂದ ನಮ್ಮನೆಗೆ ಬಂದೆ. ಪರೀಕ್ಷೆಯ ನಂತರ CET ಪರೀಕ್ಷೆಗಳನ್ನೂ ಬರೆದಾದ ಮೇಲೂ ಜ್ವರ ಬಿಟ್ಟೂ ಬಿಟ್ಟು ಬರತೊಡಗಿದ್ದನ್ನು ಕಂಡು ಅವ್ವ ಡಾಕ್ಟರ್ ಹತ್ರ ಕರೆದುಕೊಂಡು ಹೋದಳು. ಸಾಮಾನ್ಯ ಜ್ವರವೆಂದುಕೊಂಡು ಅದೂ ಇದೂ ಮಾತ್ರೆಗಳನ್ನು ಕೊಟ್ಟರೂ ಜ್ವರ ಬರುವುದು ನಿಲ್ಲಲಿಲ್ಲ. ಎಕ್ಸರೇ ಮಾಡಿದಾಗ ಬಲ ಪುಪ್ಪಸದಲ್ಲಿ ಅಸಹಜವಾಗಿ ಅಂದರೆ ಕೆಳಗಿನಿಂದ ಮೇಲಕ್ಕೆ ಕಫ ಬೆಳೆದಿರುವುದನ್ನು ಕಂಡು ನೆಮ್ಯೋನಿಯಾ ಎಂದು ನಿರ್ಧರಿಸಿ ಅದಕ್ಕೆ ಔಷಧೋಪಚಾರ ನಡೆಯಿತು.

ಪಿಯೂಸಿ ಫಲಿತಾಂಶ ಬಂದಿತ್ತು. ನಾನು ೫೯% ತೆಗೆದುಕೊಂಡು ಪಾಸಾಗಿದ್ದೆ. ಅಲ್ಲಿಗೆ ಸಿ ಇ ಟಿಯ ಮಾರ್ಕ್ಸ್ ಇವುಗಳೊಡನೆ ಸೇರಿಸಿದರೂ ನನಗೆ ಇಂಜಿನಿಯರ್ ಕಾಲೇಜಿನಲ್ಲಿ ಸರಕಾರಿ ಕೋಟಾದ ಸೀಟು ಸಿಗುವುದಿಲ್ಲ ಎನ್ನುವುದು ಖಾತ್ರಿ ಆಯಿತು. ಆದರೂ ಸಿ ಇ ಟಿ ಫಲಿತಾಂಶದ ಕೊನೆಯ ಸುತ್ತಿನ ಫಲಿತಾಂಶದವರೆಗೂ ಕಾದು, ಕೊನೆಗೆ ಅಪ್ಪ ಮ್ಯಾನೇಜ್ಮೆಂಟ್ ಸೀಟಗೆ ೧೦,೦೦೦ ರೂಪಾಯಿಗಳನ್ನು ಕೊಟ್ಟು ನನ್ನನ್ನು ಇಂಜಿನಿಯರಿಂಗ್ ಕಾಲೇಜಿಗೆ ಅಡ್ಮಿಶನ್ ಮಾಡಿಸಿದರು.

ಸಿವಿಲ್ ಇಂಜನಿಯರಿಂಗ್ ಮಾಡುವುದೆಂದು ಆ ವಿಷಯವನ್ನು ಆಯ್ದುಕೊಂಡಿದ್ದೆ. ಕ್ಲಾಸುಗಳು ಆಗಷ್ಟೇ ಇನ್ನೂ ಆರಂಭವಾಗುವುದರಲ್ಲಿದ್ದವು. ಇತ್ತ ಎಲ್ಲಾ ಔಷಧಿಗಳು ನಡೆದಿದ್ದರೂ ಜ್ವರ ಕಮ್ಮಿಯಾಗಲೇಯಿಲ್ಲ. ದಿನ ದಿನಕ್ಕೆ ಹೆಚ್ಚಾಗತೊಡಗಿತು. ಸೋಲಾಪುರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮುಂಚಿನಿಂದಲೂ ನಮ್ಮ ಮನೆಯ ಜನರೆಲ್ಲರೂ ಕಾಯಿಲೆ ಉಲ್ಬಣಿಸಿದಾಗ ಡಾಕ್ಟರ್ ಮೆಹತಾ ಬಳಿ ತೋರಿಸಿಕೊಂಡು ಗುಣವಾಗುತ್ತಿದ್ದರು. ನನ್ನನ್ನೂ ಅವರಲ್ಲಿಗೆ ಕರೆದುಕೊಂಡು ಹೋಗಲಾಯಿತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

March 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: