ಪ್ರತಿಭಾ ನಂದಕುಮಾರ್ ಅಂಕಣ- ಹೈದರನಿಗೆ ಮೋಸ ಮಾಡಲೆತ್ನಿಸಿದ ಸರ್ಜನ್‌

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಚರಿತ್ರೆಯ ಯುದ್ಧಗಳ ಸನ್ನಿವೇಶಗಳು ಅಂದಿನ ಕಾಲದ ರೀತಿನೀತಿಗಳ ಬಗ್ಗೆ ಸರಿಯಾಗಿ ತಿಳಿದಿಲ್ಲದಾಗ ಚಾರಿತ್ರಿಕ ವ್ಯಕ್ತಿಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದು ಬಹಳ ಸುಲಭ. ಅವರು ಕೈಗೊಂಡ ಕ್ರಮಗಳ ಬಗ್ಗೆ ಫರ್ಮಾನುಗಳನ್ನು, ತೀರ್ಮಾನಗಳನ್ನು ಘೋಷಿಸುವುದು ಸರ್ವೇ ಸಾಧಾರಣ.  ಚರಿತ್ರೆಯನ್ನು ಮರುಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ನಿಜ, ಆದರೆ ಹಲವು ಆಯಾಮಗಳ ಚಾರಿತ್ರಿಕ ಘಟನೆಗಳ ಸತ್ಯಾಸತ್ಯತೆಯನ್ನು ಕಂಡುಕೊಳ್ಳುವುದು ಸುಲಭವಲ್ಲ.

ಹೈದರಾಲಿಯ ಸಂದರ್ಭದಲ್ಲಿ ಅವನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಅಂದಿನ ಯುದ್ಧತಂತ್ರಗಳು, ದಾಖಲೆಗಳನ್ನು ಕೂಲಂಕಷವಾಗಿ ಹಲವು ಹತ್ತು ಬಾರಿ ಓದಿದರೂ ಅನೇಕ ವೇಳೆ ನಮ್ಮ ಕಲ್ಪನೆಗೂ ಬಾರದಂತಹ ಸನ್ನಿವೇಶಗಳು ನಮಗೆ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳನ್ನೇ ಒಡ್ಡುತ್ತವೆ. ಅಲ್ಲದೇ ಬ್ರಿಟಿಷರಿಗೆ ಭಾರತದಲ್ಲಿ ಅತ್ಯಂತ ದೊಡ್ಡ ಸವಾಲೊಡ್ಡಿದ ಎರಡು ಸಂಸ್ಥಾನಗಳೆಂದರೆ ಮರಾಠರು ಮತ್ತು ಮೈಸೂರಿನ ಹೈದರಾಲಿ. ಜೊತೆಗೆ ದಕ್ಷಿಣದಲ್ಲಿ ಬದಲಾಗುತ್ತಿದ್ದ ರಾಜಕೀಯ ಸಂಧಾನಗಳು ಮತ್ತು ಅದರ ಛೇದ. ಅಂದರೆ ಒಂದು ಯುದ್ಧದಲ್ಲಿ ಒಂದಾಗಿ ಮತ್ತೊಂದರಲ್ಲಿ ಎದುರಾಗುವುದು. ಈ ಹೊಂದಾಣಿಕೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಬ್ರಿಟಿಷರು ಮತ್ತು ಫ್ರೆಂಚರು ಪರಸ್ಪರ ವೈರಿಗಳಾಗಿದ್ದುದರಿಂದ, ಹೈದರಾಲಿಗೆ ಬ್ರಿಟಿಷರ ಬಗ್ಗೆ ವಿಪರೀತ ಶತ್ರುತ್ವ ಇದ್ದುದರಿಂದ ಆತ ಫ್ರೆಂಚರ ಸ್ನೇಹ ಮಾಡಿದ. ಆದರೆ ಕೊನೆಕೊನೆಗೆ ಫ್ರೆಂಚರು ಮತ್ತು ಬ್ರಿಟಿಷರಿಬ್ಬರನ್ನೂ ನಮ್ಮ ನೆಲದಿಂದ ಹೊಡೆದೋಡಿಸಬೇಕು ಎನ್ನುವ ತೀರ್ಮಾನಕ್ಕೆ ಬಂದ. ಅದು ಕೈಗೂಡುವಷ್ಟರಲ್ಲಿ ಅನ್ಯಾಯವಾಗಿ ಆತನ ಕೊನೆಯಾಯಿತು. ಹೈದರ್ ಫ್ರೆಂಚರ ಬಗ್ಗೆ ನಂಬಿಕೆ ಇಟ್ಟಿದ್ದರಿಂದಲೂ ಮೋಸಕ್ಕೊಳಗಾದ ಎನ್ನುವುದಕ್ಕೆ ಕೆಲವು ಉದಾಹರಣೆಗಳಿವೆ.

ಒಂದೇ ಒಂದು ಉದಾಹರಣೆ ಕೊಡಬೇಕೆಂದರೆ ಹೈದರಾಲಿಯ ಬಳಿಗೆ ಬಂದ ಒಬ್ಬ ಸರ್ಜನ್ ಮತ್ತು ಅವನು ಮಾಡಿದ ವಿದ್ರೋಹದ ಕಥೆ ಹೇಳಬಹುದು. ಬ್ರಿಟಿಷ್ ಮತ್ತು ಫ್ರೆಂಚ್ ಎರಡೂ ಕಡತಗಳಲ್ಲಿ ಅತ್ಯಂತ ಸುದೀರ್ಘವಾಗಿ ದಾಖಲಾಗಿರುವ ಈ ಪ್ರಕರಣವನ್ನು ಅಂದಿನ ಶೈಲಿಯ ಭಾಷೆಯಲ್ಲಿ ಓದಿ ಅರ್ಥ ಮಾಡಿಕೊಳ್ಳಲು ತಿಣಿಕಾಡಿದ್ದೇನೆ. ಅಂದಿನ ಶೈಲಿ ಅಂದರೆ ಕಬ್ಬಿಣದ ಕಡಲೆ. ಸಂಕೀರ್ಣ ವಾಕ್ಯಗಳಲ್ಲಿ ಹಲವಾರು ವಿಷಯಗಳನ್ನು ಹಲವಾರು ವ್ಯಕ್ತಿಗಳನ್ನು ಒಳಗೊಂಡು ಭೂತ ವರ್ತಮಾನಗಳನ್ನು ಮಿಶ್ರಮಾಡಿ ಸುತ್ತಿ ಬಳಸಿ ಹೇಳುತ್ತಾರೆ. ಇರಲಿ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ –

ಕಾವೇರಿಪಟ್ಟಣವನ್ನು ವಶಪಡಿಸಿಕೊಂಡ ನಂತರ ಒಬ್ಬ ವ್ಯಕ್ತಿ, ವೃತ್ತಿಯಲ್ಲಿ ಸರ್ಜನ್ ಒಬ್ಬನಿಗೆ, (ಆದರೆ ವಿಚಿತ್ರ ಸಂದರ್ಭದಿಂದ ಸೇನಾಧಿಕಾರಿಯಾದವನು) ಕೋರಮಂಡಲಕ್ಕೆ ಸಾಗುತ್ತಿದ್ದ ಕೆಲವು ಇಂಗ್ಲಿಷ್ ಅಧಿಕಾರಿಗಳ ಜೊತೆ ಹೋಗಲು ವಿಶೇಷ ಪರವಾನಗಿ ನೀಡಲಾಯಿತು. ಹಿಂದೆಯೇ ಹೇಳಿದಂತೆ ಹೈದರನ ಆಡಳಿತದಲ್ಲಿ ಪ್ರಯಾಣಕ್ಕೆ ರಹದಾರಿ ಪತ್ರ ಪಡೆಯುವುದು ಅತ್ಯಂತ ಮುಖ್ಯವಾಗಿತ್ತು. ಈ ಫ್ರೆಂಚ್ ವ್ಯಕ್ತಿಗೆ ಕೊಟ್ಟ ಪರವಾನಗಿ ನಿಜಕ್ಕೂ ದೊಡ್ಡ ಅಚಾತುರ್ಯವಾಗಿತ್ತು. ಸದಾ ಕಾಲ ಎಚ್ಚರಿಕೆಯಿಂದ ಇದ್ದರೂ ಒಮ್ಮೊಮ್ಮೆ ಮೈಮರೆಯುವುದು ಸಹಜ. ಪರವಾನಗಿ ನೀಡಲು ಮತ್ತೊಂದು ಕಾರಣ ಅವನೊಬ್ಬ ಕೆಲಸಕ್ಕೆ ಬಾರದ ವ್ಯಕ್ತಿಯಾಗಿದ್ದು ಅವನಿಂದ ಯಾವ ಅಪಾಯವು ಇಲ್ಲ ಎನ್ನುವ ಧೋರಣೆಯಾಗಿತ್ತು. 

ಈ ಸರ್ಜನ್ ಯಾರೆಂದರೆ (ಅವನ ಹೆಸರನ್ನು ದೆ ಲಾ ತೂರ್ ದಾಖಲಿಸುವುದಿಲ್ಲ ಏಕೆಂದರೆ ‘ಅವನ ಕುಟುಂಬದ ಹಿತದೃಷ್ಟಿಯಿಂದ ಮತ್ತು ಸರ್ಕಾರ ಅವನನ್ನು ಬಂಧನದಲ್ಲಿಟ್ಟಿರುವುದರಿಂದ’ ಎಂದು ಹೇಳುತ್ತಾನೆ), ಕೊಯಿಂಬತ್ತೂರಿನಲ್ಲಿ  ಹೈದರಾಲಿಯನ್ನು ಕಾಣಲು ಬಂದವ. ತಾನು ಹಿರಿಯ ಫ್ರೆಂಚ್  ಫಿರಂಗಿ ದಳದ ಕ್ಯಾಪ್ಟನ್, ಪಾಂಡಿಚೇರಿಗೆ ಪ್ರಯಾಣ ಮಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ಹೈದರನ ಸೇನೆಯಲ್ಲಿದ್ದ ಫ್ರೆಂಚ್ ಅಧಿಕಾರಿಗಳಿಗೆ ತಾನು ಪರಿಚಯದವನು ಎಂದು ಹೇಳಿಕೊಂಡ. ಅದಕ್ಕೆ ಪೂರಕವಾಗಿ ಕಲ್ಲಿಕೋಟೆಯ ಫ್ರೆಂಚ್ ಅಧಿಕಾರಿ ಇವನ ಬಗ್ಗೆ ಶಿಫಾರಸು ಮಾಡಿ ಹೇಳಿದ್ದ. ಆ ಅಧಿಕಾರಿ ಇವನ ನಯನಾಜೂಕಿಗೆ ಮತ್ತು ವೇಷಭೂಷಣಗಳಿಗೆ ಮರುಳಾಗಿದ್ದ. 

ಹೈದರನ ಕಮಾಂಡೆಂಟ್ ಇವನನ್ನು ಸ್ವಾಗತಿಸಿ ಹೈದರನ ಬಳಿಗೆ ಕರೆದುಕೊಂಡು ಹೋದ. ಹೈದರ್ ಇವನಿಗೆ ಒಂದು ಸಿಪಾಯಿಗಳ ಪಡೆಯ ನಾಯಕತ್ವ ಕೊಟ್ಟು ತಿಂಗಳಿಗೆ 50 ರೂಪಾಯಿ ಸಂಬಳ ನೇಮಿಸಿದ. ಫ್ರೆಂಚ್ ಕಮಾಂಡೆಂಟ್ ಇವನಿಗೆ ಇಳಿದುಕೊಳ್ಳಲು ಮನೆ, ಆಳುಗಳು, ಗಾಡಿಯನ್ನೂ ಇತರ ಅನುಕೂಲಗಳನ್ನೂ ಮಾಡಿಕೊಟ್ಟ. ಇಷ್ಟೆಲ್ಲಾ ಪಡೆದುಕೊಂಡ ಮೇಲೆ ಅವನು ತನ್ನ ಒಡೆಯನಿಗೆ ನಿಷ್ಠೆಯಿಂದಿರುತ್ತಾನೆ ಎಂದುಕೊಂಡರೆ ಅವನು ಎಂತಹ ನಿಯತ್ತಿಲ್ಲದ ನಡತೆಗೆಟ್ಟ ವ್ಯಕ್ತಿ ಎಂದು ಸಾಬೀತು ಮಾಡಿದನೆಂದರೆ ಮೂರೇ ತಿಂಗಳಲ್ಲಿ ಅವನನ್ನು ಕೆಲಸದಿಂದ ತೆಗೆದುಹಾಕಲಾಯಿತು. 

ಅವನ ಸ್ಥಿತಿ ಭಿಕ್ಷೆ ಬೇಡುವಷ್ಟು ದಯನೀಯವಾಗಿ ಕೊನೆಗೆ ಆತ ಕೊನೆ ಪಕ್ಷ ತಾನು ಸರ್ಜನ್ ಆಗಿ ಕೆಲಸ ಮಾಡಲು ಅನುಮತಿಕೊಡಿ ಎಂದು ಕೋರಿಕೊಂಡ. ಅದನ್ನೂ ಸಹ ಹೈದರನ ಖಾಸಗಿ ಸರ್ಜನ್ ಹತ್ತಿರ ಹೋಗಿ ತನ್ನನ್ನು ಶಿಫಾರಸು ಮಾಡಲು ಕೇಳಿದ. ಹಿಂದೆ ಲ್ಯಾಲಿಯ ರೆಜಿಮೆಂಟಿನಲ್ಲಿ ಇಬ್ಬರೂ ಇದ್ದಿದ್ದ ಕಾರಣ. ಬಂದಾಗಲೇ ಇವನು ತನ್ನ ಗುಟ್ಟು ಬಿಟ್ಟುಕೊಡಬಾರದಾಗಿ ಅವನನ್ನು ಬೇಡಿದ್ದ, ಅವನೂ ಹೋಗಲಿ ಎಂದು ಒಪ್ಪಿದ್ದ. ಸರ್ಜನ್ ಆದವನು ಅಶ್ವಾರೋಹಿ ಕ್ಯಾಪ್ಟನ್ ಎಂದು ಹೇಳಿಕೊಳ್ಳಲೂ ಒಂದು ಕಥೆ ಸಿದ್ಧಮಾಡಿಟ್ಟುಕೊಂಡಿದ್ದ. ಒಟ್ಟಿನಲ್ಲಿ ಹಳೆಯ ಗೆಳೆಯನ ಕಾರಣ ಅವನಿಗೆ ಇಂಗ್ಲಿಷ್ ಅಧಿಕಾರಿಗಳ ಜೊತೆ ಕೋರಮಂಡಲಕ್ಕೆ ಪ್ರಯಾಣಿಸುವ ರಹದಾರಿ ಸಿಕ್ಕಿತ್ತು.

ಆ ಇಂಗ್ಲಿಷ್ ಅಧಿಕಾರಿಗಳು ಮದ್ರಾಸಿಗೆ ಹಿಂದಿರುಗುವವರಿದ್ದರು. ಈ ಫ್ರೆಂಚ್ ಸರ್ಜನ್ ಗೆ ಇಂಗ್ಲಿಷ್ ಕೂಡಾ ಬರುತ್ತಿತ್ತು. ಅವನು ಪ್ರಯಾಣದಲ್ಲಿ ತನ್ನ ಬಗ್ಗೆ ಕಥೆಗಳನ್ನು ಹೇಳುತ್ತಾ ಕೊನೆಗೆ ಒಂದು ಸುಳ್ಳು ಬಿಟ್ಟ. ಏನೆಂದರೆ ಹೈದರಾಲಿಯ ಸೇನೆಯಲ್ಲಿದ್ದ ಯುರೋಪಿಯನ್ ಅಧಿಕಾರಿಗಳನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದೂ, ಅವರೆಲ್ಲ ತುಂಬಾ ಅತೃಪ್ತರಾಗಿದ್ದಾರೆಂದೂ ಅದರಲ್ಲೂ ಅವರ ಫ್ರೆಂಚ್ ಕಮಾಂಡೆಂಟ್ (ಅದೇ ಇವನಿಗೆ ಎಲ್ಲ ಒಳ್ಳೆಯದನ್ನು ಮಾಡಿದ್ದವನು!) ಬಗ್ಗೆ ಎಲ್ಲರಿಗು ಅಸಹನೆ ಇದೆ ಎಂದೂ, ತನ್ನನ್ನು ಮದ್ರಾಸು ಸರ್ಕಾರ ಕೆಲಸಕ್ಕೆ ನೇಮಿಸಿಕೊಂಡರೆ ತಾನು ಅವರೆಲ್ಲ ಹೈದರನ ಸೈನ್ಯ ಬಿಟ್ಟು ಹೋಗುವಂತೆ ಮಾಡುತ್ತೇನೆಂದೂ, ಅದಕ್ಕೆ ತನ್ನ ಗೆಳೆಯ ಹೈದರನ ಖಾಸಾ ಸರ್ಜನ್ ನೆರವಾಗುವನೆಂದೂ ಹೇಳಿದ! 

ಅದನ್ನು ನಂಬಿದ ಆ ಬ್ರಿಟಿಷ್ ಅಧಿಕಾರಿ ಸೀದಾ ಅವನನ್ನು ಮದ್ರಾಸಿನ ಚೀಫ್ ಇಂಜಿನಿಯರ್ ಕರ್ನಲ್ ಕಾಲ್ ಬಳಿಗೆ ಕರೆದುಕೊಂಡು ಹೋದ. ಇತರ ಹಲವರಂತೆ ಈ ಕರ್ನಲ್ ಗೆ ಮೊದಲಿನಿಂದಲೇ, ಭಾರತೀಯರು ಯುರೋಪಿಯನ್ನರ ನೆರವಿಲ್ಲದೇ ಏನನ್ನೂ ಮಾಡಲಾರರು ಎನ್ನುವ ಕುರುಡು ನಂಬಿಕೆ ಇತ್ತು. ಅವನು ಇವನನ್ನು ನೇರವಾಗಿ ಮದ್ರಾಸಿನ ಗವರ್ನರ್ ಮತ್ತು ನವಾಬ್ ಮೊಹಮದ್ ಅಲಿ ಖಾನ್ ಮುಂದೆ ನಿಲ್ಲಿಸಿದ. ಅವರ ಕಣ್ಣಿಗೆ ಇವನು ಥೇಟು ದೇವದೂತನಂತೆ ಕಂಡು ಬಂದ! ಹೈದರನ ಕ್ಯಾಂಪಿನಿಂದ ಒದ್ದೋಡಿಸಿಲಾಗಿದ್ದ ಈತ ಮದ್ರಾಸಿನ ಗವರ್ನರ್ ಮತ್ತು ನವಾಬ್ ಮುಹಮ್ಮದ್ ಅಲಿ ಖಾನನ ಖಾಸಾ ದೋಸ್ತನಾಗಿಬಿಟ್ಟ! ಅವನಿಗೆ ಅವರು ಕೊಟ್ಟ ಉಡುಗೊರೆಗಳೇನು! ಮರ್ಯಾದೆ ಏನು!  ಅವನು ತನ್ನ ಕಾರ್ಯದಲ್ಲಿ ಸಫಲನಾದರೆ ಅವನಿಗೆ ಲೆಫ್ಟಿನೆಂಟ್ ಹುದ್ದೆ ಕೊಡುವುದಾಗಿ ಕೂಡಾ ಮಾತು ಕೊಡಲಾಯಿತು. 

ಅಲ್ಲಿಂದ ವನು ಪಾಂಡಿಚೇರಿಗೆ ಹೋಗಿ ತನಗೆ ಗೊತ್ತಿದ್ದವರಿಗೆಲ್ಲ ತಾನು ಈಗ ಮದ್ರಾಸಿನ ನವಾಬನ ಬಳಿ ಸೇವೆಯಲ್ಲಿರುವನೆಂದೂ ಇಷ್ಟವಿದ್ದವರಿಗೆ ಅಲ್ಲಿ ಕೆಲಸ ಕೊಡಿಸುವುದಾಗಿಯೂ ಪುಸಲಾಯಿಸಿ ಅವರ ಹೆಸರನ್ನೆಲ್ಲ ಮದ್ರಾಸಿಗೆ ಕಳಿಸಿಬಿಟ್ಟು ಗೋಪ್ಯವಾಗಿ ಪಾಂಡಿಚೇರಿಯಿಂದ ಪಲಾಯನ ಮಾಡಿದ. 

ಈ ನಡುವೆ ಹೈದರನ ಸೈನ್ಯ ವಾನಿಯಂಬಾಡಿ ಪಕ್ಕದಲ್ಲಿ ಬೀಡುಬಿಟ್ಟಿತ್ತು. ವೇತನ ಕುರಿತಂತೆ ಅಲ್ಲೊಂದು ಸಣ್ಣ ತಕರಾರು ಎದ್ದು ಹೆಸರು ಕೊಟ್ಟವರೆಲ್ಲ ಮರಾಠ ನಾಯಕ ರಾಮಚಂದ್ರನ ಬಳಿಗೆ ಹೋಗಿ ತಾವು ಅವನ ಸೈನ್ಯ ಸೇರಲು ಬಯಸುವುದಾಗಿ ಬೇಡಿಕೊಂಡರು. ಹಿಂದೆ ಹೈದರ್ ಅವಮಾನಿಸಿದನೆಂದು ಹೊರಬಂದ ಫ್ರೆಂಚ್ ಅಧಿಕಾರಿಗಳನ್ನು ರಾಮಚಂದ್ರ ತನ್ನ ಸೇನೆಯಲ್ಲಿ ಸೇರಿಸಿಕೊಂಡಿದ್ದ. ಆದರೆ ಈ ಗುಂಪು ರಾಮಚಂದ್ರನ ಬಳಿಗೆ ಹೋಗಿದೆಯೆಂದು ತಿಳಿದ ಹೈದರನ ಕಮಾಂಡೆಂಟ್ ಅವರನ್ನು ಅಟ್ಟಿಸಿಕೊಂಡು ಹೋಗಿದ್ದ. ಕಮಾಂಡೆಂಟ್ ಬರುತ್ತಿದ್ದಾನೆನ್ನುವ ಸುದ್ದಿ ತಿಳಿದ ರಾಮಚಂದ್ರ ಹೈದರನಿಗೆ ಕೋಪ ಬರಿಸಬಾರದೆಂದು ನಿರ್ಧರಿಸಿ ಅವರೆಲ್ಲರನ್ನೂ ಹೊರಗೆ ಹಾಕಿದ. ಏನು ಮಾಡುವುದೋ ತಿಳಿಯದೇಕಂಗಾಲಾಗಿ ಅವರು ಹೈದರನ ಕಮಾಂಡೆಂಟ್ ಬರುವವರೆಗೆ ಕಾದು ತಮ್ಮ ಶಸ್ತ್ರಗಳನ್ನು ಕೆಳಗಿಟ್ಟು ನಿಂತರು. ಅವನು ಅವರನ್ನೆಲ್ಲ ಸೆರೆ ಹಿಡಿದು ಹೈದರನ ಬಳಿಗೆ ಕರೆದೊಯ್ದ. 

ಅವರನ್ನು ಹಗ್ಗದಿಂದ ಕಟ್ಟಿ ಕೆಲವು ದಿನಗಳವರೆಗೆ ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಇಡಲಾಯಿತು.

ಇದಿಷ್ಟು ಹಿನ್ನೆಲೆ. ನಂತರ ಹೈದರ್ ಆಗ ಏನು ಮಾಡಿದ ಎನ್ನುವುದು ಇಲ್ಲಿ ಮುಖ್ಯ ಸಂಗತಿ. ಸ್ವಲ್ಪ ದಿನಗಳವರೆಗೆ ಹೀಗೆ ಅವಮಾನಿತರಾದ ಅವರು ಕ್ಷಮೆ ಕೇಳಿದಾಗ ಹೈದರಾಲಿ ಅವರನ್ನು ಕ್ಷಮಿಸಿ ಬಿಟ್ಟ! ಜೊತೆಗೆ ಮತ್ತೆ ತನ್ನ  ಸೈನ್ಯಕ್ಕೆ ಸೇರಿಸಿಕೊಂಡ! ಸಣ್ಣಸಣ್ಣ ತಪ್ಪುಗಳಿಗೂ ಕೊರಡಿಯೇಟಿನ ಶಿಕ್ಷೆ ಕೊಡುತ್ತಿದ್ದ ಹೈದರ್ ಈ ಫ್ರೆಂಚರನ್ನು ಏಕೆ ಕ್ಷಮಿಸಿದ ಎನ್ನುವುದು ಒಂಥರಾ ಯಕ್ಷಪ್ರಶ್ನೆ! ಅವನು ಯುರೋಪಿಯನ್ನರಿಗೆ ಅವರ ಯೋಗ್ಯತೆಗಿಂತ ಹೆಚ್ಚು ಪ್ರಾಶಸ್ತ್ಯ ಕೊಟ್ಟನೇ? 

ಇದನ್ನೇ ದೆ ಲ ತೂರ್ ತುಂಬಾ ವಿಸ್ಮಯದಿಂದ ಹೀಗೆ ವಿಶ್ಲೇಷಿಸುತ್ತಾನೆ: 

‘ಯುರೋಪಿನಲ್ಲಿ ಇದೆಲ್ಲ ದೂರದೃಷ್ಟಿಯುಳ್ಳ ವಿವೇಕದ ನಡತೆ ಎನ್ನಿಸಿಕೊಳ್ಳದೇ ಇರಬಹುದು; ಆದರೆ ಹೈದರಾಲಿ ಮತ್ತು ಆತನ ಕಮಾಂಡೆಂಟ್ ಬಗ್ಗೆ ಮಾತನಾಡುವಾಗ ಬೇರೆ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಏಕೆಂದರೆ ಹೈದರಾಲಿ ಯುರೋಪಿಯನ್ನರಿಗೆ ಅವರ ಯೋಗ್ಯತೆಗಿಂತ ಮೀರಿ ಮರ್ಯಾದೆ ಕೊಟ್ಟ, ಆದರೆ ಅವರು ಕೇವಲ ತಮ್ಮ ದಾರಿಯನ್ನಷ್ಟೇ ಪರಿಗಣಿಸಿದರು, ಹೈದರಾಲಿಯಂಥವನನ್ನೂ ಬಳಸಿಕೊಂಡರು.’ ಎನ್ನುತ್ತಾನೆ. ಅಂದರೇ ಅವರು ‘ಈ ದ್ರೋಹವನ್ನು ಯುರೋಪಿಯನ್ನರು ವ್ಯವಹಾರವೆಂದು ಪರಿಗಣಿಸಿದರು, ಅದರಲ್ಲೂ ಯಾವುದೇ ವಿಪರೀತ ಪರಿಣಾಮಗಳನ್ನು ತಂದೊಡ್ಡದ ವ್ಯವಹಾರ ಎಂದುಕೊಂಡರು. ಅದಕ್ಕೆ ಕಾರಣ ಅವರಿಗೆ ತಾವು ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಅಥವಾ ತಮ್ಮನ್ನು ಉತ್ತಮ ಸ್ಥಿತಿಯಲ್ಲಿ ಕಂಡುಕೊಳ್ಳುವ ಬಗ್ಗೆ ಗೊತ್ತಿರಲಿಲ್ಲ’ ಎನ್ನುತ್ತಾನೆ.

‘ತಮ್ಮ ದಾರಿಯನ್ನಷ್ಟೇ ಪರಿಗಣಿಸಿದರು’ ಎಂದರೆ ಅವರು ತಮ್ಮ ಕಾರ್ಯಸಾಧನೆಯ ಬಗ್ಗೆ ಮಾತ್ರ ಚಿಂತಿಸಿದರು ಅವರಿಗೆ ಭಾರತೀಯರ ಅಳಿವು ಉಳಿವಿನ ಪರಿವೆ ಇರಲಿಲ್ಲ. ಅನೇಕ ಸಂದರ್ಭಗಳಲ್ಲಿ ಅವರು ಭಾರತೀಯರನ್ನು ಅರ್ಥಮಾಡಿಕೊಳ್ಳದೆ ತಪ್ಪು ಮಾಡಿದರು, ಕೊನೆಗೆ ಆ ತಪ್ಪನ್ನೂ ಸಹ ತಮ್ಮ ಪ್ರಯೋಜನಕ್ಕೇ ತಿರುಗಿಸಿಕೊಂಡರು! ಕೊನೆಗೂ ಆ ಸರ್ಜನನಿಗೆ ಯುರೋಪಿನಲ್ಲಿ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ಅದು ಬೇರೆ ಅಪರಾಧಕ್ಕೆ!

‍ಲೇಖಕರು Admin

August 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: