ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಬಿಂಬ!..

ಸೌಮ್ಯಶ್ರೀ ಎ ಎಸ್

ಬಾಗಿ‌ ಬಿಂಬವ‌ ಕಾಣಲು ಹಾತೊರೆಯುತ್ತಿದ್ದೆ
ತಿಳಿ ನೀರಿನ ಕೊಳದಲ್ಲಿ
ಅರೆ! ಅದೆಷ್ಟು ಅಂದ ಚೆಂದದ
ಹಾಲ್ಬೆಳದಿಂಗಳ ಚಂದಿರನಂತಹ ಮೊಗವೆಂದು
ಉಬ್ಬುತ್ತಿದ್ದ ಮನಸು ಅರೆಕ್ಷಣದಲ್ಲಿ ಮಂಕಾಯಿತು!

ತೂರಿದ ಸಣ್ಣದೊಂದು ಕಲ್ಲಿಗೆ ಸಂಪೂರ್ಣ
ಕದಡಿ ಹೋಯ್ತು! ಎಲ್ಲವೂ ಮಬ್ಬು ಮಬ್ಬು
ಕ್ಷಣದ ಹಿಂದಷ್ಟೇ ಪ್ರತಿಬಿಂಬವ
ಕನ್ನಡಿಯಂತೆ ತೋರುತ್ತಿತ್ತು
ಇದೀಗ ಚೆಂದದ ಆಕಾರವೆಲ್ಲಾ ವಿಕಾರವೆಂಬಂತಿದೆ!

ಮಲಿನವಾದ ನೀರನ್ನು ತಿಳಿಯಾಗಿಸಲು
ತುಂಬಿದ್ದ ಅಷ್ಟು ಹೂಳನ್ನು ತೆಗೆದು ಎಸೆಯುತ್ತಲೇ ಇದ್ದೆ
ಸರಿದಷ್ಟು ಮತ್ತೆ ಮತ್ತೆ ತುಂಬಿಕೊಳ್ಳುತ್ತಿತ್ತು
ಎಸೆದ ಹೂಳಿನಲ್ಲಿ ಸೇರಿ ಹೋಗಿದ್ದ,
ನೀರನ್ನೇ ಆಶ್ರಯಿಸಿ ಉಸಿರಾಡುತ್ತಿದ್ದ ಜಲಚರಗಳು
ಮಣ್ಣಿನ ಮೇಲೆ ಬಿದ್ದು‌ ಒದ್ದಾಡಿ ಸಾಯುತ್ತಿವೆ!

ಇದೀಗ ಭಯದ ಬಿಸಿಗೆ
ಮೈಯೆಲ್ಲಾ  ಬಳಲಿ ಒದ್ದೆ ನೀರಡಿಕೆ
ಮುಖದಲ್ಲಿ‌ ಜಿನುಗುತ್ತಿದ್ದ ಬೆವರನ್ನು ಸರಿಸಿ
ಅಲ್ಲೇ ಕಲ್ಲಿನ‌ ಮೇಲೆ ಆಗಸದತ್ತ ಮುಖ ಮಾಡಿ ಕೂತೆ
ಮೋಡಗಳ ಘರ್ಷಣೆ ಮಿಂಚು ಗುಡುಗು!

ಹಿತವಾಗಿ ತೂರಿ ಬರುತ್ತಿರುವ ತಂಗಾಳಿ
ತುಂತುರು ಹನಿ, ಅರೆಬಿಸಿಲು ಮುಗಿಲಲ್ಲಿ
ಕಾಮನಬಿಲ್ಲಿನ ಚಿತ್ತಾರ, ಮೊಗದಲ್ಲಿ‌ ಸಣ್ಣದೊಂದು
ಖುಷಿಯ ನಗು,‌ ಕಣ್ಣುಗಳು ಕೊಳದತ್ತ ಬಾಗಿದವು
ಅಬ್ಬಬ್ಬಾ ! ಬಣ್ಣಗಳ ಚಿತ್ತಾರ, ಬೆರಗುಗಣ್ಣನಿಂದ
ಕಣ್ಣು ಕೀಳದೆ ನೋಡುತ್ತಲೇ ಇದ್ದೇನೆ!
ನೋಡಿದಷ್ಟು ಮತ್ತಷ್ಟು ಕಣ್ತುಂಬಿಸಿಕೊಳ್ಳುವ ಹಂಬಲ!

‍ಲೇಖಕರು Admin

14 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading