ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಪ್ರತಿದಾರಿಗೊಂದು ಗೋಡೆ ಕಟ್ಟಿದಿರಿ…’ – ಸುಧಾ ಚಿದಾನಂದ ಗೌಡ

ಭಂವರಿಯ ಬಯಕೆ

ಸುಧಾ ಚಿದಾನಂದಗೌಡ

ನೆತ್ತಿಯಿನ್ನೂ ಮಾಸಿಲ್ಲದ

ಕೂಸಿನ ದೇಹದಲ್ಲೂ ನಿಮಗೆ ಕಂಡಿದ್ದು

ಮೊಗ್ಗಿನ, ಹೂವಿನ ಸಂಕೇತಗಳು

 

ಹೀಗಾಗಿ ತಗ್ಗಿಸಿದ ಕುತ್ತಿಗೆಯ

ಮೇಲೆತ್ತಿದರೆ ಆಕಾಶ-

ಬಗ್ಗಿಸಿದ ತಲೆಯ ಕಂಗಳಿಗೆ

ಕಂಡಿದ್ದು ಉಬ್ಬಿದೆದೆ,

ಹೊಟ್ಟೆಯ ತಗ್ಗು

ಬಳುಕುವ ಸೊಂಟ

ನಿತಂಬ ತೊನೆಯುತ್ತಿತ್ತು

ನಿಮ್ಮ ಕಣ್ಣುಗಳಲ್ಲಿ..!

ಮನಸು ಹುಡುಕಾಟದಲಿತ್ತು

ಚಂದವಿರುವುದೆಲ್ಲ ನಿನಗೆ

ಇರಲೆಂದೋ, ಯಾಕಿಷ್ಟು

ಲಕಲಕಿಸಬೇಕೆಂದೋ, ಅಂತೂ

ಮಂಗಲಸೂತ್ರ, ಕಾಲುಂಗುರದಲಿ

ಬಂಧಿಸಿದಿರಿ ಹಸುಳೆಯ

ಬಂಧನ ಅವಳಿಗೊಂದು ಶೋಭೆ

ಬಣ್ಣಿಸಿ, ನಂಬಿಸಿದಿರಿ

ಯಂತ್ರವಾಗಿಸಿ, ದುಡಿಸಿ,

ಯಂತ್ರದೊಳಗಿನ ಯಂತ್ರವಾಗಿಸಿ

ಬಳಸೀ, ಬಳಸೀ

ತುಕ್ಕು ಹಿಡಿಸಿ, ಬಿಸುಟಿದಿರಿ

 

ದೇಹವೆಂದರೆ ಅಸಹ್ಯಿಸಿ,

ಬೇಡಬೇಡ ಬದುಕೆಂದುಕೊಂಡರೆ-

ಆತ್ಮಹತ್ಯೆಯೂ ಮಹಾಪಾಪವೆಂದಿರಿ.

 

ನೆಲದ ಸಾರವನೆ ಹೀರಿಹೀರಿ

ಬರಡಾಗಿಸಿದಿರಯ್ಯಾ

 

ಸುತ್ತಮುತ್ತಿದ ಗೋಡೆಗಳನೆ

ಬಾಗಿಲೆಂದು ಬಡಿಬಡಿದು

ನರಳಿದ ಬಾಲೆಗೆ ಅದೇ ಆಕಾಶವೆಂದಿರಿ

ನಂಬಿದರೂ ನೇಣು

ನಂಬದಿದ್ದರೂ ನೇಣು

 

ಕೊಡಿ ಕೊಡಿ ಬದುಕೆನ್ನಲು

ಅವಳದೆ ಬದುಕು, ಭಿಕ್ಷೆಯಲ್ಲ

ದೇಹಭಾಷೆಗೊಂದು ಮೂಕವ್ಯಾಖ್ಯಾನ

ತಿಳಿತಿಳಿದಂತೆ ಅರ್ಥ ಕಟ್ಟಿದಿರಿ

ಬದುಕು ಕಟ್ಟುವ

ಪ್ರತಿದಾರಿಗೊಂದು ಗೋಡೆ ಕಟ್ಟಿದಿರಿ

 

ಇನ್ನಾದರೂ ಬಿಡಿ

ದೇಹದೊಳಗಿರುವ ಶೀಲವ

ಆತ್ಮಕೆ ತಂದುಕೊಳಲಿ.

ಅವಳ

ದೇಹಾತ್ಮಗಳೆರಡೂ

ನಿಮ್ಮಂತೆಯೇ ಬದುಕಲಿ.

 

‍ಲೇಖಕರು avadhi

24 May, 2013

3 Comments

  1. Shashikala

    I love the lines with various levels of meanings
    ದೇಹದೊಳಗಿರುವ ಶೀಲವ
    ಆತ್ಮಕೆ ತಂದುಕೊಳಲಿ.

  2. mmshaik

    hrudayangamavaada kavite….

  3. ರಮೇಶ್ ಹಿರೇಜಂಬೂರು

    ‘ಬದುಕು ಕಟ್ಟುವ
    ಪ್ರತಿದಾರಿಗೊಂದು ಗೋಡೆ ಕಟ್ಟಿದಿರಿ’
    ಹಾಗೂ
    ‘ದೇಹಾತ್ಮಗಳೆರಡೂ
    ನಿಮ್ಮಂತೆಯೇ ಬದುಕಲಿ’
    ಎನ್ನುವ ಸಾಲುಗಳು ಬಹಳ ಕಾಡುವಂಥವು ಎನಿಸುತ್ತಿದೆ. ಅಂಥ ಚಿಂತನೆಗಳು ಎಲ್ಲರನ್ನೂ ಸೆಳೆಯಲಿ… ಆ ಮೂಲಕ ಹೆಣ್ಣು ಅವಳ ಬದುಕನ್ನು ಬದುಕಲು ಬಿಟ್ಟರೆ ಸಾಕು… ಇಡೀ ಕವನ ತುಂಬಾ ಚೆನ್ನಾಗಿದೆ ಮೇಡಂ…
    -ರಮೇಶ್ ಹಿರೇಜಂಬೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading