ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜ್ಞಾ ಮತ್ತಿಹಳ್ಳಿ ಕಾಡುವ ಕವಿತೆ: ದೊಡ್ಡ ದೊಡ್ಡ ಕತೆಗಳೆದುರು..

ಆದರೂ…

ಪ್ರಜ್ಞಾ ಮತ್ತಿಹಳ್ಳಿ

ಕ್ಷಮಿಸಿಬಿಡಿ ಗೊತ್ತಿದೆ ನನಗೆ

ದೊಡ್ಡ ದೊಡ್ಡ ಬದುಕಲ್ಲಿ

ಸಣ್ಣ ಸಣ್ಣ ವಿಷಯ ಕೇಳಲಿಕ್ಕೆ

ಅಜೀಬಾತ್ ವೇಳೆಯಿಲ್ಲದವರು

ನೀವು ಅಂತ ಆದರೂ..

 

ಆ ಸಣ್ಣ ಪೋರ ಗುಂಗುರು ಕ್ರಾಪು

ತೀಡುತ್ತ ತುಸು ಗೂನು ಬೆನ್ನಾಗಿ

ಕೂತು ಶ್ಲೋಕ ಹೇಳುತ್ತಿದ್ದಂವ

ಬಗ್ಗಿಸಿದ ತಲೆಯೆತ್ತದೆ ಗುಂಡಗೆ

ಮಗ್ಗಿ ಬರೆಯುತ್ತಿದ್ದಂವ

ನೆಂಟರು ಬಂದರೆ ಹಿತ್ತಿಲ ಬಾಗಿಲಿಂದ

ಸಪ್ಪಳಿಲ್ಲದೇ ಸಕ್ಕರೆ ತಂದು ಕೊಡುತ್ತಿದ್ದಂವ

ಕುಶಾಲಿಗೂ ಆಯಿ ತೀಡುವುದ ಕಂಡರೆ

ಎದೆ ಒಡೆದುಕೊಳ್ಳುತ್ತಿದ್ದಂವ

ಶಾಲೆ ತಪ್ಪಿಸಲು ಸುತಾರಾಂ ಕಬೂಲಾಗದೇ

ಮುಖ ಉಬ್ಬಿಸಿ ಮೂಲೆ ಹಿಡಿಯುತ್ತಿದ್ದಂವ

ಹೀಗೆ ಒಮ್ಮಿಂದೊಮ್ಮೆಲೆ..

ಛೇ ದೊಡ್ಡ ದೊಡ್ಡ ಸಂಭ್ರಮದಲ್ಲಿ

ಸಣ್ಣ ಸಣ್ಣ ಸಂತಾಪಗಳಿಗೆ

ಬಿಲ್ಕುಲ್ ಬಿಡುವಿರುವುದಿಲ್ಲ ಬಿಡಿ

ಆದರೂ…

 

 

ಅಷ್ಟೆತ್ತರದ ಆಸ್ಪತ್ರೆಯಲ್ಲಿ ಆದಿನ

ನಸುಕಿಗೇ ಹೊಟ್ಟೆ ಕೊಯ್ಯುವ ಮುಂಚೆ

ಪ್ರಸಿದ್ಧ ವೈದ್ಯರು ರೈಸ್ ಟ್ಯೂಬ್ ಹಾಕುವುದ

ಮರೆಯದಿದ್ದರೆ..

ಹಸಿವು ತಡೆಯದೇ ಪೋರ ಕದ್ದು ತಿಂದ

ಬಿಸ್ಕೀಟು ವಿಷದಂತೆ ಮೇಲೇರಿ

ಉಸಿರು ಕಟ್ಟದಿದ್ದರೆ..

ತಿಂದಿದ್ದು ತಿಳಿದ ನರ್ಸು ಹೇಳಿದ್ದು

ಕಿವಿಗಿಳಿಸಿಕೊಳ್ಳದಂತೆ ವೈದ್ಯರಿಗೆ ಫೋನು

ಬರದಿದ್ದರೆ..

ಛೇ ಹೋಗಲಿ ಬಿಡಿ

ದೊಡ್ಡ ದೊಡ್ಡ ದವಾಖಾನೆಯ

ಉದ್ದ ಉದ್ದ ಸರತಿ ಸಾಲಲ್ಲಿ ನಿಂತವರ

ನಂಬಿಕೆಯೆದುರು ಸಣ್ಣ ಸಣ್ಣ ದೋಷಗಳು

ಹಾರಿ ಹೋಗುತ್ತವೆ

ಆದರೂ…

 

ಲೆಕ್ಕ ಬಿಡಿಸಿದ ಅಕ್ಕೋರು ಬಾಯ್ತಪ್ಪಿ

ಅಂಕುರಾ ಹೇಳೋ ಅಂದಾಗ

ತಾಟು ಹಾಕಿದ ಆಯಿ ಊಟಕ್ಕೆ ಬಾರೋ

ಅಂತ ಕರೆದು ಅವಕ್ಕಾಗಿ ನಿಂತಾಗ

ಸಂಜೆ ಐದರ ಮಳೆಗೆ ನೆನೆದರೂ ಗೇಟು

ಹತ್ತಿರವೇ ನಿಂತ ನಾಯಿ ಕಾಲ್ದಾರಿಗೆ

ಕಾಯುವ ಕಣ್ಣಿಳಿಬಿಟ್ಟಾಗ

ಹೋಗಲಿ ಬಿಡಿ..

 

ದೊಡ್ಡ ದೊಡ್ಡ ಕತೆಗಳೆದುರು

ಸಣ್ಣ ಸಣ್ಣ ಕವಿತೆಗಳ ಓದುವವರಿಲ್ಲ

ಅಂತ ಗೊತ್ತಿದ್ದರೂ

‍ಲೇಖಕರು nalike

19 July, 2020

8 Comments

  1. Mantheshakumar. B.n.

    ಆದರೂ ಕವಿತೆ ಆಪ್ತವಿದೆ. ಧನ್ಯವಾದಗಳು

  2. ಕೆ.ಬಿ.ವೀರಲಿಂಗನಗೌಡ್ರ.

    ಚೆಂದಿದೆ
    ಅಭಿನಂದನೆಗಳು.

  3. ನೀತಾ. ರಾವ್.

    ಓದಿದೆ ಪುರಸೊತ್ತಿಟ್ಟುಕೊಂಡು. ಚೆನ್ನಾಗಿದೆ.

  4. ನೂತನ ದೋಶೆಟ್ಟಿ

    ಪ್ರಜ್ಞಾ ಚೆನ್ನಾಗಿದೆ
    …ಹೌದು ಜೀವವೂ ಈಗ ಸಣ್ಣ ವಿಷಯ.

  5. Prajna Mattihalli

    Thanks dear friends and Thanks Avadhi

  6. T S SHRAVANA KUMARI

    ಮನಕಲಖಕಿದ ಕವಿತೆ

  7. Manjumani

    ಕೆಲ ಸಾಲುಗಳು ಬಹಳ ಇಷ್ಟವಾಯಿತು ಮೇಡಂ.

  8. D.M.Nadaf.

    ಸಂಗತಿಗಳು ಸಣ್ಣವಾದರೂ ಕವಿತೆ ಸಣ್ಣದಲ್ಲ!
    ಅಷ್ಟು ಪ್ರಾಮಾಣಿಕನಾದಂವ ಬಿಸ್ಕಿಟ್ ಕದ್ದು
    ಕೆಟ್ಟಾಂವಾದ್ನಲ್ಲ.ಅದಕ್ಕ
    ಕವಿತೆ ಸಣ್ಣದಲ್ಲ.
    ಡಿ.ಎಮ್.ನದಾಫ್
    ಅಫಜಲಪುರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading