‘ಪ್ರಜಾವಾಣಿ’ ಸಂಪಾದಕೀಯ ಖಾಲಿ ಬಿಟ್ಟೆವು..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. 

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

। ಕಳೆದ ವಾರದಿಂದ ।

ಅರವತ್ತರ ದಶಕ ಕೊನೆಗೊಂಡಿತ್ತು. ಪ್ರಶಾಂತ ಸಾಗರದಿಂದ  ಪ್ರಕ್ಷುಬ್ಧ ಕಡಲಿಗೆ ಜಾರಿದಂತೆ ಎಪ್ಪತ್ತರ ದಶಕ ಆರಂಭವಾಗಿತ್ತು. ಜೆ.ಪಿ ಆಂದೋಲನ, ತುರ್ತುಪರಿಸ್ಥಿತಿ ಮೊದಲಾದ ಕೋಲಾಹಲಗಳ ದಶಕ. ಪತ್ರಿಕಾ ಸ್ವಾತಂತ್ರ್ಯಕ್ಕೆ ಶೃಂಖಲೆ ತೊಡಿಸಿದ ದಶಕ. ತಹಲ್‍ವರೆಗೆ ಮುಂದಿನ ದಶಕಗಳೆಲ್ಲವೂ ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮಕ್ಕೆ ಅಗ್ನಿದಿವ್ಯದ ವರ್ಷಗಳೇ.

ಹೆಜ್ಜೆಹೆಜ್ಜೆಗೆ  ಪತ್ರಿಕಾ ಸ್ವಾತಂತ್ರ್ಯಕ್ಕೆ ಎದುರಾಗುತ್ತ ಇದ್ದ ಕುತ್ತುಗಳು, ಮಾಹಿತಿ ತಂತ್ರಜ್ಞಾನ ಹಾಗೂ ಮುದ್ರಣ ತಂತಜ್ಞಾನಗಳಲ್ಲಿನ ಹೊಸಹೊಸ ಆವಿಷ್ಕಾರಗಳು, ಕಾಲದೊಂದಿಗೆ ಓಡಲು ಅವುಗಳನ್ನು ಅಳವಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ, ವಿದ್ಯುನ್ಮಾನ ಮಾಧ್ಯಮಗಳನ್ನು ಎದುರಿಸಬೇಕಾದ ಸವಾಲು, ಕೊರಳು ಕೊಯ್ಯುವ ಪ್ರತಿಸ್ಪರ್ಧೆ, ಕಾರ್ಪೊರೆಟ್ ಆಡಳಿತ ಶೈಲಿ ದಾಂಗುಡಿ ಇಟ್ಟ ಪರಿಣಾಮವಾಗಿ ಆದ್ಯತೆಗಳಲ್ಲಿ ಆದ ಪಲ್ಲಟ, ಸಂಪಾದಕನ ಸ್ಥಾನವನ್ನು ಜಾಹಿರಾತು ಮ್ಯಾನೇಜರನ್ನೇ ಆಕ್ರಮಿಸಿದಂಥ ಮಾರುಕಟ್ಟೆ ಒತ್ತಡಗಳು… ಹೀಗೆ ಎಪ್ಪತ್ತನೇ ದಶಕದಿಂದ ಆರಂಭವಾದ ಆತಂಕ-ಅತಂತ್ರಗಳು ಎಂಬತ್ತು ತೊಂಬತ್ತರ ದಶಕಗಳಲ್ಲಿ ಹೆಚ್ಚುತ್ತಾಹೋಗಿ ಹೊಸ ಶತಮಾನದಲ್ಲಿ ಪರಾಕಾಷ್ಠೆ ಮುಟ್ಟಿದವು.

`ಪ್ರಜಾವಾಣಿ’ಗಂತೂ ಈ ಅವಧಿ ಯಾತನಾಮಯವಾದುದು. ತುರ್ತುಪರಿಸ್ಥಿತಿಯ ಸ್ವಾತಂತ್ರ್ಯ ಹರಣದ ಜೊತೆಗೆ ಪತ್ರಿಕೆಯನ್ನು ಬೆಳೆಸಿದ ಶ್ರೀ ಕೆ.ಎ. ನೆಟ್ಟಕಲ್ಲಪ್ಪ ಮತ್ತು ಸಂಪಾದಕ ಟಿ.ಎಸ್. ರಾಮಚಂದ್ರ ರಾವ್ ಅವರುಗಳ ಅಗಲಿಕೆಯ ನೋವು ಎಪ್ಪತ್ತರ ದಶಕದ ಭರಿಸಲಾಗದ ದು:ಖದ ಸಂಗತಿಗಳು.`ಹೃದಯವಂತ’ ಎಂದೇ ನೌಕರ ವರ್ಗದಲ್ಲಿ ಅಚ್ಚುಮೆಚ್ಚಾಗಿದ್ದ ಶ್ರೀ ಕೆ.ಎ. ನೆಟ್ಟಕಲ್ಲಪ್ಪನವರು `ಪ್ರಜಾವಾಣಿ’,`ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳನ್ನು ಜನಮನಕ್ಕೆ ಮುಟ್ಟಿಸುವುದರಲ್ಲಿ ಬಹುವಾಗಿ ಶ್ರಮಿಸಿದವರು.

ಸಂಪಾದಕನಾದವನು ಸುದ್ದಿಜಾಲ ರೂಪಿಸಿ ಅಂದಂದಿನ ಸುದ್ದಿಗಳನ್ನು, ವಿಶೇಷ ಸುದ್ದಿಗಳನ್ನು ಓದುಗರಿಗೆ ನೀಡಲು ಹೊಣೆಗಾರನಾಗಿರುವಂತೆ ಮಾರುಕಟ್ಟೆಯ ಜಾಲ ವಿಸ್ತರಿಸುವುದು ಆಡಳಿತ ವರ್ಗದ ಜವಾಬ್ದಾರಿ. ನೆಟ್ಟಕಲ್ಲಪ್ಪನವರು ರಾಜ್ಯಾದ್ಯಂತ ಪ್ರವಾಸ ಮಾಡಿ ನಂಬಿಕೆಗೆ ಅರ್ಹರರಾದ ಏಜೆಂಟರುಗಳನ್ನು ನೇಮಿಸಿ ಪತ್ರಿಕೆಗಳ ಪ್ರಸಾರ ವೃದ್ಧಿಗೆ ಶ್ರಮಿಸಿದವರು.

ನೆಟ್ಟಕಲ್ಲಪ್ಪನವರು ಮತ್ತು ಟಿಎಸ್ಸಾರ್ ಒಟ್ಟೊಟ್ಟಿಗೆ ರಾಜ್ಯದ ಜಿಲ್ಲೆ, ತಾಲ್ಲೂಕು, ಹಳ್ಳಿಗಳಲ್ಲಿ ಪ್ರವಾಸ ಮಾಡುತ್ತಿದ್ದರು. ಇಲ್ಲೆಲ್ಲ ಏಜೆಂಟರುಗಳು ಮತ್ತು ವಾಚಕರ ಸಭೆ ನಡೆಸಿ, ಅವರ ಬೇಕುಬೇಡಗಳನ್ನು, ಸಮಸ್ಯೆಗಳನ್ನು ಆಲಿಸಿ `ಪ್ರವಾ’ ಮತ್ತು `ಡಿಎಚ್’ ಜನಪ್ರಿಯತೆಗೆ ಭದ್ರ ಬುನಾದಿ ಹಾಕಿದವರು. ಪ್ರಿಂಟರ್ಸ್ ಮೈಸೂರು ಸಂಸ್ಥೆಯ ಕಾರ್ಯದರ್ಶಿಗಳಾಗಿ, ಮ್ಯಾನೇಜಿಂಗ್ ಡೈರೆಕ್ಟರಾಗಿ ಪತ್ರಿಕೆಗಳ ಶ್ರೇಯೋಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದ ಶ್ರೀ ಕೆ.ಎ.ನೆಟ್ಟಕಲ್ಲಪ್ಪನವರು 1973ರಲ್ಲಿ ಹಠಾತ್ತನೆ ಸಂಸ್ಥೆಯಿಂದ ನಿರ್ಗಮಿಸಿದ್ದು ಇಂದಿಗೂ ಒಂದು ನಿಗೂಢವೇ.

ಕ್ರೀಡಾ ಪ್ರೇಮಿಯಾಗಿದ್ದ ನೆಟ್ಟಕಲ್ಲಪ್ಪನವರು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಒಲಿಂಪಿಕ್ ಕ್ರೀಡಾಪಟುಗಳ ಪಾಲನೆ, ಪೋಷಣೆಯಲ್ಲಿ ತೊಡಗಿಕೊಂಡಿದ್ದರು. 1976ರ ಜೂನ್ 2ರಂದು ಕೆ.ಎ.ನೆಟ್ಟಕಲ್ಲಪ್ಪನವರು ಇಹಲೋಕ ತ್ಯಜಿಸಿದಾಗ ಅವರ ವಯಸ್ಸು ನಲವತ್ತೇಳು ವರ್ಷ. ಅವರು ನಿಧನರಾದ ದಿನ ಆಡಳಿತವರ್ಗ ಪತ್ರಿಕೆಗಳಿಗೆ ರಜೆ ಘೋಷಿಸಲಿಲ್ಲ.

ಪತ್ರಿಕೆಗಳನ್ನು ಬೆಳೆಸಲು ದುಡಿದ ನೆಟ್ಟಕಲ್ಲಪ್ಪನವರ ಸ್ಮರಣಾರ್ಥ ಅಂದು ಪತ್ರಿಕೆಗಳಿಗೆ ರಜೆ ಘೋಷಿಸಬೇಕೆಂದು  ನೌಕರರು ಆಗ್ರಹಪಡಿಸಿದರು. ಆಡಳಿತ ಮಂಡಳಿ ಒಪ್ಪಲಿಲ್ಲ. ಆಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಮುನಿಯಪ್ಪನವರು “ನಮಗಿದು ಶೋಕದ ದಿನ. ನೀವು ರಜೆ ಘೋಷಿಸದಿದ್ದರೆ ನಾವು ಸತ್ಯಾಗ್ರಹ ಆಚರಿಸುತ್ತೇವೆ” ಎಂದು ಖಡಾಖಂಡಿತವಾಗಿ ಹೇಳಿದಾಗ ಆಡಳಿತ ವರ್ಗ ಮಣಿಯುಬೇಕಾಯಿತು.

ಈ ದಶಕದಲ್ಲಿ ತಲೆದೋರಿದ ಮುದ್ರಣ ಕಾಗದದ ಅಭಾವ ಪತ್ರಿಕೆಯ ಬೆಳವಣಿಗೆಗೆ ದೊಡ್ಡ ತೊಡಕಾಗಿ ಪರಿಣಮಿಸಿತು. ಪುಟಗಳನ್ನು ಕಡಿಮೆ ಮಾಡಬೇಕಾದುದರ ಜೊತೆಗೆ ಒಂದು ವರ್ಷ ದೀಪಾವಳಿ ವಿಶೇಷಾಂಕ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು. ಪ್ರತಿ ವರ್ಷ ಸುಗ್ಗಿ ವೇಳೆಗೆ ತರುತ್ತಿದ್ದ ಕೃಷಿ ವಿಶೇಷಾಂಕ ಪ್ರಕಟಣೆಯೂ ನಿಂತುಹೋಯಿತು. ಈ ಕೃಷಿ ವಿಶೇಷಾಂಕವನ್ನು ಸಿದ್ಧಲಿಂಗಪ್ಪ ಮತ್ತು ಟಿ.ನಾಗರಾಜು ಸಿದ್ಧಪಡಿಸುತ್ತಿದ್ದರು.

ಇದೇ ದಶಕದ ಆರಂಭದಲ್ಲಿ `ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ’ ಸಾಹಿತ್ಯ ಬಳಗದ ಕೆಲವರ ಅವಿಶ್ವಾಸವನ್ನೂ ಎದುರಿಸ ಬೇಕಾಯಿತು. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಏರ್ಪಡಿಸಿದ್ದ ವಿಚಾರ ಸಂಕಿರಣದ ವೇದಿಕೆಯನ್ನು ಬಳಸಿಕೊಂಡು ಕೆಲವರು ಕವಿಗಳು/ಲೇಖಕರು ಚಂದ್ರಶೇಖರ ಪಾಟೀಲರ ನಾಯಕತ್ವದಲ್ಲಿ `ಪ್ರಜಾವಾಣಿ’ ವಿರುದ್ಧ ಹರಿಹಾಯ್ದರು.

ಕಥೆ, ಕಾವ್ಯ, ಲೇಖನ, ವಿಮರ್ಶೆ ಇತ್ಯಾದಿಗಳ ಪ್ರಕಟಣೆಯಲ್ಲಿ ಕೆಲವೇ ಲೇಖಕರಿಗೆ ಮಣೆ ಹಾಕುತ್ತಿದೆ, ಕೆಲವು ಲೇಖಕರಿಗೆ ಅನ್ಯಾಯ ಮಾಡುತ್ತಿದೆ, ಪಕ್ಷಪಾತ, ಜಾತೀಯತೆಯ ಪೂರ್ವಾಗ್ರಹಗಳು ಮೊದಲಾದ ಆಪಾದನೆಗಳು ಕೇಳಿ ಬಂದವು. ಬಹುತೇಕ ಆಪಾದನೆಗಳು ಸಾಪ್ತಾಹಿಕ ಪುರವಣಿ ವಿರುದ್ಧ ಕೇಂದ್ರೀಕೃತವಾಗಿದ್ದಂತೆ ತೋರಿತು. ಇದೇ ವೇದಿಕೆಯಿಂದ ವೈಕುಂಠರಾಜು ಅವರು ಈ ಆರೋಪಗಳಿಗೆ ಉತ್ತರ ಕೊಟ್ಟಿದ್ದರು.

 ಆಧುನಿಕ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಜೊತೆಗೆ ಸಂಪಾದಕೀಯ ವಿಭಾಗ ಮತ್ತು ವೃತ್ತ ಪತ್ರಿಕೆಯ ಆಡಳಿತ ಮಂಡಳಿಯಲ್ಲಿ ಹೊಸ ಪೀಳಿಗೆಯ ಹೊಸರಕ್ತ, ಬಿಸಿ ರಕ್ತಗಳ ಪ್ರವೇಶಕ್ಕೆ ನಾಂದಿಹಾಡಿದ ದಶಕವಿದು.

           ಬಾಂಗ್ಲಾ ವಿಮೋಚನೆ

ನೆರೆಯ ಪೂರ್ವ ಪಾಕಿಸ್ತಾನದಲ್ಲಿ ವಿಮೋಚನಾ ಹೋರಾಟ ಯುದ್ಧದ ಪರಾಕಾಷ್ಠೆಯನ್ನು ತಲುಪಿ 1971ರಲ್ಲಿ ಬಾಂಗ್ಲಾ ವಿಮೋಚನೆಯಾಯಿತು, ಬಾಂಗ್ಲಾ ದೇಶ ಉದಯಿಸಿತು. ಅಂದು ರಾತ್ರಿ ಪಾಳಿ ನಮ್ಮದೇ ಆಗಿತ್ತು. ನಾವು ರಾತ್ರಿ ಬರುವ ವೇಳೆಗೆ ಮಾರ್ನಿಂಗ್ ಎಡಿಷನ್ ಸಿದ್ಧವಾಗಿತ್ತು. ಸ್ವತ: ಸುದ್ದಿ ಸಂಪಾದಕ ಖಾದ್ರಿ ಶಾಮಣ್ಣನವರು ಬಾಂಗ್ಲಾ ವಿಮೋಚನೆಯ ಅಗ್ರ ವಾರ್ತೆಯನ್ನು ಪರಿಶೀಲಿಸಿ ಅವರೇ “ವಂಗ ವಿಮೋಚನೆ” ಎಂದು ಎಂಟು ಕಾಲಂ ಬ್ಯಾನರ್ ಶೀರ್ಷಿಕೆ ಕೊಟ್ಟಿದ್ದರು. ಈ ಶೀರ್ಷಿಕೆಯನ್ನು ಸುಂದರವಾದ ಲಿಪಿ ವಿನ್ಯಾಸಕ್ಕೆ ಪ್ರಖ್ಯಾತರಾಗಿದ್ದ ಕಲಾವಿದ ಎಸ್. ರಮೇಶ್ ಅವರಿಂದ ಬರೆಸಿದ್ದರು. ಪತ್ರಿಕೆ ಶುರುವಾದಾಗ `ಪ್ರಜಾವಾಣಿʼಯ ಮಾಸ್ಟ್ ಹೆಡ್ ಬರೆದವರೂ ರಮೇಶ್ ಅವರೇ. ಈಗಿರುವುದು ಮೂಲದ ವಿಕೃತಿ.

 ರಾತ್ರಿ ಹತ್ತರ ಸುಮಾರಿಗೆ ಟಿಎಸ್ಸಾರ್ ಫೋನ್ ಬಂತು.

“ಲೀಡ್ ಹೆಡಿಂಗ್ ಏನು?”

“ವಂಗ ವಿಮೋಚನೆ”

“ವಾಟ್? ಏನದು ವಂಗ-ಮಂಗ, ಮೈಸೂರು ಎಡಿಷನ್‍ಗೆ ಬದಲಾಯಿಸಿ -`ಬಾಂಗ್ಲಾ ವಿಮೋಚನೆ’- ಅಂತ ಮಾಡಿ”

“ರಮೇಶ್ ಕ್ಯೆಯ್ಯಲ್ಲಿ ಹೆಡ್ ಲೈನ್ ಬರೆಸಿಯಾಗಿದೆ ಸರ್”

“ಸೋ ವಾಟ್. ಚೇಂಜ್ ದಿ ಬ್ಯಾನರ್ ಹೆಡ್ ಲೈನ್…ಟೈಪ್ ಸೆಟ್ ಮಾಡಿಸಿ”

ಪೋಸ್ಟರ್ ಟೈಪ್‍ನಲ್ಲಿ `ಪ್ರವಾ’ “ಬಾಂಗ್ಲಾ ವಿಮೋಚನೆ”ಯನ್ನು ದುಂದುಭಿಸಿತು.

ಎಪ್ಪತ್ತರ ದಶಕದ ಪೂರ್ವಾರ್ಧದಲ್ಲೇ ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಆದ ಇನ್ನೊಂದು ಘಟನೆಯೆಂದರೆ `ಸಂಯುಕ್ತ ಕರ್ನಾಟಕ’ ಪತ್ರಿಕೆಯ ಆಡಳಿತದಲ್ಲಿ ಆದ ಪಲ್ಲಟ. ಆರ್ಥಿಕ ಸಂಕಷ್ಟ, ಕಾರ್ಮಿಕ ವಿವಾದಗಳು ಹೀಗೆ ಹಲವಾರು ಬಿಕ್ಕಟ್ಟುಗಳ ಸುಳಿಯಲ್ಲಿ ಸಿಕ್ಕಿದ್ದ ಈ ಪತ್ರಿಕೆಯನ್ನು ಸರ್ಕಾರ ಸಂಡೂರಿನ ರಾಜವಂಶಸ್ಥರಾದ ಎಂ.ವೈ. ಘೋರ್ಪಡೆಯವರಿಗೆ ವಹಿಸಿಕೊಟ್ಟಿತು. ಸರ್ಕಾರದ ಈ ಕ್ರಮದ ವಿರುದ್ಧ ಶ್ಯಾಮ ರಾಯರು ಕೋರ್ಟಿನ ಮೆಟ್ಟಿಲು ಹತ್ತಿದರು.

`ಸಂಕ’ಗೆ ಕಾಯಕಲ್ಪ ಮಾಡಲೋ ಎಂಬಂತೆ ಘೋರ್ಪಡೆಯವರು ಪ್ರಜಾವಾಣಿಯಿಂದ ಖಾದ್ರಿ ಶಾಮಣ್ಣ, ಜಯಶೀಲ ರಾವ್ ಮತ್ತು ಕೆ.ಜನಾರ್ದನ ಅವರನ್ನು ಸೆಳೆದುಕೊಂಡರು, ಖಾದ್ರಿ  ಶಾಮಣ್ಣ `ಸಂಕ’ ಸಂಪಾದಕರಾದರು. ಜಯಶೀಲ ರಾವ್, ಜಂಟಿ ಸಂಪಾದಕರು, ಜನಾರ್ದನ ಮುಖ್ಯ ವರದಿಗಾರರು. `ಪ್ರವಾ’ದಲ್ಲಿ ವೈ.ಎನ್.ಕೆ ಸುದ್ದಿ ಸಂಪಾದಕರಾಗಿ ಬಡ್ತಿ ಪಡೆದು ಖಾದ್ರಿಯವರಿಂದ ತೆರವಾದ ಸ್ಥಾನವನ್ನು ತುಂಬಿದರು. ಸಿ.ವಿ.ರಾಜಗೋಪಾಲ್ ಮುಖ್ಯ ವರದಿಗಾರರಾಗಿ ಬಡ್ತಿ ಪಡೆದರು.

ತುರ್ತುಪರಿಸ್ಥಿತಿ

ಎಪ್ಪತ್ತರ ದಶಕದ ಅರ್ಧಭಾಗದಲ್ಲಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಘೋಷಿಸಿ ದೇಶದಾದ್ಯಂತ ಭಾರಿ ಕೋಲಾಹಲವನ್ನೆಬ್ಬಿಸಿದ್ದರು. 1975ರ ಜೂನ್ 25ರಂದು ಮಧ್ಯರಾತ್ರಿ ಇಂದಿರಾ ಗಾಂಧಿಯವರ ಸರ್ಕಾರ ತುರ್ತುಪರಿಸ್ಥಿತಿ ಘೋಷಿಸಿತು.ತುರ್ತು ಪರಿಸ್ಥಿತಿ ಘೋಷಿಸುವ ವೇಳೆಗೆ 26ರ ಪತ್ರಿಕೆಗಳು ಮುದ್ರಣಗೊಂಡಿದ್ದವು. 26ರ ಮುಂಜಾನೆ ಆಕಾಶವಾಣಿ ಸುದ್ದಿ ಪ್ರಸಾರದಿಂದಲೇ ದೇಶದ ಜನತೆಗೆ ತುರ್ತುಪರಿಸ್ಥಿತಿ ಘೋಷಣೆ ತಿಳಿದದ್ದು.

ವಿರೋಧಿ ನಾಯಕರುಗಳನ್ನೆಲ್ಲ ಬಂಧಿಸಲಾಗಿತ್ತು. ಪತ್ರಿಕೆಗಳ ಮೇಲೆ ಸೆನ್ಸಾರ್ ಜಾರಿಗೆ ತರಲಾಗಿತ್ತು. ಸೆನ್ಸಾರನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಾರ್ತಾ ಇಲಾಖೆಯ ಜವಾಬ್ದಾರಿಯಾಗಿತ್ತು. ಕರ್ನಾಟಕದಲ್ಲಿ ರೇಣು ಆನಂದ ರಾವ್, ಕುಲಕರ್ಣಿ ಮತ್ತಿತರರು ಸೆನ್ಸಾರ್ ಅಧಿಕಾರಿಗಳಾಗಿ ನೇಮಕಗೊಂಡಿದ್ದರು. ರೇಣು ಆನಂದ ರಾವ್ ಮತ್ತು ಕುಲಕರ್ಣಿಯವರು ಬೆಳಿಗ್ಗೆ, ಸಂಜೆ ಪ್ರಜಾವಾಣಿ ಸಂಪಾದಕೀಯ ವಿಭಾಗಕ್ಕೆ ಭೇಟಿ ನೀಡಿ ಮುದ್ರಣಕ್ಕೆ ಸಿದ್ಧಗೊಂಡ ಪುಟಗಳ ಕರಡು ನೋಡಿ “ಓ.ಕೆ.” ಎಂದು ಸಹಿ ಮಾಡಿದ ನಂತರವೇ ಪತ್ರಿಕೆ ಮುದ್ರಣಕ್ಕೆ ಹೋಗಬೇಕಿತ್ತು.

ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಸಣ್ಣ ಸೊಲ್ಲು ಇರುವ ಸುದ್ದಿಯನ್ನೂ ಆಚೆಗೆ ಹೋಗಲು ಈ ಅಧಿಕಾರಿಗಳು ಬಿಡುತ್ತಿರಲಿಲ್ಲ. ಅಂಥ ಸುದ್ದಿಯನ್ನು ತೆಗೆದು ಅದರ ಜಾಗದಲ್ಲಿ ಹಾಕಿದ ಮತ್ತೊಂದು ಸುದ್ದಿಯನ್ನು ಪರಿಶೀಲಿಸದ ನಂತರವೇ ಪೇಜ್ `ಓ.ಕೆ.ʼ ಮಾಡುತ್ತಿದ್ದರು. ಪಿ.ಟಿ.ಐ ಮತ್ತು ಯು.ಎನ್.ಐ. ಮೊದಲಾದ ಏಜೆನ್ಸಿಗಳ ಸುದ್ದಿಗಳನ್ನು, ಸುದ್ದಿ ಮೂಲದಲ್ಲೇ, ಅಂದರೆ, ದೆಹಲಿ ಮೊದಲಾದ ಕೇಂದ್ರಗಳಲ್ಲೇ ಸೆನ್ಸಾರ್ ಮಾಡಲಾಗುತ್ತಿತ್ತು.

ಹೀಗಾಗೀ ನಮಗೆ ಸೆನ್ಸಾರ್ ಆದ ಸುದ್ದಿಗಳೇ ಬರುತ್ತಿದ್ದವು. ಇನ್ನು ಬೆಂಗಳೂರು ನಗರದ ಸ್ಥಳೀಯ  ಮತ್ತು ಕರ್ನಾಟಕದ ರಾಜ್ಯದ ಬಾತ್ಮೀದಾರರ ಸುದ್ದಿಗಳನ್ನು ರಾಜ್ಯ ವಾರ್ತಾ ಇಲಾಖೆಯ ಸೆನ್ಸಾರ್ ಅಧಿಕಾರಿಗಳು ಪರಿಶೀಲಿಸುತಿದ್ದರು. ತಮ್ಮ ಕಣ್‍ತಪ್ಪಿ ಯಾವುದೇ ಸುದ್ದಿ ಹೋಗಬಾರದೆಂದು ಮುದ್ರಣಕ್ಕೆ ಪೂರ್ವಭಾವಿಯಾಗಿ ಪೇಜ್ ಪ್ರೂಫುಗಳನ್ನು ನೋಡುತ್ತಿದ್ದರು.

26ರಂದು ಬೆಳಿಗ್ಗೆ ಹನ್ನೊಂದು ಗಂಟೆಗೇ ʼಪ್ರಜಾವಾಣಿ’ಗೆ ಆಗಮಿಸಿದ ಸೆನ್ಸಾರ್ ಅಧಿಕಾರಿಗಳು ಸಂಪಾದಕರನ್ನು ಭೇಟಿ ಮಾಡಿ ಸೆನ್ಸಾರ್ ಜಾರಿಯನ್ನು, ಅದರ ನಿಯಮಗಳನ್ನು ತಿಳಿಸಿದರು. ತಮ್ಮ ಗಮನಕ್ಕೆ ಬಾರದೆ ಒಂದು ತುಣುಕು ಸುದ್ದಿಯೂ ಹೋಗುವಂತಿಲ್ಲವೆಂದು ಹೇಳಿ, ಸಂಜೆ ಬಂದು ಮುದ್ರಣಕ್ಕೆ ಸಿದ್ಧವಾದ ಪುಟಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದರು.

ಅವರು ತೆರಳಿದ ನಂತರ ಅಂದಿನ ಸಂಪಾದಕೀಯ ಸಭೆ ನಡೆಯಿತು. ಸಭೆಯಲ್ಲಿ ಪತ್ರಿಕೆಯ ನೀತಿನಿಲುವುಗಳನ್ನು ನಿರ್ಧರಿಸಲಾಗಿತ್ತು. “ವಿ ಶುಡ್ ಫೈಟಿಟ್ ಟೂತ್ ಅಂಡ್ ನೈಲ್’ ಎನ್ನುವುದು ಸಂಪಾದಕರ ತೀರ್ಮಾನವಾಗಿತ್ತು. ಇದಕ್ಕೂ ಮುನ್ನ ಸಂಪಾದಕರು ಗೌರ್ನಿಂಗ್ ಡೈರೆಕ್ಟರ್  ಮತ್ತು ಇತರ ಆಡಳಿತ ಮಂಡಳಿಯವರೊಡನೆ ಸಮಾಲೋಚಿಸಿ ತುರ್ತುಪರಿಸ್ಥಿತಿಯ ಗಂಡಾಂತರಗಳನ್ನು ವಿವರಿಸಿದ್ದರೆಂದು ನಂತರ ನಮಗೆ ತಿಳಿಯಿತು, ತುರ್ತು ಪರಿಸ್ಥಿತಿ ಘೋಷಣೆಯನ್ನು ಉಗ್ರವಾಗಿ ಖಂಡಿಸುವ ಸಂಪಾದಕೀಯವನ್ನು ಕಣ್ಣನ್ ಬರೆದರು. ಛೂಬಾಣದಲ್ಲೂ ಟಿಎಸ್ಸಾರ್ ಕಟುವಾಗಿ ಟೀಕಿಸಿದ್ದರು.

ಅಂದು ರಾತ್ರಿ ಪಾಳಿಯಲ್ಲಿ ಹಿರಿಯ ಸಹೋದ್ಯೋಗಿ ಬಿ.ಎಂ.ಕೆ ಮತ್ತು ನಾನು ಇದ್ದೆವು. ಇನ್ನೊಬ್ಬರು ಕೆ.ಎಸ್.ನಾಗಭೂಷಣಂಗೆ ಅಂದು ವಾರದ ರಜೆಯಾಗಿತ್ತು. ಮಾರ್ನಿಂಗ್ ಎಡಿಷನ್ ಪುಟಗಳು ಮುದ್ರಣಕ್ಕೆ ಸಿದ್ಧವಾಗಿ ಸಂಪಾದಕೀಯ ಪುಟ ಒಂದು ಹೊರತು ಉಳಿದವು ಸೆನ್ಸಾರ್ ಅಧಿಕಾರಿಗಳಿಂದ “ಓ.ಕೆ.” ಆಗಿದ್ದವು.

ಈ ಸಂಪಾದಕೀಯ ಪುಟವನ್ನು ಹೇಗಾದರೂ ಸೆನ್ಸಾರ್ ಅಧಿಕಾರಗಳ ಹದ್ದಿನ ಕಣ್ಣಿನಿಂದ ತಪ್ಪಿಸಿ ಮುದ್ರಣಕ್ಕೆ ಹೈಜಾಕ್ ಮಾಡುವ ಉದ್ದೇಶದಿಂದ ಆ ಪುಟ ಸಿದ್ಧಗೊಳಿಸುವುದನ್ನು ತಡಮಾಡಲಾಗಿತ್ತು. ರಾತ್ರಿ 9ಕ್ಕೆ ಕುಲಕರ್ಣಿಯವರು ಬಂದರು. ಮೊದಲ ಪುಟದ ಪ್ರೋಫ್ ನೋಡಿ ತುರ್ತುಪರಿಸ್ಥಿತಿ ವಿರೋಧಿಸುವ ಸುದ್ದಿಗಳಿಗೆ ಕೆಂಪು ಶಾಯಿಯಲ್ಲಿ ಕಾಟು ಹಾಕಿ ಶತಾಯ ಗತಾಯ ಇವು ಅಚ್ಚಾಗಬಾರದೆಂದು ದೂರ್ವಾಸಾಜ್ಞೆ ಮಾಡಿದರು.

ನಂತರ `ಸಂಪಾದಕೀಯ ಪುಟ ಸಿದ್ಧವಾಯಿತೆ, ತನ್ನಿ” ಎಂದರು. ಸಂಪಾದಕೀಯ ಪುಟವನ್ನು ತೋರಿಸದೇ ಗತ್ಯಂತರವಿರಲಿಲ್ಲ. ಅತ್ಯುಗ್ರ ಪದಗಳಲ್ಲಿ ತುರ್ತುಪರಿಸ್ಥಿತಿಯನ್ನು ಖಂಡಿಸಿ ಬರೆದಿದ್ದ  ಸಂಪಾದಕೀಯವನ್ನು ಪೂರ್ತಿಯಾಗಿ ನಿಷೇಧಿಸಿದರು. `ಛೂ’ ಕೂರಂಬುಗಳಿದ್ದ ಸಾಲುಗಳಿಗೆ ಕಾಟು ಹಾಕಿದರು. ನಿಷೇಧಿಸಿದ ಸಂಪಾದಕೀಯದ ಜಾಗದಲ್ಲಿ ಏನು ಪ್ರಕಟಿಸುತ್ತೀರಿ ಎಂದು ಕೇಳಿದರು. ಸಂಪಾದಕರ ಜೊತೆ ಮಾತನಾಡಿ ತಿಳಿಸುವುದಾಗಿ ಬಿ.ಎಂ.ಕೆ ಹೇಳಿದರು. ಅರ್ಧಗಂಟೆ ಬಿಟ್ಟು ಮತ್ತೆ ಪರಿಶೀಲನೆಗೆ ಬರುವುದಾಗಿ ತಿಳಿಸಿ ಕುಲಕರ್ಣಿ ನಿರ್ಗಮಿಸಿದರು.

ಸ್ವಾತಂತ್ರ್ಯ ಹರಣದಿಂದ ನಾವು ಕಂಗಾಲಾಗಿದ್ದೆವು. ಬಿ.ಎಂ.ಕೆ ಸಂಪಾದಕರ ಕೊಠಡಿಗೆ ಹೋಗಿ ಅಲ್ಲಿನ ನೇರ ಟೆಲಿಫೋನ್ ಸಂಪರ್ಕದಿಂದ ಟಿಎಸ್ಸಾರ್ ಅವರಿಗೆ ಎಲ್ಲವನ್ನೂ ವಿವರಿಸಿದರು. ರಾಯರಿಗೆ ಸೆನ್ಸಾರಿನ ಇಂಥ ತೀವ್ರಕ್ರಮದ ಮುಂಗಾಣ್ಕೆ ಇತ್ತು. ಎಂದೆ ಬದಲೀ ಸಂಪಾದಕೀಯವೊಂದನ್ನು ಬರೆಸಿ ಕಂಪೋಸ್ ಮಾಡಿಸಿ ಇಡಿಸಿದ್ದರು. ಆ ಬದಲೀ ಸಂಪಾದಕೀಯ ಹಾಕಿ, ಸೆನ್ಸಾರ್ ಅಧಿಕಾರಿಗಳ ನಿರ್ಗಮನದ ನಂತರ ಮುದಣ್ರಕ್ಕೆ ಕಳುಹಿಸುವ ಮುನ್ನ ತಮಗೆ ಮತ್ತೆ ಫೋನ್ ಮಾಡುವಂತೆ ಆದೇಶಿಸಿದರು.

ಬದಲೀ ಸಂಪಾದಕೀಯಕ್ಕೆ ಸೆನ್ಸಾರ್ ವಿರೋಧವಿರಲಿಲ್ಲ. “ಓ.ಕೆ” ಎಂದು ಸಹಿ ಹಾಕಿ ಹೋದರು. ಬದಲೀ ಸಂಪಾದಕೀಯವನ್ನು ತೆಗೆಸಿ ಆ ಜಾಗವನ್ನು ಖಾಲಿ ಬಿಟ್ಟು ಮುದ್ರಣಕ್ಕೆ ಕಳುಹಿಸುವಂತೆ ಟಿಎಸ್ಸಾರ್ ತಿಳಿಸಿದರು. ಜೂನ್ 27ರ `ಪ್ರಜಾವಾಣಿ’ ಮೊದಲ  ಸಂಪಾದಕೀಯದ ಸ್ಥಳ ಖಾಲಿ ಉಳಿದು ಪ್ರಕಟಗೊಂಡಿತು.

`ಛೂ’ ಬಾಣದಲ್ಲೂ ಕಾಟು ಹಡೆದ ಸಾಲುಗಳನ್ನು ತೆಗೆದುಹಾಕಿ ಖಾಲಿ ಬಿಡಲಾಗಿತ್ತು. ಇದು ತುರ್ತು ಪರಿಸ್ಥಿತಿಗೆ ಪ್ರಜಾವಾಣಿಯ ಮೌನ ಪ್ರತಿಭಟನೆಯಾಗಿತ್ತು. ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯೂ ನಮ್ಮಂತೆ ಸಂಪಾದಕೀಯ ಜಾಗ ಖಾಲಿ ಬಿಟ್ಟು ಪ್ರತಿಭಟಿಸಿತ್ತು.ದೇಶದಲ್ಲಿ ಇವೆರಡೇ ಪತ್ರಿಕೆಗಳು ಈ ರೀತಿ ಮೌನ ಪ್ರತಿಭಟನೆ ತೋರಿದ್ದು.

ಈ ಮೌನ ಪ್ರತಿಭಟನೆ ವಿರುದ್ಧ ದಿಲ್ಲಿ ಆಡಳಿತ ಗರಂ ಆಗಿತ್ತು. ಈ ರೀತಿ ಜಾಗ ಖಾಲಿ ಬಿಡಲು ಅವಕಾಶ ನೀಡಬಾರದೆಂದು ಕೇಂದ್ರ ವಾರ್ತಾ ಸಚಿವಾಲಯದಿಂದ ರಾಜ್ಯಗಳ ಸೆನ್ಸಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ಬಂದಿತು. ಓಡೋಡುತ್ತಾ ಬಂದ ರೇಣು ಆನಂದ ರಾವ್ ಮತ್ತು ಕುಲಕರ್ಣಿಯವರು ಸಂಪಾದಕರಿಗೆ ಸಂಪಾದಕೀಯ ಅಂಕಣ ಮತ್ತು `ಛೂ ಬಾಣ’ ಅಂಕಣಗಳಲ್ಲಿ ಜಾಗ ಖಾಲಿ ಬಿಟ್ಟಿರುವುದಕ್ಕೆ, ತಾವು `ಓಕೆ’ ಮಾಡಿ ನಿರ್ಗಮಿಸಿದ ನಂತರ ಸಂಪಾದಕೀಯ ಪುಟದಲ್ಲಿ ಈ ರೀತಿ ಬದಲಾವಣೆ ಮಾಡಿರುವುದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು.

ಖಾಲಿ ಬಿಡಬಾರದೆಂಬುದು ಕೇಂದ್ರ ವರ್ತಾ ಸಚಿವಾಲಯದ ಕಟ್ಟಾಜ್ಞೆ ಎಂದು ಎಚ್ಚರಿಕೆ ನೀಡಿದರು. ಅಂದು ರಾತ್ರಿ ಮರುದಿನದ ಪತ್ರಿಕೆ ಅಚ್ಚಾಗುವವರೆಗೂ ಕಾದಿದ್ದು ಪತ್ರಿಕೆಯಲ್ಲಿ ಖಾಲಿಜಾಗದ ಮೌನ ಪ್ರತಿಭಟನೆ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ಮಧ್ಯ ರಾತ್ರಿ ಕಾಲ್ತೆಗೆದರು. ಹಾಗೆಂದು ಪ್ರಜಾವಾಣಿ ಸುಮ್ಮನಾಗಲಿಲ್ಲ.

`ಛೂ’ಬಾಣದಲ್ಲಿ ಟಿಎಸ್ಸಾರ್ `ಯಮ ಅರ್ಜೆಎನ್ಸಿ’ ಎಂದು ಚಿಟುಕು ಮುಳ್ಳಾಡಿಸುತ್ತಿದ್ದರು. ತುರ್ತುಪರಿಸ್ಥಿತಿ ಕಾಲದಲ್ಲಿ ಸಂಜಯಗಾಂಧಿಯ ಅತಿರೇಕಗಳನ್ನು ಕುರಿತು-

“ಇಫ್ ಇಂದಿರಾ ಸಫರ್ಸ್ ಪೊಲಟಿಕಲ್ ಡಿಸಾಸ್ಟರ್ ಇಟ್ ವಿಲ್ ಬಿ ಬೈ `ಸನ್’ ಸ್ಟ್ರೋಕ್”, ಸನ್ ಪದದ ಶ್ಲೇಷೆಯಿಂದ ಮಗನ ಕೃತ್ಯಗಳಿಂದಾಗಿಯೇ ತಾಯಿಗೆ ವಿಪತ್ತು ಬರಲಿದೆ ಎಂದು  ಒಂದು ಪೆನ್‍ಸ್ಟ್ರೋಕ್ ಕೊಟ್ಟಿದ್ದರು.

 ಅನ್ಯದೇಶಗಳಲ್ಲಿನ  ಸ್ವಾತಂತ್ರ್ಯ ಹರಣದ ಘಟನೆಗಳನ್ನೆತ್ತಿಕೊಂಡು ಸಂಪಾದಕೀಯಗಳನ್ನು ಬರೆಸಿ `ತುರ್ತುಪರಿಸ್ಥಿತಿಯ ರಾಣಿ’ಗೆ ಮುಸುಕಿನೊಳಗೆ ಗುದ್ದು‌ ಕೊಡಲಾರಂಭಿಸಿತು `ಪ್ರವಾ’. ಧ್ವನ್ಯಾರ್ಥ, ವ್ಯಂಗ್ಯಾರ್ಥ, ಅನ್ಯೋಕ್ತಿ, ಶ್ಲೇಷೆಗಳನ್ನು ತಿಳಿಯುವಷ್ಟು ಸಾವಧಾನ ಸೆನ್ಸಾರ್ ಅಧಿಕಾರಿಗಳಿಗಿರುತ್ತಿರಲಿಲ್ಲ. ಸಂಪಾದಕೀಯಗಳಿಗೆ ಅಸ್ತು ಎನ್ನುತ್ತಿದ್ದರು. ಅಥವಾ ಅಂತರಂಗದೊಳಗೆ ಅವರಿಗೂ ತುರ್ತು ಪರಿಸ್ಥಿತಿಗೆ ವಿರೋಧವಿತ್ತೋ ಏನೋ?

ತುರ್ತು ಪರಿಸ್ಥಿತಿಯಲ್ಲಿ ಇನ್ನೊಂದು ದಿನ. ನನಗೆ ಬೆಳಗಿನ ಪಾಳಿ. ಕಲಾಸಿಪಾಳ್ಯದ ಕೋಟೆಯಲ್ಲಿ ವಾಸವಿದ್ದ ನಾನು ಹತ್ತರ ಸುಮಾರಿಗೆ ಸಿಟಿ ಮಾರ್ಕೆಟ್‍ನಲ್ಲಿ ಬಸ್ಸುಹಿಡಿದು ಗಾಂಧಿ ಸ್ಟಾಚ್ಯೂ ಬಸ್ ಸ್ಟಾಪಿನಲ್ಲಿ ಇಳಿದು ಆಫೀಸಿನತ್ತ ಹೆಜ್ಜೆ ಹಾಕಿದ್ದೆ. ಜೀವವಿಮಾ ಕಚೇರಿ ಇರುವ ಓರಿಯಂಟಲ್ ಬಿಲ್ಡಿಂಗ್ ಬಳಿ ರಸ್ತೆ ದಾಟಬೇಕು ಎನ್ನುವಷ್ಟರಲ್ಲಿ ಒಂದು ನೋಟ ನನ್ನನ್ನು ಹಿಡಿದು ನಿಲ್ಲಿಸಿತು.

ಜೀವ ವಿಮಾ ಕಚೇರಿ ಎದುರಿನ ಫುಟ್ ಪಾತಿನ ಮೂಲೆಯಲ್ಲಿ 20-22ರ ಯುವಕನೊಬ್ಬ ಕುಳಿತಿದ್ದ. ಹರಿದು ಚಿಂದಿಯಾದ ಪ್ಯಾಂಟು, ಅಂಗಿ, ಎಣ್ಣೆ ನೀರು ಕಾಣದ ಜಟೆಗಟ್ಟಿದ ತಲೆ ಕೂದಲು, ಕೊಳಕು ಮೈ. ಅವನೆದುರು ಹರಿದ ಕಾಗದದ ಚೂರುಗಳ ರಾಶಿ ಇತ್ತು. ಯುವಕ ಹರಿದ ಕಾಗದದ ಚೂರುಗಳನ್ನು ಎತ್ತಿಕೊಂಡು ಉಂಡೆಮಾಡಿ, ತುತ್ತು ಕಟ್ಟಿ ಉಣ್ಣುವಂತೆ ಬಾಯಿಗೆ ಎಸೆದುಕೊಂಡು ಅಗಿದು ನುಂಗುತ್ತಿದ್ದ.

ನಾನು ಅವಕ್ಕಾಗಿ ಹೋದೆ. ಇದನ್ನು ಅರಗಿಸಿಕೊಳ್ಳಲಾಗದೆ ಚಿಂತಿಸುತ್ತಾ ಆಫೀಸಿನ ಕಡೆ ಹೊರಟೆ. ಬಾಗಿಲಲ್ಲೇ ಸಿ.ವಿ.ರಾಜಗೋಪಾಲ್ ಸಿಕ್ಕರು. ಅವರಿಗೆ ನಾನು ಕಂಡದ್ದನ್ನಿ ತಿಳಿಸಿದೆ. “ಹೌದಾ ನಡೀ ಹೊಗೋಣ” ಎಂದರು. ಕಾಲಳತೆ ದೂರದ ಆ ಸ್ಥಳವನ್ನು ನಾವು ತಲುಪಿದಾಗಲೂ ಯುವಕ ಅಲ್ಲೇ ಕುಳಿತು ರುಚಿಕರವಾದ ಊಟವನ್ನು ಸವಿಯುತ್ತಿರುವಂತೆ ಕಾಗದದ ಚೂರುಗಳನ್ನು ತಿನ್ನುತ್ತಲೇ ಇದ್ದ.ಮಾತನಾಡಿಸಿದ್ದಕ್ಕೆ ಉತ್ತರವೇ ಇಲ್ಲ.

ಟಿ.ಎಲ್.ರಾಮಸ್ವಾಮಿ ಫೋಟೊ ತೆಗೆಯಲು ಹೋದಾಗಲೂ ತನ್ನದೇ ಆದ ಏಕಾಂತದಲ್ಲಿ ಆ ಸವಿಯೂಟವನ್ನು ಮೆಲ್ಲುತ್ತಿದ್ದ. ಸಿ.ವಿ.ರಾಜಗೋಪಾಲ್ ಮನ ಮಿಡಿಯುವಂಥ `ಹಸಿವಿನ ಕಥೆ’ ಬರೆದರು. ಚಿತ್ರದೊಂದಿಗೆ ಪ್ರಕಟವಾಯಿತು. ಆ ಸಚಿತ್ರ ವರದಿಗೆ ಸೆನ್ಸಾರ್ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದರು. ಹಿಂದಿನ ದಿನ `ಅಸ್ತು’ ಮಾಡಿದ್ದ ಆ ವರದಿ ಮಾರನೆಯ ದಿನ `ದೇಶ ವಿರೋಧಿ’ ಎನ್ನಿಸಿತ್ತು.

“ದೇಶದಲ್ಲಿ ಜನಕ್ಕೆ ತಿನ್ನಲು ಅನ್ನ ಇಲ್ಲ ಎಂಬ ಭಾವನೆ ಉಂಟುಮಾಡಿ ನಮ್ಮ ಘನತೆಗೆ ಧಕ್ಕೆಯಾಗುತ್ತದೆ. ದೇಶ ಸುಭಿಕ್ಷವಾಗಿರುವಾಗ ಇಂಥ ವರದಿ ಪ್ರಕಟಣೆ ಪ್ರಭುತ್ವ ವಿರೋಧಿಯಲ್ಲದೆ ಮತ್ತೇನು?” ಎಂಬುದು ಅವರ ತರ್ಕವಾಗಿತ್ತು. ಆಗ ಟಿಎಸ್ಸಾರ್, “ಬುದ್ಧಿವಂತರಾದ ಅಧಿಕಾರಿಗಳೂ ತುರ್ತುಪರಿಸ್ಥಿತಿಯಿಂದಾಗಿ ಏನಾಗಿ ಬಿಡುತ್ತಾರೆ ಅನ್ನುವುದಕ್ಕೆ  ಇದಕ್ಕಿಂತ ಮಿಗಿಲಾದ ಸಾಕ್ಷಿ ಬೇಕೆ?” ಎಂದು ಛೂ ಬಾಣದ ಕೂರಂಬುಗಳಿಂದ ಅವರ ಬಾಯಿ ಮುಚ್ಚಿಸಿದ್ದರು. ಸೆನ್ಸಾರ್ ಅಧಿಕಾರಿಗಳಾಗಿದ್ದ ರೇಣು ಆನಂದ ರಾವ್, ಕುಲಕರ್ಣಿ ಅವರುಗಳೆಲ್ಲ ಪತ್ರಕರ್ತರ ಮಿತ್ರರೂ  ಆಗಿದ್ದರು. ರೇಣು ಆನಂದ ರಾವ್ ಸಂವೇದನಾಶೀಲ ವರ್ಣಚಿತ್ರಕಲಾವಿದರೂ ಆಗಿದ್ದರು.

। ಮುಂದಿನ ವಾರಕ್ಕೆ ।

November 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ವಾಸುದೇವ ಶರ್ಮಾ

    ಚರಿತ್ರೆಯ ಪುಟಗಳ ಪಾಠ ತೆರೆದಿಡುತ್ತಿದ್ದೀರಿ. ಹಿಂದೆ ನಾನು ಪ್ರತಿಕ್ರಿಯಿಸಿದಂತೆ, ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಅದಕ್ಕಿಂತಲೂ ಹೆಚ್ಚಾಗಿ ಪತ್ರಿಕೋದ್ಯಮ ಅಧ್ಯಾಪಕರು ನಿಮ್ಮ ಲೇಖನವನ್ನು ಓದಲೇಬೇಕು.

    ಪ್ರತಿಕ್ರಿಯೆ
  2. Manjula C S

    ನಾನು ಸಕಾ೯ರಿ ಕಾಲೇಜಿನ ಪತ್ರಿಕೋದ್ಯಮ ವಿಷಯದ ಪ್ರಾಧ್ಯಾಪಕಿ. ತುರ್ತು ಪರಿಸ್ಥಿತಿಯಲ್ಲಿ ಪತ್ರಿಕೆಗಳ ಸ್ಥಿತಿ-ಗತಿಯನ್ನು ವಿಧ್ಯಾರ್ಥಿಗಳಿಗೆ ವಿವರಿಸುವಾಗ ನಿಮ್ಮ ಲೇಖನವನ್ನು ಓದಿಸಿದೆ. ಬಹಳ ವಿವರವಾಗಿ ಅಂದಿನ ಕಾಲಘಟ್ಟವನ್ನು ಸವಿವರವಾಗಿ ತಿಳಿಸಿಕೊಟ್ಟಿದ್ದೀರಿ. ಸರ್ ರವರ ಪಠ್ಯ ಪುಸ್ತಕಕ ಜೊತೆ ನಮಗೆ ಅದ್ಭುತ ವಿವರಣೆ ದೊರಕಿಸಿ ಕೊಟ್ಟ ಅವಧಿ ಬಳಗಕ್ಕೆ ವಂದನೆಗಳು.

    ಪ್ರತಿಕ್ರಿಯೆ
  3. ಲಲಿತಾ ಸಿದ್ಧಬಸವಯ್ಯ

    ವಾಸ್ತವವಾಗಿ ಕಾಗದದುಂಡೆಯನ್ನೆ ಅನ್ನದುಂಡೆಯಾಗಿ ನುಂಗುವುದೂ ಪತ್ರಿಕಾ ಸ್ವಾತಂತ್ರ್ಯ ನುಂಗಿದ ರೂಪಕವೆ‌ ಹೌದು. ಮುಂದೆ ಆ ಯುವಕರು ಯಾರು, ಹಸಿವು ಅನ್ನದ ಅಲಭ್ಯತೆಯ ಹೊರತಾಗಿ ಆ ವಿಲಕ್ಷಣ ಭಕ್ಷಣೆಗೆ ಬೇರೆ ಕಾರಣವಿತ್ತೇ ಸರ್ ?

    ಪ್ರತಿಕ್ರಿಯೆ
    • avadhi

      ಮೇಡಂ,
      ನಮಸ್ಕಾರ,
      ನಿಮ್ಮ ಮಾತು ನಿಜ. ನಿಮಗೆ ಕಾಗದವನ್ನು ಉಂಡೆಕಟ್ಟಿ ಅನ್ನದ ತುತ್ತಿನಂತೆ ತಿಂದ ಯುವಕ ಪತ್ರಿಕಾ ಸ್ವಾತಂತ್ರ್ಯ ನುಂಗಿದ ರೂಪಕವಾಗಿ ಕಂಡಂತೆಯೇ, ನನಗೆ `ಹಸಿದ ಭಾರತ’ದ ರೂಪಕವಾಗಿಯೂ ಕಂಡಿತ್ತು. ಅಂದು,ನಾನು ನಮ್ಮ ಫೋಟೋಗ್ರಾಫರ್ ಬರುವವರೆಗೆ, ಸುಮಾರು ಮುಕ್ಕಾಲು ಗಂಟೆ ಕಾಲ ಆ ಸ್ಥಳದಲ್ಲೇ ಇದ್ದು ಹತ್ತಿರದಿಂದ ಯುವಕನನ್ನು ಗಮನಿಸಿದ್ದೆ. ಯುವಕನ ಮುಖದಲ್ಲಿ ಒಂದೆರಡು ದಿನಗಳ ಉಪವಾಸದ ಬಳಲಿಕೆ ಕಾಣಿಸುತ್ತಿತ್ತು. ಯಾವುದೇ ರೀತಿಯ ವಿಲಕ್ಷಣತೆ ನನಗೆ ಗೋಚರಿಸಲಿಲ್ಲ.ನಮ್ಮ ವರದಿ ಪ್ರಕಟವಾದ ನಂತರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯೂ ಸೇರಿದಂತೆ ಯಾರೂ ಸ್ಪಂದಿಸಲಿಲ್ಲ. ಅಂದು ಸಂಜೆ ಕುತೂಹಲದಿಂದ ಅದೇ ಸ್ಥಳಕ್ಕೆ ಹೋದಾಗ ಆ ಯುವಕ ಅಲ್ಲಿರಲಿಲ್ಲ.
      ಗೌರವಪೂರ್ವಕ
      ಜಿ.ಎನ್.ರಂಗನಾಥ ರಾವ್

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: