ಎಂ ಜಿ ರೋಡಿನಲ್ಲಿ ಹಾರ್ಲಿಕ್ಸು ಕೊಡುವ ಹೋಟೆಲ್‌ಗಳು ಇವೆಯಾ?

‘ಬಾಲ ಒಂದಿಲ್ಲ ಅಷ್ಟೇ…’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.

ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕಿಯಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ.

‘ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ.

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ…’ ಎಂದು ಮಾತು ಸೇರಿಸುತ್ತಾರೆ. ತಮ್ಮನ್ನು ಕಾಡಿದ ಪುಸ್ತಕಗಳನ್ನು, ಪಾತ್ರಗಳನ್ನು ಪ್ರತೀ ಗುರುವಾರ ನಮ್ಮ ಎದುರು ನಿಲ್ಲಿಸಲಿದ್ದಾರೆ.

ರಾಜ್ಯೋತ್ಸವ ಸಂಭ್ರಮದಲ್ಲಿದ್ದೇವೆ!

ಕನ್ನಡ ನಾಡು, ನೆಲ ಅಂದ್ರೆ ಅದು ಗಂಡು ಮೆಟ್ಟಿನ ಮಣ್ಣು, ಭೂಮಿ. ಭಾಷೆ ಮಾತ್ರ ಹೆಣ್ಣು, ಅಥವಾ ಕನ್ನಡವೇ ನಮ್ಮಮ್ಮ!!

ಕನ್ನಡ ನುಡಿ ನಮ್ಮ ಹೆಣ್ಣು
ನಮ್ಮ ತೋಟದಿನಿಯ ಹಣ್ಣು
ಬಳಿಕ ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು
ಹೊಸದು ರಸದ ಬಳ್ಳಿ ಹಣ್ಣು
ಒಳಗೆ ಸುಳಿದಳು

ಮುಂದೊಂದು ದಿನ ಬರಬಹುದು, ಭಾಷೆ ನನ್ನ ಅಪ್ಪ ಅಂತ! ಅಥವಾ ಈ ಥರದ ಹೊಸ ಈಡಿಯಮ್ ಗಳೂ ಅರ್ಥಕೋಶಗಳ ಭಾಗವಾಗಬಹುದಲ್ವ ಎನ್ನುವ ಯೋಚನೆ ಬಂದಾಗ ಮನದಲ್ಲಿ ಸುಳಿದು ಸುತ್ತಿದ ಸಂಗತಿಗಳಿವು.

ಅರ್ಥಕೋಶಗಳನ್ನೇ ಕಾಲದಿಂದ ಕಾಲಕ್ಕೆ ತಿದ್ದಬೇಕಾಗುತ್ತದೆ…

ಪದಗಳಿಗೆ ಎರಡು ರೀತಿಯ ಅರ್ಥ ಇರುವುದನ್ನು ನೋಡಬಹುದು. ಒಂದು ಅರ್ಥಕೋಶದಲ್ಲಿ ಇರುವ ಅರ್ಥ. ಇನ್ನೊಂದು ನಮ್ಮ ಕ್ರಿಯೆಯಿಂದ ಜನಿಸುವ ಅರ್ಥ.

ಈಗ ನಾವು ಯಾರನ್ನಾದರೂ ಬಾ ಎಂದು ಕರೆದಾಗಲೆಲ್ಲ ಅವರು ಹೊರಟು ಹೋಗುತ್ತಾ ಇದ್ದರೆ ಮೊದಮೊದಲು ನಮಗೆ ಇವರು ಹೀಗೇಕೆ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ಆಗುತ್ತೆ.

ಆದರೆ ಕೊನೆಗೆ ಬಾ ಎನ್ನುವ ಪದಕ್ಕೆ ಹೋಗು ಎನ್ನುವ ಅರ್ಥವೇ ಆಗಿ ಹೋಗು ಎನ್ನುವ ಪದಕ್ಕೆ ಬಾ ಎನ್ನುವ ಅರ್ಥ ಬರುತ್ತೆ. ಭಾಷೆಯ ಇತಿಹಾಸ ನೋಡಿದರೆ ಈ ರೀತಿ ಪದಗಳ ಅರ್ಥ ಲಾಗ ಹೊಡೆದು ತಲೆಕೆಳಗಾಗಿರುವುದನ್ನು ನೋಡಬಹುದು.

“ಹಾದರ ಮಾಡುವ ಮೊದಲು ಹಗರಣ ಮಾಡಬೇಕು” ಎನ್ನುವ ಪುರಾತನ ಗಾದೆ ಇದೆ. ಈ ಹಾದರ ಮಾಡುವವರು ಯಾಕೆ ಮೊದಲೇ ಹಗರಣ ಮಾಡಬೇಕು. ಸಾಧಾರಣವಾಗಿ ಹಾದರದ ದೆಸೆಯಿಂದ ಆಮೇಲಲ್ಲವೆ ಹಗರಣಗಳು ಆಗುವುದು ಎಂದು ನಾನು ಚಿಂತಿಸುತ್ತಿದ್ದೆ.

ಮೊನ್ನೆ ಯಾವುದೋ ಕಾರಣಕ್ಕೆ ಈ ಬಗ್ಗೆ ಶ್ರೀ ಕಲಬುರ್ಗಿಯವರ ಲೇಖನ ಓದದಿದ್ದರೆ ನನಗೆ ಈವತ್ತಿಗೂ ಈ ಗಾದೆಯ ತಲೆಬುಡ ಗೊತ್ತಾಗುತ್ತಿರಲಿಲ್ಲ. ಈ ಹಾದರ ಎನ್ನುವ ಪದ ಸಂಪೂರ್ಣ ಲಾಗ ಹೊಡೆದು ಈವತ್ತು ಚಾಲ್ತಿಯಲ್ಲಿರುವುದರಿಂದಲೇ ನನಗೆ ಈ ಗಾದೆಯ ಅರ್ಥ ಹೊಳೆಯದಿದ್ದುದು.

ಹಾದರ ಎನ್ನುವ ಪದ, ಪಾತ್ರ ಎನ್ನುವ ಪದವೇ ಪಾದರ ಆಗಿ ಹಾದರ ಆಗಿರುವುದು. ಹಗರಣ ಎಂದರೆ ಪ್ರಕರಣ ಎಂದರ್ಥ. ಹಿಂದೆ ವೇಷಗಾರರು ಬೀದಿನಾಟಕದಂಥ ಚಿಕ್ಕಚಿಕ್ಕ ಪ್ರಕರಣಗಳನ್ನು ಅಭಿನಯಿಸುತ್ತಿದ್ದರು.

ನಾಟಕದಲ್ಲಿ ಪಾತ್ರ ಮಾಡುವವರು ಮೊದಲು ಈ ರೀತಿ ಚಿಕ್ಕ ಪುಟ್ಟ ಹಗರಣಗಳಲ್ಲಿ ಅಭಿನಯಿಸಿ ತರಬೇತಿ ಪಡೆದ ನಂತರವೇ ನಾಟಕದಲ್ಲಿ ಪಾತ್ರವಹಿಸುವ ಹಾದರಕ್ಕೆ ಇಳಿಯಬೇಕೆಂದು ಈ ಗಾದೆ ಹೇಳುತ್ತದೆ.

ಎಂದರೆ ಭಾಷೆ ಎಂದೂ ಅರ್ಥಕೋಶದ ಅರ್ಥಕ್ಕೆ ಹೊಂದಿಕೊಂಡು ಸ್ಥಗಿತವಾಗಿ ನಿಲ್ಲುವುದಿಲ್ಲ. ನಮ್ಮ ಭಾಷೆ ಎಲ್ಲದರ ಅರ್ಥ ನಾವು ಅದಕ್ಕೆ ಸಂವಾದಿಯಾಗಿ ತೋರುವ ಕ್ರಿಯೆಯ ಮೇಲೇ ನಿಲ್ಲುತ್ತದೆ. ಅರ್ಥಕೋಶಗಳನ್ನೇ ಕಾಲದಿಂದ ಕಾಲಕ್ಕೆ ತಿದ್ದಬೇಕಾಗುತ್ತದೆ. ತೇಜಸ್ವಿ

ಭಾಷೆ ಕಥೆ ಆಯ್ತು, ಈಗ ಈಡಿಯಮ್ ಗಳ ಕಥೆಯೊಂದಿಷ್ಟು ನೋಡೋಣ...

…ಯಾವ ರೀತಿಯ ಭಾವನಾತ್ಮಕ ಸಂಬಂಧವೊ ಕಾಣೆ, ಗೋಕುಲ ನಿರ್ಗಮನದ ನಾಟಕ ಪ್ರಯೋಗ ಇಂದಿಗೂ ಎಷ್ಟೋ ಜನರ ಮನಸ್ಸುಗಳಿಂದ ನಿರ್ಗಮಿಸಿಲ್ಲ.

ಸಂದರ್ಭಗಳು ಬದಲಾದರೂ. ತಿರುಗಾಟದ ಇತಿಹಾಸದಲ್ಲೇ ಅಪರೂಪವೆಂಬಂತೆ ಈ ನಾಟಕವನ್ನು ಪುನಃ ಆಡುವ ಎರಡು-ಮೂರು ಪ್ರಯತ್ನಗಳು ಇತ್ತೀಚೆಗೆ ಕಾರಂತರು ನಮ್ಮೆಲ್ಲರಿಂದ ನಿರ್ಗಮಿಸುವ ಮೊದಲು ಮತ್ತು ನಂತರವೂ ನಡೆದವು.

ಈ ಗೋಕುಲ ನಿರ್ಗಮನದ ಮರುಪ್ರಯೋಗ ಬಹುಪಾಲು ನೀನಾಸಮ್ ತಿರುಗಾಟದ ನಾಟಕದಂತೆಯೇ ಕಾಣುತ್ತಿದ್ದರೂ ಸಾಕಷ್ಟು ಬದಲಾವಣೆಗಳಾಗಿದ್ದವು. ಅದನ್ನು ಮಾಡಿದ್ದ ತಂಡ ಮತ್ತು ನಟರುಗಳೂ ಬೇರೆಯೇ ಆಗಿದ್ದರಿಂದ ಹೀಗಾಯಿತೇನೋ.

ಈ ಗೋಕುಲ ನಿರ್ಗಮನವನ್ನು ಮೊದಲ ಸಲ ನಕಲು ಮಾಡುವಾಗ, ಕಾರಂತರು ದೆಹಲಿಯಲ್ಲಿದ್ದರು. ಕೇವಲ ವಿಡಿಯೋ ಚಿತ್ರವನ್ನು ನೋಡಿ ಅದನ್ನು ತಯಾರು ಮಾಡಲಾಗಿತ್ತು. ಎರಡನೆಯ ಬಾರಿ ವಿಡಿಯೋ ಜೊತೆಗೆ, ಕಾರಂತರೂ ಇದ್ದು ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿದರು.

ನನಗನ್ನಿಸುತ್ತದೆ, ಈ ಗೋಕುಲ ನಿರ್ಗಮನವನ್ನು ಮತ್ತೆಮತ್ತೆ ಅದೇ ಶೈಲಿ-ರೀತಿಯಲ್ಲಿ ಆಡುತ್ತಿದ್ದರೆ, ಅದೊಂದು ‘ಗೋಕುಲ’ವೆಂಬ ಜಾನಪದ ಶೈಲಿಯಾಗಿ ಬೆಳೆದು, ಗೋಕುಲದ ಗೊಲ್ಲರ ವಂಶವೇ ನಿರ್ಮಾಣವಾದರೆ ಆಶ್ಚರ್ಯವಿಲ್ಲ. – ಚನ್ನಕೇಶವ

ಎಷ್ಟು ಸೊಗಸಾದ ಕಲ್ಪನೆ. ಹೀಗೊಂದು ವಂಶ ನಿರ್ಮಾಣವಾಗಿ, ಹೊಸ ಈಡಿಯಮ್ ಸಿಗಲಿ.

ಹೇಳೋದು ಮರ್ತಿದ್ದೆ, ಈ ಈಡಿಯಮ್ ಗಳ ಯೋಚನೆ ಎಲ್ಲಿಂದ ಶುರುವಾಗಿದ್ದು ಅಂದ್ರೆ…

ಕಥೆ ಹೇಳುವ, ಕೇಳುವ ವಿಷಯ ಬಂದರೆ, “ಗೊತ್ತಲ್ಲ, ನಾವು ‘ಪ್ರಥಮ್ ಬುಕ್ಸ್’ ವಂಶದವರು” ಅನ್ನೋದು ನಾವೆಲ್ಲ. ನನ್ನನ್ನೂ ಸೇರಿದಂತೆ ಈ ‘ಪ್ರಥಮ್ ಬುಕ್ಸ್ ವಂಶದ’ ಬಹುತೇಕರಿಗೆ ಓದುವುದು ಬರೆಯುವುದು ಬೇಸರವಾದರೆ, ನಮ್ಮ ಕಥೆಗಳಲ್ಲಿ ಬರುವ ಕಾಲ್ಪನಿಕ ಪಾತ್ರಗಳ ಹುಟ್ಟುಹಬ್ಬಕ್ಕಾಗಿ ವಾಸ್ತವದಲ್ಲಿ ಕೇಕ್ ಮಾಡುತ್ತಿರುತ್ತೇವೆ. ಮೊನ್ನೆ ಹೀಗೆ ಕೇಕ್ ಮಾಡುತ್ತಿದ್ದಾಗ ನೆನಪಾಗಿದ್ದು.

ಕಥೆ ಮಾಡ್ತಾ ಮಾಡ್ತಾ.. ಥೋ… ಕೇಕ್ ಮಾಡ್ತಾ ಮಾಡ್ತಾ ‘ಕಥೆ ಕಥೆ ಕಾರಣ… ಸಾಲು ಕಥೆಗಳ ಹೂರಣ..! ಕೇಳ್ತಾ ಇದ್ದೆ. ಆಗ ಸಿಕ್ಕಿದ್ದು ಇನ್ನೊಂದು ಮಜವಾದ ಈಡಿಯಮ್:

ಮಗಳು ಚಿಕ್ಕವಳಾಗಿದ್ದ ಕಾಲದಲ್ಲಿ ವಾಸುದೇವ ಶರ್ಮಾ ಅವರು ಮನೆಗೆ ಬಂದಾಗ ಬಹಳ ತಡವಾಗಿತ್ತು. ಯಾವುದೋ ಕೆಲಸ, ನಗರದ ರಸ್ತೆಯಲ್ಲಿ ಸ್ಕೂಟರ್ ಚಲಾಯಿಸಿ ಬಂದ ಆಯಾಸ, ಬೇಗ ಉಂಡು ಮಲಗುವ ಅವಸರದಲ್ಲಿದ್ದರು. ಆದರೆ, ಮಗಳ ‘ಕಥೆ’ ಬಿಡಬೇಕಲ್ಲ? ಕಥೆ ಹೊಸೆಯುತ್ತಿದ್ದರು. ‘…ಆಮೇಲೆ ಆ ಮರದಲ್ಲಿ… ಬಿಟ್ಟಿದ್ದ ಹಣ್ಣನೆಲ್ಲಾ ಮಕ್ಕಳು ತಿಂತಿದ್ರು… ಆಕಾಶ…ದಿಂದ… ಪಾಂಡವರು…. ಕಾಫಿ ಕುಡಿಯಕ್ಕೆ ಎಂಜಿ ರೋಡಿಗೆ…ಬಂದ್ರು….’ ಎಂದರು.

ಪುಟ್ಟ ಶ್ರದ್ಧಳ ಪುಟಾಣಿ ಕೈಗಳು ಕೆನ್ನೆ ಮೇಲೆ ‘ಅಪ್ಪ… ಅಪ್ಪ…’ ಎನ್ನುತ್ತ ತಟ್ಟುತ್ತಿದ್ದವು. ‘ಪಾಂಡವರು ಕಾಫಿ ಕುಡಿಯಕ್ಕೆ ಬಂದ್ರಾ? ಮಲ್ಕೋ…’ ಎಂದಿತು ಮಗು. ಅಂದಿನಿಂದ ‘ಪಾಂಡವರು ಕಾಫಿ ಕುಡಿಯಕ್ಕೆ ಬಂದ್ರು’ ಎಂದರೆ, ಕಥೆ ಹೇಳುವವರಿಗೆ ಸುಸ್ತಾಗಿದೆ ಮಲಗಲು ಬಿಡಬೇಕು ಎಂದು ಅರ್ಥ.

ನಾನು, ನಮ್ಮ ‘ಪ್ರಥಮ್ ಬುಕ್ಸ್’ನ ಕಥಾಪಾತ್ರಗಳನ್ನೆಲ್ಲ ಎಂ ಜಿ ರೋಡಿಗೆ ಹಾರ್ಲಿಕ್ಸ್ (ನನಗೆ ಕಾಫಿ ಟೀ ಬೇಡ ಹಾಗಾಗಿ…) ಕುಡಿಯಲು ಕರೆದುಕೊಂಡು ಹೋಗಿ, ಹೊಸ ಈಡಿಯಮ್ ಒಂದನ್ನ ಹುಟ್ಟು ಹಾಕೋಣ ಅಂತಿದ್ದೇನೆ. ಹೌದು, ಈಗ ಎಂ ಜಿ ರೋಡಿನಲ್ಲಿ ಹಾರ್ಲಿಕ್ಸು ಕೊಡುವ ಹೋಟೆಲ್‌ಗಳು ಇವೆಯಾ?

November 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಒಳ್ಳೆಯ ಬರಹ ಮೇಡಂ ‌…

    ಪ್ರತಿಕ್ರಿಯೆ
  2. ವಾಸುದೇವ ಶರ್ಮಾ

    ಆಹಾ! ನನ್ನನ್ನೂ ನನ್ನ ಮಗಳನ್ನೂ ನಿಮ್ಮ ಲೇಖನದ ಪಾತ್ರಗಳನ್ನಾಗಿಸಿಬಿಟ್ಟಿರಿ. ಧನ್ಯನಾದೆ…! ಮಾತನಾಡಬೇಕು, ಹಂಚಿಕೊಳ್ಳಬೇಕು ಎನ್ನುವ ಸಾಮಾಜಿಕ ತುಡಿತಕ್ಕೆ ಮತ್ತೆ ಮತ್ತೆ ಬೆಲೆ ಬಂದಿತು. ಹೌದು, ಯಾವಾಗ ಪಾತ್ರಗಳನ್ನು ಎಂ.ಜಿ.ರೋಡಿಗೆ ಒಯ್ಯುವುದು? ರೆಡಿಯಾಗ್ಬೇಕಲ್ಲ!

    ಪ್ರತಿಕ್ರಿಯೆ
  3. ಲಲಿತಾ ಸಿದ್ಧಬಸವಯ್ಯ

    ಹಾದರ – ಹಗರಣ , ನೋಡಿ ಈ ಪದಗಳ‌ ವ್ಯುತ್ಪತ್ತಿ ಇದುವರೆಗೆ ಗೊತ್ತೆ ಇರಲಿಲ್ಲ.

    ಎಸ್, ಹಗರಣ ಮಾಡದೆ ಹಾದರ ಮಾಡಂಗಿಲ್ಲ. ಪಾಪ ಪದಗಳಿಗೂ ಶನಿದೆಸೆ ಅಂತ ಒಂದಿರ್ತದೆ ಅಂತ ಕಾಣುತ್ತೆ. ಏನೇನೆಲ್ಲ ಪಡಿಪಾಟಲಿಗೆ ಸಿಕ್ಕಿ ಹಾಕಿಕೊಳ್ತವೆ., ಛೆಛೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: