ಶಶಿಧರ ಹಾಲಾಡಿಯವರ ‘ನನ್ನ ಸೋಲೋ ಟ್ರಿಪ್‘
‘ಸಪ್ನ ಬುಕ್ ಹೌಸ್’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಒಂದು ನೋಟ ಇಲ್ಲಿದೆ.
-ನಾರಾಯಣ ಯಾಜಿ
ಶಶಿಧರ ಹಾಲಾಡಿಯವರ ಕೃತಿಗಳನ್ನು ಓದುವಾಗ ಮುಖ್ಯವಾಗಿ ಅನುಭವಕ್ಕೆ ಬರುವುದು ಅವರ ಪರಿಸರ ಪ್ರೇಮ. ವಿಶ್ವವಾಣಿ ಪತ್ರಿಕೆಯ ಅವರ ಅಂಕಣದಲ್ಲಿ ಪ್ರಕೃತಿಯೊಡನೆ ಅವರಿಗಿರುವ ನವಿರಾದ ಭಾವನೆಗಳು ವ್ಯಕ್ತವಾಗುತ್ತಿರುತ್ತವೆ. ಬಾಲ್ಯದ ಹಾಲಾಡಿಯ ಪರಿಸರ ಅವರನ್ನು ದಟ್ಟವಾಗಿ ಕಾಡುತ್ತಿರುತ್ತದೆ. ಇದು ಅವರ ಕಾದಂಬರಿಗಳಾದ ’ಅಬ್ಬೆ’ ಮತ್ತು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಬರೆದ ’ನದಿ ದಾಟಿದವರು’ ಇವುಗಳಲ್ಲಿ ಕಾಣಬಹುದು. ನೆಲ, ಬಾನು, ಗುಡ್ಡ, ಚಾರಣ ಇವು ಅವರಿಗೆ ತುಂಬಾ ಪ್ರಿಯವಾದ ವಸ್ತು. ವರ್ಷಗಳ ಹಿಂದೆ ಅವರು ಅಮೇರಿಕಾಕ್ಕೆ ಹೋದಾಗಲೂ ಅವರು ಅಲ್ಲಿನ ಸಿರಿವಂತಿಕೆಯ ವೈಭವಕ್ಕಿಂತ ಸುತ್ತಲಿನ ಪರಿಸರದ ವರ್ಣನೆಯನ್ನೇ ಬಣ್ಣಿಸಿದ್ದರು. ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಬಿಡುವಿನಲ್ಲಿ ಹಾಲಾಡಿ ಸುತ್ತಮುತ್ತಲಿನ ಬೆಟ್ಟಗಳ ಹಾಡಿಯಲ್ಲಿ (ಕಾಡು) ಸಮಯವನ್ನು ಕಳೆಯುತ್ತಿದ್ದರು. ಸ್ವಭಾವತ ಅಂತರ್ಮುಖಿಯಾದ ಹಾಲಾಡಿಯವರು ತಮ್ಮೊಳಗಿನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವುದಕ್ಕೆ ಆಯ್ದುಕೊಂಡ ಮಾಧ್ಯಮವೇ ಚಾರಣ, ಅಥವಾ ಪ್ರಕೃತಿಯೊಡನೆ ಅಲೆದಾಟ. ಬಾಲ್ಯದಲ್ಲಿ ಇವರ ಅಪ್ಪ, ಉದ್ಯೋಗದ ನಿಮಿತ್ತ ದೂರದ ಊರಿನಲ್ಲಿ ಇರಬೇಕಾದ ಅನಿವಾರ್ಯತೆಯಿಂದ ಇವರ ಮೇಲೆ ಗಾಢಪರಿಣಾಮ ಬೀರಿದವರು ಇವರ ’ಅಮ್ಮಮ್ಮ’. ಎಲ್ಲಾ ರಿಮೊಟ್ ಬಟ್ಟಣಗಳು ಅವರಲ್ಲಿಯೇ ಇರುತ್ತಿದ್ದವು. ಇನ್ನೊಂದು ವಿಷಯ ಎಂದರೆ ಅಮ್ಮನ್ನಲ್ಲಿ ಸುಳ್ಳು ಹೇಳುವಾಗ ಯಾವ ಅಪರಾಧಿ ಮನೋಭಾವವೂ ಇರುವುದಿಲ್ಲ. ಹಾಗಾಗಿ ಇವರ ’ಸೋಲೋ ಟ್ರಿಪ್’ ಜೊತೆಗೆ ಅಮ್ಮಮ್ಮನ ಹೆದರಿಕೆ ಮತ್ತು ಅವರೊಟ್ಟಿಗೆ ಹೋದ ಸಂಗತಿಗಳು ಸದಾ ಇದೆ.
’ಸೋಲೋ ಟ್ರಿಪ್’ ಕೃತಿಯಲ್ಲಿ ಒಟ್ಟೂ ೧೯ ಅನುಭವ ಚಾರಣದವಿದೆ. ಚಾರಣವೆಂದರೆ ಕೇವಲ ಪ್ರಯಾಣವಲ್ಲ. ಪ್ರಯಾಣ ಎಂದರೆ ಸಾಮಾನ್ಯವಾಗಿ “ಹೋಗಿ ಬರುವುದು” ಎಂದು ನಾವು ಅರ್ಥೈಸಿಕೊಳ್ಳುತ್ತೇವೆ. ಆದರೆ ’ಸೊಲೋ ಟ್ರಿಪ್’ ಎಲ್ಲದರಿಂದ ಬಿಡುಗಡೆ ಬಯಸಿ ಮೌನವಾಗಿ ಸವಿಯುವ ಪಯಣ. ಅನೇಕ ಸಂದರ್ಭದಲ್ಲಿ ಪೂರ್ವ ನಿರ್ಧರಿತ ವೇಳಾಪಟ್ಟಿಯೇ ಇರುವುದಿಲ್ಲ. ಈ ಕೃತಿಯಲ್ಲಿ ಅಂತಹ ಕೆಲ ಚಾರಣವಿದೆ. ಮುಖ್ಯವಾಗಿ ಇವರು ’ಬಾಳೆಬರೆ ಘಟ್ಟದ ಏಕಾಂಗಿ ಚಾರಣ ಒಂದು ಅಪರೂಪದ ಅನುಭವ. ಆ ದಾರಿಯಲ್ಲಿ ಸಿಗುವ ಚಂಡಿಕಾಂಬಾ ದೇವಾಲಯದಿಂದ ಮೇಲೆ ಏರಿ ಸೂರ್ಯಾಸ್ತವನ್ನು ಸವಿಯುವ ಜಾಗದಲ್ಲಿ ನಿಂತು ಪಶ್ಚಿಮ ಘಟ್ಟದ ಇಳಿಜಾರಿನಲ್ಲಿ ದೂರದಲ್ಲಿ ಕಾಣುವ ಅರಬ್ಬಿ ಸಮುದ್ರವನ್ನು ಸವಿಯುವುದಿದೆಯಲ್ಲ, ಅದು ವಿಶಿಷ್ಟ ಅನುಭವವನ್ನು ಕೊಡುತ್ತದೆ. ಶೃಂಗೇರಿಗೆ ಹೋಗುವ ದಾರಿಯಲ್ಲಿ ಆಗುಂಬೆಯ ಸೂರ್ಯಾಸ್ತದ ಜಾಗ ಡಾ.ರಾಜ್ ಹಾಡಿರುವುದರಿಂದ ಪ್ರಸಿದ್ಧವಾಗಿದೆ. ಆದರೆ ಬಾಳೆಬರೆಯ ಜಾಗವನ್ನು ಬರ್ರನೆಂದು ಹಾದುಹೋಗುವಾಗಲೆಲ್ಲ ನಿಂತು ಕಣ್ದಣಿಯುವಷ್ಟು ನೋಡಿದ ನಮಗಿಂತಲೂ ನಡೆದುಕೊಂಡು ಬಂದು ಸುಮಾರು ನೂರು ಮೆಟ್ಟಿಲು ಹತ್ತಿ ಸಹ್ಯಾದ್ರಿಯ ಕಣಿವೆಯನ್ನು ನೋಡಿದಾಗ ಆಗುವ ಸಂತೋಷವನ್ನು ಬಣ್ಣಿಸಲಾಗದು. ಮನೆಯಲ್ಲಿ ಕುಂದಾಪುರಕ್ಕೆ ಎಂದು ಸುಳ್ಳು ಹೇಳಿ ಅದರ ವಿರುದ್ಧವಾದ ದಿಕ್ಕಿಗೆ ಬಂದು ಸವಿದ ಸಂತೋಷಕ್ಕೆ ಇವರ ಸಂಬಂಧಿ ಅಕಃಸ್ಮಾತಾಗಿ ಬಸ್ಸಿನಲ್ಲಿ ಗಮನಿಸಿ ಮನೆಗೆ ಪತ್ರ ಮುಖೇನ ತಿಳಿಸಿದಾಗ ಈ ಅನುಭವದ ಜೊತೆಗೆ ಆ ಸಂದಿಗ್ಧ ಪರಿಸ್ಥಿಯಲ್ಲಿ ಲೇಖಕರು ಅನುಭವಿಸಿದ ತಳಮಳ ಇನ್ನಷ್ಟು ರೋಚಕವಾಗಿದೆ. ಇಂತಹ ಅನೇಕ ಸಂದರ್ಭದಲ್ಲಿ ಇಂದಿನಂತೆ ಮನೆಯವರು ನಿರುತ್ತೇಜನ ಮಾಡುತ್ತಿರಲಿಲ್ಲ. ಹೋಗಲು ಅಪಸ್ವರ ಎತ್ತಿದರೂ ಬಂದಾಗ ಆ ಕುರಿತು ಆಕ್ಷೇಪ ಕಡಿಮೆಯೇ. ಹೆಚ್ಚೆಂದರೆ ’ಇನ್ನು ಹೀಂಗೆಲ್ಲಾ ಹೋಪುಕಾಗ ಮಾಣಿ’ ಎನ್ನುವ ಎಚ್ಚರಿಕೆಯೊಂದಿಗೆ ಎಲ್ಲವೂ ಮುಗಿಯುತ್ತಿತ್ತು. ಇಂತಹ ಸುಖಾನುಭವಗಳು ಜೀವನದುದ್ದಕ್ಕೂ ನೆನಪಿರುತ್ತದೆ. ಯಾವ ಸಿದ್ಧತೆಯಿಲ್ಲದೇ ಒಬ್ಬನೇ ಹೊರಡುವ ಏಕಾಂಗಿ ಪ್ರವಾಸದಲ್ಲಿ ಒಳಗಣ್ಣು ಜಾಗ್ರತವಾಗಿರುತ್ತದೆ. ಶಶಿಧರ ಹಾಲಾಡಿಯವರ ಅಂತರಂಗ ಈ ತುಡಿತವನ್ನು ಬಯಸುತ್ತಿರುವುದರಿಂದ ಅವರು ಹೆಚ್ಚಾಗಿ ಏಕಾಂಗಿತನ ಬಯಸುತ್ತಿದ್ದರು ಎನಿಸುತ್ತದೆ.
ಸೊಲೋ ಟ್ರಿಪ್ ಎಂಬ ಪರಿಕಲ್ಪನೆ ಪಶ್ಚಿಮದ individualism ನಿಂದ ಬಂದಂತೆ ಕಾಣಬಹುದು. ಆದರೆ ಭಾರತೀಯ ಸಂವೇದನೆಯಲ್ಲಿ ಇದಕ್ಕೆ ಹೊಸತನವಿಲ್ಲ. ವಾನಪ್ರಸ್ಥ, ತೀರ್ಥಯಾತ್ರೆ, ಏಕಾಂತ ಸಾಧನೆ ಇವೆಲ್ಲವೂ ಒಬ್ಬನೇ ನಡೆಯುವ ದೇಹ, ಆದರೆ ಅನೇಕ ಪ್ರಶ್ನೆಗಳನ್ನು ಹೊತ್ತ ಮನಸ್ಸಿನ ಪ್ರಯಾಣಗಳೇ. ಹೀಗಾಗಿ ಸೊಲೋ ಟ್ರಿಪ್ ಹೊಸ ಪದವಾದರೂ, ಅನುಭವ ಪುರಾತನ. ಒಂಟಿಯಾಗಿ ಹೊರಡುವವನಿಗೆ ಮೊದಲ ಎದುರಾಗುವ ಸಮಸ್ಯೆ ಮೌನವನ್ನು ನಿಭಾಯಿಸುವುದು. ಇದನ್ನು ಅವರ ಮೊದಲ ಏಕಾಂಗಿ ಪ್ರಯಾಣದ, ಅಂದರೆ ಅವರ ಕಾಲೇಜು ದಿನದಂದು ಕುಂದಾಪುರದಿಂದ ಹಾಲಾಡಿಗೆ ಸುಮಾರು ೨೨ ಕಿ. ಮಿ. ನಡೆದು ತಲುಪಿದ ಪಯಣದಲ್ಲಿ ಗಮನಿಸಬಹುದು. ಕಾಲೇಜು ಹುಡುಗ ಯಾರಿಗೂ ಹೇಳದೆ ಹಳ್ಳಿಯ ಟಾರು ರಸ್ತೆಯಾದರೂ ಓರೆಕೋರೆಯಲ್ಲಿ ಹಾಡಿಯ ನಡುವೆ ಸೀಳಿಕೊಂಡು ಸಾಗುವ ರಸ್ತೆ, ಬದಿಯಲ್ಲಿ ತೆಂಗು ಅಡಿಕೆ ತೋಟ, ಗದೆ , ಹಳ್ಲ, ಹೊಳೆ ಹೀಗೆ ಎಲ್ಲವನ್ನು ದಾಟುತ್ತಾ ನಎಯುವಾಗ ಮೌನವೇ ಸಂಗಾತಿ. ಒಳಮನಸ್ಸು ಮತ್ತು ಹೊರ ಮನಸ್ಸು ಎರಡೂ ಅಂತರಂಗದ ಸಂವಾದಕ್ಕೆ ತೊಡಗುತ್ತವೆ. ಗುಂಪಿನಲ್ಲಿದ್ದಾಗ ಮೌನಕ್ಕೆ ಅವಕಾಶವೇ ಇಲ್ಲ; ಇಲ್ಲಿ ಮೌನವೇ ಸಂಗಾತಿ. ಆ ಮೌನದಲ್ಲಿ ನೆನಪುಗಳು ಮಾತನಾಡುತ್ತವೆ, ಅನುಮಾನಗಳು ಪ್ರಶ್ನಿಸುತ್ತವೆ, ಮತ್ತು ಕೆಲವೊಮ್ಮೆ ಮನಸ್ಸು ವಿವಿಧ ಭಾವನೆಯಿಂದ ಮಿಡುಕುತ್ತವೆ. ಈ ಕಾರಣಕ್ಕೇ ಸೊಲೋ ಟ್ರಿಪ್ ಕೇವಲ ಭೌತಿಕ ಯಾನವಲ್ಲ; ಮನಸ್ಸಿನೊಳಗೇ ಸಂಚರಿಸುವ ಅನೇಕ ಏರಿಳಿತಗಳ ಅನಾವರಣ.
ಸೊಲೋ ಟ್ರಿಪ್ ನಲ್ಲಿ ಒಬ್ಬ ವ್ಯಕ್ತಿ ತನ್ನದೇ ನಿರ್ಧಾರ, ತನ್ನದೇ ಜವಾಬ್ದಾರಿ, ಭಯ ಮತ್ತು ಧೈರ್ಯಗಳೊಂದಿಗೆ ಕೈಗೊಳ್ಳುವ ಯಾತ್ರೆ. ಇಲ್ಲಿ ನಿರ್ಧಾರಕ್ಕಿಂತ ನಿರ್ಣಯ ಮುಖ್ಯ. ಭಯಕ್ಕಿಂತ ಎಚ್ಚರಿಕೆ ಮುಖ್ಯ.”ಕರಡಿಯ ನೆನೆಸುತ್ತಾ ಕತ್ತಲ ರಸ್ತೆಯಲ್ಲಿ’ ಇದು ವ್ಯಕ್ತವಾಗಿದೆ. ಇವರ ಸ್ನೇಹಿತ ನರಸಿಂಹ ಭಟ್ಟರ ಜೊತೆಗೂಡಿ ಹಿರೆಮಗಳೂರು ಕಣ್ನನ್ ಅವರ ಕೋದಂಡರಾಮ ದೇವಾಲಯವನ್ನು ಕಂಡು ಅವರ ಸೂಚನೆಯಂತೆ ಮರ್ಲೆ, ಬೆಳವಾಡಿಯ ವೀರನಾರಾಯಣ ದೇವಸ್ಥಾನ, ಉದ್ಭವ ಗಣಪತಿ ನೋಡಿ ತಿರುಗಿ ಬರುವಾಗ ಕರಡಿ ಆ ಹಾದಿಯಲ್ಲಿ ತಿರುಗುತ್ತದೆ ಎನ್ನುವುದನ್ನು ಕೇಳಿಯೇ ಅದರ ಕುರಿತು ಹೆದರಿಕೆಯ ಅನುಭವವನ್ನು ಓದಿದಾಗ ಮೇಲಿನ ವಿಷಯಗಳು ಸ್ಪಷ್ಟವಾಗುತ್ತದೆ. ಇಲ್ಲಿನ ಟ್ರಿಪ್ ಅನುಭವ ಪೂರ್ತಿ ಚಾರಣದ್ದಲ್ಲ; ಸಂದರ್ಭಕ್ಕೆ ತಕ್ಕಂತೆ ಕ್ವಚಿತ್ತಾಗಿ ಸೈಕಲ್, ಬಸ್ಸು ಬಳಸಿದ್ದಾರೆ. ಕೆಲವೊಮ್ಮೆ ಅತೀ ಆತ್ಮೀಯರಿದ್ದಾರೆ. ಅಲ್ಲಿಯೂ ಅವರಿಗಿಂತ ಇವರ ಅನುಭವವೇ ಸೆಳೆಯುತ್ತದೆ.
ಸಾಮಾನ್ಯ ಪ್ರವಾಸದಲ್ಲಿ ನಾವು ಸ್ಥಳಗಳನ್ನು “ನೋಡುತ್ತೇವೆ”. ಸೊಲೋ ಟ್ರಿಪ್‌ನಲ್ಲಿ ಸ್ಥಳಗಳು ನಮ್ಮನ್ನು ನೋಡಿಕೊಳ್ಳುತ್ತವೆ. ಕಾಡಿನ ದಾರಿ, ಬೆಟ್ಟದ ತಿರುವು, ಮಳೆಯ ಮೌನ ಇವೆಲ್ಲವೂ ಚಾರಣಿಗನನ್ನು ಪ್ರಶ್ನಿಸುತ್ತಿದೆಯೇನೋ ಅನಿಸುತ್ತದೆ. “ಪ್ರಯಾಣದ ಉದ್ಧೇಶವೇನು” ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲದಿದ್ದರೂ, ಆ ಪ್ರಶ್ನೆಯ ಎದುರು ನಿಂತ ಕ್ಷಣವೇ ಯಾತ್ರೆಯ ಸಾರ್ಥಕ್ಯ. ಇವರೊಮ್ಮೆ ಶಂಕರನಾರಾಯಣ ದೇವಾಲಯದ ದೀಪೋತ್ಸ್ವಕ್ಕೆ ಹೋದ ಘಟನೆಯೂ ಸಹ ಏಕಾಂಗಿ ಪ್ರವಾಸದ ವಿಷಯದಲ್ಲಿ ಸೇರಿದೆ. ಕ್ಲಾಸ್ ಮೇಟ್ ಪ್ರಭಾಕರನ ಮನೆ ಎರಡು ಬಾರಿ ಸುಟ್ಟುಹೋಗಿತ್ತು ಎನ್ನುವಕಾರಣಕ್ಕೆ ದೇವಸ್ಥಾನದ ಪೌಳಿಯಲ್ಲಿ ಮಲಗಿ ಬೆಳಿಗ್ಗೆ ಎದ್ದು ಹೋದ ವಿವರವೂ ಕರಡಿ ಎದುರಾಗಬಹುದೆನ್ನುವ ಹೆದರಿಕೆಯಿಂದ ಚಿಕ್ಕಮಗಳುರಿನ ಸೈಕಲ್ ಟ್ರಿಪ್ಪಿಗೂ ಸಾಮ್ಯತೆ ಸೇರುವುದು. ಹಾಲಾಡಿಯವರು ಸದಾ ಏಕಾಂಗಿತನವನ್ನು ಬಯಸುತ್ತಾರೆ ಎನ್ನುವ ಆರೋಪ ಅನೇಕರಿಂದ ಕೇಳಿಬರುತ್ತದಾರೂ ಅದಕ್ಕೆ ಕಾರಣ ತಾನು ಗುಂಪಿನಲ್ಲಿ ಕಳೆದು ಹೋಗುವುದಕ್ಕಿಂತ ಸುತ್ತಲಿನ ಪರಿಸರದಲ್ಲಿ ತೇಲಬೇಕು ಎನುವ ಅವರೊಳಗಿನ ಆಸೆಯೂ ಇರಬಹುದೇನೋ. ಅವರ ’ಅಬ್ಬೆ’ ಕಾದಂಬರಿಯಲ್ಲಿಯೂ ಸಹ ಕಥಾ ನಾಯಕ ಹೀಗೇ ಏಕಾಂಗಿತನವನ್ನು ಬಯಸುತ್ತಾನೆ. ’ನದಿ ದಾಟಿದವರು’ ಕೃತಿಯಲ್ಲಿಯೂ ಸಹ ಹೀಗೆ ಸ್ವಗತದದ ವಿವರಣೆಯೇ ಹೆಚ್ಚಿದೆ. ಮಹಾಕಾವ್ಯದಲ್ಲಿ ಇದನ್ನು ’ಕವಿಸಮಯ’ ಎನ್ನುತ್ತಾರೆ. ಇದಕ್ಕೆ ಕಾರಣ, ಸೊಲೋ ಟ್ರಿಪ್ ಸ್ವಾರ್ಥವಲ್ಲ; ಅದು ತನ್ನನ್ನು ತಾನೇ ಅರಿಯುವ ಮಾರ್ಗ. ಸಮಾಜದಿಂದ ಓಡಿಹೋಗುವುದಲ್ಲ; ಸಮಾಜದೊಳಗೆ ಮರಳಲು ತಾನು ತಾನು ಅರಿಯುವ ಪ್ರಯತ್ನ. ಒಂಟಿಯಾಗಿ ನಡೆದ ಹೆಜ್ಜೆಗಳು ಕೊನೆಗೆ ಮನುಷ್ಯನನ್ನು ಹೆಚ್ಚು ಮಾನವೀಯನನ್ನಾಗಿಸುತ್ತದೆ. ಇವರ ಚಾರಣಕ ಗೀಳಿಗೆ ಶಕ್ತಿ ತುಂಬಿದವರು ಅಶೋಕವರ್ಧನರು. ಉಜಿರೆಯ ಸಮೀಪದ ಏರಿಗಲ್ಲನ್ನು ಏರಿದ ಅನುಭವ ಅವರನ್ನು ಚಾರಣಕೆ ಬೇಕಾದ ಸಿದ್ಧತೆಯನ್ನೂ ಮಾನಸಿಕ ಸ್ಥಿರತೆಯನ್ನೂ ತುಂಬಿರಬೇಕು. ಅಶೋಕವರ್ಧನರು ಆ ಕಾಲದಲ್ಲಿ ಯುವಕರಲ್ಲಿ ಚಾರಣದ ಧೈರ್ಯ ಮತ್ತು ಅದಕ್ಕೆ ಬೇಕಾದ ಮಾರ್ಗದರ್ಶನ ನೀಡುತ್ತಾ ಲವಲವಿಕೆಯಿಂದ ಇದ್ದವರು. ಅವರ ಚಾರಣದ ಅನುಭವವನ್ನು ಪತ್ರಿಕೆಯಲ್ಲಿ ಓದುವುವಾಗ ನಮಗೂ ಹುರುಪು ಬಂದು ನಮ್ಮೂರ ಸಮೀಪದ ಹಲವಾರು ಬೆಟ್ಟಗಳನ್ನು ಏರಿದ ನೆನಪಿದೆ. ಅವರು ಹುಡುಗರ ಸಲುವಾಗಿ ತಾನೇ ಮುಂದೆ ಹೋಗಿ ದಟ್ಟ ಅಡವಿಯಲ್ಲಿ ಚಹಾ ಮಾಡಿ ಇವರಿಗೆಲ್ಲ ಕೊಡುವ ಸಂಗತಿ ಏಕಾಂಗಿ ಚಾರಣಕ್ಕೆ ಬಲು ಮುಖ್ಯವಾದ ದ್ಪೂರ್ತಿಯನ್ನು ತುಂಬುತ್ತದೆ. ಇದರಲ್ಲಿನ ಇನ್ನೊಂದು ಓದಲೇ ಬೇಕಾದ ಅನುಭವ ಇವರ ಅಂಡಮಾನ್ ದ್ವೀಪದ ಭಗ್ನ ಕನಸು. ಹೆಚ್ಚಾಗಿ ಏಕಾಂಗಿಯಾಗಿ ಹೋಗಬಯಸುವ ಇವರು ಅಲ್ಲಿಗೆ ತನ್ನ ಗೆಳೆಯರ ಜೊತೆಗೆ ಹೋಗಲು ಶಿರಸಿಯ ಓರ್ವ ಎಜೆಂಟನಿಂದ ಮೋಸಹೋದ ಕುರಿತು ಬರೆದಿರುವುದೂ ಸಹ ವಿನೋದವಾಗಿಯೇ ಬಂದಿದೆ.
ಚಾರ್ಮಾಡಿ ಘಟ್ಟ, ಬಾಳೇ ಬೀರು ಘಟ್ಟ ಇವು ಕೇವಲ ಭೌಗೋಳಿಕ ಹೆಸರುಗಳಲ್ಲ. ಅವು ಸಹಜಮಳೆಕಾಡಿನ ಜೀವಂತ ರೂಪಕಗಳು. ದಟ್ಟ ಕಾಡು, ಮಂಜಿನ ಮಡಿಲು, ಅಚಾನಕ್ ಇಳಿಜಾರು, ಕಾಣದ ತಿರುವುಗಳು ಇವೆಲ್ಲವೂ ಹೊರಗಿನ ಅಪಾಯಗಳನ್ನು ಎದುರಿಸುವ ಧೈರ್ಯ ಕೊಡುವದಷ್ಟೇ ಅಲ್ಲ; ನಮ್ಮೊಳಗಿನ ಅನೇಕ ಗೊಂದಲವನ್ನು ಎದುರಿಸುವ ಮಾನಸಿಕ ಧೈರ್ಯವನ್ನು ತುಂಬುತ್ತದೆ. ಬಾಳೇ ಬೀರು ಘಟ್ಟದ ತಿರುವುಗಳಲ್ಲಿ ಹೆಜ್ಜೆ ತಪ್ಪಿದರೆ ಕೆಳಗೆ ಕತ್ತಲ ಕಣಿವೆಭೌತಿಕ ಅಪಾಯವನ್ನು ಎದುರಿಸುವ ಮಾನಸಿಕ ಸ್ಥೈರ್ಯವನ್ನು ಸೂಚಿಸುತ್ತದೆ. ಕೆಲ ಲೇಖಕರು ಅಪಾಯವನ್ನು ಅತಿರಂಜಿತವನ್ನಾಗಿ ವರ್ಣಿಸಿ ಅದನ್ನುತಾನೆ ಹೇಗೆ ಎದುರಿಸಿ ಗೆದ್ದಿದ್ದೇನೆ ಎನ್ನುವ ಬಡಿವಾಳವನ್ನು ತೋರುತ್ತಾರೆ. ಇವರಲ್ಲಿ ಈ ಯಾವ ಮಸಾಲೆಯೂ ಇಲ್ಲ. ಹಾಲಾಡಿಯವರ ಬರವಣಿಗೆಯಲ್ಲಿ ಆ ಮೋಹ ಇಲ್ಲ. ಕಾಡು ಶತ್ರುವಲ್ಲ; ಅದು ನಿರ್ಲಿಪ್ತ. ಮಳೆ, ಜೇನುಹುಳು, ಕಾಡುಪ್ರಾಣಿಗಳು ಇವು ಕಥೆಯ ಮಸಾಲೆಗಾಗಿ ಅಲ್ಲ, ಯಾತ್ರಿಕನ ಎಚ್ಚರಿಕೆಯ ಪಾಠಕ್ಕಾಗಿ ಬರುತ್ತವೆ.
ಜಾಗತಿಕವಾಗಿ ನೋಡಿದರೆ, ಹೆನ್ರಿ ಡೇವಿಡ್ ಥೋರೋ ಅವರ Walden, ಬ್ರೂಸ್ ಚಾಟ್ವಿನ್‌ನ In Patagonia, Paul Theroux ನ ರೈಲುಪ್ರವಾಸ ಕಥನಗಳು ಇವೆಲ್ಲದರಲ್ಲಿಯೂ ಏಕಾಂಗಿ ಪ್ರಯಾಣದ ರೋಚಕ ವಿವರವಿದೆ. ಇವು ಒಂಟಿ ಪ್ರಯಾಣವನ್ನು ಸ್ವ-ಅನ್ವೇಷಣೆಯ ಸಾಧನವನ್ನಾಗಿಸಿವೆ. ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ’ಸೋಲೋ ಟ್ರಿಪ” ಒಂದು ರೀತಿಯ ಪ್ರತಿರೋಧ: ಸಮಾಜದ ಗದ್ದಲದಿಂದ ಹಿಂದೆ ಸರಿದು, ಪ್ರಕೃತಿಯ ಎದುರು ನಿಂತು “ನಾನು ಯಾರು?” ಎಂದು ಪ್ರಶ್ನಿಸುವ ಧೈರ್ಯ. ಶಶಿಧರ ಹಾಲಾಡಿಯವರ ಪ್ರಬಂಧಗಳು ಹಾಗಲ್ಲ. ತನ್ನ ಸಹಜ ಶಬ್ಧಸೌಂದರ್ಯದಿಂದ ಸರಳತೆಯಿಂದ ಗೆಲ್ಲುತ್ತ್ತವೆ. ಅವರಲ್ಲಿ ಎಲ್ಲಿಯೂ ತನ್ನನ್ನು ತಾನು ಪ್ರೊಜೆಕ್ಟ್ ಮಾಡಿಕೊಳ್ಳಬೇಕೆನ್ನುವ ಹಮ್ಮುಇಲ್ಲ. ಅವರ ಒಂಟಿತನ ವಿಮುಕ್ತಿಯ ಘೋಷವಲ್ಲ; ಅದು ಸಮಾಧಾನದ ಹುಡುಕಾಟ. ಪಶ್ಚಿಮದ lone traveler ಅಹಂನನ್ನು ಕಿತ್ತುಹಾಕಲು ಹೊರಟರೆ, ಹಾಲಾಡಿಯವರ ಯಾತ್ರಿಕನು ಅಹಂನ ಜೊತೆ ಮಾತುಕತೆ ನಡೆಸುತ್ತಾನೆ. ಹಾಗಾಗಿ ಇವರ ’ಸೊಲೋ ಟ್ರಿಪ್’ ಪ್ರವಾಸ್ಸಿಗರ ಕೈಪಿಡಿಯಾಗಿಲ್ಲ. ಅವರೊಳಗಿನ ಸಾಹಿತ್ಯಿಕ ಮನಸ್ಥಿತಿ ಇಲ್ಲಿದೆ. ಇದರಲ್ಲಿ ದಾರಿ ಕಥೆಯಾಗುತ್ತದೆ, ಮೌನ ಭಾಷೆಯಾಗುತ್ತದೆ, ಮತ್ತು ಯಾತ್ರಿಕನೇ ಪಠ್ಯವಾಗುತ್ತಾನೆ. ಶಶಿಧರ ಹಾಲಾಡಿಯವರ ಬರವಣಿಗೆಯಲ್ಲಿ ಒಂಟಿತನ ವಿಮುಕ್ತಿಯ ಘೋಷವಲ್ಲ; ಅದು ಸಮಾಧಾನದ ಹುಡುಕಾಟ. ಪಶ್ಚಿಮದ lone traveler ಅಹಂನನ್ನು ಕಿತ್ತುಹಾಕಲು ಹೊರಟರೆ, ಹಾಲಾಡಿಯವರ ಯಾತ್ರಿಕನು ಅಹಂನ ಜೊತೆ ಮಾತುಕತೆ ನಡೆಸುತ್ತಾನೆ. ಓದಲೇಬೇಕಾದ ಪುಟ್ಟ ಕೃತಿ ಇದು.






0 Comments