ಪ್ರಕಾಶ ಖಾಡೆ ಕಥೆ – ಇದೊಳ್ಳೆ ಪಂಚಾಯ್ತಿ ಆಯ್ತಲ್ಲಾ…

ಡಾ ಪ್ರಕಾಶ ಗ ಖಾಡೆ

ಮೊದಲಿಗಿ ದೀಪಾ ಹಚ್ಚರಿ, ಯಾರ ಕಡೆಗೆ ಕಡ್ಡಿಪಟ್ನ ಐತೇನ, ಬೀಡಿ, ಸಿಗರೇಟು ಸೇದಾವ್ರು ಯಾರರೇ ಅದಾರೇನ ನೋಡ್ರೀ, ಅಂತಾ ಕಲ್ಲಯ್ಯ ಸ್ವಾಮಿಗಳು ನಿಂತ ಮಂದೀಗಿ ಕೇಳಿದರು. ಬಂದಾವರು ಪ್ಯಾಂಟಿನ ಮಂದಿ ಇದ್ರು, ಯಾರ ಬಳಿಯೂ ಕಡ್ಡಿ ಡಬ್ಬಿ ಇರಲಿಲ್ಲ, ಪೂಜೇಕ ಎಲ್ಲಾ ಸಾಮಾನು ತಂದಿದ್ದರು, ಆದ್ರ ದೀಪಾ ಹಚ್ಚಲಾಕ ಇದನ್ನೊಂದ ಬಿಟ್ಟ ಬಂದಿಂದ್ರು. ಗಾಳಿ,ಬೆಂಕಿ,ನೀರು ಬೇಕಂದ್ರ ಸಿಗೂದು ಏನ ತಡಾ ಇಲ್ಲಾ, ಅಲ್ಲೇ ದೂರದಾಗ ಇಬ್ರ ಮುದುಕರು ಕಂಡ್ರು, ಬಾಳುಕು ಓಡಿ ಹೋಗಿ ಅವರ ಕಡಿಂದ ಕಡ್ಡಿ ಡಬ್ಬಿ ತುಗೊಂಡ ಬಂದಾ.

“ಸಿಕ್ತ ನೋಡ್ರಿ ಕಡ್ಡಿ ಡಬ್ಬಿ, ಹಚ್ಚರಿ ಇನ್ನ ಬೆಂಕಿ’ ಅಂತಾ ಹೊಟ್ಯಾಗ ದ್ವೇಷಾ ತುಂಬಿಕೊಂಡಿದ್ದ ಈರಪ್ಪಗೌಡ ಮೀಸ್ಯಾಗ ನಕ್ಕ ತನ್ನ ಮನಸಿನ್ಯಾಗ ಹೇಳಿದಾ. ಬಾಳುಕನ ಕೈಯಿಂದ ಕಡ್ಡಿ ಡಬ್ಬಿ ತಗೊಂಡು ಲಕಮವ್ವ ಸ್ವಾಮಿಗಳಿಗೆ ಕೊಟ್ಟಳು. ಅದಾಗಲೇ ದೇವರುಗಳಿಗೆ ವಿಭೂತಿ, ಕುಂಕುಮ, ಅರಿಷಿನ ಹಚ್ಚಿ ಚೆಂದ ಮಾಡಿದ್ದರು. ಒಂದ ಮಾಲಿ ಇತ್ತು ಇದನ್ನ ಗುದ್ಲಿಗೆ ಹಾಕಲೋ.. ಇಲ್ಲಾ ಸಲಿಕಿಗೆ ಹಾಕಲೋ ಅಂತಾ ವಿಚಾರ ಮಾಡಿ ಸ್ವಾಮಿಗಳು ಎರಡನ್ನು ಕೂಡ್ರಿಸಿ ಒಂದ ಮಾಲಿಯೊಳಗ ನಿಲ್ಲಿಸಿಬಿಟ್ಟರು.

ಐದೂ ದೇವರ ಸವಾ ಇದ್ದಿದ್ದಿಲ್ಲ, ಮೊದಲ, ಕಲ್ಲ ದೇವರು ಅವು, ಈಶ್ಯಾನ ಮೂಲ್ಯಾಗ ಅಟ ಸ್ವಚ್ಛ ಮಾಡಿಕೊಂಡ ಪಾರವ್ವ ಸ್ವಾಮಿಗಳು ಬರುವದಕ್ಕಿಂತ ಮೊದಲ ಅಲ್ಲಿ ಬೆಳೆದ ಕಸಾ ಕಡ್ಡಿ, ಮುಳ್ಳ ಜಾಲಿ ಎಲ್ಲಾ ತಗದ, ನೀರ ಹೊಡೆದ, ರಂಗೋಲಿ ಹಾಕಿ ಪೂಜೇಕ ಸಜ್ಜು ಮಾಡಿದ್ದಳು. ಸ್ವಾಮಿಗಳು ಬಂದ ಮ್ಯಾಲ ಪೂಜೆ ಸಾಮಾನ ಎಲ್ಲಾ ಇಳಿಸಿ, ಬಾಳುಕುಗ ಐದ ದೊಡ್ಡ ಕಲ್ಲು ತುಗೊಂಡ ಬಾ ಪೂಜೆಗೆ ಎಂದಾಗ, ಬಾಳುಕು ಅಲ್ಲಲ್ಲಿ ಬಿದ್ದ ದೊಡ್ಡು ಸಣ್ಣು ಹೀಂಗ ಏಳೆಂಟ ಕಲ್ಲು ತಂದು ಸ್ವಾಮಿಗಳ ಮುಂದ ಇಟ್ಟಾ, ಸ್ವಾಮಿಗಳು ತಮ್ಮ ಮಾತ ಕೇಳುವ, ಅಂದರೆ ಸರಿಯಾಗಿ ನಿಂತುಕೊಳ್ಳುವ, ಇಲ್ಲವೇ ಕುಡ್ರುವ ಐದೂ ಕಲ್ಲುಗಳನ್ನು ದೇವರನ್ನಾಗಿ ಮಾಡಿ ಸಮಾನವಾಗಿ ಕೂಡ್ರಿಸಿದರು. ಪಾರವ್ವ ತಂದ ಕೊಡದ ನೀರಿನಿಂದ ಎಲ್ಲಾ ದೇವರ ಮುಖಾ ಮೋತಿ ಸ್ವಚ್ಛವಾಗಿ ತೊಳೆದು, ಮೊದಲ ಎಲ್ಲಾಕ್ಕೂ ಮೂರ ಬಳ್ಳ ಇಬತ್ತಿ ಬಡಿದರು. ಆ ಮ್ಯಾಲ ಅರಿಷಿಣ, ಕುಂಕುಮ ಹಚ್ಚಿದರು. ಹೂ ಏರಿಸಿದರು, ಬೊಗಸಿ, ಬೊಗಸಿ ಫಳಾರ ಹಾಕಿದರು, ದೀಪಾ ಸಜ್ಜ ಮಾಡಿ ಹಚ್ಚಬೇಕ ಅನ್ನುವದ್ರಾಗ ಕಡ್ಡಿ ಪೆಟ್ಟಿಗೆಗೆ ತಡಕಾಡಿದರು.

ಈಗ ಹ್ಯಾಂಗೂ ಕಡ್ಡಿ ಡಬ್ಬಿ ಬಂದಿತ್ತು, ದೀಪಾ, ಊದಿನ ಕಡ್ಡಿ ಹಚ್ಚಿ, ತೆಂಗಿನ ಕಾಯಿಮ್ಯಾಲ ಕರ್ಪೂರಾ ಇಟ್ಟು “ಜ್ಯೋತಿ ಬೆಳಗುವೆನು, ಪರಂಜ್ಯೋತಿ ಬೆಳಗುವೆನು..” ಅಂತಾ ಹಾಡಾ ಚಾಲೂ ಮ್ಯಾಡಿದ ಮ್ಯಾಲ, ಅಲ್ಲಲ್ಲಿ ಮಾತ ಹಚ್ಚಿದ ಮಂದಿ, ಮೊಬೈಲ್ದಾಗ ಮುಳುಗಿದ ಮಂದಿ ಎಲ್ಲಾ ಕೈಮುಗದ ನಿಂತಕೊಂಡ್ರು. ಮಲ್ಲೇಶಿ ನಿಂತ ಮಂದಿಗೆ ಕುಂಕುಮ ನಾಮಾ ಬಡಿಯಾಕ ಶುರು ಮಾಡಿದಾ, ಒಳೆ ನಿವ್ವಳಾಗಿ ಬಡಿತಿದ್ದ, ಅಗಸಿಮನಿ ಬಶೀರನ ಕುತ್ತಿಗೆಗೆ ಹಚ್ಚಿದಾ.

ಪೂಜೆ ಮುಗದ ಮ್ಯಾಲ, ಚುರಮುರಿ, ಬೆಲ್ಲಾ, ಖಾರಾ, ಸೇವು, ಶೇಂಗಾ ಕಲಸಿದ್ಧ ಪಂಚ ಫಳಾರದಾಗ ಒಡೆದ ಟೆಂಗಿನಕಾಯಿ ಚೂರ ಮಾಡಿ ಬೆರಸಿ ಎಲ್ಲಾರಿಗೂ ಕೊಡಾಕ ಬಾಳುಕು ಚಾಲೂ ಮಾಡಿದಾ. ಹೀಂಗ ಪೂಜೆ ನಡಿತಿರಬೇಕಾದ್ರ ಪರಮೇಶಪ್ಪ ತನ್ನ ಮೊಬೈಲದಾಗ ಎಲ್ಲಾ ಮೂಲಿ ಮೊದಲ ಮಾಡಿ, ಫೋಟೊ ತುಗೊತ್ತಿದ್ದಾ, “ಎಲ್ಲರೂ ರ‍್ರೀ ಸ್ವಾಮಿಗೋಳ ಜೋಡಿ ಒಂದ ಸೆಲ್ಫಿ ತಗೊಳ್ಳೂನು” ಅಂತಾ ಜೋಶಿ ಹೇಳಿದಾಗ ಮುಲ್ಲಾ ಮೊದಲ ಮಾಡಿ ಎಲ್ಲಾರೂ ಒಂದ ಸಾಲಿನ್ಯಾಗ ನಿಂತು ಮಾಸ್ಕ ತೆಗೆದು ಮೂವತ್ತೇರಡು ಕಾಣುವ್ಹಂಗ ನಕ್ಕ ಫೋಜ ಕೊಟ್ಟರು.

ಅಟೋತಿಗೆ ತಡಬಡಿಸಿ ಪಂಚಾಯ್ತಿ ಛೇರ್ಮನ್ನ ಹೌಹಾರಿ ಬಂದಾ , ‘ಮುಗಿಸಿ ಬಿಟ್ರೇನ. ನಾ ಬರುತನಾ ಕಾಯಲಿಲ್ಲೇನ’ ಅಂದಾ. ‘ಹಾದ್ಯಾಗ ಗಾಡಿ ಪಂಚೇರ ಆಗಿ ಗೋಳ ಆತ ನೋಡ,’ ಅಂತಾ ಒಂದ ಸವನ ತಾ ತಡಾಮಾಡಿ ಬಂದಿದ್ದಕ್ಕ ಮತ್ತ ಪೂಜೆ ಮುಗಿದಿದ್ದಕ್ಕ, ಯಾರ ಮ್ಯಾಲ ಹರಿಹಾಯುನು ಅಂತಾ ದಿಗಿಲಾಗಿ ಬದ್ಧ ವೈರಿ ಈರಪ್ಪನ ಕಡೆ ನೋಡಿ ನಕ್ಕ. ಅಷ್ಟತ್ತೊರಳಗ ಮಲ್ಲೇಶಿ ಛರ‍್ಮನ್ನರಿಗೆ ಢಾಳಂಗಿ ಕಾಣುವಂಗ ನಾಮಾ ಬಡಿದಿದ್ದ, ಬಾಳುಕು ಕೈಯಾಗ ಫರಾಳ ಕೊಟ್ಟಿದ್ದ.

“ಛರ‍್ಮನ್ನರ ಜೋಡಿ ಒಂದ ಸೇಲ್ಫಿ ಆಗಲಿ” ಅಂತಾ ಹುಸೇನಿ ಹೇಳಿದ ಮ್ಯಾಲ ಪಿ.ಡಿ.ಓ.ಮೊದಲ ಮಾಡಿ ಮೆಂಬರರು ಸಹಿತ ಮತ್ತ ಒಂದ ಲೈನಿಗೆ ಬಂದ್ರು, ಎಂದಿನಂತೆ ಮಾಸ್ಕು ತೆಗೆದು ಮೂವತ್ತೆರಡು ಪ್ರದರ್ಶಿಸಿದರು. ನನಗೂ ಫೋಟೋ ಬಿಡ ಅಂತಾ ಎಲ್ಲಾರು ಪರಮೇಶಿಗೆ ಹೇಳಿದರು. ‘ಎಲ್ಲಾರಿಗೂ ಬಿಡಾಕ ಭಾಳ ಟೈಮ್ ಹಿಡಿತೈತಿ, ಪಂಚಾಯತಿ ನೂತನ ಕಟ್ಟಡ ಶಂಕುಸ್ಥಾಪನೆ ಅಂತಾ ಒಂದ ವಾಟ್ಸಾಫ್ ಗ್ರುಫ್ ಮಾಡಿ ಆ ಗ್ರುಫ್‌ದಾಗ ನಿಮ್ಮನ್ನೇಲ್ಲಾ ಸೇರಿಸಿ ಗುಂಪಿಗೆ ಫೋಟೋ ಬಿಡ್ತಿನೀ” ಎಂದು ಹೇಳಿದಾ. ಹಾಂಗ ಮಾಡು ಅಂತಾ ಎಲ್ಲಾರೂ ತಮ್ಮ ತಮ್ಮ ಗಾಡಿ ಚಾಲು ಮಾಡಿ ಹೊರಟರು.

ಹಿಂದ ಉಳಿದ ಪಂಚಾಯತಿ ಫ್ಯೂನಬಾಯಿ ಪಾರವ್ವ ದೇವರುಗಳನ್ನು ಬಯಲಾಗ ಬಿಟ್ಟು ಪೂಜೆ ಸಾಮಾನುಗಳನ್ನು ತುಗೊಂಡು ಹೊಂಟಳು. ಈಕಿ ಯಾವಾಗ ಹೊಕ್ಕಾಳು ಅಂತಾ ಅಲ್ಲೇ ಕಾಯುತ್ತಿದ್ದ ಹಂದಿಗಳ ಸೈನ್ಯ ತಮ್ಮ ಮರಿ ಮಕ್ಕಳೊಂದಿಗೆ ದೇವರೆನ್ನುವ ಖಬರುವಿಲ್ಲದೇ ಪೂಜಾ ಸ್ಥಳಕ್ಕೆ ದಾಳಿ ಇಟ್ಟವು. ಹಾಕಿದ್ದ ಫಳಾರ, ಹೂ ಮಾಲಿ ಎಲ್ಲಾದಕ್ಕೂ ಬಾಯಿ ಹಾಕಿ ಆಪೋಶನಕ್ಕೆ ಸಜ್ಜಾದವು. ಅಲ್ಲಿಯೇ ತಿಪ್ಪೆ ಕೆದರುತ್ತಿದ್ದ ಬಿಡಾಡಿ ನಾಯಿಗಳು ತಮಗೂ ಏನಾದರೂ ಸಿಕ್ಕೀತೆಂದು ಓಡಿ ಬಂದವು. ಬೊಗಳುತ್ತಾ ಬಂದ ನಾಯಿಗಳನ್ನು ಕಂಡ ಹಂದಿಗಳು ಗುರುಗುಟ್ಟತೊಡಗಿದವು.

ಯುದ್ಧದ ಕಾರ್ಮೋಡ ಕವಿಯಿತು. ನಾಯಿಗಳು ಗೊಳ್ಳ ಚುರುಮುರಿಗೆ ಆಸೆ ಮಾಡದೇ, ಆಗಷ್ಟೇ ಕಣ್ಣು ತೆರೆದಿದ್ದ ಮರಿಗಳನ್ನು ತಿಂದು ತೇಗಬೇಕೆಂದು ನಿರ್ಧರಿಸಿದ್ದವು, ಇದರ ಸುಳಿವು ಅರಿತ ತಾಯಿಗಳು ಮರಿಗಳಿಗೆ ರಕ್ಷಣಾತ್ಮಕ ಬಲೆ ಹೆಣೆಯಲು ಸಜ್ಜಾದವು, ಇವುಗಳ ಕಾದಾಟ ಎಷ್ಟು ತೀವ್ರವಾಗಿತ್ತೆಂದರೆ, ಹಂದಿಗಳನ್ನು ಓಡಿಸಿಕೊಂಡು ಹೋದ ಖಾನಾವಳಿ ಬಸಮ್ಮಳ ನಾಯಿ ಇಂದು ಯಾವುದಾದರೂ ಮರಿಯನ್ನೇ ಹಿಡಿದೇ ತೀರಬೇಕೆಂದು ತೀವ್ರವಾಗಿ ಓಡುತ್ತಾ ಹೊರಟಿತು, ಅದೇ ದಾರಿಗೆ ತಡವಾಗಿ ಪೂಜಾ ಸ್ಥಳಕ್ಕೆ ಆಗಮಿಸುತ್ತಿದ್ದ ಎಂಜಿನೀಯರ್ ಭರತೇಶ ತನ್ನ ಬೈಕ್ ಮೇಲೆ ಸ್ಫೀಡಾಗಿ ಬರುವುದಕ್ಕೂ ಖಾನಾವಳಿ ಬಸಮ್ಮಳ ನಾಯಿ ಅಡ್ಡ ಬಂದು ಗಾಡಿ ಸ್ಕಿಡ್ ಆಗಿ ಪೂಜಾ ಸ್ಥಳದಲ್ಲಿ ಎಂಜನೀಯರ್ ಬೀಳುವುದಕ್ಕೂ ಸರಿಯಾಯಿತು.

ಸಾಹೇಬರ ಹಿಂದೆ ತನ್ನ ಗಾಡಿಯಲ್ಲಿ ಬರುತ್ತಿದ್ದ ಅವರ ಅಸಿಸ್ಟಂಟ್ ಸಿದ್ಧನಾಥ ಹೌಹಾರಿ ಗಾಡಿ ತರುಬಿ ಸಾಹೇಬರನ್ನು ಎಬ್ಬಿಸಲು ನೋಡಿದ, ತೀವ್ರ ಪೆಟ್ಟಾಗಿ ಸಾಹೇಬರು ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದರು. ಈ ಸನ್ನಿವೇಶದ ಭೀಕರತೆ ನೋಡಿದ್ದ ಜನ ದಡಬಡಿಸಿ ಬಂದರು. ನೀರ ಹಾಕ್ರಿ, ಗಾಳಿ ಹಾಕ್ರಿ ಎನ್ನುತ್ತಾ ಎಬ್ಬಿಸಿ ಕೂಡ್ರಿಸಿದರು.

ಈಗಷ್ಟೇ ಪೂಜಾ ಮಾಡಿ ಹೋಗಿದ್ದ ಪಂಚಾಯತಿ ಮಂದೀಗಿ ‘ಪಂಚಾಯ್ತಿ ಕಟ್ಟಡ ಕಟ್ಟೋ ಎಂಜಿನೀಯರ್ ಗಾಡಿ ಮ್ಯಾಗಿಂದ ಬಿದ್ದಾರ ರ‍್ರೀ’ ಅಂತಾ ಸಂದೇಶ ಹೋಯಿತು. ಆಗಷ್ಟೇ ವಾಟ್ಸಾಫ್ ಗ್ರುಫ್ ಮಾಡಿದ್ದ ಪರಮೇಶಿ , ಗ್ರುಫಿನಲ್ಲಿ ಮೊದಲ ಸಂದೇಶ ಬಿಟ್ಟ “ನಮ್ಮ ಎಂಜಿನೀಯರ್ ಬಿದ್ದಾರ ರ‍್ರೀ”, ಲಗುಬಗೆಯಿಂದ ಎಲ್ಲಾರೂ ಬಂದ್ರು. ಒನ್ ನಾಟ್ ಏಟ ಗಾಡಿ ಬಂತು. ಸಾಹೇಬರನ್ನು ಸಿಟಿ ದಾವಾಖಾನಿಗೆ ಸೇರಿಸಿದರು.

ಮುಖ್ಯ ಡಾಕ್ಟರರು ‘ಸಾಹೇಬರ ಆರೋಗ್ಯದ ಸ್ಥಿತಿ ಗತಿ ಕುರಿತು ಒಂದ ತಾಸ ಬಿಟ್ಟ ವರದಿ ಕೊಡ್ತೀನಿ , ಯಾರೂ ಒಳಗ ಬರೋದು ಬೇಡ ಕೊವಿಡ್ ಕಟ್ಟು ನಿಟ್ಟಿನ ಆದೇಶ ಐತಿ’ ಅಂದಾಗ ಆಸ್ಪತ್ರೆ ಹೊರಗ ಪಂಚಾಯ್ತಿ ಮಂದಿಯು, ಸಾಹೇಬರ ಕುಟುಂಬ ವರ್ಗದವರು ಆತಂಕದಲ್ಲಿ ಸೇರಿ ತಮಗೆ ತಿಳಿದಂತೆ ಮಾತನಾಡಿಕೊಳ್ಳತೊಡಗಿದರು.

ಅಲ್ಲಿ ಕೇಳಿ ಬಂದ ಮಾತುಗಳು, ‘ಆ ಜಾಗಾ ಸುಮಾರ ಐತಿ, ಅಲ್ಯಾಕ ಪಂಚಾಯ್ತಿ ಕಟ್ಟಡ ಕಟ್ಟಾಕ ಹೋಗ್ಯಾರ’, ‘ಊರ ಹೊರಗ ಬಟಾ ಬಯಲಾಗ ಚೆಂದ ಇರಲಿ ಅಂತಾ ಛೇರ್ಮನ್ನರ ಜಾಗಾ ಹುಡುಕಿ ತಗದಾರ,’ ‘ಹಿಂದಕ ರಾಜಾನ ಕಾಲಕ್ಕ ವಾಡೇದವರು ತಮ್ಮ ಅರಮನ್ಯಾಗ ಸತ್ತ ಕುದುರಿ ಇಲ್ಲೇ ಹುಗಿತಿದ್ದರಂತ, ಮತ್ತ ಒಂದ ವಾಂಡ ಕುದುರಿ ಇತ್ತಂತ ಅದನ್ನ ಜೀವಂತ ಕೊಂದ ಇಲ್ಲೇ ಹುಗದಾರ ಅಂತಾ ನಮ್ಮ ಮುತ್ಯಾ ಹೇಳತಿದ್ದ, ಇಂಥಾ ಜಾಗಾದಾಗ ಈಗ ಪಂಚಾಯ್ತಿ ಬಿಲ್ಡಿಂಗ್ ಕಟ್ಟಾಕ ಚಾಲೂ ಮಾಡ್ಯಾರ, ಯಾರಿಗೆ ಏನ ಕಾದಿದೆಯೋ’ ಅಂತಾ ಪಟೇಲ ಪರಸಪ್ಪ ತನ್ನ ಅನಿಸಿಕೆ ಹಂಚಿಕೊಂಡ.

ಒಂದ ತಾಸಿನಮ್ಯಾಲ ಡಾಕ್ಟರರು ಹೊರಗ ಬಂದ್ರು, ಛೇರ್ಮನ್ನರ ಮೊದಲಮಾಡಿ ಕುಟುಂಬದವರು ಓಡಿ ಬಂದರು. ಡಾಕ್ಟರರ ಮೊಗದಲ್ಲಿ ಆತಂಕವೇನೂ ಇರಲಿಲ್ಲ. ಡಾಕ್ಟರರು ಮಂದೀನ ಉದ್ದೇಶಿಸಿ ಹೇಳಿದರು ‘ಗಾಬರಿ ಆಗುವಂಥದು ಏನೂ ಇಲ್ಲಾ, ನಿಮ್ಮ ಸಾಹೇಬರು ಆರಾಮ ಅದಾರ, ಒಂದೆರಡು ಕಡೆ ಒಳ ಪೆಟ್ಟಾಗಿತ್ತು, ಎಲ್ಲಾ ಟ್ರಿಟ್ಮೆಂಟ್ ಕೊಟ್ಟಿವು, ಮತ್ತ ಕೊವಿಡ್ ಪರೀಕ್ಷಾಕ್ಕೂ ಅವರ ಕಫ ಕಳಿಸಿವು, ನಾಳೆ ವರದಿ ಬರತೈತಿ, ಗಾಬರಿ ಆಗಬ್ಯಾಡ್ರಿ ನಮ್ಮ ದಾವಾಖಾನಿಗೆ ಬಂದ್ರಾವಿಗೆ ನಾವು ಕಡ್ಡಾಯವಾಗಿ ಈ ಪರೀಕ್ಷಾ ಮಾಡ್ತೇವಿ, ಎಲ್ಲಾರಿಗೂ ಒಳ್ಳೇದ ಆಗಲೆಂತ. ನಾಳೆ ಡಿಚಾರ್ಜ ಮಾಡ್ತೇವಿ ಕರಕೊಂಡ ಹೋಗ್ರಿ ಅಂದಾಗ ಪಂಚಾಯ್ತಿ ಮಂದೀಗೂ, ಊರವರಿಗೂ, ಸಾಹೇಬರ ಕುಟುಂಬವರ್ಗದವರಿಗೂ ಸಮಾಧಾನವಾಯಿತು.

ಹ್ಯಾಂಗೂ ಪಂಚಾಯ್ತಿ ಕಟ್ಟಡ ಕಾಮಗಾರಿ ಚಾಲೂ ಆಯ್ತು. ಎಂಜನೀಯರ್ ಸಾಹೇಬರು ಆರಾಮವಾಗಿ ಬಂದಿದ್ದರು. ಕಟ್ಟಡಕ್ಕೆ ಬೇಕಾದ ಕಲ್ಲು, ಸಿಮೆಂಟು, ಉಸುಕು, ಕಬ್ಬಿಣ ಎಲ್ಲಾ ಮೊದಲೇ ಸಂಗ್ರಹಿಸಿಟ್ಟುಕೊಂಡಿದ್ದರು. ಆಳುಗಳಿಗೆ ಬರ ಇರಲಿಲ್ಲ. ಕೊರೊನಾ ಕಣ್ಣಿಗೆ ಕಾಣದ ವೈರಸ್ಸಿನಿಂದ ಜನತೆಯನ್ನು ಕಾಪಾಡಬೇಕೆಂದು ಸರಕಾರ ಲಾಕ್ ಡೌನ್ ಹೇರಿದ್ದರಿಂದ ಉಡುಪಿ, ಮಂಗಳೂರು, ಗೋವಾ ಕಡೆಗೆ ದುಡಿಯಲಿಕ್ಕೆ ಹೋಗಿದ್ದ ಕೂಲಿಕಾರರು ಈಗ ಊರಿಗೆ ಬಂದಿದ್ದರು. ಅವರಿಗೂ ಉದ್ಯೋಗ ಬೇಕಿತ್ತು.

ಕಟ್ಟಡ ಕಾಮಗಾರಿಯಲ್ಲಿ ಕೂಲಿಗಳನ್ನು ಸೇರಿಸಿ ಕೆಲಸ ಸಾಂಗವಾಗಿ ನಡೆದಿತ್ತು. ಹೀಗಿರುವಾಗ ಮತ್ತೊಂದು ಘಟನೆ ಜರುಗಿ ಹೋಯಿತು. ಪಂಚಾಯ್ತಿ ಕಟ್ಟಡ ಕಾಮಗಾರಿ ಕೆಲಸಕ್ಕೆ ಬಂದ ಕಡೆಮನಿ ಕಲ್ಲಪ್ಪನಿಗೂ, ಊರಲ್ಲಿ ಹೂ ಮಾರುವ ಹೂಗಾರ ಹುಚ್ಚಪ್ಪನಿಗೂ ಪಂಚಾಯ್ತಿ ಅರೆ ಕಟ್ಟಡದ ಮುಂದೆ ಮಾರಾಮಾರಿ ಚಾಲೂ ಆಗಿ, ಪೊಲೀಸ ಸ್ಟೇಶನ್ ಕಟ್ಟೆ ಹತ್ತುವರೆಗೂ ಹೋಯಿತು.

ಗೋವಾಕ್ಕೆ ದುಡಿಯಲಿಕ್ಕೆ ಹೋಗಿದ್ದ ಕಡೆಮನಿ ಕಲ್ಲಪ್ಪನ ಫ್ಯಾಮಿಲಿ ಅಲ್ಲಿ ಕೊವಿಡ್ ಹತ್ತೊಂಬತ್ತು ಕೊರೊನಾ ವೈರಸ್ಸು ರೋಗ ವ್ಯಾಪಕ ಪಡೆದುಕೊಂಡಂತೆ “ಸತ್ತರೆ ಊರಲ್ಲಿಯೇ ಸಾಯಬೇಕು, ಬದುಕಿದರೆ ಊರಲ್ಲಿಯೇ ಬದುಕಬೇಕು” ಎಂದು ತೀರ್ಮಾನ ಮಾಡಿ ರೈಲು, ಬಸ್ಸು ಬಂದ್ ಇದ್ದ ಕಾರಣ ನಡೆದುಕೊಂಡೇ ಬಂದು ಊರು ಸೇರಿದ್ದರು. ಉಗಾದಿ ಆಗಿ ವಾರಪ್ಪೊತ್ತಿಗೆ ಬಂದ ಈ ಕುಟುಂಬಕ್ಕೆ ಆಸರೆಯಾದುದು ಈ ಪಂಚಾಯ್ತಿ ಕಟ್ಟಡ ಕಾಮಗಾರಿ. ಅವರು ಊರಿಗೆ ಬರುವುದಕ್ಕೂ, ಇಲ್ಲಿ ಪಂಚಾಯ್ತಿ ಕಟ್ಟಡ ಚಾಲೂ ಆಗುವುದಕ್ಕೂ ಸರಿಹೋಯಿತು. ತಂದೆ ಕಲ್ಲಪ್ಪನೊಂದಿಗೆ ಮಗಳು ಕಲಾವತಿಯೂ ಪಂಚಾಯ್ತಿ ಕಟ್ಟಡ ಕಾಮಗಾರಿಗೆ ಸೇರಿಕೊಂಡಿದ್ದಳು. ಪರ ಊರಿಗೆ ದುಡಿಯಲಿಕ್ಕೆ ಹೋಗಿದ್ದ ಅದೆಷ್ಟೋ ಕುಟುಂಬಗಳು ಈಗ ಊರು ಸೇರಿದ್ದವು.

ಬೆಂಗಳೂರು, ಹೈದ್ರಾಬಾದ ಐಟಿ ಬಿಟಿಯಲ್ಲಿ ಕೆಲಸ ಮಾಡುತ್ತಿದ್ದ ಯುವ ಎಂಜಿನೀಯರಗಳು ವರ್ಕ ಫ್ರಮ್ ಹೋಮ್‌ದಂತೆ ಮನೆಯಲ್ಲಿಯೇ ಕೆಲಸ ಚಾಲೂ ಇಟ್ಟುಕೊಂಡಿದ್ದರು, ಊರಲ್ಲಿ ನೆಟ್ಟವರ್ಕ ಸರಿ ಇಲ್ಲದೇ ಕೆಲವರು ಸಿಟಿಯಲ್ಲಿರುವ ತಮ್ಮ ಬಂಧುಗಳ ಮನೆಗೆ ಹೋಗಿದ್ದರು. ಇನ್ನು ಕೆಲವರು ಮಾಳಿಗೆ ಹತ್ತುವುದು, ಇಳಿಯುವುದು ಮಾಡುತ್ತಿದ್ದರು. ಎಲ್ಲ ಕೆಲಸವನ್ನು ಕಂಪ್ಯೂಟರ, ಲ್ಯಾಪಟಾಪ್ ದಲ್ಲಿ ಮಾಡಲು ಸಾಧ್ಯವಿಲ್ಲದವರು ಸುಮ್ಮನೆ ಕೂಡ್ರುವದ ಬಿಟ್ಟು ಫಬ್ಜಿಯಲ್ಲಿ ತೇಲಿ, ಮುಳುಗಿ ಕೊನೆಗೆ ತಲೆಕೆಟ್ಟು ಪಂಚಾಯ್ತಿ ಕಾಮಗಾರಿಗೆ ಸೇರಿದ್ದರು. ಹೀಗೆ ಕಾಮಗಾರಿಗೆ ಸೇರಿದವರಲ್ಲಿ ಹೂಗಾರ ಹುಚ್ಚಪ್ಪನ ಮಗ ಶಂಕರನು ಒಬ್ಬ. ನೋಡಲು ಕಣ್ಣು ಮೂಗಿನಿಂದ ಚೆಂದವಿದ್ದ ಶಂಕರನು ಗುಣದಲ್ಲಿ ಕಾಳು ಹಾಕುವ ಸ್ವಭಾವದವನಾಗಿದ್ದನು.

ಹೀಗಾಗಿ ಪಂಚಾಯ್ತಿ ಕಾಮಗಾರಿಯಲ್ಲಿ ಜೊತೆಯಾದ ಕಲಾವತಿಯನ್ನು ತನ್ನ ಮೋಡಿಯಿಂದ ಬುಟ್ಟಿಯಲ್ಲಿ ಹಾಕಿಕೊಂಡನು. ಪಾಪ ಗೋವಾದಲ್ಲಿರುವಾಗಲೇ ಅವಳಿಗೊಂದು ಮದುವೆಯಾಗಿತ್ತು. ಗಂಡ ಕುಡಿದು ಕುಡಿದು ಸ್ವರ್ಗ ಸೇರಿದ್ದ. ಮಕ್ಕಳಾಗಿರಲಿಲ್ಲ. ಹೀಗಾಗಿ ಅನ್ನ ಹಳಸುವುದಕ್ಕೂ ನಾಯಿ ಹಸಿಯುವದಕ್ಕೂ ಸರಿಯಾಗಿ ಶಂಕರನೊಂದಿಗೆ ಕಲಾವತಿ ಕೂಡಿದಳು. ಲಾಕ್ ಡೌನು ಸಡಿಲಾಗಿ ಪರರಾಜ್ಯಗಳಿಗೆ ಹೋಗಿ ಬರಬಹುದೆಂದು ಸರಕಾರ ನಿಯಮ ಸಡಿಲಿಸಿದಾಗ ರಾತ್ರೋ ರಾತ್ರಿ ಕಲಾವತಿ ಮತ್ತು ಶಂಕರ ಊರುಬಿಟ್ಟು ಗೋವಾ ಸೇರಿದ್ದರು.

ಈ ಕಾರಣಕ್ಕಾಗಿ ಪಂಚಾಯ್ತಿ ಕಟ್ಟಡ ಕಾಮಗಾರಿ ಮುಂದೆ ಕಲಾವತಿ ಅಪ್ಪನಿಗೂ, ಶಂಕರನ ಅಪ್ಪನಿಗೂ ಒಂದು ಸಣ್ಣ ಯುದ್ಧವೇ ಪ್ರಾರಂಭವಾಗಿತ್ತು. ಇಬ್ಬರಿಗೂ ಜೋರಾಗಿ ಬಾಯಿ ಆಗಿ, ಕೊನೆಗೆ ಕೈ ಕೈ ಮಿಸಲಾಯಿಸಿದರು. ಒಬ್ಬರನ್ನೊಬ್ಬರು ಎತ್ತಿ ಒಗೆಯಲು ಆರಂಭಿಸಿದರು. ಛೇರ್ಮನ್ನರು ಹರೆದ ಹುಡುಗರಿಗೆ ಹೇಳಿ ಇಬ್ಬರನ್ನು ಹಿಡಿದಿಟ್ಟುಕೊಂಡು ಸಿಟಿಯಿಂದ ಪೊಲೀಸರು ಬರುವವರೆಗೂ ಕಾದು, ಪೊಲೀಸರಿಗೆ ಒಪ್ಪಿಸಿದರು. ಪೊಲೀಸ ಜೀಪು ಊರಿಗೆ ಬಂದಾಗ ಪಿ.ಎಸ್.ಐ. ಬೈದುಕೊಂಡೆ ಊರ ಪ್ರವೇಶಿಸಿದರು. ‘ಈ ಕೊರೊನಾ ಒಂದ ಕಾಡಾಕ ಹತ್ತೈತಿ, ಪಾಸಿಟಿವ್ ಬಂದ ನಮ್ಮ ಪೊಲೀಸರು ಮನಿ ಸರ‍್ಯಾರ. ಇಲ್ಲಿ ನೋಡಿದರ ಓಡಿಸಿಕೊಂಡ ಹೊಂಟಾರ’, ಎನ್ನುತ್ತಾ ‘ಎಲ್ಲಿ ಅದಾರು ಬಡಿದಾಡಿದವರು’ ಎಂದು ಇಬ್ಬರನ್ನೂ ಜೀಪಿನಲ್ಲಿ ತುರುಕಿಕೊಂಡು ಸಿಟಿಗೆ ಹೋದರು. ಜನ ಇದೊಳ್ಳೆ ಪಂಚಾಯ್ತಿ ಆಯ್ತಲ್ಲಾ ಅಂತಾ ಮನೆ ಸೇರಿದರು.

ಇದು ಇಷ್ಟಕ್ಕೆ ಮುಗಿದಿರಲಿಲ್ಲ, ತಿಂಗಳೊಪ್ಪತ್ತು ಹೋಗಿತ್ತು , ಮತ್ತೊಂದು ರಾದ್ಧಾಂತ ಶುರುವಾಯ್ತು. ಆರೇರ ಓಣಿಯಿಂದ ಫುಲಾಬಾಯಿ ತನ್ನ ಕೂದಲು ಬಿಚ್ಚಿಕೊಂಡು ಅಕರಾಳ ವಿಕರಾಳ ತರ‍್ಯಾಡುತ್ತಾ ಪಂಚಾಯ್ತಿ ಕಟ್ಟಡ ಕಾಮಗಾರಿ ಕಡೆಗೆ ಬಂದ್ಲು, ಆಕೀ ಹಿಂದಿಂದ ಜನ ಜಾತ್ರಿ ಓಡೋಡಿ ಬಂತು, ಸಾಮಾಜಿಕ ಅಂತರ ಮರೆತಿದ್ದರು, ‘ಎಲ್ಲಿ ಅದಾನ ಬಸ್ಯಾ ಅವಾ..ನನ್ನ ಮರತ ಕುತ್ತಾನೇನು’ ಎಂದು ಚೀರುತ್ತಾ ಬಂದಾಗ, ಬಾಳುಕು ದಡಬಡಿಸಿ ‘ಛೇರ್ಮನ್ನರ ಎಲ್ಲಿ ಅದಿರಿ ದೌಡ ರ‍್ರೀ..’ ಅಂದಾ, ಪೂಜೆಕ ಬರಲಾಕ ಮಡಿ ಬಟ್ಟಿ ತೊಟಗೊಂಡ ಬರಬೇಕಂತ ಟಿ.ವಿ.ಯೊಳಗಿನ ಬ್ರೇಕಿಂಗ ನ್ಯೂಜ್ ನೋಡಕೋತ ತಯ್ಯಾರ ಆಗಾಕ ಹತ್ತಿದ್ದ, ಬಾಳುಕುನ ಫೋನ ಬರಾನ ಗಾಡಿ ಚಾಲು ಮಾಡಿಕೊಂಡು ಓಡಿ ಬಂದ್ರು.

ಅರೆ ಕಟ್ಟಡದ ಮುಂದೆ ಫುಲಾಬಾಯಿ ಚೀರಾಟ ಹಾರಾಟ ಜೋರಾಗಿತ್ತು. ‘ಮೈಯಲ್ಲಿ ದೆವ್ವ ಬಂದಿದೆ’ ಎಂದು ಕೆಲವರು, ‘ಇಲ್ಲಾ ಮೈಯಲ್ಲಿ ಲಕ್ಕವ್ವಾ ಬಂದಾಳ’ ಎಂದು ಕೆಲವರು ಮಾತನಾಡಿಕೊಳ್ಳತೊಡಗಿದರು. ಆದರೆ ಊರಲ್ಲಿ ಗೌರವಾನ್ವಿತ ಹುದ್ದೆಯಲ್ಲಿದ್ದ ಛೇರ್ಮನ್ನ ಬಸವರಾಜಪ್ಪನನ್ನು ಹೀಗೆ ದೆವ್ವ ಬಡಿದಾಕೆ “ಬಸ್ಯಾ..” ಎಂದು ಕರೆದಿದ್ದು ನೆರೆದ ಜನಕ್ಕೆ ಆಶ್ರ‍್ಯ ಮೂಡಿಸಿತು. ಇವತ್ತು ಕಟ್ಟಡಕ್ಕೆ ಬಾಗಿಲು ಹಚ್ಚುವ ಸುಮುಹೋರ್ತ. ಸ್ವಾಮಿಗಳನ್ನು ಬಿಟ್ಟು ಭಡಜಿ ಅವರನ್ನು ಪೂಜೆಗೆ ಕರೆಸಿದ್ದರು.

ಭಡಜಿ ಅವರು ಬಾಗಿಲು ನಿಲ್ಲಿಸಿ ಹೂ ಹಾರ ಹಾಕಿ ಪೂಜೆ ಮಾಡಬೇಕೆಂದು “ವಕ್ರ ತುಂಡ ಮಾ ಕಾಯ..” ಎಂದು ಮಂತ್ರ ಚಾಲೂ ಮಾಡೋ ಹೊತ್ತಿಗೆ ದೆವ್ವಗಾಳಿಯಂತೆ ಬಂದ ಫುಲಾಬಾಯಿ “ನನ್ನ ತುಂಡ ತುಂಡ ಮಾಡಿರಿ” ಎಂದು ಚೀರಿಕೊಳ್ಳತೊಡಗಿದಳು. ಅಲ್ಲಿಯೇ ಹಾಜರಿದ್ದ ಛೇರ್ಮನ್ ಬಸವರಾಜಪ್ಪ, ಪಿ.ಡಿ.ಓ.ಮಾಂತೇಶ, ಎಂಜನೀಯರ್ ಸಾಹೇಬರು ಗಾಬರಿ ಬಿದ್ದು ಏನಾಗುತ್ತಿದೆ ಎಂದು ಫುಲಾಬಾಯಿಯನ್ನು ಹಿಡಿಯಲು ಹೇಳಿದರು. ಕೆಲಸಕ್ಕೆ ಬಂದಿದ್ದ ಮಹಿಳೆಯರಿಬ್ಬರು ಗಟ್ಟಿಯಾಗಿ ಎರಡೂ ತೋಳಗಳನ್ನು ಹಿಡಿದುಕೊಂಡರು.

ಫುಲಾಬಾಯಿ ಕೊಸರಾಟ ಇನ್ನೂ ಜೋರಾಯಿತು.”ನನ್ನ…ತಲ ಎಡ್ಡ ತುಂಡ ಮಾಡಿರಿ ತಲಾಂತರದಿಂದ ಪೂಜೆಗೊಂಡಿನಿ..” ಎಂದಾಗ ಗಟ್ಟಿಯಾಗಿ ಹಿಡಿದ ಮಹಿಳೆಯರು.” ತಾಯಿ ನಮ್ಮವ್ವ ನಮ್ಮದ ತಪ್ಪ ಆಗೇತಿ , ನೀ ಬಂದಾಕಿ ಯಾರ ಹೇಳ, ನಾವು ಮಾಡಿದ ತಪ್ಪರ ಹೇಳ..” ಎಂದರು. ಪೂಜೆಕ ತಂದಿದ್ದ ಕುಂಕುಮ, ಅರಿಷಿಣ ಫುಲಾಬಾಯಿ ಹಣಿಗಿ ಬಡಿದರು. ತಂದಿದ್ದ ಟೆಂಗಿನಕಾಯಿ ಅವಳ ಕಾಲ ಬಳಿ ಒಡೆದರು, ಯಾರ ಲಿಂಬಿಕಾಯಿಗಳನ್ನು ಕತ್ತರಿಸಿ ಕತ್ತರಿಸಿ ಹೊಗೆದರು.

‘ಬಸ್ಯಾನ ಕರಿ ಇಲ್ಲಿ ನನ್ನ ಕಾಲ ಮುಗಿ ಅಂತಾ ಹೇಳು, ನಾನು ಅವರ ಮನಿ ಲಕ್ಷ್ಮಿ ಅದೀನಿ” ಎಂದಾಗ ‘ಹೇಳು ಎಲ್ಲಾ ಏನ ತಪ್ಪಾಗೈತಿ ನನ್ನದು.’ ಎಂದು ಕಾಲು ಹಿಡಿದಾ. ಈ ಸನ್ನಿವೇಶ ವಿಚಿತ್ರವೆನಿಸಿದರೂ ಮೈ ಮೇಲೆ ದೇವರು ಬಂದ ಫುಲಾಬಾಯಿ ಸಾಕ್ಷಾತ್ ದೇವರೇ ಆಗಿದ್ದಳು.” ಹೇಳವ್ವಾ ತಾಯಿ ಹೇಳ ನಂದೇನ ತಪ್ಪಾಗೇತಿ” ಅಂದಾಗ, ದೇವರು – ” ನೀನು ಮನಿ ಕೆಡವಿ ಕಟ್ಟಾಕ ಚಾಲೂ ಮಾಡಿಯಲ್ಲಾ”
“ಹೌದ ಏನಾತು ?”,
“ಏನಾತು ! ಅಲ್ಲಿ ಕಲ್ಲ ಎಲ್ಲಾ ಏನ ಮಾಡಿದಿ “
“ಇಲ್ಲಿ ಪಂಚಾಯ್ತಿ ಕಟ್ಟಡ ಕಾಮಗಾರಿಗಿ ಕೊಟ್ಟಿನಿ, ದುಡ್ಡು ತುಗೊಂಡಿಲ್ಲಾ, ದುಗ್ಗಾಣಿ ತುಗೊಂಡಿಲ್ಲಾ ಹಾಂಗ ಕೊಟ್ಟೀನಿ”
“ಅದಲ್ಲಾ ನಾ ಹೇಳೊದು, ಅದರಾಗ ನಾ ಅದೀನಿ,ನನ್ನ ಎಡ್ಡ ತುಂಡ ಮ್ಯಾಡ್ಯಾರ “
“ಏನ ಹೇಳ್ತಿ, ಲಕ್ಕವ್ವಾ ,ನೀ ಬಿಡಿಸಿ ಹೇಳು”

” ನಾನು ನಿಮ್ಮ ಹಳೆಮನಿ ಗ್ವಾಡಿಯೊಳಗ ತಲಾ ತಲಾಂತರದಿಂದ ಇದ್ನಿ. ನಿಮ್ಮ ಅಪ್ಪ, ಅಜ್ಜ, ಮುತ್ತಜ್ಜರ ನನ್ನ ಪೂಜಾ ಮಾಡತಿದ್ದರು, ನೀನು ಮನಿ ಕೆಡವಿ ಎಲ್ಲಾ ಕಲ್ಲ ಇಲ್ಲಿ ಕೊಟ್ಟಿ, ಗ್ವಾಡಿ ಕಟ್ಟಾಕ ಇಲ್ಲಿ ನನ್ನ ಎಡ್ಡ ತುಂಡ ಮಾಡಿ ಒಗದಾರ ನೋಡ” ಎಂದು ಕುಣಿಯ ತೊಡಗಿದಳು.
ಬಸವರಾಜಪ್ಪ ಗಾಬರಿಯಾಗಿ, “ಕಲ್ಲ ಎಲ್ಲಿ ಐತಿ ನೋಡ್ರಿ,ಹುಡುಕ್ರಿ,” ಎಂದರು. ಎಣ್ಣಿ ಹಚ್ಚಿದ ಕಲ್ಲನ್ನು ತುಂಡು ಮಾಡಿ ಒಗೆದಿದ್ದ ಸಿದ್ದುಗೌಂಡಿ ಹೌಹಾರಿ ಓಡಿ ಹ್ವಾದ.

ಒಂದ ಸವನ ಹುಡುಕಾಕ ಶುರು ಮಾಡಿದ, ಇವನ ಜೋಡಿ ಕೆಲಸದ ಮಂದಿಯು ಸೇರಿಕೊಂಡರು, ಕಡೆಗೆ ಸಿದ್ದು ಗೌಂಡಿ ತುಂಡಾದ ಎರಡು ಕಲ್ಲ ಹಿಡಿಕೊಂಡ ಬಂದಾ. ಹಳೆಕಾಲದ ಕಲ್ಲಿಗಿ ಕುಂಕಮ ಅರಿಷಿಣ ಬಡಿದಿದ್ದ ಇನ್ನಾ ಕಾಣತಿತ್ತು, ಆದ್ರ ಇದರ ಹಕೀಕತ ಏನೂ ಗೊತ್ತಿಲ್ಲದ ಸಿದ್ದು ಗ್ವಾಡಿ ಕಟ್ಟಾಕ ತುಂಡ ಮಾಡಿ ಒಗೆದಿದ್ದ. ಸಿದ್ದು ಕಲ್ಲ ಎತಗೊಂಡ ಬಂದಾಗ ಊರ ಜನಕ್ಕ ಗಾಬರಿಯಾಯಿತು. ಖರೇನ ತದಲಬಾಗಿ ಲಕ್ಕವ್ವ ಮೈ ಮ್ಯಾಲ ಬಂದಾಳ ಎಂದು ಫುಲಾಬಾಯಿ ಕಾಲ ಮ್ಯಾಲ ಬಿದ್ದು ನಮಸ್ಕರಿಸಿದರು. ಯರ‍್ಯಾರೋ ಏನೇನೋ ಬೇಡಿಕೊಂಡರು. ಮತ್ತ ಲಕ್ಕವ್ವ ದೇವ್ರು ಚೀರಿ ಹೇಳಿದಳು.

“ಇನ್ನಾ ಮುಗಿದಿಲ್ಲ, ನನಗ ಶಾಂತಿಯಾಗಬೇಕು.” ಎಂದಳು.
“ಹೇಳವ್ವಾ ನೀ ಹೇಳಿದ್ದ ಮಾಡತೇವಿ” ಅಂದಾ ಬಸವರಾಜಪ್ಪಾ.
“ಹಿರಿ ಹೊಳಿಗಿ ಹೋಗಿ ಅಲ್ಲಿ ಮುಳುಗಿ ಮೊದಲ ಯಾವ ಕಲ್ಲ ಸಿಗತೈತಿ ಅದನ್ನ ತುಗೊಂಡ ಬರಬೇಕು, ಹಸಿ ಮೈಯಾಗ ಮನಿಗಿ ತಂದು ನನ್ನ ಪೂಜಿ ಮಾಡಬೇಕು. ಹೊಸಾ ಗ್ವಾಡ್ಯಾಗ ಸ್ಥಾಪಿಸಬೇಕು. ಇಳಕಲ್ಲ ಸೀರಿ, ಗುಳೆದಗುಡ್ಡ ಖಣ ತರಬೇಕ, ಬೆಳ್ಳಿ ಮೂರ್ತಿ ಮಾಡಿಸಬೇಕ, ಇವತ್ತು ಈ ಬಾಗಿಲಾ ಪೂಜಾ ಮಾಡಿ ಸಂಜೀಕ ನನ್ನ ಪೂಜಾ ಮಾಡಿ ಊರಿಗಿ ಊಟಾ ಹಾಕಸಬೇಕು, ಇಷ್ಟ ಮಾಡದಿದ್ರ ನಾ ಯಾರನ್ನೂ ಸುಮ್ಮನ ಬಿಡೊದಿಲ್ಲಾ” ಎಂದು ಚೀರತೊಡಗಿದಳು. ಬಸವರಾಜಪ್ಪ ಆಯ್ತು ಲಕ್ಕವ್ವಾಯಿ ನೀ ಹೇಳಿದಾಂಗ ಮಾಡ್ತೇವಿ” ಅಂದಾಗ ನಿಧಾನವಾಗಿ ಫುಲಾಬಾಯಿ ಮರಳಿ ಮನುಷ್ಯತ್ವಕ್ಕೆ ಬಂದಳು.

‘ನಾ ಇಲ್ಲಾö್ಯಕ ಅದೀನಿ, ನೀವೆಲ್ಲಾ ಯಾಕ ಇಲ್ಲಿ ಸೇರಿರಿ’ ಎಂದು ಗಾಬರಿಯಾಗಿ ಜನರನ್ನು ವಿಚಾರಿಸಿದಳು. ಜನರಲ್ಲಿ ಸೇರಿ ಹೋಗಿದ್ದ ಫುಲಾಬಾಯಿ ಸೊಸಿ ಓಡಿಬಂದು ತನ್ನ ಅತ್ತಿ ಮುಖಕ್ಕ ನೀರ ಚುಮುಕಿಸಿ, ಮನೆಗೆ ಕರೆದುಕೊಂಡು ಹೊರಟಳು. ಸೇರಿದ್ದ ಜನಾ “ಛೇರ್ಮನ್ನ ಮರೀಬ್ಯಾಡ, ಎಲ್ಲಾ ಪೂಜೆ ಮಾಡಿ ,ಮೊದಲ ನಿಮ್ಮ ಮನಿ ದೇವರನ್ನ ಮನಿಗೆ ಕರಕೋ” ಎಂದು ಹೇಳಿ ಜನಾ ಚದುರಿದರು. ಪಂಚಾಯ್ತಿ ಕಟ್ಟಡ ಎಲ್ಲಾ ಬಾಗಿಲು ನಿಲ್ಲಿಸಿ ಭಡಜಿ ಪೂಜೆ ಮಾಡಿ ಮುಗಿಸಿದಾಗ ಗೌಂಡೇರು ತಮ್ಮ ಕಟ್ಟು ಕೆಲಸಾ ಚಾಲೂ ಮಾಡಿದರು, ಬಸವರಾಜಪ್ಪ ಮಂದೀನ ಕರಕೊಂಡ ಹಿರಿಹೊಳಿಗಿ ಹ್ವಾದ.

ಇದಾಗಿ ಎರಡು ದಿನಾ ಕಳೆದಿತ್ತು, ಛೇರ್ಮನ್ನರ ಮನೆಯಲ್ಲಿ ಪೂಜೆ ಸಾಂಗವಾಗಿ ನಡೆದು ಮನಿ ಗ್ವಾಡಿಮ್ಯಾಲ ಹೊಸಾ ಲಕ್ಷ್ಮಿ ಸ್ಥಾಪಿತಳಾಗಿದ್ದಳು. ಪೂಜೆಕ ತಂದ ಸೀರಿ, ಕುಪ್ಪುಸಾ ಫುಲಾಬಾಯಿಗಿ ಒಪ್ಪಿಸಾಕ ಬಸವರಾಜಪ್ಪಾ ಬಾಳುಕುನ ಕಳಿಸಿದ್ದಾ. ಬಾಳುಕು ಫುಲಾಬಾಯಿ ಮನಿಗಿ ಹೋಗಿ ಒಪ್ಪಿಸಿದ. ಮಾತಿನ್ಯಾಗ ಚಾಲೂ ಇದ್ದ ಬಾಳುಕು ಫುಲಾಬಾಯಿಗಿ ರಂಬಿಸಿ ಕೇಳಿದಾ ” ಎವ್ವಬೇ ಖರೇ ಹೇಳ, ನಿನಗ ಹ್ಯಾಂಗ ಗೊತ್ತಾತು, ಗ್ವಾಡ್ಯಾನ ಕಲ್ಲ ತುಂಡ ಮಾಡಿ ಒಗೆದದ್ದು,” ಎಂದು ಕುತೂಹಲದಿಂದ ಮತ್ತು ಅಂಜಿಕೆಯಿಂದಲೇ ಕೇಳಿದಾ, ಎಲ್ಲಿ ಮತ್ತ ದೇವರು ಎದ್ದಿತು ಎಂದು.

ಫುಲಾಬಾಯಿ ನಕ್ಕೋತ ‘ನೀ ಬಾಳುಕು ಅಲ್ಲ ಬಾಡುಕೂ ಅದೀ ನೋಡ, ಯಾರ ಮುಂದು ಹೇಳಬ್ಯಾಡ, ನಿನ್ನ ಹೊಟ್ಯಾಗ ಇರಲಿ, ತಿಳಕೋ, ನನಗೇನು ಗೊತ್ತಾಗಬೇಕು, ಬಸವರಾಜಪ್ಪನ ಅಜ್ಜಿ ಅದಾಳ ನೋಡ ಆಕಿ ನನಗ ಅತ್ತು ಕರೆದು ಹೇಳಿದ್ದಳು, ಗ್ವಾಡಿ ಲಕ್ಕವ್ವ ಹ್ವಾದಳು ಅಂತಾ. ಬಸವರಾಪ್ಪ ನಾ ಹೇಳಿದರ ಕೇಳಾಂಗಿಲ್ಲಾ ನೀನ ಹ್ಯಾಂಗರ ಹೇಳು ಅಂದಿದ್ದಳು,ಅದಕ್ಕ ನಾ ರಂಪಾಟ ಮಾಡಬೇಕಾತ ನೋಡ.” ಅಂದಳು.” ಬಾಳುಕು ಮತ್ತ ಮರಿಬ್ಯಾಡಾ, ಗುಟ್ಟಿನ ಮಾತ ಹೊಟ್ಯಾಗ ಇರಲಿ ಎಂದಳು. ಬಾಳುಕು ಅದನ್ನು ಶಿರಸ್ಸಾವಹಿಸಿ ಪಾಲಿಸಿದ.

ಮತ್ತ ಪಂಚಾಯ್ತಿ ಕಟ್ಟಡ ಕಾಮಗಾರಿ ಚಾಲೂ ಆಯ್ತು. ಕಡೇಮನಿ ಕಲ್ಲಪ್ಪನೂ ಹೂಗಾರ ಹುಚ್ಚಪ್ಪನೂ ಈಗ ಬೀಗರಾಗಿದ್ದರು. ರಾಜಿ ಮಾಡಿಸಿದ ಪೊಲೀಸರು ಅಷ್ಟಿಷ್ಟು ಹೀರಿಕೊಂಡು ಬುದ್ದಿವಾದ ಹೇಳಿ ಊರಿಗೆ ಕಳಿಸಿದ್ದರು. ಗೋವಾಕ್ಕೆ ತೆರಳಿದ್ದ ಪ್ರೇಮಿಗಳು ಮಂಗೇಶಗುಡಿಯಲ್ಲಿ ಮದುವೆಯಾಗಿ ಅಲ್ಲಿಯೇ ಕೆಲಸಕ್ಕೆ ಸೇರಿ ಆರಾಮವಾಗಿದ್ದರು. ದೀಪಾವಳಿ ಆದ ಎರಡ ದಿನಕ್ಕ ಸ್ಲಾö್ಯಬ್ ಹಾಕಾಕ ಛಲೋ ಮುಹೋರ್ತ ಐತಿ ಆವತ್ತ ಪಂಚಾಯ್ತಿ ಕಟ್ಟಡದ ಸ್ಲ್ಯಾಬ್ ಹಾಕುವ ತೀರ್ಮಾನವಾಗಿತ್ತು. ಮುಂದಿನ ಉಗಾದಿಗೆ ಜಿಲ್ಲಾ ಮಂತ್ರಿ ಕರೆಸಿ ಉದ್ಘಾಟಿಸುವ ತೀರ್ಮಾನವೂ ಆಗಿತ್ತು. ಹೀಗಿರಲಾಗಿ ಬರಸಿಡಿಲಿನಂತೆ ಮತ್ತೊಂದು ವಾರ್ತೆ ಛೇರ್ಮನ್ನರಿಗೆ ಬಂದೆರಗಿತು.

ಸಿಟಿಗೆ ಡಿ.ಸಿ. ಮೀಟಿಂಗಗೆ ಹೋಗಿದ್ದ ಪಿ.ಡಿ.ಓ. ಸಾಹೇಬರು ಅಲ್ಲಿದಂಲೇ ವಾಟ್ಸಾಫ್ ದಲ್ಲಿ ಡಿ.ಸಿ. ಆದೇಶದ ಒಂದು ಪತ್ರ ಕಳಿಸಿದ್ದರು, ಅದರಲ್ಲಿ ಹೀಗೆ ಬರೆದಿತ್ತು. ‘ಸದರಿ ನಿಮ್ಮ ಊರ ಭಾಜು ಬಾಗಲಕೋಟ -ಕುಡಚಿ ರೈಲು ಹಳಿ ಕೆಲಸ ನಡೆಯಲಿದ್ದು, ಹೊಸ ಯೋಜನೆಯಂತೆ ನಿಮ್ಮ ಊರಲ್ಲಿ ಸಣ್ಣ ರೈಲು ನಿಲ್ದಾಣ ಕಟ್ಟಬೇಕಾಗಿದ್ದು ಈ ಕೆಳಗೆ ಸೂಚಿಸಿದ ಜಾಗದಲ್ಲಿ ಯಾರಾದರು ಕಟ್ಟಡ ಕಟ್ಟುವದಾಗಲಿ, ಕೃಷಿ ಚಟುವಟಿಕೆ ಮಾಡುವದಾಗಲಿ ನಿಲ್ಲಿಸಬೇಕು,” ಎಂದು ಬರೆದಿತ್ತು, ಪತ್ರದಲ್ಲಿ ಕಾಣಿಸಿದ ಜಾಗೆಯಲ್ಲಿಯೇ ಪಂಚಾಯ್ತಿ ಕಟ್ಟಡ ಕಾಮಾಗಾರಿ ನಡೆದಿತ್ತು, ಈಗ ಸರಕಾರದ ಆದೇಶದಂತೆ ಕಾಮಗಾರಿ ಕೆಲಸ ನಿಂತಿತು, ‘ನಾಳೆಯಿಂದ ಯಾರೂ ಕೆಲಸಕ್ಕೆ ಬರಬೇಡಿ’ ಎಂದು ಎಂಜಿನೀಯರ್ ಸಾಹೇಬರು ದಯನೀವಾಗಿ ಹೇಳಿದರು, ಇದೊಳ್ಳೆ ಪಂಚಾಯ್ತಿ ಆಯ್ತಲ್ಲ ಎಂದು ಜನ ಚದುರಿದರು.

‍ಲೇಖಕರು Admin

February 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಡಾ. ಪ್ರಕಾಶ ಗ ಖಾಡೆ

    ತಮಗೆ ಅನಂತ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: