ಡಾಗ್ ಡೆಂಟಿಸ್ಟ್ಸ್!…

ಪೂರ್ಣೇಶ್ ಮತ್ತಾವರ

“ಡಾಗ್ ಡೆಂಟಿಸ್ಟ್ಸ್!” ಈ ಹೆಸರು ಕೇಳಿದೊಡನೆ ನೀವು “ಇದೇನಿರಬಹುದು!?” ಎಂದು ತೀರಾ ಗೊಂದಲಕ್ಕೆ ಒಳಗಾಗಬಹುದು. ಅದಕ್ಕೆಂದೇ ಡಾಗ್‌ ಡೆಂಟಿಸ್ಟ್ಸ್ ನ ಅರ್ಥವನ್ನು ಮೊದಲೇ ತೀರಾ ಸರಳವಾಗಿ ವಿವರಿಸಿ ಬಿಡುತ್ತೇನೆ.

ನಾವು ಈ ಮನುಷ್ಯರ ‘ಹಲ್ಕಟ್ಟು’ವ ಡಾಕ್ಟರುಗಳನ್ನು ಡೆಂಟಿಸ್ಟ್ಸ್ ಗಳೆಂದು ಕರೆಯುತ್ತೇವಲ್ಲವೇ! ಹಾಗೆಯೇ ನಾಯಿಯೊಂದರ ‘ಹಲ್ಕಿತ್ತ’ ಮಹನೀಯರೇ ಈ ಡಾಗ್ ಡೆಂಟಿಸ್ಟ್ಸ್ ಗಳು!

“ಅರೇ, ನಾಯಿಯೊಂದರ ಹಲ್ಲು ಕೀಳುವುದಾ!?” ಎಂದು ನೀವು ಮತ್ತೆ ಗಲಿಬಿಲಿಗೊಳ್ಳಬಹುದು. ಹೌದು, ಇಲ್ಲಿ ಕಿತ್ತದ್ದು ನಾಯಿಯ ಹಲ್ಲುಗಳನ್ನೇ! ಅದೂ ಸತ್ತು ಬಿದ್ದಿದ್ದ ನಾಯಿಯೊಂದರ ಹಲ್ಲುಗಳನ್ನು!

ಪ್ರಾಯಶಃ ಪ್ರಪಂಚದಲ್ಲೇ ಅತಿ ವಿರಳವಾಗಿರ ಬಹುದಾದ ಇಂತಹದೊಂದು ಸಾಹಸಕ್ಕೆ ಕೈಹಾಕಿದವರು ನಾವುಗಳೇ! ಆದರೆ, ಈ ಸಾಹಸದ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾದದ್ದು ಮಾತ್ರ ಇದಕ್ಕೆ ಪ್ರೇರಣೆ ನೀಡಿದ ನಮ್ಮ ವಿಜ್ಞಾನ ಗುರುಗಳಾಗಿದ್ದ ಶ್ರೀ ಶ್ರೀ ಆರ್.ಎಸ್.ಸುರೇಶ್ ಸರ್ ರವರಿಗೆ!

ಹೌದು, ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪಾಠ ಮಾಡುವ ಕಲೆಯನ್ನು ಕರಗತ ಮಾಡಿ ಕೊಂಡಿದ್ದ ಸುರೇಶ್ ಸರ್ ರ ಪ್ರೇರಣೆಗಳೆಂದರೆ ಹಾಗೆಯೇ.

“ಏ ಸುಚೀ, ಈ ಕೆಮಿಸ್ಟ್ರಿ ಅಂದರೆ ಕಬ್ಬಿಣದ ಕಡಲೆ ಕಣೇ..” ಎನ್ನುತ್ತಲೇ ಕೆಮಿಸ್ಟ್ರಿಯ ಪಾಠ ಶುರು ಮಾಡಿದರೆಂದರೆ ಪಾಠ ಮುಗಿಯುವ ವೇಳೆಗಾಗಲೇ ಕೆಮಿಸ್ಟ್ರಿಯಂತಹ ಕಬ್ಬಿಣದ ಕಡಲೆಯೂ ಕೂಡಾ ಯಾರೂ ಬೇಕಾದರೂ ಕಟಂ ಕಟಂ ಎಂದು ಅಗಿದು ತಿನ್ನ ಬಹುದಾದ, ತಿಂದು ಆನಂದಿಸ ಬಹುದಾದ, ಅರಗಿಸಿ ಕೊಳ್ಳ ಬಹುದಾದ ಹುರುಗಡಲೆಯೇ ಆಗಿ ಬಿಡುತಿತ್ತು.

ಅದೇನೋ ಮ್ಯಾಜಿಕ್ ಮಾಡುವವರಂತೆ ಮೆಗ್ನೀಷಿಯಂ ತಂತಿಗೆ ಬೆಂಕಿ ತಾಗಿಸಿ ಅದು ಕಣ್ಮನ ಸೆಳೆಯುವ ಬಿಳಿಯ ಬೆಳಕಿನೊಂದಿಗೆ ಹೊತ್ತಿ ಉರಿಯುತ್ತಲೇ ಉಳಿಯುತ್ತಿದ್ದ ಬೂದಿಯನ್ನು ತೋರಿಸಿ ಮೆಗ್ನೀಷಿಯಂ ಆಕ್ಸಿಜನ್ ಸೇರಿ ಮೆಗ್ನೀಸಿಯಂ ಆಕ್ಷೈಡ್ ಆಗುವಿಕೆಯನ್ನು ಸರಳವಾಗಿ ವಿವರಿಸುತ್ತಿದ್ದರು.

ಅಂತೆಯೇ ಪ್ರತಿಯೊಂದು ರಾಸಾಯನಿಕ ಕ್ರಿಯೆಗಳನ್ನೂ ಪ್ರಯೋಗಗಳ ಮೂಲಕವೇ ಅರ್ಥೈಸುತ್ತಿದ್ದರು. ಫಿಸಿಕ್ಸ್ ಆದರೂ ಅಷ್ಟೇ. ಲ್ಯಾಬ್ ಕೋಣೆಯನ್ನು ಮಬ್ಬುಗತ್ತಲಾಗಿಸಿ ಕ್ಯಾಂಡಲ್ ಹಚ್ಚಿ ದರ್ಪಣ, ಮಸೂರಗಳ ಮೂಲಕ ಪ್ರತಿಬಿಂಬಗಳನ್ನು ಮೂಡಿಸಿ ವಿವರಣೆ ನೀಡುತ್ತಿದ್ದರೆ ಬೆಳಕಿನ ನಿಯಮಗಳೆಲ್ಲಾ ಸರಳಾತಿಸರಳವಾಗಿ ತಲೆಯನ್ನು ಹೊಕ್ಕಿ ಬಿಡುತ್ತಿದ್ದವು.

ಇನ್ನೂ ಜೀವಶಾಸ್ತ್ರವನ್ನಂತೂ ಕೇಳುವುದೇ ಬೇಡ.

“ಏ ತೋಂಟಿ, ಸರಿಯಾಗಿ ನೋಡ್ಕೋಳೋ ಇಲ್ಲಿ..” ಎನ್ನುತ್ತಲೇ ಚಿತ್ರಗಳು, ಮಾದರಿಗಳು, ಸ್ಪೆಸಿಮನ್ ಗಳನ್ನು ತೋರಿಸುತ್ತಾ ಪಾಠ ಶುರು ಮಾಡಿದರೆಂದರೆ ತರಗತಿಯಲ್ಲಿ ಜೀವಂತಿಕೆ ತುಂಬಿ ಬಿಡುತ್ತಿದ್ದರು.

ಹೀಗೆಯೇ ನಾವು ಏಳನೇ ತರಗತಿಯಲ್ಲಿದ್ದಾಗ “ನಮ್ಮ ದೇಹದ ಭಾಗಗಳು” ಎಂಬ ಪಾಠವನ್ನು ಬೋಧಿಸಿದ್ದರು.

ಸಂಬಂಧಿಸಿದ ಚಿತ್ರಗಳು ಮಾದರಿಗಳನ್ನೆಲ್ಲಾ ತೋರಿಸುತ್ತಲೇ ದೇಹದ ಭಾಗಗಳು ಮತ್ತು ಅವುಗಳ ಕಾರ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದರು. ನಂತರ ನಮ್ಮನ್ನು ಲೈಬ್ರರಿಗೆ ಕರೆದುಕೊಂಡು ಹೋಗಿ ಸೈನ್ಸ್ ಮ್ಯಾಗಜೀನ್ ಗಳನ್ನು ಕೊಟ್ಟು ಅವುಗಳಲ್ಲಿನ ದೇಹದ ಭಾಗಗಳ ಕುರಿತಾದ ಲೇಖನಗಳನ್ನು ಓದಿಸಿದ್ದರು. ಅಲ್ಲದೇ ದೇಹದ ಭಾಗಗಳ ಕುರಿತಾದ ವೀಡಿಯೋ ಕ್ಯಾಸೆಟ್ ಒಂದನ್ನು ಹಾಕಿ ತೋರಿಸಿದ್ದರು.

ಸಾಲದೆಂಬಂತೆ ತನ್ನ ಶಿಷ್ಯರು ಈ ಬಗ್ಗೆ ಹೆಚ್ಚುವರಿ ಜ್ಞಾನವನ್ನು ಪಡೆಯಲೆಂದು ದೊಡ್ಡದಾದ ಕಪ್ಪೆಯೊಂದನ್ನು ಹಿಡಿದು ತಂದು ಅದರ ಡಿಸೆಕ್ಷನ್ ಮಾಡುತ್ತಾ ಹೃದಯ, ಶ್ವಾಸಕೋಶ, ರಕ್ತ ಪರಿಚಲನೆ ಇತ್ಯಾದಿ ಇತ್ಯಾದಿಗಳ ವಿವರಣೆಯನ್ನು ಮತ್ತೊಮ್ಮೆ ನೀಡಿದ್ದರು. ಅಷ್ಟೇ ಅಲ್ಲ, ತಾವು ಪ್ರಯೋಗ, ಚಟುವಟಿಕೆಗಳನ್ನು ಮಾಡುವುದಕ್ಕಿಂತಲೂ ವಿದ್ಯಾರ್ಥಿಗಳ ಕೈಲಿ ಮಾಡಿಸುವುದರಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ಅವರು ಹನ್ನೆರಡನೆಯ ತರಗತಿಯವರ ಬಯಾಲಜಿ ಪ್ರಾಕ್ಟಿಕಲ್ಸ್ ಗೆಂದು ತರಿಸುತ್ತಿದ್ದ ಬಿಳಿ ಇಲಿಗಳಲ್ಲಿ ನಮಗಾಗಿಯೇ ಒಂದನ್ನು ಹೆಚ್ಚುವರಿಯಾಗಿ ತರಿಸಿ ನಮ್ಮಿಂದಲೇ ಡಿಸೆಕ್ಷನ್ ಮಾಡಿಸಿ ಭಾಗಗಳನ್ನು ಗುರುತಿಸಲು ಹೇಳಿದ್ದರು.

ಇದೂ ಸಾಲದೆಂಬಂತೆ ಊರಿನಲ್ಲಿ ಕುರಿ, ಕೋಳಿಗಳನ್ನು ಕೊಯ್ಯುವಾಗ ಅವುಗಳ ದೇಹದ ಭಾಗಗಳನ್ನು ಸರಿಯಾಗಿ ಗಮನಿಸುವಂತೆಯೂ ಮುಂದುವರಿದು ಮಣಿಪಾಲಕ್ಕೆ ಹೋದರೆ ಅಲ್ಲಿ ಇಟ್ಟಿರುವ ಮನುಷ್ಯರ ದೇಹದ ಭಾಗಗಳ ಸ್ಪೆಸಿಮನ್ ಗಳನ್ನು ನೋಡುವಂತೆಯೂ ಸಲಹೆಯನ್ನು ನೀಡಿದ್ದರು.

ಸರಿ, ಅಲ್ಲಿಗೆ ಪಾಠ ಮುಗಿದಿರ ಬೇಕೆಂದು ನೀವು ಎಣಿಸ ಬಹುದು. ಆದರೆ, ಅವರು ಅಷ್ಟಕ್ಕೇ ಬಿಡುವವರಾಗಿರಲಿಲ್ಲ. ಪಾಠ ಮುಗಿದೊಡನೆ ಅದಕ್ಕೆ ಸಂಬಂಧಿಸಿದಂತೆ ಪ್ರಾಜೆಕ್ಟ್ ವರ್ಕ್ ಒಂದನ್ನು ಕಡ್ಡಾಯವಾಗಿ ನೀಡುವ ಅಭ್ಯಾಸವಿದ್ದ ಅವರು ಒಬ್ಬರಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ಹೃದಯದ ಮಾದರಿ ಮಾಡಿರೆಂದರೆ ಮತ್ತೊಬ್ಬರಿಗೆ ಜೇಡಿ ಮಣ್ಣಿನಿಂದ ಶ್ವಾಸಕೋಶದ ಮಾದರಿ ಮಾಡಿ ಬಣ್ಣ ಬಳಿಯಿರೆಂದೂ ಮಗದೊಬ್ಬರಿಗೆ ಹತ್ತಿಯಿಂದ ಮೆದುಳು ಮಾಡಿ ಭಾಗಗಳನ್ನು ಹೆಸರಿಸಿ ಎಂದೂ ವಿವಿಧ ಪ್ರಾಜೆಕ್ಟ್ ವರ್ಕ್ ಗಳನ್ನು ನೀಡಿದ್ದರು.‌

ಒಟ್ಟಿನಲ್ಲಿ, ಅವರ ಪಾಠವೆಂದರೆ ನಮ್ಮ ಕಡೆ ಕೆಲವರು ಕಾಫಿ ಗಿಡಗಳಿಗೆ ಒಂದು ರೌಂಡ್ ಸಾಲದೆಂದು ಎರಡೆರಡು ರೌಂಡ್ ಗವರ್ನಮೆಂಟ್ ಗೊಬ್ಬರ, ಒಂದು ರೌಂಡ್ ಸಗಣಿ ಗೊಬ್ಬರ, ಮತ್ತೊಂದು ರೌಂಡ್ ಎಲೆಗಳ ಮೂಲಕ ಹೀರುವ ದ್ರವ ರೂಪದ ಗೊಬ್ಬರದ ಸ್ಪ್ರೇ ಎನ್ನುತ್ತಾ ರೌಂಡ್ ಮೇಲೆ ರೌಂಡ್ ಗೊಬ್ಬರ ಹಾಕಿ ಕೇರ್ ತೆಗೆದು ಕೊಳ್ಳುವಂತೆ ಇರುತಿತ್ತು.

ಇದರಿಂದ ನಾವು ಪಾಠ ಮುಗಿಯುವ ವೇಳೆಗೆ ರಜನಿಕಾಂತನ ರೋಬೋ ಸಿನಿಮಾದ ರೋಬೋಟ್ ಕೊಟ್ಟ ಏನೊಂದನ್ನು ತಕ್ಷಣವೇ ಸ್ಕ್ಯಾನ್ ಮಾಡಿ ಕರಾರುವಾಕ್ಕಾಗಿ ವಿವರಿಸುವಂತೆ ದೇಹದ ಒಳ ಭಾಗಗಳನ್ನು ಮತ್ತು ಅವುಗಳ ಕಾರ್ಯಗಳನ್ನು ಪಟಪಟನೆ ವಿವರಿಸಬಲ್ಲಷ್ಟು ಎಕ್ಸ್ಪರ್ಟ್ ಗಳಾಗಿ ಬಿಟ್ಟಿದ್ದೆವು.

ಇದು ಕೇವಲ “ನಮ್ಮ ದೇಹದ ಭಾಗಗಳು” ಪಾಠದ ಕತೆ ಮಾತ್ರವಾಗಿರಲಿಲ್ಲ. ಬದಲಿಗೆ, ಪ್ರತಿಯೊಂದು ಪಾಠದಲ್ಲೂ ಮುಂದುವರೆಯುತ್ತಿದ್ದ ಮಹಾ ಕಥಾ ಸರಣಿಯಾಗಿತ್ತು!

ಉದಾಹರಣೆಗೆ ಅವರು “ಸಸ್ಯದ ಭಾಗಗಳು” ಪಾಠ ಮಾಡಿದರೆಂದರೆ ವಿವಿಧ ಬಗೆಯ ಎಲೆಗಳನ್ನು ಸಂಗ್ರಹಿಸಲು ಹೇಳಿ ಅವುಗಳ ಸಮಾನಾಂತರ, ಜಾಲ ರೂಪದ ವಿನ್ಯಾಸಗಳ ಗುರುತಿಸುವಿಕೆ, ಭೂತ ಕನ್ನಡಿಯ ಮೂಲಕ ಪತ್ರರಂಧ್ರಗಳ ಗಮನಿಸುವಿಕೆ, ತಾಯಿ ಬೇರು, ತಂತು ಬೇರುಗಳ ವರ್ಗೀಕರಿಸುವಿಕೆ, ಏಕದಳ, ದ್ವಿದಳ ಧಾನ್ಯಗಳ ಸಂಗ್ರಹಿಸುವಿಕೆ ಹೀಗೆ ವಿವಿಧ ಪ್ರಾಜೆಕ್ಟ್ ವರ್ಕ್ ನೀಡುತ್ತಿದ್ದರು.

“ನೀರು” ಪಾಠ ಮಾಡಿದ ನಂತರ ಕೆರೆ, ಬಾವಿ, ಬೋರ್ ವೆಲ್, ಮಳೆ ಹೀಗೆ ನೀರಿನ ವಿವಿಧ ಆಕರಗಳಿಂದ ನೀರನ್ನು ಸಂಗ್ರಹಿಸಿ ತಂದು ಸೂಕ್ಷ್ಮದರ್ಶಕದ ಮೂಲಕ ನೋಡಿ ಅವುಗಳಲ್ಲಿ ಕಂಡು ಬರುವ ಸೂಕ್ಷ್ಮಾಣು ಜೀವಿಗಳಲ್ಲಿನ ವ್ಯತ್ಯಾಸ ಗಮನಿಸಲು ಹೇಳುತ್ತಿದ್ದರು.
ಇನ್ನೂ, ಅವರ ಪಾಠ ತರಗತಿ ಕೋಣೆಯಲ್ಲಷ್ಟೇ ಅಲ್ಲ, ತರಗತಿ ಕೋಣೆಯ ಹೊರಗೂ ಮುಂದುವರೆಯುತಿತ್ತು.

ಬೆಳಗಾದರೆ ಸೂರ್ಯನನ್ನು ತೋರಿಸಿ ಅದು ಕೆಂಪಾಗಿರಲು ಕಾರಣ ಏನೆಂದು ತಿಳಿಸುತ್ತಿದ್ದರು. ರಾತ್ರಿಯಾದರೆ ಆಕಾಶದಲ್ಲಿನ ನಕ್ಷತ್ರಗಳನ್ನು ತೋರಿಸಿ ವಿವಿಧ ನಕ್ಷತ್ರ ಪುಂಜಗಳನ್ನು ಗುರುತಿಸಿ ಹೆಸರಿಸುವುದನ್ನು ಹೇಳಿ ಕೊಡುತ್ತಿದ್ದರು.

ಮಳೆಗಾಲದಲ್ಲಿ ಪಾಚಿಯನ್ನು ತೋರಿಸಿ ಪಾಚಿಗಟ್ಟುವಿಕೆ ಅದೇಗೆ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಪ್ರಕೃತಿ ತಾನೇ ಕಂಡು ಕೊಂಡ ಉಪಾಯವೆಂದು ವಿವರಿಸುತ್ತಿದ್ದರೆ ಚಳಿಗಾಲದಲ್ಲಿ ಮೈ ಕೈ ಒಡೆಯಲು ಕಾರಣ ತಿಳಿಸುತ್ತಿದ್ದರು.

ಒಮ್ಮೊಮ್ಮೆ ಮೆಸ್ ನಲ್ಲಿ ತಿನ್ನುವಾಗಲೂ ಆ ದಿನದ ಊಟ ಏನೆಲ್ಲಾ ಪೋಷಕಾಂಶಗಳನ್ನು ಒಳಗೊಂಡಿದೆ, ತಿನ್ನುತ್ತಿರುವ ತರಕಾರಿಗಳಲ್ಲಿ ಯಾವ ಯಾವ ವಿಟಮಿನ್‌ಗಳಿವೆ, ಅವುಗಳಿಂದ ದೇಹಕ್ಕೆ ಏನೇನು ಉಪಯೋಗ ಎಂದೆಲ್ಲಾ ತಿಳಿಸುತ್ತಿದ್ದರು.

ಅಷ್ಟೇ ಅಲ್ಲ, ವಿಜ್ಞಾನದಲ್ಲಿನ ನಮ್ಮ ಆಸಕ್ತಿ ಉದ್ದೀಪಿಸುವ ಸಲುವಾಗಿ ಶಾಲಾ ಸೈನ್ಸ್ ಲ್ಯಾಬ್ ಅನ್ನು ಒಂದು ಮ್ಯುಸಿಯಮ್ ನ ರೇಂಜಿಗೆ ಅಣಿಗೊಳಿಸಿದ್ದರು.

ಅಲ್ಲಿ ಪ್ರತಿಯೊಂದು ತರಗತಿಯ ಪ್ರತಿಯೊಂದು ಪಾಠಕ್ಕೂ ಸಂಬಂಧ ಪಟ್ಟ ಪಾಠೋಪಕರಣಗಳು, ಪ್ರಾಯೋಗಿಕ ಉಪಕರಣಗಳು ಇದ್ದವು.ನಾವು ವಿದ್ಯಾರ್ಥಿಗಳು ಪ್ರಾಜೆಕ್ಟ್ ವರ್ಕ್ ಗಳಿಗೆಂದು ತಯಾರಿಸಿದ ಮಾದರಿಗಳಿರುತ್ತಿದ್ದವು.

ವಿಶೇಷ ಆಕರ್ಷಣೆ ಎಂಬಂತೆ ಫಾರ್ಮಲಿನ್ ದ್ರಾವಣ ಹಾಕಿ ಗಾಜಿನ ಜಾರಿನಲ್ಲಿ ಸಂರಕ್ಷಿಸಲಾಗಿದ್ದ ಕಪ್ಪೆ, ಹಾವು, ಜಿರಲೆ, ಜಿಗಣೆಗಳೆಲ್ಲದರ ಸ್ಪೆಸಿಮನ್ ಗಳಿದ್ದವು. ಅಲ್ಲದೇ ಲ್ಯಾಬ್ ನ ನಾಲ್ಕು ಸುತ್ತು ಗೋಡೆಗಳ ಮೇಲೂ ವಿಜ್ಞಾನಿಗಳ, ವೈಜ್ಞಾನಿಕ ಸಂಶೋಧನೆಗಳ ಚಿತ್ರಗಳಿದ್ದವು. ಸುರೇಶ್ ಸರ್ ಆ ಚಿತ್ರಗಳಲ್ಲಿನ ವಿಜ್ಞಾನಿಗಳ ಬಗ್ಗೆ ಸ್ಪೂರ್ತಿದಾಯಕ ಕತೆಗಳನ್ನು ಹೇಳಿ ನಾವು ಅವರಂತಾಗ ಬೇಕೆಂದು ಹುರಿದುಂಬಿಸುತ್ತಿದ್ದರಲ್ಲದೇ ಅವರಂತೆ ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳಬೇಕೆಂದು ಪ್ರೇರಣೆ ನೀಡುತ್ತಿದ್ದರು.

ಜೊತೆಗೆ, ವಿಜ್ಞಾನದ ವಿದ್ಯಾರ್ಥಿಗಳಾಗಿ ನಾವು ನಮಗೆ ಅರ್ಥವಾಗದ ಪ್ರತಿಯೊಂದನ್ನು ಪ್ರಶ್ನಿಸಿ ಪರಿಹಾರ ಕಂಡು ಕೊಳ್ಳಲು, ಪ್ರಕೃತಿಯ ಪ್ರತಿಯೊಂದು ವಸ್ತುವಿನೆಡೆಗೆ ಕೌತುಕ ಭಾವ ಹೊಂದಲು ಪ್ರೇರೇಪಣೆ ನೀಡುತ್ತಿದ್ದರು.

ಇದೆಲ್ಲದರ ಪರಿಣಾಮವಾಗಿ “ನಾವು ಕೂಡ ಮುಂದೆ ವಿಜ್ಞಾನಿಗಳಾಗಬೇಕು, ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳ ಬೇಕು, ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸ ಬೇಕು” ಎಂದೆಲ್ಲಾ ನಾವುಗಳು ಚಿಂತಿಸಲಾರಂಭಿಸಿದ್ದೆವು. ಹಾಗಾಗಿ, ನಮ್ಮ ಕನಸು ಮನಸ್ಸಿನಲ್ಲೆಲ್ಲಾ ವಿಜ್ಞಾನ-ವಿಜ್ಞಾನಿ ಎಂಬ ವಿಷಯಗಳೇ ತುಂಬಿ ಹೋಗಿದ್ದವು.

ಭಕ್ತ ಕುಂಬಾರ ತನ್ನ ಭಕ್ತಿಯ ಪರಾಕಾಷ್ಠ ಸ್ಥಿತಿಯಲ್ಲಿ ಜಗವನ್ನೇ ಮರೆತು “ವಿಠ್ಠಲ, ವಿಠ್ಠಲ, ವಿಠ್ಠಲ..” ಎಂದು ಧೇನಿಸಿದಂತೆ ನಾವುಗಳು “ವಿಜ್ಞಾನ,ವಿಜ್ಞಾನ,ವಿಜ್ಞಾನ..” ಎಂಬ ಧ್ಯಾನಕ್ಕೆ ಬಿದ್ದೆವು!

ಪ್ರೇಮಿಯೊಬ್ಬ “ಮಾಯವಾಗಿದೆ ಮನಸ್ಸು, ಹಾಗೆ ಸುಮ್ಮನೆ!” ಎನ್ನುತ್ತಾ ನೋಡುವ ಎಲ್ಲರಲ್ಲೂ ತನ್ನ ಹುಡುಗಿಯನ್ನೇ ಕಂಡಂತೆ ನಾವುಗಳು ನೋಡುವುದರಲೆಲ್ಲಾ ಸಂಶೋಧನೆ ಗೆ ಅವಕಾಶ ಹುಡುಕುತ್ತಿದ್ದೆವು. ಅಲ್ಲದೇ ಲ್ಯಾಬ್ ನಲ್ಲಿ ಇಡಲು ಏನಾದರೂ ವಸ್ತುಗಳು ಸಿಗಬಹುದಾ ಆ ಮೂಲಕ ಸುರೇಶ್ ಸರ್ ರ ಮೆಚ್ಚುಗೆ ಗಳಿಸಲು ಸಾಧ್ಯವಾಗಬಹುದಾ ಎಂದೆಲ್ಲಾ ಯೋಚನಾ ಮಗ್ನರಾಗುತ್ತಿದ್ದೆವು.

ಈ ಆಸಕ್ತಿ, ಅಭಿರುಚಿಗಳ ಫಲವಾಗಿ ಎಂಬಂತೆ ನಾವು ಆಗಿಂದಾಗ್ಗೆ ಒಂದಿಲ್ಲೊಂದು ಸಂಶೋಧನಾ ತುಣುಕುಗಳನ್ನು ಪ್ರದರ್ಶಿಸಲಾರಂಭಿಸಿದ್ದೆವು.
ಉದಾಹರಣೆಗೆ ಸುರೇಶ್ ಸರ್ ಒಂದು ಪೀರಿಯಡ್ ನಲ್ಲಿ ಅದಿರು ಕಲ್ಲು ತೋರಿಸಿ “ಇದರಲ್ಲಿ ಕಬ್ಬಿಣದ ಅಂಶ ಇದೆ” ಅಂದರೆ ಮರುದಿನ ನಾವು ಕಂಡ ಕಂಡ ಕಲ್ಲುಗಳನ್ನೆಲ್ಲಾ ಅದಿರು ಕಲ್ಲುಗಳೆಂದೇ ಭಾವಿಸಿ ಒತ್ತೊಯ್ದು, ಅವರ ಮುಂದಿಡಿದು “ಇದರಲ್ಲಿ ಯಾವ ಅದಿರಿದೆ ಸರ್? ಅದರಲ್ಲಿ ಯಾವ ಅದಿರಿದೆ ಸರ್?” ಎಂದೆಲ್ಲಾ ಪ್ರಶ್ನಿಸುತ್ತಿದ್ದೆವು.

ಪಾಪ, ಅವರು ಎಲ್ಲವನ್ನೂ ತಾಳ್ಮೆಯಿಂದ ಗಮನಿಸಿ ಸೂಕ್ತ ವಿವರಣೆ ನೀಡುತ್ತಾ ನಮ್ಮೆಲ್ಲರ ಅನುಮಾನ ಪರಿಹರಿಸುತ್ತಿದ್ದರು. ಅಷ್ಟೇ ಅಲ್ಲ, ನಾವು ಭಾನುವಾರಗಳಲ್ಲಿ ಸ್ನಾನಕ್ಕೆಂದು ಕಾಡು ನಡುವಿನ ಹಳ್ಳಗಳನ್ನು ಹೊಕ್ಕಾಗ ದಾರಿಯ ನಡುವೆ ಸಿಗುತ್ತಿದ್ದ ನವಿಲು ಗರಿ, ಹಾವಿನ ಪೊರೆ, ಮುಳ್ಳಂದಿಯ ಮುಳ್ಳು, ಜಿಂಕೆಯ ಕೋಡು ಇತ್ಯಾದಿ ಇತ್ಯಾದಿಗಳನ್ನೆಲ್ಲಾ ವಿಸ್ಮಯ ಭಾವದೊಂದಿಗೆ ಹೊತ್ತು ತಂದು ಅವರ ಮುಂದಿಡುತ್ತಿದ್ದೆವು. ಅವರೋ ನಾವೇನೋ ಮಹತ್ತರ ಅನ್ವೇಷಣೆ ಮಾಡಿ ತಂದಿರುವೆವೆಂಬ ಮುಖಭಾವದಲ್ಲಿ ನಮಗೆ ಭೇಷ್ ಗಿರಿ ನೀಡುತ್ತಾ ಅವುಗಳನ್ನೆಲ್ಲಾ ಲ್ಯಾಬ್ ನಲ್ಲಿ ಸಂಗ್ರಹಿಸಿಡುತ್ತಿದ್ದರು.

ಇದರಿಂದ ನಾವು ಮತ್ತಷ್ಟು ಉತ್ಸಿತರಾಗುತ್ತಿದ್ದೆವು.

ಇಂತಹ ಉತ್ಸಾಹದ ಭರದಲ್ಲಿ ಇರುವಾಗಲೇ,

ಒಂದು ಶನಿವಾರದ ಮಧ್ಯಾಹ್ನ ನಾನು ಮತ್ತು ಗೆಳೆಯ ಮನು ನಮ್ಮ ಡಾರ್ಮಿಟರಿಯ ಹಿಂದೆ ಅನತಿ ದೂರದಲ್ಲಿ ಇದ್ದ ಆಳವಾದ ಗುಂಡಿಯಲ್ಲಿ ಸತ್ತು ಬಿದ್ದಿದ್ದ ನಾಯಿಯೊಂದನ್ನು ಆಕಸ್ಮಿಕವಾಗಿ ನೋಡಿ ಬಿಟ್ಟೆವು. ಒಡನೆಯೇ, ಏಕಕಾಲದಲ್ಲಿ ಎಂಬಂತೆ ಇಬ್ಬರ ತಲೆಯಲ್ಲೂ ಸುರೇಶ್ ಸರ್, ವಿಜ್ಞಾನ, ವಿಜ್ಞಾನಿ, ಮಣಿಪಾಲ, ಡೆಡ್ ಬಾಡಿ, ಸ್ಪೆಸಿಮನ್ ಗಳು ಎಂಬೆಲ್ಲಾ ಪದಗಳು ಸುಳಿದು ಮುಖ ಅರಳಿಸಿಕೊಂಡು ಅತಿರೇಕದ ಖುಷಿಯಲ್ಲಿ ಮಿಂದಿದ್ದೆವು.

ಬಹುಶಃ ಕಾಡಿನ ಹುಲಿ, ಚಿರತೆಗಳೂ ಕೂಡಾ ಸತ್ತ ಜಿಂಕೆ ಅಥವಾ ಕಡವೆಗಳನ್ನು ನೋಡಿ ಇಷ್ಟು ಖುಷಿ ಪಟ್ಟಿರುವ ಸಾಧ್ಯತೆಗಳು ಇಲ್ಲದಿರುವಾಗ, ಸತ್ತ ನಾಯಿಯೊಂದನ್ನು ನೋಡಿ ಅದಕ್ಕಿಂತಲೂ ಸತ್ತು ಕೊಳೆತು ಬಿದ್ದಿದ್ದ ಎನ್ನಬಹುದಾದ ನಾಯಿಯೊಂದನ್ನು ನೋಡಿ ಅತಿರೇಕದ ಖುಷಿಯಲ್ಲಿ ಮಿಂದೆದ್ದ ವಿಚಿತ್ರ ಜೀವಿಗಳು ನಾವೇ ಎನಿಸುತ್ತೆ!

ಅಷ್ಟೇ ಅಲ್ಲ, ಯಾರೂ ಕಂಡು ಹಿಡಿಯದ್ದನ್ನು ಕಂಡು ಹಿಡಿಯುವ ಉತ್ಸಾಹದಲ್ಲಿದ್ದ ನಾವುಗಳು ಮುಂದುವರೆದು ಬಹುಶಃ ಜಗತ್ತಿನಲ್ಲಿ ಯಾರೂ ಮಾಡದೇ ಇರಬಹುದಾದ ಮುಂದೆಯೂ ಮಾಡಲು ಬಯಸದಾದ ಸಾಹಸವನ್ನು ಮಾಡಲು ಹೊರಟಿದ್ದೆವು. ಅದೂ ಯಾರೂ ನಮ್ಮನ್ನು ಗಮನಿಸುತ್ತಿರಲಿಲ್ಲವಾಗಿ ಮತ್ತು ಈ ಸಾಹಸದ ಕ್ರೆಡಿಟ್ ನಮ್ಮಿಬ್ಬರಿಗಷ್ಟೇ ಮೀಸಲಿರಲಿ ಎಂಬ ಕಾರಣಕ್ಕಾಗಿ ಸಾಕಷ್ಟು ಗೌಪ್ಯವಾಗಿಯೇ ಈ ಸಾಹಸವನ್ನು ಮಾಡ ಹೊರಟಿದ್ದೆವು.

ಈ ಸಾಹಸದ ಕಾರ್ಯಕ್ಕಾಗಿ ಅತ್ತಿತ್ತ ಹುಡುಕಾಡಿ ದೊಡ್ಡ ಮೊಳೆಗಳನ್ನು ಹೊಡೆದಿದ್ದ ಎರಡು ಉದ್ದನೆಯ ರೀಪುಗಳನ್ನು ಹುಡುಕಿದ ತಂದೆವು. ಜೊತೆಗೆ, ಡಾರ್ಮಿಟರಿಯ ಒಳ ಹೋಗಿ ಎರಡು ಟವೆಲ್ ಗಳನ್ನು, ನಾಲ್ಕು ಖಾಲಿ ಪ್ಲಾಸ್ಟಿಕ್ ಗಳನ್ನೂ ತಂದೆವು.

೧೦

ಸರಿ, ನಾವು ಭಾರಿ ಡಿಸೆಕ್ಷನ್ ಮಾಡುವ ತಜ್ಞ ವೈದ್ಯರಂತೆ ಮೂಗಿಗೆ ಟವೆಲ್ ಗಳನ್ನು ಮಾಸ್ಕ್ ರೀತಿ ಕಟ್ಟಿಕೊಂಡು, ಕೈಗೆ ಪ್ಲಾಸ್ಟಿಕ್ ಗಳನ್ನು ಗ್ಲೌಸ್ ಗಳಂತೆ ಹಾಕಿಕೊಂಡು ಕಾರ್ಯಾಚರಣೆಗಿಳಿದೆವು. ಆದರೆ, ಗುಂಡಿ ಆಳವಿದ್ದುದರಿಂದಲೂ, ಗುಂಡಿಯ ಒಳಗೆ ಸ್ವಲ್ಪ “ಕತ್ತಲು ಕತ್ತಲು” ಎನ್ನಬಹುದಾದಷ್ಟು ಮಾತ್ರ ಬೆಳಕು ಇದ್ದು ನಾಯಿಯ ದೇಹ ಸ್ಪಷ್ಟವಾಗಿ ಕಾಣದೆ ಇದ್ದುದರಿಂದಲೂ, ಅಲ್ಲದೇ ನಾಯಿಯ ಮೈ ಮೇಲೆ ಒಂದಷ್ಟು ಕಸ ಕಡ್ಡಿ ಇದ್ದುದರಿಂದಲೂ, ನಮ್ಮ ರೀಪ್ ಗಳಿಂದ ನಾಯಿಯನ್ನು ಎತ್ತುವುದು ಅಷ್ಟು ಸುಲಭದ ಕಾರ್ಯಾಚರಣೆ ಆಗಿರಲಿಲ್ಲ.

ಜೊತೆಗೆ ಟವೆಲ್ ನ ಮಾಸ್ಕನ್ನೂ ಸೀಳಿ ಮೂಗಿಗೆ ನಾಟುತಿದ್ದ ಕೆಟ್ಟ ವಾಸನೆ ಬೇರೆ ಕಾಟ ಕೊಡುತಲಿತ್ತು. ಆದರೆ, ನಾವು ಸುರೇಶ್ ಸರ್ ರಿಂದ ಅದ್ಯಾವ ಬಗೆಯಲ್ಲಿ ಪ್ರೇರಿತರಾಗಿದ್ದೆವೆಂದರೆ ವೀರಯೋಧನೊಬ್ಬ ದೇಶಭಕ್ತಿಯ ಉನ್ಮತ್ತತೆಯಲ್ಲಿ ಶತ್ರುಗಳ ಸಂಖ್ಯೆಗಿರಲಿ ಸಾವಿಗೂ ಅಂಜದೆ ಗುಂಡಿಗೆ ಎದೆಯೊಡ್ಡಿ ಮುನ್ನುಗ್ಗುವಂತೆ ವಾಸನೆಯನ್ನು ಲೆಕ್ಕಿಸದೇ ನಮ್ಮ ಕಾರ್ಯಾಚರಣೆಯನ್ನು ಮುಂದುವರೆಸಿದೆವು.

ಕೊನೆಗೆ ನಾಯಿಯ ಬಾಯಿಗೆ ಒಂದು ರೀಪನ್ನು ತುರುಕಿ ಅದರಲ್ಲಿನ ಮೊಳೆಯನ್ನು ನಾಯಿಯ ಒಸಡಿಗೋ ಗಂಟಲಿಗೋ ಸಿಕ್ಕಿಸಿ ಮತ್ತೊಂದು ರೀಪನ್ನು ಇನ್ನೊಂದು ಭಾಗಕ್ಕೆ ಒತ್ತು ಕೊಟ್ಟು ಸಾಕಷ್ಟು ಹರಸಾಹಸದೊಂದಿಗೆ ಅದನ್ನು ಮೇಲೆತ್ತಲು ಸಫಲರಾದೆವು.

೧೧

“ಸದ್ಯ ಕೊನೆಗೂ ಇದನ್ನು ಮೇಲಿತ್ತಿದೆವಲ್ಲ!” ಎಂಬ ಸಮಾಧಾನದೊಂದಿಗೆ ಅದರ ಡಿಸೆಕ್ಷನ್ ಮಾಡ ಹೊರಟರೆ ನಾವು ಕೊಂಚ ನಿರಾಸೆಯನ್ನು ಅನುಭವಿಸ ಬೇಕಾಯಿತು.

ಏಕೆಂದರೆ, ನಾವು ಆರಂಭದಲ್ಲಿ ಅದರ ಕಣ್ಣು, ಕಿಡ್ನಿ, ಹೃದಯ,ಶ್ವಾಸಕೋಶ ಹೀಗೆ ದೇಹದ ಎಲ್ಲಾ ಭಾಗಗಳನ್ನು ಪಾರ್ಟ್ ಬೈ ಪಾರ್ಟ್ ಡಿಸೆಕ್ಷನ್ ಮಾಡಿ, ಅವುಗಳನ್ನು ಫಾರ್ಮಲಿನ್ ದ್ರಾವಣ ಹಾಕಿ ಗಾಜಿನ ಜಾರಿನಲ್ಲಿ ಪ್ಯಾಕ್ ಮಾಡಿ, ಮಣಿಪಾಲದಲ್ಲಿ ಮನುಷ್ಯರ ದೇಹದ ಭಾಗಗಳನ್ನು ಪ್ರದರ್ಶನಕ್ಕಿಟ್ಟಂತೆ ಲ್ಯಾಬ್ ನಲ್ಲಿ ಪ್ರದರ್ಶನಕ್ಕಿಡಬೇಕೆಂದು ಆಸೆಪಟ್ಟಿದ್ದೆವು. ನೋಡಿದರೆ, ನಮ್ಮ ಪುಣ್ಯಕ್ಕೋ ಅಥವಾ ನಾಯಿಯ ಪುಣ್ಯಕ್ಕೋ ಅದರ
ಬೋಟಿ ಖಲೀಜಾಗಳೊಂದೂ ಇರದೆ ಅದರ ಮುಖದ ಸ್ವಲ್ಪ ಭಾಗ ಬಿಟ್ಟರೆ ಉಳಿದ ಭಾಗವೆಲ್ಲಾ ಉಪ್ಪು ಮೀನು ಒಣಗಿದಂತೆ ಒಣಗಿದ ಸ್ಥಿತಿಯಲ್ಲಿತ್ತು!

೧೨

ಸರಿ, ಇನ್ನೇನು ತಾನೇ ಮಾಡುವುದು! ಒಮ್ಮೊಮ್ಮೆ ಶ್ರದ್ಧೆಯಿಂದ ಗದ್ದೆಯಲ್ಲಿ ಗೆಯ್ಮೆ ಮಾಡಿದ್ದರೂ ಭತ್ತದ ಪೈರು ಸರಿಯಾಗಿ ಬರದಿದ್ದಾಗ ರೈತರು “ಏನು ಮಾಡೋದು. ಎಷ್ಟಾದರೂ ಕಷ್ಟ ಪಟ್ಟು ಉತ್ತು, ಬಿತ್ತಿದ್ದೇವೆ. ಇರೋ ಅಲ್ಪ ಸ್ವಲ್ಪ ಕಾಳಿನ ಜೊತೆಗೆ ಹುಲ್ಲನಾದರೂ ಕೊಯ್ದು ಕೊಳ್ಳೋಣ” ಎಂದಂತೆ ನಾವುಗಳು ಸ್ಪಷ್ಟವಾಗಿ ಗುರುತಿಸ ಬಹುದಾಗಿದ್ದ ಹಲ್ಲುಗಳನ್ನೇ ಕಿತ್ತು ಲ್ಯಾಬ್ ಗೆ ಒಯ್ಯೋಣ ಎಂಬ ನಿರ್ಧಾರಕ್ಕೆ ಬಂದೆವು.

ತದನಂತರದಲ್ಲಿ ಮತ್ತಷ್ಟು ಹರಸಾಹಸ ಪಟ್ಟು ಅಂತೂ ಇಂತೂ ಎರಡು ಹಲ್ಲುಗಳನ್ನು ಒಸಡಿನ ಭಾಗದಿಂದ ಬೇರ್ಪಡಿಸುವಲ್ಲಿ ಸಫಲರಾದೆವು.
ಹೀಗೆ ಬೇರ್ಪಡಿಸಿದ ಹಲ್ಲುಗಳ ಮೇಲೆ ನಮ್ಮ ಪ್ಲಾಸ್ಟಿಕ್ ಗ್ಲೌಸ್ ತೊಟ್ಟ ಕೈಗಳಿಂದಲೇ ನೀರನ್ನು ಹೊಯ್ದು ತೊಳೆದೆವು.

ತೊಳೆದ ಆ ಹಲ್ಲುಗಳನ್ನು ಹಳೆಯ ಸಿನಿಮಾಗಳಲ್ಲಿ ಖಳರು ಅಥವಾ ಮಾರ್ವಾಡಿಗಳು ವಜ್ರ ವೈಡೂರ್ಯಗಳನ್ನು ಜೋಪಾನವಾಗಿ ಇಡುವಂತೆ ಬಿಳಿ ಬಟ್ಟೆಯೊಂದರಲ್ಲಿ ಸುತ್ತಿ ಲ್ಯಾಬ್ ನೆಡೆಗೆ ನಡೆಯಲಾರಂಭಿಸಿದೆವು.

೧೩

ಬಹುಶಃ ರೈಟ್ ಸಹೋದರರು ಮೊದಲ ಬಾರಿಗೆ ತಮ್ಮ ವಿಮಾನ ಇನ್ನೇನು ಮೇಲಕ್ಕೆ ಹಾರಲಿದೆ ಎಂದಾಗ ಅನುಭವಿಸಿರಬಹುದಾದ ರೋಮಾಂಚಕತೆಯನ್ನು ಅನುಭವಿಸುತ್ತಾ,

ಇನ್ನೇನು ನಾವು ನೊಬೆಲ್ ವಿಜೇತ ಸಾಹಸ ಮಾಡಲಿರುವ ವಿಜ್ಞಾನಿಗಳೇ ಆಗಿ ಬಿಡಲಿದ್ದೇವೆ ಎಂಬ ಪುಳಕವನ್ನೊತ್ತು ನಡಿಗೆ ಮುಂದುವರೆಸಿದೆವು.
ನಾವು ಎತ್ತಿಕೊಂಡು ಹೋಗುತ್ತಿದ್ದದ್ದು ಎರಡೇ ಎರಡು ನಾಯಿಯ ಹಲ್ಲುಗಳನ್ನಾದರೂ ನಮ್ಮ ಈ ಗುರುದಕ್ಷಿಣೆಯನ್ನು ಕಂಡು ನಮ್ಮ ಗುರುಗಳು ‘ದಂಗಲ್ ಸಿನಿಮಾದಲ್ಲಿ ಚಿನ್ನದ ಪದಕ ಹೊತ್ತು ಎದುರು ನಿಂತ ಮಗಳನ್ನು ಕಂಡು ಹೆಮ್ಮೆ ಪಡುವ ತಂದೆಯಂತೆ’ ಭಾವುಕರಾಗಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ ಎಂದೆಲ್ಲಾ ನಿರೀಕ್ಷಿಸುತ್ತಾ ಲ್ಯಾಬ್ ನ ಒಳಹೊಕ್ಕೆವು.

೧೪

ನಾವು ಲ್ಯಾಬ್ ನ ಒಳ ಹೊಕ್ಕೊಡನೆ ಸುರೇಶ್ ಸರ್ ಮುಖ ಕಿವುಚಿಕೊಂಡಂತೆ ಮಾಡಿದರು. ನಾವಾಗಲೇ ಹೊಂದಾಣಿಕೆಗೊಂಡಿದ್ದ ನಾಯಿಯ ಹಲ್ಲಿನ ಭಯಾನಕ ವಾಸನೆ ಅವರ ಮೂಗಿಗೆ ಸರಿಯಾಗಿಯೇ ನಾಟಿತೆನಿಸುತ್ತೆ! ಮುಂದುವರೆದು, ಬಸ್ಸಿನಲ್ಲಿ ಹೊಟ್ಟೆ ತೊಳಸಿದಂತಾಗಿ ವಾಂತಿ ಬಂದಂತಾದಾಗ ಮಾಡುವ ಮುಖಭಾವವನ್ನು ಪ್ರದರ್ಶಿಸುತ್ತಾ ಮೂಗು, ಬಾಯಿಗಳ ಮೇಲೆಲ್ಲಾ ಕೈಗಳನ್ನು ಮುಚ್ಚುತ್ತಾ “ಏನ್ರೋ ಅದು?” ಎಂದರು.

ನಾವೋ ಅತ್ಯುತ್ಸಾಹದಲ್ಲಿ ಸುತ್ತಿದ್ದ ಬಟ್ಟೆ ತೆರೆದು ನಮ್ಮ ಅಮೂಲ್ಯ ಅನ್ವೇಷಣೆಯನ್ನು ಅವರ ಮುಂದಿಡುತ್ತಾ “ಸಾರ್ ನಾಯಿ ಹಲ್ಲು, ಲ್ಯಾಬಲ್ಲಿಡದ…” ಎನ್ನುತ್ತಾ ಮಾತು ಮುಗಿಸಿರಲಿಲ್ಲ. ಅಷ್ಟರಲ್ಲೇ “ತಥ್, ಗಬ್ಬು ವಾಸ್ನೆ ಹೊಡಿತಿದೆ. ಮೊದಲು ಆಚೆಗೆ ತಗೊಂಡು ಹೋಗಿ ಎಸಿರ್ರೋ..” ಎಂದು ಥೇಟು ನಾಯಿಯೊಂದು ಇನ್ನೇನು ಮೂಳೆಗೆ ಬಾಯಿ ಹಾಕಲಿದೆ ಎಂಬುವಷ್ಟರಲ್ಲಿ ಅದ್ಯಾರೋ ಅಚಾನಕ್ಕಾಗಿ ನೋಡಿ “ಅಚ್ಚಾ! ಅಚ್ಚಾ!!” ಎನ್ನುತ್ತಾ ಸರಿಯಾಗಿ ಬಾರಿಸಿ ಓಡಿಸುವಂತೆ ಗದರಿ ಬಿಟ್ಟರು.

ನಾವೋ ಈ ಅನಿರೀಕ್ಷಿತ ಉಗಿತದಿಂದ ಪೆಟ್ಟು ತಿಂದು ಕುಂಯ್ಞಿಗುಟ್ಟುವ ನಾಯಿಯಂತೆಯೇ ಸಪ್ಪೆ ಮೋರೆ ಹಾಕಿ ಕೊಂಡು ಡಾರ್ಮಿಟರಿಯತ್ತ ಮುಖ ಮಾಡಿದೆವು.

೧೫

ಪಾಪ, ಸುರೇಶ್ ಸರ್! “ಬರೀ ಹೆದರಿಸಿ ಬನ್ನಿ” ಎಂದೋ, “ಕೈ ಕಾಲು ಮುರಿದು ಬನ್ನಿ” ಎಂದೋ ಹೇಳಿ ಕಳಿಸಿದರೆ ತಲೆಯನ್ನೇ ತೆಗೆದುಕೊಂಡು ಬರುವ ರೇಂಜಿನ ಶಿಷ್ಯಂದಿರ ಅತ್ಯುತ್ಸಾಹವನ್ನು ಕಂಡು, ಅದರ ಪರಿಣಾಮವಾದ ಭಯಾನಕ ವಾಸನೆ ಸಹಿಸಿ ಕೊಳ್ಳ ಬೇಕಾದ ತಮ್ಮ ಚಿಂತಾಜನಕ ಸ್ಥಿತಿಯನ್ನು ನೆನೆದು “ಎಲ್ಲವೂ ಸಾಕು, ಸಾಕು!” ಎಂದು ಕೊಂಡಿರಬಹುದು.

ಅಲ್ಲದೇ, ಇನ್ನೂ ತನ್ನ ಶಿಷ್ಯಂದಿರಿಗೆ “ವಿಜ್ಞಾನದಲ್ಲಿ ಅತಿಯಾದ ಆಸಕ್ತಿ ಬರಿಸುವುದಿರಲಿ, ವಿಜ್ಞಾನವನ್ನೇ ಬೋಧಿಸಬಾರದು!” ಎಂದು ಅವರಿಗೆ ಎನಿಸಿರಲೂ ಬಹುದು.

‍ಲೇಖಕರು Admin

February 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: