ಪ್ರಕಾಶ್ ಪೊನ್ನಾಚಿ
ನೀನು ನೀಲಿ ತೊಟ್ಟ ಹೂಗಳ
ಮುಡಿದು ಶಿಲುಬೆಯ ಪಾದದ ಅಡಿಗೆ
ಉಸಿರು ತುಂಬಿಸುತ್ತಿದ್ದೆ
ಚಂದಿರ ಬೆಳಕು ಮಾರುತ್ತಾ ಛತ್ರಿ
ಹಿಡಿದು ಬರುತ್ತಿದ್ದ
ಚರ್ಚಿನ ಗೇಟಿನ ಇಕ್ಕೆಲಗಳಲಿ
ನಾಚಿನಿಂತ ಕ್ರಿಸ್ಮಸ್ ಮರಕ್ಕೆ
ಎಲೆಗಳೊಳಗೆ ಹುದುಗಿ ಹೋದ
ಶಿಲುಬೆಯೆಡೆಗಿನ ಪ್ರೇಮ ತಿಳಿಯಲಿಲ್ಲ
ಉಲುಹಿ ಹೋಗಬೇಕು ಧರ್ಮದ
ಅಡ್ಡಗೆರೆಗಳ ದಾಟಿ ಆಚೆ
ಅಲ್ಲಿ ಚಂದಿರ ಒಂದು ನೈದಿಲೆ
ಕಂಪು ಮೀಯುವ ಗಾಳಿ
ಚರ್ಚಿನ ಉದ್ದದ ಗಂಟೆಯಲಿ
ಪ್ರೇಮ ನಿವೇದಿಸುವ ಶಬ್ಧ

ಮಾಸಿದ ಹೃದಯಕ್ಕೆ ಯಾವ ನೋವೋ
ನಿನ್ನ ಕಣ್ಣುಗಳಲ್ಲಿ ಗಾಯದ ಚುಕ್ಕೆಗಳು
ಮಿನುಗಿ ಹೋಗುವ ಘಳಿಗೆಯಲಿ
ಚರ್ಚ್ ಸ್ಟ್ರೀಟಿನ ಹೊಂಗೆಮರ
ಹೂ ಅರಳಿಸುವುದು
ನಿನ್ನ ಪಾದಕ್ಕಂಟಿದ ಧೂಳಿನ ಕಣ
ಶಬ್ಧಕ್ಕೆದರಿ ಅಡಿ ಸೇರುವಾಗ
ಸ್ವರ್ಗದ ನವಿಲ ಗರಿಗಳು
ಪಾಪವಾಗದ ಶಿಲುಬೆಯ ಅಂಗಳ
ಸಾರಿಸುವಾಗ
ನಮ್ಮ ಪ್ರೇಮದ ಕೂಗು
ಶಿಖರ ಮುಟ್ಟುವುದು
ದೇವರೆಂದಿಗೂ ಪರ್ಯಾಯ ಹುಡುಕಲಾರ
ನಿನ್ನ ಹೊರತು ಚರ್ಚ್ ಸ್ಟ್ರೀಟಿನಲಿ
ಬೇರೊಂದು ಹೂ ಅರಳಲಾರದು
ದಾಹವಾದರೆ ಪ್ರೇಮವನ್ನೇ ಹೀರುವ ಹಂಬಲ
ಹೊಸ ಚೈತ್ರದ ದಾರಿಗೆ
ಹುರುಪು ತುಂಬುವುದು
ಇಲ್ಲಿ ವ್ಯರ್ಥವಾಗುವ ಯಾವುದೂ
ಬದುಕುಳಿಯಲಾರವು ಅಮೀನ್
ಪ್ರೇಮ ಪ್ರಣಯ ಅದರ ಆಯ ವ್ಯಯ
ಗೇಟಿನ ಅಂಗಳದೊಳಗೆ
ಶಿಲುಬೆಯನಪ್ಪಿಕೊಳುವಾಗ






You have created such a beautiful scene here … your language is exquisite !!