ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ಕೊಡಗನೂರ್ ಕವಿತೆ – ದರ್ಶನ…

ಪ್ರಕಾಶ್ ಕೊಡಗನೂರ್

ಅವರು
ತೀರಿಕೊಂಡರು !

ಸಹಜವಾಗೇ ಸಹಧರ್ಮಿಣಿಯ
ಆಕ್ರಂದನ ಮುಗಿಲುಮುಟ್ಟಿತು
ಮಕ್ಕಳಿಬ್ಬರೂ
ಕಚೇರಿಗೆ ರಜೆ ಹಾಕಿದರು
ನೆಂಟರಿಷ್ಟರಾದಿಯಾಗಿ
ಸ್ನೇಹಿತರು ಪರಿಚಿತರೆಲ್ಲ
ಅಂತ್ಯಕ್ರಿಯೆಗೆ ಧಾವಿಸಿದರು !!

ಸತಿಗೆ
ಇನ್ನುಳಿದ ಬದುಕೇ
ಚಿತೆಯಾದಂತೆ ಕಂಡುಬ೦ದರೆ
ಮಕ್ಕಳಿಗೆ ತಂದೆಯ
ಅಗಲಿಕೆಯ ದುಃಖದೊಂದಿಗೆ
ಮು೦ದಿನ ವಿಧಿವಿಧಾನಗಳನ್ನು
ನೆರವೇರಿಸಿ ಕಚೇರಿಗೆ
ಹಾಜರಾಗುವ ಚಿಂತೆ !
ಉಳಿದವರಿಗೆ
ಆದಷ್ಟು ಬೇಗ
ಅಂತ್ಯಕ್ರಿಯೆ ಜರುಗುವಂತಾಗಿ
ಮತ್ತೆ ತಮ್ಮ ಕೆಲಸಗಳಲ್ಲಿ
ಲೀನವಾಗುವ ಸೆಳೆತ !!

ಚುನಾವಣೆಗೆ ಗಿಟ್ಟಬಹುದಾದ
ಓಟುಗಳನ್ನು ಲೆಕ್ಕಿಸುತ್ತ
ಸ್ಥಳಕ್ಕಾಗಮಿಸಿದ ರಾಜಕಾರಣಿಗೆ
ಮುಂದಿನೆರಡು ಅಂತಿಮದರ್ಶನಗಳು
ಕೈತಪ್ಪುವ ಭಯದ ಬೆನ್ನಲ್ಲೇ
ತರಾತುರಿಯಲ್ಲಿ ಉಪಾಯದಿಂದ
ಜಾರಿಗೊಳ್ಳುವ ಬಗೆಯ ಚಿಂತನೆ !!

ಅವರು
ತೀರಿಕೊಂಡರು !

ಪರಂತು ಪ್ರಾಸಂಗಿಕವಾಗಿ
ತೆರೆಮರೆಯಲಿ ಬೇರೂರಿರುವ
ಹಲಬಗೆಯ ದುಃಖಾತಂಕ
ಡಾ೦ಭಿಕತೆ ಪೊಳ್ಳುತನಗಳನ್ನು
ಅನಾವರಣಗೊಳಿಸಿದುದಲ್ಲದೆ
ಆಧುನಿಕತೆಯ ಬರ್ಬರತೆಗೂ
ಕನ್ನಡಿ ಹಿಡಿದು ಹೋದರು !!

‍ಲೇಖಕರು avadhi

28 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading