ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್‌ಕೊಡಗನೂರ್ ಕವಿತೆ – ಕಾರಣ!…

ಪ್ರಕಾಶ್‌ಕೊಡಗನೂರ್

ವೃದ್ಧಾಪ್ಯಕ್ಕೂ ತೆರಳದೆ
ಬಾಲ್ಯಕ್ಕೂ ಮರಳದೆ
ಚಿರಪ್ರಾಯದ ಕನಸುಗಳಲ್ಲೇ
ವಿಹರಿಸುವ ಮನಸಿಗೆ
ಪ್ರೀತಿಕಾರಣ!

ಸರಸದಲ್ಲೂ ಮುಳುಗದೆ
ವಿರಸದಲ್ಲೂ ಬಾಳದೆ
ಅಂತರದ ಅರಗಿಣಿಯಾಗಿ ಅವಳು
ಶಬರಿ ನಾನಾದುದಕೆ
ವಿರಹಕಾರಣ !

ಮಾಸದ ನಗು
ಮನಕಲಕುವ ಮುಗ್ಧತೆ
ಬರಸೆಳೆವ ಮಾದಕತೆ
ನನ್ನಎಡೆಬಿಡದೆಕಾಡಲು
ಪ್ರಿಯತಮೆಕಾರಣ!

ಅಲ್ಲೇಲ್ಲೋ ಅವಳು
ಇಲ್ಲೆಲ್ಲೋ ನಾನು
ಜಂಜಾಟದ ಬದುಕಿನ
ಬಂಧಿಗಳಾಗಿರಲು
ಮದುವೆಕಾರಣ !

ಬಯಲಾಗುತ ಬೆರಗಾಗುವ
ಬಿನ್ನಾಣದ ಈ ಬೆಸುಗೆ
ಎಲ್ಲ ಒಳಗೆ
ಎಲ್ಲೆಯೊಳಗೇ ಮೆರೆದಿರಲು
ಸಮಾಜಕಾರಣ !

ಸಂಕಲ್ಪ

ದಶಕಗಳಿ೦ದ
ದಶದಿಕ್ಕುಗಳಿಂದ ಹರಿದುಬಂದ
ವಿಷಾದ ವಿಪರೀತವಾಗಿ
ಭಾವಕೋಶದಲಿ
ಬಂಡೆಯಾಗಿ ಬೇರೂರಿದರೆ
ಉಸಿರುಸಿರಿಗೂ ಕಾಡುವ
ಥರಥರದ ನೆನಪುಗಳು
ಚಿತ್ತಭ್ರಾಂತಿಯ ಬೇತಾಳಗಳಾಗಿ ನರ್ತಿಸಿವೆ

ರೋಗರುಜಿನಗಳು
ಆರ್ಥಿಕ ದಿವಾಳಿತನ
ಎಲ್ಲೆ ಮೀರಿರಲು
ದಿಕ್ಕೆಟ್ಟ ಸ್ಥಿತಿಯ
ದಿವಾನ ನಾನು

ದೈರ್ಯ ಸಾಹಸ
ಸಹನೆ ಸಂಯಮಗಳೆಲ್ಲ
ಉಡುಗಿ ಹೋದವು
ಕನಸು ಕನವರಿಕೆ
ಬಯಕೆ ಭರವಸೆಗಳು
ಗೋರಿಕಂಡವು

ಅಸಹಾಯಕತೆ ಹತಾಶೆ
ಮುಗಿಲು ಮುಟ್ಟಿದರೂ
ದೈವದ ಮೊರೆ ಹೋಗದೆ
ಪವಾಡಗಳ ನಿರೀಕ್ಷಿಸದೆ
ಯಥಾಸ್ಥಿತಿ ಪೊರೆವ
ಹಠಯೋಗಿಯೇ ನಾನಾಗಿ
ಮುಂದಿನದನ್ನುಅನುಭವಿಸಲು
ತಯಾರಿ ನಡೆಸಿದ್ದೇನೆ

‍ಲೇಖಕರು Admin

28 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading