ಪಿ ಪಿ ಉಪಾಧ್ಯ ಸರಣಿ ಕಥೆ 26 – ಮನೆ, ತೋಟ ಬಿಟ್ಟರೆ ತೀರ್ಥಳ್ಳಿಯ ಅಡಿಕೆ ಮಂಡಿ…

ಪಿ ಪಿ ಉಪಾಧ್ಯ

26

ಮನೆ, ತೋಟ ಬಿಟ್ಟರೆ ತೀರ್ಥಳ್ಳಿಯ ಅಡಿಕೆ ಮಂಡಿ

ಹೈಸ್ಕೂಲಿಗೆ ಹೋಗುವಾಗಲೂ ರಜಾ ದಿನಗಳಲ್ಲಿ ಅವನನ್ನು ತನ್ನ ಯಕ್ಷಗಾನದ ಪ್ರಸಂಗಗಳಿಗೆ ಎಳೆದುಕೊಳ್ಳುವುದನ್ನು ಮಾತ್ರ ಆ ಎಲಿಮೆಂಟರಿ ಶಾಲೆಯ ಮೇಷ್ಟ್ರು ಬಿಟ್ಟಿರಲಿಲ್ಲ. ಶನಿವಾರ ಭಾನುವಾರಗಳಲ್ಲದೆ ರಜಾ ದಿನಗಳಲ್ಲಿ ತಪ್ಪದೆ ಅವರು ಅಂತ್ಯನನ್ನು ಹುಡುಕಿಕೊಂಡು ಬರುತ್ತಿದ್ದರು ಮತ್ತು ಅವನನ್ನು ಎಳೆದುಕೊಂಡೇ ಹೋಗುತ್ತಿದ್ದರು. ಮನೆಯವರಿಗೆಲ್ಲ ಅದು ಆಪ್ಯಾಯಮಾನವೇ ಆದರೂ ಮಾವನ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಅಳುಕು. ಅಳಿಯನ ವಿದ್ಯಾಭ್ಯಾಸ ಈ ಯಕ್ಷಗಾನದ ಗೀಳಿನಲ್ಲಿ ಮುಳುಗಿ ಹೋದೀತೇ ಎಂದು. ತಂಗಿ ಮತ್ತು ಭಾವ ಎಷ್ಟು ಭರವಸೆಯಿಟ್ಟುಕೊಂಡು ಕಳುಹಿಸಿದ್ದಾರೋ. ಅದೆಲ್ಲಿಯಾದರೂ ಹುಸಿಯಾದೀತೇನೋ ಎನ್ನುವ ಹೆದರಿಕೆ.

ಆದರೆ ಅಂತ್ಯ ಮಾತ್ರ ಇವರೆಲ್ಲರ ಹೆದರಿಕೆಯನ್ನು ಹುಸಿ ಮಾಡುವವನಂತೆ ಹೈಸ್ಕೂಲಿನಲ್ಲೂ ಹೆಸರು ಮಾಡಿದ. ಕಲಿಯುವುದರಲ್ಲಿ ಅಷ್ಟೊಂದಲ್ಲದಿದ್ದರೂ ನಾಟಕ ಮತ್ತು ಯಕ್ಷಗಾನಗಳಲ್ಲಿ ಅಲ್ಲಿಯೂ ಹೆಸರೇ.

ಅಂತ್ಯನ ಭವಿಷ್ಯವೇ ಕಲೆ ಅದರಲ್ಲೂ ಯಕ್ಷಗಾನವೇ ಆಗುತ್ತದೇನೋ ಎನ್ನುವಂತಾಗಿತ್ತು. ಕೆಲವೊಮ್ಮೆ ಆ ಮಾವ ಚಿಂತಿಸುವುದಿತ್ತು ಯಾಕಾದರೂ ನಾನು ಅಂತ್ಯ ಮಗುವಾಗಿದ್ದಾಗ ಯಕ್ಷಗಾನದ ಹುಳವನ್ನು ಅವನ ತಲೆಯೊಳಗೆ ಬಿಟ್ಟೆನೋ' ಎಂದು. ಆದರೆ ಮರು ಕ್ಷಣವೇತಪ್ಪೇನು.. ಅದೂ ಒಂದು ಕಲೆ. ಇಷ್ಟು ಚಿಕ್ಕವನಾಗಿದ್ದಾಗಲೇ ಇಷ್ಟೊಂದು ಮೈಗೂಡಿಸಿಕೊಂಡಿದ್ದಾನೆ೦ದರೆ ವಯಸ್ಸಾಗುತ್ತ ಆಗುತ್ತ ದೊಡ್ಡ ಸಾಧಕನಾದಾನು’ ಎಂದು ತನ್ನನ್ನು ತಾನೇ ಸಮಾಧಾನಪಡಿಸಿಕೊಳ್ಳುತ್ತಲೂ ಇದ್ದರು.

ಯಾರು ಏನೇ ಎಣಿಸಿದರೂ ಅಂತ್ಯ ಮಾತ್ರ ತರಗತಿಗಳಲ್ಲಿ ಮುಂದೆ ಹೋಗಲು ಸಾಕಾಗುವಷ್ಟು ಮಾತ್ರ ಪಾಠಗಳಿಗೆ ಗಮನ ಕೊಡುತ್ತ ಉಳಿದೆಲ್ಲ ಸಮಯದಲ್ಲೂ ತನ್ನ ಯಕ್ಷಗಾನದ ಗೀಳಿನಲ್ಲೇ ಕಳೆಯುತ್ತಿದ್ದ. ಅಷ್ಟೇ ಅಲ್ಲ. ಹದಿನಾಲ್ಕರ ಹುಡುಗ ಮಾವನೊಂದಿಗೆ ತರ್ಕ ಮಾಡುತ್ತ ಅವರಿಗೇ ಉತ್ತರ ಕೊಡಲಾಗದ ಪ್ರಶ್ನೆಗಳನ್ನು ಕೇಳುತ್ತಿದ್ದ.
ಅದು ಪ್ರಾರಂಭವಷ್ಟೆ. ದಿನವಿಡೀ ಕಲೆಯ ಆರಾಧನೆ, ಅದರ ಉಪಾಸನೆ ಅದನ್ನೇ ಉಸಿರಾಡುತ್ತಿದ್ದ ಅಂತ್ಯನಿಗೆ ಅದೆಷ್ಟೋ ಸಂದೇಹಗಳು. ತಮಾಷೆಗಾಗಿ ಯಕ್ಷಗಾನ, ಸಮಯ ಕಳೆಯಲು ಬಯಲಾಟ, ಮನರಂಜನೆಗಾಗಿ ಅದರ ಇತರ ಪ್ರಭೇದಗಳಾದ ಹೂವಿನ ಕೋಲು ತಾಳಮದ್ದಲೆಗಳನ್ನು ಆಡಿಸುತ್ತಿದ್ದ, ನೋಡುತ್ತಿದ್ದ ಆ ಮಾವ ಏನು ಉತ್ತರವನ್ನು ಕೊಟ್ಟಾರು ಇವನ ಪ್ರಶ್ನೆಗಳಿಗೆ.

ಅಂತೂ ಅಂತ್ಯ ತನ್ನ ಪ್ರಶ್ನೆಗಳನ್ನು ತನ್ನಲ್ಲೇ ಇಟ್ಟುಕೊಳ್ಳ ಬೇಕಾಯ್ತು. ಇವನಿಗೆ ಮತ್ತು ಇವನಂತಹ ಬಹಳಷ್ಟು ಮಕ್ಕಳಿಗೆ ಯಕ್ಷಗಾನದ ಓನಾಮ ಹಾಕಿದ ಇನ್ನೂ ಅದೇ ಊರಿನಲ್ಲಿ ಇದ್ದ ಮೇಷ್ಟ್ರ ಹತ್ತಿರ ಕೇಳಿದರೂ ಆ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಬರುತ್ತಿರಲಿಲ್ಲ. ಆದರೆ ಅವರು ಕೊಟ್ಟ ಒಂದು ಉತ್ತರ ಮಾತ್ರ ಬಹಳಷ್ಟು ದಿನ ಇವನು ಚಿಂತಿಸುವ೦ತೆ ಮಾಡಿತ್ತು. ಇವನ ಅಂತ್ಯವಿಲ್ಲದ ಪ್ರಶ್ನೆಗಳಿಂದ ಬೇಸತ್ತದ್ದಕ್ಕೂ ಇರಬಹುದು. ಅಥವಾ ಇವನ ಪ್ರಶ್ನೆಗಳಿಗೆಲ್ಲ ಉತ್ತರಿಸುವ ಮಟ್ಟಿನ ಜ್ಞಾನ ತನಗಿಲ್ಲವಲ್ಲ ಎನ್ನುವ ಹತಾಶ ಭಾವನೆಯಿಂದಲೂ ಇರಬಹುದು. ನೋಡು ಅಂತ್ಯ ಹಾಲು ಕೊಳ್ಳಲು ಬಂದವನಿಗೆ ಎಮ್ಮೆಯ ದರದ ಚಿಂತೆ ಯಾಕೆ. ಹಾಲಿಗೆ ಕೊಡುವಷ್ಟು ದುಡ್ಡು ಜೇಬಿನಲ್ಲಿದ್ದರೆ ಅದನ್ನು ಕೊಟ್ಟು ಹಾಲು ತೆಗೆದುಕೊಂಡು ಹೋಗುವುದಪ್ಪ.

ನಮಗೆಲ್ಲ ಯಕ್ಷಗಾನ ಆಡುವುದಷ್ಟೇ ಕೆಲಸ. ಇನ್ನುಳಿದಂತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಯಾಕೆ. ಅದು ನಮ್ಮ ಕೆಲಸವೂ ಅಲ್ಲ. ಅದರ ಅಗತ್ಯವೂ ಇಲ್ಲ' ಎಂದಿದ್ದರು. ಅಂತ್ಯನಿಗೆ ಸಮಾಧಾನವಾಗಿರಲಿಲ್ಲ. ಹಾಗೆಂದು ಮೇಷ್ಟ್ರನ್ನು ದೂರುವುದೂ ಅವನಿಂದ ಆಗದ ಕೆಲಸ. ತನಗೆ ಅಕ್ಷರ ಕಲಿಸಿದವರು. ರಂಗಸ್ಥಳದ ಮೇಲೆ ತಪ್ಪು ಹೆಜ್ಜೆಯಿಡುತ್ತ ಧಿಮಿತಕ ಧಿಮಿತಕ ಎನ್ನತ್ತಿದ್ದಾಗ ತಿದ್ದಿ ತಾಳಕ್ಕೆ ತಕ್ಕ ಹೆಜ್ಜೆಯಿಡಲು ಕಲಿಸಿದವರು. ಅಂತಹವರನ್ನು ಈಗೀಗ ಜ್ಞಾನದ ಹರಹನ್ನು ಹೆಚ್ಚಿಸಿಕೊಳ್ಳುತ್ತಿದ್ದ ತಾನು ಧಿಕ್ಕರಿಸಲಾರ. ಆದರೆ ಅವರಂದುದನ್ನು ಅರಗಿಸಿಕೊಳ್ಳಲೂ ಆಗುತ್ತಿರಲಿಲ್ಲ.

ಬಹಳಷ್ಟು ದಿನ ಅಂತಹ ದ್ವಂದ್ವದಲ್ಲೇ ಕಳೆದ ಆತ ಕೊನೆಗೊಂದು ನಿರ್ಧಾರಕ್ಕೆ ಬಂದಿದ್ದ. ಯಾರನ್ನಾದರೂ ಕೇಳಿ ಅವರ ಜ್ಞಾನದ ಅಳತೆ ಮಾಡುವದಕ್ಕಿಂತ ತನ್ನ ಜ್ಞಾನವನ್ನು ತಾನೇ ಅಭಿವೃದ್ಧಿಪಡಿಸಿಕೊಳ್ಳುವ ದಿಕ್ಕಿನಲ್ಲಿ ಕೆಲಸ ಮಾಡುವುದೇ ಒಳ್ಳೆಯದು ಎಂದು. ಆಗ ಅವನಿಗೆ ಹೈಸ್ಕೂಲಿನಲ್ಲಿ ಕೊನೆಯ ವರ್ಷ ಮತ್ತು ಅವನನ್ನು ಇಲ್ಲಿಗೆ ಕಳುಹಿಸುವಾಗ ಮಾವ ಮತ್ತು ಅಮ್ಮನ ನಡುವೆ ನಡೆದ ಮಾತಿನಂತೆ ತಿರುಗಿ ಊರಿಗೆ ಹೋಗುವ ಸಮಯ. ಹಾಗೆ ಅವನು ಊರಿಗೆ ವಾಪಾಸು ಹೋಗುವ ಸಮಯ ಬಂತೆ೦ದು ಗೊತ್ತಾದ ಕೂಡಲೇ ಅವನ ಅತ್ತೆಗೆ ಸಂಕಟ ಸುರುವಾಗಿತ್ತು. ಅಂತ್ಯನಿಗೂ ಅಷ್ಟೆ. ಇವರನ್ನು ಕರೆಯುವಾಗ ಅತ್ತೆ, ಮಾವ ಎನ್ನುತ್ತಿದ್ದರೂ ಅವನು ಅವರಿಬ್ಬರನ್ನೂ ತನ್ನ ತಂದೆ ತಾಯಂದಿರಷ್ಟೇ ಪ್ರೀತಿಸುತ್ತಿದ್ದ. ಎಡವುತ್ತ ಹೆಜ್ಜೆಯಿಡುವ ಕಾಲದಲ್ಲಿಯೇ ಮಾವನ ತೊಡೆಯ ಮೇಲೆ ಕುಳಿತು ಆ ಆಗುಂಬೆ ಘಾಟಿಯನ್ನು ಓಲಾಡುತ್ತ ಹತ್ತುತ್ತಿದ್ದ ವ್ಯಾನಿನಲ್ಲಿ ಕುಳಿತು ಸುತ್ತ ಮುತ್ತಿನ ಪ್ರಪಂಚವನ್ನು ತನ್ನ ಬೆರಗುಗಣ್ಣುಗಳಿಂದ ನೋಡುತ್ತ ಬಂದ ಅಂತ್ಯ ಮುಂದಿನ ದಿನಗಳನ್ನು ಕಳೆದದ್ದೇ ಆ ಅತ್ತೆ ಮಾವನ ಆರೈಕೆಯಲ್ಲಿ.

ಚಿಕ್ಕವನಿದ್ದಾಗ ಅವನನ್ನು ನೋಡಿಕೊಂಡು ಹೋಗಲು ಅಪರೂಪಕ್ಕೊಮ್ಮೆ ಅಮ್ಮನೇ ಆ ಸುತ್ತು ಬಳಸು ಘಾಟಿಯನ್ನು ಹತ್ತಿಕೊಂಡು ಬಂದರೆ ಶಾಲೆಗೆ ಹೋಗಲು ಸುರು ಮಾಡಿದ ಮೇಲೆ ರಜೆ ಬಂದಾಗಲೆಲ್ಲ ಈ ಮಾವನೇ ಅವನನ್ನು ಊರಿಗೆ ಬಿಟ್ಟು ಬರುತ್ತಿದ್ದುದು. ಮತ್ತೆ ಹೆಂಡತಿಯ ಗೋಗರೆತ ತಡೆಯಲಾರದೇ ಶಾಲೆ ಸುರುವಾಗುವ ನಾಲ್ಕು ದಿನಗಳ ಮುಂಚೆಯೇ ಹೋಗಿ ಕರೆದುಕೊಂಡು ಬರುತ್ತಿದ್ದುದು. ಅಜ್ಜನ ಮನೆಯಿಂದ ಊರಿಗೆ ಹೊರಡುವಾಗ ಕೊನೆಯವರೆಗೆ ತನ್ನನ್ನು ತಬ್ಬಿಕೊಂಡು ಕಣ್ಣು ಒರೆಸಿಕೊಳ್ಳುತ್ತಿದ್ದ ಅತ್ತೆಯಿಂದ ಬಿಡಿಸಿಕೊಳ್ಳಬೇಕಾಗಿ ಬಂದಾಗ ತುಸು ಕಸಿವಿಸಿಯನ್ನು ತೋರಿಸುತ್ತಿದ್ದ ಅಂತ್ಯ ಊರಿಂದ ತಿರುಗಿ ಹೊರಡುವಾಗ ಒಂದಿನಿತೂ ಚಿಂತೆ ಮಾಡುತ್ತಿರಲಿಲ್ಲ. ಅಣ್ಣಂದಿರಿಗೆ ಅವರು ಎದುರಿಗಿಲ್ಲದಿದ್ದರೆ ಹೇಳುತ್ತಲೂ ಇರಲಿಲ್ಲ.

ಅಮ್ಮ ಮಾತ್ರ ಬರೋ ಸಲ ರಜೆಗೆ ಪುನಃ ಮಾಣಿಯನ್ನು ಕರೆದುಕೊಂಡು ಬಾ’ ಎಂದು ಅಣ್ಣನಿಗೆ ಹೇಳುತ್ತಿದ್ದಳೇ ವಿನಃ ಅಂತ್ಯನಿಗೇನೂ ಹೇಳುತ್ತಿರಲಿಲ್ಲ. ಅಂತಹ ಅಂತ್ಯ ಈಗ ಖಾಯಂ ಆಗಿ ಊರಿಗೇ ಹೋಗಿ ಬಿಡಲು ನಿರ್ಧರಿಸಿದ್ದಾನೆ. ವಯಸ್ಸು ಹದಿನಾರು. ತಾಯಿಯ ಅಥವಾ ಅತ್ತೆಯ ಮಡಿಲಲ್ಲಿ ಕುಳಿತು ಆಡುವ ವಯಸ್ಸೇನೂ ಅಲ್ಲ. ಆದರೆ ಆ ಅತ್ತೆಗೆ ಮಾತ್ರ ಎಂದೂ ತನ್ನ ಮಗನಲ್ಲ ಎನ್ನಿಸದ ಅವನನ್ನು ಕಳುಹಿಸುವುದೆಂದರೆ ಸಂಕಟವಾಗಿತ್ತು. ಗಂಡನೊ೦ದಿಗೆ ಪದೇ ಪದೆ ಕೇಳಿದ್ದಳು ಅಲ್ಲ ಏನಾದರೂ ಮಾಡಿ ಅಂತ್ಯನನ್ನು ನಾವೇ ಇಟ್ಟುಕೊಳ್ಳಲು ಬರದೇ' ಎಂದು. ಆ ಗಂಡ ಹೊರಗಿನ ವ್ಯವಹಾರ ಅಷ್ಟೊಂದು ತಿಳಿದವನಲ್ಲ.

ಮನೆ, ತೋಟ ಬಿಟ್ಟರೆ ತೀರ್ಥಳ್ಳಿಯ ಅಡಿಕೆ ಮಂಡಿ. ಪುರುಸೊತ್ತಿನ ಸಮಯದಲ್ಲಿ ಯಕ್ಷಗಾನ. ಮಕ್ಕಳಿಲ್ಲದ ಕೊರತೆಯನ್ನು ಹೋಗಲಾಡಿಸಲು ಅಂತ್ಯನನ್ನು ಕರೆತಂದು ಸಾಕಿಕೊಂಡದ್ದು ಅಷ್ಟೆ. ಅದಕ್ಕಿಂತ ಮುಂದೆ ಆ ಮಾವನ ಆಲೋಚನೆ ಓಡದು. ಹೆಂಡತಿ ಕೇಳಿದ ಪ್ರಶ್ನೆಗೆ ಅವನಲ್ಲಿ ಉತ್ತರವಿಲ್ಲ. ಅಲ್ಲ! ಹೆತ್ತವರು ಅಕ್ಕ ಭಾವ. ಎಂದಿದ್ದರೂ ಅವರ ಮಗ ಅವರಿಗೇ. ಇಷ್ಟು ದಿನ ಇಟ್ಟುಕೊಳ್ಳಲಿಕ್ಕೆ ಬಿಟ್ಟದ್ದೇ ದೊಡ್ಡದು. ಅದಕ್ಕೂ ಮೇಲೆ ಇನ್ನೂ ಅವನು ನಮ್ಮ ಜೊತೆಗೇ ಇರಬೇಕೆಂದರೆ. ಅವನಿಗೆ ಹೆಂಡತಿಯ ಬೇಡಿಕೆ ತೀರಾ ಆಸೆಯದ್ದಾಗಿ ಕಂಡಿತ್ತು. ದತ್ತು ತಗೆದುಕೊಳ್ಳುವುದು ಅದೂ ಇದೂ ಒಂದೂ ಅವನ ತಲೆಗೆ ಹತ್ತಿರಲಿಲ್ಲ. ಇರುವಷ್ಟು ದಿನ ನಮ್ಮ ಜೊತೆಗೆ ಇರುತ್ತಾನೆ.

ಮುಂದೆಯೂ ಬೇಕೆಂದಾಗ ಬಂದು ಹೋಗುತ್ತಾನೆ. ಅಷ್ಟು ಸಾಕಲ್ಲ. ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ಜೊತೆಯಲ್ಲಿ ಇರುವುದಿಲ್ಲ. ಅಂದ ಮೇಲೆ ಈ ಅಕ್ಕನ ಮಗ ಇರಬೇಕೆಂದರೆ. ಅಂತ್ಯನ ಮೇಲಿನ ಮಮಕಾರದ ಹೊರತಾಗಿಯೂ ಅವನು ಊರಿಗೆ ಹೋಗಿ ಅಪ್ಪ ಅಮ್ಮನ ಜೊತೆಗಿರುವುದೇ ಸರಿ ಅನ್ನಿಸಿತ್ತು ಆ ಮಾವನಿಗೆ. ಅಲ್ಲಿಯೇ ಪಕ್ಕದಲ್ಲಿ ಇರುತ್ತಿದ್ದ ಅಂತ್ಯನ ಚಿಕ್ಕ ಮಾವನೂ ಇದನ್ನೆಲ್ಲ ಗಮನಿಸುತ್ತಲೇ ಇದ್ದವನು. ಪುಟ್ಟ ಮಗುವಾಗಿದ್ದ ಅಂತ್ಯನನ್ನು ಕರೆ ತಂದಾಗಲೇ ಅವರು ಗಂಡ ಹೆಂಡತಿ ಒಳಗೊಳಗೇ ಗುಸು ಗುಸು ಮಾತನಾಡಿಕೊಂಡಿದ್ದರು.ಅಲ್ಲ ಈ ಅಣ್ಣನಿಗೇನು ಮರುಳೇ.. ಕೇಳಿದ್ದರೆ ನಮ್ಮ ಮಂಜುನಾಥನನ್ನೇ ಕೊಡುತ್ತಿರಲಿಲ್ಲವೇ’ ಎನ್ನುತ್ತ ಆಗಿನ್ನೂ ಪಿಳಿ ಪಿಳಿ ಕಣ್ಣು ಬಿಡುತ್ತ ತಾಯಿಯ ತೊಡೆಯ ಮೇಲೆ ಮಲಗಿದ್ದ ಎರಡನೆಯದಾಗಿ ಹುಟ್ಟಿದ್ದ ತಮ್ಮ ಚಿಕ್ಕ ಮಗುವನ್ನು ತಟ್ಟುತ್ತ ಅಲವತ್ತುಕೊಂಡಿದ್ದರು. ಹಿರಿಯವಳು ಮಗಳು. ಆಗ ಮನೆಯಿನ್ನೂ ಪಾಲಾಗಿರಲಿಲ್ಲ. ಅಣ್ಣ ತಮ್ಮ ಒಟ್ಟಿಗೇ ಇದ್ದು ಅಪ್ಪನ ಯಜಮಾನಿಕೆಯಲ್ಲಿ ತೋಟ ನೋಡಿಕೊಳ್ಳುತ್ತಿದ್ದರು. ಅಣ್ಣನಿಗೆ ಮದುವೆಯಾಗಿ ಹಲ ವರ್ಷ ಮಕ್ಕಳಾಗದ್ದು ಇವನಲ್ಲಿ ಒಂದು ಆಸೆ ಮೊಳೆಸಿತ್ತು. ಅಪ್ಪನ ಇಡೀ ಆಸ್ತಿ ತನ್ನದೇ ಎನ್ನುವ ವ್ಯಾಮೋಹ ಬೆಳೆಯುತ್ತ ಬಂದಿತ್ತು. ಆದರೆ ಈ ಅಣ್ಣ ಅತ್ತಿಗೆ ಸೇರಿ ಅಂತ್ಯನನ್ನು ಕರೆದುಕೊಂಡು ಬಂದಾಗ ಆ ಆಸೆ ತುಸು ಕಮರಿದ್ದರೂ ಗಮನಿಸುತ್ತಲೇ ಇದ್ದ.

ಅದೇ ಅಪ್ಪ ಸತ್ತ ಮೇಲೆ ಪಾಲಾಗಿ ಅಲ್ಲೇ ಪಕ್ಕದಲ್ಲೇ ಇನ್ನೊಂದು ಮನೆ ಕಟ್ಟಿಕೊಂಡು ಹೋದ ಮೇಲಂತೂ ಈ ಅಂತ್ಯನ ಅಸ್ಥಿತ್ವ ಅವರ ಕಣ್ಣಿಗೊಂದು ಮುಳ್ಳಾಗಿತ್ತು. ಆದರೂ ಹೇಳಿಕೊಳ್ಳಲಾರ. ಅವರಿಗೂ ಅಕ್ಕನ ಮಗನಲ್ಲವೇ. ಅದು ಬೇರೆ ಭಾವನ ಮಾತಿನ ವೈಖರಿಯೆದುರಿಗೆ ತಮ್ಮದೇನೂ ಅಲ್ಲವೆಂದು ಅರಿವಿದ್ದ ಅವನು ಆ ಭಾವನನ್ನು ಮಾತಿಗೆಳೆಯುವ ಯಾವ ಸಾಹಸಕ್ಕೂ ಕೈ ಹಾಕುತ್ತಿರಲಿಲ್ಲ. ಆದರೆ ಗಂಡ ಹೆಂಡತಿ ಆಡಿಕೊಳ್ಳುವ ಮಾತಿನಲ್ಲಿ ಮಾತ್ರ ಈ ವಿಷಯ ನುಸುಳದ ದಿನಗಳೇ ಇಲ್ಲ.

ಉದ್ದಕ್ಕೂ ಅವರಿಬ್ಬರೂ ಅಂತ್ಯನ ಚಟುವಟಿಕೆಯನ್ನು ಮಾತ್ರ ಗಮನಿಸುತ್ತಲೇ ಬಂದಿದ್ದರು. ಅಣ್ಣ ಅವನನ್ನು ದತ್ತು ತೆಗೆದು ಕೊಳ್ಳಲಿಲ್ಲ ಎನ್ನುವುದನ್ನೂ ಗಮನಿಸಿ ಒಳಗೊಳಗೇ ಖುಶಿ ಪಡುತ್ತಿದ್ದರು. ಅದೇ ಮಾರನೇ ಕ್ಷಣಕ್ಕೆ ಅಂತ್ಯನನ್ನು ಅಣ್ಣ ಮತ್ತು ಅತ್ತಿಗೆ ಓಲೈಸುವುದನ್ನು ನೋಡಿ ಸಂಕಟಪಡುತ್ತಿದ್ದರು. ಆ ತಮ್ಮ ವ್ಯವಹಾರದಲ್ಲಿ ಅಣ್ಣನಷ್ಟು ಭೋಳೇ ಸ್ವಭಾವದವನಲ್ಲ. ತೀರ್ಥಳ್ಳಿಯ ಶಾಲೆಯಲ್ಲಿ ಅಣ್ಣನಷ್ಟೇ ಓದಿದವನಾದರೂ ಅಲ್ಲಿನ ಅಡಿಕೆ ಮಂಡಿಗೆ ಹೋದಾಗ ಮಾಡಿಕೊಂಡ ಪರಿಚಯದವರ ಮೂಲಕ ಅಷ್ಟಿಷ್ಟು ವ್ಯವಹಾರ ತಿಳಿದುಕೊಂಡಿದ್ದ. ಅಷ್ಟೇ ಅಲ್ಲ ಊರಿನಲ್ಲಿನ ಕೆಲ ಮನೆಹಾಳ ಗೆಳೆಯರೂ ಆಗಾಗ್ಗೆ ಅವನ ಕಿವಿಯೂದುತ್ತಿದ್ದರು.

ಹಾಗಾಗಿ ಅಣ್ಣನೆಲ್ಲಿಯಾದರೂ ಅಂತ್ಯನನ್ನು ದತ್ತಕ್ಕೆ ತೆಗೆದುಕೊಂಡನೆ೦ದರೆ ತನ್ನೆಲ್ಲ ಆಸೆಗೆ ಕಲ್ಲು ಬಿದ್ದಂತೆಯೇ ಎನ್ನುವ ಅಪ್ರಾಸಂಗಿಕ ಜಾಗ್ರತೆಯಲ್ಲಿದ್ದ ಅವ ಅಣ್ಣನ ವ್ಯವಹಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿದ್ದ. ಈ ಅತ್ತಿಗೆಯ ರಗಳೆ ಜಾಸ್ತಿಯಾದಾಗೆಲ್ಲ ತನ್ನ ಕಸಿವಿಸಿಯನ್ನು ಹೆಚ್ಚು ಮಾಡಿಕೊಳ್ಳುತ್ತಲೇ ಇದ್ದವನಿಗೆ ಈಗ ಅಣ್ಣ ಅಂತ್ಯನನ್ನು ಊರಿಗೆ ಕಳುಹಿಸುವ ತಯಾರಿ ಮಾಡುತ್ತಿದ್ದಾನೆಂದಾಗ ಉಸಿರು ಬಂದಿತ್ತು. ಅಂತೂ ವಾರಸ್ತಾರರಿಲ್ಲದ ಅಣ್ಣನ ಆಸ್ತಿ ಅವನ ಕಾಲಾನಂತರ ತನಗೇ ಎಂದು ಸಮಾಧಾನವಾಗಿತ್ತು.

|ಇನ್ನು ನಾಳೆಗೆ |

‍ಲೇಖಕರು Admin

May 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: