ಪೂಜಾರಿಜೀ ಕೋ ಗುಸ್ಸಾ ಕ್ಯೋಂ ಆತಾ ಹೈ?

raja ram

ರಾಜಾರಾಂ ತಲ್ಲೂರು

poojary_170509_bigಕಾಂಗ್ರೆಸ್ಸಿನಲ್ಲೊಂದು ನಿಷ್ಠಾವಂತರ ಪಡೆ ಇದೆ. ಅವರು ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗಿಂತಲೂ ಹೆಚ್ಚುನಿಷ್ಠರು.

ಜನಾರ್ದನ ಪೂಜಾರಿಯವರು ಈ ವರ್ಗಕ್ಕೆ ಸೇರಿದವರು.

ಕೇಂದ್ರದ ಮಾಜೀ ಸಚಿವರೂ, ಪ್ರದೇಶ ಕಾಂಗ್ರೆಸ್ ಮಾಜೀ ಅಧ್ಯಕ್ಷರೂ ಆಗಿರುವ ಜನಾರ್ದನ ಪೂಜಾರಿಯವರು ಸದ್ಯಕ್ಕೆ ತಮ್ಮ ಹೆಡ್ ಕ್ವಾರ್ಟರ್ ಮಂಗಳೂರಿನಲ್ಲಿರುವ ಪತ್ರಕರ್ತರಿಗೆ “ಪತ್ರಿಕಾಗೋಷ್ಟಿ ಟ್ರೇನರ್”.

ಜನಾರ್ದನ ಪೂಜಾರಿಯವರು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದಬಗ್ಗೆ ವಾರಕ್ಕೊಮ್ಮೆ ಎತ್ತಿಕೊಡುವ ಸೊಲ್ಲು ಬೇರೇನು ಮಾಡದಿದ್ದರೂ ಸುದ್ದಿ ಮಾಡುತ್ತದೆ; ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ತಣ್ಣಗಿರುವ ಪ್ರತಿಪಕ್ಷಗಳಿಗೆ ಕೆಲವೊಮ್ಮೆ ನೈತಿಕತೆಯನ್ನೂ, ಇನ್ನು ಕೆಲವೊಮ್ಮೆ ಸ್ಟೇಟ್ ಮೆಂಟುಗಳಿಗೆ ವಿಷಯಗಳನ್ನೂ ಒದಗಿಸುತ್ತದೆ.

ಲಾಜಿಕ್ ಇಲ್ಲದಿರುವುದೇ ಇಲ್ಲಿ ಲಾಜಿಕ್

ಎಸ್ ಎಂ ಕೃಷ್ಣ ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ (2003-2005) ಜನಾರ್ದನ ಪೂಜಾರಿಯವರು ಅಲ್ಲಿಂದ ಧರಂ ಸಿಂಗ್ ಆಡಳಿತ ಆರಂಭಗೊಂಡಾಗ, ಪಕ್ಷದ ಪರವಾಗಿ ಮಾಧ್ಯಮಗಳಿಗೆ “ಜನತಾ ದರ್ಶನ” ಆರಂಭಿಸಿದರು. ಅಲ್ಲಿಂದ ಇಲ್ಲಿಯ ತನಕವೂ ಅದು ಅನೂಚಾನವಾಗಿ ಮುಂದುವರಿದುಕೊಂಡು ಬಂದಿದೆ. ದೇಶದ ಪ್ರತಿಯೊಂದೂ ಸಮಸ್ಯೆಗಳಿಗೆ ಗಂಭೀರವಾಗಿ ಪ್ರತಿಕ್ರಿಯಿಸುವ ಜನಾರ್ದನ ಪೂಜಾರಿಯವರ “ಪತ್ರಕರ್ತರ ಟ್ರೇನಿಂಗ್ ಕ್ಲಾಸ್” ಮೇಲ್ನೋಟಕ್ಕೆ ಯಾವುದೇ ಲಾಜಿಕ್ಕಾಗಲೀ, ಸಂಬದ್ಧತೆಯಾಗಲೀ ಇಲ್ಲದ ಓತಪ್ರೋತ ವಾಗ್ಜಾಲ ಅನ್ನಿಸಿದರೂ, ಅದಕ್ಕೊಂದು “ಲಾಜಿಕ್ ಇಲ್ಲದಿರುವ ಲಾಜಿಕ್” ಇದೆ.

ಎಸ್. ಎಂ. ಕೃಷ್ಣರ “ಸಿಂಗಾಪುರ ಮಾದರಿ”ಯಿಂದ ಆರಂಭಿಸಿ ಮೊನ್ನೆಮೊನ್ನೆ ಸಿದ್ಧರಾಮಯ್ಯನವರ “ಹ್ಯೂಬ್ಲೊ” ವಾಚಿನ ತನಕ ಜನಾರ್ದನ ಪೂಜಾರಿಯವರು ಎತ್ತಿಕೊಟ್ಟ ಯಾವುದೇ ಸೊಲ್ಲು ಈ ತನಕಗುರಿ ತಲುಪದೇ ಉಳಿದಿಲ್ಲ. ಅಂದು ಬೊಫೋರ್ಸ್ ಹಗರಣ ಗದ್ದಲ ಮಾಡುತ್ತಿದ್ದ ವೇಳೆ ಕಾಂಗ್ರೆಸ್ಸನ್ನು ಪೂಜಾರಿಯವರು ಡಿಫೆಂಡ್ ಮಾಡಿಕೊಳ್ಳುತ್ತಿದ್ದ ಪರಿ ಈವತ್ತಿಗೂ ಸುದ್ದಿಮನೆಗಳಲ್ಲಿ ಲೆಜೆಂಡ್. ಈ ಬಗ್ಗೆ ಕರಾವಳಿಯ ಹಳೆಯ ತಲೆಮಾರಿನ ಪತ್ರಕರ್ತರನ್ನು ಕೇಳಿನೋಡಿ.

ಪ್ರತೀವಾರ ಇಷ್ಟೆಲ್ಲ ಸದ್ದು ಮಾಡುತ್ತಿದ್ದರೂ, ಇತ್ತೀಚೆಗೆ ವೇದಿಕೆಯ ಮೇಲೇ ಸಿದ್ಧರಾಮಯ್ಯ ಅವರಿಂದ “ಇಂತಹವರನ್ನೆಲ್ಲ ಯಾಕೆ ಕರೀತೀರಿ” ಅನ್ನಿಸಿಕೊಂಡಿದ್ದರೂ, ಜನಾರ್ದನ ಪೂಜಾರಿಯವರು ಯಾವತ್ತಾದರೂ “ಪೊಲಿಟಿಕಲಿ ರಾಂಗ್” ಅನ್ನಿಸುವ ಹೇಳಿಕೆ ಕೊಟ್ಟದ್ದು ಕೇಳಿದ್ದೀರಾ? ಅಲ್ಲೇ ಅವರ ವಕೀಲಿಕೆಯ ಅಂದ ಇರುವುದು.

janardhana poojariಕಾಂಗ್ರೆಸ್ಸಿನ ಇತ್ತೀಚೆಗಿನ ಚರಿತ್ರೆಯನ್ನು ಗಮನಿಸುತ್ತಾ ಬಂದರೆ, ಅಲ್ಲಿ ಪ್ರತೀ “ಪಟ್ಟಾಭಿಷೇಕ” ಮತ್ತು ಪ್ರತೀ “ಪದಚ್ಯುತಿ”ಯಲ್ಲಿ, ಇಂತಹ ಒಳಗುದ್ದು ಸೊಲ್ಲುಗಳ ಪಾತ್ರ ದೊಡ್ಡದಿರುವುದನ್ನು ಗಮನಿಸಬಹುದು. ಸಿದ್ಧರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಈವತ್ತಿನ ತನಕವೂ ಕಾಂಗ್ರೆಸ್ಸಿನಲ್ಲಿ”ಮೂಲ ಕಾಂಗ್ರೆಸ್” ಮತ್ತು “ಬಂದಿಳಿದವರ ಕಾಂಗ್ರೆಸ್” ಎಂಬ ವರ್ಟಿಕಲ್ ಸೀಳು ಕೆಲಸ ಮಾಡುತ್ತಲೇ ಬಂದಿದೆ. ಕೆಪಿಸಿಸಿ ಕಚೇರಿಯಲ್ಲೂ “ಬಂದಿಳಿದವರ” ಗುಂಪಿಗೆ ಸೇರಿದವರ ಭರಾಟೆ ಹೆಚ್ಚಾದ ಬಳಿಕ “ಮೂಲ” ಕಾಂಗ್ರೆಸ್ಸಿಗರಿಗೆ ಆ ಜಾಗದ ತೀರ್ಥಯಾತ್ರೆ ಪವಿತ್ರವಾಗಿ ಉಳಿದಿಲ್ಲ.

ಮೂಲ ಕಾಂಗ್ರೆಸ್ಸಿಗರು ತಮ್ಮ ಅಸಮಾಧಾನವನ್ನು ಎಂದೂ ನೇರ ಹೊರಹಾಕಿ “ಪೊಲಿಟಿಕಲಿ ರಾಂಗ್” ಅನ್ನಿಸಿಕೊಳ್ಳುವುದಿಲ್ಲ. ಆದರೂ ಈಗ ಈ ಒಳಗುದಿ ಉಕ್ಕೇರುವ ಹಂತ ತಲುಪಿದ್ದು, “ಪೊಲಿಟಿಕಲಿ ರೈಟ್” ಹೇಳಿಕೆಗಳ ಮೂಲಕವೇ ಸಿದ್ಧರಾಮಯ್ಯ ಅವರಿಗೆ ಸತತವಾಗಿ ಕಹಿ ಗುಳಿಗೆಗಳನ್ನು ಉಣ್ಣಿಸಲಾಗುತ್ತಿದೆ.

ಇದರ ಅರ್ಥ…. ಕರ್ನಾಟಕದಲ್ಲಿ ಕಾಂಗ್ರೆಸ್ ಮಗ್ಗುಲು ಬದಲಾಯಿಸಲು ಸಿದ್ಧಗೊಂಡಿದೆ!

‍ಲೇಖಕರು Admin

June 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: