ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.
ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.
ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ – 9
ಕೃತಿ –ಜಗವ ಸುತ್ತುವ ಮಾಯೆ
ಲೇಖಕರು – ಸುಚಿತ್ರಾ ಹೆಗಡೆ
ಪ್ರಕಾಶಕರು – ಕವಿತಾ ಪ್ರಕಾಶನ
“ಜಗವ ಸುತ್ತುವ ಮಾಯೆ” – ಸುಚಿತ್ರಾ ಹೆಗಡೆ ಅವರ ಪ್ರವಾಸ ಕಥನ ಇದಾಗಿದೆ. ಜಗತ್ತು ನೋಡಬೇಕೆಂಬ ಹುಚ್ಚು ಸೇರಿದರೆ ಅದಕ್ಕೆ ಕೊನೆ ಮೊದಲುಗಳಿಲ್ಲ. ಗುಡ್ಡ ,ಬೆಟ್ಟ,ನದಿ,ಸಮುದ್ರ, ಗುಡಿ ಗುಂಡಾರ,ಸಂಗ್ರಹಾಲಯಗಳು, ಪ್ರಾಚೀನ – ಅರ್ವಾಚೀನ ಹೀಗೆ ಎಲ್ಲವನ್ನೂ ನೋಡಿ ಕಣ್ತುಂಬಿಕೊಳ್ಳುವ ಹಪಹಪಿ ಪ್ರವಾಸಿಗನಿಗೆ ಹುಟ್ಟುತ್ತದೆ.
ಅವರವರ ಆಸಕ್ತಿ ಅಭಿರುಚಿ ಮತ್ತು ಆರ್ಥಿಕ ಶಕ್ತಿಯ ಅನುಗುಣವಾಗಿ ಯಾನ ಕೈಗೊಳ್ಳುವರು.ಆದರೆ ನೋಡಿರುವುದೆಲ್ಲಾ ಕಣ್ಣ ಬಿಂಬದಲ್ಲಿ ಶಾಶ್ವತವಾಗಿ ನೆಲೆನಿಲ್ಲುವುದಿಲ್ಲ.ಹಾಗೆಂದು ಪ್ರವಾಸ ಕೈಗೊಳ್ಳದೆ ನಮ್ಮ ಅನುಭವ ವಿಸ್ತರಿಸಿಕೊಳ್ಳಲು ಸಾದ್ಯವಿಲ್ಲ. ಹೊಸ ಆಲೋಚನಾ ಕ್ರಮ ಮೂಡುವುದು ಇಲ್ಲ. ದೇಶ ನೋಡುವ – ಕೋಶ ಓದುವ ಪರಿ ಭಿನ್ನ ಅಷ್ಟೇ. ಲೋಕೋಭಿನ್ನರುಚಿ ಎಂಬಂತೆ.
ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ಸುಚಿತ್ರಾ ಅವರ ವಿಶಿಷ್ಟ ಹಾಗೂ ವಿಭಿನ್ನಪ್ರವಾಸ ಕಥನ.ಅವರು ಒಂದು ಸ್ಥಳ ಅಥವಾ ಒಂದು ಪ್ರದೇಶದ ಬಗ್ಗೆ ಮಾಹಿತಿ ನೀಡದೆ, ಅವರು ಕಂಡ ದೇಶಿಯ ಮತ್ತು ವಿದೇಶದ ಕೆಲವು ಮಹತ್ವದ ತಾಣಗಳ ಪರಿಚಯ ಅವರದೆ ಧಾಟಿಯಲ್ಲಿ ಒಂದೇ ಕೃತಿಯಲ್ಲಿ ದಾಖಲಿಸಿದ್ದು ವಿಶೇಷ.
ಕಾಶಿಯಿಂದ-ಪ್ಯಾರಿಸ್ ವರೆಗೆ,ಎಲ್ಲೊರಾದಿಂದ- ವಿಯಟ್ನಾಂ ವರೆಗೆ ಹೀಗೆ ತಾವು ಕಂಡ ಜಗತ್ತನ್ನು ಅಲ್ಲಿ ಅವರಿಗೆ ದಕ್ಕಿದ ಸಂಗತಿಗಳನ್ನು ಅತ್ಯಂತ ಆಪ್ತವಾಗಿ ದಾಖಲಿಸಿದ್ದಾರೆ.
ಕಾಶಿಯಿಂದ-ಪ್ಯಾರಿಸ್ ವರೆಗೆ,ಎಲ್ಲೊರಾದಿಂದ- ವಿಯಟ್ನಾಂ ವರೆಗೆ ಹೀಗೆ ತಾವು ಕಂಡ ಜಗತ್ತನ್ನು ಅಲ್ಲಿ ಅವರಿಗೆ ದಕ್ಕಿದ ಸಂಗತಿಗಳನ್ನು ಅತ್ಯಂತ ಆಪ್ತವಾಗಿ ದಾಖಲಿಸಿದ್ದಾರೆ. ಕಾಶಿಯಲ್ಲಿ ವಿಶ್ವನಾಥ ದೇವರಿಗಿಂತ ಅಲ್ಲಿಯ ಚಾಟ್, ಚಹಾ, ಪಾನ್ ದ ಕುರಿತ ವಿವರಣೆ ಓದಿದ ನಂತರ ಓದುಗನಿಗೆ ಕಾಶಿ ಗೆ ಹೋಗಲೆಬೇಕು ಇಲ್ಲವಾದಲ್ಲಿ ಜೀವನದಲ್ಲಿ ಬಹುಮುಖ್ಯ ವಾದದ್ದನ್ನು ಕಳೆದುಕೊಳ್ಳುತ್ತೇವೆ ಎಂಬ ಭಾವ ಮೂಡದೆ ಇರದು.
ಲೇಖಕಿ ಯಾವುದೇ ಊರಿಗೆ ಹೋದರು ಊಟ ತಿಂಡಿ,ತೀರ್ಥದ ಬಗ್ಗೆ ಜಿಹ್ವಾಚಪಲ ತಣಿಯುವಂತೆ ವಿವರಿಸಿದ್ದಾರೆ.
ಪ್ಯಾರಿಸ್ ನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಅಲ್ಲಿನ ಜೀವನಶೈಲಿ, ಅದರ ಇತಿಹಾಸ ಜೊತೆಗೆ ಲಂಡನ್ ನಗರದ ಚಿತ್ರಣ ಅಲ್ಲಿನ ಕವಿಗಳ ಪರಿಚಯ ಹಾಗೆಯೇ ವಸ್ತು ಸಂಗ್ರಹಾಲಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ ಆದ ಲೇಖಕಿ ಅಲ್ಲಿನ ಕವಿ ಕಾವ್ಯ ದ ಪರಿಚಯ ಚೆನ್ನಾಗಿ ಮಾಡಿದ್ದಾರೆ.
ಇನ್ನು ಜರ್ಮನಿ ಬಗ್ಗೆ ಲೇಖಕಿ ಬಹಳಷ್ಟು ಹೇಳಬಹುದಿತ್ತು. ಹಿಟ್ಲರ್ ಕುರಿತು,ಆತನ ಪೈಶಾಚಿಕ ಕೃತ್ಯಕ್ಕೆ ನಲುಗಿದ ಸಮುದಾಯ ಬಗ್ಗೆ ಏನೆಲ್ಲಾ ಬರೆಯಬಹುದಿತ್ತು,ಆದರೆ ಚುಟುಕಾಗಿ ಹೇಳಿ ಮುಂದೆ ಸಾಗಿದ್ದಾರೆ. ಹಾಗೆಯೇ ವಿಯಟ್ನಾಂ ಕುರಿತಾಗಿ ಕೂಡ.
ಒಟ್ಟು ಹಲವು ದೇಶ,ಹಲವು ಸ್ಥಳಗಳ ಬಗ್ಗೆ ಕೆಲವು ಲೇಖನಗಳಲ್ಲಿ ಕಟ್ಟಕೊಟ್ಟಿದ್ದಾರೆ.ಇಡೀ ಅವರ ಕಥನದಲ್ಲಿ ನದಿಗಳ ಕುರಿತಾದ ಬರವಣಿಗೆ ಮಾತ್ರ ಹೆಚ್ಚು ಅಪ್ಯಾಯ ಅನ್ನಿಸುವುದು. ನೀರಶಿಶು ಸಾಗರದಲ್ಲಿ ಲೀನವಾಗುವ ಪಯಣದ ಬಗ್ಗೆ, ಬಣ್ಣಿಸಿದ ಪದಗಳು ತಾತ್ವಿಕತೆಯಿಂದ ಕೂಡಿವೆ. ಐಫೆಲ್ ಟವರ್ ಅನ್ನು ಕಬ್ಬಿಣದ ಕಟಾಂಜನ ಎಂದು ಹೇಳಿದ್ದು ,ಓದುಗನ ದೃಷ್ಟಿಕೋನವನ್ನು ಬದಲಿಸುತ್ತದೆ. ಒಟ್ಟಾಗಿ ಪಯಣ ಎಂದರೆ ದ್ಯಾನ,ತನ್ಮಯತೆ, ತನ್ನನ್ನು ತಾನು ಅರಿಯುವ ಒಂದು ಮಾದ್ಯಮ ಎಂದು ಬಿಂಬಿಸಿದ್ದಾರೆ ಲೇಖಕಿ.
ಸುಚಿತ್ರಾ ಅವರು ಜಗತ್ತನ್ನು ಪರಿಭ್ರಮಣ ಮಾಡಿ ಅದರ ಹಿತಾಂಶಗಳನ್ನು ಮಿತವಾಗಿ ಹೇಳಿ ಪಚನವಾಗುವಂತೆ ಮಾಡಿದ್ದಾರೆ. ಒಂದೇ ಗುಕ್ಕಿನಲ್ಲಿ ಓದಿ ಆನಂದಿಸಬಹುದಾದ ಉತ್ತಮ ಪ್ರವಾಸ ಕಥನ ಜಗವ ಸುತ್ತುವ ಮಾಯೆ.






0 Comments