ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ- ಕಣ್ಣೀರಿನ ಕಹಿಯಲ್ಲೂ ಸಾಹಿತ್ಯದ ಸಿಹಿ ಉಣಿಸಿದ ಒಲವಿನ ಪಯಣ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – ೮

ಕೃತಿ –ನೆನಪು ಸಿಹಿ- ಕಹಿ
ಲೇಖಕರು – ಅನುಪಮಾ ನಿರಂಜನ
ಪ್ರಕಾಶಕರು – ಡಿವಿಕೆ ಮೂರ್ತಿ ಪ್ರಕಾಶನ
ಬೆಲೆ – ೧ ೩ ೫

ಕನ್ನಡದ ಮೊದಲ ತಲೆಮಾರಿನ ಲೇಖಕಿಯರಲ್ಲಿ ಗುರುತಿಸಿಕೊಳ್ಳುವ ಅನುಪಮಾ ನಿರಂಜನರವರು ತಮ್ಮ ಬದುಕಿನ ಹೆಜ್ಜೆ ಗುರುತುಗಳನ್ನು “ನೆನಪು ಸಿಹಿ ಕಹಿ” ಯಲ್ಲಿ ಕಟ್ಟಿಕೊಟ್ಟಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಬರಹಗಾರ್ತಿಯಾಗಿ ಎರಡು ದೋಣಿಗಳನ್ನು ಸರಿದೂಗಿಸಿಕೊಂಡು ಸೈ ಎನ್ನಿಸಿಕೊಂಡವರು.

ಅನುಪಮಾ ಅವರ ಮೊದಲ ಹೆಸರು ವೆಂಕಟಲಕ್ಷ್ಮಿ. ಇವರ ತಂದೆ ಶಿಕ್ಷಣ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದರು. ಅವರಿಗೆ ಮೇಲಿಂದ ಮೇಲೆ ವರ್ಗಾವಣೆ ಆಗುತ್ತಿದ್ದರಿಂದ ಅನುಪಮಾ ರವರು ಹಲವು ಊರುಗಳಲ್ಲಿ ಶಿಕ್ಷಣ ಪಡೆದರು. ಮನೆಯಲ್ಲಿ ಓದಿಗೆ ಪೂರಕ ವಾತಾವರಣವೂ ಕೂಡ ಇತ್ತು. ತಂದೆಯ ಸಂಬಂಧಿಗಳಲ್ಲಿ ಹಲವರು ಉನ್ನತ ಹುದ್ದೆಯಲ್ಲಿದ್ದು, ಶಿಸ್ತು ಪ್ರಾಮಾಣಿಕತೆ,ದಕ್ಷತೆಗೆ ಹೆಸರಾಗಿದ್ದರು. ತಾಯಿಯ ಮನೆಯವರು ಶ್ರಮಜೀವಿಗಳು. ಅವರ ಮೂಲವೃತ್ತಿಯಾದ ನೇಕಾರಿಕೆಯು ಹೆಚ್ಚಿನ ಶ್ರಮವನ್ನು ಬಯಸುತ್ತಿತ್ತು ಹಾಗಾಗಿ ಅವರು ಕಷ್ಟ ಸಹಿಷ್ಣುಗಳಾಗಿದ್ದರು. ತಂದೆ ತಾಯಿಯರಿಂದ ಬಂದಂತಹ ಈ ಸ್ವಭಾವಗಳನ್ನು ಮೈಗೂಡಿಸಿಕೊಂಡು, ಅನುಪಮಾ ಅವರು ಓದಿನಲ್ಲಿ ಚುರುಕು ಮತ್ತು ಛಲಗಾರ್ತಿಯಾಗಿದ್ದರು.

ಅನುಪಮಾ ಅವರದ್ದು ದೊಡ್ಡ ಕುಟುಂಬ. ಏಳು ಮಕ್ಕಳಲ್ಲಿ ಇವರೇ ಹಿರಿಯರು. ಎಲ್ಲರ ಹೊಟ್ಟೆ ಬಟ್ಟೆ ನೋಡಿಕೊಳ್ಳುವುದೆ ಅವರ ತಂದೆಗೆ ಪ್ರಯಾಸದ ಕೆಲಸವಾಗಿತ್ತು ಹಾಗಾಗಿ ಹೆಚ್ಚಿನ ಸೌಲತ್ತುಗಳು ಇರಲಿಲ್ಲ. ಆದರೆ ಓದಿನ ವಿಷಯಕ್ಕೆ ಅವರ ತಂದೆ ಎಂದು ಹಿಂದೂ ಮುಂದು ನೋಡಿದವರಲ್ಲ,ಕೇಳಿದ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಚಿಕ್ಕಂದಿನಲ್ಲಿಯೇ ಓದುವ ಹವ್ಯಾಸವನ್ನು ತಂದೆಯಿಂದ ರೂಡಿಸಿಕೊಂಡಿದ್ದರು. ಅನುಪಮಾ ಅವರು 13ನೇ ವಯಸ್ಸಿನಲ್ಲಿಯೇ ಕಥೆಯನ್ನು ಬರೆದು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಮುಂದೆ ವೈದ್ಯೆಯಾಗಬೇಕೆಂಬ ಕನಸು ಕೂಡ ಅವರಿಗಿತ್ತು. ಅದನ್ನು ಪೂರೈಸಲು ಶ್ರಮವಹಿಸಿ ಅಧ್ಯಯನ ಮಾಡಿ ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡರು. ಉನ್ನತ ಶಿಕ್ಷಣ ಪಡೆಯಲು ಮನೆಯಲ್ಲಿ ಆರ್ಥಿಕ ಸವಲತ್ತು ಇಲ್ಲದಾದಾಗ, ಅವರ ಚಿಕ್ಕಜ್ಜಿ ನೆರವಿಗೆ ಬಂದರು. ಇದೇ ಸಂದರ್ಭದಲ್ಲಿ ಅವರಿಗೆ ಪರಿಚಯವಾದದ್ದು ನಿರಂಜನರು.

ನಿರಂಜನರ ಮೂಲ ಹೆಸರು ಕುಳುಕುಂದ ಶಿವರಾಯ. ಅವರ ಓದು ಹತ್ತನೇ ತರಗತಿವರೆಗೆ ಮಾತ್ರ ಆಗಿತ್ತು. ಆದರೆ ಕತೆ, ಕಾದಂಬರಿ ರಚಿಸಿ ಮತ್ತು ಪತ್ರಿಕಾ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿ ಹೆಸರಾಗಿದ್ದರು. ಚಳುವಳಿಗಳಲ್ಲಿ ಕೂಡ ಗುರುತಿಸಿಕೊಂಡಿದ್ದರು. ಇವರಿಬ್ಬರಲ್ಲೂ ಸಾಹಿತ್ಯದ ಅಭಿರುಚಿ ಇರುವುದರಿಂದ ಸ್ನೇಹ ಬೇಗನೆ ಪ್ರೀತಿಗೆ ತಿರುಗಿತು. ಆದರೆ ಅನುಪಮಾರು ವೈದ್ಯಕೀಯ ಶಿಕ್ಷಣ ಪಡೆಯಲು ಮೈಸೂರಿಗೆ ಹೊರಟಾಗ ನಿರಂಜನರಿಗೆ ಇರಿಸು ಮುರಿಸು. ಆಗ ಅನುಪಮಾರು ಬರವಣಿಗೆಯನ್ನು ನಿಲ್ಲಿಸುವುದಿಲ್ಲ, ಸಾಹಿತ್ಯದ ನಂಟು ಸದಾ ನನ್ನೊಂದಿಗೆ ಇರುತ್ತದೆ ಎಂದು ಮಾತು ಕೊಟ್ಟಾಗ, ನಿರಂಜನರು ಅವರಿಗೆ ಪೆನ್ನು, ಇಂಕು, ಬಿಳಿ ಹಾಳೆಗಳನ್ನು ಕೊಟ್ಟು ಭವಿಷ್ಯದ ಭರವಸೆಯ ಲೇಖಕಿಯಾಗಬೇಕೆಂದು ಶುಭ ಕೋರಿದರು . ಇದೊಂದು ಅವಿಸ್ಮರಣೀಯ ಸಂದರ್ಭ ಎನ್ನಬಹುದು ವೆಂಕಟಲಕ್ಷ್ಮಿ ಇಂದ ಅನುಪಮ ಎಂದು ಹೆಸರಿಸಿದವರು ಕೂಡ ನಿರಂಜನರೆ. ಮುಂದೆ ಅದೇ ಹೆಸರಿನಲ್ಲಿ ಕಥೆಗಳನ್ನು ಬರೆಯತೊಡಗಿದರು. ಏನೆಲ್ಲಾ ಆರ್ಥಿಕ ಸಂಕಟಗಳ ಮಧ್ಯೆ ವೈದ್ಯಕೀಯ ಅಧ್ಯಯನ ಮತ್ತು ಬರಹ ಮಾತ್ರ ನಿಲ್ಲಿಸಲಿಲ್ಲ.

ಅನುಪಮಾ ಮೈಸೂರಿನಲ್ಲಿದ್ದಾಗ ಆ ಕಾಲಘಟ್ಟದ ಪ್ರಮುಖ ಲೇಖಕಿಯರಾದ ವಾಣಿ, ತ್ರಿವೇಣಿ ಅವರ ಸಂಪರ್ಕಕ್ಕೆ ಬಂದರು. ವೈದ್ಯಕೀಯ ಶಿಕ್ಷಣದೊಂದಿಗೆ ಸಾಹಿತ್ಯದ ಅಭಿರುಚಿಯನ್ನು ಕೂಡ ಹೆಚ್ಚಿಸಿಕೊಂಡರು ಅದಕ್ಕೆಲ್ಲ ಸಾತ್ ನೀಡಿದವರು ನಿರಂಜನರು. ಅನುಪಮ ಅವರು ಓದಿನ ಸಂದರ್ಭದಲ್ಲಿಯೇ, ಮನೆಯವರ ವಿರೋಧದ ಮಧ್ಯೆಯೇ ನಿರಂಜನರ ಬಾಳ ಸಂಗಾತಿಯಾಗಿ ಮೈಸೂರಿನಲ್ಲಿ ಕೆಲವು ಕಾಲ ಉಳಿದರು. ನಿರಂಜನರು ಅನುಪಮಾ ಅವರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡರು. ಗಂಡನ ಶಿಸ್ತು, ಕಾರ್ಯಕ್ಷಮತೆ,ಅವರ ದೈತ್ಯ ಪ್ರತಿಭೆಗೆ ದಂಗಾದರು ಮತ್ತು ಹೆಮ್ಮೆ ಪಟ್ಟರು. ಸ್ತ್ರೀ ಸ್ವಾತಂತ್ರ ಕುರಿತು ಮಾತನಾಡಲಿಲ್ಲ ಆ ರೀತಿ ಬದುಕಿ ತೋರಿದವರು ನಿರಂಜನರು. ಪ್ರಗತಿಶೀಲ ಕಾಲಘಟ್ಟದ ದಿಗ್ಗಜನನ್ನು ವರಿಸಿದ್ದಕ್ಕಾಗಿ ಅನುಪಮಾ ಅವರು ಸದಾ ಹೆಮ್ಮೆ ಪಡುತ್ತಿದ್ದರು.

ನಿರಂಜನ ದಂಪತಿಗಳು ತಮ್ಮ ಸಂಸಾರವನ್ನು ಕವಿಗಳ ತವರೂರು ಎಂದೇ ಖ್ಯಾತವಾದ ಧಾರವಾಡಕ್ಕೆ ವರ್ಗಾಯಿಸಿದರು . ಅಲ್ಲಿ ಅನೇಕ ಸಾಹಿತ್ಯ ದಿಗ್ಗಜರ ಸಂಪರ್ಕ ಜೊತೆಗೆ ವೈದ್ಯಕೀಯ ಸೇವೆಯನ್ನು ಅನುಪಮಾ ಅವರು ಮುಂದುವರಿಸಿದರು. ಮಗಳು ತೇಜಸ್ವಿನಿ ಹುಟ್ಟಿದಾಗ ಜವಾಬ್ದಾರಿ ಹೆಚ್ಚಾಯಿತು. ಓದು, ಬರಹ, ಪತ್ರಿಕೆಗಳಲ್ಲಿ ಆರೋಗ್ಯದ ಕುರಿತಾದ ಅಂಕಣ, ರೋಗಿಗಳ ತಪಾಸಣೆ ಹೀಗೆ ಒತ್ತಡದ ಬದುಕು ಅವರದಾಗಿತ್ತು. ಹಾಗೆಂದು ಅಲ್ಲಿ ಕೂಡ ಬಹುದಿನ ಉಳಿಯದೆ, ಹೆಚ್ಚಿನ ಅವಕಾಶಕ್ಕಾಗಿ ಬೆಂಗಳೂರಿಗೆ ಬಂದು ನೆಲೆ ನಿಂತರು.

ಬೆಂಗಳೂರಿನಲ್ಲಿ ಅನುಪಮಾ ಅವರು ಕೇವಲ ಹೊರರೋಗಿಗಳನ್ನು ನೋಡುವುದಕ್ಕೆ ತಮ್ಮ ವೃತ್ತಿ ಬದುಕನ್ನು ಸೀಮಿತಗೊಳಿಸಿ ಬರವಣಿಗೆಯ ಕಡೆ ಗಮನಹರಿಸಿದರು. ಆಗಲೇ ಅನೇಕ ಕಥೆ, ಕಾದಂಬರಿ,ವೈದ್ಯಕೀಯ ಲೇಖನಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಅದೇ ಸಂದರ್ಭದಲ್ಲಿ ನಿರಂಜನರು ಕೂಡ ಮಕ್ಕಳಿಗಾಗಿ ವಿಶ್ವಕೋಶ ರಚನೆ ಮಾಡಲು ಜ್ಞಾನಭಾರತಿಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಬದುಕಿನ ಬಂಡಿ ಸಮಚಿತ್ತದಿಂದ ಸಾಗುವಾಗ, ಅನಿರೀಕ್ಷಿತವಾಗಿ ತಿರುವು ಕಂಡಿತು. ನಿರಂಜನರಿಗೆ ಪಾರ್ಶ್ವ ವಾಯುವಾಯಿತು, ಆದರೆ ಈ ಸಮಸ್ಯೆಯನ್ನು ಕೂಡ ಅನುಪಮಾ ಅವರು ತಮ್ಮ ಎರಡು ಚಿಕ್ಕ ಮಕ್ಕಳಿನೊಂದಿಗೆ ಎದುರಿಸಿದರು. ನಿರಂಜನರು ಮತ್ತೆ ಮೊದಲಿನಂತೆ ಆಗದೇ ಇದ್ದರೂ ತಮ್ಮ ಬರವಣಿಗೆ ಮತ್ತು ಚಟುವಟಿಕೆಗೆ ಪೂರ್ಣ ವಿರಾಮ ನೀಡದೆ ಮತ್ತೆ ಕ್ರಿಯಾಶೀಲರಾದರು ಬರವಣಿಗೆಯಲ್ಲಿ ತೊಡಗಿದರು, ವಿಶ್ವಕೋಶದ 9 ಸಂಪುಟಗಳನ್ನು ಐದು ವರ್ಷದಲ್ಲಿ ಪೂರ್ಣಗೊಳಿಸಿ ಕೊಟ್ಟರು. ನಿರಂಜನ ದಂಪತಿಗಳು ಸಮಸ್ಯೆ ಸಂಕಷ್ಟಗಳಿಗೆ ಎಂದು ಎದೆಗುಂದಿದವರಲ್ಲ. ಹಾಗಾಗಿಯೇ ಮತ್ತೆ ಮತ್ತೆ ಕಷ್ಟಗಳು ಕದತಟ್ಟುತ್ತಿದ್ದವು.

ಅನುಪಮಾ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್ ತಗಲಿತು. ಹಾಗೆಂದು ಎದೆಗುಂದದೆ ಅದನ್ನು ಕೂಡ ಎದುರಿಸಿದರು. ಮುಂಬೈನಲ್ಲಿ ಕೀಮೋ ಪಡೆಯಲು ಹೋದಾಗ, ಆ ಸಂದರ್ಭದಲ್ಲಿ ಕೂಡ ನೋವು ಸಂಕಟಗಳ ಮಧ್ಯೆ ಸಾಹಿತ್ಯದ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದನ್ನು ಕಂಡಾಗ ಸೋಜಿಗ ಎನ್ನಿಸದೆ ಇರದು. ಅವರ ಇಬ್ಬರು ಮಕ್ಕಳಿಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದು ಮಗಳು ತೇಜಸ್ವಿನಿ 16ನೇ ವಯಸ್ಸಿನಲ್ಲಿಯೇ ಇಂಗ್ಲಿಷ್ ನಲ್ಲಿ ಕವನ ಸಂಕಲನ ಹೊರ ತಂದಳು.ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯಿತು.

ಮತ್ತೆ ಎರಡನೇ ಬಾರಿ ಅನುಪಮಾ ಅವರಿಗೆ ಕ್ಯಾನ್ಸರ್ ತಗಲಿದಾಗ ಒಬ್ಬಂಟಿಯಾಗಿ ಅದನ್ನು ಎದುರಿಸಿದರು. ತೇಜಸ್ವಿನಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಹೋದರೆ, ಎರಡನೇ ಮಗಳು ಚಿಕ್ಕವಯಸ್ಸಿನ ಸೀಮಂತನಿ ತಂದೆಯ ಬರವಣಿಗೆ, ಮುದ್ರಣ, ಪ್ರಕಾಶನ ಹೀಗೆ ಅವರಿಗೆ ಆಸರೆಯಾಗಿ, ಜೊತೆಗೆ ಅವರ ಆರೋಗ್ಯದ ಕಾಳಜಿಯ ಜವಾಬ್ದಾರಿ ಕೂಡ ವಹಿಸಿಕೊಂಡಳು. ನಿರಂಜನ ದಂಪತಿಗಳು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಾ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದು ಗಮನಿಸಿದಾಗ, ಬರವಣಿಗೆಯೆ ಅವರಿಗೆ ಶಕ್ತಿಯಾಗಿ, ಸ್ಪೂರ್ತಿಯಾಗಿ ಸ್ಥೃರ್ಯ ನೀಡಿದಂತಿದೆ.

ಅನುಪಮಾ ಅವರು ದಿನಕ್ಕೊಂದು ಕಥೆಗಳು ಎಂದು 365 ಕಥೆಗಳನ್ನು ಬರೆದರೆ, ನಿರಂಜನರು ಜಗತ್ತಿನ ಎಲ್ಲಾ ಭಾಷೆಯ ಕಥೆಗಳನ್ನು 10 ಸಂಪುಟಗಳಲ್ಲಿ ಕನ್ನಡದಲ್ಲಿ ಕಟ್ಟಿಕೊಟ್ಟರು. ನಿರಂಜನರಿಗೆ ಮತ್ತೊಮ್ಮೆ ಲಘು ಹೃದಯಘಾತವಾಯಿತು. ಹೀಗೆ ಸಮಸ್ಯೆ ಸವಾಲು ಸಾಧನೆ ಎಲ್ಲವೂ ಒಟ್ಟೊಟ್ಟಿಗೆ ಸಾಗಿತ್ತು. ಮಾಧವಿ, ಎಳೆ ಎಂಬ ಮಹತ್ವದ ಕಾದಂಬರಿಗಳನ್ನು ಕೂಡ ಅನುಪಮಾ ಅವರು ಇದೇ ಸಂದರ್ಭದಲ್ಲಿ ರಚಿಸಿದರು. ಅನೇಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಮಹಿಳಾ ಲೇಖಕಿಯರನ್ನು ಒಂದುಗೂಡಿಸುತ್ತಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ರಾಗಿದ್ದರು. ಒಂಟಿಯಾಗಿ ವಿದೇಶ ಪ್ರವಾಸ ಕೈಗೊಂಡು ಪ್ರವಾಸ ಕಥನ ಬರೆದರು. ತೇಜಸ್ವಿನಿಯ ಬಯಕೆಯಂತೆ ಸರಳ ಮದುವೆ ಮಾಡಿಕೊಟ್ಟರು. ಅನಾರೋಗ್ಯದ ನಿಮಿತ್ತ ಮತ್ತು ಬರವಣಿಗೆ ಕಾರಣಕ್ಕೆ ವೈದ್ಯಕೀಯ ವೃತ್ತಿಗೆ ವಿದಾಯ ಹೇಳಿದರು. ಬರವಣಿಗೆಯನ್ನೇ ಪೂರ್ಣ ಪ್ರಮಾಣವಾಗಿ ನೆಚ್ಚಿಕೊಂಡು” ನೆನಪು ಸಿಹಿ ಕಹಿ” ಎಂಬ ಆತ್ಮಕಥನವನ್ನು ಜೊತೆಗೆ ಬರಹಗಾರ್ತಿಯ ಬದುಕು ಎಂಬ ಇನ್ನೊಂದು ಆತ್ಮ ವೃತ್ತಾಂತವನ್ನು ಕೂಡ ರಚಿಸಿದರು.

ಹೀಗೆ ಅನುಪಮಾ ಅವರ ಇಡೀ ಬದುಕಿನ ಯಶೋಗಾಥೆ ಓದಿದಾಗ ಅವರ ಕುರಿತು ಅಭಿಮಾನ ಇಮ್ಮಡಿಸುತ್ತದೆ. ಸಂಸಾರದ ಏನೆಲ್ಲಾ ಒತ್ತಡ, ಆರ್ಥಿಕ ಸಂಕಷ್ಟ, ಆರೋಗ್ಯದ ಸಮಸ್ಯೆ, ತವರು ಮನೆಯ ಆಸರೆ ಇಲ್ಲದೆ ಕೇವಲ ಸಹೃದಯಿ ಸ್ನೇಹ ಬಳಗದ ಜೊತೆಯೊಂದಿಗೆ ಬದುಕು ಕಟ್ಟಿಕೊಂಡ ಕ್ರಮ ಅಪರೂಪದ್ದು. ವೃತ್ತಿ, ಪ್ರವೃತ್ತಿ,ಕುಟುಂಬ, ಸಮಾಜಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಚಾಪನ್ನು ಮೂಡಿಸಿ ಹೋಗಿದ್ದಾರೆ. ಸಾಹಿತ್ಯ ಕ್ಷೇತ್ರದಷ್ಟೇ ಸಮನಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಕೂಡ ಕಾರ್ಯನಿರ್ವಹಿಸಿದ್ದಾರೆ. ವೈದ್ಯರಾಗಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಅನೇಕ ವೈದ್ಯಕೀಯ ಕೃತಿಗಳನ್ನು ರಚಿಸಿ ಇಂದಿಗೂ ಅವರ ಕೃತಿಗಳು ಪ್ರಸ್ತುತವಾಗಿವೆ.

“ನೆನಪು ಸಿಹಿ ಕಹಿ” ಒಂದೇ ಉಸಿರಿನಲ್ಲಿ ಓದಿಸಿಕೊಂಡು ಹೋಗುತ್ತದೆ. 300 ಪುಟದ ಈ ಆತ್ಮಕಥನ ಕಾದಂಬರಿಯ ರೂಪದಲ್ಲಿ ಮೂಡಿಬಂದಿದ್ದು, ಅಲ್ಲಲ್ಲಿ ಸಂದರ್ಭಾನುಸಾರ ಸಂಭಾಷಣೆಯ ಮೂಲಕ ಸಂದರ್ಭಗಳನ್ನು ವಿವರಿಸಿದ್ದು ಓದುಗನಿಗೆ ಹೆಚ್ಚು ಆಪ್ತವಾಗಿ ತೋರುತ್ತದೆ. ಹಲವು ಪಾತ್ರಗಳನ್ನು ಪರಿಚಯಿಸುವಾಗ ಅವರ ವ್ಯಕ್ತಿತ್ವದ ವರ್ಣನೆ ತುಂಬಾ ಸೊಗಸಾಗಿ ಮಾಡಿಕೊಟ್ಟಿದ್ದಾರೆ. ಅನುಪಮಾ ಅವರ ಆತ್ಮಕಥೆ ಓದಿದಾಗ, ಇದು ಅವರ ಕಲ್ಪನೆಯ ಮೂಸೆಯಲ್ಲಿ ಮೂಡಿ ಬಂದ ಕಾದಂಬರಿ ಏನೋ ಎಂಬ ಭಾವ ಮೂಡುವುದು. ನಿರಂಜನ ದಂಪತಿಗಳಿಗೆ ಆರ್ಥಿಕ ಸಂಕಟ ಮತ್ತು ಆರೋಗ್ಯದ ಸಮಸ್ಯೆ ಬದುಕಿನಲ್ಲಿ ಕಹಿಯಾಗಿ ಕಂಡರೂ , ಅವರ ಸಾಹಿತ್ಯ ಕೃಷಿ ಅದಕ್ಕೆ ಸಿಕ್ಕಂತ ಮನ್ನಣೆ ಜೊತೆಗೆ ಮಕ್ಕಳಿಬ್ಬರ ಸಾಧನೆ ಎಲ್ಲವೂ ಸಿಹಿಯಾಗಿಯೇ ದೊರೆತಿದೆ. ಜೀವನದ ಜೋಕಾಲಿನ್ನು ಇಬ್ಬರು ಸಮಪ್ರಮಾಣದಲ್ಲಿಯೇ ಜೀಕಿದ್ದಾರೆ.

ಡಿ.ವಿ.ಜಿಯವರು ಹೇಳಿದಂತೆ

” ಹುಲ್ಲಾಗು ಬೆಟ್ಟದಡಿ,ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ “

ಎಂಬಂತೆ ಎಲ್ಲವನ್ನು ಸಹಿಸಿ, ಕಹಿಯನ್ನು ನುಂಗಿ ಸಿಹಿಯನ್ನು ನೀಡಿದ ಕುಟುಂಬ ಇವರದಾಗಿದೆ. ಬದುಕಿನಲ್ಲಿ ಏನನ್ನು ಸಾಧಿಸಲು ಆಗದು ಎಂದು ಕೈಚೆಲ್ಲಿ ಕುಳಿತ ವ್ಯಕ್ತಿಗೆ ಇವರ ಆತ್ಮಕಥನ ನಿಜವಾಗಿಯೂ ಶಕ್ತಿ ನೀಡಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ.

‍ಲೇಖಕರು Admin

3 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading