ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕವನ್ನು ನನ್ನಿಂದ ದೂರವಿಡಬೇಡಿ…

 ದೀಕ್ಷಿತ್ ನಾಯರ್

ನನ್ನ ಗೋಣು ತರಿದು ನೆಲಕ್ಕೆ ಕೆಡವಿ ಹಾಕಿಬಿಡಿ
ಪುಸ್ತಕವನ್ನು ಮಾತ್ರ ನನ್ನಿಂದ ದೂರವಿಡಬೇಡಿ;
ಪ್ರತಿ ಹಾಳೆಗಳಲ್ಲೂ ನನ್ನ ಬಿಸಿ ಉಸಿರಿನ ಶಾಖವಿದೆ
ನನ್ನ ಕೈ ಬೆರಳುಗಳ ಬೆವರ ಕಲೆಯಿದೆ
ಗೆಳತಿ ತುಂಬು ಒಲವಿನಿಂದ ಮುತ್ತನಿಟ್ಟು ಕೊಟ್ಟ ಮುದುಡಿದ ನವಿಲುಗರಿ ಇದೆ
ಅದು ಮರಿ ಹಾಕಬಹುದೇನೋ?
ಕಾಯುತ್ತಿದ್ದೇನೆ!.

ನೀವೇನು ನನ್ನ ಪುಸ್ತಕಗಳನ್ನು ಒಪ್ಪವಾಗಿ ಜೋಡಿಸುವುದು ಬೇಡ
ಅದು ಇರುವಂತೆಯೇ ಬಿಟ್ಟುಬಿಡಿ;
ಅರೆ..ದಯವಿಟ್ಟು ಎಳೆದಾಡಬೇಡಿ
ಅದಕ್ಕೂ ಜೀವವಿದೆ
ಅದರ ನೋವು ನನಗಷ್ಟೇ ತಿಳಿಯುತ್ತದೆ!
ಅದು ಅತ್ತರೆ ನಾನಿಲ್ಲಿ ಪೂರಾ ಸೊರಗಿ ಹೋಗುತ್ತೇನೆ

ನಾನು ಹಠಾತ್ತನೆ ಸತ್ತು ಹೋದರೆ ನನ್ನ ಹೆಣದ ಮುಂದೆ ನಿಂತು ನೀವು ಅತ್ತು ಗೋಳಾಡಬೇಡಿ;
ನನ್ನ ಕೋಣೆಯ ಕಪಾಟಿನಲ್ಲಿ ರಾಶಿ ಪುಸ್ತಕಗಳಿವೆ ಎತ್ತುಕೊಳ್ಳಿ
ನನ್ನಿಷ್ಟದ ಯಾವುದೋ ಒಂದೆರಡು ಸಾಲುಗಳನ್ನು ಗಟ್ಟಿಯಾಗಿ ಓದಿ ಬಿಡಿ
ಅರೆ ಕ್ಷಣದಲ್ಲಿ ಒಣಗಿ ಹೋಗುವ ಹೂವುಗಳನ್ನು ತಂದು ನನಗೆ ಅಲಂಕರಿಸಬೇಡಿ
ಒಂದೇ ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ತಂದು ನನ್ನೆದೆಯ ಮೇಲೆ ಇರಿಸಿಬಿಡಿ;
ನನ್ನ ಆತ್ಮ ನಿಜಕ್ಕೂ ತಣ್ಣಗಾಗುತ್ತದೆ
ಪುಸ್ತಕಗಳೊಂದಿಗೆ ಬದುಕಿದವನು ಪುಸ್ತಕದೊಂದಿಗೆಯೇ ಮಣ್ಣು ಸೇರುತ್ತೇನೆ!.

‍ಲೇಖಕರು avadhi

23 April, 2023

1 Comment

  1. Kusuma Patel

    Very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading