ನನ್ನಿರುವನಲ್ಲೇ ಅರಸಲೇ
ಸರೋಜಿನಿ ಪಡಸಲಗಿ
ಹರಿವ ಕೆರೆಯ ದಡದ ಪೊದೆಯ
ಹಸಿರು ಚಿಗುರು ನಾನಾಗಲೇ
ಸುರಿವ ಸೋನೆ ಗಾನಕೆ ನನ್ನ
ಶ್ರುತಿಯನೊಂದ ಬೆರೆಸಲೇ
ಹರಿವ ನೀರಿನೊಡಲಲಿಣುಕೋ ಮರದ
ನೆರಳು ನಾನಾಗಲೇ
ಆ ತಂಪು ಸಿಂಚನಕೆ ನನ್ನ ಎದೆಯ
ಬಾಗಿಲು ತೆರೆಯಲೇ
ತುಂಬಿದ್ಹರುಷದ ಸುಳಿಯ ಅಲೆಯಲಿ
ತೊರೆಯಗಲ ನಾ ಸುಳಿಯಲೇ
ಸುತ್ತ ಮುತ್ತಲಿರುವ ಮರೆತು ಅಲ್ಲೇ
ಬೆರೆತು ಹೋಗಲೇ
ನೀರಿನಲೆಯ ಉಂಗುರದ ರಿಂಗಣಕೆ
ಹೆಜ್ಜೆ ಹಾಕಲೇ
ಕೆರೆಯ ಅಂಚಿನ ಇಬ್ಬನಿ ಮಣಿಯ
ಮುತ್ತಿನ್ಹೊಳಪು ನಾನಾಗಲೇ
ಎರಡು ದಡಗಳ ಸೇರಿಸುವ
ಇಂದ್ರಧನುಷನೇರಿ ಜೀಕಲೇ
ಸುತ್ತ ಮುತ್ತಲಿರುವ ಮರೆತು ಅಲ್ಲೇ
ಬೆರೆತು ಹೋಗಲೇ

ತೊರೆಯ ತಡಿಯಲಿ ತೊನೆವ
ಹೂವಿನೆದೆಯ ಮಧುವಾಗಲೇ
ಹೂವಿನೆದೆಯ ಮಧುವ ಈಂಟೋ
ಪುಟ್ಟ ಚಿಟ್ಟೆ ಜೊತೆಗೂಡಲೇ
ಅಲ್ಲಿ ಸೂಸುವ ಭೃಂಗ ಗಾನಕೆ
ನನ್ನೆದೆಯ ತಂತಿ ಮೀಟಲೇ
ಸುತ್ತ ಮುತ್ತ ಲಿರುವ ಮರೆತು ಅಲ್ಲೇ
ಬೆರೆತು ಹೋಗಲೇ
ಮೂಡಣದ ಬಾಂದಳದ ಕೆಂಬಾರೆ
ಕದಪಿನೊಳು ಬೆರೆಸಲೇ
ತೇರನೇರಿ ಬರುವ ನೇಸರನ
ದಾರಿಗೆ ಹೂವು ಹಾಸಲೇ
ಹಕ್ಕಿ ಗಾನಕೆ ಧ್ವನಿ ಮಿಳಿಸಿ
ಉದಯರಾಗ ನೊಂದು ನುಡಿಯಲೇ
ಸುತ್ತ ಮುತ್ತ ಲಿರುವ ಮರೆತು ಅಲ್ಲೇ
ಬೆರೆತು ಹೋಗಲೇ
ಸರಿಯುತಿರುವ ಸಮಯದ ಓಟ
ನೋಡಿ ಚಣ ಬೆರಗಾಗಲೇ
ಪಡುವಣದ ಅಂಚಿನ ಹೊಂಬಣ್ಣಕೆ
ಮನಸೋಲಲೇ
ಚುಕ್ಕಿ ಚಂದ್ರಮರ ಸಂತೆಗೆ
ಕನಸು ಕೊಳ್ಳಲು ಹೋಗಲೇ
ಸುತ್ತ ಮುತ್ತ ಲಿರುವ ಮರೆತು
ಆ ಕನಸಲಿ ಬೆರೆತು ಹೋಗಲೇ
ನನ್ನಿರು ವನಲ್ಲೇ ಅರಸಲೇ






ಎಷ್ಟು ಸುಂದರ ಕಲ್ಪನೆ, ಜೊತೆಗೆ ಅದ್ಭುತ ವರ್ಣನೆ. ಪ್ರಕೃತಿ ಸಿರಿ ಮತ್ತು ಶಬ್ದ ಸಿರಿಯ ಮಿಲನ! ಅಭಿನಂದನೆಗಳು!
ಅವಧಿಗೆ ಧನ್ಯವಾದಗಳು.ಶ್ರೀವತ್ಸ ದೇಸಾಯಿಯವರೇ ನಿಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.