ನಮ್ಮ ಮನಸ್ಸಿಗೆ ಲಗ್ಗೆ ಇಡುವ ಸೇತುವೆ..

ಸಮುದ್ರದಲ್ಲಿ ಕಟ್ಟಲಾದ ಪ್ರಪಂಚದಲ್ಲೇ ಅತ್ಯಂತ ಉದ್ದವಾದ “ಹಾಂಗ್ ಕಾಂಗ್- ಜುಹಾಯ್ “ ಸೇತುವೆ ಕಳೆದ ವಾರವಷ್ಟೇ ಉದ್ಘಾಟನೆಗೊಂಡಿದೆ. ಇದು ಒಟ್ಟು 55 ಕಿಲೋ ಮೀಟರ್ ದೂರವನ್ನು ಹೊಂದಿದೆ. ಕೇವಲ ಮೂರೂವರೆ ಗಂಟೆ ಗಳ ಸಮಯದಲ್ಲಿ ಹಾಂಗ್ ಕಾಂಗ್, ಮಖಾವ್ ಹಾಗೂ ಚೀನಾದ ಜುಹಾಯ್ ನಗರಗಳನ್ನು ಸಂಪರ್ಕಿ ಸಬಹುದಾಗಿದೆ. ಇದನ್ನು ನಿರ್ಮಿಸಲು ತೆಗೆದುಕೊಂಡ ಸಮಯ ೯ ವರ್ಷಗಳು. ನಗರಗಳ ನಡುವಿನ ಆರ್ಥಿಕ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಇದು ದೊಡ್ಡ ಯೋಜನೆ. ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು ಇವರುಗಳ ಸಾಧನೆ ಬಗ್ಗೆ.

ಇವರೆಲ್ಲಾ ನಮ್ಮಲ್ಲಿ ಆರಂಭವಾಗುವ ಫ್ಲೈ ಓವರ್ ಗಳ ಕಥೆ ಕೇಳಬೇಕು. 2 ಪಿಲ್ಲರ್ ಗಳನ್ನು ಹಾಕಲು ನಮಗೆ ಮಿನಿಮಮ್ ೧೦ ವರ್ಷಗಳಾದ್ರೂ ಬೇಕು. ದುಡ್ಡನ್ನೇ ನುಂಗುವ ಜನಗಳಿರುವಾಗ, ಸೇತುವೆ ಬಿಡಿ ಆಧಾರ ಕಂಬಗಳಾದ್ರೂ ಹೇಗೆ ನಿರ್ಮಾಣವಾದೀತು. ಜನರಿಗೆ ಆಗತ್ಯವಿರುವ ವ್ಯವಸ್ಥೆಗಳೇ ಒದಗಿಲ್ಲ. ಇನ್ನೂ ಬೇರೆ ರೀತಿಯ ಯೋಜನೆಗಳ ಬಗ್ಗೆ ಕನಸು ಕಾಣೋದು ದೂರದ ಮಾತು.

ಅಭಿವೃದ್ದಿ ಹೊಂದಿದ ದೇಶಗಳ ಲೆಕ್ಕಾಚಾರಗಳೇ ಬೇರೆ. ಜನರ ಅಗತ್ಯತೆ, ಸೌಲಭ್ಯಗಳು, ಯೋಗಕ್ಷೇಮ ಇವುಗಳನ್ನೆಲ್ಲಾ ಪೂರೈಸಿದ ಬಳಿಕವೂ ಅಭಿವೃದ್ದಿ ಬಗ್ಗೆ ಚಿಂತಿಸುವುದೇ ಇಂತಹ ದೇಶಗಳ ವಿಶೇಷತೆ.

ನಮ್ಮಲ್ಲಿ ರಸ್ತೆ ದಾಟಲು ಸರಿಯಾದ ವ್ಯವಸ್ಥೆ ಇಲ್ಲ. ಬೇಕಾದ್ದಲ್ಲಿ ಸಮರ್ಪಕವಾದ ಸೇತುವೆ ಕಟ್ಟುವ ಬಗ್ಗೆ ಯೋಜನೆಗಳೇ ಬಂದಿಲ್ಲ. ಆದರೆ ಸಿಂಗಾಪುರದವರು ಜಾಗಿಂಗ್, ವಾಕಿಂಗ್ ಮಾಡಲೆಂದೇ ಕಲರ್‌ಫುಲ್ ಸೇತುವೆಯನ್ನು ಕಟ್ಟಿಸುತ್ತಾರೆ. ಇವೆಲ್ಲಾ ನಮ್ಮಲ್ಲಿ ಪಾರ್ಕ್ ಗಳಲ್ಲಿ ನಡೆಯುತ್ತವೆ. ಆದರೆ ಇಲ್ಲಿ ಕುಟುಂಬ ಸದಸ್ಯರು ಬಂದು ಟೈಮ್ ಪಾಸ್ ಮಾಡುವ ನಿಟ್ಟಿನಲ್ಲೂ ಒಂದು ಸೇತುವೆ. ಸುತ್ತಲೂ ಸಮೃದ್ಧವಾಗಿ ಬೆಳೆದ ಮರಗಿಡಗಳು. ಕೆಳ ಭಾಗದಲ್ಲಿ ಬ್ಯುಸಿಯಾಗಿ ಓಡಾಡ್ತಿರೋ ವಾಹನಗಳು. ಇವುಗಳ ಮದ್ಯೆ ಅದೆಷ್ಟೋ ಎತ್ತರದಲ್ಲಿ ಸಮುದ್ರದ ಅಲೆಗಳು…! ಅಂಥದ್ದೇ ಅಲೆಗಳ ಆಕೃತಿಯನ್ನ ಹೋಲುವ ಸೇತುವೆ. ನೀರಿನ ಅಲೆಗಳಂತೆ ಬಾಗಿ ಬೆಂಡಾದ ರಚನೆ ಇದರ ವೈಶಿಷ್ಟ್ಯ.

ಸಿಂಗಾಪುರದ ದಕ್ಷಿಣ ಭಾಗದಲ್ಲಿರೋ ಈ ಸೇತುವೆ ಹೆಸರು ಹೆಂಡರ್ಸನ್ ವೇವ್ಸ್ ಬ್ರಿಡ್ಜ್. ನೆಲ ಮಟ್ಟದಿಂದ ಸುಮಾರು 36 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. ಅತಿ ಎತ್ತರದ ಕಾಲ್ನಡಿಗೆಯ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಇದನ್ನ, ೨೦೦೮ ರಲ್ಲಿ ಕಟ್ಟಲಾಗಿದೆ. 274 ಮೀಟರ್ ಉದ್ದ ಮತ್ತು 8 ಮೀ ಅಗಲ ಜೊತೆಗೆ 9 ಕಿಲೋ ಮೀಟರ್ ದೂರದಷ್ಟು ವಿಸ್ತಾರವಾಗಿ ಚಾಚಿಕೊಂಡಿದೆ. ಈ ಸುಂದರವಾದ ಸೇತುವೆ, ಮೌಂಟ್ ಫೇಬರ್ ಪಾರ್ಕ್,  ಟೆಲೋಕ್ ಬ್ಲಾಂಗಾ ಹಿಲ್ ಪಾರ್ಕ್  ಮತ್ತು ಕೆಂಟ್ ರಿಡ್ಜ್  ಪಾರ್ಕ್ ಗಳನ್ನು ಸಂಪರ್ಕಿಸುತ್ತದೆ.

ಸೇತುವೆಯು ಏಳು ಆವರ್ತನದಲ್ಲಿ ಬಾಗಿದ ತಿರುವು ರೂಪದ ವಿನ್ಯಾಸವನ್ನು ಹೊಂದಿದೆ. ಇದನ್ನು ಐಜೆಪಿ ಕಾರ್ಪೊರೇಷನ್  ಲಂಡನ್  ಮತ್ತು ಆರ್ ಎಸ್ ಪಿ ಆರ್ಕಿಟೆಕ್ಟ್ಸ್ ಪ್ಲ್ಯಾನರ್ಸ್  ಮತ್ತು ಇಂಜಿನಿಯರ್ಸ್  ಲಿಮಿಟೆಡ್ ಸಿಂಗಾಪುರ್ ವಿನ್ಯಾಸಗೊಳಿಸಿದೆ. ಆ ಜಾಗದಲ್ಲಿ ವಿರಮಿಸುವ ಸಲುವಾಗಿಯೂ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಡೆಕ್ ನಿರ್ಮಿಸಲು ಹಳದಿ ಬಾಲವ್ ಮರದ ಹಲಗೆಗಳನ್ನು ಉಪಯೋಗಿಸಲಾಗಿದೆ.

ಫಿಟ್ನೆಸ್ ಮಂತ್ರವನ್ನು ಜಪಿಸುವ ಇಲ್ಲಿನ ನಾಗರಿಕರು ವಾಕಿಂಗ್, ಜಾಗಿಂಗ್ ಹೇಳುತ್ತಾ ಇಲ್ಲಿಗೆ ದಿನನಿತ್ಯ ಭೇಟಿ ನೀಡುತ್ತಾರೆ. ಇನ್ನೂ ಅಪರೂಪಕ್ಕೆ ಬರುವವರು, ಗೆಳೆಯರು ಹರಟೆ ಹೊಡೆಯುತ್ತಾ, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಕೊಂಚ ಹೊತ್ತು ವಿರಮಿಸಿ ತೆರಳುತ್ತಾರೆ.

ಹೆಂಡರ್ಸನ್ ವೇವ್ಸ್ ಸೇತುವೆಯು ಒಂದು ದೊಡ್ಡ ಹೊರಾಂಗಣ ಅನುಭವವನ್ನು ಒದಗಿಸುತ್ತದೆ. ಕಾಡುಗಳ ಮೇಲ್ಭಾಗದಲ್ಲಿ ಹಾದುಹೋಗುವ ಶೈಲಿ ಇದರದ್ದಾಗಿದೆ.  ವಿಭಿನ್ನ ಪಕ್ಷಿಗಳೂ ಸೇರಿದಂತೆ ವೈವಿಧ್ಯಮಯ ಸಸ್ಯ ರಾಶಿಗಳ ಸೊಬಗನ್ನು ಆನಂದಿಸುವ ಅವಕಾಶ ಇಲ್ಲಿದೆ.  ನಗರ, ಬಂದರು ಮತ್ತು ದಕ್ಷಿಣ ದ್ವೀಪಗಳ ವಿಹಂಗಮ ದೃಶ್ಯಗಳನ್ನು ಸೆಳೆಯಲು ಸಿಂಗಾಪುರದ ಅತ್ಯುತ್ತಮ ಸ್ಥಳಗಳಲ್ಲಿ ಇದು ಒಂದು. ಸೇತುವೆಯು ರಾತ್ರಿ ಸಮಯ 7 ರಿಂದ ಬೆಳಗ್ಗಿನ ಜಾವ   2 ಗಂಟೆಯವರೆಗೆ ಆಕರ್ಷಕ ಎಲ್ಇಡಿ ಬೆಳಕಿನಿಂದ ಕಂಗೊಳಿಸುತ್ತದೆ. ಪ್ರಕಾಶಮಾನವಾದಂತೆ ರಾತ್ರಿಯಲ್ಲಿ ಸೇತುವೆ ತುಂಬಾ ನಿಜವಾದ ಅಲೆಗಳೇ ತೇಲಿ ಬಂದಂತೆ ಭಾಸವಾಗುವುದು ಇದೆ. ಸೂರ್ಯೋದಯ, ಸೂರ್ಯಾಸ್ತಮಾನಗಳ ಸುಂದರ ದೃಶ್ಯಗಳನ್ನು ಕೆಮರದಲ್ಲಿ ಸೆರೆ ಹಿಡಿಯಲು ಇದು ಹೇಳಿ ಮಾಡಿಸಿದ ಜಾಗ.  ಮದುಮಕ್ಕಳು ಸೇರಿದಂತೆ ಹಲವರಿಗೆ ಇದು ಜನಪ್ರಿಯ ಫೋಟೋಗ್ರಫೀ ಸ್ಪಾಟ್ ಆಗಿ ನಿರ್ಮಾಣಗೊಂಡಿದೆ.

ಈ ಸೇತುವೆಯನ್ನು ತಲುಪಲು ಕೂಡ ದಟ್ಟ ಮರಗಳ ನಡುವೆ ಪಯಣ ಮಾಡಬೇಕಿದೆ. ಕಿರಿದಾದ ರಸ್ತೆಯ ಎರಡು ಬದಿಗೂ, ಬೆಳೆದಿರುವ ಬೃಹತ್ತಾಕಾರದ ಮರಗಳು ಅವುಗಳ ಕಡೆಯಿಂದ ಕೇಳಬಹುದಾದ ವಿಭಿನ್ನ ಹಕ್ಕಿಗಳ, ಕೀಟಗಳ ಗುಂಯಿಗುಡುವಿಕೆ ನಡಿಗೆಯ ಆಯಾಸವನ್ನೇ ಮರೆಸಿಬಿಡುತ್ತದೆ. ಹೈಕಿಂಗ್ ಇಷ್ಟ ಪಡುವವರಿಗೂ ಇಲ್ಲಿದೆ ವ್ಯವಸ್ಥೆ. ರಸ್ತೆಯ ಬದಲಿಗೆ ಅಷ್ಟೇ ದೂರ ಕ್ರಮಿಸಲು ಮೆಟ್ಟಿಲುಗಳ ಸೌಲಭ್ಯವನ್ನು ಇಲ್ಲಿ ಮಾಡಲಾಗಿದೆ. ಇನ್ನೂ ಈ ಸೇತುವೆ ಕೂಡ ಸೂಪರ್ ಕ್ಲೀನ್. ದಿನ ನಿತ್ಯ ಗುಡಿಸುವ ಕೆಲಸ, ಮರಗಳಿಂದ ಬಿದ್ದ ಒಣಗಿದ ಎಲೆಗಳ ಸ್ವಚ್ಚತಾ ಕಾರ್ಯ ನಡೆಯುತ್ತಾ ಇರುತ್ತದೆ. ಸೇತುವೆಯಲ್ಲಿ ನಿಂತು ಕೆಳಗೆ ಕಣ್ಣು ಹಾಯಿಸಿದರಂತೂ ಪಾತಾಳವನ್ನೇ ನೋಡಿದ ರೀತಿಯ ಅನುಭವ. ಮುಂಜಾಗೃತಾ ಕ್ರಮವಾಗಿ ಇಲ್ಲೂ ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಸೈಕಲ್ ಸವಾರಿ, ಸ್ಕೇಟಿಂಗ್ ಬೋರ್ಡ್, ಸ್ಮೋಕಿಂಗ್ ಗಳಿಗೆ ಇಲ್ಲಿ ಅನುಮತಿ ಇಲ್ಲ.

ಇವಿಷ್ಟು ಸಿಂಗಾಪುರ ದೇಶದ ಕಥೆಯಾದ್ರೆ ನಮ್ಮ ದೇಶದ ಯೋಜನೆಗಳಂತೂ ಓಟು ಬ್ಯಾಂಕ್ ರಾಜಕಾರಣದ ಅಡಿಯಲ್ಲೇ ಇನ್ನೂ ಉಸಿರಾಡುತ್ತಿದೆ. ಸರ್ಕಾರದಿಂದ ಯೋಜನೆಗಳು ಮಂಜೂರದ್ರೂ ನಡು ನಡುವೆ ಸಿಗುವ ಮಧ್ಯವರ್ತಿಗಳ ಕಾಟ. ಲಂಚಕ್ಕಾಗಿಯೇ ಬಕ ಪಕ್ಷಿಗಳಂತೆ ಕಾದು ಕುಳಿತ ಅದೆಷ್ಟೋ ಅಧಿಕಾರಿಗಳು. ಒಂದಾ, ಎರಡಾ ಸಮಸ್ಯೆಗಳು. ಇಂತಹ ವ್ಯವಸ್ಥೆಗಳ ನಡುವೆ “ಉದ್ಧಾರ” ಅನ್ನುವ ಪದಕ್ಕೆ ಯಾವಾಗ ಮನ್ನಣೆ ದೊರೆಯುತ್ತೋ ಕಾದು ನೋಡಬೇಕು. ಆದರೂ ಭರವಸೆಗಳನ್ನು ಹೊಂದಿದ ಆಶಾವಾದಿಗಳು ನಾವೆಲ್ಲ..

‍ಲೇಖಕರು avadhi

October 31, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: