ಹತ್ತು ಬಿಡಿಗವಿತೆಗಳು
ಹೃದಯ ಶಿವ
೧
ಇನ್ನೂ ಹಲ್ಲು ಮೂಡದ
ಹಸುಳೆಯ ಹಾಲುಗೆನ್ನೆಗೆ
ಬೊಚ್ಚುಬಾಯಜ್ಜಿ
ಮುತ್ತುಕೊಟ್ಟ ದೃಶ್ಯವನ್ನು
ಕಾಲ
ಹಲ್ಲುಬಿಟ್ಟು ನೋಡುತಿತ್ತು
೨
ತನ್ನ ಹೆಗಲಮೇಲೆ ಕುಳಿತಿದ್ದ
ಪುಟ್ಟ ಮೊಮ್ಮಗನಿಗೆ
ಎದುರಿಗಿದ್ದ ಗೋಣಿಮರ ತೋರಿಸುತ್ತ
ಅಜ್ಜ ಹೇಳಿದ ಮಾತು :
ಚಿಗುರೆಲೆ ಸುಖಕ್ಕಾದರೂ
ಹಣ್ಣೆಲೆ ಗೊಬ್ಬರವಾಗಬೇಕು ಮಗಾ
೩
ತನ್ನವ್ವನನ್ನು ಬಾಚಿಕೊಂಡಿದ್ದ
ಕೋತಿಮರಿಯನ್ನು
ಕಂಡ
ಮುದುಕಿಯೊಬ್ಬಳ ಕಂಠವನ್ನು
ದಶಕಗಳ ಹಿಂದೆ ಕಳೆದುಹೋದ
ಮಗನ
ಸಂಕಟ ತಬ್ಬಿತ್ತು
೪
ಆಸ್ಪತ್ರೆಯ ಬೆಡ್ಡಿನ ಮೇಲೆ
ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ
ತನ್ನವ್ವನ
ಭುಜಮುಟ್ಟಿ ಜಗ್ಗುತ್ತಿದ್ದ
ಮುಗ್ಧಕಂದನ ಹೃದಯದಲ್ಲಿ
ಕರುಳಿನ ಪ್ರಜ್ಞೆ
ಜಾಗೃತವಾಗಿತ್ತು.

೫
ಚಾದರದ ಮೇಲೆ ಚಿತ್ರಿಸಿದ್ದ
ಗುಲಾಬಿಹೂವನ್ನು ಕಿತ್ತುಕೊಳ್ಳಲು
ಇನ್ನಿಲ್ಲದ ಸಾಹಸ ನಡೆಸುವ
ಮಗುವಿನ ಮುಗ್ಧತೆ,
ಮುಂದೊಮ್ಮೆ
ಮಾಯವಾಗುವುದನ್ನು ನೆನೆದರೆ
ನನಗೆ ದುಃಖವುಂಟಾಗುತ್ತದೆ.
೬
ವಾಕರ್ ಮೇಲೆ ಕುಳಿತ
ತನ್ನ ಪುಟ್ಟ ಮಗಳ ಪುಟ್ಟ ಪಾದಗಳು
ಅತ್ತಿಂದಿತ್ತ ಇತ್ತಿಂದತ್ತ ಹರಿದಾಡುತ್ತಿದ್ದ
ದೃಶ್ಯವನ್ನು ಕಂಡ
ಚಲನಶೀಲ ಮನಸ್ಸಿನ ಭಾವುಕ ತಂದೆ
ಕೂತಲ್ಲೇ ಪ್ರತಿಮೆಯಾಗಿದ್ದ
೭
ಮಕ್ಕಳ ಅಳುವಿನಲ್ಲೂ
ಹುಚ್ಚರ ನಗುವಿನಲ್ಲೂ
ದೇವರು
ಗಂಭೀರವಾಗಿ ನೆಲೆಸಿರುತ್ತಾನೆ
೮
ಜೋರಾಗಿ ಸೀನಬೇಕೆನಿಸಿದಾಗ
ಒಮ್ಮೆಲೇ
ಪುಟ್ಟಮಗಳು ತೊಡೆಯ ಮೇಲೆ
ನಿದ್ರಿಸುತ್ತಿರಬಹುದೆಂದೆನ್ನಿಸಿ
ಸುಮ್ಮನಾಗಿಬಿಡುವ ಪ್ರಕ್ರಿಯೆಗೆ
ಹೆಸರಿಡಲಾಗದೆ ಚಡಪಡಿಸಿದೆ
೯
ಪ್ರತಿಯೊಬ್ಬ ಮುದುಕನ ಮುಖದಲ್ಲೂ
ಮಾಗಿದ ಗೆರೆಗಳು ಮೂಡದಿರಬಹುದು
ಆದರೆ
ಪ್ರತಿಯೊಂದು ಮಗುವಿನ ಕಣ್ಣಿನಲ್ಲೂ
ಮುಗ್ಧತೆಯ ಮಿಂಚು ಮಿನುಗುತ್ತಿರುತ್ತದೆ
೧೦
ಸಲೀಸಾಗಿ ತನ್ನ ಕಾಲ್ಬೆರಳ
ಬಾಯಿಗಿಟ್ಟುಕೊಳ್ಳುವ
ಪುಟಾಣಿ ಕೂಸನ್ನು ಕಂಡ
ಬಾಬಾ ರಾಮದೇವ
ಧೀರ್ಘ ನಿಟ್ಟುಸಿರು ಬಿಟ್ಟು
ದಟ್ಟಕೇಶಕ್ಕೆ ಗಂಟು ಬಿಗಿದ






ಅಗಲುವಿಕೆ ಕೊಡಿಕೆಯ ಅನುಸಂದಾನದ ಸಾಲುಗಳು ……very.very nice
Wonderful lines sir.
ಶಿವಾ, ಹೊಸ ಬೇರು ಹಳೆ ಚಿಗುರು ಮಾತಿನ ಜತೆ ಮತ್ತಷ್ಟು ಹೊಸ ಮಾತುಗಳನ್ನು ಕೇಳಿದಂತಾಯಿತು. ಸಿನಿಮಾದ ಲಘುದಾಟಿವ ಬರಹದ ಮದ್ಯೆಯೂ ಭಾವತೀರ್ವತೆಯ ಪದ್ಯ ಕಟ್ಟುತ್ತಿರುವುದು ಇಷ್ಟವಾಗುತ್ತೆ.
ಶಿವೂ ಅವರೇ, ಬಿಡಿ ಕವಿತೆಗಳು ಚೆನ್ನಾಗಿವೆ ….
ಎಲ್ಲಾ ಸೂಪರ್ ಆದರೆ ನನಗೆ ಬಹಳ ಇಷ್ಟ ಆಗಿದ್ದು..
ಪ್ರತಿಯೊಬ್ಬ ಮುದುಕನ ಮುಖದಲ್ಲೂ
ಮಾಗಿದ ಗೆರೆಗಳು ಮೂಡದಿರಬಹುದು
ಆದರೆ
ಪ್ರತಿಯೊಂದು ಮಗುವಿನ ಕಣ್ಣಿನಲ್ಲೂ
ಮುಗ್ಧತೆಯ ಮಿಂಚು ಮಿನುಗುತ್ತಿರುತ್ತದೆ
ತುಂಬಾ ಚೆನ್ನಾಗಿದೆ, ಆರ್ದ್ರವಾಗಿದೆ . ಈ ಕೆಳಗಿನ ಸಾಲುಗಳಲ್ಲಿನ ಹೊಸತನ ಸ್ವಂತಿಕೆ ಇಶ್ಟವಾಯಿತು
ಕಾಲ ಹಲ್ಲುಬಿಟ್ಟು ನೋಡುತಿತ್ತು
ಚಿಗುರೆಲೆ ಸುಖಕ್ಕಾದರೂ ಹಣ್ಣೆಲೆ ಗೊಬ್ಬರವಾಗಬೇಕು ಮಗಾ
ಮುದುಕಿಯೊಬ್ಬಳ ಕಂಠವನ್ನು ದಶಕಗಳ ಹಿಂದೆ ಕಳೆದುಹೋದ ಮಗನ ಸಂಕಟ ತಬ್ಬಿತ್ತು
ಕೂತಲ್ಲೇ ಪ್ರತಿಮೆಯಾಗಿದ್ದ
ಮಕ್ಕಳ ಅಳುವಿನಲ್ಲೂ ಹುಚ್ಚರ ನಗುವಿನಲ್ಲೂ ದೇವರು ಗಂಭೀರವಾಗಿ ನೆಲೆಸಿರುತ್ತಾನೆ
ಕಡೆಯ ನಾಲ್ಕು ಬಿದುಗವಿತೆಗಳೂ ಇಶ್ಟವಾದವು
Nanna gurugalaada Lankeshara nenapu aayitu Hridaya Shiva
kavithe chennagide ,pratimegalu bhavapoornavagive