ಮಿಸ್ ಯೂ ಶಂಕರ್ ನಾಗ್….

ನಿನ್ನೆ ಶಂಕರ್ ನಾಗ್ ರನ್ನು ನಾವು ಕಳೆದುಕೊಂಡ ದಿನ, ಸೆಪ್ಟೆಂಬರ್ ೩೦

ಶಂಕರ್ ರನ್ನು ನೆನಸಿಕೊಳ್ಳುತ್ತಾ ಅವರ ಬಗ್ಗೆ ರಮೇಶ್ ಗುರುರಾಜ ರಾವ್ ಅವರು ಬರೆದ ಲೇಖನ ನಿಮಗಾಗಿ

ರಮೇಶ್ ಗುರುರಾಜ ರಾವ್

1988 ರ ನವೆಂಬರ್ ಚಳಿಯಲ್ಲಿ ಕಲಾಕ್ಷೇತ್ರದ ರಿಹರ್ಸಲ್ ಶೆಡ್ ನಲ್ಲಿ ಮಂಟೇಸ್ವಾಮಿ ಕಥಾ ಪ್ರಸಂಗದ ಹಾಡುಗಳನ್ನ ಹಾಡುತ್ತಾ ಕುಳಿತಿದ್ದೆ… ಜೊತೆಗೆ ವೆಂಕಿ, ವಾಸು, ಜಿತೂರಿ, ರಘು ಎಲ್ಲಾ ಇದ್ದರು. ಸುರೇಂದ್ರನಾಥ್ ಕರೆ ಕಳಿಸಿದರು. ನಾನು ಮತ್ತು ಜಿತೂರಿ ಹೋದಾಗ ನಮಗೆ ಸುರೇಂದ್ರನಾಥ್ ಹೇಳಿದ್ದು ಕೇಳಿ ಸ್ವಲ್ಪ ಗಾಬರಿ ಆಗಿತ್ತು.. “ಶಂಕರ್ ನಾಗ್ ನಿರ್ದೇಶನದ ನಾಗಮಂಡಲ ನಾಟಕ ಕಲ್ಕತ್ತಾದಲ್ಲಿ ಇದೆ ಮತ್ತೆ ಆ ನಾಟಕಕ್ಕೆ ನೀವಿಬ್ಬರು ಹಾಡ್ತಿದ್ದೀರಿ”…. ಹೀಗೆ ಹೇಳಿದ್ರೆ ಯಾರಿಗೆ ತಾನೇ ಗಾಬರಿ ಆಗೋಲ್ಲ ?.. ಅದರಲ್ಲೂ ಶಂಕರ್ ನಾಗ್ ತಂಡ ಸಂಕೇತ್ ಅಂದ್ರೆ ಇನ್ನೂ ಜಾಸ್ತಿನೇ. ಸಿನೆಮಾದಲ್ಲಿ ತೆರೆ ಮೇಲೆ ನೋಡುತ್ತಿದ್ದ ಡಿಶುಂ ಡಿಶುಂ ಹೀರೋ ಜೊತೆ ಕೆಲಸ ಮಾಡೋದು ಅಂದ್ರೆ… !!!

ಸರಿ, ನಾಗಮಂಡಲ ನಾಟಕದ ರಿಹರ್ಸಲ್…. ನವೆಂಬರ್ ತಿಂಗಳ ಕೊನೆಯಲ್ಲಿ ಇತ್ತು. ನಾನು ಸಂಕೇತ್ ಸ್ಟುಡಿಯೊಗೆ ಹೋದೆ.. ಅಲ್ಲಿಂದ ಶಂಕರ್ ಅವರ ಫಾರಂ ಹೌಸ್ ಗೆ ಲಿಂಗಯ್ಯ ಓಡಿಸುತ್ತಿದ್ದ ಮೆಟಾಡೋರ್ ನಲ್ಲಿ ಸಿಂಗಸಂದ್ರದ ಫಾರಂ ಹೌಸ್ ಗೆ ಹೋದೆ. ದಾರಿಯಲ್ಲಿ ತಂಡದ ಗೆಳೆಯರೆಲ್ಲ ಜೊತೆಯಾದರು. ಶಂಕರ್ ನಾಗ್ ಬಗ್ಗೆ ತುಂಬಾ ವಿಚಿತ್ರವಾದ ಕಲ್ಪನೆಗಳಿದ್ದವು. ಸಿನಿಮಾ ಹೀರೋ… ಕರಾಟೆ ಕಿಂಗ್… ಹೀಗೆ ಏನೇನೋ.. ಅದೇ ತಾನೇ ಅವರ ಸಿನಿಮಾ “ನರಸಿಂಹ” ನೋಡಿದ್ದೆ. ಜೊತೆಗೆ ರಮೇಶ್ ಭಟ್, ಬಿ ಜಯಶ್ರೀ, ಕಲ್ಪನಾ ನಾಗಾನಾಥ್, ಸುಧಾ ಬೆಳವಾಡಿ, ಕಾಶಿ, ಎಲ್ಲಾ ಇದ್ದರು… ಇದು ಇನ್ನೂ ತಳಮಳಕ್ಕೆ ಕಾರಣ… ಅವರೆಲ್ಲಾ ಆ ತಂಡದಲ್ಲಿ ಕೆಲಸ ಮಾಡುತ್ತಿದ್ದುದು ಗೊತ್ತಿತ್ತು.
ಫಾರ್ಮ್ ಹೌಸ್ ಸೇರಿದ ಕೂಡಲೇ, ವ್ಯಾನಿನ ಬಾಗಿಲು ಪಟಕ್ಕನೆ ತೆರೆಯಿತು. “ವೆಲ್ಕಮ್… ವೆಲ್ಕಮ್….” ಧ್ವನಿ ಕೇಳಿದ ಕೂಡಲೇ ತಿರುಗಿ ನೋಡಿದರೆ… ಕಪ್ಪು ಬಣ್ಣದ ಶರ್ಟ್ ಮತ್ತು ಜೀನ್ಸ್ ಧರಿಸಿದ್ದ ಶಂಕರ್ ನಾಗ್ ಬಾಗಿಲು ತೆಗೆದಿದ್ದರು. ಒಮ್ಮೆಗೇ ಇದ್ದ ಚಿತ್ರ ವಿಚಿತ್ರ ಕಲ್ಪನೆಗಳೆಲ್ಲ ಢಮಾರ್ !!!! ತಕ್ಷಣ ತಲೆಗೆ ಬಂದ ಪ್ರಶ್ನೆ. “ಈ ಮನುಷ್ಯ ಇಷ್ಟೊಂದು ಸಿಂಪಲ್ಲೇ ???” ಡಿಶುಂ ಡಿಶುಂ ಹೀರೋ, ಕರಾಟೆ ಕಿಂಗ್, ಹೀಗೆಲ್ಲ ಕಲ್ಪನೆ ಇದ್ದ ನನಗೆ, ಅವರ ಮನುಷ್ಯ ಮುಖ, ಗೆಳೆಯನಂಥ ಮಾತು, ಇವೆಲ್ಲ ಒಮ್ಮೆಗೇ ಮನಸ್ಸಿಗೆ ಆಪ್ತತೆ ತಂದುಕೊಟ್ಟಿತ್ತು. ಅವತ್ತಿನಿಂದ ಇವತ್ತಿನವರೆಗೂ ಆ ಮುಖ, ಆ ನಗು ನನ್ನ ಮನದಿಂದ ಮಾಸಿಲ್ಲ..

ರಿಹರ್ಸಲ್ ಶುರುವಾಗುವ ಸಮಯ, “ಸೂರಿ ಸಾರ್ ಸಾರ್. ನಾನು ಹಾಡೋ ಹಾಡುಗಳು ಯಾವುದು?”. ಸೂರಿ ಉತ್ತರಿಸಲಿಲ್ಲ.. ನನ್ನನ್ನು ಶಂಕರ್ ನಾಗ್ ಬಳಿ ಕರೆದುಕೊಂಡು ಹೋಗಿ “ಇವನು ರಮೇಶ್ ಅಂತ. ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕದಲ್ಲಿ ಹಾಡಿದ್ದಾನೆ.. ಚೆನ್ನಾಗಿ ಹಾಡ್ತಾನೆ” ನಾನು ಶಂಕರ್ ನಾಗ್ ಗೆ ಕೈ ಚಾಚಿ “ಹಲ್ಲೋ ಸಾರ್” ಅಂದೆ. ತಕ್ಷಣ ಶಂಕರ್ ನಾಗ್ “ಹಲ್ಲೋ ಬಾಸ್… ನನ್ನನ್ನ ಶಂಕರ್ ಅಂತ ಕರೀ ಪರವಾಗಿಲ್ಲ… ” ಅಂದರು.. ನನಗೆ ತಿರುಗಿ ಆಶ್ಚರ್ಯ… ಹೀಗೂ ಉಂಟೇ ಎಂದು. ತಕ್ಷಣ ನಾಗಾನಾಥ್ ಅಲ್ಲಿಗೆ ಬಂದರು… “ನಾಗಾ, ಇವನಿಗೆ ಹಾಡುಗಳು ಹೇಳ್ಕೊಡು” ಶಂಕರ್ ತಕ್ಷಣವೇ ಕೆಲಸಕ್ಕಿಳಿದರು. ಒಂದು ನಿಮಿಷ ಕೂಡ ತಡ ಇಲ್ಲ..
4 – 5 ಕೆಲಸಗಳನ್ನು ಒಟ್ಟಿಗೆ ಮಾಡುವ ದೈತ್ಯ ಶಕ್ತಿಯನ್ನು ನೋಡಿದ್ದೇ ಅವತ್ತು…. ನಮಗೆ ರಿಹರ್ಸಲ್ ಮಾಡಿಸುತ್ತಲೇ, ಕಂಟ್ರಿ ಕ್ಲಬ್ ಕೆಲಸಗಳನ್ನು ಮಾಡುತ್ತಲೇ, ಫೋನ್ ನಲ್ಲಿ ಯಾರೊಡನೆಯೋ ಮಾತನಾಡುತ್ತಲೇ, ಎಲ್ಲವನ್ನೂ ಹದ್ದಿನ ಕಣ್ಣಲ್ಲಿ ನೋಡುತ್ತಿದ್ದ ವ್ಯಕ್ತಿ ಶಂಕರ್ ನಾಗ್.

ಕಲ್ಕತ್ತಾದಲ್ಲಿ ಸ್ಟೇಜ್ ರಿಹರ್ಸಲ್ ಮಾಡುವಾಗ, ರಂಗದ ಮೇಲೆ ಎತ್ತರದ ಜಾಗದಿಂದ “ಹಿಂಗಿದ್ದಳೊಬ್ಬಳು ಹುಡುಗಿ” ಹಾಡಿನಲ್ಲಿ ಜಂಪ್ ಮಾಡುವಂತೆ ಶಂಕರ್ ನನಗೆ ಹೇಳಿದಾಗ ಸ್ವಲ್ಪ ಹಿಂದೇಟು ಹಾಕಿದೆ… ಶಂಕರ್ ಕೂಡಲೇ ಸರಸರನೆ ಆ ಜಾಗ ಏರಿ ಅಲ್ಲಿಂದ ಧುಮುಕಿ ತೋರಿಸಿಯೇಬಿಟ್ಟರು. ಇಷ್ಟೆಲ್ಲದರ ಮಧ್ಯೆ, ಯಾರೋ, ಶಂಕರ್ ಸಂದರ್ಶನಕ್ಕೆಂದು ದೂರದರ್ಶನದಿಂದ ಬಂದಿದ್ದರು. ಅಲ್ಲೇ ಸ್ಟೇಜ್ ಮೇಲೆ ಕೂತು ಸಿಗರೇಟು ಸೇದುತ್ತ ಕ್ಯಾಮೆರಾ ಮುಂದೆ ಶಂಕರ್ ಮಾತಾಡುತ್ತಿದ್ದರು. ಅವರನ್ನು ನೋಡಿ, ನಾವೆಲ್ಲಾ ಎಂಥಾ ಸೋಂಭೆರಿಗಳು ಎನ್ನಿಸುತ್ತಿತ್ತು… ನಾಟಕ ಅದ್ಭುತವಾಗಿತ್ತು. ನಾಟಕದ ನಂತರ ಎಲ್ಲರು ಒಟ್ಟಿಗೆ ಸೇರುವುದು ಎಂಬ ತೀರ್ಮಾನ ಆಯಿತು. ಮಾರನೆಯ ದಿನ ಶಂಕರ್ ನಾಗ್ ಮತ್ತು ರಮೇಶ್ ಭಟ್ ಬೆಳಿಗ್ಗೆ ವಿಮಾನ ಏರಬೇಕಿತ್ತು. ಶಂಕರ್ ತಮ್ಮ ಟಿಕೆಟನ್ನು ತಂಡದ ಸದಸ್ಯನೊಬ್ಬನಿಗೆ ಕೊಟ್ಟು, ವಿಮಾನದಲ್ಲಿ ಹೋಗಲು ಹೇಳಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ… ನಮ್ಮೆಲ್ಲರೊಡನೆ ರೈಲಿನಲ್ಲಿ ಎರಡನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸುವ ಶಂಕರ್ ನಿರ್ಧಾರ ನನ್ನ ಮಟ್ಟಿಗಂತೂ ಪರಮಾಶ್ಚರ್ಯ… ಆ ಸಮಯಕ್ಕಾಗಲೇ ಶಂಕರ್ ಸೂಪರ್ ಹೀರೋ….. ಅವರು ರೈಲಿನಲ್ಲಿ ಎರಡನೇ ದರ್ಜೆಯಲ್ಲಿ ಬರುವುದೇ ??? ಯಾಕೋ ನಂಬಿಕೆ ಬರಲಿಲ್ಲ….. ಆದರೆ ಅದು ನಿಜ ಎಂದು ಗೊತ್ತಾಗಲು ಜಾಸ್ತಿ ಹೊತ್ತು ಬೇಕಾಗಲಿಲ್ಲ
ರೈಲಿನಲ್ಲಿ, ಶಂಕರ್ “ಬಾಬುಲ್ ಮೊರಾ… ” ಹಾಡನ್ನ ಹಾಡುತ್ತಿದ್ದಾಗ ನನಗೆ ಇನ್ನೊದು ಆಶ್ಚರ್ಯ… ಅದ್ಭುತವಾಗಿ ಹಾಡುತ್ತಿದ್ದರು….. ಜಯಶ್ರೀ ಮೇಡಂಗೆ ಕರಿಮಾಯಿ ನಾಟಕದ ಹಾಡನ್ನು ಹಾಡುವಂತೆ ಕೇಳಿದರು… ಜೊತೆಗೆ ವೆಂಕಿ ಇದ್ದನಲ್ಲ…. ಅವನೇ ತಮಟೆ ಸಾರಥಿ… ಹೀಗೆ ಬೆಂಗಳೂರಿನವರೆಗೆ ದಾರಿ ಸವೆದದ್ದೇ ಗೊತ್ತಾಗಲಿಲ್ಲ… ಒಟ್ಟಾರೆ ಶಂಕರ್ ಜೊತೆಗೆ ಕಳೆದ ದಿನಗಳು ಅದ್ಭುತ ಮತ್ತು ಯಾವತ್ತಿಗೂ ಮನಸ್ಸಿನಲ್ಲಿ ಹಸಿರು..
 

‍ಲೇಖಕರು avadhi

October 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: