ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ಮನೇಲಿ ತಾರ ಕಾಣ್ತಾ ಇಲ್ಲ!’

(ಇಲ್ಲಿಯವರೆಗೆ…)

ತಾರಾ, ಹುಂಜಾನ್ ಇಬ್ಬರೂ ಏನು ಮಾಡುತ್ತಿರಬಹುದು?
`ನಿನ್ನೆ ಅಚಾನಕ್ ಸಿಕ್ಕ ನನ್ನ ಕೈಯ್ಯಿಂದ ಹೇಗ್ ತಪ್ಪಿಸ್ಕೊಂಡ್ ಹೋಗ್ತೀಯ ಅಂತ ಅವನ ಕಾಲರ್ ಹಿಡ್ದೆ. ಅವನು ನನ್ನ ಸೊಂಟಾನ . . . ‘ ಎಂದು ನಾಚುತ್ತಾ ಹೇಳಿದ ತಾರಾಳ ಮಾತು ನೆನಪಾಗಿ ಚಿಟ್ಟಿಯ ಕೈ ಅವಳ ಸೊಂಟದ ಮೇಲಾಡಿತು. ಒಂದು ಕ್ಷಣ ಆ ಕೈ ತನ್ನದಲ್ಲದೇ ಬೇರೆ ಗಂಡಸಿನದ್ದು ಎಂದು ಕಲ್ಪಿಸಿಕೊಂಡಳು. ಸೊಂಟಕ್ಕೆ ತಾಕಿದ ಕೈ ಅವಳ ಮೈಯ್ಯಲ್ಲಿ ರೋಮಾಂಚನವನ್ನು ಉಂಟುಮಾಡಿತು. ಗಾಬರಿಯಿಂದ ಅತ್ತ ಇತ್ತ ನೋಡಿದಳು. ಸದ್ಯ ತನ್ನನ್ನು ಯಾರೂ ಗಮನಿಸಲಿಲ್ಲ ಎನ್ನುವ ಸಮಾಧಾನ. ಆದ್ರೂ ಅವಳ ಮನಸ್ಸಿನಲ್ಲಿ ತಾರಾನ ಸೊಂಟಕ್ಕೆ ಕೈಹಾಕಿದ ಹುಂಜಾನನ ಚಿತ್ರ ಯಾಕೋ ಮತ್ತೆ ಮತ್ತೆ ಮೂಡುತ್ತಿತ್ತು. `ನಿನಗೆ ಆಗ ಏನನ್ನಿಸಿತೇ’ ಎಂದು ತಾರಾಳನ್ನ ಕೇಳಬೇಕಿತ್ತು. ನನಗೆ ಯಾಕೆ ತೋಚಲಿಲ್ಲಾ? ಎಂದು ಪೆಚ್ಚಾದಳು.
ಅದೇ ಯೋಚನೆಯಲ್ಲೇ ಮನೆಗೆ ಬಂದ ಚಿಟ್ಟಿಗೆ ಎಲ್ಲವೂ ಒಡೆದುಹೋಗುವಂತೆ ಗಾಬರಿಯಾಗಿತ್ತು. ಏನೋ ತಿಂದು ಬಂದ ಟಾಮಿ ಎಡೆಬಿಡದೆ ಕಕ್ಕಿಕೊಳ್ಳುತ್ತಿತ್ತು. ಒಮ್ಮೊಮ್ಮೆ ಕಣ್ಣನ್ನ ಮೇಲೆ ಮಾಡಿ `ಕುಯ್ಯ್ ಕುಯ್ಯ್’ ಎನ್ನುತ್ತಿತ್ತು. ಚಿಟ್ಟಿಗೆ ಅದನ್ನ ನೋಡಿ ಸಂಕಟವಾಗಿ ಅದರ ಸೇವೆಗೆ ನಿಂತಳು. `ಹಾಳು ಮುಂಡೇದು ಏನ್ ಸುಡುಗಾಡು ಸುದ್ರಮೊಟ್ಟೆ ತಿಂದ್ ಬಂತೋ ಸುಮ್ನೆ ನಮ್ಮ ಜೀವ ತಿನ್ಕೊಂಡ್ ಬಿದ್ದಿದೆ. ನಾನವತ್ತೇ ಹೇಳ್ದೆ ಈ ನಾಯಿ ಪಾಯಿ ಎಲ್ಲಾ ನಮಗಲ್ಲ ಅಂತ. ಕೇಳಿದ್ನ ನಿಮ್ಮಪ್ಪ? ಗಂಡು ನಾಯಿ ಇರ್ಲಿ ಅಂತ ಉಳಿಸ್ಕೊಂಡ’ ಎಂದು ಅಜ್ಜಿ ವಟಗುಟ್ಟುತ್ತಿದ್ದರೆ ಚಿಟ್ಟಿ ಅಚ್ಚರಿಯಿಂದ ಅಜ್ಜಿಯ ಕಡೆಗೆ ನೋಡಿದ್ದಳು. ಹಾಗಾದ್ರೆ ಟಾಮಿ ಮನೆಯಲ್ಲಿ ಉಳಿದಿದ್ದು ಗಂಡುನಾಯಿ ಅಂತಲೇ? ಹೆಣ್ಣಾಗಿದ್ದಿದ್ರೆ ಇದನ್ನು ಓಡಿಸಿಬಿಡುತ್ತಿದ್ದರಾ?
ರಾತ್ರಿಯೆಲ್ಲಾ ಟಾಮಿಯ ನರಳಿಕೆಯಿಂದ ಚಿಟ್ಟಿಗೆ ನಿದ್ದೆ ಬರಲಿಲ್ಲ. `ಮನುಷ್ಯರಿಗಾದ್ರೆ ಏನ್ ಬೇಕು, ಏನ್ ಮಾಡಿದ್ರೆ ಸರಿಯಾಗುತ್ತೆ ಅನ್ನೋದು ಅಂದಾಜಿರುತ್ತೆ. ಈ ನಾಯೀನ್ ಏನ್ ಮಾಡೋದು?’ ಎಂದ ಅಮ್ಮನಿಗೆ `ತಿಪ್ಪೇಲ್ ಹಾಕಿದ್ ಮಗು ತೆಪ್ಪಗೆ ಬೆಳಕೊಳ್ಳುತ್ತೆ. ಸುಮ್ನೆ ಮಲಕ್ಕೋ. ಅದಕ್ಕೆ ಗೊತ್ತು ಏನ್ ಮಾಡ್ಕೋ ಬೇಕು ಅಂತ. ಬೆಳಗ್ಗೆ ಹೊತ್ತಿಗೆ ಸರಿಯಾಗುತ್ತೆ’ ಎಂದು ಅಪ್ಪ ಪಕ್ಕಕ್ಕೆ ಹೊರಳಿ ಮಲಗಿದ್ದ. ಚಿಟ್ಟಿ ಮಾತ್ರ ಆಗಾಗ ಟಾಮಿಯನ್ನು ಕಿಟಕಿಯಿಂದ ನೋಡುತ್ತಿದ್ದಳು. ಅದರ ಸಣ್ಣ ಮಿಲುಕಾಟ ಅವಳಲ್ಲಿ ಭರವಸೆಯನ್ನು ಮೂಡಿಸುತ್ತಿತ್ತು. ಚಿಟ್ಟಿ ತನಗೆ ಗೊತ್ತಿರುವ ಎಲ್ಲ ದೇವರಿಗೂ ಹರಕೆ ಹೊತ್ತು, ಕೈ ಮುಗಿದು ಟಾಮಿಯನ್ನು ಉಳಿಸುವಂತೆ ಬೇಡಿಕೊಂಡಳು.
ಹೀಗೆ ರಾತ್ರಿಯೆಲ್ಲಾ ಒದ್ದಾಡುತ್ತಿದ್ದ ಅವಳಿಗೆ ಅದ್ಯಾವ ಮಾಯೆಯಲ್ಲಿ ನಿದ್ದೆ ಬಂತ್ತೋ ಗೊತ್ತಿಲ್ಲ. ಅಮ್ಮ ಅಡುಗೆ ಮನೆಯಲ್ಲಿ ಪಾತ್ರೆಗಳನ್ನ ಸದ್ದು ಮಾಡಿದಾಗಲೇ ಎಚ್ಚರವಾಗಿದ್ದು. ದಡಬಡಿಸಿ ಎದ್ದ ಅವಳು ಕಿಟಕಿಯಿಂದ ಬಗ್ಗಿ ನೋಡುತ್ತಾಳೆ-ಟಾಮಿ ಇಲ್ಲ! ಯಾಕೋ ದುಃಖ ಒತ್ತರಿಸಿ ಬಂದು ಬಿಕ್ಕಿದಳು. ಅಷ್ಟರಲ್ಲಿ ಅಜ್ಜಿ `ಏಯ್ ಹೋಗಾಚೆ ರಾತ್ರಿಯೆಲ್ಲಾ ಜೀವ ತೆಗ್ದು ಈಗ ಬಂದಿದ್ದೀಯಾ? ನೋಡು ಅಂಗಳದ್ ತುಂಬಾ ಹೆಂಗ್ ಕಾರ್ಕೊಂಡಿದ್ದೀಯಾ? ಇದನ್ನ ಯಾರ್ ತೆಗ್ದ್ ಹಾಕ್ಬೇಕು? ಹಾಳ್ ಮುಂಡೇದೇ’ ಎಂದು ಬೈಯ್ಯುತ್ತಿದ್ದುದು ಕಿವಿಗೆ ಬಿತ್ತು. ಜೊತೆಗೆ ಟಾಮಿಯ `ಕುಯ್ಯ್ ಕುಯ್ಯ್’ ರಾಗ ಕೇಳಿ ಅವಳಿಗೆ ಖುಷಿಯಾಯಿತು.
ಓಡಿ ಬಂದು ನೋಡಿದರೆ ಟಾಮಿ ಬಾಲ ಅಲ್ಲಾಡಿಸುತ್ತಾ ನೆಗೆಯುತ್ತಿತ್ತು. ಹಿಂದಿನ ದಿನದ ಆಯಾಸವಾಗಲೀ, ರಾತ್ರಿಯ ನರಳಿಕೆಯಾಗಲಿ ಅದರ ಮುಖದಲ್ಲಿ ಕಾಣಲಿಲ್ಲ. ಟಾಮಿಯನ್ನು ಒಮ್ಮೆ ತಬ್ಬಿಕೊಳ್ಳಬೇಕು ಅನ್ನಿಸಿ ತನ್ನ ತೆಕ್ಕೆಗೆ ತೆಗೆದುಕೊಂಡಳು. ಟಾಮಿ ಅದನ್ನ ಒಪ್ಪಿಕೊಳ್ಳುವ ಹಾಗೆ ಅವಳ ತೋಳಿಗೆ ತನ್ನ ಮೂತಿಯನ್ನು ತೂರಿಸಿ ಹಾಯಾಗಿ ಮುಖಮಾಡಿತು. `ಹಲ್ಲೂ ಉಜ್ಜದೆ ಬೆಳಗ್ಗೆ ಬೆಳಗ್ಗೇನೆ ಆ ಹಾಳು ನಾಯಿ ಮುಂದೆ ಏನೇ ಮಾಡ್ತಾ ಇದೀಯ ಚಿಟ್ಟಿ?’ ಅಮ್ಮಾ ಕೂಗಿದಳು. ಇನ್ನು ಅಮ್ಮನ ಮಾತಿಗೆ ಮಾತು ಕೊಡೋಕ್ಕಾಗಲ್ಲ ಎಂದು ಟಾಮಿಯನ್ನು ಬಿಟ್ಟು ಚಿಟ್ಟಿ ಬಚ್ಚಲ ಕಡೆಗೆ ಹೊರಟಳು. ಬಿಟ್ಟು ಹೊರಟೆಯಾ? ಎನ್ನುವಂತೆ ಟಾಮಿ `ಕುಯ್ಯ್’ ಎಂದಿತು.
ಭಾರತಿ `ಚಿಟ್ಟೀ’ ಎನ್ನುತ್ತಾ ಓಡಿ ಬಂದಳು, ಅವಳ ಮುಖದ ಗಾಬರಿಯನ್ನು ನೋಡಿ `ಏನಾಯ್ತೆ?’ ಎಂದಳು ಚಿಟ್ಟಿ. `ತಾರಾ ನಿನ್ನೆ ಸಂಜೆ ನಿನ್ನ ಜೊತೆಲೇ ಬಂದ್ಲಲ್ವ?’ ಎಂದು ಪ್ರಶ್ನಿಸಿದಳು ಭಾರತಿ. ಚಿಟ್ಟಿಗೆ ಏನು ಹೇಳಬೇಕು ಎಂದು ತಿಳಿಯದೇ `ಹೌದು. . . ಆದ್ರೆ ಅವಳು ನನ್ನ ಜೊತೆ ಮನೆತನಕ ಬರಲಿಲ್ಲ. ಮಧ್ಯದಲ್ಲೇ ನಿಂತುಬಿಟ್ಟಳಲ್ಲಾ? ಯಾಕ್ ಕೇಳ್ತಾ ಇದೀಯ?’ ಎಂದಳು. `ಇಲ್ಲ ಕಣೆ’ ತಾರಾ ಮನೆಗೇ ಬಂದಿಲ್ವಂತೆ. ಎಲ್ಲಿ ಹೋಗಿದ್ದಾಳೋ ಎಂದು ಮನೇಲಿ ಆತಂಕ ಆಗ್ಬಿಟ್ಟಿದೆ. ಊರೆಲ್ಲಾ ಹುಡುಕ್ತಾ ಇದಾರೆ’ ಎಂದಳು ಭಾರತಿ. ಹಿಂದಿನ ದಿನ ತಾರಾ ತನ್ನ ಜೊತೆ ಮಾತಾಡುವಾಗ ಶಿಳ್ಳೆಯ ಶಬ್ದ ಕೇಳಿದ ಬಗ್ಗೆ ಅವಳಿಗೆ ಹೇಳಬೇಕೆನ್ನಿಸಿತಾದರೂ, ತಾರಾ ಯಾರ ಹತ್ರಾನೂ ಹೇಳಬೇಡ ಅಂದಿದ್ದು ನೆನಪಾಗಿ ಸುಮ್ಮನಾಗಿಬಿಟ್ಟಳು
ಅಷ್ಟರಲ್ಲಿ ತಾರಾಳ ಅಪ್ಪ ರೈಟರ್ ಕೇಶವ, ಅವನ ಹೆಂಡತಿ ತಾಯಕ್ಕ ಚಿಟ್ಟಿಯ ಮನೆಗೆ ಬಂದರು. ಮಗಳನ್ನು ನೆನಪಿಸಿಕೊಂಡು ತಾಯಕ್ಕ ಅಳತೊಡಗಿದಳು. `ನೀನ್ ಸ್ವಲ್ಪ ಸುಮ್ಮನಿರು’ ಎಂದು ಗದರಿ, ಚಿಟ್ಟಿ ಕಡೆಗೆ ತಿರಿಗಿ `ನಮ್ಮ ತಾರಾ ನಿನ್ನ ಹತ್ರ ಏನಾದ್ರೂ ಹೇಳಿದ್ಲಾಮ್ಮಾ’ ಎನ್ನುತ್ತಾ ವಿಚಾರಣೆ ಮುಂದುಮಾಡಿದ. ಅಮ್ಮ ಚಿಟ್ಟಿಯ ಕಡೆಗೆ ಕೆಂಗಣ್ಣಿನಿಂದ ನೋಡತೊಡಗಿದಳು. ಚಿಟ್ಟಿಗೆ ಯಾಕೋ ಅಳು ಬಂತು. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳನ್ನು ಸಮಾಧಾನ ಮಾಡಲಾಗದೆ ರೈಟರ್ ಕೇಶವ ಕಕ್ಕ್ಕಾಬಿಕ್ಕಿಯಾದ. ಅವನ ಹೆಂಡತಿ `ಹೇಳು ಚಿಟ್ಟಿ, ನನ್ನ ಮಗಳು ಅದೆಲ್ಲಿ ಹೇಗ್ ಕಷ್ಟ ಪಡ್ತಾ ಇದ್ದಾಳೊ ಏನೋ’ ಎನ್ನುತ್ತಾ ಕಣ್ಣಿರಾದಳು. ಚಿಟ್ಟಿಗೆ ಶಿಳ್ಳೆ ಶಬ್ದ ಬಂದಿದ್ದು ಮಾತ್ರ ಗೊತ್ತಿತ್ತು. ಅದು ಹುಂಜಾನನದ್ದಿರಬಹುದು ಎನ್ನುವುದು ಅವಳ ಊಹೆಯಾಗಿತ್ತೇ ಹೊರತು ಅಲ್ಲಿ ಅವನನ್ನು ನೋಡೇ ಇರಲಿಲ್ಲ. ಹಾಗಿದ್ದಲ್ಲಿ ತಾರಾ ಹುಂಜಾನನ ಜೊತೆ ಹೋಗಿದ್ದಾಳೆ ಎಂದು ಹೇಳುವುದಾದರೂ ಹೇಗೆ? ಚಿಟ್ಟಿ ಗೊಂದಲಕ್ಕೆ ಬಿದ್ದಳು. `ಅದೂ . . . ನನ್ನ ಜೊತೆ ಸ್ವಲ್ಪ ದೂರ ಮಾತ್ರ ಬಂದಳು. ನೀನ್ ಹೋಗೇ ಚಿಟ್ಟಿ ಅಂದಳು ಆಮೇಲೆ ನಂಗೇನೂ ಗೊತ್ತಿಲ್ಲ’ ಎಂದಳು ಚಿಟ್ಟಿ.

`ಎಲ್ಲಾ ಆಗಿದ್ದೂ ನಿನ್ನಿಂದಾನೇ. ಈ ನಡುವೆ ಅವಳು ಹದ್ದು ಮೀತರ್ಿದ್ದಾಳೆ ಅಂತ ನಿಂಗೆ ಹೇಳ್ದೆ. ಕೇಳಿದ್ಯಾ? ಅಪ್ಪ ಅಗಿ ಒಂದ್ ಮಾತು ಅವಳನ್ನ ಬೈದಿದ್ದಿದ್ರೆ ಇಷ್ಟೆಲ್ಲಾ ಆಗ್ತಾ ಇತ್ತಾ? ನಿಂಗೆ ನಿಂದೇ ಸಿರಿಯಾಗ್ ಹೋಯ್ತು. ಯಾರ ಕಡೆಗೂ ಗಮನ ಇಲ್ಲ. ಈಗ ಊರಲ್ಲಿ ತಲೆ ಎತ್ತಿಕೊಂಡು ಓಡಾಡಲು ಆಗುತ್ತಾ? ಅಯ್ಯೊ ಸಿವನೇ ಏನಪ್ಪ ನಿನ್ ಆಟ’ ಎಂದು ಕೇಶವನನ್ನು ತಾಯಕ್ಕ ಬೈಯ್ಯಲಿಕ್ಕೆ ಶುರು ಮಾಡಿದ್ಲು. `ಹಗಲೂ ಮೂರ್ಹೊತ್ತೂ ಮನೇಲಿರೋಳ್ ನೀನು. ನನ್ನ ಮೇಲೆ ಯಾಕ್ ಹಾಕ್ತಾ ಇದೀಯ? ಮಗಳನ್ನು ಸರ್ಯಾಗ್ ನೋಡ್ಕೊಳ್ಳೋಕ್ಕಾಗ್ದೆ ಇರೋಳು ನೀನ್ ತಾನೆ?’ ಎಂದು ತಾಯಕ್ಕನ ಮೇಲೆ ಎಗರಿಬಿದ್ದ ಕೇಶವ. `ನಿನ್ನ ಹಲ್ಕಟ್ ಬುದ್ದೀನೇ ನಿನ್ನ ಮಗಳಿಗೆ ಬಂದಿರೋದು. ನನ್ನ ಥರ ಆಗಿದ್ದಿದ್ರೆ ಮರ್ಯಾದೆಯಾಗಿ ಮನೇಲಿ ಇರ್ತಾ ಇದ್ಲು’ ಎಂದುಬಿಟ್ಟಳು. ಕೇಶವನಿಗೂ ಸಿಟ್ಟು ಹತ್ತಿ `ನೀನು ಸರ್ಯಾಗಿ ನಂಗೆ ಸುಖ ಕೊಟ್ಟಿದ್ದಿದ್ರೆ ನಾನ್ಯಾಕೆ ಅಲ್ಲಿ ಇಲ್ಲಿ ಹೋಗ್ತಾ ಇದ್ದೆ?’ ಎಂದು ಕೂಗಿದ. ಊರ ಜನರ ನಡುವೆ ಗಂಡ ಎನ್ನುವ ಪ್ರಾಣಿ ತನ್ನನ್ನು ಹೀಗೆ ಹೀನಾಯವಾಗಿ ಅಂದಿದ್ದು ತಾಯಕ್ಕನಿಗೆ ಸಹಿಸಲಾರದ ತುತ್ತಾಗಿತ್ತು. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ಶುರುವಾದದ್ದು, ಯಾರು ಏನು ಹೇಳಿದ್ರೂ ಮುಗೀಲೇ ಇಲ್ಲ. ಚಿಟ್ಟಿ ಮಾತ್ರ ಈ ಜಗಳವನ್ನು ನೋಡ್ತಾ ಏನನ್ನೋ ತುಂಬಿಕೊಳ್ಳತೊಡಗಿದಳು.
ಕೇಶವನಿಗೆ ಹಣಕ್ಕೇನೂ ಕೊರತೆ ಇರಲಿಲ್ಲ. ಕಾಫಿ ತೋಟದಲ್ಲಿ ರೈಟರ್ ಆಗಿದ್ದ ಅವನಿಗೆ ವಾರದ ಬಟವಾಡೆ ದಿನ ಬಂತೆಂದರೆ ಹಬ್ಬ. ಮನೆಗೆ ತಿಂಡಿ ಪೊಟ್ಟಣಗಳ ಸಮೇತ ಬರುತ್ತಿದ್ದ. ಹೆಂಡತಿಯ ಕೈಲಿ ಕೋಳಿ ಸಾರು ಮಾಡಿಸಿಕೊಂಡು ಕೃಷ್ಣಪ್ಪನ ಅಂಗಡಿಯಿಂದ ತಂದ ಶರಾಬಿನ ಜೊತೆ ತಿನ್ನುತ್ತಿದ್ದ. ಕುಡಿದಾಗ ಕೇಶವನ ಹೊಟ್ಟೆ ಬಕಾಸುರನದ್ದು ಎಂದು ತಮಾಷಿಯಾಗಿ ಅವನ ಸ್ನೇಹಿತರು ಮಾತಾಡುವುದನ್ನ ಚಿಟ್ಟಿ ಕೂಡಾ ಕೇಳಿಸಿಕೊಂಡಿದ್ದಳು.
ಕೇಶವನ ಹೆಂಡತಿ ತಾಯಕ್ಕನ ಅಪ್ಪ ಮಂಜಣ್ಣ ಭಾರಿ ಕುಳ. ತಮ್ಮಂದಿರಿಗೆ ಇವನ ಆಸ್ತಿಯ ಮೇಲೆ ಕಣ್ಣು. ಇರೋ ಒಬ್ಬ ಮಗಳಿಗೆ ಅಣ್ಣ ಏನು ಕೊಟ್ಟಾನು? ಮದುವೆ ಮಾಡಿದ ಮೇಲೆ ಎಡೆ ಇಡೋಕ್ಕಾದ್ರೂ ಒಬ್ಬ ವಾರಸುದಾರ ಬೇಡವೇ? ಅದಕ್ಕೆ ತಮ್ಮ ಮಗನನ್ನೇ ದತ್ತು ತೆಗೆದುಕೊಳ್ಳಲಿ ಎನ್ನುವ ಆಸೆಯನ್ನು ಅಣ್ಣನ ಹತ್ತಿರ ತೋಡಿಕೊಂಡಿದ್ದರೂ ಕೂಡಾ. ಆದರೆ ಮಂಜಣ್ಣನಿಗೆ ಇದ್ಯಾವುದೂ ಯಾಕೋ ಸರಿ ಬಂದಿರಲಿಲ್ಲ. ಒಬ್ಬಳೇ ಮಗಳಾದ ತಾಯಕ್ಕನನ್ನು ಮದುವೆ ಮಾಡಿ ಬೇರೆ ಕಡೆಗೆ ಕಳಿಸುವ ಇರಾದೆ ಅವನಿಗೆ ಸ್ವಲ್ಪವೂ ಇಲ್ಲದಿದ್ದುದ್ದರಿಂದ; ಏನೂ ಇಲ್ಲದವನನ್ನೇ ಅಳಿಯನನ್ನಾಗಿ ಹುಡುಕುತ್ತಿದ್ದ. `ನಾನು ಹೇಳಿದಂತೆ ಕೇಳಿಕೊಡು ಬಿದ್ದಿರೋ ಗಂಡು ಬೇಕು’ ಎಂದು ನಾಕು ಜನಕ್ಕೆ ಹೇಳಿದ್ದ. ಕಾರಣ ತಲೆ ಮಾಸಿದ ಕೇಶವನನ್ನು ತಂದು ಅವನ ಮುಂದೆ ನಿಲ್ಲಿಸಿದ್ದರು. ದಿಕ್ಕು ದೆಸೆ ಕಾಣದ ಕೇಶವನ ಮುಖದಲ್ಲಿದ್ದ ಕಳೆಯನ್ನು ನೋಡಿ ಅವನಿಗೆ ಈ ಬಡ್ಡಿಮಗ ಇವತ್ತಲ್ಲ ನಾಳೆ ಈ ವಂಶದ ಆಸ್ತಿಯನ್ನು ಉಳಿಸಿ ಉದ್ಧಾರ ಮಾಡ್ತಾನೆ ಅನ್ನಿಸಿಬಿಟ್ಟಿತ್ತು.
ತಾಯಕ್ಕನನ್ನು ಮದುವೆಯಾಗಿ ಮಂಜಣ್ಣನ ಮನೆಯಲ್ಲೇ ಉಳಿದ ಕೇಶವ, ತುಂಬಾ ನಿಯತ್ತಿನಿಂದಲೇ ಕೆಲಸ ಮಾಡಿ ಮಾವನ ವಿಶ್ವಾಸವನ್ನೂ ಸಂಪಾದನೆ ಮಾಡಿಕೊಂಡ. ಹೆಂಡತಿಗೆ ಒಳ್ಳೆಯ ಗಂಡ ಅನ್ನಿಸಿಕೊಂಡ. ಇದೆಲ್ಲ ಮಾವ ಇರುವವರೆಗೆ ಮಾತ್ರ. ಅವನ ಹೆಣ ಮಣ್ಣಿಗೆ ಬಿದ್ದ ಮಾರನೆಯ ದಿನವೇ ಕೇಶವ ಬದಲಾಗಿ ಹೋಗಿದ್ದ. ಎರಡೋ ಮೂರೋ ಹೆಣ್ಣುಗಳನ್ನು ಮದುವೆ ಮಾಡಿಕೊಂಡ. ಅವರಿಗೆ ಮನೆ ಮಾಡಿಕೊಟ್ಟ. ನಂತರ ಇದು ಸಾಕು ಅನ್ನಿಸಿತೋ ಏನೋ-ಮದುವೆಯ ಆಟವನ್ನು ಬಿಟ್ಟು ಆ ಕ್ಷಣದ ಸುಖಕ್ಕೆ ಒದಗಿ ಬರುವ ಹೆಣ್ಣುಗಳ ಕಡೆಗೆ ನೋಡತೊಡಗಿದ. ಮೃದು ಸ್ವಭಾವದ ತಾಯಕ್ಕ ಮಾತ್ರ ಇವನ್ನೆಲ್ಲಾ ಸಹಿಸಿಕೊಂಡು ಗಂಡನ ಮಾತುಗಳನ್ನು ಪಾಲಿಸುತ್ತಾ ಬಂದಿದ್ದಳು. ಈಚೆಗೆ ಅವಳ ಸಹನೆಯ ಕಟ್ಟೆಯೂ ಒಡೆದುಹೋಗಿತ್ತು. ಎಷ್ಟೇ ಜಗಳ ಆದರೂ ಏನೂ ಅಲ್ಲದ ತನ್ನನ್ನು ಇಂಥಾ ಸ್ಥಿತಿಗೆ ತಂದ ಕಾರಣಕ್ಕೋ ಏನೋ ಕೃತಜ್ಞತೆ ಎನ್ನುವ ಹಾಗೇ ತಾಯಕ್ಕನ ಮೇಲೆ ಎಂದೂ ಕೇಶವ ಕೈ ಮಾಡಿರಲಿಲ್ಲ.
`ಯಾರದೋ ಮನೆಯ ಮುಂದೆ ಹೀಗೆ ನಿಮ್ಮ ಮಗಳಿಗೋಸ್ಕರ ಜಗಳ ಆಡುವುದು ಸರಿಯೇ’ ಎಂದು ಅವರನ್ನ ಸಮಾಧಾನ ಮಾಡಿ ಜನ ಕಳಿಸಿದರು. ಚಿಟ್ಟಿಗೆ ತಾನೇ ಏನೋ ತಪ್ಪು ಮಾಡಿದೆ ಎನ್ನುವ ನೋವು ಕಾಡಿತು. ತನ್ನ ಮರ್ಯಾದೆ ಹೋಯಿತು ಎನ್ನುವ ಹಾಗೆ ಅತ್ತಳು. ಇದೆಲ್ಲಾ ಆಗಿದ್ದು ಆ ಹಾಳು ಹುಂಜಾನನಿಂದ. ಅವನೇ `ಹೇ ಮೇರಿ ಜಾನ್’ ಅಂತ ತಾರಾನ್ನ ಬುಟ್ಟಿಗೆ ಹಾಕಿಕೊಂಡಿದ್ದು ಅಲ್ವಾ? ಎನ್ನುತ್ತಾ ನೋಡುವಾಗ ಆ ಗುಂಪಲ್ಲಿ ಹುಂಜಾನ ಕೂಡಾ ಕಂಡ. ಅರೆ ಹುಂಜಾನ ಇಲ್ಲೇ ಇದ್ದಾನೆ ಅಂದ್ರೆ ತಾರಾ ಎಲ್ಲಿ ಹೋಗಿರಬಹುದು? ಈಗ ನಿಜಕ್ಕೂ ಚಿಟ್ಟಿಗೆ ಗಾಬರಿಯಾಯಿತು.
`ಇದೆಂಥಾ ರಗಳೇರೀ ಓಡಿ ಹೋದೋಳು ಹೋದಳು, ಕಡೇದಾಗಿ ನನ್ನ ಮಗಳ ಜೊತೆಗೇ ಮಾತಾಡಿ ಹೋಗಬೇಕಾ?’ ಎಂದಳು ಅಮ್ಮ. `ಅಲ್ಲ ಕಣೆ ಓಡಿ ಹೋದ್ಲು ಅಂತ ಯಾಕ್ ಹೇಳ್ತಾ ಇದೀಯ? ನಮ್ಮ ಚಿಟ್ಟಿಗಿಂತ ಎರಡು ವರ್ಷ ದೊಡ್ಡವಳು. ಏನ್ ಗೊತ್ತಾಗುತ್ತೆ ಹೇಳು?’ ಎಂದ ಅಪ್ಪ. ಚಿಟ್ಟಿಗೆ ತನಗೆ ಎಲ್ಲಾ ಗೊತ್ತು ಎಂದು ಹೇಳುವ ಕಾತರವಾದರೂ ಮಾತಾಡದೆ ಸುಮ್ಮನೆ ಉಳಿದಳು. `ನಿಮಗ್ ಗೊತ್ತಿಲ್ಲ ಅದು ಅಪ್ಪನ ರಕ್ತ ಹಂಚಿಕೊಂಡೇ ಹುಟ್ಟಿತ್ತಲ್ವ- ಬಲೇ ಮಿಟಕಲಾಡಿ. ಅಲ್ಲಾರೀ ಆ ಕೇಶ್ವ ನಮ್ಮನೇ ಬಾಗ್ಲಿಗೆ ಬಂದು ಹೀಗೆಲ್ಲಾ ಕೇಳೋ ಬದ್ಲು ಮೊದ್ಲಿಂದ ಮಗಳನ್ನ ಹದ್ದುಬಸ್ತಲ್ಲಿಟ್ಟಿದ್ದಿದ್ರೆ ಹೀಗೆಲ್ಲಾ ಆಗ್ತಾ ಇತ್ತಾ?’ ಎಂದು ಅಪ್ಪನಿಗೆ ಬದಲು ಕೊಟ್ಟಳು. `ನೋಡೇ ನಾಳೆ ನಮ್ಮ ಮಕ್ಕಳು ಹೇಗೋ ಗೊತ್ತಿಲ್ಲ. ನಾವ್ಯಾಕೆ ಇನ್ನೊಬ್ಬರ ಬಗ್ಗೆ ಮಾತಾಡುವುದು’ ಎಂದ ಅಪ್ಪನ ಮಾತಿಗೆ ಅಮ್ಮ, ಅನಾವಶ್ಯಕವಾಗಿ ಕೆರಳಿ `ನನ್ನ ಮಕ್ಕಳನ್ನು ಹೇಗೆ ಬೆಳೆಸೋದು ಅಂತ ನಂಗೆ ಗೊತ್ತು’ ಎಂದಳು.

ಹಾಗಾದ್ರೆ ತಾರಾ ಎಲ್ಲಿ ಹೋಗಿರಬಹುದು? ಇದೊಂದು ಯಕ್ಷಪ್ರಶ್ನೆ ಎಲ್ಲರನ್ನೂ ಕಾಡಿತು. ನಕ್ಕತ್ತು ನಿಟ್ಟುಸಿರಿಟ್ಟು, `ತಾರಾನ್ನ ಯಾವ್ದಾದ್ರೂ ಕುಕರ್ಾನೋ ದೊಡ್ಡ್ ನಾಯೀನೋ ಎತ್ಕೊಂಡ್ ಹೋಯ್ತಾ?’ ಎಂದರೆ, ಸರೋಜಾ `ಇಲ್ಲ ಕಣೆ ಅವಳು ಈಚೆಗೆ ಎದೆ ಕಾಣೋ ಹಾಗೇ ಬಟ್ಟೆ ಹಾಕ್ತಾ ಇದ್ಲು, ನಾನೇ ಎರಡ್ ಸಲ ಹೇಳಿದ್ದಕ್ಕೆ ಕೋಪಾನೂ ಮಾಡ್ಕೊಂಡ್ಲು. ಹಾಗೇ ಎದೆ ಕಾಣೋ ಹಾಗೆ ಬಟ್ಟೆ ಹಾಕ್ಕೊಂಡ್ರೆ ಗಂಡು ಕರಡಿ ಬಂದು ಎತ್ಕೊಂಡ್ ಹೋಗುತ್ತೆ ಅಂತ ನಮ್ಮಜ್ಜಿ ಹೇಳ್ತಿದ್ಲು, ಅದೂ ನಿಜವಾಗಿ ಅವಳನ್ನ ಎತ್ತಿಕೊಂಡು ಹೋಗಿರಬೇಕು ಅನ್ಸುತ್ತೆ’ ಎಂದಳು. ಕರಡಿ ಎತ್ತಿಕೊಂಡು ಹೋಗಿ ಕಚಗುಳಿ ಇಟ್ಟು ನಗಿಸಿ ನಗಿಸಿ ಸಾಯಿಸುತ್ತೆ ಅಂತ ಕೇಳಿದ್ದ ಕಥೆ ನೆನಪಾಗಿ ಚಿಟ್ಟಿ ಸಡಿಲವಾಗಿದ್ದ ಸ್ವೆಟರನ್ನು ಭದ್ರವಾಗಿ ಎಳೆದುಕೊಂಡಳು. ಅಷ್ಟೇ ಗಂಭೀರವಾಗಿ ಭಾರತಿ `ನಿನ್ನೆ ಸಂಜೆ ಹೋದೋಳು ಎಲ್ಲಿಗೆ ಹೋದಳು ಅಂತ ಗೊತ್ತಾಗ್ತಾ ಇಲ್ಲ ಅಂದ್ರೆ ನಂಗ್ಯಾಕೋ ತಾರಾ ಸತ್ತಿರಬಹುದಾ ಅನ್ನಿಸ್ತಾ ಇದೆ’ ಎಂದಳು. ನಕ್ಕತ್ತು ರೇಗಿದಳು: `ಛೇ ಎಂಥಾ ಮಾತಾಡ್ತೀಯ? ತಾರಾಗೆ ಏನೂ ಆಗಿರಲ್ಲ. ಆ ಹರಾಮಿ ಹುಂಜಾನನೇ ಏನೋ ಮಾಡಿದ್ದಾನೆ. ಅವ್ರ ಅಪ್ಪ ಕುಟ್ಟಿಗೆ ಊರ ಉಸಾಬರಿಯೆಲ್ಲಾ ಬೇಕು. ಕುಟ್ಟೀ ಟೀ ಕೊಡು ಅಂತ ಯಾರಾದ್ರೂ ಹೋದ್ರೆ ಸಾಕು, ಟೀ ಎತ್ತಿ ಹಾಕ್ತಾನೇ ಅವ್ರ ಮನೇಲಿ ಹೀಗಾಯ್ತಂತೆ ಹಾಗಾಯ್ತಂತೆ ಅಂತ ಹೆಂಗಸ್ರ ಹಾಗೆ ಮಾತಾಡ್ತಾನೆ! ಮಗ ಏನ್ ಮಾಡ್ತಾ ಇದಾನೆ ಅಂತ ತಿಳ್ಯೋದ್ ಬೇಡ್ವಾ?’ ಎಂದಳು.
ತಿಳ್ಯೋಕ್ಕೆ ಮಗ ಅವ್ನ ಪಕ್ಕದಲ್ಲಿದ್ರೆ ತಾನೇ? ಅಪ್ಪನ ಬುದ್ಧಿ ಗೊತ್ತಿರುವ ಹುಂಜಾನ, ಅಪ್ಪನ ಟೀ ಅಂಗಡಿಗೂ ತನ್ನ ಟೈಲರ್ ಅಂಗಡಿಗೂ ಅಂತರ ಇರುವ ಹಾಗೇ ದೂರದಲ್ಲಿ ಅಂಗಡಿಯನ್ನು ತೆರೆದಿಟ್ಟು, ಅದರಲ್ಲಿ ಕಾಜಾ ಹೊಲೆಯಲು, ಹುಕ್ ಹಾಕಲು ಮೂರು ನಾಕು ಜನ ಹುಡುಗರನ್ನು ತಂದಿಟ್ಟಿದ್ದ. ಇವನು ಮಾತ್ರ ಅಂಗಡಿಯ ಅಟ್ಟದ ಮೇಲೆ ತಣ್ಣಗೆ ನಿದ್ದೆ ಮಾಡಿಬಿಡುತ್ತಿದ್ದ. ತನಗೆ ಹೇಗೆ ಬೇಕೋ ಹಾಗೇ ಹೊಲೆದುಕೊಂಡ ಜುಬ್ಬವನ್ನು ತೀಡಿ ಇಸ್ತ್ರಿ ಮಾಡಿ, ಕಣ್ಣಿಗೆ ಸುರುಮಾ ಹಚ್ಚಿಕೊಂಡು, ಟೋಪ್ಪಿ ಇಟ್ಕೊಂಡು ನಾಕು ಜನ ನೋಡೋ ಹಾಗ್ ಓಡಾಡುತ್ತಿದ್ದ. ಟೀ ಕಾಸುತ್ತಾ ಅದನ್ನು ಮೇಲೆ ಎರಚಿಕೊಂಡು ಅಲ್ಲಲ್ಲಿ ಕಲೆ ಮಾಡಿಕೊಂಡು, ಬಾಯಲ್ಲಿ ರಾಶಿ ಎಲಡಿಕೆ ಹಾಕಿಕೊಂಡು, ಅಂಗಡಿಯಿಂದ ಆಗೀಗ ಹೊರಕ್ಕೆ ಬಂದು ಉಗಿಯುತ್ತಾ, ಅವರರಿವರ ಬಗ್ಗೆ ಮಾತಾಡುತ್ತಿದ್ದ ಟೀ ಕುಟ್ಟಿಯ ಮಗನಾ ಇವನು? ಎನ್ನುವ ಅನುಮಾನ ಬರುತ್ತಿತ್ತು. `ನಮ್ಮಂಥವರಿಗೆ ಶೋಕಿಯಾಕೆ?’ ಎನ್ನುತ್ತಿದ್ದ ಕುಟ್ಟೀಗೂ ಮಗನ ಮೇಲೆ ಅಂಥಾ ಅಭಿಪ್ರಾಯ ಇದ್ದ ಹಾಗಿರಲಿಲ್ಲ.
`ಇಲ್ಲ ಕಣೇ ಹುಂಜಾನನನ್ನು ನಾನೇ ನೋಡ್ದೆ, ಅವ್ನು ಇಲ್ಲೇ ಇದ್ದಾನೆ. ಅವ್ನು ಈ ಕೆಲ್ಸ ಮಾಡಿರಲಿಕ್ಕಿಲ್ಲ’ ಎಂದಳು ಚಿಟ್ಟಿ. ಎಲ್ಲರಿಗೂ ಈಗ ತಾರಾ ಎಲ್ಲಿರಬಹುದು ಎನ್ನುವ ಆತಂಕ. `ಒಂದ್ ಸಲ ಹುಂಜಾನನನ್ನೆ ಕೇಳಿಬಿಡೋಣ’ ಎಂದಳು ಚಿಟ್ಟಿ. `ಏನಂತ? ತಾರಾ ಎಲ್ಲಿ ಅಂತಾನಾ? ಅವ್ನು ಅಂಗಡಿಯ ಅಟ್ಟದ ಮೇಲೆ ಮಲಗಿತರ್ಾನೆ ಅವ್ನು ಬಟ್ಟೆ ಹೊಲೀಲಿಕ್ಕೆ ತಂದಿಟ್ಟ ಹುಡುಗ್ರು ದೊಡ್ಡವರ ಹತ್ರ ಚೆನ್ನಾಗೇ ಮಾತಾಡ್ತಾವೆ, ನಮ್ಮನ್ನು ನೋಡಿದ್ರೆ ಬ್ಲೌಸ್ ತೋರಿಸ್ತಾ ಇದನ್ನ ಹಾಕಿಕೊಳ್ಳಲ್ವೇನೇ ಅಂತಾವೇ’ ಎಂದಳು ಭಾರತಿ ಕೋಪದಿಂದ. `ನಾವ್ ಏನ್ ಹಾಕ್ಕೊಂಡ್ರೆ ಏನು?; ಹಾಕ್ಕೊಂಡಿಲ್ಲ ಅಂದ್ರೆ ಅವಕ್ಕೇನು? ನಮ್ಮವ್ವಂಗೆ ಹೇಳಿದ್ರೆ ಸಿಗುದ್ ಬಿಟ್ಟಾಳು’ ಎಂದಳು ಅಷ್ಟರವರೆಗೆ ಸುಮ್ಮನಿದ್ದ ಆರೋಗ್ಯ-ಇದ್ದಕ್ಕಿದ್ದ ಹಾಗೇ ಆವೇಶಕ್ಕೆ ಬಿದ್ದವಳಂತೆ. ಅವಕ್ಕೇನು? ಉತ್ತರ ಹೇಳುವವರು ಯಾರು?
ಇದೆಲ್ಲಾ ನಡೆದು ಎರಡು ಮೂರು ದಿನ ಕಳೆದುಹೋಯಿತು. ತಾಯಕ್ಕ ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ದಳು. ಕೊನೆಗೆ ಕೃಷ್ಣಪ್ಪನ ಅಂಗಡಿಯಿಂದ ಕಳ್ಳನ್ನು ತಂದು ಕಲ್ಲವ್ವನ ಮುಂದೆ ಇಟ್ಟೂ `ಅವ್ವಾ ನನ್ನ ಮಗಳು ಎಲ್ಲಿದ್ದಾಳೆ ಹೇಳವ್ವಾ’ ಎಂದೂ ಕೇಳಿಕೊಂಡಳು. ಕಳ್ಳನ್ನು ಹೊಟ್ಟೆಗೆ ತುಂಬಿಸಿಕೊಂಡ ಕಲ್ಲವ್ವ ಕಣ್ನ ಮುಚ್ಚಿ ವಾಲಾಡುತ್ತಾ `ನಿನ್ನ ಮಗಳು ಈ ಸೀಮೇನೇ ಬಿಟ್ಟು ಹೋಗಿದ್ದಾಳೆ’ ಎಂದು ಹೇಳಿಬಿಟ್ಟಿದ್ದಳು. ಊರ ಕೆರೆ, ಭಾವಿಗಳನ್ನೆಲ್ಲಾ ಜಾಲಾಡಿಸಿ ಕೊನೆಗೆ ಏನೂ ಸಿಗದೇ ಎಲ್ಲರೂ ಸುಸ್ತಾಗಿದ್ದರು. ಹುಂಜಾನ ಕೂಡಾ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ತಾನೂ ಒದ್ದೆಯಾದ. ಇಷ್ಟೆಲ್ಲಾ ಆದಮೇಲೆ ಚಿಟ್ಟಿ ಅವನ ಮೇಲೆ ಅನುಮಾನ ಪಡೋದಾದ್ರೂ ಹೇಗೆ?
ಊರಿಗೂರೆ ತಾರಾಳನ್ನ ಮರೆಯುವ ಸ್ಥಿತಿಯನ್ನು ತಲುಪಿತ್ತು. ರಾತ್ರಿ ಹೋಟೆಲಿನಲ್ಲಿ ಮಿಕ್ಕ ತಿಂಡಿ ಹಾಳಾಗುತ್ತೆ ಅನ್ನೋ ಕಾರಣಕ್ಕೆ ತಿಂದ ಐದಿಡ್ಲಿ ನಾಗನಿಗೆ ಹೊಟ್ಟೆಯಲ್ಲಿ ಏರುಪೇರಾಗಿ ಬಯಲಿಗೂ ಮನೆಗೂ ತಾರಾಡ ತೊಡಗಿದ್ದ. ಮಧ್ಯರಾತ್ರಿ ಹುಂಜಾನ ಯಾರೂ ಇಲ್ಲ ಎಂದು ಎಚ್ಚರಿಕೆಯಿಂದ ತಾರಾಳನ್ನು ಅಟ್ಟ ಇಳಿಸಿ ಬಯಲಿಗೆ ಕರೆದು ತಂದಿದ್ದ. ಹೀಗೆ ಕರೆತಂದವನನ್ನು ನೋಡದೆ ತಾರಾಳನ್ನು ಮಾತ್ರ ನಾಗ ನೋಡಿಬಿಟ್ಟಿದ್ದ. `ಅರೆ! ತಾರಕ್ಕ ಇಲ್ಲೇ ಇದ್ದಾಳೆ, ತಾರಕ್ಕಾ’ ಎಂದೂ ಕೂಗಿಬಿಟ್ಟಿದ್ದ. ಮೊದಲು ಗಾಬರಿಬಿದ್ದಿದ್ದು ಹುಂಜಾನನೇ. ಅವನು ಹಾಗೆ ಕೂಗಿದ್ದೇ ತಡ ಹುಂಜಾನ ತಾರಾಳ ಕೈಗಳನ್ನ ಹಿಡಿದು ಎಳೆದುಕೊಂಡು ಕಲ್ಲು ಮುಳ್ಳು ಏನೂ ನೋಡದೆ ಓಡಿಬಿಟ್ಟಿದ್ದ.
ಈ ಸುದ್ದಿ ಬೆಳಗಾಗುವುದರೊಳಗೆ ಊರ ತುಂಬಾ ಹರಡಿಬಿಟ್ಟಿತ್ತು. ರೈಟರ್ ಕೇಶವನ ಕೋಪ ಬ್ರಹ್ಮರಂದ್ರಕ್ಕೆ ಏರಿ ಹುಚ್ಚನಂತಾಗಿಬಿಟ್ಟಿದ್ದ. ಸುದ್ದಿ ತಿಳಿದ ತಕ್ಷಣ ಹುಂಜಾನನ ಟೈಲರ್ ಅಂಗಡಿಯ ಮೇಲೆ ಧಾಳಿ ನಡೆಸಿ ಒಳಗೆ ಮಲಗಿದ್ದ ಹುಡುಗರನ್ನ ಎಬ್ಬಿಸಿ `ಏನಾಯ್ತು?’ ಎಂದೆಲ್ಲಾ ವಿಚಾರಣೆ ನಡೆಸಿದ. ಹೀಗ್ ಹೀಗೆ ಮೂರು ದಿನಗಳೂ ಅಟ್ಟದ ಮೇಲೆ ತಾರಕ್ಕ ಇದ್ದಳು ಎನ್ನುವ ವಿಷಯವನ್ನು ಆ ಹುಡುಗರು ಬಾಯಿ ಬಿಟ್ಟಿದ್ದರು. ಮೂರು ದಿನ ಅವಳು ಅಲ್ಲಿ ಹೇಗೆ ಇದ್ದಳು? ದೇಹದ ನಿತ್ಯ ಕರ್ಮಗಳನ್ನು ಹೇಗೆ ತೀರಿಸಿಕೊಳ್ಳುತ್ತಿದ್ದಳು? ಇಡೀ ದಿನ ಹೇಗೆ ಎಲ್ಲವನ್ನೂ ತಡೆದುಕೊಂಡಿರುತ್ತಿದ್ದಳು? ಎನ್ನುವ ಅಚ್ಚರಿಗೆ ಬಿದ್ದು ಹುಂಜಾನನ ಮೇಲಿನ ಆಸೆಗೆ ಎಂಥಾ ದೊಡ್ದ ಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಳಲ್ಲ ಅನ್ನಿಸಿಬಿಟ್ಟಿತ್ತು ಚಿಟ್ಟಿಗೆ. ಹೀಗೆಲ್ಲಾ ಕಷ್ಟವನ್ನು ಮೈಮೇಲೆ ಎಳೆದುಕೊಳ್ಳಬೇಕಂದ್ರೆ ಅದು ಸುಮ್ನೆ ಅಲ್ಲ. ಹಾಗಾದ್ರೆ ಆ ಪ್ರೀತೀಲಿ ಏನೋ ಇರಬೇಕು ಎಂದೂ ಅನ್ನಿಸಿತ್ತು. ಹುಂಜಾನ ತಾರಾ ಇಬ್ಬರೂ ಅವಳ ಕಣ್ಣಿಗೆ ತಾನು ಕೇಳಿದ ಕಥೆಯ ಗಂಧರ್ವರೇನೋ ಅನ್ನಿಸಿಬಿಟ್ಟಿದ್ದರು. ಅದೇ ಗುಂಗಲ್ಲಿ ಚಿಟ್ಟಿ ನಿದ್ದೆಗೆ ಜಾರಿದ್ದಳು.
ಚಿಟ್ಟಿ ಬೆಳಗ್ಗೆ ಮೈಮುರಿಯುತ್ತಾ ಹೊರಗೆ ಬರುವುದಕ್ಕೂ. ಬೇಡ ಅಂತ ಕಾಲನ್ನು ಹಿಡಿದುಕೊಳ್ಳುತ್ತಿದ್ದರೂ ಕುಟ್ಟಿಯನ್ನು ತಳ್ಳಿ ಟೀ ಅಂಗಡಿಗೆ ಕೇಶವನೇ ಬೆಂಕಿ ಇಟ್ಟಿದ್ದನ್ನ ನೋಡುವುದಕ್ಕೂ ಸರಿಯಾಯಿತು. ಕುಟ್ಟಿ ತಲೆಯನ್ನು ಚೆಚ್ಚಿಕೊಂಡ, `ನನ್ನ ಮಗ ಮಾಡಿದ ತಪ್ಪಿಗೆ ನನ್ನ ಟೀ ಅಂಗಡಿ ಸುಟ್ಟರೆ ನಾಳೆ ನನ್ನ ಗತಿಯೇನು? ನನ್ನ ಸಣ್ಣ ಮಕ್ಕಳ ಪಾಡೇನು? ಅವರ ಹೊಟ್ಟೆ ತುಂಬಿಸುವುದಕ್ಕೆ ದಾರಿಯೇನು? ಅವನು ಸಿಕ್ಕರೆ ಅಡ್ದಡ್ಡ ಸೀಳಿ ನಿಮ್ಮ ಮಗಳನ್ನ ಒಪ್ಪಿಸುತ್ತೇನೆ’ ಎಂದು ಪರಿ ಪರಿಯಲ್ಲಿ ಕುಟ್ಟಿ ಕೇಶವನನ್ನು ಬೇಡಿಕೊಂಡ. ಕೇಶವನ ಮನಸ್ಸು ಕರಗಲಿಲ್ಲ. ಊರ ಜನ ಯಾರೂ ಕುಟ್ಟಿಯ ಸಹಾಯಕ್ಕೆ ಬರಲಿಲ್ಲ. ಹಾಗೇನಾದರೂ ಬಂದರೆ ನಾಳೆ ನಮಗೆ ಏನು ಗತಿಯಾಗುತ್ತೋ ಎಂದು ಹೆದರಿದರು. ಹಣ ಇರುವ ಕುಳ, ನಾಳೆ ಏನು ಬೇಕಾದರೂ ಆಗಬಹುದು ಅಲ್ವಾ? ಚಿಟ್ಟಿ ಕಣ್ಣೆದುರೇ ತಾನು ದಿನಾ ನೋಡುತ್ತಿದ್ದ ಅಂಗಡಿ ಧಗಧಗನೆ ಹೊತ್ತಿ ಉರಿಯತೊಡಗಿತು. ಆ ಬೆಂಕಿಯ ಜ್ವಾಲೆ ಆಕಾಶಕ್ಕೆ ಮುಟ್ಟಿ ಅದರಲ್ಲಿ ತಾರಾ ಹುಂಜಾನರ ಮುಖ ಕಾಣಿಸಿ ಚಿಟ್ಟಿ `ಅಮ್ಮಾ’ ಎಂದು ಕೂಗಿದಳು.
(ಮುಂದುವರಿಯುವುದು…)
 

‍ಲೇಖಕರು avadhi

October 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: