ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಕ್ಕ ಹೆಕ್ಕಿದೆವು..

ಹೀಗೊಂದು ಪ್ರಾಜೆಕ್ಟ್ ವರ್ಕ್

ಪ್ರಿಯದರ್ಶಿನಿ ಶೆಟ್ಟರ

ನಾವು ಶಾಲೆಯಲ್ಲಿದ್ದಾಗ, ನಮ್ಮ ಶಿಕ್ಷಕರು ನಮಗೆ ಆಗೊಮ್ಮೆ ಈಗೊಮ್ಮೆ ಪ್ರಾಜೆಕ್ಟ್ ವರ್ಕ್ ಕೊಟ್ಟು ನಾವು ಒಬ್ಬೊಬ್ಬರಾಗಿಯೋ ಅಥವಾ ಒಂದು ಗುಂಪಾಗಿಯೋ ಕೊಟ್ಟ ಕಾರ್ಯವನ್ನು ಮಾಡಿ ಮುಗಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ನಾವೂ ಸಹ ‘ಆಟದೊಂದಿಗೆ ಪಾಠ’ ಎಂಬಂತೆ ಬಣ್ಣದ ಹಾಳೆ, ಪೇಂಟ್, ಅಂಟು, ಕತ್ತರಿ ಮುಂತಾದ ಸಾಮಗ್ರಿ ಬಳಸಿ ಚಾರ್ಟ್ ಅಥವಾ ಪುಟ್ಟ ಮಾಡೆಲ್ ಮಾಡಿ, ವಿವರಣೆ ನೀಡಿ ಸಂಭ್ರಮಿಸುತ್ತಿದ್ದೆವು. ನನ್ನೊಳಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಲು ಇಂತಹ ಪ್ರಯೋಗಗಳು, ಪ್ರಾಜೆಕ್ಟ್ ಮತ್ತು ವಿಜ್ಞಾನ ವಸ್ತು ಪ್ರದರ್ಶನಗಳು ಕಾರಣವಾದವು.

ಆಗ ನಮ್ಮ ಶಿಕ್ಷಕರು ಕೊಟ್ಟ ಯೋಜನಾಕಾರ್ಯ ಎಂದೂ ನಮಗೆ ಹೊರೆಯಾಗುತ್ತಿರಲಿಲ್ಲ. ಬದಲಾಗಿ ನಾವು ಬಹಳ ಹುರುಪಿನಿಂದಲೇ ಅದನ್ನು ಪೂರ್ಣಗೊಳಿಸುತ್ತಿದ್ದೆವು. ಕವಿ-ಕಾದಂಬರಿಕಾರರ ಪರಿಚಯ, ಅವರ ಭಾವಚಿತ್ರ, ವಿಜ್ಞಾನಿಗಳು, ಗಣಿತಜ್ಞರ ಭಾವಚಿತ್ರಗಳನ್ನು ವಾರಪತ್ರಿಕೆ, ದಿನಪತ್ರಿಕೆ ಹಾಗೂ ಚಾರ್ಟ್‍ಗಳಲ್ಲಿ ಹುಡುಕಿ ಕತ್ತರಿಸಿ ಬಳಸಿಕೊಳ್ಳುತ್ತಿದ್ದೆವು. ಅಂತರ್ಜಾಲದ ಸೌಲಭ್ಯ ಈಗಿನಷ್ಟು ವ್ಯಾಪಕವಾಗಿರಲಿಲ್ಲ ಮತ್ತು ಈಗಿನ ವಿದ್ಯಾರ್ಥಿಗಳಂತೆ ನಾವು ಪ್ರಾಜೆಕ್ಟ್ಗಾಗಿ ಹೆಚ್ಚು ಹಣ ವ್ಯಯಿಸುತ್ತಿರಲಿಲ್ಲ. ಸಾಧ್ಯವಿದ್ದಷ್ಟು ಇದ್ದುದರಲ್ಲಿಯೇ ಕಾರ್ಯ ಮುಗಿಸುತ್ತಿದ್ದೆವು. ಆದರೆ ಈಗ ವಿದ್ಯಾರ್ಥಿಗಳು ತಮ್ಮ ಬಹುಪಾಲು ಸಮಯವನ್ನು ಯೋಜನಾಕಾರ್ಯಕ್ಕೆಂದೇ ಕಳೆಯುತ್ತಾರೆ. ಪಾಪ ಬಡವಿದ್ಯಾರ್ಥಿಗಳಂತೂ ಡೌನ್‍ಲೋಡ್, ಪ್ರಿಂಟ್‍ಔಟ್, ಝೆರಾಕ್ಸ್ ಗಳಿಗಾಗಿ ನೂರಾರು ರೂಪಾಯಿ ತೆತ್ತು ಮನೆಯಲ್ಲಿ ಬೈಸಿಕೊಳ್ಳುವರು. ನಮಗೆ ಶಿಕ್ಷಕರು ಪ್ರಾಜೆಕ್ಟ್ ವರ್ಕ್ ಕೊಡುವುದೇ ಸೃಜನಶೀಲತೆ ಬೆಳೆಸಿ, ಕಲಾತ್ಮಕವಾಗಿ ಕಾರ್ಯ ಪೂರ್ಣಗೊಳಿಸಿ, ಅದರಿಂದ ನಾವೂ ಕಲಿತು, ಇತರರಿಗೂ ಹೇಳಿ ಅರ್ಥೈಸಿಕೊಳ್ಳಬೇಕೆಂದು. ಆದರೆ ಇತ್ತೀಚಿಗೆ ಪ್ರಾಜೆಕ್ಟ್ ವರ್ಕ್ ಮಾಡುವುದು ಅಂಕ ಗಳಿಸಲು ಎಂದಾಗಿದೆ.

ಎರಡು ವರ್ಷಗಳ ಹಿಂದೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ನನ್ನ ತಂಗಿ ಮೇಘದರ್ಶಿನಿ ತಯಾರಿಸುವ ಪ್ರಾಜೆಕ್ಟ್ ಗಳು ನನ್ನನ್ನು ಅಚ್ಚರಿಗೊಳಿಸುತ್ತಿದ್ದವು. ಒಂದು ಸೆಮೆಸ್ಟರ್ ಗೆ ಎರಡು ಫಾರ್ಮೆಟಿವ್ ಎಸ್ಸೆಸ್ಮೆಂಟ್‍ಗಳು (ಎಫ್.ಎ.) ಒಂದು ಎಫ್.ಎ.ಗೆ ಒಂದು ವಿಷಯದ ಎರಡು ಪ್ರಾಜೆಕ್ಟ್ ವರ್ಕ್‍ಗಳು. ಅಂದರೆ, ಆರು ವಿಷಯಕ್ಕೆ ಹನ್ನೆರಡು ಪ್ರಾಜೆಕ್ಟ್ ಗಳು ! ಅರ್ಥಾತ್ ಒಂದು ವರ್ಷದ ನಾಲ್ಕು ಎಫ್.ಎ.ಗಳಿಗೆ ನಲವತ್ತೆಂಟು ಪ್ರಾಜೆಕ್ಟ್ ಗಳು !!

ಒಮ್ಮೆ ಆಕೆಗೆ ಕೊಡಲಾದ ಒಂದು ಪ್ರಾಯೋಗಿಕ ಕೆಲಸ ನನಗೆ ಬಹಳ ಹಿಡಿಸಿತು. ಅದೇನೆಂದರೆ ಸಾಧ್ಯವಾದಷ್ಟು ಹಕ್ಕಿಯ ಪುಕ್ಕಗಳನ್ನು ಸಂಗ್ರಹಿಸಿ, ಅಂಟಿಸಿ, ಹಕ್ಕಿಗಳ ಹೆಸರಿನ ಸಹಿತ ಪ್ರಾಜೆಕ್ಟ್ ಪೂರ್ಣಗೊಳಿಸಬೇಕೆಂದು ಟೀಚರ್ ಹೇಳಿದ್ದಾರೆಂದು ನನ್ನ ತಂಗಿ ಹೇಳಿದಳು. ಮನೆಯ ಹತ್ತಿರ ಸಿಕ್ಕ ಪಾರಿವಾಳದ ಪುಕ್ಕ, ಕೋಳಿಪುಕ್ಕ ಹಾಗೂ ಹಳೆಯ ನವಿಲುಗರಿಯಿಂದ ಪ್ರಾಜೆಕ್ಟ್ ಆರಂಭವಾಯಿತು. ನಾನು ಮತ್ತು ಮೇಘ ಕರ್ನಾಟಕ ವಿಶ್ವವಿದ್ಯಾಲಯದ ಬೊಟಾನಿಕಲ್ ಗಾರ್ಡನ್‍ನಲ್ಲಿ ಪುಕ್ಕಗಳು ಸಿಗಬಹುದು ಎಂದೆಣೆಸಿ ಒಂದು ದಿನ ಮುಂಜಾನೆ ಬೇಗನೆ ಎದ್ದು ಅಲ್ಲಿಗೆ ಹೋದೆವು. ಅರ್ಧ ತಾಸು ಸುತ್ತಾಡಿದರೂ ಒಂದೇ ಒಂದು ಪುಕ್ಕ ಪತ್ತೆಯಾಗಲಿಲ್ಲ.

ಮೊದಲೇ ಅರೆಮನಸ್ಸಿನಿಂದ ನನ್ನೊಂದಿಗೆ ಬಂದಿದ್ದ ಮೇಘಳಿಗೆ ನಿರಾಶೆಯಾಗತೊಡಗಿತು. ನಾವು ಅಲ್ಲಿಯೇ ಇದ್ದ ಚಿಕ್ಕ ಕಟ್ಟಿಗೆಯಿಂದ ಪೊದೆ, ಕಸದ ಗುಂಪಿಯನ್ನು ಕದಡುವುದನ್ನು ನೋಡಿದ ಒಬ್ಬ ಕೆಲಸದ ಮಹಿಳೆಗೆ ನಾವೇನೋ ಕಳೆದುಕೊಂಡಿದ್ದೇವೆಂದು ಅನಿಸಿರಬೇಕು! ನಾವು ಬಂದ ಕಾರಣ ಹೇಳಿ ಪುಕ್ಕ ಕೇಳಿದೆವು. ಆಕೆ ವಿವರಣೆ ಬಯಸಿ, ‘ಇಲ್ಲೇ ಬಿದ್ದಿರುತ್ತವೆ’ ಎನ್ನುತ್ತಿಂದ್ದಂತೆಯೇ ನಾವೂ ಮುಂದೆ ಸಾಗಿದೆವು. ಅಲ್ಲೆರಡು ಪುಕ್ಕಗಳು ಸಿಕ್ಕವು. ಅವು ಸಿಕ್ಕ ಹುರುಪಿನಲ್ಲಿ ಮತ್ತಷ್ಟು ಹುಡುಕಾಡತೊಡಗಿದೆವು. ಅಲ್ಲಿಗೆ ಬರುವ ವಾಯುವಿಹಾರಿಗಳು ನಮ್ಮನ್ನು ಏಲಿಯನ್‍ಗಳಂತೆ ನೋಡಿದರು! ಆಗ ಅವರಿಗೆ ಕೇಳಿಸುವಂತೆ ನಾನು ಕೊಟ್ಟ ಪ್ರಾಜೆಕ್ಟ್ನ್ನು ಬೈಯ್ಯುತ್ತಾ “ಪುಕ್ಕ ಸಿಕ್ಕಿತೇ?” ಎಂದು ಕೇಳಿದಾಗ, ಮೇಘ “ಸಿಕ್ಕಿತು/ ಇಲ್ಲ ಅಥವಾ ಇನ್ನೊಂದು ಪುಕ್ಕ ಬೇಕು” ಎಂದು ಉತ್ತರಿಸಿದಳು. ನಾವಿಬ್ಬರೂ ಆಗಾಗ ಕ್ಯಾಮರಾದಿಂದ ಸೆಲ್ಫಿ ತೆಗೆದದ್ದೂ ಆಯಿತು.

ಕೊನೆಗೆ ಒಂದೂವರೆ ಗಂಟೆಯ ನಂತರ ಬೊಟಾನಿಕಲ್ ಗಾರ್ಡನ್ ಹಾಗೂ ಎಕೊ ಲೈಬ್ರರಿಯಲ್ಲಿ ಸುತ್ತಾಡಿ ಒಟ್ಟು 10- 12 ಪುಕ್ಕಗಳನ್ನು ತಂದೆವು. ಮನೆಗೆ ಬಂದು ಇಂಟರ್‍ನೆಟ್‍ನಲ್ಲಿ ಒಂದೊಂದೇ ಪುಕ್ಕದ ಗಾತ್ರ, ಬಣ್ಣವನ್ನು ಹೋಲುವ ಹಕ್ಕಿಗಳ ಹೆಸರನ್ನು ಗುರುತುಮಾಡಿ ಧಾರವಾಡಕ್ಕೆ ಬರಬಹುದಾದ ವಲಸೆ ಹಕ್ಕಿಗಳನ್ನು ಹೆಸರಿಸಿ ಪ್ರಾಜೆಕ್ಟ್ ಮುಗಿಸಿದ್ದೂ ಆಯಿತು!

ನನ್ನ ಪ್ರಕಾರ ಇದೊಂದು ನೆನಪಿನಲ್ಲಿರಬಹುದಾದ ಯೋಜನಾಕಾರ್ಯ. ಏಕೆಂದರೆ, ಹಕ್ಕಿಪುಕ್ಕಗಳು ಬುಕ್‍ಸ್ಟಾಲ್ ಅಥವಾ ಅಂತರ್ಜಾಲದಲ್ಲಿ ಸಿಗಬಹುದಾದ ವಸ್ತುಗಳಲ್ಲ. ಮೇಘ ಹಾಗೂ ಆಕೆಯ ಸಹಪಾಠಿಗಳು ತಮಗೆ ಸಿಕ್ಕ ಒಂದೇ ತೆರನಾದ ಪುಕ್ಕಗಳನ್ನು ಬೇರೆಯವರಿಗೆ ಕೊಟ್ಟು ಅವರಿಂದ ಒಂದು ಪುಕ್ಕ ಪಡೆದು, ಒಂದೊಮ್ಮೆ ತಮಗೆ ಬೇಕಾದ ಬಣ್ಣಬಳಿದು, ಬೇಕಾದ ಆಕಾರಕ್ಕಾಗಿ ಕತ್ತರಿಪ್ರಯೋಗ ಮಾಡಿ, ಕೊಂಚ ಪ್ರಯಾಸಪಟ್ಟು ಮಾಡಿದ ಪ್ರಾಜೆಕ್ಟ್‍ವರ್ಕ್ ಇದಾಗಿತ್ತು !!

‍ಲೇಖಕರು avadhi

28 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading