ಕುಮಾರಣ್ಣ ಬೇಕಾಗಿದ್ದಾರೆ!

2006 ಅವತ್ತಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಹೆಚ್. ಡಿ ಕುಮಾರಸ್ವಾಮಿ ರಾಜ್ಯದ ಮನೆ ಮಾತಾಗಿದ್ದರು. ಎಲ್ಲೆಲ್ಲೂ ‘ಕುಮಾರಣ್ಣ. ಕುಮಾರಣ್ಣ.. ಕುಮಾರಣ್ಣ..’ ಎಂಬ ಘೋಷಣೆಗಳು ರಾರಾಜಿಸುತ್ತಿದ್ದವು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ದಿನ ಬೆಳಗಾಗುವುದರೊಳಗೆ ಕ್ಷಿಪ್ರ ರಾಜಕೀಯ ಬಂಡಾಯದಿಂದಾಗಿ ಕೆಡವಿ ಬಿಜೆಪಿ ಜೊತೆ ಮೈತ್ರಿ ಸಾಧಿಸಿಕೊಂಡು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ರಾಜಕೀಯ ಚಾಣಕ್ಯ ಎಂದೆ ಬೀಗುತ್ತಿದ್ದ ತನ್ನ ತಂದೆ ದೇವೇಗೌಡರೆ ಬೆಚ್ಚಿಬೀಳುವಂತೆ ಮಾಡಿದ್ದರು. ಜೆಡಿಎಸ್ ನ 42 ಜನ ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಜೆಪಿ ಜೊತೆ ಸರ್ಕಾರ ರಚಿಸಿದ ಕುಮಾರಸ್ವಾಮಿ 20 ತಿಂಗಳು ಕೊಟ್ಟ ಆಡಳಿತ ಇಂದು ಕೇವಲ ಗತನೆನಪಾಗಿ ಮಾತ್ರ ಉಳಿದಿದೆ.

ತಮ್ಮ ಪಕ್ಷದ ಸೈದ್ದಾಂತಿಕ ನಂಬುಗೆಗೆ ವಿರುದ್ದವಾಗಿ ಕುಮಾರಸ್ವಾಮಿ ಅವರ ರಾಜಕೀಯ ಬಂಡಾಯದ ನಡೆಯನ್ನು ಟೀಕಿಸಿದವರಿಗೆ ‘ಸಕ್ಯೂಲರ್’ ಎಂದರೆ ಏನು ಎಂದು ಪ್ರಶ್ನಿಸುವ ಮೂಲಕ ಕುಮಾರಸ್ವಾಮಿ ಕೋಮುವಾದಿ ಬಿಜೆಪಿಯೊಂದಿಗಿನ ಮೈತ್ರಿ ಯನ್ನು ಸಮರ್ಥಿಸಿಕೊಂಡರು. ಆದರೆ ಅವರೆಂದೂ ಕೋಮುವಾದಿಯಾಗಿ ಕಾಣಿಸಿಕೊಳ್ಳಲಿಲ್ಲ. ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುತ್ತಾ, ಅಭಿವೃದ್ದಿ ಸಂಕಲ್ಪದೊಂದಿಗೆ ತತ್ವ-ಸಿದ್ದಾಂತಗಳನ್ನು ಜಿಗಿದು ಜನರ ಜೊತೆ ಬಯಲಿನಲ್ಲಿ ನಿಂತಿದ್ದರು. 20 ತಿಂಗಳ ಅವರ ಮುಖ್ಯಮಂತ್ರಿ ಅಧಿಕಾರವಧಿಯಲ್ಲಿ ಜನಸಾಮಾನ್ಯರ ಎದೆಯೊಳಗೆ ಖ್ಯಾತಿಯ ,ಜನಪ್ರಿಯತೆಯ ಉತ್ತುಂಗವನ್ನು ತಲುಪಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕೆಲವೇ ತಿಂಗಳು ಕಳೆದಿದ್ದವು.

ನಾನು ದೆಹಲಿಯಲ್ಲಿ ರಾಜೀವ್‍ಚೌಕ್‍ನಿಂದ ಕೆಂಪುಕೋಟೆಗೆ ತಲುಪಲು ಟ್ಯಾಕ್ಸಿ ಹತ್ತಿದಾಗ , ನಾನು ಕರ್ನಾಟಕದವನು ಎಂದು ತಿಳಿದ ತಕ್ಷಣ ಟ್ಯಾಕ್ಸಿ ಚಾಲಕ ಸುಖವೀಂದರ್ ಅವತ್ತಿನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯ ರಾಜಕೀಯ ಸಾಹಸ, ಜನಪರತೆ, ಅವರಲ್ಲಿನ ಮಾನವೀಯ ನೆರವಿನ ಗುಣಗಳ ಬಗ್ಗೆ ಮಾತನಾಡುತ್ತಾ ಹೋದ. ದೆಹಲಿಯ ಒಂದು ವಾರದ ಪ್ರವಾಸದಲ್ಲಿ ನಾನು ಟ್ಯಾಕ್ಸಿ , ಸಿಟಿಬಸ್ ಗಳಲ್ಲಿ ಅಲೆದಾಡುವಾಗ ಸಹಜ ಕುತೂಹಲದಿಂದ ವಿವಿಧ ಬಗೆಯ ಜನರ ಜೊತಗೆ ಮಾತಿಗಿಳಿದಾಗ ಅವರೆಲ್ಲಾ ಬೆಂಗಳೂರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರನ್ನು ಕೊಂಡಾಡುತ್ತಿದ್ದರು. ಕುಮಾರಸ್ವಾಮಿ ಅಷ್ಟರ ಮಟ್ಟಿಗೆ ಉತ್ತರ ಭಾರತದವರನ್ನೂ ಪ್ರಭಾವಿಸಿದ್ದು ಕಂಡು ನನಗೆ ಆಶ್ಚರ್ಯ ಆಗಿತ್ತು.

ಕುಮಾರಸ್ವಾಮಿ ಅವರಿಗೆ ಇಂತದ್ದೆ ಎಂಬ ನಿರ್ಧಿಷ್ಟವಾದ, ಸ್ಪಷ್ಟವಾದ ಸಿದ್ದಾಂತಗಳಿಲ್ಲ ಎಂಬುದು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೆ ಬಹಿರಂಗವಾಗಿ ಹೋಗಿದೆ. ಅವರು ಯಾವುದೇ ಸಿದ್ದಾಂತಗಳಿಗೆ ಜೋತು ಬೀಳದೆ ಜನಸಾಮಾನ್ಯರ ಕಷ್ಟಗಳಿಗೆ ಪರಿಹಾರ ಹುಡುಕುವುದು, ಅವರ ದುಃಖ-ದುಮ್ಮಾನಗಳಿಗೆ ಮರುಗುವುದು, ಅಭಿವೃದ್ದಿ ಕೆಲಸಗಳಲ್ಲಿ ರಾಜಕೀಯ ಸುಳಿಗಳ ಬಗ್ಗೆ ಯೋಚಿಸದೆ ಮುನ್ನುಗ್ಗುವುದು ಸ್ವಭಾವತಃ ಗುಣವಾಗಿ ಕಾಣಸಿಗುತ್ತಾರೆ. ಜೆಡಿಎಸ್ ನ ಏಕಮೇವ ನಾಯಕನಾಗಿದ್ದ ದೇವೇಗೌಡರಿಗೆ ಪರ್ಯಾಯ ನಾಯಕನಾಗಿ ಕುಮಾರಸ್ವಾಮಿ ಬೆಳೆದು ನಿಂತಿದ್ದರು. ಕುಮಾರಸ್ವಾಮಿ ಅವರ ಜನಪ್ರಿಯತೆಯ ಕಾರಣಕ್ಕಾಗಿಯೇ ದೇವೇಗೌಡರು ಕೊನೆಗೂ ಕುಮಾರಸ್ವಾಮಿ ಅವರನ್ನು ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು 20 ತಿಂಗಳು ಮುಖ್ಯಮಂತ್ರಿಯಾಗಿ ಆಳಿದ ಕುಮಾರಸ್ವಾಮಿ ನಂತರ ಬಿಜೆಪಿಗೆ ಅಧಿಕಾರ ಬಿಟ್ಟುಕೊಡುವಾಗ ಸಿದ್ದಾಂತದ ನೆಪದಲ್ಲಿ ಮಾತು ತಪ್ಪಿದ್ದು ಅವರಿಗೆ ಮುಳುವಾಯಿತು. ಇದರಿಂದ ಅವರು ಮತ್ತೆ ಚೇತರಿಸಿಕೊಳ್ಳಲು ದಶಕಗಳೇ ಬೇಕಾಯಿತು. 2006 ರಲ್ಲಿ ರಾಜಕೀಯ ಬಂಡಾಯದಿಂದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರ ಪಾಲಿಗೆ 2018 ರಾಜಕೀಯ ಅದೃಷ್ಟವನ್ನು ತಂದು ಕೊಟ್ಟಿತು.

37 ಶಾಸಕರನ್ನಿಟ್ಟುಕೊಂಡು ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಹಿಂದಿನ 20 ತಿಂಗಳ ಮುಖ್ಯಮಂತ್ರಿ ಅವಧಿಯಲ್ಲಿ ಗಳಿಸಿಕೊಂಡ ಜನಪ್ರಿಯತೆಯನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕಕ್ಕೆ ಕುಮಾರಸ್ವಾಮಿ ಒಂದು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಬೇಕು ಕರ್ನಾಟಕದಲ್ಲಿ ‘ಕುಮಾರಪರ್ವ’ ರಾಜಕಾರಣ ಆರಂಭವಾಗಿಬಿಟ್ಟಿತು ಎಂಬ ಮಾತುಗಳು, ರಾಜಕೀಯ ತಜ್ಞರ ವಿಶ್ಲೇಷಣೆಗಳು ಇರುವಾಗಲೇ ತಮ್ಮದೇ ಆದ ವೈಯುಕ್ತಿಕ ಕಾರಣಗಳು, ರಾಜಕೀಯ ನಿಯಂತ್ರಣಗಳಿಗೆ ಕಟ್ಟುಬಿದ್ದು ಕುಮಾರಸ್ವಾಮಿ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ಹೋಗುತ್ತಿದ್ದಾರೆ. ರಾಜಕೀಯ ವ್ಯವಸ್ಥೆಯ ಒಳಸುಳಿಗಳು ಅವರಿಗೆ ಗೊತ್ತಿಲ್ಲವೆಂದನೇಲ್ಲ. ಆದರೆ ರಾಜಕೀಯ ಸೂಕ್ಷ್ಮಗಳನ್ನು , ಒಳ-ಹೊರಗುಗಳನ್ನು ಮುಚ್ಚುಮರೆಯಿಲ್ಲದೆ ಬಹಿರಂಗ ಪಡಿಸುವ , ಆಡಿ ಕಳೆದು ಬಿಡುವ ಅವರ ಸಹಜ ಸ್ವಾಭಾವವೇ ಅವರನ್ನು ರಾಜಕೀಯ ವ್ಯವಸ್ಥೆಗೆ ದಕ್ಕದಂತೆ ಮಾಡುತ್ತಿದೆ ಎನ್ನಬಹುದು.

ಶಾಸಕರನ್ನು ಕಾಯ್ದಿಟ್ಟುಕೊಳ್ಳಲು ಹಣ ಬೇಕು ಎಂಬ ಹಗಲುಸತ್ಯವನ್ನೆ ನುಡಿದು ಅಪರಾಧಿಯಾಗಿ ಕಾಣುತ್ತಾರೆ. ಜನರ ಕಷ್ಟ. ನೋವುಗಳಿಗೆ ಸ್ಪಂದಿಸುವುದು ಮುಖ್ಯ . ಸಿದ್ದಮಾದರಿಯ ಸಿದ್ದಾಂತಗಳನ್ನು ಒಡೆದು ದುಡಿಯುವ ಸಹಜತನ ಅವರಲ್ಲಿ ಗಾಢವಾಗಿ ಕಾಣಸಿಗುತ್ತದೆ.

ವ್ಯಕ್ತಿಗತ ಅಭಿಮಾನದ ಅತಿರೇಕ, ಸಿನಿಮಾ ಪ್ರಭಾವಳಿಯಲ್ಲಿ ಜಡ್ಡುಗಟ್ಟಿಹೋಗಿದ್ದ ಆಂಧ್ರ ಪ್ರದೇಶದ ರಾಜಕಾರಣದಲ್ಲಿ ಚಂದ್ರಬಾಬು ನಾಯ್ಡು ಎಂಬ ಹೊಸ ರಾಜಕಾರಣದ . ಹೊಸ ಪರಿಭಾಷೆಯ ನಾಯಕತ್ವದ ರಾಜಕಾರಣವೊಂದು ದಿನಬೆಳಗಾಗುವುದರೊಳಗೆ ಬಂಡೆದ್ದು ಹುಟ್ಟಿದಂತೆಯೇ ನಿಂತ ನೀರಿನಂತಿದ್ದ ಕರ್ನಾಟಕದ ರಾಜಕಾರಣಕ್ಕೆ 2006ರಲ್ಲಿ ಹೊಸತೊಂದು ಸಂಚಲನ ಮೂಡಿತ್ತು. ಕುಮಾರಸ್ವಾಮಿ ಅವರ ಕ್ಷಿಪ್ರ ರಾಜಕೀಯ ಬಂಡಾಯದೊಂದಿಗೆ ಹೊಸನಾಯಕನಾಗಿ ಕಾಣಿಸಿಕೊಂಡಿದ್ದರು. ಗ್ರಾಮವಾಸ್ತವ್ಯ . ಜನತಾ ದರ್ಶನ, ಸರಾಯಿ ನಿಷೇದ, ಲಾಟಿರಿ ನಿಷೇಧದಂತಹ ಜನಸಾಮಾನ್ಯರ ಪರವಾದ ಕಾರ್ಯಕ್ರಮಗಳನ್ನು ರೂಪಿಸಿ ಜನಸಾಮಾನ್ಯರಿಗೆ ಕೈಗೆ ಸಿಗುವ ಮುಖ್ಯಮಂತ್ರಿಯಾಗಿ , ಎಲ್ಲರ ನೆಚ್ಚಿನ ‘ಕುಮಾರಣ್ಣ’ನಾಗಿ ಬೆಳೆದು ನಿಂತಿದ್ದರು.

ಕರ್ನಾಟಕ ಹೊಸದೊಬ್ಬ ಭರವಸೆಯ ನಾಯಕನನ್ನು ಕಂಡುಕೊಂಡ ಉತ್ಸಾಹದಲ್ಲಿತ್ತು. ತಮ್ಮೊಳಗಿನ ಮಾನವೀಯ ಅಂತಃಕರಣದ ಕಾರಣಕ್ಕಾಗಿಯೇ ಕುಮಾರಸ್ವಾಮಿ ಸಿದ್ದಾಂತಗಳ ಕವಲಿಗೆ ಸಿಲುಕದೆ ಜನ ಮೆಚ್ಚಿದ ಕುಮಾರಣ್ಣನಾಗಿ ಎಲ್ಲರ ಮೆಚ್ಚಿಗೆ ಪಡೆದಿದ್ದರು. ಕಳೆದ 10 ವರ್ಷಗಳಲ್ಲಿ ಕುಮಾರಣ್ಣ ಬಹಳಷ್ಟು ಬದಲಾಗಿದ್ದಾರೆ. ಅಥವಾ ರಾಜಕೀಯ ಸನ್ನಿವೇಶವೇ ಅವರನ್ನು ಇಂತಹದ್ದೊಂದು ಬದಲಾವಣೆಗೆ ಬಗ್ಗಿಸಿಬಿಟ್ಟಿತಾ?
ಕಾಂಗ್ರೇಸ್ ಮೈತ್ರಿಯೊಂದಿಗೆ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಬಹಿರಂಗವಾಗಿ ಕಣ್ಣೀರಿಟ್ಟು ತಮ್ಮೊಳಗಿನ ಸಂಕಟವನ್ನು ಜನರ ಮುಂದೆ ತೋಡಿಕೊಂಡಿದ್ದು ಅನೇಕ ಸಂದೇಶಗಳನ್ನು ರವಾನಿಸುತ್ತದೆ. ನಾಯಕನೊಬ್ಬ ಕಣ್ಣಿರಿಡುವುದು ಬಹುದೊಡ್ಡ ದೌರ್ಬಲ್ಯದ ಸಂಕೇತವೆಮದೆ ಹೇಳಲಾಗುತ್ತದೆ.

ಒಂದೆಡೆ ಬೆಂಬಲ ನೀಡಿದ ಕಾಂಗ್ರೇಸ್‍ನ ಮರ್ಜಿಯಲ್ಲಿ , ಮತ್ತೊಂದೆಡೆ ಜೆಡಿಎಸ್ ವರಿಷ್ಠ ದೇವೇಗೌಡರು ರಾಜಕೀಯ ಒತ್ತಾಸೆಗಳಿಗೆ ಕಟ್ಟು ಬೀಳುವುದು. ಅದೆಲ್ಲಕ್ಕಿಂತ ತಮ್ಮ ಸಹೋದರ ಹೆಚ್.ಡಿ ರೇವಣ್ಣ ಅವರ ಅತಿಯಾದ ಹಸ್ತಕ್ಷೇಪ ಕುಮಾರಸ್ವಾಮಿ ಅವರನ್ನು ಹೈರಾಣಗೊಳಿಸಿದೆ. ಇದರಿಂದ ಅವರು ತಮ್ಮೊಳಗಿನ , ಆತ್ಮವಿಶ್ವಾಸ, ಸಹನೆ.ಸಂಯಮವನ್ನು ಕಳೆದುಕೊಂಡಂತೆ ಕಾಣಿಸುತ್ತಿದೆ. ಎಲ್ಲದಕ್ಕೂ ಮಾತಿಗೆ ನಿಲ್ಲುವ ಅವರ ದುಡುಕು ಅವರ ವರ್ಚಸ್ಸನ್ನೆ ಕಳೆಯುತ್ತಿದೆ. ಸರ್ಕಾರ ಅಸ್ತಿತ್ವದಲ್ಲಿರುವ ಬಗ್ಗೆ ಯಾವ ಸಂವೇದನೆಯೂ ದಕ್ಕದಷ್ಟು ಮಟ್ಟಿಗೆ ಆಡಳಿತ ನಿಸ್ತೇಜನವಾದಂತೆ ಭಾಷವಾಗುತ್ತಿದೆ. ಇದೆಕ್ಕೆಲ್ಲಾ ಉತ್ತರ ಕುಮಾರಸ್ವಾಮಿ ಅವರಲ್ಲೇ ಇದೆ. ಅದೇನೆ ಇದ್ದರೂ ಜನಸಾಮಾನ್ಯ ಎಂದಿನಂತೆ ನಮಗೆ ಈ ಹಿಂದಿನ 20 ತಿಂಗಳ ಅವಧಿಯ ಮುಖ್ಯಮಂತ್ರಿಯಾಗಿದ್ದ ‘ಕುಮಾರಣ್ಣ’ ಬೇಕು ಎಂದು ಬಯಸುತ್ತಿದ್ದಾನೆ.!

‍ಲೇಖಕರು Avadhi

January 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: