ಪಿ ಪಿ ಉಪಾಧ್ಯ
1. ನಾವೆಲ್ಲ ಒಂದು..
`ನಾವೆಲ್ಲ ಒಂದು… ನಾವೆಲ್ಲ ಬಂಧು’
ಎನ್ನುವ ಕಹಳೆಯ ಮೊಳಗಿಸಿ ನಾವು
ಈ ಜಗಕೆಲ್ಲ ತಿಳಿಸೋಣ
ಜಾತಿಯ ಹೆಸರಿನ ಕಳಂಕವ ಅಳಿಸಿ
ನಡುವಿನ ಅಂತರ ಮರೆಯೋಣ.
ಎಲ್ಲರು ತಿನ್ನುವ ಅನ್ನವು ಒಂದೆ
ಎಲ್ಲರು ಹಾಕುವ ಬಟ್ಟೆಯು ಅದುವೆ
ಹುಟ್ಟಿನ ನೆಲೆಯಲಿ ಬದಲಾಗುವುದೇ ಅದು
ತಿಳಿಯಿರಿ ನೀವು, ತಿಳಿಸಿರಿ ಜಗಕೆ
ತಿನ್ನುವ ಅನ್ನಕೆ ಹಾಕುವ ಬಟ್ಟೆಗೆ
ಜಾತಿಯು ಎಂದೂ ಬರಲಾರದು ನಡುವೆ
ಮೂಲದ ಬಣ್ಣವ ಮರೆತೇ ಬಿಟ್ಟಿಹ
ಸೋಗಿನ ವೇಷದ ಚಾತುರ್ವರ್ಣಕೆ
ಚರಮಗೀತೆಯನು ಹಾಡೋಣ.
ಮಾಡುವ ಕೆಲಸದ ಜಾತಿಯ ಮರೆತು
ಹುಟ್ಟಿನ ಜಾತಿಯ ಮೆರೆಯುವ ಜನರನು
ಹೀಗಳೆಯೋಣ… ನಾವೂ ನೀವೂ ಮರೆಯೋಣ

ಉತ್ತಮನಿರಲಿ ಅಧಮನೆ ಇರಲಿ
ಹುಟ್ಟಿನ ಮೂಲವ ಅಳಿಸಿ ಬಿಡಿ
ಇಂದಿನ ಬದುಕನು ಪರಿಗಣಿಸಿ
ಯುಗಗಳ ಹಿಂದಿನ ಹೊಗಳಿಕೆ ತೆಗಳಿಕೆ
ಗಿಲ್ಲದ ಬೆಲೆಯನು ಕೊಡುವಿರಿ ಯಾಕೆ
ಕೇಳುತ ಹೇಳುತ ಎಲ್ಲರಿಗೂ
ಬದುಕಿನ ದಾರಿಯ ತೋರಿಸುವ
ಜಾತಿ ಜಾತಿ ಎಂದೇ ಕೂಗುತ
ಕೇಕೇ ಹಾಕುವ ಮಂದಿಯು ಹಿಡಿದಿಹ
ಬಯಕೆಯ ಬಾವುಟ ಹಾರಲು ಬಿಡದೇ
`ಕಳೆದುದು ಕಳೆಯಿತು ಹೊಸತನು ಹುಡುಕುವ
ಆ ಹೊಸತೇ ಅಲ್ಲವೆ ನಮ್ಮಯ ಜೀವನ’
ಎನ್ನುವ ನವ ಸಂದೇಶವ ಸಾರುವ
ಬದುಕನು ಬದುಕಲು ಕಲಿಯೋಣ
`ನಾವೆಲ್ಲ ಒಂದು… ನಾವೆಲ್ಲ ಬಂಧು’ ಎನ್ನುವ
ಭಾವನೆಯೊಂದಿಗೆ ಮೂಡಲಿ ಭರವಸೆಯೂ.
ಸಮಾಜಕೆ ಇಂದು ಇದುವೇ ಬೇಕು
ನಮ್ಮೆಲ್ಲರ ಹೊಣೆ ಅದ ಕೊಡುವಂತಹುದು
ಹೊಸ ಬದುಕನು ಬದುಕಲು ಕಲಿಯೋಣ.
ಜಗಕದ ಸಾರುತ ಬದುಕೋಣ.
2. ಬದುಕೆಂದರೆ ಬರೀ ಕಷ್ಟಗಳೇ?
ಹುಟ್ಟು ಸಾವಿನ ನಡುವೆ ಕಷ್ಟಗಳು ಬಹಳ
ಸುಖವು ಇರಬಹುದೇನೋ ಎಲ್ಲೋ ಮೂಲೆಯಲ್ಲಿ
ಕಷ್ಟಗಳ ಹೆದರಿಕೆಯೇ ಹೂತಿರುವ ಮನದಲ್ಲಿ
ಎಲ್ಲಿದೆ ವ್ಯವಧಾನ… ಎಲ್ಲಿದೆ ಸಮಯ
ಸುಖದತ್ತ ದೃಷ್ಟಿಸಲು… ಆ ಬಗ್ಗೆ ಚಿಂತಿಸಲು
ಕಣ್ಮುಚ್ಚಿ ತೆರೆವಲ್ಲಿ ಇಲ್ಲವಾಗುವ ಸುಖವು
ನೆನಪಿನಿಂದಲೂ ಕೂಡ ಮಾಯವಾಗುವುದು
ಕಷ್ಟವೆಂದರೆ ಅದಕೆ ಅಷ್ಟೊಂದು ಹೆದರಿಕೆಯೇ.. ಅಲ್ಲ ಕೀಳರಿಮೆಯೇ
ಏಕದಕೆ ತಾನಾಗಿ ಮರೆಯಾಗುವಾತುರ
ಕಷ್ಟ ಸುಖವನು ತಾನು ಓಡಿಸುವ ಹಾಗೆ
ಸುಖವೇಕೆ ಕಷ್ಟವನು ಓಡಿಸುವುದಿಲ್ಲ?
ನಮ್ಮ ಬದುಕಿನ ತುಂಬ ಕಷ್ಟಗಳ ಪೈಪೋಟಿ
ಸುಖವೆಂಬ ಮರೀಚಿಕೆಯ ಮಾಯದಾಟ.
ಹುಟ್ಟಿದಂದೇ ಸುರುವು ಮುಂದೆ ಅದರದ್ದೇ ಕಾಟ
ತಾಯಿ ತಂದೆಯರ ಹತೋಟಿಯದು ಸುರುವಷ್ಟೆ.
ಅಕ್ಕ ಅಣ್ಣಂದಿರ ದಬ್ಬಾಳಿಕೆಯ ಜೊತೆಗೆ
ತಮ್ಮ ತಂಗಿಯAದಿರ ಗೋಳಾಟ.. ಮೇಲಾಟ!
ಸಹಿಸಲಾಗದ ಕಷ್ಟಗಳಲ್ಲ ಅವು ಆದರೂ ಕಿರಿಕಿರಿ
ಮದುವೆ, ಮುಂದೆ ಮಕ್ಕಳಾದಾಗ ಕಿರಿಕಿರಿಯದೇ ಬದುಕು.
ಮುಪ್ಪಡರಿತೇ ಮುಗಿಯಿತು.. ಆ ಮಕ್ಕಳದೇ ದರ್ಬಾರು!
ನಮ್ಮದೆಂಬ ದಿನಗಳೇ ಇಲವೇ ಬದುಕಿನಲಿ.
ಇಂದು ಯಾರದೋ ಮತ್ತೆ ನಾಳೆ ಇನ್ಯಾರದೋ…

ಬಯಸಿ ಬದುಕಲು ಹೊರಟು ಬಯಸದೇ ನರಳುತ್ತೇವೆ
ಅದುವೆ ಜೀವನದಾಟ ಅದುವೆ ಬದುಕಿನ ಮಾಟ
ಕೊನೆಯದೊಂದು ಮಾತು:
ಬದುಕಿನಲಿ ಬೇಕೆ ಸುಖ?
ಬಯಸದಿರುವುದೆ ಲೇಸು
ಬಯಕೆಯಿಲ್ಲದ ಆ ಬದುಕೆ ನೀಡುವುದು ಸುಖ ನಮಗೆ
ಸಿಕ್ಕಿದ್ದು ಸಾಕೆನ್ನಿ… ಇದ್ದದ್ದೇ ಇಷ್ಟವೆನ್ನಿ
ಇಲ್ಲದ್ದರಾಸೆಯಲಿ ಇದ್ದದ್ದ ಬಿಡಬೇಡಿ
ಇರುವ ಬದುಕನೆ ಸುಖಿಸಿ ದಿನಗಳನು ಕಳೆಯೋಣ
ಇನ್ನೊಂದು ಮುಖವಿದೆಯೇ ಈ ಬದುಕಿನಾಲಯಕೆ
ನಾವೆಲ್ಲ ಗಮನಿಸದ, ನಮ್ಮ ಗಣನೆಗೆ ಬರದ ಆ ಬದುಕಿನದೇನು ಚಂದ
ಕಷ್ಟವೇ ಇಲ್ಲದಿಹ ಬದುಕೊಂದು ಇದೆಯೇನು!
ಅದೇ ಸೊಗದ ಬದುಕು ನಾವಿನ್ನೂ ನೋಡದಿಹ ಅದೇ ಸುಖದ ಸೊಗಸು
ಬಯಕೆಯಿಲ್ಲದ ಬದುಕ ಬದುಕುತ್ತ ಸಾಗುತ್ತ
ನಿರ್ಲಿಪ್ತ ಜೀವನವ ನಡೆಸುವುದೇ ಆ ಸೊಗವೇನು?






0 Comments